ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಧುಮುತಿ ಗ್ರಾಮದಲ್ಲಿ ಜಾತಿ ಕಾರಣಕ್ಕೆ ಜಗಳವುಂಟಾಗಿದ್ದು, ದಲಿತ ಕೇರಿಗೆ ನುಗ್ಗಿ ಹಲವರ ಮೇಲೆ ಮಾರಣಾಂತಿಕವಾಗಿ ಗುಂಪುಹಲ್ಲೆ ಮಾಡಿದ ದುರ್ಘಟನೆ ನಿನ್ನೆ ಜರುಗಿದೆ.
ಘಟನೆಯ ಹಿನ್ನೆಲೆ
ಯುವಕರು ಕ್ರಿಕೆಟ್ ಆಡುವಾಗ ಸಣ್ಣ ವಿಷಯಕ್ಕೆ ಜಗಳ ಉಂಟಾಗಿದೆ. ಯುವಕರು ಮೈದಾನದಲ್ಲಿಯೇ ಹೊಡೆದಾಡಿಕೊಂಡಿದ್ದಾರೆ. ನಂತರ ಜಾತಿ ಜಗಳವಾಗಿ ಪರಿವರ್ತನೆಯಾಗಿದೆ. ನಾಯಕ ಸಮುದಾಯದ ಯುವಕರು ಮತ್ತು ಮಾದಿಗ ಸಮುದಾಯದ ಯುವಕರ ಗುಂಪುಗಳಾಗಿ ವಿಭಜನೆಯಾಗಿದೆ.
ಜಗಳ ನಿಂತು ಅವರವರ ಮನೆಗೆ ತಲುಪಿದ ನಂತರವೂ ಯುವಕರ ಒಂದು ಗುಂಪು ಮಾನ್ವಿ ಸೇರಿದಂತೆ ಹಲವು ಗ್ರಾಮಗಳಿಂದ ಹುಡಗರನ್ನು ಗುಂಪು ಕಟ್ಟಿಕೊಂಡು ಬಂದು ಮಾರಕಾಸ್ತ್ರ ಮತ್ತು ಖಾರದಪುಡಿಯನ್ನು ಬಳಸಿ ಧುಮುತಿ ಗ್ರಾಮದ ದಲಿತ ಕೇರಿಯ ಮೇಲೆ ದಾಳಿ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಘಟನೆಯಲ್ಲಿ ಆರು ಜನ ಪುರುಷರು ಸೇರಿ ಇಬ್ಬರು ಮಹಿಳೆಯರಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. 7 ಜನರು ಸಿಂಧನೂರು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೊಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಡೀ ಘಟನೆಯಿಂದ ಧುಮುತಿ ಗ್ರಾಮದ ಕೇರಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಜನರು ಭಯಭೀತಿಗೊಂಡಿದ್ದಾರೆ ಎನ್ನಲಾಗಿದೆ.
ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಘಟನೆಗೆ ಕಾರಣವಾದ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದ್ದು, ಉಳಿದವರು ತಲೆಮರೆಸಿಕೊಂಡಿದ್ದಾರೆ.

ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಖಂಡನೆ
ಧುಮುತಿ ಗ್ರಾಮದ ದಲಿತ ಕೇರಿಯ ಮೇಲೆ ದಾಳಿಯನ್ನು ಸಿಂಧನೂರಿನ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟ ತೀವ್ರವಾಗಿ ಖಂಡಿಸಿದೆ. ಕೆಲವರು ದುರುದ್ದೇಶಪೂರ್ವಕವಾಗಿ ಇಡೀ ದಲಿತ ಕೇರಿಯನ್ನು ಟಾರ್ಗೆಟ್ ಮಾಡುವ ಮೂಲಕ ಸಿಕ್ಕ ಸಿಕ್ಕವರನ್ನು ಮನಬಂದಂತೆ ಥಳಿಸಿದ್ದಾರೆ. ಈ ಘಟನೆಗೆ ನಾರಾಯಣ ರೆಡ್ಡಿ ಮತ್ತು ಅಣ್ಣಾಜಿಗೌಡ ಮೂಲ ಸೂತ್ರದಾರರಾಗಿದ್ದು, ದೌರ್ಜನ್ಯಕ್ಕೆ ಕುಮ್ಮಕ್ಕು ನೀಡಿದ್ದಾರೆ ಎಂದು ಒಕ್ಕೂಟ ಆರೋಪಿಸಿದೆ.
ಇಷ್ಟು ವರ್ಷಗಳಾದರೂ ದಲಿತರ ಮೇಲೆ ದೌರ್ಜನ್ಯ, ಗೂಂಡಾಗಿರಿ ಹಾಗೂ ಗುಂಪುದಾಳಿ ನಡೆಯುತ್ತಿರುವುದು ಮಾನವ ಸಮಾಜವೇ ತಲೆತಗ್ಗಿಸುವ ನಾಚಿಕಗೇಡಿನ ಸಂಗತಿಯಾಗಿದೆ. ಹಾಗಾಗಿ ಘಟನೆಗೆ ಕಾರಣರಾದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸುವ ಮೂಲಕ ಶಿಕ್ಷೆಗೆ ಗುರಿಪಡಿಸಬೇಕು. ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ದಾಖಲಾಗಿರುವವರಿಗೆ ಚಿಕಿತ್ಸೆ ಒದಗಿಸಬೇಕು ಎಂದು ಒಕ್ಕೂಟ ಒತ್ತಾಯಿಸಿದೆ.
ಧುಮುತಿ ಗ್ರಾಮಕ್ಕೆ ತಹಸೀಲ್ದಾರ್ ಸೇರಿ ಅಧಿಕಾರಿಗಳ ತಂಡ ಖುದ್ದು ಭೇಟಿ ನೀಡಿ ಶಾಂತಿ ಸಭೆ ನಡೆಸಬೇಕು. ಘಟನೆಯಲ್ಲಿ ಹಲ್ಲೆಗೊಳಗಾದ ಸಂತ್ರಸ್ತರಿಗೆ ಸರಕಾರದಿಂದ 5 ಲಕ್ಷ ರೂ ಪರಿಹಾರ ನೀಡಬೇಕು. ತಾಲೂಕಿನಲ್ಲಿ, ಪ್ರತಿ ತಿಂಗಳು ತಹಸೀಲ್ದಾರ್ ನೇತೃತ್ವದಲ್ಲಿ ಪೊಲೀಸ್ ಮತ್ತು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ಹಾಗೂ ದಲಿತ-ಪ್ರಗತಿಪರ ಸಂಘಟನೆಗಳ ಸಭೆಯನ್ನು ಕಡ್ಡಾಯವಾಗಿ ನಡೆಸಬೇಕು ಎಂದು ಹೇಳಿಕೆಯಲ್ಲಿ ಸಿಂಧನೂರಿನ ಯುವ ಹೋರಾಟಗಾರ ನಾಗರಾಜ್ ಪೂಜಾರ್ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಯುಪಿ ಸಾಧುಗಳ ಹತ್ಯೆಯನ್ನು ಕೋಮುವಾದೀಕರಿಸಬೇಡಿ: ಯೋಗಿಗೆ ಉದ್ಧವ್ ಪಾಠ



ಹಲ್ಲೆಕೋರರಿಗೆ ಶಿಕ್ಷೆ ಆಗಬೇಕು.