ಇಂದು ಸುಳ್ಳು ಸುದ್ದಿಗಳ ಹಾವಳಿ ಮಿತಿಮೀರಿದೆ. ಸರ್ಕಾರಗಳೇ ಹಲವು ಆಪ್‌ಗಳು ಮತ್ತು ವೆಬ್‌ಸೈಟ್‌ಗಳ ಮೂಲಕ ಸುಳ್ಳು ಸುದ್ದಿಗಳನ್ನು ಹರಡುವುದನ್ನು ತಡೆಯಲು ಹೆಣಗಾಡುತ್ತಿವೆ. ಆದರೆ ಇದೇ ಸರ್ಕಾರಗಳು ಕೆಲ ವರ್ಷಗಳಿಂದ ತಮ್ಮದೇ ಪಕ್ಷದ ಕಾರ್ಯಕರ್ತರು ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾಗ ನೋಡಿಕೊಂಡು ಸುಮ್ಮನಿದ್ದಿದ್ದನ್ನು ನಾವು ಮರೆಯಬಾರದು. ಆದರೂ ಸಹ ಸುಳ್ಳು ಸುದ್ದಿಗಳಿಂದ ಅತಿ ಹೆಚ್ಚು ಹಾನಿಗೊಳಗಾಗುವುದು ಅಮಾಯಕ ಬಡವರಾಗಿದ್ದಾರೆ. ಹಾಗಾಗಿ ಯಾವುದೇ ಸುದ್ದಿಯನ್ನು ನಂಬುವ ಮೊದಲು ಅದು ಸತ್ಯವೇ ಎಂದು ಪರಿಶೀಲಿಸಬೇಕು. ಅದು ಹೇಗೆ? ಇಲ್ಲಿವೆ ನೋಡಿ ಕೆಲವು ಸೂಚನೆಗಳು.
ಕಾನೂನಿನ ವ್ಯಾಪ್ತಿಯಲ್ಲಿ ಪೋಲಿಸ್ ಮತ್ತು ಇತರ ತನಿಖಾ ಏಜೆನ್ಸಿಗಳು ಇದರ ಸತ್ಯಾಸತ್ಯತೆ ಪತ್ತೆಹಚ್ಚುವ ಕೆಲಸ ಮಾಡುತ್ತಿರುತ್ತವೆ. ಜನ ಸಾಮಾನ್ಯರು ಮಾಡಬೇಕಾಗಿರುವುದು ಇಷ್ಟೇ:
ಸುದ್ದಿ ಮೂಲ ಪರೀಕ್ಷಿಸಿ. ಸಂದೇಶವನ್ನು ಬಿಟ್ಟು ಅದರ ಮೂಲದ ಬಗ್ಗೆ ಹುಡುಕಿ. ಯಾರು ಇದನ್ನು ನಿಮಗೆ ಕಳುಹಿಸಿದ್ದಾರೆ ಅವರು ಕೇವಲ ಸ್ನೇಹಿತರೇ, ಯಾವುದೋ ಗುಂಪಿನ ಸದಸ್ಯರೇ, ನಂಬಿಕಸ್ಥರೇ ತಿಳಿಯಿರಿ.
ಸುದ್ದಿಯಾಗಿದ್ದರೆ ಗೂಗಲ್‌ನಲ್ಲಿ ಹುಡುಕಿ. ಅದಕ್ಕೆ ಸಂಬಂಧಿಸಿದ ಬೇರೆ ಲಿಂಕ್‌ಗಳತ್ತ ಕಣ್ಣಾಡಿಸಿ. ಚಿತ್ರವಾಗಿದ್ದರೆ ರಿವರ್ಸ್ ಇಮೇಜ್ ಸರ್ಚ್ ಮಾಡಿ. ವಿಡಿಯೋವಾಗಿದ್ದರು ಸಹ ಅದರ ದಿನಾಂಕ ಮತ್ತು ಮೂಲವನ್ನು ಪತ್ತೆ ಹಚ್ಚಿ.
ಜಾಲತಾಣದ ಉದ್ದೇಶವೇನು, ಅವರ ಸಂಪರ್ಕ ವಿಳಾಸ ದೂರವಾಣಿ ಸಂಖ್ಯೆ ಇದೆಯೇ ನೋಡಿ.
ಕೇವಲ ಸುದ್ದಿಯ ತಲೆಬರಹ ಓದಬೇಡಿ. ಅವು ರೋಚಕವಾಗಿರುತ್ತವೆ. ಇಡೀ ಸುದ್ದಿ ಓದಿ ನೋಡಿ. ಅದು ಸುಳ್ಳಾಗಿದ್ದರೆ ಮೂಲಾಜಿಲ್ಲದೇ ತಿಳಿಸಿ, ಸಾಧ್ಯವಾದರೆ ದೂರು ನೀಡಿ.
ಸುದ್ದಿಯ ಲೇಖಕರ/ಪ್ರಕಾಶಕರ ಬಗ್ಗೆ ಸ್ವಲ್ಪ ಹುಡುಕಿ, ಅವರು ಪೂರ್ವಗ್ರಹಪೀಡಿತರಾಗಿರಬಹುದು. ಹಾಗಿದ್ದಲ್ಲಿ ಎಚ್ಚರವಹಿಸಿ.
ಸುದ್ದಿಗೆ ಏನಾದರೂ ಬೆಂಬಲಿಸುವಂತಹ ಮೂಲದ ಲಿಂಕ್ ಇದ್ದರೆ ಅದನ್ನು ಜಾಲಿಸಿ ನೋಡಿ. ಪೂರಕವಾಗಿದೆಯೇ ಇಲ್ಲವೇ ಎಂದು. ಎಷ್ಟೋ ಬಾರಿ ಅಂತಹ ಜಾಲತಾಣವೇ ಇರುವುದಿಲ್ಲ.
ಕೇವಲ ಒರ್ವ ದೊಡ್ಡ ವ್ಯಕ್ತಿಯ ಭಾವಚಿತ್ರವಿದೆ ಮತ್ತು ಅದರೊಂದಿಗೆ ಏನೋ ಹೇಳಿಕೆ ಇದೆ ಎಂದ ಮಾತ್ರಕ್ಕೆ ಅದು ನಿಜವಾಗುವುದಿಲ್ಲ. ಚಾಣಕ್ಯ, ನಾಟ್ರಡ್ಯಾಮಸ್, ಚರ್ಚಿಲ್, ಮೆಕಾಲೆ ಮುಂತಾದವರ ಭಾವಚಿತ್ರದ ಜೊತೆ ಏನೇನೋ ಸಂದೇಶಗಳು ಹರಿದಾಡುತ್ತಿವೆ.
ಸುದ್ದಿಯ, ವಿಡಿಯೋಗಳ ದಿನಾಂಕ ನೋಡಿ. ಹಳೆಯ ಸುದ್ದಿಗಳು ಹೊಸ ತಲೆಬರಹದೊಂದಿಗೆ ಮತ್ತೆ ಮತ್ತೆ ಕಾಣಸಿಗುತ್ತವೆ.
ಸುದ್ದಿಯೋ ಕೇವಲ ತಮಾಷೆಯೋ ಸರಿಯಾಗಿ ನೋಡಿ. ಕೆಲವರು ವಿಡಂಬನೆ ಮಾಡಿರುತ್ತಾರೆ ಹಾಗಾಗಿ ನಿಧಾನವಾಗಿ ಗಮನಿಸಿ. ಏಪ್ರಿಲ್ 1ರ ಸಂದೇಶಗಳು ವರ್ಷವಿಡೀ ಸುತ್ತುತ್ತಿರುತ್ತವೆ.
ನಿಮ್ಮ ಸ್ವಂತ ಪೂರ್ವನಿರ್ಧಾರಿತ ನಂಬಿಕೆಗಳು ಸುಳ್ಳನ್ನೇ ನಿಜ ಎಂದು ನಂಬುವಂತೆ ಮಾಡಬಹುದು. ಅದನ್ನು ಸರಿಪಡಿಸಿಕೊಳ್ಳಿ. ಮರುಪಶೀಲಿಸುವುದನ್ನು ಮರೆಯಬೇಡಿ. ಸಾಮಾನ್ಯ ಜ್ಞಾನ ಬಳಸಿ.
ತಜ್ಞರನ್ನು ಸಂಪರ್ಕಿಸಿ. ಸಂದೇಶ ನಿಜವೋ ಸುಳ್ಳೋ ಎಂದು ಸಂದೇಹವಿದ್ದಲ್ಲಿ ಅದನ್ನು ಮುಂದಕ್ಕೆ ಪಸರಿಸದೇ ಅದನ್ನು ನಂಬಿಕಸ್ಥ ಸತ್ಯಾಸತ್ಯತೆ ಪರಿಶೀಲಿಸುವ ಜಾಲತಾಣಗಳಿಗೆ ಕಳುಹಿಸಿ (ಆಲ್ಟ್-ನ್ಯೂಸ್, ಬೂಮ್‌ಲೈವ್, ಕ್ವಿಂಟ್ ವೆಬ್‌ಖೂಫ್, ಫ್ಯಾಕ್ಟ್-ಚೆಕರ್, ಎಸ್.ಎಂ.ಹೋಕ್ಸ್ ಸ್ಲೇಯರ್ ಇತ್ಯಾದಿ). ಸತ್ಯವನ್ನು ಬೆಂಬಲಿಸುವ ಜಾಲತಾಣಗಳನ್ನು ಬೆಂಬಲಿಸಿ.
ಸುಳ್ಳು ಸುದ್ದಿ/ಅಪಪ್ರಚಾರ ಪಸರಿಸಬೇಡಿ. ಇದರಿಂದ ದೇಶಕ್ಕೆ ಯಾವ ಪ್ರಯೋಜನವೂ ಇಲ್ಲ.


