ಕಳೆದ ಹತ್ತು ದಿನಗಳಿಂದ ಅಮೀರ್ ಖಾನ್ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿದ್ದಾರೆ. ಬಹಳಷ್ಟು ಜನರು ಅವರನ್ನು ಹಾಡಿ ಹೊಗಳಿದ್ದಾರೆ. ಕಾರಣವೇನೆಂದರೆ ಈ ಕೆಳಗಿನ ಸುದ್ದಿ. ಇನ್ನೊಮ್ಮೆ ಓದಿ ಬಿಡಿ. ನಿಜವೋ ಸುಳ್ಳೋ ನಾವು ಹೇಳುತ್ತೇವೆ.
“ಮುಂಬೈ ಸ್ಲಮ್ ಬೀದಿಯಲ್ಲಿ ನಡುರಾತ್ರಿ ಸಮಯದಲ್ಲಿ ಟ್ರಕ್ ಒಂದರಲ್ಲಿ ಮೈದಾ ಹಿಟ್ಟು ತುಂಬಿಕೊಂಡು ಬಂದ ವ್ಯಕ್ತಿಯೋರ್ವನು “ಯಾರಿಗೆ ಮೈದಾ ಹಿಟ್ಟಿನ ಅಗತ್ಯವಿದೆಯೋ ಅವರಿಗಾಗಿ ನಾನು ಹಿಟ್ಟು ತಂದಿರುವೆನು. ಆದರೆ ಓರ್ವ ವ್ಯಕ್ತಿಗೆ ಕೇವಲ ಒಂದು ಕಿಲೋ ಮೈದಾ ಹಿಟ್ಟು ಮಾತ್ರ ಕೊಡಲಾಗುವುದು’ ಎಂದು ಜನರನ್ನು ಕೂಗಿ ಕರೆಯತೊಡಗುತ್ತಾನೆ. ಹೊಟ್ಟೆಗೆ ಅನ್ನವಿಲ್ಲದೇ ಹಸಿವಿನಿಂದ ಪರಿತಪಿಸುತ್ತಿದ್ದ ಕೆಲವು ಜನರು ಅವನತ್ತ ಓಡ ತೊಡಗಿದರು. ಹೊಟ್ಚೆ ತುಂಬಿದ ಇನ್ನೂ ಕೆಲವರು ‘ಕೇವಲ ಒಂದು ಕಿಲೋ ಮೈದಾ ಹಿಟ್ಟಲ್ವಾ , ಹೋಗಲಿ’ ಎಂದೇಳುತ್ತಾ ತಮ್ಮ ಜೋಪಡಿಗಳಲ್ಲೇ ಕುಳಿತರು”.
ಹಸಿದ ಹೊಟ್ಟೆಗಳು ಆ ಒಂದು ಕಿಲೋ ಹಿಟ್ಟನ್ನು ಪಡೆದುಕೊಂಡು ಖುಷಿಯಿಂದ ಮನೆಯತ್ತ ಹೊರಟವು. ಮನೆಯಲ್ಲಿ ಹಿಟ್ಟಿನ ಪ್ಯಾಕೆಟ್ ತೆರೆದು ನೋಡಿದಾಗ ಅದರೊಳಗೆ 15000 ರೂಪಾಯಿಗಳನ್ನೂ ಇಡಲಾಗಿತ್ತಂತೆ.
ಇದು ಕತೆಯಲ್ಲ. ಮುಂಬೈಯಲ್ಲಿ ನಡೆದ ನಿಜ ಘಟನೆ ಎನ್ನಲಾಗುತ್ತಿದೆ. ಈ ಘಟನೆಯ ನಾಯಕ ಸಿನಿಮಾ ನಟ ಆಮೀರ್ ಖಾನ್ ಎಂದು ಹೇಳಲಾಗುತ್ತಿದೆ. ಈ ಸುದ್ಧಿಯ ಸತ್ಯಾಸತ್ಯತೆ ಅದೇನಿದ್ದರೂ ಉದ್ದೇಶ ಮಾತ್ರ ಮೆಚ್ಚುವಂತದ್ದು. ದಾನ ಮಾಡಿದ ಕೈ ಯಾರದ್ದೆಂದು ಪಡೆದವರಿಗೆ ತಿಳಿದಿಲ್ಲ, ದಾನವನ್ನು ಪಡೆದ ಜನರು ಯಾರೆಂದು ನೀಡಿದವನಿಗೂ ಗೊತ್ತಿಲ್ಲ. ದಾನದ ಉದ್ದೇಶ ಈಡೇರಿತ್ತು. ದಾನ ತಲುಪಬೇಕಾದ ಕೈಗಳಿಗೇ ತಲುಪಿತ್ತು. ಇದರಲ್ಲಿ ಪ್ರಚಾರವಿಲ್ಲ, ಕ್ಯಾಮೆರಾ ಇಲ್ಲ. ಕೇವಲ ನಿಸ್ವಾರ್ಥತೆಯ ದಾನ ಮಾತ್ರ. ಕಿಟ್ ಗಳನ್ನು ಹೀಗೂ ವಿತರಿಸಬಹುದು.
ಈಗ ಈ ಸುದ್ದಿಯ ಅಸಲಿಯತ್ತಿಗೆ ಬರೋಣ. ಮೊದಲಿಗೆ ಈ ರೀತಿ ಮೈದಾ ಹಿಟ್ಟಿನ ಪ್ಯಾಕೆಟ್ ನಮಗೆ ಸಿಕ್ಕಿತ್ತು. ಅದರಲ್ಲಿ 15 ಸಾವಿರ ಹಣವಿತ್ತು ಇದುವರೆಗೂ ಯಾರು ಮುಂದೆ ಬಂದು ಹೇಳಿಲ್ಲ. ಆದರೂ ಈ ಸಂದೇಶ ಮಾತ್ರ ವೈರಲ್ ಆಗಿತ್ತು. ಇದು ಶುದ್ದ ಸುಳ್ಳು. ಹೀಗಂತಾ ಹೇಳಿದವರು ಯಾರು ಗೊತ್ತೆ? ಬೇರ್‍ಯಾರೂ ಅಲ್ಲ ಸ್ವತಃ ಅಮೀರ್ ಖಾನ್!
ನಿಮಗೆ ಸಂದೇಹವೇ ಹಾಗಾದರೆ ಈ ಕೆಳಗಿನ ಅವರ ಟ್ವೀಟ್ ನೋಡಿ.
Guys, I am not the person putting money in wheat bags. Its either a fake story completely, or Robin Hood doesn't want to reveal himself!
Stay safe.
Love.
a.— Aamir Khan (@aamir_khan) May 4, 2020
ಸ್ನೇಹಿತರೆ, ಮೈದಾ ಹಿಟ್ಟಿನಲ್ಲಿ ಹಣ ಹಂಚಿದ್ದು ನಾನಲ್ಲ. ಇದು ಸಂಪೂರ್ಣ ಸುಳ್ಳು ಸುದ್ದಿ. ಅಥವಾ ರಾಬಿನ್ ಹುಡ್ ತನ್ನನ್ನು ಬಹಿರಂಗಪಡಿಸಲು ಬಯಸುವುದಿಲ್ಲವೆನೋ! ಮನೆಯಲ್ಲಿಯೇ ಇರಿ, ಪ್ರಿತಿಯಿಂದ ಅಮೀರ್‌ಖಾನ್ ಎಂದು ಟ್ವೀಟ್ ಮಾಡಿದ್ದಾರೆ.
ಈ ಮೊದಲು ಈ ಸುದ್ದಿ ನಿಜವೇ ಸುಳ್ಳೇ ಎಂದು ತಿಳಿಯಲು ಸಾಕಷ್ಟು ಹರಸಾಹಸಪಟ್ಟಿದ್ದರೂ ಸಾಧ್ಯವಾಗಿರಲಿಲ್ಲ. ಈಗ ಅಮೀರ್ ಖಾನ್‌ರವರೆ ಟ್ವೀಟ್ ಮೂಲಕ ಸ್ಪಷ್ಟೀಕರಣ ನೀಡಿದ್ದಾರೆ.
ಇದನ್ನೂ ಓದಿ: ದೇಶದಾದ್ಯಂತ ಕಾರ್ಮಿಕರ ರೈಲು ಪ್ರಯಾಣದರವನ್ನು ಕಾಂಗ್ರೆಸ್ ಭರಿಸಲಿದೆ: ಸೋನಿಯಾ ಗಾಂಧಿ


