ಕೊರೊನಾ ಮತ್ತು ಲಾಕ್‌ಡೌನ್‌ಅನ್ನು ಅರ್ಥ ಮಾಡಿಕೊಂಡು ಸರಿಯಾದ ಯೋಜನೆಗಾಗಿ ಆಗ್ರಹಿಸುವ ಈ ಅಧ್ಯಯನದಲ್ಲಿ ನೀವೂ ಭಾಗಿಯಾಗಬಹುದು

0

(ಮೊದಮೊದಲು ಯಾರಿಗೂ ಈ ಕೊರೊನಾ ಎದುರಿಸುವ ನಿರ್ದಿಷ್ಟ ಬಗೆ ಗೊತ್ತಿರಲಿಲ್ಲ ಎಂಬುದು ಸರಿ. ಹಾಗಾಗಿ ಎಲ್ಲವನ್ನೂ ಪ್ರಯೋಗ ಮಾಡಿಯೇ ಕಲಿಯಬೇಕಿತ್ತು. ಆದರೆ, ಈಗ ಎಷ್ಟೋ ದೇಶಗಳ ಎಷ್ಟೋ ಬಗೆಯ ಪ್ರಯೋಗಗಳಿಂದ ಸಕಾರಾತ್ಮಕ ಮತ್ತು ನಕಾರಾತ್ಮಕ ಪಾಠಗಳು ಸಿಕ್ಕಿವೆ. ಭಾರತದ್ದೂ ಅನುಭವ ಈಗ ದಕ್ಕಿದೆ. ಈಗಲೂ ಗೊತ್ತಿರದ ಸಂಗತಿಗಳಿದ್ದಾವಾದರೂ, ಗೊತ್ತಿರುವ ಅಂಶಗಳ ಆಧಾರದ ಮೇಲೆ ಯಾವ ಅಭಿಪ್ರಾಯಗಳಿಗೆ ಬರಲಾಯಿತು ಎಂದೂ ಹೇಳಬೇಕಾದವರು ಹೇಳುತ್ತಿಲ್ಲ. ಹಾಗಾಗಿ ಈಗ ಅನುಸರಿಸಲಾಗುತ್ತಿರುವ ದಾರಿ ಎಷ್ಟು ಸರಿ ಎಷ್ಟು ತಪ್ಪು ಎಂದೂ ಹೇಳಲಾಗುತ್ತಿಲ್ಲ.)

ಈ ಹಿನ್ನೆಲೆಯಲ್ಲಿ ಪ್ರಪಂಚದ ವಿವಿಧ ಭಾಗಗಳ ಅನುಭವಗಳನ್ನು ಒಂದೆಡೆ ತಂದು, ಈ ಕುರಿತು ವಿವಿಧ ತಜ್ಞರು ಏನು ಹೇಳಿದ್ದಾರೆಂಬುದನ್ನೂ ನಿಕಷಕ್ಕೆ ಒಡ್ಡಿ ಖಚಿತವಾದ ಕೆಲವು ಅಭಿಪ್ರಾಯಗಳಿಗೆ ಬರಬೇಕಿದೆ. ಗಮನಿಸಿ: ನಾವು ನಮ್ಮ ತರ್ಕ ಬುದ್ಧಿಯನ್ನು ಒಂದಷ್ಟು ಬಳಸಬಹುದಾದರೂ ಅಂತಿಮವಾಗಿ ತಜ್ಞರ ಅನಿಸಿಕೆಗಳ ಆಧಾರದ ಮೇಲೆಯೇ ತೀರ್ಮಾನಿಸಬೇಕು. ನಮಗೆ ಇನ್ನೂ ಸ್ಪಷ್ಟವಾಗಿರದುದರ ಕುರಿತು ಕೆಲವು ಪ್ರಶ್ನೆಗಳನ್ನು ಇಲ್ಲಿ ಹಾಕಿಕೊಳ್ಳಲಾಗಿದೆ. ಈ ಅಧ್ಯಯನದಲ್ಲಿ ನೀವೂ ಭಾಗಿಯಾಗುತ್ತಾ ಹೋದರೆ, ಭಾರತವು ಕೊರೊನಾವನ್ನು ಹೇಗೆ ಎದುರಿಸಬೇಕು ಎಂಬುದು ನಿಮಗೂ ಗೊತ್ತಾಗುತ್ತದೆ. ಅಂತಿಮವಾಗಿ ಭಾರತೀಯರಾದ ನಾವು ಸಮಷ್ಟಿ ತಿಳುವಳಿಕೆಯಿಂದ ಕೊರೊನಾವನ್ನು ಎದುರಿಸಿ ಗೆಲ್ಲಲು ಸಾಧ್ಯವಾಗಬೇಕು ಎಂಬುದೇ ಈ ಅಧ್ಯಯನದ ಆಶಯ)

ದೇಶವು ಮಾರ್ಚ್ 24ರಿಂದ ಇಲ್ಲಿಯವರೆಗೆ ಮೂರು ಸಾರಿ ವಿಸ್ತರಣೆಯಾದ ಲಾಕ್‌ಡೌನ್‌ಅನ್ನು ಅನುಭವಿಸಿದೆ. ಮೇ 17ರಂದು ಅದು ಬಹಳಷ್ಟು ಸಡಿಲವಾಗಿದೆ.  ಪ್ರಧಾನಿಗಳು ‘ಹೊಸ ನಿಯಮಗಳೊಂದಿಗೆ 4ನೇ ಬಗೆಯ ಲಾಕ್‌ಡೌನ್’ ಮುಂದುವರೆಯಲಿದೆ ಎಂದು ಹೇಳಿದಾಗ, ಮುಂದಿನ ದಿನಗಳು ಹೇಗಿರುತ್ತವೆ ಎಂಬುದು ಅಸ್ಪಷ್ಟವಾಗಿ ಇತ್ತಾದರೂ, ಈಗ ಅದು ಹೆಚ್ಚಿನಂಶ ಸಡಿಲವಾಗುವ ಲಕ್ಷಣಗಳು ಕಂಡು ಬಂದಿದೆ. ಪ್ರಪಂಚದಾದ್ಯಂತ ಹಲವು ದೇಶಗಳು ವಿವಿಧ ರೀತಿಯ ಲಾಕ್‌ಡೌನ್‌ಅನ್ನು ಜಾರಿಗೊಳಿಸಿದ್ದವು. ಅಂತಿಮವಾಗಿ ಈ ಸಾಂಕ್ರಾಮಿಕವನ್ನು ಎದುರಿಸುವಲ್ಲಿ ಬೇರೆ ಬೇರೆ ಮಟ್ಟದ ಯಶಸ್ಸಿನೊಂದಿಗೆ ಲಾಕ್‌ಡೌನ್‌ನಿಂದ ಹೊರಬರುತ್ತಿವೆ.

ಭಾರತದಲ್ಲಿ ಬಹಳಷ್ಟು ಸಂಕಷ್ಟ, ಒತ್ತಡ, ಸಾವು ಮತ್ತು ಹಸಿವನ್ನು ಈ ಅವಧಿಯಲ್ಲಿ ನಾವು ನೋಡಿದೆವು. ಅವೆಲ್ಲವೂ ವೈರಸ್‌ನಿಂದ ಆಗಿರಲಿಲ್ಲ. ಸಾವುಗಳು ಹೆಚ್ಚಾಗಿ ವೈರಸ್‌ನಿಂದ ಆಗಿರಬಹುದಾದರೂ, ಸಂಕಷ್ಟ ಮತ್ತು ಹಸಿವು ಲಾಕ್‌ಡೌನ್ ಅಳವಡಿಸಿದ ರೀತಿಯಿಂದಾಗಿತ್ತು. ಹಾಗಾಗಿ ಇಲ್ಲಿ ನಾವು ಹಾಕಿಕೊಳ್ಳುತ್ತಿರುವ ಪ್ರಶ್ನೆಗಳು ಕೊರೊನಾ ಸೋಂಕಿನ ನಿರ್ವಹಣೆಯ ಜೊತೆಗೆ ಲಾಕ್‌ಡೌನ್ ಕುರಿತಾಗಿಯೂ ಇರುತ್ತದೆ.

ನಾವು ಹಾಕಿಕೊಂಡಿರುವ ಪ್ರಶ್ನೆಗಳು ಇವು……

1. ಭಾರತವು ಸಾಕಷ್ಟು ಮುಂಚೆ ಸಮಯಸ್ಫೂರ್ತಿಯಿಂದ ಮಧ್ಯಪ್ರವೇಶಿಸಿತೇ?

2. ಕೋವಿಡ್ 19ಅನ್ನು ಭಾರತದಲ್ಲಿ ನಿಗ್ರಹಿಸಲು ಲಾಕ್‌ಡೌನ್ ಅತ್ಯುತ್ತಮ ವಿಧಾನವಾಗಿತ್ತೇ?

3. ಒಂದು ವೇಳೆ ಲಾಕ್‌ಡೌನೇ ಅಂದಿನ ಸಂದರ್ಭದಲ್ಲಿ ಸೂಕ್ತವಾಗಿತ್ತು ಎನ್ನುವುದಾದರೆ, ಭಾರತವು ಅದಕ್ಕೆ ಸೂಕ್ತವಾದ ಯೋಜನೆ ಮಾಡಿಕೊಂಡಿತ್ತೇ?

4. ಸಾಂಕ್ರಾಮಿಕವನ್ನು ತಡೆಗಟ್ಟಲು ಲಾಕ್‌ಡೌನ್ ಪರಿಣಾಮಕಾರಿಯಾಗಿತ್ತೇ?

5. ಲಾಕ್‌ಡೌನ್‌ನಿಂದ ಕೊರೊನಾ ಸೋಂಕಿನ ಪರೀಕ್ಷೆಗಳ (ಟೆಸ್ಟ್) ಸಂಖ್ಯೆಯನ್ನು ಹೆಚ್ಚಿಸಲು ಸಾಧ್ಯವಾಯಿತೇ?

6. ಲಾಕ್‌ಡೌನ್ ಸಡಿಲಿಸಿದಾಗ ದಿಢೀರನೆ ಹೆಚ್ಚಾಗುವ ಕೊರೊನಾ ಕೇಸುಗಳನ್ನು ಎದುರಿಸಲು ವೈದ್ಯಕೀಯ ವ್ಯವಸ್ಥೆ ಸಜ್ಜಾಗಿದೆಯೇ? ಆಗಿದ್ದರೆ ಎಷ್ಟರಮಟ್ಟಿಗೆ ಆಗಿದೆ?

7. ವೈದ್ಯಕೀಯ ವ್ಯವಸ್ಥೆಯ ಸಿದ್ಧತೆಯ ವಿಚಾರದಲ್ಲಿ ಕರ್ನಾಟಕ ಎಷ್ಟರಮಟ್ಟಿಗೆ ಯಶಸ್ವಿಯಾಗಿದೆ?

8. ಟೆಸ್ಟ್‌ಗಳನ್ನು ಮಾಡುವ ವಿಚಾರದಲ್ಲಿ ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಪರಿಸ್ಥಿತಿ ಹೇಗಿದೆ?

9. ಕರ್ನಾಟಕವು ಸಾಂಕ್ರಾಮಿಕವನ್ನು ತಡೆಗಟ್ಟುವಲ್ಲಿ ತೆಗೆದುಕೊಂಡ ಒಟ್ಟಾರೆ ಕ್ರಮಗಳು ಯಾವ ಪ್ರಮಾಣದ ಯಶಸ್ಸನ್ನು ತಂದಿದೆ?

10. ಇವೆಲ್ಲದರ ಆಧಾರದ ಮೇಲೆ ನಾವು ಯಾವ ಶಿಫಾರಸ್ಸುಗಳನ್ನು ಸರ್ಕಾರದ ಮುಂದಿಡಬಹುದು?

ಇವೆಲ್ಲಕ್ಕೂ ಸ್ಪಷ್ಟವಾದ ವೈಜ್ಞಾನಿಕವಾದ (ಅಂದರೆ ಅಧ್ಯಯನ ಮತ್ತು ನಿರ್ದಿಷ್ಟ ಅನುಭವದಿಂದ ಸಿದ್ಧವಾದ) ಸಂಗತಿಗಳ ಮೇಲೆಯೇ ತೀರ್ಮಾನಕ್ಕೆ ಬರಬೇಕು. ಅಂತಹ ಅಧ್ಯಯನವು ಈಗಾಗಲೇ ಆರಂಭವಾಗಿದ್ದು, ಇದರಲ್ಲಿ ಕೈ ಜೋಡಿಸಬಹುದಾದವರೆಲ್ಲರಿಗೆ ಸ್ವಾಗತ.

ಆಸಕ್ತರು [email protected], [email protected] ಈ ಇಮೇಲ್‌ಗಳನ್ನು ಸಂಪರ್ಕಿಸಬಹುದು.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here