ರೈತ ಹೋರಾಟಗಾರ್ತಿಯೊಂದಿಗೆ ಅನುಚಿತವಾಗಿ ವರ್ತಿಸಿದ ಸಣ್ಣ ನೀರಾವರಿ ಮತ್ತು ಕಾನೂನು ಸಚಿವ ಮಾಧುಸ್ವಾಮಿಯವರ ನಡೆ ತಪ್ಪಾಗಿದ್ದು ಸಹಿಸಲು ಸಾಧ್ಯವಿಲ್ಲ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.
ಸಚಿವ ಮಾಧುಸ್ವಾಮಿಗೆ ಆ ಮಾತು ಶೋಭೆ ತರಲ್ಲ. ಈ ಬಗ್ಗೆ ಪತ್ರಿಕೆಲಿ ನೋಡಿ ತಿಳಿದುಕೊಂಡಿದ್ದೇನೆ. ಸಚಿವರಾಗಿ ಮಹಿಳೆಗೆ ಈ ರೀತಿ ಮಾತಾಡಿರೋದು ತಪ್ಪು. ಇದನ್ನು ಸಹಿಸಿಕೊಳ್ಳೊಕೆ ಆಗಲ್ಲ ಎಂದು ಬೆಂಗಳೂರಿನಲ್ಲಿ ಸಿಎಂ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.
ಈ ಕುರಿತು ನೊಂದ ಮಹಿಳೆಯನ್ನು ಕರೆದು ಮಾತನಾಡುತ್ತೇನೆ. ಮಾಧುಸ್ವಾಮಿಯವರೊಂದಿಗೂ ಮಾತನಾಡುತ್ತೇನೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.
ಕೋಲಾರ ತಾಲೂಕಿನ ಅಗ್ರಹಾರ ಕೆರೆ ವೀಕ್ಷಣೆ ವೇಳೆ ಕೆರೆಕಟ್ಟೆ ಹೊಡೆಯದಂತೆ ಕ್ರಮ ತೆಗೆದುಕೊಳ್ಳಿ ಎಂದು ಸಣ್ಣ ನೀರಾವರಿ ಮತ್ತು ಕಾನೂನು ಸಚಿವ ಮಾಧುಸ್ವಾಮಿಯವರಿಗೆ ಮನವಿ ಮಾಡಿದ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷೆ ನಳಿನಿಯವರ ಮೇಲೆ ಸಚಿವರು ದರ್ಪ ಮೆರೆದಿದ್ದರು.
ಮಹಿಳಾ ಹೊರಾಟಗಾರ್ತಿಯೊಂದಿಗೆ “ನಾನು ಬಹಳ ಕೆಟ್ಟ ಮನುಷ್ಯ, ಹೇಯ್, ಮುಚ್ಚು ಬಾಯಿ ರಾಸ್ಕಲ್” ಎಂದು ಗದರುವ ಮೂಲಕ ಸಚಿವ ಮಾಧುಸ್ವಾಮಿ ದುರ್ವರ್ತನೆ ತೋರಿದ್ದರು.
ಈ ಕುರಿತು ರಾಜ್ಯದಲ್ಲಿ ಸಚಿವರ ನಡೆಗೆ ಭಾರೀ ವಿರೋಧ ವ್ಯಕ್ತವಾಗಿದೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಬಹಳಷ್ಟು ಜನ ಮಾಧುಸ್ವಾಮಿಯವರ ವರ್ತನೆಯನ್ನು ಖಂಡಿಸಿದ್ದು, ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಸಚಿವ ಮಾಧುಸ್ವಾಮಿ ದುರ್ವರ್ತನೆಗೆ ವ್ಯಾಪಕ ಖಂಡನೆ: ಕ್ಷಮೆಯಾಚನೆಗೆ ಪಟ್ಟು


