Homeಮುಖಪುಟಗ್ರಾಮಭಾರತ - 2: ಭದ್ರಾವತಿಗೆ ಬಾರದ ತಮಿಳುನಾಡಿನ ಭತ್ತ ಕಟಾವು ಯಂತ್ರಗಳು

ಗ್ರಾಮಭಾರತ – 2: ಭದ್ರಾವತಿಗೆ ಬಾರದ ತಮಿಳುನಾಡಿನ ಭತ್ತ ಕಟಾವು ಯಂತ್ರಗಳು

ಪ್ರತಿವರ್ಷ ಏಪ್ರಿಲ್‍ ಅಂತ್ಯದ ವೇಳೆಗೆ ಯಂತ್ರಗಳು ಭತ್ತ ಕಟಾವಾಗುವ ಎಲ್ಲಾ ಪ್ರದೇಶದಲ್ಲಿ ಬಂದು ನಿಲ್ಲುತ್ತಿದ್ದವು. ಆದರೆ ಈ ಬಾರಿ ಯಂತ್ರಗಳ ಸುಳಿವೇ ಇಲ್ಲದಂತಾಗಿದೆ. ಆದ್ದರಿಂದ ಕೂಲಿ ಕಾರ್ಮಿಕರು ಸಿಗದೆ ಇತ್ತ ಯಂತ್ರಗಳು ಸಿಗದೆ ರೈತರು ಅತಂತ್ರ ಸ್ಥಿತಿಯಲ್ಲಿದ್ದಾರೆ.

- Advertisement -
- Advertisement -

ಪೀಠಿಕೆ

ಕೊರೋನಾ ಪಿಡುಗಿಗೆ ಕೇಂದ್ರ ಸರಕಾರ ಪ್ರತಿಕ್ರಿಯಿಸಿದ ರೀತಿ ಬಗ್ಗೆ ಈಗಾಗಲೇ ಸಾಕಷ್ಟು ವ್ಯಾಖ್ಯಾನಗಳು ಬಂದಿವೆ. ಮೂಲತಃ ಇದು knee jerk reaction  ಅನ್ನುವುದರಲ್ಲಿ ಸಂದೇಹವಿಲ್ಲ. ಕೊರೋನಾ ಎದುರಿಸಲು ಬೇಕಾದ ಪೂರ್ವ ಸಿದ್ಧತೆಗಳು ಆಗಿರಲಿಲ್ಲ. ಅದಿರಲಿ, ಈ ಲಾಕ್ ಡೌನ್ ನಮ್ಮ ಕೃಷಿಲೋಕ ಮತ್ತು ವಲಸೆ ಹೊಗಿದ್ದ ಇದೇ ಗ್ರಾಮಾಂತರದ ಕಳ್ಳುಬಳ್ಳಿಗಳ ಮೇಲೆ ಮಾಡಿದ ಘಾತಕ ಪರಿಣಾಮದ ಬಗ್ಗೆ ತಡವಾಗಿ ನಮ್ಮ ಸರಕಾರ ಪ್ರತಿಕ್ರಿಯಿಸತೊಡಗಿದೆ. ಎಲ್ಲೂ ಹೋಗಲಾಗದೇ ಯಾವ ವ್ಯವಹಾರವೂ ಮಾಡಲಾಗದೇ, ಕನಿಷ್ಠ ಆರೋಗ್ಯ ಸೌಲಭ್ಯಕ್ಕೂ ಪರದಾಡಬೇಕಾಗಿ ಬಂದ ಸ್ಥಿತಿ ಒಂದೆಡೆಯಾದರೆ, ಕೊರೋನಾ ಭೀತಿಯಿಂದ ದೀಪ ಹಚ್ಚುವುದರಿಂದ ಹಿಡಿದು, ಹೊರಗಿನಿಂದ ಬಂದವರನ್ನು ಊರಿಗೆ ಸೇರಿಸದೇ ಇದ್ದ ಕತೆಗಳಿವೆ.

ಬೇಸಿಗೆಯಲ್ಲಿ ಕೊಳವೆ ಬಾವಿ ಸೌಲಭ್ಯದಿಂದ ಒಂದಷ್ಟು ಹಣ್ಣು ತರಕಾರಿ ಬೆಳೆದ ರೈತರ ಪಾಡು ನಾಯಿ ಪಾಡಾದ ಕತೆಗಳು ಇನ್ನೂ ಬರುತ್ತಲೇ ಇವೆ.

ಇವೆಲ್ಲಾ  ಕೊರೊನಾ ಕಾರಣಕ್ಕಲ್ಲ; ಸರಕಾರ ಅದಕ್ಕೆ ಪ್ರತಿಕ್ರಿಯಿಸಿದ ಕಾರಣಕ್ಕೆ ಎಂಬುದನ್ನು ಅರಿತುಕೊಳ್ಳಬೇಕಾಗಿದೆ.  ಇಡೀ ಗ್ರಾಮ ಭಾರತವೇ ಲಕ್ವಾ ಹೊಡೆದ ಮಟ್ಟಕ್ಕೆ ತಂದಿಟ್ಟ ಉಪಕ್ರಮ ಇದು.  ಇನ್ನೀಗ ಕೊರೋನಾ ಎಷ್ಟು ಹರಡಿದೆ ಎಂಬ  ಪರೀಕ್ಷೆಗಳೇ ಸೀಮಿತವಾಗಿ ಕೊರೋನಾ ಗ್ರಾಮಭಾರತವನ್ನು ಹೊಕ್ಕರೆ ಏನಾಗಬಹುದು ಎಂಬುದರ ಬಗ್ಗೆ ಯಾರಿಗೂ ಸ್ಪಷ್ಠತೆ ಇಲ್ಲ. Co morbidity ಎಂದು ಕರೆಯುವ  ಅನ್ಯ ಕಾಯಿಲೆಗಳಿಂದ ಸೊರಗಿರುವ  ಸ್ಥಿತಿಯಲ್ಲಿ ನಮ್ಮ ಗ್ರಾಮಭಾರತದ ಸಮುದಾಯಗಳಿವೆ. ಅಪೌಷ್ಟಿಕತೆ  ಒಂದೆಡೆಯಾದರೆ,  ಕುಡಿತ ಇನ್ನಿತರೇ ಚಟಗಳ ಕಾರಣದಿಂದ ಬಸವಳಿದಿರುವ ಮಧ್ಯ ವಯಸ್ಸು ದಾಟಿದ ಗಂಡಸರ ಸಂಖ್ಯೆ  ಸರಕಾರದ ಲೆಕ್ಕಕ್ಕೂ ಮೀರಿದ್ದು. ಈ ಇಡಿ ಇಡಿ ಸಮುದಾಯಗಳೇ ಕೊರೋನಾಕ್ಕೆ ಸುಲಭದ ತುತ್ತಾಗುವ ಸಾಧ್ಯತೆಗಳಿವೆ.

ಇದನ್ನು ತಡೆಗಟ್ಟುವ ಕ್ರಮಗಳು ಆರೋಗ್ಯಕ್ಕೆ ಸಂಬಂಧಿಸಿದ್ದು ಎಂಬುದು ಅರ್ಧ ಸತ್ಯ. ಪೂರ್ಣ ಸತ್ಯವೆಂದರೆ ಜೀವನೋಪಾಯಗಳಿಗೆ ಬಂದ ಕುತ್ತು; ಕೆಲಸ ಕಳೆದುಕೊಂಡು ಊರಿಗೆ ಮರಳಿದ ದುಗುಡ, ಮುಂದೇನು ಎಂದು ಖಾತ್ರಿಯಿಲ್ಲದ ತಲ್ಲಣ- ಇವನ್ನೆಲ್ಲಾ ಪರಿಗಣಿಸಿದರೆ ಕೊರೋನಾ ಮತ್ತು ಸರಕಾರ ಎರಡೂ ನಮ್ಮ ರೈತ-ಮಹಿಳೆ- ಕಾರ್ಮಿಕ ವರ್ಗದವರಿಗೆ ಎಂಥಾ  ಘಾಸಿಮಾಡಿದೆ ಎಂಬುದರ ಅಂದಾಜು ಸಿಗುತ್ತದೆ.

ನಮ್ಮ ಹಳ್ಳಿಗಳಲ್ಲಿ ಏನಾಗುತ್ತಿದೆ, ಎಂಥಾ ಸ್ಥಿತಿ ಇದೆ ಎಂಬ ಬಗ್ಗೆ ಒಂದಷ್ಟು ಗೆಳೆಯರಲ್ಲಿ ವರದಿಗಳನ್ನು ಕೇಳಿದೆವು. ಇವು ಮೂಲತಃ ಅಗುಳು ನೋಡಿ ಅನ್ನ ಬೆಂದಿತಾ ಎಂದು ನೋಡುವ ಕ್ರಮ ಅಷ್ಟೇ. ಮುಂದಿನ ದಿನಗಳಲ್ಲಿ ಈ ದುಗುಡ, ನಿರಾಸೆಗಳ ಹಂತ ಕರಗಿ ಉತ್ತಮ ಬಾಳ್ವೆ ಒದಗಿ ಬರಲಿ, ಅದನ್ನು ಸಾಧ್ಯಗೊಳಿಸುವಲ್ಲಿ ಸರಕಾರದ ಪಾತ್ರ ದೊಡ್ಡದು. ಇಲ್ಲಿನ ವರದಿಗಳು ಒಟ್ಟಾರೆಯಾಗಿಯೂ,ಸ್ಥಳೀಯವಾಗಿಯೂ ಕ್ರಿಯಾಶೀಲ ಸ್ಪಂದನೆಗೆ ಕಾರಣವಾದರೆ  ಸಾರ್ಥಕ. – ಕೆ.ಪಿ ಸುರೇಶ್ (ಸರಣಿ ಸಂಪಾದಕರು)

ವರದಿ-2

ಭದ್ರಾವತಿಗೆ ಬಾರದ ತಮಿಳುನಾಡಿನ ಭತ್ತ ಕಟಾವಿನ ಯಂತ್ರಗಳು

  • ಸುನಿಲ್ ಶಂಕರಘಟ್ಟ

ಶಿವಮೊಗ್ಗ ಮಲೆನಾಡು ಭಾಗ ಹಾಗೂ ಜಲಾಶಯಗಳು ಇರುವುದರಿಂದ ಭತ್ತದ ಬೆಳೆಗೆ ಕೊಂಚ ಅನುಕೂಲಕರ ಪ್ರದೇಶವಾಗಿದೆ. ಇಲ್ಲಿ ವರ್ಷಕ್ಕೆ ಎರಡು ಬಾರಿ ಭತ್ತ ಬೆಳೆಯಲಾಗುತ್ತದೆ. ಆದರೆ ಈ ಬಾರಿ ಕೊರೊನಾ ಲಾಕ್‍ಡೌನ್‍ನ ಪರಿಣಾಮದಿಂದ ಬೇಸಿಗೆಯಲ್ಲಿ ಬೆಳೆದ ಭತ್ತದ ಫಸಲು ಸುರಕ್ಷಿತವಾಗಿ ಕೈಸೇರುವುದೇ ಎಂಬ ಅನುಮಾನ ರೈತರಲ್ಲಿ ಮನೆಮಾಡಿದೆ. ಭದ್ರಾ ಮತ್ತು ತುಂಗ ಜಲಾಶಯದ ನೀರು ಸರಬರಾಜಾಗುವ ಪ್ರದೇಶಗಳಲ್ಲಿ ಬೇಸಿಗೆ ಅಂತ್ಯದ ವೇಳೆಗೆ ಅಂದರೆ ಮೇ ಆರಂಭದ ಸಮಯದಲ್ಲಿ ಭತ್ತದ ಬೆಳೆ ಕಟಾವಿಗೆ ಬರುತ್ತದೆ.

ಶಿವಮೊಗ್ಗದ ಭದ್ರಾವತಿ ಹಾಗೂ ಚಿಕ್ಕಮಗಳೂರಿನ ತರೀಕೆರೆ ಭಾಗದಲ್ಲಿ ಈ ಸಮಯದಲ್ಲಿ ಭತ್ತ ಬೆಳೆಯಲಾಗುತ್ತದೆ. ಇಲ್ಲಿ ಬೇಸಿಗೆ ಸಮಯದಲ್ಲಿ ಜ್ಯೋತಿ ತಳಿಯ ಭತ್ತ ಹಾಗೂ ಮಳೆಗಾಲದ ಸಮಯದಲ್ಲಿ ಸೋನ ಮಸೂರಿ ಹಾಗೂ ಇನ್ನಿತರ ಭತ್ತದ ತಳಿಗಳನ್ನು ಬೆಳೆಯಲಾಗುತ್ತದೆ. ವಾಡಿಕೆ ಹಾಗೂ ಭತ್ತದ ಬೆಳೆವಣಿಗೆಯ ಆಧಾರದ ಮೇಲೆ ಭದ್ರಾವತಿ ಭಾಗದಲ್ಲಿ ಇನ್ನು ಎರಡು ಮೂರು ದಿನಗಳಲ್ಲಿ ಭತ್ತ ಕಟಾವಿನ ಪ್ರಕ್ರಿಯೆ ಆರಂಭವಾಗುವ ಸಮಯವಾಗಿದೆ. ಮೊದಲು ಕೂಲಿ ಕಾರ್ಮಿಕರಿಂದ ಭತ್ತದ ಪೈರುಗಳನ್ನು ಕಟಾವು ಮಾಡುವರೂಢಿ ಇತ್ತು. ಈಗ ಯಂತ್ರಗಳಿಂದ ಕಟಾವು ಮಾಡಿಸಲಾಗುತ್ತದೆ. ಇಂದು ಆಧುನಿಕತೆಯ ಭರಾಟೆಯಲ್ಲಿ ಜನರು ನಗರ  ಸಂಸ್ಕೃತಿಗೆ ಒಗ್ಗಿಕೊಂಡ ಕಾರಣ ಗ್ರಾಮೀಣ ಪ್ರದೇಶದಲ್ಲಿ ಕೂಲಿ ಆಳುಗಳ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆಯಾಗಿದೆ. ಆದ್ದರಿಂದ ಕೂಲಿ ಕಾರ್ಮಿಕರ ಕೈಯಿಂದ ಕಟಾವು ಮಾಡಿಸುವ ಕ್ರಮ ಬಹುತೇಕ ನಿಂತುಹೋಗಿದೆ. ಹಾಗೊಂದು ವೇಳೆ ಮಾಡಿಸಲು ಯತ್ನಿಸಿದರು ಲಾಕ್‍ಡೌನ್‍ ದೆಸೆಯಿಂದ ನಿರೀಕ್ಷಿತ ಪ್ರಮಾಣದಲ್ಲಿ ಕೂಲಿ ಕಾರ್ಮಿಕರು ಸಿಗಲಾರರು.

ತಂತ್ರಜ್ಞಾನ ಹಾಗೂ ಯಂತ್ರಗಳ ಅಭಿವೃದ್ಧಿಯ ದೆಸೆಯಿಂದ ಸುಮಾರು ಎಂಟತ್ತು ವರ್ಷಗಳಿಂದ ಕಟಾವಿನ ಕೆಲಸ ಯಂತ್ರಗಳಿಂದಲೇ ಮಾಡಿಸಲಾಗುತ್ತಿದೆ. ಹಾಗಾಗಿ ಇಲ್ಲಿನ ಕಟಾವಿನ ಕೆಲಸಕ್ಕೆ ಬೇಡಿಕೆ ಇರುವುದನ್ನು ಕಂಡುಕೊಂಡ ತಮಿಳುನಾಡಿನ ಕೃಷಿ ಯಂತ್ರದ ಮಾಲೀಕರು ಇಲ್ಲಿ ಪ್ರತಿ ವರ್ಷ ಗುಂಪು ಗುಂಪಾಗಿ ಕೃಷಿ ಯಂತ್ರಗಳನ್ನು ಭತ್ತ ಕಟಾವಿಗಾಗಿ ಕಳಿಸಿಕೊಡುತ್ತಾರೆ. ಸುಮಾರು 25 ಲಕ್ಷ ಮೌಲ್ಯವಿರುವ ಬೃಹತ್ ಯಂತ್ರಗಳನ್ನು ಕ್ಯಾಂಟರ್ ವಾಹನದಲ್ಲಿ ಇರಿಸಿ ಸಾಗಿಸಲಾಗುತ್ತದೆ. ಹತ್ತು ಬೃಹತ್ ಯಂತ್ರಗಳ ಮಾಲಿಕತ್ವ ಹೊಂದಿರುವ ಕಂಪನಿಗಳು ಸೀಜನ್ ಸಮಯದಲ್ಲಿ ಕರ್ನಾಟಕ, ಆಂಧ್ರ, ಕೇರಳ ಹೀಗೆ ಭತ್ತ ಬೆಳೆಯುವ ರಾಜ್ಯಗಳಿಗೆ ತಮ್ಮ ಯಂತ್ರಗಳನ್ನು ಕಳಿಸಿಕೊಡುತ್ತಾರೆ. ಅಂತೆಯೇ ಪ್ರಸ್ತುತ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಭಾಗಕ್ಕೆ ಯಂತ್ರಗಳ ಆಗಮಿಸುವ ಸಮಯ ಸಮೀಪಿಸಿದೆ.

 

ಭತ್ತಕಟಾವಿನ ಪ್ರಕ್ರಿಯೆಯಲ್ಲಿ ಮಾಲೀಕರು ಮತ್ತು ರೈತರಿಗೆ ಸಂಪರ್ಕ ಕಲ್ಪಿಸಲು ಮಧ್ಯವರ್ತಿಗಳ ಪಾತ್ರ ಪ್ರಮುಖವಾಗಿರುತ್ತದೆ. ಈ ಪ್ರಕ್ರಿಯೆಯಲ್ಲಿ ಇಬ್ಬರು ಮಧ್ಯವರ್ತಿ ಪಾತ್ರ ಇದ್ದು, ಸ್ಥಳೀಯ ಮಧ್ಯವರ್ತಿಯು ಕಟಾವಿನ ಸಮಯ, ಬೇಡಿಕೆ, ಕಟಾವಿನ ಪ್ರಮಾಣ ಇನ್ನಿತರ ಮಾಹಿತಿಗಳ ಜೊತೆಗೆ ತಮಿಳುನಾಡಿನಲ್ಲಿರುವ ಮಧ್ಯವರ್ತಿಯ ಸಂಪರ್ಕ ಸಾಧಿಸುತ್ತಾರೆ. ಯಂತ್ರಗಳ ಕಂಪನಿಗಳ ಸಂಪರ್ಕ ಹೊಂದಿರುವ ತಮಿಳುನಾಡಿನ ಮಧ್ಯವರ್ತಿ ಕಂಪನಿಗಳಿಗೆ ಮುಂಗಡವಾಗಿ ಮೂವತ್ತರಿಂದ ಐವತ್ತು ಲಕ್ಷರೂಪಾಯಿ ಹಣ ಸಂದಾಯ ಮಾಡಿ ಅಗತ್ಯವಿರುವ ಯಂತ್ರಗಳನ್ನು ಆಯಾ ಪ್ರದೇಶಕ್ಕೆ ಕಳಿಸಿಕೊಡಲಾಗುತ್ತದೆ. ಕರ್ನಾಟಕದಲ್ಲಿ ಇರುವ ಪ್ರದೇಶವಾರು ಮಧ್ಯವರ್ತಿಗಳು ಯಾವ ದಿನ ಯಾವ ರೈತರಿಗೆ ಯಂತ್ರಗಳ ಅಗತ್ಯಇದೆ ಎಂದು ತಿಳಿದು ಯಂತ್ರಗಳನ್ನು ಕಳಿಸಿಕೊಡುತ್ತಾರೆ. ಅದಕ್ಕಾಗಿ ರೈತರೇ ತಮ್ಮ ಜಮೀನಿನ ಭತ್ತದ ಕಟಾವಿಗೆ ಯಂತ್ರಗಳ ಬೇಡಿಕೆ ಇಡುತ್ತಾರೆ.

ಒಂದು ಪ್ರದೇಶದ ಪ್ರತ್ಯೇಕ ಜಮೀನಿನಲ್ಲಿ ಕೆಲಸ ಕಾರ್ಯನಿರ್ವಹಿಸುತ್ತಿರುವ ಐದಾರು ಯಂತ್ರಗಳಿಗೆ ಒಬ್ಬ ಉಸ್ತುವಾರಿ ಇರುತ್ತಾರೆ. ಇವರು ಯಂತ್ರಗಳ ನಿರ್ವಹಣೆ ಹಾಗೂ ನಿಗದಿತ ಸಮಯಕ್ಕೆ ರೈತರ ಜಮೀನಿನ ಕಟಾವು ಮಾಡಿಸಿಕೊಡುವ ಜವಾಬ್ದಾರಿ ಹೊಂದಿರುತ್ತಾರೆ. ಒಂದು ಗಂಟೆಗೆ ಸರಾಸರಿ 2400 ಯಿಂದ 2800 ರೂಪಾಯಿ ವೆರೆಗೆ ಯಂತ್ರಗಳಿಗೆ ಪಾವತಿ ಮಾಡಬೇಕಿರುತ್ತದೆ. ಯಂತ್ರಗಳು ಕೆಲಸ ಮಾಡುವ ಅವಧಿಗಳನ್ನು ಬರೆಯುವ ಮತ್ತು ಪಾಲಿಸುವ ಜವಾಬ್ದಾರಿ ಆಯಾ ಯಂತ್ರದ ಚಾಲಕರದ್ದಾಗಿರುತ್ತದೆ. ಚಾಲಕರ ಹಾಗೂ ಸಹಾಯಕರ ಸಂಬಳವನ್ನು ಮಧ್ಯವರ್ತಿಗಳೇ ಕೊಡುತ್ತಾರೆ. ರೈತರು ಕೂಡ ಯಂತ್ರಗಳ ಬಾಡಿಗೆಯನ್ನು ಮಧ್ಯವರ್ತಿಗಳಿಗೆ ನೀಡಬೇಕಾಗಿರುತ್ತದೆ. ತಮಿಳುನಾಡಿನ ಯಂತ್ರಗಳ ಮಾಲೀಕರು ನೇರವಾಗಿ ಇಲ್ಲಿಗೆ ಬಂದು ಉಸ್ತುವಾರಿ ವಹಿಸುವುದು ಕಷ್ಟಸಾಧ್ಯವಾದ್ದರಿಂದ ಮಧ್ಯವರ್ತಿಗಳು ಮೂಲಕ ವ್ಯವಹಾರ ನಡೆಸುತ್ತಾರೆ. ಹೀಗೆ ಬೇರೆ ಬೇರೆ ಕಂಪನಿಯ ಯಂತ್ರಗಳು ಅಘೋಷಿತವಾಗಿ ಬೇರೆ ಬೇರೆ ಪ್ರದೇಶಗಳನ್ನು ವಿಂಗಡಣೆ ಮಾಡಿಕೊಂಡಿರುತ್ತವೆ. ಭದ್ರಾವತಿ ಭಾಗದಲ್ಲಿ ಶಂಕರಘಟ್ಟ, ಹುಣಸೆಕಟ್ಟೆ, ಮಾಲ್ಲೇನಹಳ್ಳಿ, ನಲ್ಲಿಸರ, ಗೋಣಿಬೀಡು, ಹೊನ್ನಟ್ಟಿ ಹೊಸೂರು, ಕಾಳನಕಟ್ಟೆ, ದೊಡ್ಡಕೊಪ್ಪನ ಹಳ್ಳಿ, ಹಿರಿಯೂರು, ವಿಶ್ವೇಶ್ವರನಗರ, ಸಿದ್ಧಾಪುರ ಹೀಗೆ ನೀರಾವರಿ ಪ್ರದೇಶಗಳಲ್ಲಿ ಈ ಯಂತ್ರಗಳು ಕಟಾವು ಕಾರ್ಯ ಮಾಡುತ್ತವೆ. ಒಂದೊಂದು ಊರಿನಲ್ಲೂ ಮೂರರಿಂದ ನಾಲ್ಕು ಯಂತ್ರಗಳ ಅವಶ್ಯಕತೆ ಇರುತ್ತದೆ.

ಕೂಲಿ ಕಾರ್ಮಿಕರಿಂದ ಕಟಾವು ಮಾಡಿಸುವುದಕ್ಕಿಂತಲೂ ಯಂತ್ರಗಳಿಂದ ಮಾಡಿಸುವ ಕಟಾವು ರೈತರಿಗೆ ಹೆಚ್ಚು ಅನುಕೂಲಕರವಾಗಿರುತ್ತದೆ. ಆರ್ಥಿಕವಾಗಿ ಹಾಗೂ ಸರಳ ಕಟಾವು ಪ್ರಕ್ರಿಯೆಯ ದೃಷ್ಟಿಯಿಂದ ಯಂತ್ರಗಳ ಕಟಾವಿಗೆ ಹೆಚ್ಚು ಪ್ರಧಾನ್ಯತೆ ಕೊಡುತ್ತಾರೆ. ಕೂಲಿ ಕಾರ್ಮಿಕರಿಗೆ ಕೊಡುವ ಕೂಲಿಯ ಮೊತ್ತಕ್ಕೆ ಹೋಲಿಸಿಕೊಂಡರೆ ಯಂತ್ರಗಳಿಗೆ ಕೊಡುವ ಬಾಡಿಗೆಯ ಹಣ ಕಡಿಮೆಯಾಗಿದೆ. ಕೂಲಿ ಕಾರ್ಮಿಕರು ಕೈಯಿಂದ ಭತ್ತದ ಪೈರುಗಳನ್ನು ಕಟಾವು ಮಾಡುವುದರಿಂದ ತೆನೆಗಳು ಅಲುಗಾಡಿ ಸ್ವಲ್ಪ ಪ್ರಮಾಣದ ಭತ್ತ ನೆಲಕ್ಕೆ ಬಿದ್ದು ವ್ಯರ್ಥವಾಗುತ್ತದೆ. ಅಲ್ಲದೆ ಕಟಾವಿನ ನಂತರ ಭತ್ತ ಬಡಿಯುವ ಯಂತ್ರಕ್ಕೆ ಪ್ರತ್ಯೇಕ ಆಳುಗಳ ಅವಶ್ಯಕತೆ ಇರುತ್ತದೆ. ಇದು ಹೆಚ್ಚು ಸಮಯ ತೆಗೆದುಕೊಳ್ಳುವ ಪ್ರಕ್ರಿಯೆಯಾಗಿದೆ. ಆದರೆ ಯಂತ್ರಗಳಿಂದ ಕಟಾವು ಮಾಡಿಸುವುದರಿಂದ ಭತ್ತ ವ್ಯರ್ಥವಾಗುವುದನ್ನು ತಡೆಯುವುದರ ಜೊತೆಗೆ ಕಟಾವು ಹಾಗೂ ಭತ್ತ ಬಡಿಯುವ ಕೆಲಸ ಕೆಲವೇ ಗಂಟೆಗಳಲ್ಲಿ ಮುಗಿದು ಹೋಗುತ್ತದೆ. ಅತ್ಯಂತ ಕಡಿಮೆ ಸಮಯದಲ್ಲಿ ಭತ್ತವನ್ನು ಸಂಗ್ರಹಣೆ ಮಾಡಿ, ಮಾರಾಟ ಮಾಡಲು ಸಿದ್ಧವಾಗಿರುತ್ತದೆ. ಇದರಿಂದ ರೈತರು ನೈಸರ್ಗಿಕ ಅಸಮತೋಲನವನ್ನು ಗಮನದಲ್ಲಿರಿಸಿ ಹೆಚ್ಚು ಬೆಲೆ ಇರುವ ಸಮಯಕ್ಕೆ ಭತ್ತ ಕಟಾವು ಮಾಡಿಸಲು ಅನುಕೂಲಕರವಾಗಿರುತ್ತದೆ.

ಆದರೆ ಈ ಬಾರಿ ಕೊರೊನ ಸೋಂಕನ್ನು ನಿಯಂತ್ರಿಸುವುದಕ್ಕಾಗಿ ಜಾರಿ ಇರುವ ಲಾಕ್‍ಡೌನ್‍ ದೆಸೆಯಿಂದ ಬಿಗಿ ಬಂದೋಬಸ್ತ್ ಹಾಗೂ ಕಠಿಣ ನಿಯಮಗಳು ಜಾರಿಯಲ್ಲಿದೆ. ಈ ಮಧ್ಯೆ ಯಂತ್ರಗಳು ಕರ್ನಾಟಕದ ಗಡಿದಾಟಲು ಕಷ್ಟವಾಗಬಹುದು. ಆಗೊಂದು ವೇಳೆ ಯಂತ್ರಗಳು ಕಟಾವಿನ ಸಮಯಕ್ಕೆ ಸಿಗದೇ ಹೋದರೆ ಭತ್ತಕಟಾವಿಗೆ ಬಹಳಷ್ಟು ತೊಂದರೆಯಾಗುತ್ತದೆ. ಇದರಿಂದ ರೈತರು ಭತ್ತಕಟಾವು ಮಾಡುವುದು ಹೇಗೆಂದು ಚಿಂತಿತರಾಗಿದ್ದಾರೆ. ಅಲ್ಲದೆ ಮುಂದಿನ ತಿಂಗಳಿನಿಂದ ಮಳೆ ಆರಂಭವಾಗುವುದರಿಂದ ಸರಿಯಾದ ಸಮಯಕ್ಕೆ ಭತ್ತ ಕಟಾವಾಗದಿದ್ದರೆ ಬೆಳೆದ ಭತ್ತದ ತೆನೆ ನೆಲಕ್ಕೆ ಬಾಗುತ್ತದೆ. ತಡವಾಗಿ ಕಟಾವು ಆರಂಭಿಸಿದರೆ ಯಂತ್ರವು ಗದ್ದೆಯಲ್ಲಿ ಚಲಿಸಲು ಹರಸಾಹಸ ಪಡಬೇಕಾಗುತ್ತದೆ.

ಇದರಿಂದ ಎಚ್ಚೆತ್ತ ಕೆಲ ರೈತರು ಶಿವಮೊಗ್ಗ ಜಿಲ್ಲಾಡಳಿತಕ್ಕೆ ಯಂತ್ರಗಳ ಸಂಚಾರಕ್ಕೆ ಅನುಮತಿ ಕೋರಿ ಮನವಿ ಸಲ್ಲಿದ್ದಾರೆ. ಇದಕ್ಕೆ ಸ್ಪಂಧಿಸಿರುವ ಜಿಲ್ಲಾಡಳಿತ ಕೃಷಿ ಇಲಾಖೆಯೊಂದಿಗೆ ನೋಂದಣಿ ಮಾಡಿಸಿಕೊಂಡಿರುವ ಯಂತ್ರಗಳ ಪ್ರವೇಶಕ್ಕೆ ಮೊದಲ ಆಧ್ಯತೆಕೊಟ್ಟು ಅನುಮತಿ ನೀಡಲಾಗುವುದು ಎಂದು ಹೇಳಿದೆ. ಇದರ ಜೊತೆಗೆ ನಿಯಮಗಳನ್ನು ಹೇಳಿದ್ದು, ಯಂತ್ರದ ಚಾಲಕ, ಲಾರಿ ಚಾಲಕ ಮತ್ತು ಸಹಾಯಕರು ವೈದ್ಯಕೀಯ ತಪಾಸಣೆ ಮಾಡಿಸಿಕೊಂಡು ಫಲಿತಾಂಶ ನೆಗೆಟಿವ್ ಬಂದರೆ ಮಾತ್ರ ಅವರು ಕರ್ನಾಟಕದ ಒಳಗೆ ಸಂಚಾರಿಸಬಹದು ಎಂದು ಹೇಳಿದೆ. ಕರ್ನಾಟಕದ ರೈತರ ಹಿತದೃಷ್ಟಿಯಿಂದ ನಿಯಮಗಳು ಒಳಿತಾದರು, ನಿಯಮಗಳನ್ನು ಪಾಲಿಸಲಾಗದೆ ಕರ್ನಾಟಕಕ್ಕೆ ಬರುವ ಯಂತ್ರಗಳ ಸಂಖ್ಯೆ ಕಡಿಮೆಯಾಗಬಹುದು ಎಂದು ಅಂದಾಜಿಸಲಾಗುತ್ತಿದೆ. ಪ್ರತಿವರ್ಷ ಏಪ್ರಿಲ್‍ ಅಂತ್ಯದ ವೇಳೆಗೆ ಯಂತ್ರಗಳು ಭತ್ತ ಕಟಾವಾಗುವ ಎಲ್ಲಾ ಪ್ರದೇಶದಲ್ಲಿ ಬಂದು ನಿಲ್ಲುತ್ತಿದ್ದವು. ಆದರೆ ಈ ಬಾರಿ ಯಂತ್ರಗಳ ಸುಳಿವೇ ಇಲ್ಲದಂತಾಗಿದೆ. ಆದ್ದರಿಂದ ಕೂಲಿ ಕಾರ್ಮಿಕರು ಸಿಗದೆ ಇತ್ತ ಯಂತ್ರಗಳು ಸಿಗದೆ ರೈತರು ಅತಂತ್ರ ಸ್ಥಿತಿಯಲ್ಲಿದ್ದಾರೆ.


ಇದನ್ನೂ ಓದಿ: ಲಾಕ್‌ ಡೌನ್‌ ಕಾಲದಲ್ಲಿ ದೋಣಕುಪ್ಪೆ: ಲೋಕೇಶ್‌ ಬರೆದ ಸ್ವಾರಸ್ಯಕರ ವಿಷಾದಗೀತೆ 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...