ಈ ದೇಶದಾಗ ಲೋಕಲ್ ಅನ್ನೋ ಶಬ್ದಕ್ಕ ಬ್ಯಾರೆ ಬ್ಯಾರೆ ಕಡೆ ಬ್ಯಾರೆ ಬ್ಯಾರೆ ಅರ್ಥ ಅದಾವು. ಹಾವೇರಿ ಒಳಗ ಲೋಕಲ್ ಅಂದರ ದ್ಯಾಮನೂರು ಮೆಣಸಿನಕಾಯಿ, ಗುಲಬರ್ಗಾದಾಗ ಲೋಕಲ್ ಅಂದರ ಸಣ್ಣ ತೊಗರಿ ಬ್ಯಾಳಿ, ಮೈಸೂರಿನ್ಯಾಗ ಲೋಕಲ್ ಅಂದರ ಬನ್ನೂರು ಕುರಿ, ಇನ್ನ ಮುಂಬಯಿದಾಗ ಲೋಕಲ್ ಅಂದರ ಟ್ರೇನು.
ಹಂಗಾರ, ಹೋದ ಮಂಗಳವಾರ ಪಂತ ಪ್ರಧಾನರು ಠೀವಿಯೊಳಗ ಹೇಳಿದ ಲೋಕಲ್ ಅಂದರೆ ಏನು? ಅವರ ಭಾಷಣ ಇನ್ನೂ ಅರ್ಧ ಆಗಿರಲಿಲ್ಲ, ಆವಾಗನ ಐಟಿ ಸೆಲ್ಲಿನವರು ನೂರಾ ಎಂಟು ಮೀಮು ಮಾಡಿದರು. ಅವನ್ನು ನೀವು ಠೀವಿ ಪರದೆ ಬಿಟ್ಟು ನಿಮ್ಮ ಅಂಗೈಯೊಳಗಿನ ಪರದೆ ಮ್ಯಾಲೆ ಕಣ್ಣು ಹಾಕೋ ಕಿಂತ ಮುಂಚೆ
ಆ ಮೀಮುಗಳು ಒಂದು ಅಕ್ಷೋಷಿಣಿ ಸಂಖ್ಯೆಯೊಳಗ ಷೇರು, ಲೈಕು, ಕಮೆಂಟು ಆಗಿ ಹೋದವು.
ಅದರಾಗ ಒಂದು ಮೀಮು ʻಬಿ ವೋಕಲ್ ಅಬೌಟ್ ಲೋಕಲ್ʼ ಅಂತ ಇತ್ತು. ಅದನ್ನು ಪಂತ ಪ್ರಧಾನರು ಹೇಳಿರದಿದ್ದರೂ ಐಟಿ ಸೆಲ್ಲಿನವರು ಹೇಳಿದರು. ಒಮ್ಮೊಮ್ಮೆ ಇವರನ್ನ ನೋಡಿ ಅವರು ಮಾತಾಡತಾರೋ ಅಥವಾ ಅವರನ್ನು ನೋಡಿ ಇವರು ಮಾತಾಡತಾರೋ ಗೊತ್ತಾಗೋದಿಲ್ಲ. ಐಟಿ ಸೆಲ್ಲಿನವರ ಭಾಷಣ ಪಂತ ಪ್ರಧಾನರು ಬರೀತಾರೋ, ಅಥವಾ ಪಂತ ಪ್ರಧಾನರ ಭಾಷಣ ಐಟಿ ಸೆಲ್ಲಿನವರು ಬರೀತಾರೋ ಗೊತ್ತಿಲ್ಲ.
ಈ ಐಟಿ ಸೆಲ್ಲಿನವರು ಹಂಗ ಇದ್ದಾರ ಅಂದರ ನಮ್ಮ ನಾಯಕರು ನಮ್ಮದು ʻಸ್ವದೇಶಿ ಸಿದ್ಧಾಂತʼ ಅಂತ ಹೇಳಿದಾಗ ನಾವು ಚಪ್ಪಾಳೆ ಹೊಡೆಯೋ ಮಾಡತಾರ. ಸ್ವದೇಶಿ ಹಳೆಯದು, ಈಗ ಬೇಕಾಗಿರೋದು ʻಮೇಕ್ ಇನ್ ಇಂಡಿಯಾʼ ಅಂದಾಗುನೂ ಮಾಡತಾರ, ಕಡೀಕೆ ʻನಾವು ಆತ್ಮ ನಿರ್ಭರರಾಗಿ ಇರಬೇಕು. ನಾವೆಲ್ಲಾ ಲೋಕಲ್ ಕಡೆ ನೋಡಬೇಕುʼ ಅಂತ ಅಂದಾಗುನೂ ನಾವು ಅವರನ್ನ ಬೆಂಬಲಿಸೋಹಂಗ ಮಾಡತಾರ. ಅದು ಹೆಂಗ ಅಂದರ ತಲಿ ಅವರದು, ತಲಿ ಬುರಡಿ ನಮ್ಮದು. ಅಷ್ಟ ಆಗೋದರಾಗ ಬುರುಡಿ ಬಿಡೋರು ಯಾರು ಅಂತ ಗೊತ್ತಾಗೋದಿಲ್ಲ.
ಇರಲಿ, ಲೋಕಲ್ಲು ಅನ್ನೋದರ ಅರ್ಥ ʻಸ್ಥಳೀಯʼ, ʻಮಕಾಮಿʼ, ಅಥವಾ ʻತಾಲೂಕದಾರಿʼ ಅಂತ ಆಗತದ. ಹಂಗಂದರೇನು? ಹಂಗಂದರ ಸ್ಥಳೀಯರ ದುಡ್ಡು, ಅಧಿಕಾರ, ಅವರ ಜೀವಕ್ಕ ಸಂಬಂಧ ಪಟ್ಟ ನಿರ್ಧಾರಗಳನ್ನ ಅವರೇ ತೊಗೋಬೇಕು ಅನ್ನೋದು. ಅಧಿಕಾರ ಅನ್ನೋದು ಗ್ರಾಮ, ತಾಲೂಕು, ಜಿಲ್ಲಾ ಪಂಚಾಯಿತಿಗಳಿಗೆ ಹರಿದು ಬರಬೇಕು, ಆಡಳಿತದೊಳಗ ಸರಿಸಮನಾದ ಭಾಗಿದಾರಿ ಇರಬೇಕು. ಇದನ್ನ ಮಾಡಲಿಕ್ಕೆ ಈ ಸರಕಾರದವರು ತಯಾರು ಇದ್ದಾರೇನು?
ಮೊದಲಿಗೆ ಆ ಕಿತ್ತಳೆ ಪಕ್ಷದವರು ಒಕ್ಕೂಟ ವ್ಯವಸ್ಥೆಯೊಳಗ ನಂಬಿಕೆ ಇಟಗೋಬೇಕು. ಅದರ ಪ್ರಕಾರ ರಾಜ್ಯಗಳಿಗೆ ಹೆಚ್ಚಿನ ಅಧಿಕಾರ ಕೊಡಬೇಕು. ನೀತಿ ನಿರೂಪಣೆಯೊಳಗ, ಕಾರ್ಯಕ್ರಮ ಜಾರಿಯೊಳಗ ಭಾಗವಹಿಸಲಿಕ್ಕೆ ರಾಜ್ಯಗಳಿಗೆ ಅವಕಾಶ ಕೊಡಬೇಕು. ಇದನ್ನ ಇವರು ಈಗಂತೂ ಮಾಡಲಿಕ್ಕೆ ಹತ್ತಿಲ್ಲ. ಇವರು ಬಂದಾಗಿನಿಂದ ಕೇಂದ್ರೀಕರಣನ ಜಾಸ್ತಿ ಆಗೇದ ಹೊರತು ವಿಕೇಂದ್ರೀಕರಣ ಇಲ್ಲ. ಯಾರು ಏಕೋಪಾಧ್ಯಾಯ ಶಾಲೆ ರೀತಿಯೊಳಗ ಏಕ ವ್ಯಕ್ತಿ ಸರಕಾರ ನಡಸತಾರೋ, ಯಾರು ಇರೋಬರೋ ಅಧಿಕಾರನ್ನೆಲ್ಲಾ ಕೇಂದ್ರದ ಮಂತ್ರಿಮಂಡಲಕ್ಕಿಂತ ಪ್ರಧಾನಿ ಕಚೇರಿಯೊಂದರ ಒಳಗ ತುರುಕಿ ಬಿಟ್ಟಾರೋ, ಅವರು ಗ್ರಾಮ ಪಂಚಾಯಿತಿ ಮಟ್ಟಕ್ಕ ಅಧಿಕಾರ ವಿಕೇಂದ್ರೀಕರಣ ಮಾಡರಿ ಅಂದರ ಕೇಳತಾರ?
ಇನ್ನ ವಿಕೇಂದ್ರೀಕೃತ ಆರ್ಥಿಕತೆ. ಸರಳವಾಗಿ ಹೇಳಬೇಕಂದರ ಅದು ಹಳ್ಳೀ ಸಾಮಾನು ಹಳ್ಳಿಯೊಳಗ ಮಾರಾಟ ಆಗಬೇಕು, ಅನ್ನೂ ಸೂತ್ರದ ಮ್ಯಾಲೆ ನಿಂತಿರೋದು. ಇದರಾಗ ಇವರಿಗೆ ನಿಜವಾಗಿಯೂ ನಂಬಿಕೆ ಅದ ಏನು? ತಾವು ನೂರಾರು ವರ್ಷದಿಂದ ಹೇಳತಾ ಬಂದಿದ್ದ ಸ್ವದೇಶಿ ಸೂತ್ರವನ್ನು ಧಡಕ್ಕನೇ ಬದಲಾಯಿಸಿ ಮೇಕ್ ಇನ್ ಇಂಡಿಯಾ ತಂದವರು ಇವರು. ಭಾರತೀಯ ಕಂಪನಿಗೆ ಕಾರುಬಾರು-ಲಾಭ ಸಿಗಬೇಕು. ಅದಕ್ಕ ನೀವು ಕಾಲ್ಗೇಟು ಬಿಟ್ಟು ಉಪ್ಪಿನಿಂದ ಹಲ್ಲು ತಿಕ್ಕರಿ, ಹಾಲಿನಿಂದ ದಾಡಿ ಮಾಡಿಕೊಳ್ಳಿರಿ ಅಂತ ಹೇಳತಿದ್ದವರು ಏಕಾಏಕಿ ಯಾವ ದೇಶದ ಕಂಪನಿ ಆದರೇನು ಭಾರತದಾಗ ಕಾರಖಾನೆ ಹಾಕಿದರ ಸಾಕು ಅಂತ ಭಾರತದಲ್ಲಿ ತಯಾರಿಸಿ ಅಂತ ಫರಮಾನು ಕೊಟ್ಟರು. ಈಗ ಈ ಕೊರೋನಾದಾಗ ಅದು ಉಲ್ಟಾ ಹೊಡದಂಗ ಕಾಣೋದಕ್ಕ ಮತ್ತ ಲೋಕಲ್ಲಿಗೆ ಬಂದಾರ.
ಗ್ರಾಮ ಉದ್ಯೋಗ, ಖಾದಿ, ಹಳ್ಳಿಗಳ ಕಾಯಿಪಲ್ಯಾ ಸಂತಿ- ದನದ ಸಂತಿ, ಉತ್ಸವ- ಜಾತ್ರಿ- ತೇರು ಇವು ಈ ದೇಶದ ಆರ್ಥಿಕತೆಗೆ ಎಷ್ಟು ಕೊಡುಗೆ ಕೊಡತಿದ್ದವು ಅನ್ನೋದು ಎಲ್ಲಾರಿಗೂ ಮರತು ಹೋಗುವಂತೆ ಮಾಡಿ. ಬರೇ ಐಟಿ-ಬಿಟಿ, ಮೈನಿಂಗು, ಅದಾನಿ -ಅಂಬಾನಿ, ಮಾತ್ರ ಖರೇ. ಬ್ಯಾರೆ ಎಲ್ಲಾ ಸುಳ್ಳು ಅಂತ ನಮ್ಮನ್ನ ನಂಬಿಸಿದರು.
ಇವರು ಲೋಕಲ್ಲಿನ ಬಗ್ಗೆ ವೋಕಲ್ಲು ಆಗೋದನ್ನ ನಂಬಲಿಕ್ಕೆ ಸಾಧ್ಯ ಇಲ್ಲ.
ಹಂಗಾದರ ಇಷ್ಟು ದಿವಸ ಜಾಗತಿಕ ಮಟ್ಟದ ಯೋಚನೆ ಇಟಗೋರಿ, ಇಡೀ ಜಗತ್ತಿನ ಮಾರುಕಟ್ಟೆಯೊಳಗ ಸ್ಪರ್ಧೆ ಮಾಡೋವಂಥಾ ಉತ್ಪನ್ನ ತಯಾರು ಮಾಡ್ರಿ, ನಿಮ್ಮ ಐಟಿ, ಬಿಟಿ ಸೇವೆ ಹೆಂಗ ಇರಬೇಕು ಅಂದರ ಅದು ವಿಶ್ವದ ಇತರ ದೇಶಗಳನ್ನ ಸೋಲಿಸಿ ಮುಂಚೂಣಿಗೆ ಬರಬೇಕು, ಅಂತ ಭಾಷಣ ಕುಟ್ಟತಿದ್ದರಲ್ಲಾ ಅದು ಏನಾತು?
ʻʻಸ್ವಾತಂತ್ರ‍್ಯ ಅಂದರ ವಿಕೇಂದ್ರೀಕರಣ. ವಿಕೇಂದ್ರೀಕರಣ ಇಲ್ಲದಿದ್ದರೆ ಸ್ವಾತಂತ್ರ‍್ಯಕ್ಕೆ ಅರ್ಥ ಇಲ್ಲ.
ಭಾರತ ಹಳ್ಳಿಗಳ ದೇಶ. ಹಳ್ಳಿಗಳು ಉಳಿಯದಿದ್ದರೆ ಈ ದೇಶ ಉಳಿಯೋದಿಲ್ಲʼʼ ಅಂತ ಹಿಂದೊಮ್ಮೆ ಇನ್ನೊಬ್ಬ ಗುಜರಾತಿ ನಾಯಕ ಹೇಳಿದ್ದರು. ಈ ದುರಿತ ಕಾಲದಾಗ ನಾವು ಆ ವಿಚಾರಗಳನ್ನು ನಮ್ಮ ಮುಂದ ಇಟ್ಟ ಮೋಹನದಾಸ ಗಾಂಧಿ ಅವರನ್ನು ನೆನಪು ಮಾಡಕೊಳ್ಳೋದು ನಮಗ ಸ್ವಲ್ಪವಾದರೂ ಸಮಾಧಾನ ತರಬಹುದು.


