ನಟ ಇರ್ಫಾನ್ ತನ್ನ 53ನೇ ವಯಸ್ಸಿನಲ್ಲಿ ವಿಶಿಷ್ಠವಾದ ಮೆದುಳು ಕ್ಯಾನ್ಸರಿನಿಂದ ಸಾವನ್ನಪ್ಪಿದ್ದಾನೆ. ಹದಿಹರೆಯದಲ್ಲಿ ಕ್ರಿಕೆಟ್ ಆಟದಲ್ಲಿ ಸಾಕಷ್ಟು ಪ್ರತಿಭೆ ತೋರಿ, ಹಣಕಾಸಿನ ಸಮಸ್ಯೆಗಳಿಂದ ಪ್ರಥಮ ದರ್ಜೆ ಕ್ರಿಕೆಟ್ಟಿಗೆ ಹೋಗಲಾಗದ ಇರ್ಫಾನ್‌ಗೆ ಇದ್ದ ಮತ್ತೊಂದು ಆಕಾಂಕ್ಷೆ ನಟನಾಗಬೇಕು ಎಂಬುದಾಗಿತ್ತು. ದೆಹಲಿಯ ಪ್ರತಿಷ್ಠಿತ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ನಟನೆಯ ತರಬೇತಿ ಪಡೆದ ಬೆನ್ನಲ್ಲೇ, ಅಮೇರಿಕೆಯ ನಿರ್ದೇಶಕಿ ಮೀರ ನಾಯರಳ ’ಸಲಾಂ ಬಾಂಬೆ’ಯಲ್ಲಿ ಪುಟ್ಟ ಪಾತ್ರವನ್ನು ನೀಡಲಾಯಿತಾದರೂ, ಕೊನೆಗೆ ಆ ಪಾತ್ರವನ್ನು ಸಿನೆಮಾದಿಂದಲೇ ತೆಗೆದು ಹಾಕಲಾಯಿತು.
ತಂದೆ ಇಲ್ಲದ ಸಂಸಾರ ಸಾಕುವುದಕ್ಕೆ ಅಗತ್ಯವಾದ ಮಧ್ಯಮ ವರ್ಗದ ವೃತ್ತಿಯನ್ನು ಪಡೆಯುವ ಸ್ಥಿತಿ ಇದ್ದರೂ, ಆತ ಅಂತಹುದ್ದೆಲ್ಲ ತನಗೆ ಒಗ್ಗದ್ದು ಎಂದು ಬಿಟ್ಟಾಕಿ, 35 ವರ್ಷಗಳ ಹಿಂದೆ ಹಿಂದಿ ಸಿನೆಮಾಗಳಲ್ಲಿ ಪಾತ್ರವಹಿಸಲು ಮುಂಬೈಗೆ ಬಂದ. ನಾಟಕ ಶಾಲೆಯಲ್ಲಿ ಅವನ ಅಭಿನಯ ಪ್ರತಿಭೆಯ ಬಗ್ಗೆ ಖ್ಯಾತಿ ಇತ್ತಾದರೂ, ಮುಂಬೈನ ಬಾಲಿವುಡ್ಡ್ ಸಿನೆಮಾಕ್ಕೆ ನಟನಾ ಪ್ರತಿಭೆ ಅಷ್ಟೇನೂ ಮುಖ್ಯವಾಗಿರಲಿಲ್ಲ. ಬಾಲಿವುಡ್ಡಿನಲ್ಲಿ ಮಿಂಚಲು ಬೇಕಾದ ದೇಹ ರೂಪುಗಳಿಲ್ಲದ ಇರ್ಫಾನ್ ಹೊಟ್ಟೆಪಾಡಿಗೆ ಕಿರು ತೆರೆಯ ಪಾತ್ರಗಳಲ್ಲಿ ನಟಿಸತೊಡಗಿದ. ಸಿನೆಮಾಗಳಲ್ಲಿ ಗಣನೀಯ ಪಾತ್ರ ದೊರಕಲು ಅವನು ಹದಿನಾರು ವರ್ಷ ಕಾಯಬೇಕಾಯಿತು. ಆ ನಂತರದಲ್ಲಿ ದೊರಕಿದ್ದು ಹೆಚ್ಚಾಗಿ ಖಳ ಅಥವ ಪೋಷಕ ಪಾತ್ರಗಳೇ. ಸಿನೆಮಾವೊಂದರಲ್ಲಿ ಮುಖ್ಯ ಪಾತ್ರ ದೊರಕಲು ಮತ್ತೆ ಹತ್ತು ವರ್ಷ ಕಾಯಬೇಕಾಯಿತು. ಮತ್ತೆ ಮುಂದಿನ ಒಂಬತ್ತು ವರ್ಷಗಳಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸುವ ಆರು ಸಿನೆಮಾಗಳಲ್ಲಿ ಅವಕಾಶ ಸಿಕ್ಕು, ಖ್ಯಾತಿ ದೊರಕುವ ಹೊತ್ತಿಗೆ ಕ್ಯಾನ್ಸರ್‌ಗೆ ತುತ್ತಾದ.
ಈ ಬಗೆಯ ಏಳುಬೀಳುಗಳ ಬದುಕು ಬಾಲಿವುಡ್ಡಿಗೂ ಮುಂಬೈಗೂ ಹೊಸತೇನೂ ಅಲ್ಲ. ಆದರೆ, ಅವನ ಸಾವು ಸಾವಿರಾರು ಯುವ ಪ್ರೇಕ್ಷಕರಿಗೆ ತಟ್ಟಿರುವ ಬಗೆ ಅಚ್ಚರಿ ಹುಟ್ಟಿಸುವಂತಿದೆ. 2018ರಲ್ಲಿ ಕ್ಯಾನ್ಸರಿಗೆ ತುತ್ತಾದದ್ದು ತಿಳಿದಾಗ ಸಾಮಾಜಿಕ ಜಾಲತಾಣದಲ್ಲಿ ಇರ್ಫಾನ್ ಬರೆದಿದ್ದ ಅಂತರಂಗ ನಿರೂಪಣೆಯ ಬರಹವನ್ನು, ಅವನಿಲ್ಲದ ಖಾಲಿಯನ್ನು ತುಂಬುತ್ತದೆ ಎಂಬಂತೆ ಯುವಕರು ಪ್ರಸಾರ ಮಾಡುತ್ತಿದ್ದಾರೆ. ಯಾವ ಪ್ರಭಾವಳಿಯೂ ಇರದ, ಬಾಲಿವುಡ್ಡಿನ ಝಗಮಗ ಬೆಳಕಿನ ಬೆನ್ನಿಗೆ ಚಾಚಿರುವ ಉದ್ದನೆಯ ನೆರಳಲ್ಲಿ ಅಡಗಿದ್ದ ಇರ್ಫಾನ್‌ನ ಸಾವು ಯಾಕೆ ಪ್ರೇಕ್ಷಕರನ್ನು ಆವರಿಸಿದೆ?

ಅವನನ್ನು ಹತ್ತಿರದಿಂದ ಬಲ್ಲವರು ಹೇಳುವಂತೆ, ಇರ್ಫಾನ್, ಔಪಚಾರಿಕ ಓದಿನಲ್ಲಿ ಏನೂ ಆಸಕ್ತಿ ಇಲ್ಲದಿದ್ದ, ತನ್ನ ಪಾಡಿಗೆ ತನಗಿಷ್ಟವಾದದ್ದನ್ನು ಮಾಡಿಕೊಂಡಿರಲು ಇಷ್ಟಪಡುತ್ತಿದ್ದ ಅಂತರ್ಮುಖಿ ಮನುಷ್ಯ; ಗೆಳೆಯರ ಗುಂಪಿನಲ್ಲಿದ್ದೂ, ಕೊಂಚ ದೂರದಲ್ಲಿ ಪುಸ್ತಕ ಹಿಡಿದು ಓದುತ್ತ ಕುಳಿತುಕೊಳ್ಳುವ ವ್ಯಕ್ತಿ. ಒಂದು ಉತ್ತಮ ಪಾತ್ರ ಸಿಕ್ಕಾಗ, ಅದನ್ನು ನಿರ್ವಹಿಸಲು ಸದಾ ಸಿದ್ಧನಿರಬೇಕೆಂದು, ವಿರಾಮದ ಪ್ರತಿಕ್ಷಣವನ್ನು ವಿಭಿನ್ನ ಚಿತ್ರಕತೆಗಳನ್ನು ಓದಿಕೊಳ್ಳುವುದರಲ್ಲೇ ತೊಡಗಿಸಿಕೊಳ್ಳುತ್ತಿದ್ದ ಆಸಾಮಿ. ಅಂಥವನು, 16 ವರ್ಷಗಳ ಕಾಲ, ’ಯಾರಯ್ಯ ನೀನು!’, ’ಬಹಳ ಯೋಚಿಸಬೇಡ! ಕ್ಯಾಮೆರ ಕಡೆ ಮುಖ ಮಾಡಿ ಡೈಲಾಗು ಹೇಳು’, ’ಥತ್ತ್! ಇವತ್ತು ಅರ್ಧ ಸಂಬಳ ಕಟ್’ ಎನಿಸಿಕೊಂಡು, ಕಿರು ತೆರೆಯಲ್ಲಿ ಹೂರಣವಿರದ ಜುಜೂಬಿ ಪಾತ್ರಗಳನ್ನು ಮಾಡಿಕೊಂಡು ಇದ್ದನು; ತನ್ನ ರಂಗಶಾಲೆಯ ದಿನದಲ್ಲಿ ನಿರ್ವಹಿಸಿದ್ದ ’ಲಾಲ್ ಘಾಸ್ ಪರ್ ನೀಲಿ ಘೋಡ’ ನಾಟಕದ ಲೆನಿನನ್ನ ಪಾತ್ರವನ್ನು, ನಿನ್ನೆಯಷ್ಟೇ ನಟಿಸಿದ್ದೆ ಎಂಬ ಕಸುವಿನಲ್ಲಿ ಕಿರುತೆರೆಯಲ್ಲಿ ಪ್ರದರ್ಶಿಸಿದ್ದನ್ನು ಯಾರೂ ಗುರುತಿಸಲಿಲ್ಲ ಎಂಬ ವ್ಯರ್ಥ ಮರುಕ ತೋರದೆ ಇದ್ದನು;
ಎದುರಿದ್ದವರು ಮುಖ ಮುರಿದುಕೊಂಡರೂ ಸರಿ, ತನಗನ್ನಿಸಿದ್ದನ್ನು ಆಡಿಯೇಬಿಡುವ ಜಾಯಮಾನ ಅವನದು; ಹೀಗಿದ್ದೂ, ಷಹಬ್ಜಾದೇ ಇರ್ಫಾನ್ ಅಲಿ ಖಾನ್ ಎಂಬ ಹೆಸರನ್ನು ಇರ್ಫಾನ್ ಖಾನ್ ಎಂದು ಕಿರುಗೊಳಿಸಿಯೂ ತೃಪ್ತಿ ಕಾಣದೆ, ಇರ್ಫಾನ್ (irfan) ಎಂದಾಗಿಸಿಕೊಂಡು, ಅದನ್ನೂ ಸ್ವಲ್ಪ ಜಾಸ್ತಿ ಒತ್ತಿರಲ್ಲಿ ಅಂತ irrfan ಎಂದು ಬದಲಾಯಿಸಿಕೊಂಡೆ ಎಂದು ಹೇಳಬಲ್ಲ ವಕ್ರ ಹಾಸ್ಯವುಳ್ಳಂತ ವ್ಯಕ್ತಿಯಾಗಿದ್ದ. ತನ್ನ ಹೊರಗಿನ ಬದುಕಿನ ಎಲ್ಲ ಅನುಭವಗಳನ್ನೂ ಗಮನಿಸಿ, ಗುರುತು ಇಟ್ಟುಕೊಂಡು, ಯಾವ ಅನುಭವದಿಂದ ಯಾವ ಭಾವ ಜಾಗೃತವಾಗುತ್ತದೆ ಎಂಬ ಪಾಠವನ್ನು ಲೋಕ ನಿರುಕದಿಂದ ಕಲಿಯುವುದು; ಯಾವ ಹೊತ್ತಲ್ಲಾದರೂ ಸರಿ, ಧರಿಸಿದ ಪಾತ್ರದ ಭಾವವನ್ನು ಅಭಿನಯಿಸಿ ತೋರಲು ತನ್ನ ಮನವನ್ನು ಚೋದಿಸುವ ಭಾವಸನ್ನೆಗಳನ್ನು ಗುರುತು ಹಾಕಿಕೊಂಡು ಸದಾ ಸಿದ್ಧವಾಗಿರುವುದು- ಇಂತಹ ಅಭಿನಯ ಅಭ್ಯಾಸವನ್ನು ’ಮೆಥೆಡ್ ಯಾಕ್ಟಿಂಗ್’ ಎನ್ನುತ್ತಾರೆ; ಇರ್ಫಾನ್ ಅಂತಹ ಅಭಿನಯ ವಿಧಾನವನ್ನು ನೆಚ್ಚಿದವನಾಗಿದ್ದ; ತನ್ನ ಹೊಟ್ಟೆಪಾಡಿಗಾಗಿ ನಿರ್ವಹಿಸುವ ಎಂತಹ ಪಾತ್ರವಾದರೂ ಸರಿ, ಅದರ ನಿರ್ವಹಣೆಯೂ ಆ ನಟನಾ ವಿಧಾನದ ತಾಲಿಮು ಎಂಬಂತೆ ಆತ ನಿರ್ವಹಿಸದೇ ಹೋಗಿದ್ದರೆ, 16 ವರ್ಷಗಳ ಅಜ್ಞಾತವಾಸದಿಂದ ಎದ್ದು ಬಂದು, ’ವಾರಿಯರ್’ ಹಾಗು ’ಹಾಸಿಲ್’ ಸಿನೆಮಾಗಳಲ್ಲಿ ದಕ್ಕಿದ ಮುಖ್ಯ ಪಾತ್ರಗಳನ್ನು ಸಿನೆಮಾ ರಂಗ ತಿರುಗಿ ನೋಡುವಂತೆ ನಿರ್ವಹಿಸಲಾಗುತ್ತಿರಲಿಲ್ಲ.

ಮತ್ತೆ ಹತ್ತು ವರ್ಷಗಳಲ್ಲಿ ಸಿಕ್ಕ ಪೋಷಕ ಪಾತ್ರಗಳಲ್ಲಿ ತನ್ನ ಅಭಿನಯ ವಿಧಾನವನ್ನು ಪ್ರಭಾವಶಾಲಿಯಾಗಿ ತೋರಿದರೂ (’ಮುಂಬೈ ಮೇರಿ ಜಾನ್’ನ ಥಾಮಸ್, ’ಲೈಫ್ ಇನ್ ಮೆಟ್ರೋ’ದ ಮಾಂಟಿ, ’ಹೈದರ’ನ ರೂಹ್‌ದಾರ್), ಗಮನಿಸಿ ಅವನಿಗೆ ಮುಖ್ಯಪಾತ್ರ ನೀಡುವ ಜರೂರು ಬಾಲವುಡ್ಡಿಗೆ ಇರಲಿಲ್ಲ. ’ಸಾಕು! ನನ್ನೂರಿಗೆ ವಾಪಾಸ್ಸು ಹೋಗುತ್ತೇನೆ..’ ಎಂದು ಎದ್ದು ಹೊರಟಾಗ, ಅವನ ಸಹಪಾಠಿ-ಗೆಳಯ ಥಿಗ್ಮಾಂಷು ಧುಲಾಕಿಯ, ’ಇನ್ನು ಸ್ವಲ್ಪ ಕಾಯಪ್ಪ.. ಇಬ್ಬರನ್ನು ಕಣ್ಬಿಟ್ಟು ನೋಡುವಂತಹದ್ದನ್ನು ಮಾಡೋಣ..’ ಅಂದನಂತೆ; ಹಾಗೆಯೇ 2011ರಲ್ಲಿ ಥಿಗ್ಮಾಂಷು ನಿರ್ದೇಶನದ ’ಪಾನ್‌ಸಿಂಗ್ ತೋಮರ್’ ಆ ಮಾತನ್ನು ನಿಜ ಮಾಡಿತು. ’ಲಂಚ್ ಬಾಕ್ಸ್’, ’ಮದಾರಿ’, ’ಪಿಕೂ’, ’ಕರೀಬ್ ಕರೀಬ್ ಸಿಂಗಲ್’, ’ಕರಾವಾನ್’, ’ಹಿಂದಿ ಮೀಡಿಯಮ್’ ನಂತಹ ಸಿನೆಮಾಗಳಲ್ಲಿ ಇರ್ಫಾನನ ಅಭಿನಯದ ಅಚ್ಚನ್ನು ಪ್ರೇಕ್ಷಕರು ಗುರುತು ಹಿಡಿಯತೊಡಗಿದರು; ವ್ಯಾಪಾರಿ ಜಗತ್ತು ಅದನ್ನು ತಕ್ಷಣ ಸರಕಾಗಿ ಮಾಡಿಕೊಳ್ಳಲು ಓಡಿ ಬಂದು ಆತನಿಗೆ ಜಾಹಿರಾತು ಪಾತ್ರಗಳನ್ನು ನೀಡತೊಡಗಿದವು….ಆ ಹೊತ್ತಿಗೆ, ಸಾವು ಸನ್ನೆ ಮಾಡತೊಡಗಿತು; ಅವನೇ ತನ್ನ ಅಂತರಂಗ ನಿರೂಪಣೆಯಲ್ಲಿ ಹೇಳಿಕೊಂಡಂತೆ ’…ವೇಗವಾಗಿ ಚಲಿಸುತ್ತಿದ್ದ ರೈಲಿನಲ್ಲಿ ಪ್ರಯಾಣಿಸುತ್ತಿದ್ದೆ. ಕನಸು, ಆಕಾಂಕ್ಷೆ, ಗುರಿಗಳಲ್ಲಿ ಗರ್ಕನಾಗಿದ್ದೆ. ತಟ್ಟನೇ ಯಾರೋ ಬಂದು ಹೆಗಲು ತಟ್ಟಿದ ಹಾಗಾಯ್ತು. ತಿರುಗಿ ನೋಡಿದರೆ ಟಿಸಿ ನೀವು ಇಳಿಯಬೇಕಾದ ಸ್ಥಳ ಬಂದಿದೆ ಇಳಿಯಿರಿ ಎನ್ನುತ್ತಿದ್ದ.. ಇಲ್ಲ ಇನ್ನೂ ಬಂದಿಲ್ಲ..’ ಎಂದು ಆತ ಅಲವತ್ತುಕೊಳ್ಳುವಂತಾಯಿತು.
ರಾಷ್ಟ್ರೀಯ ನಾಟಕ ಶಾಲೆಯಿಂದ ಅಭಿನಯ ನುರಿತರಾಗಿ ಬಂದವರಿಗೆ ನಮ್ಮ ವ್ಯವಾಹಾರಿಕ ಸಿನೆಮಾ ಜಗತ್ತಿನಲ್ಲಿ ಅಂತಹ ಬೆಲೆ ಏನೂ ಇಲ್ಲ. ಅಮರೀಶ್ ಪುರಿಯ ಹಾಗೆ ಆಂಗಿಕ-ವಾಚಿಕ-ಚರ್ಯಾಭಿನಯ ಚತುರತೆಗಾಗಲೀ, ನಾಸೀರುದ್ದೀನ್ ಷಾ, ಓಂಪುರಿ ಮತ್ತು ಇರ್ಫಾನ್‌ರಂತಹ ಮುಖರಂಗ ನುರಿತ ಅಭಿನಯಪಟುತ್ವ ಹೊಂದಿದವರಿಗಾಗಲೀ, ಅವರ ಪ್ರತಿಭೆಯನ್ನು ಅನಾವರಣ ಮಾಡುವಂತಹ ಪಾತ್ರಗಳನ್ನು ಕಟ್ಟುವುದು ವಿರಳ. ಅಮರೀಶ್ ಪುರಿ, ಓಂಪುರಿ, ಷಾ ಅವರುಗಳು ’ನಡು ಅಲೆ’ (ಬ್ರಿಡ್ಜ್)ಯ ಸಿನೆಮಾಗಳು ಒಂದಷ್ಟು ಜನಪ್ರಿಯವಾಗಿದ್ದ ಕಾಲಕ್ಕೆ ಬಾಲಿವುಡ್ಡಿಗೆ ಬಂದು, ಪ್ರತಿಭೆ ತೋರಿ, ಬಾಕಿ ಉಳಿದಂತೆ ಹೊಟ್ಟೆಪಾಡಿಗೆ ಬಾಲಿವುಡ್ಡಿನ ರೂಢಿಗತ ಪಾತ್ರಗಳನ್ನು ಗಳಿಸಿಕೊಂಡು ಮನ್ನಡೆದರು; ಇರ್ಫಾನ್ ಕಾಲಿಡುವ ಹೊತ್ತಿಗೆ ಆ ಸುಖವೂ ಇರಲಿಲ್ಲ…ಹಾಗೇ ’ಏಕ್ ಡಾಕ್ಟರ್ ಕೀ ಮೌತ್’ನಂತಹ ಸಿನೆಮಾದಿಂದ, ’ಲಾಲ್ ಘಾಸ್ ಪರ್ ನೀಲೇ ಘೋಡ’ ದಂತಹ ಟೆಲಿ ನಾಟಕಗಳಿಂದ ಅವನ ಅಭಿನಯದ ಘನತೆಯನ್ನು ಯಾರೂ ನಿರುಕಿಸಲಿಲ್ಲ.
ಅರೆನಿದ್ದೆಯಿಂದ ಈಗಷ್ಟೇ ಎದ್ದು ಮುಖ ತೊಳೆಯದೇ ನಿಮ್ಮೆದಿರು ನಿಂತಂತಿರುವ ಮುಖ ಅವನದ್ದು; ಅವನ ಅಭಿನಯ ಶಕ್ತಿ ಇದ್ದದ್ದೇ ಮುಖರಂಗ ಹಾಗು ಕೆಳದನಿಯ ವಾಚಿಕದ ಏರಿಳತಗಳಲ್ಲಿ ಹೊಮ್ಮುವ ಭಾವದಲ್ಲಿ; ಅದು ತೀವ್ರವಾಗಿ ಪ್ರೇಕ್ಷಕರನ್ನು ತಟ್ಟುವುದು ಕ್ಯಾಮೆರ ಅವನ ಮುಖರಂಗದಿಂದ ನಿರರ್ಗಳವಾಗಿ ಹೊಮ್ಮವ ಭಾವಗಳನ್ನು ಸೆರೆಹಡಿಯುವ ಮಧ್ಯಮ ದೂರ (ಮಿಡ್ ಲಾಂಗ್) ಹಾಗು ಸಮೀಪ (ಕ್ಲೋಸಪ್) ದೃಷ್ಯ ಚೌಕಟ್ಟಲ್ಲಿ. ಕಣ್ಣು, ಹುಬ್ಬು, ತುಟಿ, ಗಲ್ಲ ಹಾಗು ಕಪಾಳಗಳೆಂಬ ಆರು ಉಪಾಂಗಳ ಚಲನೆಯ ಮೂಲಕ ಭಾವ ತೋರಿಸುವ ಆತನ ಮುಖರಂಗ ನಟನ ಪ್ರತಿಭೆಯನ್ನು ಹಿಡಿಯಲು ಕ್ಯಾಮೆರವನ್ನು ಕೇಂದ್ರಿಕರಿಸಿದರೆ ಮಾತ್ರ ಇರ್ಫಾನನ ನಟನೆಯ ಕೌಶಲ ನಮಗೆ ತಾಗುತ್ತದೆ; ನಾಯಕನಾಗಬೇಕೆಂದೇನೂ ಇಲ್ಲ, ಕಥಾ ನಿರೂಪಣೆಗೆ ಮುಖ್ಯವಾದ ಪೋಷಣ ಪಾತ್ರವಾದರೂ ಸಾಕು, ಎರಡು ಮೂರು ನಿಮಿಷ ಕ್ಯಾಮೆರ ಅವನ ಮುಖಚರ್ಯೆ ಸೆರೆಹಿಡಿದರೂ ಸಾಕು, ಇರ್ಫಾನ್‌ನಲ್ಲಿ ಅಡಗಿರುವ ನಟನಾ ಪ್ರತಿಭೆ ಪ್ರಕಟವಾಗಿಬಿಡುತ್ತದೆ ಎಂಬುದಕ್ಕೆ ಅವನ ಥಾಮಸ್, ಮಾಂಟಿ, ರೂಹ್‌ದಾರ್ ಪಾತ್ರಗಳೇ ಸಾಕ್ಷಿ; ಇಷ್ಟನ್ನು ತೋರಲು ಕ್ಯಾಮೆರ ಅವನೆದಿರು ನಿಲ್ಲುವ ಹೊತ್ತಿಗೆ ಅವನಿಗೆ 34 ವರ್ಷವಾಗಿ ಹೋಗಿತ್ತು! ’ವಾರಿಯರ್’, ’ಹಾಸಿಲ್’ ಹಾಗು ಮುಖ್ಯವಾಗಿ ’ಮಖ್ಬೂಲ್’ಗಳು ಬರದೇ ಹೋಗಿದ್ದರೆ, ಪ್ರೇಕ್ಷಕರು ಥಾಮಸ್, ಮಾಂಟಿ, ರೂಹ್‌ದಾರ್ ಪಾತ್ರಗಳು ಯಾವ ಮುಖ್ಯಪಾತ್ರಕ್ಕೂ ಕಡಿಮೆ ಇಲ್ಲದಂತಹ ಪಾತ್ರಗಳನ್ನಾಗಿಸುವ ಅವನ ’ಮೆಥಡ್ ಅಭಿನಯ’ವನ್ನು ಚಿತ್ರರಂಗ ಕಾಣುತ್ತಿರಲಿಲ್ಲ.

ಹಾಗೆ ನೋಡಿದರೆ, ಪಶ್ಚಿಮದ ಸಿನೆಮಾ ಮಂದಿಯನ್ನು ಸೆಳೆದದ್ದು, ಅವನು ಪುಟ್ಟಪಾತ್ರಗಳಲ್ಲಿ ತೋರುವ ಮೆಥಡ್ ನಟನೆಯ ಬೆಳಗು. ಡ್ಯಾನಿ ಬಾಯ್ಲ್, ಮೀರ ನಾಯರ್‌ಗಳು ಅವನನ್ನು ಹುಡುಕಿ ಬಂದರು. ಅವನು ಇದ್ದಾನೆ ಎಂಬ ಕಾರಣಕ್ಕೆ ’ಥ್ಯಾಂಕ್ಯು’, ’ನಾಕೌಟ್’, ’ಕ್ರೇಜಿ4’ ನಂತಹ ಸಿನೆಮಾಗಳನ್ನು ನೋಡಲು ಟಾಕೀಸಿಗೆ ಹೋಗುವ ಪ್ರೇಕ್ಷಕ ವರ್ಗವೊಂದು ಸಣ್ಣದಾಗಿ ಬೆಳೆಯಿತು. ಅವನನ್ನು ಯಾರಾದರೂ ’ಸಹಜ ಅಭಿನಯ’ದ ನಟನೆಂದರೆ, ಅವನಿಗೆ ಸಿಟ್ಟು ಬರುತ್ತಿದ್ದದ್ದು ಸಹಜವೇ; ಯಾಕೆಂದರೆ ಯಾವ ಪರಿಶ್ರಮವನ್ನು ಹಾಕದೇ, ತಾನಿರುವಂತೆಯೇ ಅಭಿನಯಿಸಿಬಿಡುತ್ತಾನೆ ಎಂಬುದು ಈ ಮಾತಿನ ಅರ್ಥ; ತಾನು ಪಾತ್ರದ ಬದುಕಿನ ಹಿನ್ನೆಲೆಯನ್ನು ಪೂರ್ತ ಅರ್ಥ ಮಾಡಿಕೊಂಡು, ಯಾವ ಸನ್ನಿವೇಶದಲ್ಲಿ ಯಾವ ಚರ್ಯೆಯ ಮೂಲಕ ಪಾತ್ರದ ಭಾವವನ್ನು ಹೊಮ್ಮಿಸಬೇಕು ಎಂದು ಮನಸ್ಸಿನ ಸನ್ನೆಗಳನ್ನು ಗುರುತು ಹಾಕಿಕೊಂಡು ಸಿದ್ಧವಾಗುವ ತನ್ನ ತಯಾರಿಯ ಶ್ರಮ, ಆ ಶ್ರಮವನ್ನು ಮೂರು ದಶಕಗಳ ಕಾಲ ಎಡೆಬಿಡದೆ ಆಸ್ತೆಯಿಂದ ಪಾಲಿಸಿಕೊಂಡು ಬಂದಿರುವ ತನ್ನ ಶ್ರದ್ಧೆಯ ಅರಿವು ಅಂತಹ ಮಾತುಗಳನ್ನು ಇರುವುದಿಲ್ಲ ಎಂಬುದು ಅವನಿಗೆ ತಿಳಿದಂತಿತ್ತು; ಸಮಯ ಸಿಕ್ಕಾಗಲೆಲ್ಲಾ ಅಂತಹ ಮಾತುಗಳಿಗೆ ವ್ಯಂಗ್ಯದ ಚಾಟಿ ಬೀಸುತ್ತಿದ್ದ ಅವನ ಸಂವೇದನೆಯನ್ನು ’ಜೋಕ್’ ಎಂದು ಗೌರವಿಸುವಷ್ಟಾದರೂ ಸ್ಥಾನಮಾನ ದಕ್ಕುವ ಹೊತ್ತಿಗೆ, ಸಾವು ಅವನ್ನು ಸನ್ನೆ ಮಾಡಿ ಕರೆಯತೊಡಗಿತ್ತು; ಆ ತಲ್ಲಣವನ್ನು ಅವನು ನಾಟಕೀಯಗೊಳಿಸದೆ, ಬಹಳ ಸೂಕ್ಷ್ಮವಾಗಿ ಅವನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಪಡಿಸತೊಡಗಿದ. ಕಾಯಿಸಿ ಕಾಯಿಸಿ ದೊರಕುವ ಸ್ಥಿತಿವಂತಿಕೆಯು ಏರಿಸುವ ಅಮಲು ಮತ್ತದರ ಅಪಾಯ ಅವನಿಗೆ ಬದುಕಿನ ಮೂಲಕವೇ ತಿಳಿದಂತಿತ್ತು; ಸಾವಿನ ಹತ್ತು ದಿನಕ್ಕೆ ಮುಂಚೆ ಹಾಕಿದ ಇನ್ಸ್ಟಾಗ್ರಾಮ್ ಸಂದೇಶದಲ್ಲಿ, ಈ ಮುಖರಂಗ ಅಭಿನಯ ಪರಿಣಿತ ತನ್ನ ಮುಖದ ನೆರಳಿನ ಚಿತ್ರವನ್ನು ಹಾಕಿ, ಅದಕ್ಕೆ ಪೂರಕವಾಗಿ ರಿಲ್ಕ್‌ನ ಒಂದು ಪದ್ಯವನ್ನು ಹಾಕಿದ್ದ; ಅದರ ಒಂದು ಸಾಲು: ’ಬದುಕೆಂಬ ದೇಶವು ಹತ್ತಿರದಲ್ಲೇ ಇದೆ./ಅದರ ಗಂಭೀರತೆಯಲ್ಲೇ ಅದನ್ನು ಗುರುತಿಸಬಹುದು’. ಅವನ ಸಾಮಾಜಿಕ ಬದ್ಧತೆಯೂ ಅವನ ಅಭಿನಯ ಹಾಗು ಬದುಕಿನ ಘನ ನಡಿಗೆಯ ಮುಂದುವರಿಕೆಯೇ ಆಗಿತ್ತು. ಎಪ್ರಿಲ್ 10 ರಂದು, ನಾಟಕ ಶಾಲೆಯಲ್ಲಿ ಅವನಿಗೆ ಪಾಠ ಮಾಡಿದ್ದ ಪ್ರಸನ್ನ, ತಮ್ಮ ಗ್ರಾಮಸೇವ ಸಂಘದ ವತಿಯಿಂದ ’ವಲಸೆ ಕಾರ್ಮಿಕರನ್ನು ನಾವು ದೂಡಿರುವ ದುಸ್ಥಿತಿಗೆ ಪಶ್ಚಾತಾಪ ಸೂಚಿಸಲು ಒಂದು ದಿನದ ಉಪವಾಸ’ಕ್ಕೆ ಕೊಟ್ಟ ಕರೆಯನ್ನು ಬೆಂಬಲಿಸಿ ಇರ್ಫಾನ್ ಹೇಳಿದ್ದು ’ ನಾವು ನಮ್ಮ ಬೇರಲ್ಲೇ ಬದಲಾಗಬೇಕಿದೆ, ಅದಕ್ಕಾಗಿ ನಾನು ಉಪವಾಸ ಮಾಡುವೆ’.
’ಪಾನ್‌ಸಿಂಗ್ ತೋಮರ್’, ’ಲಂಚ್ ಬಾಕ್ಸ್’ಗಳಲ್ಲಿ ಅವನ ಅಭಿನಯವನ್ನು ಮೆಚ್ಚದೆ ಇರಲು ಕಾರಣಗಳೇ ಇಲ್ಲ. ಆದರೆ ನನಗೆ ತುಂಬ ಇಷ್ಟವಾದದ್ದು ಅವನ ಎರಡು ಪಾತ್ರಗಳು: ಸುಧೀರ್ ಮಿಶ್ರಾನ ’ಯೇ ಸಾಲಿ ಜಿಂದಗಿ’ಯಲ್ಲಿ ಆತ ನಿರ್ವಹಿಸಿದ ಅರುಣ್‌ನ ಪಾತ್ರ- ಕತ್ತು ಕೊಯ್ಯುವ ವ್ಯವಹಾರ ಜಗತ್ತಲ್ಲಿ, ಬದುಕುಳಿಯುವ ದಗಲ್ಬಾಜಿತನ ಹಾಗು ಪ್ರಿಯಕರಳಲ್ಲಿ ತನಗಿರುವ ಪ್ರೀತಿಯ ತೀವ್ರತೆಗಳ ನಡುವೆ ಯಾವ ವ್ಯತ್ಯಾಸವೂ ಇಲ್ಲವೆಂಬಂತೆ, ಅಪಾಯಗಳನ್ನು ಕಟು ಕಪ್ಪು ವ್ಯಂಗ್ಯದಲ್ಲಿ ಎದುರಿಸುವ ಅರುಣ್‌ನ ಪಾತ್ರವನ್ನು ಇರ್ಫಾನನಲ್ಲದೆ ಮತ್ತ್ಯಾರು ಮಾಡಲು ಸಾಧ್ಯವಿರಲಿಲ್ಲ. ಎರಡನೇಯದು, ಕಾಶ್ಮೀರದ ಸಾಮಾಜಿಕ-ರಾಜಕೀಯ ಸನ್ನಿವೇಶಕ್ಕೆ ಶೇಕ್‌ಸ್ಪಿಯರನ ’ಹ್ಯಾಮ್ಲೆಟ್’ ನಾಟಕವನ್ನು ಅಳವಡಿಸಿಕೊಂಡು, ವಿಶಾಲ್ ಭಾರಧ್ವಾಜ್ ಮಾಡಿರುವ ’ಹೈದರ್’ನಲ್ಲಿ ಇರ್ಫಾನ್ ಮಾಡಿರುವ ರೂಹ್‌ದಾರ್ ಪಾತ್ರ; ರೂಹ್ ಅಂದರೆ ಪ್ರೇತಾತ್ಮ; ಎಲ್ಲ ಮನುಷ್ಯ ವಾಂಛೆಗಳಿಂದ ಮುಕ್ತವಾಗಿ, ಗತ ಬದುಕಿನ ನಿಜವೊಂದನ್ನು ತಿಳಿಸುವ ಸಲುವಾಗಿ ಪ್ರೀತಿ, ಕ್ರೋಧಗಳಲ್ಲಿ ಬೇಯುತ್ತಿರುವ ನಾಯಕನಿಗೆ ತಿಳಿಸಲು ಬರುವ ಪಾತ್ರ ರೂಹ್‌ದಾರ್; ನಿರ್ಭಾವುಕವಾಗಿ, ಅಧಿಕಾರದ ಹಿಂಸೆಯ ಕ್ರೌರ್ಯವನ್ನು ತಣ್ಣಗೆ ಪದರು ಪದರಲ್ಲಿ ನಿರೂಪಿಸಬೇಕಾದ ಪಾತ್ರವಾದು; ತುಣುಕು ಭಾವವನ್ನೂ ಮುಖದಲ್ಲಿ ಪ್ರಕಟಿಸದೆ, ಕೆಳದನಿಯ ನಿಗೂಢ ವಾಚಿಕದಲ್ಲಿ, ನಾಯಕನನ್ನು ಪ್ರತೀಕಾರಕ್ಕೆ ಚೋದಿಸುವ ಪಾತ್ರವನ್ನು ಈ ಮುಖರಂಗದ ಅಪ್ಪಟ ಪ್ರತಿಭೆಯು ನಿರ್ವಹಿಸಿದ ಬಗೆಯೇ ನನಗೆ ಅತಿ ಮೆಚ್ಚುಗೆ; ಭಾವ ತೋರದೆ ಭಾವವನ್ನು ಚೋದಿಸುವುದು ಗಾಳಿಯಲ್ಲಿ ಕಣ್ಣಿಗೆ ಕಟ್ಟುವ ಚಿತ್ರ ಬರೆದಂತೆ-ಇರ್ಫಾನ್ ಅಂತಹ ಕಲಾವಿದ; ಬಾಲಿವುಡ್ಡಿನ ರೂಹ್‌ದಾರ್.


