ಮಂಡ್ಯ ಜಿಲ್ಲೆಯ ಕಿರುಗಾವಲು ಪಂಚಾಯ್ತಿಯ ಕಲ್ಕುಳಿ ಗ್ರಾಮಕ್ಕೆ ಸೇರಿದ, ಪಂಚಾಯ್ತಿಯಲ್ಲಿ ಪೌರಕಾರ್ಮಿಕ ಸೇವೆ ಸಲ್ಲಿಸುತ್ತಿದ್ದ ಬಸವರಾಜು (45) ರವರು ಕೊರೊನಾ ಹರಡದಂತೆ ಔಷಧಿ ಸಿಂಪಡಿಸುವಾಗ ಆದ ಅನಾಹುತದಿಂದಾಗಿ ನಿನ್ನೆ ಮಂಡ್ಯದಲ್ಲಿ ನಿಧನರಾಗಿದ್ದಾರೆ.
ಕೆಲವು ದಿನಗಳಿಂದ ತಮ್ಮ ಪಂಚಾಯ್ತಿ ಸುತ್ತಲಿನ ಗ್ರಾಮಗಳಿಗೆ ಕರೋನಾ ಸೋಂಕು ಹರಡದಂತೆ ಔಷಧಿ ಸಿಂಪಡಿಸುವ ಸಿಬ್ಬಂದಿಗಳಿಗೆ ಜೊತೆಗಾರರಾಗಿ ಮತ್ತು ಮಾರ್ಗದರ್ಶಕರಾಗಿ ಪಂಚಾಯ್ತಿ ಆದೇಶದ ಮೇರೆಗೆ ಬಸವರಾಜು ಕೆಲಸ ಮಾಡುತ್ತಿದ್ದರು. ಆ ಸಮಯದಲ್ಲಿ ಅವರಿಗೆ ಸಿಂಪಡಿಸಲಾಗುತ್ತಿದ್ದ ಔಷಧದ ಅಡ್ಡಪರಿಣಾಮ ಉಂಟಾಗಿದೆ. ಅದರಿಂದ ಅಸ್ವಸ್ಥರಾಗಿದ್ದ ಅವರನ್ನು ಏಪ್ರಿಲ್ 21ರಂದು ಮಂಡ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅಷ್ಟರಲ್ಲಾಗಲೀ ರಕ್ತಕ್ಕೆ ಪ್ರಬಲ ರಾಸಾಯನಿಕಗಳು ಸೇರಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ.
ಬಸವರಾಜುರವರ ಸಾವಿನ ಸುದ್ದಿ ತಲುಪುತ್ತಿದ್ದಂತೆಯೇ ಹಲವಾರು ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರು ಪೌರಕಾರ್ಮಿಕರಿಗೆ ಸೂಕ್ತ ರಕ್ಷಣೇ ನೀಡಬೇಕೆಂದು ಆಗ್ರಹಿಸಿದ್ದಾರೆ. ಈ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿರುವ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಕೊರೊನಾ ವಿರೋಧಿ ಹೋರಾಟದಲ್ಲಿ ಬಲಿಯಾಗುವ ಪೌರಕಾರ್ಮಿಕರ ಪ್ರಾಣಕ್ಕೆ ಬೆಲೆಯಿಲ್ಲವೇ?
ಸಾರ್ವಜನಿಕರಿಗೆ ಕರೋನಾ ಬರದಂತೆ ತಡೆಯಲು ಔಷಧಿ ಸಿಂಪಡಣೆ ಮಾಡುವಾಗ ದೇಹದಲ್ಲಿ ಔಷಧಿ ಸೇರಿದ ಪರಿಣಾಮವಾಗಿ ಸಾವಿಗೀಡಾದ ಪೌರಕಾರ್ಮಿಕ ಬಸವರಾಜು ಅವರದ್ದು ತ್ಯಾಗವಲ್ಲವೇ? ಎಂಬ ಪ್ರಶ್ನೆಗಳು ಸಾಮಾಜಿಕ ಜಾಲತಾಣದಲ್ಲಿ ಎದ್ದಿವೆ.
ಪೊಲೀಸರು, ವೈದ್ಯರಿಗಾಗಿ ಬಾಲ್ಕನಿಯಲ್ಲಿ ನಿಂತು ಚಪ್ಪಾಳೆ ತಟ್ಟುವ ನಾಗರೀಕರೇ, ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಗಳ ನಿಸ್ವಾರ್ಥ ಸೇವೆಗೆ ಕೃತಜ್ಞತೆ ಸಲ್ಲಿಸೋಣ. ಅವರಂತೆಯೇ ಪ್ರಾಣಾಪಾಯವನ್ನು ಲೆಕ್ಕಿಸದೆ ನಮ್ಮ ಸೇವೆಯಲ್ಲಿ ತೊಡಗಿರುವ ಪೌರಕಾರ್ಮಿಕರನ್ನೂ ನೆನೆಯಬೇಕು. ಅವರ ತ್ಯಾಗವನ್ನು ಪರಿಗಣಿಸುವಂತೆ ಸರ್ಕಾರವನ್ನು ಒತ್ತಾಯಿಸಬೇಕು! ಎಂದು ಆಗ್ರಹಿಸಲಾಗಿದೆ.
ಈ ಕುರಿತು ಬಸವರಾಜುರವರ ಸಂಬಂಧಿ ಮತ್ತು ಕರ್ನಾಟಕ ಜನಶಕ್ತಿಯ ಕಾರ್ಯಕರ್ತರಾದ ಸಿದ್ದರಾಜುರವರು ಮಾತನಾಡಿ “ಒಂದು ವಾರದಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಅವರು ನಿನ್ನೆ ಬೆಳಿಗ್ಗೆ ಪ್ರಜ್ಞೆ ತಪ್ಪಿದರು. ಆಗ ಕೂಡಲೇ ನಾನೇ ಜಿಲ್ಲಾಸ್ಪತ್ರೆಗೆ ತೋರಿಸಿ ಅಡ್ಮಿಟ್ ಮಾಡಿದೆ. ರಾತ್ರಿ ವೆಂಟಿಲೇಟರ್‌ಗೆ ಹಾಕಿದ್ದರು. ಆದರೂ ಬಸವರಾಜು ಬದುಕುಳಿಯಲ್ಲಿಲ್ಲ. ಈ ಕುರಿತು ಜಿಲ್ಲಾ ಪಂಚಾಯತ್ ಸಿಇಒ, ಇಒ ರವರಿಗೆ ಮಾಹಿತಿ ನೀಡಿದ್ದೇವೆ. ಅವರು ಎರಡು ದಿನದ ನಂತರ ಪರಿಹಾರ ಹಣ ನೀಡುವ ಬಗ್ಗೆ ತಿಳಿಸುತ್ತೇವೆ ಎಂದು ಹೇಳಿದ್ದಾರೆ. ಮೊದಲೇ ಬಡವರಾಗಿರುವ ಪೌರಕಾರ್ಮಿಕರು ಈ ರೀತಿ ಲಾಕ್‌ಡೌನ್ ಸಮಯದಲ್ಲಿ ಜೀವ ಪಣಕ್ಕಿಟ್ಟು ಕೆಲಸ ಮಾಡುತ್ತಿದ್ದಾರೆ. ಅವರಿಗೆ ಮುಂಜಾಗ್ರತಾ ಸಲಕರಣೆಗಳನ್ನು ನೀಡುವ ಮೂಲಕ ಸರ್ಕಾರ ಅವರ ರಕ್ಷಣೆಗೆ ಮುಂದಾಗಬೇಕು’ ಎಂದಿದ್ದಾರೆ.
ಬಸವರಾಜುರವರ ಸಾವನ್ನು ಯಾವುದೇ ಪೊಳ್ಳುಕಾರಣ ನೀಡಿ ಕೊರೋನಾ ಸಂಬಂಧಿ ಸಾವಲ್ಲ ಎಂಬಂತೆ ಬಿಂಬಿಸುವ ಪ್ರಯತ್ನವನ್ನು ಅಧಿಕಾರಿಗಳು ಮಾಡಬಾರದೆಂದು. ಇಂತಹ ಸಂದರ್ಭದಲ್ಲೂ ಸೇವೆಗೆ ಹಾಜರಾಗಿ ಪ್ರಾಣತ್ಯಾಗ ಮಾಡಿದ ಬಸವರಾಜು ಅವರನ್ನು ಕೊರೋನಾ ವಿರೋಧಿ ಸಂಗ್ರಾಮದ ಹುತಾತ್ಮ ಎಂದು ಸರ್ಕಾರ ಪರಿಗಣಿಸಬೇಕು. ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡಲೇಬೇಕು. ಪೌರ ಕಾರ್ಮಿಕರ ಸುರಕ್ಷತೆ ಬಗ್ಗೆ ಕಟ್ಟುನಿಟ್ಟಿನ ಕ್ರಮಗಳಿಗೆ ಆದೇಶ ಹೊರಡಿಸಬೇಕು ಎಂಬ ಆಗ್ರಹಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬಂದಿವೆ.
ಇದನ್ನೂ ಓದಿ: ಬಡವರ ಅಕ್ಕಿಯನ್ನು ಶ್ರೀಮಂತರ ಕೈಗಳ ಸ್ವಚ್ಛತೆಗೆ ಬಳಸಲಾಗುತ್ತಿದೆ: ರಾಹುಲ್ ಗಾಂಧಿ ಆರೋಪ



ಪೌರಕಾರ್ಮಿಕರ ಸೇವೆಯನ್ನು ಅಗತ್ಯ ಸೇವೆ ಎಂದು ಪರಿಗಣಿಸಿ ಅವರ ಕೆಲಸವನ್ನು ಖಾಯಂಗೊಳಿಸುವಂತೆ, ಅಗತ್ಯ ಸಂಖ್ಯೆಯಲ್ಲಿ ನೇಮಕಾತಿಗೊಳಿಸುವಂತೆ, ಇವರನ್ನು ಮುಖ್ಯವಾಹಿನಿಗೆ ತರಲು ಇವರ ಮಕ್ಕಳಿಗೆ ಸಂಪೂರ್ಣ ಉಚಿತ ಶಿಕ್ಷಣ ಕಲ್ಪಿಸುವಂತೆ, ಇವರಿಗೆ ವಿಶೇಷ ಜೀವವಿಮೆ ಕಲ್ಪಿಸುವಂತೆ, ಇವರಿಗೆ ಹಾಗೂ ಇವರ ಅವಲಂಭಿತರಿಗೆ ಸಂಪೂರ್ಣ ಉಚಿತ ವೈಧ್ಯಕೀಯ ಸೇವೆಗಳನ್ನು ಕಲ್ಪಿಸುವಂತೆ ಭ್ರಷ್ಟಾಚಾರ ವಿರೋಧಿ ಹೋರಾಟ ವೇದಿಕೆವತಿಯಿಂದ ನಿರಂತರ ಹೋರಾಟ ನಡೆಸಿದ್ದೆವು. ಆದರೆ ಇಂದಿಗೂ ಪೌರಕಾರ್ಮಿಕರನ್ನು ಗುತ್ತಿಗೆ ಆಧಾರದಲ್ಲಿ ಸೇವೆಗೆ ತೆಗೆದುಕೊಂಡು ವಂಚಿಸಲಾಗುತ್ತಿದೆ: ಕೆ.ನರೇಂದ್ರಬಾಬು, ವಕೀಲರು ಮತ್ತು ಸಂಸ್ಥಾಪಕ ಅಧ್ಯಕ್ಷರು, ಭ್ರಷ್ಟಾಚಾರ ವಿರೋಧಿ ಹೋರಾಟ ವೇದಿಕೆ, 7022272226
ರಾಷ್ಟ್ರದಾದ್ಯಂತ ಕೊರೋನಾ ಕಾರಣದಿಂದ ಮರಣಿಸಿದವರಿಗಿಂತಾ ಹಸಿವೆಯಿಂದ ಮರಣಿಸುವವರ ಸಂಖ್ಯೆ ಹೆಚ್ಚಾಗುವ ಸಂಭವ ಹೆಚ್ಚಾಗಿದೆ. ಜನ ಬೀದಿಗೆ ಬರುವ ಬದಲಾಗಿ ನ್ಯಾಯಬೆಲೆ ಅಂಗಡಿಯವರು ಪ್ರತಿಯೊಬ್ಬರ ಜನಮನೆ ಬಾಗಿಲಿಗೆ ಹೋಗಿ ಪಡಿತರ ಚೀಟಿಗಳನ್ನು ಪರಿಶೀಲಿಸದೇ ಪಡಿತರವನ್ನು ಅಳೆದುಕೊಡುವಂತೆ ಒತ್ತಾಯಿಸಲಾಗಿತ್ತು, ಆದರೆ ಇಚ್ಚಾಕೊರತೆ ಕಾಡಿದೆ
ನಿಜ ಹೇಳಬೇಕೆಂದರೆ ಪೌರಕಾರ್ಮಿಕರೇ ಮುಂಚೂಣಿಯ ಹೋರಾಟಗಾರರು
RIP