ಕಲ್ಕತ್ತಾದ ಟೆಲಿಗ್ರಾಫ್ ಪತ್ರಿಕೆಯ ಮುಖಪುಟದ ಅಗ್ರ ಶೀರ್ಷಿಕೆ: ಎರಡರ ಮುಂದೆ ಹದಿಮೂರು ಸೊನ್ನೆಗಳು! ಅರ್ಥಾತ್ 20 ಲಕ್ಷ ಕೋಟಿ ರೂಪಾಯಿ. ಅರ್ಥಾತ್ 20 ಸಾವಿರ ಬಿಲಿಯನ್ ರೂ. ಒಟ್ಟು ಹದಿನಾಲ್ಕು ಅಂಖ್ಯೆಗಳಿರುವ ಈ ಸಂಖ್ಯೆ ಈಗ ಭಾರತದಲ್ಲಿ ಪರಿಚಿತ. ಪ್ರಧಾನ ಮಂತ್ರಿ ಮೋದಿಯ ಹೆಸರು ಮತ್ತು ಅವರ ಬಾಯಿಯಿಂದ ಉದುರಿದ, ಈ ‘ಸಂಖ್ಯಾಮುತ್ತು’, ಇವೆರಡರಲ್ಲಿ ಯಾವುದು ಹೆಚ್ಚು ಪರಿಚಿತ ಅಂತ ಖಚಿತವಾಗಿ ಹೇಳಲಾಗದು. ಆದರೆ ಒಂದಂತೂ ಖಚಿತ. ಸದ್ಯ ದೇಶದಲ್ಲಿ ಮೋದಿಯ ಹೆಸರಿನೊಂದಿಗೆ ಜನಪ್ರಿಯತೆಯಲ್ಲಿ ಪೈಪೋಟಿ ನೀಡಬಲ್ಲದ್ದು ಅಂದರೆ ಈ ಸಂಖ್ಯೆ ಮಾತ್ರ – 20 ಲಕ್ಷ ಕೋಟಿ ರೂಪಾಯಿ. ಎರಡರ ಮುಂದೆ ಹದಿಮೂರು ಸೊನ್ನೆಗಳು.
ಹೌದು, ಪ್ರಧಾನ ಮಂತ್ರಿಯವರು ಕೊರೊನ ಪರಿಹಾರಕ್ಕೆ 20 ಲಕ್ಷ ಕೋಟಿ ಪ್ಯಾಕೇಜ್ ಎಂದಾಗ ಮೊದಲಿಗೆ ಮೂಡಿದ ಕುತೂಹಲ ಇಷ್ಟೊಂದು ಕೋಟಿಯನ್ನು ನಮೂದಿಸಲು ಎಷ್ಟು ಸೊನ್ನೆಗಳು ಬೇಕು ಅಂತ. ಈಗ ಆ ಕುತೂಹಲ ತಣಿದಿದೆ. ಈಗಿನ ಕುತೂಹಲ ಈ ಹದಿಮೂರು ಸೊನ್ನೆಗಳಲ್ಲಿ ಸೊನ್ನೆಗಳೆಷ್ಟು ಅಂತ. ದಿನ ಕಳೆದಂತೆ ಈ ಕುತೂಹಲಕ್ಕೆ ಕೂಡಾ ಉತ್ತರ ದೊರೆಯುತ್ತಿದೆ. ಅರ್ಥಾತ್ 20 ಲಕ್ಷ ಕೋಟಿಯಲ್ಲಿ ಕೇವಲ ಹದಿಮೂರಲ್ಲ, ಭಾರೀ ಸಂಖ್ಯೆಯ ‘ಸೊನ್ನೆ’ಗಳಿವೆ ಅಂತ ಸ್ಪಷ್ಟವಾಗುತ್ತಿದೆ. ಆ ದಿನ ಟೆಲಿಗ್ರಾಫ್ ಶೀರ್ಷಿಕೆಯಲ್ಲಿ ಒಂದರ ಪಕ್ಕ ಒಂದರಂತೆ ಜೋಡಿಸಿದ್ದ ಸೊನ್ನೆಗಳನ್ನು ಕಲಾತ್ಮಕವಾಗಿ ನೋಡಿದಾಗ ರೈಲು ಬಂಡಿಯೊಂದರ ಚಕ್ರಗಳನ್ನು ನೋಡಿದ ಹಾಗೆ ಕಾಣುತಿತ್ತು. ಈಗ ನೋಡಿದರೆ ಆ ಸಂಖ್ಯೆಯ ಒಕ್ಕಣೆ ಅಂದು ಹಾಗೆ ಒಂಥರಾ ರೈಲಿನಂತೆ ಕಂಡದ್ದು ಕೇವಲ ಕಲಾತ್ಮಕತೆಯೂ ಅಲ್ಲ, ಕಾಕತಾಳೀಯವೂ ಅಲ್ಲ. ರೈಲಿನ ಸಂಕೇತ ಸಂಕೇತ ಪ್ರಧಾನ ಮಂತ್ರಿಯವರ ಘೋಷಣೆಗೆ ಸರಿಯಾಗಿ ಅನ್ವಯಿಸುತ್ತದೆ.

ಸರಕಾರವೊಂದು ಭರವಸೆಯ ರೂಪದಲ್ಲಿ ಮುಂದಿಡುವ ಎಲ್ಲಾ ಅಂಕೆ ಸಂಖ್ಯೆಗಳನ್ನೂ ಗುಮಾನಿಯಿಂದಲೇ ನೋಡಬೇಕು ಎನ್ನುವುದು ಜಾಗತಿಕ ಸತ್ಯ. ಅದರಲ್ಲೂ ಈ ವಿಚಾರದಲ್ಲಿ ಭಾರತದ ಈಗಿನ ಕೇಂದ್ರ ಸರಕಾರದ ಈ ವರೆಗಿನ ಚರಿತ್ರೆ ಎಲ್ಲರಿಗೂ ತಿಳಿದದ್ದೇ. ಭಾರತ ಒಂದು ಅಭಿವೃದ್ಧಿ ಶೀಲ ಬಡ ರಾಷ್ಟ್ರವಾಗಿದ್ದಾಗ್ಯೂ ಅದರ ಅಧಿಕೃತ ಅಂಕೆ ಸಂಖ್ಯೆಗಳಿಗೆ ಒಂದು ರೀತಿಯ ಜಾಗತಿಕ ಮನ್ನಣೆ ಮತ್ತು ಸ್ವೀಕಾರಾರ್ಹತೆ ಇತ್ತು. ಈ ಸರಕಾರದ ಅವಧಿಯಲ್ಲಿ ಇದು ಬಹುತೇಕ ಕಳೆದು ಹೋಗಿದೆ. ಸರಕಾರ ತನ್ನ ಅಧೀನ ಸಂಸ್ಥೆಗಳು ಕಲೆಹಾಕಿದ ಅಧಿಕೃತ ಅಂಕಿ ಅಂಶಗಳನ್ನೇ ಅಡಗಿಸಿಡುವುದು, ಆರ್ಥಿಕತೆಗೆ ಸಂಬಂದಿಸಿದ ಮೂಲಭೂತ ಅಂಶಗಳಾದ ರಾಷ್ಟ್ರೀಯ ವರಮಾನ ಇತ್ಯಾದಿಗಳನ್ನು ಲೆಕ್ಕ ಹಾಕುವಲ್ಲಿ ಗೊಂದಲ ನಿರ್ಮಿಸುವುದು, ಬಜೆಟ್ ನಲ್ಲಿ ಮಂಡಿಸಲಾದ ಅಂಕಿ ಅಂಶಗಳನ್ನೇ ಏರುಪೇರು ಮಾಡುವುದು ಇತ್ಯಾದಿಗಳೆಲ್ಲಾ ಹೋದ ಆರು ವರ್ಷಗಳಿಂದ ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ 20 ಲಕ್ಷ ಕೋಟಿ ಅಂತ ಘೋಷಣೆ ಆದಾಗಲೇ ಹಲವರಿಗೆ ಅದನ್ನು ಹೇಗೆ ಸ್ವೀಕರಿಸಬೇಕು ಎನ್ನುವುದು ತಿಳಿಯದಾಗಿತ್ತು. ಮರುದಿನದಿಂದ ಕೇಂದ್ರ ವಿತ್ತ ಮಂತ್ರಿಯವರು ‘ಪ್ಯಾಕೇಜ್’ ಅನಾವರಣ ಗೊಳಿಸಿದಾಗ ಒಟ್ಟು ಘೋಷಣೆಯಲ್ಲಿ ‘ಸೊನ್ನೆ’ಗಳೆಷ್ಟು ಎನ್ನುವ ಸತ್ಯ ಗೋಚರಿಸಿದ್ದು. ಎಲ್ಲಿಯ ವರೆಗೆ ಅಂತೀರಾ? ಒಂದು ಉದಾಹರಣೆ ಗಮನಿಸಿ. ಸಾಮಾನ್ಯವಾಗಿ ವರಮಾನ ತೆರಿಗೆಯನ್ನು ಸರಾಸರಿ ಲೆಕ್ಕ ಹಾಕಿ ಸಂಬಳದಿಂದ ಕಡಿತಗೊಳಿಸಲಾಗುತ್ತದೆಯಷ್ಟೆ. ಅದರಲ್ಲಿ, ಅಕಸ್ಮಾತ್ತಾಗಿ ಹೆಚ್ಚು ಕಡಿತವಾಗಿದ್ದರೆ ಅದನ್ನು ವರಮಾನ ತೆರಿಗೆ ಇಲಾಖೆ ಮತ್ತೆ ಹಿಂತಿರುಗಿಸುತ್ತದೆ. ಹೋದ ವರ್ಷ ಹಾಗೆ ಹಿಂತಿರುಗಿಸಲು ಬಾಕಿ ಇದ್ದ ಮೊತ್ತವನ್ನು ಈಗ ಬಿಡುಗಡೆ ಗೊಳಿಸಿ ಅದನ್ನೂ ಇಪ್ಪತ್ತು ಲಕ್ಷ ಕೋಟಿಯಲ್ಲಿ ಸೇರಿಸಲಾಗಿದೆ!
ಹುಡುಕುತ್ತಾ ಹೋದರೆ ಇಂತಹ ಹಲವಾರು ಕಣ್ಣುಕಟ್ಟು ಲೇಖಾಚಾರಗಳನ್ನು ಈ ಪ್ಯಾಕೇಜ್‍ನಲ್ಲಿ ಸೇರಿಸಲಾಗಿದೆ. ಆರಂಭದಲ್ಲಿ ಈ ಪ್ಯಾಕೇಜ್ ದೇಶದ ಒಟ್ಟು ವರಮಾನದ ಶೇಕಡಾ ಹತ್ತರಷ್ಟು ಅಂತ ಡಂಗುರ ಸಾರಿದ್ದು, ಈಗ ನೋಡಿದರೆ ಅದು ಶೇಕಡಾ ಒಂದನ್ನೂ ಮೀರುವುದಿಲ್ಲ ಅಂತ ಕೆಲವರ ಲೆಕ್ಕಾಚಾರ. ಇನ್ನು ಕೆಲವು ಲೆಕ್ಕಾಚಾರದ ಪ್ರಕಾರ ಒಟ್ಟು ಪ್ಯಾಕೇಜ್ 60,000 ಕೋಟಿ ದಾಟುವುದಿಲ್ಲ. ಅರ್ಥಶಾಸ್ತ್ರಜ್ಞರು ಕಡಿಮೆ ಎಂದರೆ ದೇಶದ ಒಟ್ಟು ವರಮಾನದ ಶೇಕಡಾ ಐದರಷ್ಟನ್ನಾದರೂ ಅರ್ಥವ್ಯವಸ್ಥೆಯ ಪುನರ್ನಿರ್ಮಾಣಕ್ಕಾಗಿ ಖರ್ಚುಮಾಡಬೇಕು ಅಂತ ಹೇಳುತ್ತಾ ಬಂದಿದ್ದಾರೆ. ಯಾವುದೇ ಸರಕಾರಕ್ಕಾಗಲೀ ಇದೊಂದು ಸವಾಲು ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ಇಂತಹ ವಿಚಾರದಲ್ಲೂ ನಾಜೂಕಾಗಿ ಸುಳ್ಳು ಹೇಳುವ ಹಳೆಯ ಚಾಳಿಯನ್ನೇ ಮುಂದುವರಿಸಬೇಕೇ? ಅಪ್ಪಟ ಸುಳ್ಳುಗಳು, ಅರ್ಧ ಸತ್ಯಗಳು ಮತ್ತು ಅತಿರಂಜಿತ ಸತ್ಯಗಳನ್ನೇ ಬಳಸಿಕೊಂಡು ಜನರನ್ನು ಮಂತ್ರಮುಗ್ದಗೊಳಿಸುವ ಆಡಳಿತ ಮಾದರಿಯ ಮುಂದುವರಿದ ಭಾಗವಾಗಿ ಕೋರನ ಪರಿಹಾರ ಪ್ಯಾಕೇಜ್ ನಮ್ಮ ಮುಂದೆ ಇದೆ. ಆದ ಕಾರಣ ಈಗ ದೇಶ ಹದಿಮೂರು ಸೊನ್ನೆಗಳಲ್ಲಿ ‘ಸೊನ್ನೆ’ ಗಳೆಷ್ಟು ಎನ್ನುವ ಪ್ರಶ್ನೆ ವಿಶೇಷ ಅರ್ಥ ಪಡೆದುಕೊಂಡಿರುವುದು..

ಸುಳ್ಳುಗಳದ್ದು, ಅಂಕೆ-ಸಂಖ್ಯೆಯ ಮಿಥ್ಯೆಗಳದ್ದು, ಕೊಟ್ಟದ್ದೆಷ್ಟು-ಬಿಟ್ಟದ್ದೆಷ್ಟು ಎನ್ನುವ ಗೊಂದಲಗಳದ್ದೆಲ್ಲಾ ಒಂದು ಕತೆ. ಆದರೆ ಅಷ್ಟೇ ಅಲ್ಲ. ಹದಿಮೂರು ಸೊನ್ನೆಗಳ ಕತೆಯಲ್ಲಿ ಗಮನಿಸಬೇಕಾದ ಇನ್ನಷ್ಟೂ ಅಂಶಗಳಿವೆ. ಕೇಳಬೇಕಾದ ಇನ್ನಷ್ಟೂ ಪ್ರಶ್ನೆಗಳಿವೆ. ಮುಖ್ಯವಾದ ಒಂದು ಪ್ರಶ್ನೆ ಎಂದರೆ ಇಷ್ಟೊಂದು ದೊಡ್ಡ ಮೊತ್ತದ ಜನರ ಹಣವನ್ನು ಅರ್ಥವತ್ತಾಗಿ ಖರ್ಚು ಮಾಡಿ ಆರ್ಥಿಕತೆಯನ್ನು ಪುನರಾರಚಿಸುವ ಸವಾಲನ್ನು ಈ ಸರಕಾರ ನಿರ್ವಹಿಸಲು ಸಾಧ್ಯ ಎಂದು ನಾವು ನಂಬಬಹುದೇ? ಈ ಮೊತ್ತದಲ್ಲಿ ಅರ್ಧದಷ್ಟು, ಅಲ್ಲ ಕಾಲು ಭಾಗದಷ್ಟೇ ಸತ್ಯ ಎಂದಾದರೂ ಅದೊಂದು ಬೃಹತ್ ಮೊತ್ತ. ಅದನ್ನು ಸರಕಾರ ಕಾಲಮಿತಿಯೊಳಗೆ ಖರ್ಚು ಮಾಡಿ, ಮೊದಲೇ ಸೊರಗಿದ್ದು, ಕೊರೋನಾದಿಂದಾಗಿ ಮತ್ತಷ್ಟೂ ಹದಗೆಟ್ಟ ಅರ್ಥವ್ಯವಸ್ಥೆಯೊಂದನ್ನು ಸುಸ್ಥಿತಿಗೆ ತರಬೇಕು. ಕೋಟಿ ಕೋಟಿ ಜನರ ಮುರಿದ ಬದುಕನ್ನು ಮತ್ತೆ ಕಟ್ಟಿಕೊಳ್ಳಲು ನೆರವಾಗಬೇಕು. ಜರ್ಜರಿತವಾಗಿ ಹೋಗಿರುವ ಅತೀ ಪ್ರಮುಖವಾದ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳನ್ನು ಸರಿಹೊಂದಿಸಬೇಕು. ಇವನ್ನೆಲ್ಲ ಮಾಡಲು ಸರಕಾರಕ್ಕೆ ಅಪಾರವಾದ ಕಾರ್ಯ ದಕ್ಷತೆ ಮತ್ತು ಹೃದಯವಂತಿಕೆ ಇರಬೇಕು. ಇಂತಹ ಗುಣಗಳನ್ನು ಈ ಸರಕಾರದಿಂದ ನಿರೀಕ್ಷಿಸಲು ಸಾಧ್ಯವೇ? ನಿಜ, ಒಂದು ಸರಕಾರದ ದಕ್ಷತೆ ಎಷ್ಟಿದೆ ಮತ್ತು ಅದಕ್ಕೆ ಎಷ್ಟು ಮಾನವೀಯತೆ ಇದೆ ಎನ್ನುವುದನ್ನು ಕರಾರುವಕ್ಕಾಗಿ ಲೆಕ್ಕ ಹಾಕಲು ಸಾಧ್ಯವಿಲ್ಲ. ಆದರೆ ಈ ತನಕ ನಮ್ಮ ಕಣ್ಣ ಮುಂದೆ ನಡೆದುಹೋದ ಹಲವಾರು ವಿದ್ಯಮಾನಗಳನ್ನು ಆಧರಿಸಿ ನಾವು ಈ ಕುರಿತಾದ ಒಂದು ನಿರ್ಧಾರಕ್ಕೆ ಬರಲು ಸಾಧ್ಯವಿದೆ. ಹಳೆಯ ವಿಚಾರಗಳನ್ನು ಬದಿಗಿಡೋಣ. ಕೊರೊನ ಕಾಲಿಟ್ಟ ನಂತರದ ವ್ಯವಹಾರಗಳನ್ನು ಗಮನಿಸಿದರೆ ಈ ಸರಕಾರದ ದಕ್ಷತೆ ಮತ್ತು ಮಾನವೀಯ ಸ್ಪಂದನೆಯ ಬಗ್ಗೆ ಭರವಸೆ ಹುಟ್ಟುತ್ತದೆಯೇ?
ಬೇರೇನೂ ಬೇಡ. ಸರಕಾರ ವಲಸೆ ಕಾರ್ಮಿಕರ ವಿಚಾರದಲ್ಲಿ ನಡೆದುಕೊಂಡ ರೀತಿಯನ್ನೇ ಗಮನಿಸೋಣ. ಲಾಕ್ ಡೌನ್ ಘೋಷಣೆ ಆಗುವ ವರೆಗೆ ಈ ದೊಡ್ಡ ಸಂಖ್ಯೆಯ ದುಡಿಯುವ ವರ್ಗದ ಅಸ್ತಿತ್ವದ ಬಗ್ಗೆ ಸರಕಾರಕ್ಕೆ ಗೊತ್ತೇ ಇರಲಿಲ್ಲ. ಗೊತ್ತಿದ್ದರೆ, ಅವರಿಗೊಂದು ವ್ಯವಸ್ಥೆ ಮಾಡುವ ಮೊದಲೇ ಲಾಕ್ ಡೌನ್ ಹೇರುವ ದುಸ್ಸಾಹಸಕ್ಕೆ ಯಾವ ಸರಕಾರವೂ ಮುಂದಾಗುತ್ತಿರಲಿಲ್ಲ. ಅದೇನೋ ಆಗಿ ಹೋಯಿತು ಎನ್ನೋಣ. ಅಜ್ಞಾನವನ್ನು ಅಪರಾಧ ಅಂತ ಹೇಳುವ ಹಾಗಿಲ್ಲ. ಲಾಕ್ ಡೌನ್‍ನ ಆರಂಭದ ಹಂತದಲ್ಲಿ ಅವರೆಲ್ಲಾ ಬೀದಿಗೆ ಬಂದಾಗಲಾದರೂ ಸಮಸ್ಯೆಯ ಅರಿವಾಯಿತಲ್ಲ? ಹಾಗೆ ಅರಿವಾದ ನಂತರ ಈ ಕಾರ್ಮಿಕ ವರ್ಗದವರನ್ನು ಅವರವರ ಊರು ಸೇರುವಂತೆ ವ್ಯವಸ್ಥೆ ಮಾಡಲು ಈ ಸರಕಾರಕ್ಕೆ ಸುಮಾರು 50 ದಿನಗಳ ಅವಧಿ ಇತ್ತು. ಇಷ್ಟು ಸುಧೀರ್ಘ ಅವಧಿಯಲ್ಲೂ ಈ ವಿಚಾರದಲ್ಲಿ ಏನೂ ಮಾಡದೆ ಮತ್ತೆ ಅವರೆಲ್ಲಾ ಅಕ್ಷರಶಃ ಬೀದಿಯಲ್ಲಿರುವಂತ ಸ್ಥಿತಿ ಇನ್ನೂ ಮುಂದುವರಿದಿದೆ. ಅರೆಬರೆ ರೈಲು ವ್ಯವಸ್ಥೆ ಸಮಸ್ಯೆಯನ್ನು ಒಂದು ಸಣ್ಣ ಪ್ರಮಾಣದಲ್ಲೂ ನಿವಾರಿಸಿಲ್ಲ. ಆ ಜನರೆಲ್ಲಾ – ವೃದ್ಧರು ಮಕ್ಕಳು ಎನ್ನದೆ ಸಾವಿರಾರು ಮೈಲು ನಡೆದೇ ಊರು ಸೇರುತ್ತಿದ್ದರೂ, ಗರ್ಭಿಣಿಯರು ಮಾರ್ಗದಲ್ಲೇ ಪ್ರಸವಿಸುತಿದ್ದರೂ ಸರಕಾರ ನಡೆಸುವ ಒಬ್ಬರೇ ಒಬ್ಬರ ಬಾಯಲ್ಲಿ ಒಂದು ಅನುಕಂಪದ ಮಾತು ಬಂದಿದ್ದರೆ ಹೇಳಿ. ಸರಕಾರದ ದಕ್ಷತೆ ಮತ್ತು ಹೃದಯವಂತಿಕೆಗೆ ಇದಕ್ಕಿಂತ ದೊಡ್ಡ ಸಾಕ್ಷಿ ಏನು ಬೇಕು? ಇಷ್ಟೊಂದು ಸ್ಪಷ್ಟವಾಗಿದ್ದ ಸಮಸ್ಯೆಯನ್ನೇ ನಿಭಾಯಿಸಲಾಗದ ಮತ್ತು ಆ ಕುರಿತು ಯಾವ ಪಶ್ಚಾತ್ತಾಪವನ್ನು ಹೊಂದಿರದ ಒಂದು ಸರಕಾರಕ್ಕೆ ಈ ದೇಶದ ಜನರಿಗೆ ಸೇರಿದ ಅಷ್ಟೊಂದು ದೊಡ್ಡ ಮೊತ್ತವನ್ನು ಜವಾಬ್ದಾರಿಯಿಂದ, ದಕ್ಷತೆಯಿಂದ, ಜನಪರವಾಗಿ ಖರ್ಚು ಮಾಡಿ ಸಂಪೂರ್ಣ ಜರ್ಜರಿತವಾಗಿರುವ ಅರ್ಥವ್ಯವಸ್ಥೆಯನ್ನು ಸರಿದಾರಿಗೆ ತರಲು ಸಾಧ್ಯ ಅಂತ ಭರವಸೆ ಇರಿಸುವುದಾದರೂ ಹೇಗೆ? ಒಂದು ಭೀಕರ ಸಂಕಷ್ಟ ಕಾಲದಲ್ಲಿ ಅತ್ಯಂತ ಅಧ್ಯಕ್ಷ, ಅತ್ಯಂತ ಕ್ರೂರ (ವಲಸೆ ಕಾರ್ಮಿಕರ ವಿಚಾರದಲ್ಲಿ ಸರಕಾರದ ನಡವಳಿಕೆ ನೋಡಿದ ನಂತರ ಈ ಸರಕಾರವನ್ನು ಕ್ರೂರ ಎನ್ನದೆ ಇದ್ದರೆ ತಪ್ಪಾಗುತ್ತದೆ) ಮತ್ತು ನಾಚಿಕೆ ಇಲ್ಲದೆ ಸುಳ್ಳು ಹೇಳುವ ಆಡಳಿತ ವ್ಯವಸ್ಥೆಯೊಂದನ್ನು ಹೊಂದುವ ದೌರ್ಭಾಗ್ಯ ಈ ದೇಶಕ್ಕೆ ಬಂದದ್ದು ಇದುವೇ ಮೊದಲಿರಬೇಕು.

ಇಷ್ಟು ಮಾತ್ರವಲ್ಲ. ಕೇಂದ್ರ ಸರಕಾರ ರಾಜ್ಯಗಳು ಆರ್ಥಿಕವಾಗಿ ಸಂಪೂರ್ಣ ನೆಲಕಚ್ಚುವಂತೆ ಮಾಡಿದೆ. ಇದರಿಂದಾಗಿ ಕೇಂದ್ರದ ಬದಲಿಗೆ ರಾಜ್ಯಗಳಾದರೂ ಜನಪರವಾಗಿ ಕೆಲಸ ಮಾಡುವ ಅವಕಾಶ ಇಲ್ಲದಂತೆ ಮಾಡಿದೆ. ಸಂವಿಧಾನ ಕೇಂದ್ರ ಮತ್ತು ರಾಜ್ಯಗಳ ನಡುವೆ ಅಧಿಕಾರ ಹಂಚಿಕೆ ಮಾಡಿದ್ದರ ಹಿಂದಿನ ಒಂದು ಉದ್ದೇಶ ಇವೆರಡರ ಮಧ್ಯೆ ಯಾವುದಾದರೂ ಒಂದು ಅಧಿಕಾರ ದುರುಪಯೋಗ ಪಡಿಸಿಕೊಂಡಾಗ ಇನ್ನೊಂದು ಜನರ ಪರವಾಗಿ ಉಳಿಯಬೇಕು ಎಂಬುದು. ಈ ಸೂತ್ರ ಚಾರಿತ್ರಿಕವಾಗಿ ಕೆಲಸ ಮಾಡಿದ್ದನ್ನು ಕಾಣುತ್ತೇವೆ. ತುರ್ತುಪರಿಸ್ಥಿತಿಯ ಕಾಲದಲ್ಲಿ ಅಂದಿನ ಕೇಂದ್ರ ಸರಕಾರ ಕ್ರೂರವಾಗಿ ವ್ಯವಹರಿಸುತಿತ್ತು. ಆದರೆ ಈ ಕ್ರೌರ್ಯ ಜನರನ್ನು ವಿಶೇಷವಾಗಿ ಭಾದಿಸದಂತೆ ಅಂದಿನ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ನೋಡಿಕೊಂಡಿದ್ದರು. ಕರ್ನಾಟಕವೂ ಸೇರಿದಂತೆ ದಕ್ಷಿಣದ ರಾಜ್ಯಗಳಲ್ಲಿ ಕೇಂದ್ರದಲ್ಲಿ ಆಗ ಆಳ್ವಿಕೆಯಲ್ಲಿದ್ದ ಪಕ್ಷದ ಮುಖ್ಯಮಂತ್ರಿಗಳೇ ಹೀಗೆ ಮಾಡಿದ್ದರು. ಈಗಿನ ಕೇಂದ್ರ ಸರಕಾರ ರಾಜ್ಯ ಸರಕಾರಗಳನ್ನು ಆರ್ಥಿಕವಾಗಿ ಎಷ್ಟೊಂದು ದುರ್ಬಲಗೊಳಿಸಿಬಿಟ್ಟಿದೆ ಎಂದರೆ ಅವುಗಳು ಜನಪರವಾಗಿ ಏನನ್ನೂ ಮಾಡದ ಸ್ಥಿತಿಯಲ್ಲಿವೆ. ಕೇಂದ್ರ ಸರಕಾರ ತಾನು ಮಾಡುವುದಿಲ್ಲ, ರಾಜ್ಯ ಸರಕಾರಗಳನ್ನು ಮಾಡಲು ಬಿಡುವುದಿಲ್ಲ ಎನ್ನುವ ಸ್ಥಿತಿ. ಇದು ಅದರ ಕ್ರೌರ್ಯದ ಇನ್ನೊಂದು ಮುಖ.
ಇಷ್ಟರವರೆಗೆ ಬೇರೆ ಬೇರೆ ಕಾರಣಗಳಿಂದಾಗಿ ಈ ಸರಕಾರ ಮತ್ತು ಅದರ ನಾಯಕತ್ವದ ಸಾಮರ್ಥ ಮತ್ತು ಹೆಚ್ಚುಗಾರಿಕೆಯ ಬಗ್ಗೆ ಜನರಿಗೆ ಏನೋ ರೀತಿಯ ಭರವಸೆ ಇತ್ತು. ಆ ಭರವಸೆಗೆ ಯಾವುದೇ ಆಧಾರ ಇಲ್ಲ ಎನ್ನುವುದು ಕೊರೊನಾ ಕಾಲದಲ್ಲಿ ಸರಕಾರ ತೋರಿದ ನಡವಳಿಕೆಗಳಿಂದಾಗಿ ಸ್ಪಷ್ಟವಾಗುತ್ತದೆ. ಈ ಬಗ್ಗೆ ಜನರ ಭ್ರಮೆ ಮುಂದುವರಿಯಬಹುದು. ಅದು ಬೇರೆ ವಿಚಾರ. ನಿಷ್ಪಕ್ಷಪಾತವಾದ ದೃಷ್ಟಿಯಿಂದ ಕೊರೊನಾನಂತರದ ಆಗುಹೋಗುಗಳನ್ನು ಗಮನಿಸಿದ ಯಾರಿಗೇ ಆಗಲಿ ಈಗಿನ ಕೇಂದ್ರ ಸರಕಾರದ ಸಾಮಥ್ರ್ಯ ಮತ್ತು ನೈತಿಕತೆಯ ವಿಚಾರದಲ್ಲಿ ಭರವಸೆ ಉಳಿಯಲು ಸಾಧ್ಯವಿಲ್ಲ. ಇಷ್ಟು ದೊಡ್ಡ ಮೊತ್ತದ ಜನರ ಹಣವನ್ನು ಈ ಅದಕ್ಷ ಮತ್ತು ಕ್ರೂರ ಸರಕಾರದ ಸುಪರ್ಧಿಗೆ ವಹಿಸಿದರೆ ಅದೊಂದು ಚಾರಿತ್ರಿಕವಾದ ಮೂರ್ಖತನವಾದೀತು.
ಇಂತಹದ್ದೊಂದು ಪರಿಸ್ಥಿತಿಯಲ್ಲಿ ಏನು ಮಾಡಬಹುದು ಎನ್ನುವುದನ್ನು ಸುಪ್ರೀಂ ಕೋರ್ಟ್‍ನ ಮಾಜಿ ನ್ಯಾಯಾಧೀಶರಾದ ಮಾರ್ಕಂಡೇಯ ಕಟ್ಜು ಅವರು ಇತ್ತೀಚಿಗೆ ಹೇಳಿದ್ದರು. ಅವರ ಪ್ರಕಾರ ಈಗಿನ ನಾಯಕತ್ವಕ್ಕೆ ದೇಶದ ಮುಂದಿರುವ ಅಭೂತಪೂರ್ವ ಸವಾಲುಗಳನ್ನು ಅರ್ಥ ಮಾಡಿಕೊಳ್ಳುವ ಮತ್ತು ಅದನ್ನು ಸಮರ್ಥವಾಗಿ ಎದುರಿಸಬಲ್ಲ ಯಾವ ಗುಣಲಕ್ಷಣಗಳೂ ಇಲ್ಲ. ಆದುದರಿಂದ ಈಗ ಸರ್ವ ಪಕ್ಷಗಳೂ ಸೇರಿದ ಒಂದು ರಾಷ್ಟ್ರೀಯ ಸರ್ಕಾರವೊಂದು ಕೇಂದ್ರದಲ್ಲಿ ಅಧಿಕಾರ ವಹಿಸಬೇಕಿದೆ. ಈಗಿನ ಆಗು-ಹೋಗುಗಳನ್ನು ಗಮನಿಸುತ್ತಿದ್ದರೆ ಈ ಸಲಹೆ ಅತ್ಯಂತ ಸಾಧುವೂ, ಸಮಯೋಚಿತವೂ ಆಗಿದೆ ಅನ್ನಿಸುತ್ತದೆ. ಎರಡನೆಯ ಮಾಹಾ ಯುದ್ಧದ ಕಾಲದಲ್ಲಿ ಇಂಗ್ಲೆಂಡ್‍ನ ಪ್ರಧಾನಮಂತ್ರಿ ವಿನ್ಸ್ಟನ್ ಚರ್ಚಿಲ್ ಇದನ್ನು ಮಾಡಿದ್ದರು. ಭಾರತದಲ್ಲಿ ಈಗ ಇದನ್ನು ಮಾಡದೆ ಹೋದರೆ, ಹದಿಮೂರು ಸೊನ್ನೆಗಳ ಕತೆ ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆಯಾಗುವ ಎಲ್ಲಾ ಅಪಾಯಗಳು ಇವೆ. ನಿನ್ನೆ ಮೊನ್ನೆಯವರೆಗೆ ಸರಕಾರದ ಬಹುಪಾರಕು ಕೂಗುತಿದ್ದವರೂ ಹದಿಮೂರು ಸೊನ್ನೆಗಳಲ್ಲಿ ಇರುವ ‘ಸೊನ್ನೆ’ಗಳನ್ನು ನೋಡಿ ಬೆಚ್ಚಿದ್ದಾರೆ. ಪರಾಕು ಹೇಳುವುದನ್ನು ನಿಲ್ಲಿಸಿ ಹಿಡಿಶಾಪ ಹಾಕುತ್ತಿದ್ದಾರೆ. ಕೊರೊನಾ ನಂತರದ ಆರ್ಥಿಕ ಬಿಕ್ಕಟ್ಟನ್ನು ನಿಭಾಯಿಸಲು ಸರ್ವಪಕ್ಷಗಳ ರಾಷ್ಟ್ರೀಯ ಸರಕಾರವೊಂದು ಅಸ್ತಿತ್ವಕ್ಕೆ ಬರಬೇಕೆಂದು ಆಗ್ರಹಿಸಿ ಒಂದು ಚಳವಳಿಯನ್ನು ಈಗ ಹುಟ್ಟು ಹಾಕಬೇಕಿದೆ.


