ಕೊರೊನಾವೈರಸ್‌ನಿಂದ ಹೆಚ್ಚು ಹಾನಿಗೊಳಗಾದ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ತಮಿಳುನಾಡು ರಾಜ್ಯಗಳು ಮೇ 31 ರವರೆಗೆ ರಾಜ್ಯದ ಲಾಕ್‌ಡೌನ್ ಅನ್ನು ವಿಸ್ತರಿಸಿವೆ. ಮಹಾರಾಷ್ಟ್ರದ ಉದ್ಧವ್ ಠಾಕ್ರೆ ಸರ್ಕಾರವು ಪ್ರಕರಣಗಳ ಸಂಖ್ಯೆಯು ಸ್ಥಿರವಾಗಿ ಏರುತ್ತಿರುವುದರಿಂದ ಲಾಕ್‌ಡೌನ್ ಅನ್ನು ವಿಸ್ತರಿಸಲು ನಿರ್ಧರಿಸಿದೆ.
ಇಂದು ರಾಷ್ಟ್ರವ್ಯಾಪಿ ಲಾಕ್‌ಡೌನ್‌ನ ಮೂರನೇ ಹಂತ ಅಂತ್ಯಗೊಳ್ಳಲಿದೆ. ಕೇಂದ್ರವು ಇಂದು ಸಂಜೆ ಲಾಕ್‌ಡೌನ್‌ನ ನಾಲ್ಕನೇ ಹಂತದ ಮಾರ್ಗಸೂಚಿಗಳನ್ನು ಪ್ರಕಟಿಸುವ ನಿರೀಕ್ಷೆಯಿದೆ.
ಮಹಾರಾಷ್ಟ್ರದ ವಿವರ
ಇಡೀ ರಾಜ್ಯಕ್ಕೆ ಲಾಕ್‌ಡೌನ್ ವಿಸ್ತರಿಸಲಾಗಿದ್ದರೂ, ಹಂತವಾರು ತೆರವುಗೊಳಿಸುವ ಅಥವಾ ನಿರ್ಬಂಧಗಳನ್ನು ಸಡಿಲಿಸುವ ಆದೇಶವನ್ನು ಶೀಘ್ರದಲ್ಲೇ ತಿಳಿಸಲಾಗುವುದು ಎಂದು ಮಹಾರಾಷ್ಟ್ರ ಮುಖ್ಯ ಕಾರ್ಯದರ್ಶಿ ಅಜೋಯ್ ಮೆಹ್ತಾ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ.
ದೇಶದ ಒಟ್ಟು COVID-19 ಪ್ರಕರಣಗಳಲ್ಲಿ ಸುಮಾರು ಮೂರನೇ ಒಂದು ಭಾಗದಷ್ಟನ್ನು ಈ ರಾಜ್ಯವೊಂದೇ ವರದಿ ಮಾಡಿದೆ. ಒಂದೇ ದಿನದಲ್ಲಿ 1,606 ಹೊಸ ಪ್ರಕರಣಗಳು ವರದಿಯಾಗಿರುವುದರಿಂದ ರಾಜ್ಯದಲ್ಲಿ ಕರೋನವೈರಸ್ ಪ್ರಕರಣಗಳು ಶನಿವಾರ 30,000 ದಾಟಿದೆ. 884 ಪ್ರಕರಣಗಳ ಹೆಚ್ಚಳದೊಂದಿಗೆ, ಮುಂಬೈನ ಒಟ್ಟು ಪ್ರಕರಣಗಳು 18,555ಕ್ಕೆ ತಲುಪಿವೆ.
ತಮಿಳುನಾಡು ವರದಿ
74 ಸಾವುಗಳೊಂದಿಗೆ 10000 ಪ್ರಕರಣಗಳನ್ನು ದಾಖಲಿಸಿರುವ ತಮಿಳುನಾಡು ರಾಜ್ಯವೂ ಸಹ ಮೇ 31ರವರೆಗೆ ಲಾಕ್‌ಡೌನ್ ವಿಸ್ತರಿಸಿದೆ. ಆದರೂ 25 ಜಿಲ್ಲೆಗಳಲ್ಲಿ ನಿಯಮಗಳನ್ನು ಸಡಿಲಗೊಳಿಸಿದ್ದು, ಇ ಪಾಸ್ ಇಲ್ಲದೆಯೂ ಅಗತ್ಯ ಸಾರಿಗೆ ಸಂಚಾರಕ್ಕೆ ಅನುಮತಿ ನೀಡಲಾಗಿದೆ.
ಕರ್ನಾಟಕ ವರದಿ:
ಕರ್ನಾಟಕದಲ್ಲಿ ಲಾಕ್‌ಡೌನ್ ಮುಂದುವರೆಯುವ ಬಗ್ಗೆ ಸರ್ಕಾರ ಇನ್ನೂ ಅಧಿಕೃತ ತೀರ್ಮಾನ ತೆಗೆದಕೊಂಡಿಲ್ಲ. ಆದರೆ ನಿಯಮಗಳನ್ನು ಸಡಿಲಿಸುವ ಸಲುವಾಗಿ ಯೋಚಿಸುತ್ತಿದ್ದು ನಿಯಮಿತ ಪ್ರಮಾಣದಲ್ಲಿ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‌ಗಳ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಂಡಿದೆ.
ಸದ್ಯಕ್ಕೆ 1146 ಪ್ರಕರಣಗಳು ವರದಿಯಾಗಿದ್ದು 37 ಜನ ಮೃತಪಟ್ಟಿದ್ದಾರೆ. ಮಹಾರಾಷ್ಟ್ರ ಮತ್ತು ತಮಿಳುನಾಡಿಗೆ ಹೋಲಿಸಿದರೆ ಪ್ರಕರಣಗಳ ಸಂಖ್ಯೆಯ ದೃಷ್ಟಿಯಿಂದ ಕರ್ನಾಟಕ ಉತ್ತಮ ಸ್ಥಿತಿಯಲ್ಲಿದೆ. ಆದರೆ ಇಂದು ಒಂದೇ ದಿನಕ್ಕೆ 54 ಪ್ರಕರಣಗಳು ದಾಖಲಾಗಿದ್ದು ಆತಂಕ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ತೀರ್ಮಾನದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
ಇದನ್ನೂ ಓದಿ: ರಸ್ತೆಯಲ್ಲಿ ಕೊರೊನಾ ಸೋಂಕಿತರ ಶವ: ಗುಜರಾತ್ ಮಾಡೆಲ್ ಧ್ವಂಸ ಮಾಡಬೇಕೆಂದು ಜಿಗ್ನೇಶ್ ಮೇವಾನಿ ಆಕ್ರೋಶ


