ನರೇಂದ್ರ ಮೋದಿ ಸರಕಾರವು ಕೊರೊನಾ ನೆಪದಲ್ಲಿ ಕಾರ್ಮಿಕರ ಕೆಲಸದ ಅವಧಿಯನ್ನು ದಿನಕ್ಕೆ ಎಂಟು ಗಂಟೆಗಳಿಂದ 12 ಗಂಟೆಗಳಿಗೆ ಹೆಚ್ಚಿಸುವ ಕಾನೂನುಗಳನ್ನು ರಾಜ್ಯ ಸರಕಾರಗಳ ಮೂಲಕ ಹಿಂದಿನ ಬಾಗಿಲಿನಿಂದ ತರುತ್ತಿದೆ. ಈ ಕಾನೂನುಗಳಲ್ಲಿ ಹಲವು ದೋಷಗಳೂ, ಮಾಲಕರು ಕುಣಿಕೆಯಿಂದ ತಪ್ಪಿಸಿಕೊಳ್ಳಬಹುದಾದ ರಂಧ್ರಗಳೂ ಇವೆ. ಅದಲ್ಲದೇ ಈ ಕರಾಳ ನಿರ್ಧಾರದ ಸಾಮಾಜಿಕ, ಅರೋಗ್ಯ ಮತ್ತಿತರ ವಿಷಯಗಳ ಮೇಲಾಗುವ ಪರಿಣಾಮಗಳು ಏನು? ಓದಿ…
ಮೂಲ: ಕೆ.ಆರ್. ಶ್ಯಾಮ ಸುಂದರ್
ಸಂಗ್ರಹಾನುವಾದ: ನಿಖಿಲ್ ಕೋಲ್ಪೆ
ನರೇಂದ್ರ ಮೋದಿ ಸರಕಾರವು ಕಾರ್ಮಿಕರ ಕೆಲಸದ ಅವಧಿಯನ್ನು- 1921ರಲ್ಲಿಯೇ ಅಂತರರಾಷ್ಟ್ರೀಯವಾಗಿ ಒಪ್ಪಿತವಾದ ದಿನಕ್ಕೆ ಎಂಟು ಗಂಟೆಗಳ ಕೆಲಸದ ನಿಯಮವನ್ನು ಬದಿಗೊತ್ತಿ, ರಾಜ್ಯ ಸರಕಾರಗಳ ಮೂಲಕ ಹಿಂಬಾಗಿಲಿನಿಂದ 12 ಗಂಟೆಗಳಿಗೆ ಏರಿಸುವುದರ ಕೆಲವು ಪರಿಣಾಮಗಳನ್ನು ಇಲ್ಲಿ ನೋಡೋಣ.
ಮೊತ್ತಮೊದಲಾಗಿ, 12 ಗಂಟೆಗಳ ಕೆಲಸದ ಅವಧಿಗೆ ನೀಡಲಾಗಿರುವ ಕಾನೂನು ಸಮರ್ಥನೆಗಳಲ್ಲಿಯೇ ಹಲವಾರು ಲೋಪದೋಷಗಳಿವೆ. ಕಾರ್ಖಾನೆಗಳ ಕಾಯಿದೆ, 1948ರ ವಿಧಿ 51ರ ಪ್ರಕಾರ ಯಾವುದೇ ಕಾರ್ಮಿಕ ವಾರಕ್ಕೆ 48 ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡಬಾರದು. ಅದರಂತೆ, ವಿಧಿ 54 ರ ಪ್ರಕಾರ ದಿನಕ್ಕೆ ಒಂಭತ್ತು ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡಲು ಅವಕಾಶ ನೀಡಬಾರದು. ವಿರಾಮವೂ ಸೇರಿದಂತೆ ಇಡೀ ಕಾಲಾವಧಿಯು ಹತ್ತೂವರೆ ಗಂಟೆಗಳನ್ನು ಮೀರಬಾರದು ಎಂದು ವಿಧಿ 56 ಹೇಳುತ್ತದೆ. ವಿಧಿ 51 ಮತ್ತು 54 ಅನ್ವಯಿಸುವಂತೆ ಹೆಚ್ಚುವರಿ ಕೆಲಸದ ಅವಧಿಗೆ ಸಾಮಾನ್ಯ ಅವಧಿಗಿಂತ ದುಪ್ಪಟ್ಟು ಸಂಬಳ ನೀಡಬೇಕು ಎಂದು ವಿಧಿ 59 ಹೇಳುತ್ತದೆ.
ಈಗ ರಾಜ್ಯ ಸರಕಾರಗಳು ಕೆಲಸದ ಅವಧಿಯನ್ನು ವಿಸ್ತರಿಸುವುದಕ್ಕೆ ನೀಡಿರುವ ಕಾರಣಗಳು ಅಥವಾ ಸಬೂಬುಗಳು ಕೆಲವಿವೆ. ಕೊರೊನಾ ಸಾಂಕ್ರಾಮಿಕ ಪಿಡುಗಿನ ಕಾರಣದಿಂದ “ಕಾರ್ಮಿಕರ ಕೊರತೆ” ಉಂಟಾಗಿರುವುದು! ಮಾನವ ಶಕ್ತಿಯ ಅಗತ್ಯವನ್ನು “33 ಶೇಕಡಾದಷ್ಟು” ಇಳಿಸುವುದು ಮತ್ತು ಕಾರ್ಮಿಕರ ಓಡಾಟವನ್ನು ಕಡಿಮೆ ಮಾಡುವುದು (ರಾಜಸ್ಥಾನ), ಸುರಕ್ಷತೆ ಮತ್ತು ಸಾಮಾಜಿಕ ಅಂತರ ಕಾಯುವುದಕ್ಕಾಗಿ (ಗುಜರಾತ್). ಹಿಮಾಚಲ ಪ್ರದೇಶ ತನ್ನ ನಿರ್ಧಾರಕ್ಕೆ ಯಾವುದೇ ಕಾರಣ ನೀಡಿಲ್ಲ. (ಲಕ್ಷಾಂತರ ಜನರು ಒಂದು ದಿನದ ಕೆಲಸಕ್ಕೆ ತಹತಹಿಸುತ್ತಿರುವ ಕಾಲದಲ್ಲಿ ಈ ಹೇಳಿಕೆಗಳು ದುರುದ್ದೇಶಪೂರಿತ ಎಂಬುದು ಸ್ಪಷ್ಟವಾಗುತ್ತದೆ.)

(ಯಂತ್ರದ ಬಿಡಿಭಾಗವಾದ ಮಾನವ: ಚಾರ್ಲಿ ಚಾಪ್ಲಿನ್‌ನ “ಮೋಡರ್ನ್ ಟೈಮ್ಸ್”)
ಎಲ್ಲರೂ ಗರಿಷ್ಟ ಕೆಲಸದ ಅವಧಿಯನ್ನು ದಿನಕ್ಕೆ 12 ಗಂಟೆ ಮತ್ತು ವಾರಕ್ಕೆ 72 ಗಂಟೆಗಳಿಗೆ ಏರಿಸಿರುವಾಗ, ರಾಜಸ್ಥಾನ ಮತ್ತು ಪಂಜಾಬ್ ಹೆಚ್ಚುವರಿ ಸಂಬಳ ಅಥವಾ ಓವರ್ ಟೈಮ್ (ಓಟಿ) ಬಗ್ಗೆ ಸ್ಪಷ್ಟವಾಗಿ ಮಾತಾಡಿವೆ. ಓಟಿಯು ಕಾರ್ಖಾನೆಗಳ ಕಾಯಿದೆಯ ವಿಧಿ 59ರಲ್ಲಿ ಹೇಳಿದಂತೆ ಮಾಮೂಲಿ ಸಂಬಳದ ಎರಡರಷ್ಟು ಇರುವುದೆಂದು ಪಂಜಾಬಿನ ಅಧಿಸೂಚನೆಯು ಸ್ಪಷ್ಟಪಡಿಸಿದೆ. ಆದರೆ, ಗುಜರಾತ್ ಮಾತ್ರ ಈಗಿರುವ ದರದಲ್ಲೇ ಹೆಚ್ಚುವರಿ ಸಂಬಳ ನೀಡುವುದಾಗಿ ಹೇಳಿದೆ. ಉದಾಹರಣೆಗೆ ಎಂಟು ಗಂಟೆಗಳ ಕೆಲಸಕ್ಕೆ 80 ರೂ. ಮಜೂರಿ ಆಗಿದ್ದರೆ, 12 ಗಂಟೆಗಳಿಗೆ 120 ರೂ. ನೀಡಲಾಗುವುದು. ವಾಸ್ತವವಾಗಿ ವಿಧಿ 59ರ ಪ್ರಕಾರ 160 ರೂ. ನೀಡಬೇಕು. ಅಂದರೆ, ಕಾರ್ಮಿಕರಿಗೆ 40 ರೂ. ಮೋಸ.
ಇದನ್ನೂ ಓದಿ: 12 ಗಂಟೆಗಳ ಕೆಲಸ ಕಾನೂನುಬದ್ಧ: ಕೊರೋನ ಹೆಸರಲ್ಲಿ ಕಾರ್ಮಿಕರಿಗೆ ಮೋದಿ ಸರಕಾರದ ಮೋಸ
ಗುಜರಾತ್ ಮತ್ತು ಹಿಮಾಚಲ ಪ್ರದೇಶ ಸರಕಾರಗಳು ವಿಧಿ 5 ಮತ್ತು ಪಂಜಾಬ್ ಸರಕಾರ ವಿಧಿ 65ರ ಅವಕಾಶಗಳನ್ನು ಬಳಸಿದ್ದರೆ, ರಾಜಸ್ಥಾನ ಸರಕಾರವು ಯಾವುದೇ ನಿಯಮಗಳನ್ನು ಉಲ್ಲೇಖಿಸದೆ, ಕಾರ್ಮಿಕರ ಭವಿಷ್ಯವನ್ನು ಮಾಲಕರ ಕೈಗೆಕೊಟ್ಟಿದೆ. ಗುಜರಾತ್ ಮತ್ತು ಹಿಮಾಚಲ ಪ್ರದೇಶಗಳು “ಸಾರ್ವಜನಿಕ ತುರ್ತುಸ್ಥಿತಿ”ಯಲ್ಲಿ ಬಳಸಬಹುದಾದ ವಿಧಿ 5ನ್ನು ಅಕಾರಣವಾಗಿ ಬಳಸಿ ಕಾರ್ಮಿಕರನ್ನು ವಂಚಿಸುತ್ತಿವೆ. ಈ ವಿಧಿಯು ಬಾಲಕಾರ್ಮಿಕರಿಗೆ ಸಂಬಂಧಪಟ್ಟ ವಿಧಿ 67ನ್ನು ಹೊರತುಪಡಿಸಿ, ಕಾರ್ಖಾನೆಗಳ ಕಾಯಿದೆಯ ಯಾವುದೇ ಅಥವಾ ಎಲ್ಲಾ ವಿಧಿಗಳಿಂದ ಕಾರ್ಖಾನೆಗಳಿಗೆ ವಿನಾಯಿತಿ ನೀಡುತ್ತದೆ.
ಈ ಕ್ರಮವು ಪ್ರಶ್ನಾರ್ಹವಾಗಿದೆ. “ಸಾರ್ವಜನಿಕ ತುರ್ತುಸ್ಥಿತಿ” ಎಂದರೆ, “ಭಾರತದ ಅಥವಾ ಅದರ ಭೂಭಾಗದ ಯಾವುದೇ ಪ್ರದೇಶವು ಯುದ್ಧ ಅಥವಾ ಬಾಹ್ಯ ಆಕ್ರಮಣ, ಇಲ್ಲವೇ ಆಂತರಿಕ ಕ್ಷೋಭೆಯಿಂದ ಬೆದರಿಕೆಗೆ ಒಳಗಾದ ಕಾರಣದಿಂದ ಉಂಟಾಗುವ ಗಂಭೀರ ತುರ್ತುಸ್ಥಿತಿ” ಎಂದು ಅರ್ಥ. (26.10.1976ರಿಂದ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಪರಿಚಯಿಸಲಾದ ನಿಯಮ).
ಆದರೆ, ಕೊರೊನಾ ದಿಂದ ಉಂಟಾಗಿರುವ ಕೊರೊನಾ ಬಿಕ್ಕಟ್ಟು- ಜೈವಿಕವಾದ ಆರೋಗ್ಯ ಸಮಸ್ಯೆಯ ಪರಿಣಾಮವಾಗಿದ್ದು, ಯಾವುದೇ ರೀತಿಯಲ್ಲಿ ಕಾರ್ಖಾನೆಗಳ ಕಾಯಿದೆಯ ವಿಧಿ 5ರಲ್ಲಿ ನೀಡಲಾದ “ಸಾರ್ವಜನಿಕ ತುರ್ತುಸ್ಥಿತಿ” ಅಥವಾ ಭಾರತದ ಭದ್ರತೆಗೆ ಅಪಾಯ ಒಡ್ಡಬಲ್ಲ ನೆಲೆಯಲ್ಲಿ “ಆಂತರಿಕ ಕ್ಷೋಭೆ”ಯ ವ್ಯಾಖ್ಯೆಯ ಅಡಿಯಲ್ಲಿ ಬರುವುದಿಲ್ಲ.
ದಶಕಗಳಿಂದ ಬೆವರು- ನೆತ್ತರು ಹರಿಸಿ ಕಟ್ಟಿದ ಕಾರ್ಮಿಕ ಚಳವಳಿಯೇ ಇಂದು ಕೊರೋನ ನೆಪದಲ್ಲಿ ಅಪಾಯಕ್ಕೀಡಾಗಿದೆ
ಕಾರ್ಖಾನೆಗಳ ಕಾಯಿದೆಯ ವಿಧಿ 65(2) ರಾಜ್ಯ ಸರಕಾರಗಳಿಗೆ ಶರತ್ತುಗಳಿಗೆ ಒಳಪಟ್ಟು ಕೆಲವು ವಿಧಿಗಳನ್ನು ಬದಲಿಸುವ ಅಧಿಕಾರಗಳನ್ನು ನೀಡಿದೆ. ಆದರೆ, ಯಾವುದೇ ಕಾರಣಕ್ಕೆ ಕೆಲಸದ ಅವಧಿಯು ವಾರಕ್ಕೆ 60 ಗಂಟೆಗಳನ್ನು ಮೀರಬಾರದು ಎಂಬುದು ಈ ಶರತ್ತುಗಳಲ್ಲಿ ಒಂದು. ಪಂಜಾಬ್ ಸರಕಾರ ಮಾತ್ರ ಓಟಿಗೆ ಸಂಬಂಧಿಸಿ ವಿಧಿ 69ನ್ನು ಸರಿಯಾಗಿ ಅನುಸರಿಸಿದೆ. ಆದರೆ, ಎಲ್ಲಾ ಸರಕಾಗಳು ತಮ್ಮ ಅಧಿಸೂಚನೆಗಳಲ್ಲಿ ಕೆಲಸದ ಅವಧಿಯನ್ನು 72 ಗಂಟೆಗಳಿಗೆ ಏರಿಸಿರುವುದು ಎಲ್ಲಾ ನಿಯಮಗಳನ್ನು ಮೀರಿರುವುದರಿಂದ ಪ್ರಶ್ನಾರ್ಹವಾಗಿದೆ.
ಇದರ ಹೊರತಾಗಿ, ಕಾರ್ಮಿಕರ ಆರೋಗ್ಯ, ಉತ್ಪಾದಕತೆ ಉಳಿದ ಕಾರ್ಮಿಕರಿಗೆ ಉದ್ಯೋಗಾವಕಾಶಗಳ ವಂಚನೆ, ಗಂಭೀರವಾದ ಕೈಗಾರಿಕಾ ಸಂಬಂಧ ಇತ್ಯಾದಿಯಾಗಿ ಹಲವಾರು ಪ್ರಶ್ನೆಗಳಿವೆ.
ಕಾರ್ಮಿಕರ ಕೊರತೆ, “ಸಾಮಾಜಿಕ ಅಂತರ” ಕಾಯ್ದುಕೊಳ್ಳುವುದರ ಅಗತ್ಯ ಇತ್ಯಾದಿಗಳನ್ನು ನೆಪವಾಗಿ ನೀಡಲಾಗುತ್ತಿದೆ. ವಾಸ್ತವವಾಗಿ ಸರಕಾರ ಆದೇಶಿಸಿರುವ ಹೆಚ್ಚುವರಿ ಸುರಕ್ಷಾ ಕ್ರಮಗಳ ವೆಚ್ಚವನ್ನು ಮಾಲಕರ ಹೆಗಲಿನಿಂದ ಇಳಿಸಿ, ಕಾರ್ಮಿಕರ ಹೆಗಲಿಗೆ ಹೊರಿಸುವ ಹುನ್ನಾರವಿದು. ಅದಕ್ಕಾಗಿ ಕಾರ್ಮಿಕರು ಎಂಟು ಗಂಟೆಯ ಸಂಬಳಕ್ಕೆ 12 ಗಂಟೆ ದುಡಿಯುವಂತೆ ಮಾಡಿ, ಕೊರೋನ ಹೆಸರಲ್ಲಿ ಕಾರ್ಮಿಕರ ರಕ್ತ ಹೀರಲಾಗುತ್ತಿದೆ.
(ಹನ್ನೆರಡು ಗಂಟೆಗಳ ಕೆಲಸ: ಯಾಂತ್ರೀಕೃತ ಬದುಕಿನ ವಿಸ್ತರಣೆ)
ಕಾರ್ಮಿಕರ ಕೊರತೆ ನಿಜವಾಗಿಯೂ ಇರುವ ಕಡೆಗಳಲ್ಲಿ ಮತ್ತು ಕ್ಷೇತ್ರಗಳಲ್ಲಿ ಮಾಲಕರು ಮತ್ತು ಕಾರ್ಮಿಕರು ಚರ್ಚಿಸಿ ಈಗಿರುವ ಕಾರ್ಖಾನೆಗಳ ಕಾಯಿದೆ ಪ್ರಕಾರವೇ ಪರಿಹಾರಗಳನ್ನು ಕಂಡುಕೊಳ್ಳಲು ಸಾಧ್ಯವಿದೆ. ಆದರೆ, ಇಂತಹಾ ಯಾವುದೇ ಪರಿಗಣನೆಯನ್ನೂ ಮಾಡದೆ, ಕಾನೂನಿನಲ್ಲಿರುವ ತುರ್ತು ಅವಕಾಶಗಳನ್ನು ಸಂಪೂರ್ಣವಾಗಿ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ.
ಇನ್ನೂ ಪ್ರಮುಖವಾದ ವಿಷಯವೆಂದರೆ, ಈ 12 ಗಂಟೆಗಳ ಕೆಲಸದ ಅವಧಿಯು ಕಾರ್ಮಿಕರಿಗಿರುವ ಬೇಡಿಕೆಯನ್ನು ಕಡಿಮೆ ಮಾಡುತ್ತದೆ. ಉದಾಹರಣೆಗೆ 30 ಮಂದಿ ಕಾರ್ಮಿಕರು ಎಂಟು ಗಂಟೆಗಳ ಮೂರು ಪಾಳಿಗಳಲ್ಲಿ ಕೆಲಸ ಮಾಡುತ್ತಿದ್ದರೆ, ಇನ್ನು 20 ಕಾರ್ಮಿಕರು 12 ಗಂಟೆಗಳ ಎರಡು ಪಾಳಿಗಳಲ್ಲಿ ಕೆಲಸ ಮಾಡಬೇಕಾಗುತ್ತದೆ. ಹಾಗಾದರೆ, ಉಳಿದ 10 ಮಂದಿ ಕಾರ್ಮಿಕರಿಗೆ ಕೆಲಸವಿಲ್ಲವೆಂದು ಅರ್ಥ. ಈ 30 ಕಾರ್ಮಿಕರಿಗೆ ಸರದಿಯಂತೆ ಕೆಲಸ ಹಂಚುವುದಿದ್ದರೂ ಮೂರನೇ ಒಂದರಷ್ಟು ಕಾರ್ಮಿಕರು ಮನೆಯಲ್ಲಿಯೇ ಉಳಿಯಬೇಕಾಗುತ್ತದೆ. 30 ಕಾರ್ಮಿಕರಲ್ಲಿ 20 ಮಂದಿಯ ಆಯ್ಕೆ ಮಾಡುವಾಗಲೂ ತಾರತಮ್ಯ ಮಾಡಬಹುದು, ಒತ್ತಡ ಹೇರಬಹುದು. ಇಂತಹಾ ಹಲವು ವಾಸ್ತವಿಕ ಪರಿಸ್ಥಿತಿಗಳನ್ನು ಕಲ್ಪಿಸಿಕೊಳ್ಳಬಹುದು.
ಇದರ ಹೊರತಾಗಿಯೂ ಇನ್ನೂ ಅನೇಕ ವಾಸ್ತವಿಕ ವಿಷಯಗಳಿವೆ. ಕೆಲಸದ ಅವಧಿಯ ಹೆಚ್ಚಳ ಮತ್ತು ಯಾಂತ್ರಿಕ ಕೆಲಸದಿಂದ ದೈಹಿಕ ಮತ್ತು ಮಾನಸಿಕ ದಣಿವು ಹೆಚ್ಚುತ್ತದೆ. ಇದು ಆರೋಗ್ಯದ ಮೇಲೆ ಮಾತ್ರವಲ್ಲ ಉತ್ಪಾದಕತೆರ ಮೇಲೆಯೂ ಪರಿಣಾಮ ಬೀರುತ್ತದೆ. ಕೆಲಸದ ಸಮಯದಲ್ಲಿ ತಪ್ಪುಗಳು ಮತ್ತು ಅಪಘಾತಗಳೂ ಸಂಭವಿಸಬಹುದು. ಈ ಕೆಲಸದ ಅವಧಿಗೆ ಮನೆಯಿಂದ ಕೆಲಸದ ಸ್ಥಳಕ್ಕೆ ಹೋಗಿ, ಹಿಂತಿರುಗುವ ಸಮಯ ಮತ್ತು ಜಂಜಾಟವೂ ಸೇರಿ ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸುತ್ತದೆ. ಮನೆಯ ಕೆಲಸವನ್ನೂ, ಮಕ್ಕಳ ಲಾಲನೆಪಾಲನೆಯನ್ನೂ ಮಾಡಬೇಕಾದ ಮಹಿಳೆಯರ ಸ್ಥಿತಿ ಇನ್ನಷ್ಟು ಶೋಚನೀಯವಾಗಲಿದೆ.
ಇಷ್ಟಲ್ಲದೇ ಕಾರ್ಖಾನೆಗಳು ಪುನರಾರಂಭವಾಗದಿರುವುದು, ಕಾರ್ಮಿಕರ ಕಡಿತ, ಕೆಲಸ ಕಡಿತ, ವೇತನ ಕಡಿತ ಮುಂತಾದ ಹಲವಾರು ಸಮಸ್ಯೆಗಳು ಕಾರ್ಮಿಕರನ್ನು ಎದುರುನೋಡುತ್ತಿದ್ದು, ಆ ಕುರಿತೇ ಪ್ರತ್ಯೇಕ ಲೇಖನವೊಂದನ್ನು ಬರೆಯಬಹುದು. ಒಟ್ಟಿನಲ್ಲಿ ದಶಕಗಳಿಂದ ಬೆವರು- ನೆತ್ತರು ಹರಿಸಿ ಕಟ್ಟಿದ ಕಾರ್ಮಿಕ ಚಳವಳಿಯೇ ಇಂದು ಕೊರೋನ ನೆಪದಲ್ಲಿ ಅಪಾಯಕ್ಕೀಡಾಗಿದೆ. ಏಕೆಂದರೆ, ಸಮಸ್ಯೆಗಳ ಪರಿಹಾರಕ್ಕಾಗಿ ಹೆಚ್ಚುಹೆಚ್ಚಾಗಿ ಕಾರ್ಮಿಕ ಸಂಘಗಳನ್ನು ಒಳಗೊಳ್ಳಬೇಕಾದ ಸಮಯದಲ್ಲಿ ಅವುಗಳನ್ನು ದೂರಮಾಡಿ, ದಮನಕಾರಿ ಕಾನೂನುಗಳನ್ನು ತರುವ ಪ್ರಯತ್ನಗಳನ್ನು ಮೋದಿ ಸರಕಾರ ಮಾಡುತ್ತಿದೆ.
(ಲೇಖಕ ಕೆ. ಆರ್. ಶ್ಯಾಮ್ ಸುಂದರ್ ಅವರು ಜೆಮ್ಶೆಡ್‌ಪುರದ ಕ್ಸೇವಿಯರ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನ ಪ್ರಾಧ್ಯಾಪಕರು.)
ಇದನ್ನೂ ಓದಿ: ಕಾರ್ಮಿಕರು 12 ಗಂಟೆ ದುಡಿಯಬೇಕೆಂಬುದು ಅನ್ಯಾಯದ ನಿರ್ಧಾರ


