ದೇಶವ್ಯಾಪಿ ಲಾಕ್ ಡೌನ್ ವಿಸ್ತರಿಸಿರುವುದು ವಿರಾಮ ಕಾಲದಂತಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಇದು ಸಧ್ಯದ ಬಿಕ್ಕಟ್ಟನ್ನು ಪರಿಹರಿಸಲು ಸಹಾಯ ಮಾಡುವುದಿಲ್ಲ, ಹಾಗಾಗಿ ಕೋವಿಡ್-19 ವಿರುದ್ದದ ತಂತ್ರಗಾರಿಕೆಯನ್ನು ವಿಕೇಂದ್ರೀಕರಣ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ವೀಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿರುವ ರಾಹುಲ್ ಗಾಂಧಿ ದೇಶದಲ್ಲಿ ಕೊರನಾ ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಪರೀಕ್ಷೆಗಳನ್ನು ಹೆಚ್ಚಿಸಬೇಕು. ನಾವು ತುಂಬ ಅಪಾಯದ ಪರಿಸ್ಥಿತಿಯಲ್ಲಿದ್ದೇವೆ ಆದ್ದರಿಂದ ಎಲ್ಲಾ ರಾಜಕೀಯ ಪಕ್ಷಗಳು ಒಗ್ಗೂಡಿ ಕೆಲಸ ಮಾಡವ ಮೂಲಕ ನಾವು ವೈರಸ್ ನ್ನು ಸೋಲಿಸಬೇಕು ಎಂದು ಹೇಳಿದರು.
ಲಾಕ್ ಡೌನ್ ಸಮಯದಲ್ಲಿ ವೈದ್ಯಕೀಯ ಸಂಪನ್ಮೂಲವನ್ನು ಸರಿಯಾಗಿ ಬಳಸಬೇಕು. ವೈದ್ಯಕೀಯ ಸಿಬ್ಬಂದಿಗಳಿಗೆ ಬೇಕಾದ ಸಲಕರಣೆಗಳು ಒದಗಿಸಬೇಕು. ದೇಶಾದ್ಯಂತ ಆಸ್ಪತ್ರೆಗಳನ್ನು ನಿರ್ಮಿಸಬೇಕು. ಪರೀಕ್ಷೆಗಳನ್ನು ಹೆಚ್ಚಿಸಿ ವೈರಸನ್ನು ನಿರ್ಮೂಲನೆ ಮಾಡಬೇಕಾಗಿದೆ ಎಂದು ಸಲಹೆ ನೀಡಿದರು.
ಕೇಂದ್ರ ಸರ್ಕಾರವು ರಾಜ್ಯ ಮತ್ತು ಜಿಲ್ಲಾಮಟ್ಟದಲ್ಲಿ ಯಂತ್ರೋಪಕರಣಗಳನ್ನು ಸಶಕ್ತಗೊಳಿಸಬೇಕು. ಕೊರೊನಾ ವಿರುದ್ದ ಹೋರಾಟ ನಡೆಸುತ್ತಿರುವುದು ರಾಜ್ಯಗಳೇ ಆಗಿವೆ. ಕೇರಳದಲ್ಲಿ ರಾಜ್ಯ ಸರ್ಕಾರ ತೆಗೆದುಕೊಂಡ ತುರ್ತು ಕ್ರಮದಿಂದ ಕೊರೊನಾ ಯಶಸ್ವಿಯಾಗಿ ನಿಯಂತ್ರಿಸಲು ಸಾಧ್ಯವಾಗಿದೆ. ಪ್ರಧಾನಿ ನರೇಂದ್ರ ಮೋದಿ ರಾಜ್ಯಗಳಿಗೆ ಬಲವನ್ನು ತುಂಬಬೇಕು ಎಂದು ಹೇಳಿದರು
ಕೊರೊನಾದಿಂದ ಉಂಟಾಗಿರುವ ತುರ್ತುಪರಿಸ್ಥಿತಿ ವಿರುದ್ದ ಹೋರಾಟ ಮಾಡಲು ದೇಶದ ಜನ ಒಗ್ಗೂಡಬೇಕು. ಮೊಂಡು ವಾದ್ಯಗಳು, ಸಲಕರಣೆಗಳಿಂದ ವೈರಸ್ ಓಡಿಸಲು ಸಾಧ್ಯವಿಲ್ಲ. ಹಾಗಾಗಿ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.
ದೇಶದಲ್ಲಿ ಆಹಾರಕ್ಕೇನೂ ಕೊರತೆ ಇಲ್ಲ, ಇಲ್ಲಿ ಸಾಕಷ್ಟು ಧಾನ್ಯಗಳಿವೆ. ನಾವು ಅದನ್ನು ವಿತರಿಸಬೇಕು. ಬಡವರಿಗೆ ಉಚಿತ ಪರಿತರ ಕೊಡಬೇಕು. ಇದಕ್ಕೂ ಮೊದಲು ನಾವು ಆಹಾರ ಸುರಕ್ಷಾ ಜಾಲವನ್ನಾಗಿ ಮಾಡಿಕೊಂಡು ಮುಂದುವರಿಯಬೇಕು ಎಂದು ರಾಹುಲ್ ಗಾಂಧಿ ಹೇಳಿದರು.


