ನರೇಂದ್ರ ಮೋದಿ ಸರ್ಕಾರವು ರಾಜ್‌ಕೋಟ್ ಮೂಲದ ಸಂಸ್ಥೆಯಿಂದ 5,000 ವೆಂಟಿಲೇಟರ್‌ಗಳನ್ನು ಖರೀದಿಸುತ್ತಿದೆ. ಆದರೆ ಈಗಾಗಲೇ ಅದೇ ಕಂಪನಿಯಿಂದ ತರಿಸಿಕೊಂಡ ವೆಂಟಿಲೇಟರ್ ಗಳು ಅಹಮದಾಬಾದ್‌ನ ಅತಿದೊಡ್ಡ ಕೋವಿಡ್-19 ಆಸ್ಪತ್ರೆಯಲ್ಲಿ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ, ಅವು ವೆಂಟಿಲೇಟರ್‌ಗಳೆ ಅಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಅಷ್ಟೇ ಅಲ್ಲದೆ, ಈ ವೆಂಟಿಲೇಟರ್ ತಯಾರಿಕ ಕಂಪನಿಯ ಪ್ರಸ್ತುತ ಮತ್ತು ಮಾಜಿ ಪ್ರವರ್ತಕರು ಬಿಜೆಪಿಯ ಉನ್ನತ ನಾಯಕರೊಂದಿಗೆ ನಿಕಟ ಒಡನಾಟವನ್ನು ಹೊಂದಿರುವುದು ಬೆಳಕಿಗೆ ಬಂದಿದೆ. ಇದೇ ಕಂಪನಿಯು ಈ ಹಿಂದೆ ಪ್ರಧಾನಿ ಮೋದಿಗೆ ವಿವಾದಾತ್ಮಕ ದುಬಾರಿ ಸೂಟ್‌ನ ಉಡುಗೊರೆ ನೀಡಿತ್ತು ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ.
ಗುಜರಾತ್ ಸರ್ಕಾರದ ಪ್ರಧಾನ ಆರೋಗ್ಯ ಕಾರ್ಯದರ್ಶಿ ಜಯಂತಿ ರವಿ ಅವರ ಪ್ರಕಾರ ವೆಂಟಿಲೇಟರ್ ತರಿಸಿಕೊಳ್ಳುವ ಕೆಲಸವನ್ನು ಸರ್ಕಾರಿ ಸ್ವಾಮ್ಯದ ಎಚ್‌ಎಲ್‌ಎಲ್ ಲೈಫ್‌ಕೇರ್ ಮೂಲಕ ಮಾಡಲಾಗುತ್ತಿದೆ. ಈ ತಿಂಗಳ ಆರಂಭದಲ್ಲಿ 50,000 ಭಾರತದಲ್ಲಿ ತಯಾರಿಸಿದ ವೆಂಟಿಲೇಟರ್‌ಗಳ ಖರೀದಿಗೆ 2,000 ಕೋಟಿ ರೂ ಘೋಷಿಸಿರುವುದರಿಂದ ಇದಕ್ಕೆ ಪಿಎಂ ಕೇರ್ಸ್ ಫಂಡ್ ಹಣಕಾಸಿನ ಸಂಪನ್ಮೂಲಗಳಿಂದ ಖರೀದಿಗೆ ಬೆಂಬಲ ದೊರೆಯುವ ಸಾಧ್ಯತೆಯಿದೆ ಎಂದಿದ್ದಾರೆ.
ಕಳೆದ ಕೆಲವು ವಾರಗಳಲ್ಲಿ, ಜ್ಯೋತಿ ಸಿಎನ್‌ಸಿ ಆಟೊಮೇಷನ್ ಲಿಮಿಟೆಡ್ ಅಹಮದಾಬಾದ್ ಸಿವಿಲ್ ಆಸ್ಪತ್ರೆಗೆ ಉಚಿತವಾಗಿ ಸರಬರಾಜು ಮಾಡಿದ ನೂರಾರು ‘ಮೇಡ್ ಇನ್ ಇಂಡಿಯಾ’ ವೆಂಟಿಲೇಟರ್‌ಗಳು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ ಎಂದು ಅಲ್ಲನ ವೈದ್ಯರು ದೂರಿದ್ದಾರೆ. ಇದರ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಪರಕ್ರಮ್ ಸಿನ್ಹ ಜಡೇಜಾರವರು ಮುಖ್ಯಮಂತ್ರಿ ವಿಜಯ್ ರೂಪಾನಿಗೆ ತೀರಾ ಹತ್ತಿರದ ಗೆಳೆಯರಾಗಿದ್ದಾರೆ.
ಅಹಮದಾಬಾದ್ ಮಿರರ್ ಮೊದಲ ಬಾರಿಗೆ ಮೇ 19 ರಂದು ವರದಿ ಮಾಡಿದಂತೆ, ಈ “ವೆಂಟಿಲೇಟರ್‌ಗಳು” COVID-19 ರೋಗಿಗಳ ಮೇಲೆ ಬಳಸಿದಾಗ ಅಸಮರ್ಪಕವೆಂದು ಸಾಬೀತಾಗಿದೆ. ಅಹಮದಾಬಾದ್ ಸಿವಿಲ್ ಆಸ್ಪತ್ರೆಯಲ್ಲಿ ಇವುಗಳನ್ನು ಬಳಸದಂತೆ ತುತು ಎಚ್ಚರಿಕೆ ನೀಡಲಾಗಿದೆ ವೈದ್ಯರು ತಿಳಿಸಿದ್ದಾರೆ. ಅಹಮದಾಬಾದ್ ನಗರವು ಅತಿ ಹೆಚ್ಚು ಕೊರೊನಾ ವೈರಸ್ ಸಾವು ಕಂಡ ನಗರಗಳಲ್ಲಿ ಒಂದಾಗಿದೆ.
‘ಧಮನ್ -1’ ಎಂಬ ಹೆಸರಿನ ವೆಂಟಿಲೇಟರ್ ಯಂತ್ರಗಳನ್ನು ಗುಜರಾತ್ ಸರ್ಕಾರವು ಅತ್ಯುತ್ಸಾಹದಿಂದ ಉತ್ತೇಜಿಸಿತು ಮತ್ತು ಅದನ್ನು “ಅದ್ಭುತ ಸಾಧನೆ” ಎಂದು ಕರೆದಿತ್ತು. ಈ ಅಗ್ಗದ ವೆಂಟಿಲೇಟರ್ ಅನ್ನು 10 ದಿನಗಳಲ್ಲಿ ಉತ್ಪಾದಿಸಲಾಗಿದೆ ಎಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಬಲವಾಗಿ ಅನುಮೋದಿಸಿದ್ದಾರೆ. ಆದರೆ ರೂಪಾನಿಯ ಉತ್ಸಾಹಕ್ಕೆ ವ್ಯತಿರಿಕ್ತವಾಗಿ ಗುಜರಾತ್‌ನ ಸರ್ಕಾರಿ ವೈದ್ಯರು ಯಂತ್ರಗಳನ್ನು ದೂರಿದ್ದಾರೆ.
“ಅದೃಷ್ಟವಶಾತ್, ಇಲ್ಲಿಯವರೆಗೆ, ನಾವು ಈ ವೆಂಟಿಲೇಟರ್‌ಗಳನ್ನು (ಜ್ಯೋತಿ ಸಿಎನ್‌ಸಿ ತಯಾರಿಸಿದ) ಕೆಲವೇ ಸಂದರ್ಭಗಳಲ್ಲಿ ಬಳಸಿದ್ದೇವೆ, ಏಕೆಂದರೆ ಉನ್ನತ ಮಟ್ಟದ ವೆಂಟಿಲೇಟರ್‌ಗಳು ನಮ್ಮೊಂದಿಗೆ ಸಾಕಷ್ಟು ಸಂಖ್ಯೆಯಲ್ಲಿ ಲಭ್ಯವಿವೆ. ಧಮನ್ -1 ಉನ್ನತ ಮಟ್ಟದ ವೆಂಟಿಲೇಟರ್‌ಗಳಿಗೆ ಸಮನಾಗಿಲ್ಲ. ಆದರೆ ನಿಮ್ಮ ಕೈಯಲ್ಲಿ ಬೇರೆ ಏನೂ ಇಲ್ಲದಿದ್ದಾಗ ಇದನ್ನು ತೀವ್ರ ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಬಳಸಬಹುದು ”ಎಂದು ಸಿವಿಲ್ ಆಸ್ಪತ್ರೆಯ ಅರಿವಳಿಕೆ ವಿಭಾಗದ ಮುಖ್ಯಸ್ಥ ಶೈಲೇಶ್ ಷಾ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಈವರೆಗೆ 900 ವೆಂಟಿಲೇಟರ್‌ಗಳನ್ನು ರಾಜ್ಯದಲ್ಲಿ ಅಳವಡಿಸಲಾಗಿದ್ದು, ಈ ಪೈಕಿ ಕೇವಲ 230 ಅಹಮದಾಬಾದ್ ಸಿವಿಲ್ ಆಸ್ಪತ್ರೆಯಲ್ಲಿವೆ. ಈ ವೆಂಟಿಲೇಟರ್‌ಗಳಾಗಿ ರವಾನಿಸುವ ಮೂಲಕ ರಾಜ್ಯ ಸರ್ಕಾರವು ಉದ್ದೇಶಪೂರ್ವಕವಾಗಿ ಜನರ ಜೀವಕ್ಕೆ ಅಪಾಯವನ್ನುಂಟುಮಾಡಿದೆ ಎಂದು ಆರೋಪಿಸಿರುವ ಪ್ರತಿಪಕ್ಷ ಕಾಂಗ್ರೆಸ್ ಈ ಬಗ್ಗೆ ನ್ಯಾಯಾಂಗ ತನಿಖೆಗೆ ಒತ್ತಾಯಿಸಿದೆ. ಆಸ್ಪತ್ರೆಯಲ್ಲಿ ಸಂಭವಿಸಿದ 300 ಕ್ಕೂ ಹೆಚ್ಚು ಸಾವುಗಳಲ್ಲಿ ಈ ವೆಂಟಿಲೇಟರ್‌ಗಳನ್ನು ಹಾಕಿದ ರೋಗಿಗಳ ಸಂಖ್ಯೆ ಎಷ್ಟು ಎಂದು ಅದು ಪ್ರಶ್ನಿಸಿದೆ.
ಕಳೆದ ಶುಕ್ರವಾರ ಬಿಬಿಸಿ ಪತ್ರಕರ್ತರೊಬ್ಬರು ತಮ್ಮ ಸೋದರ ಮಾವ ಅಹಮದಾಬಾದ್‌ನ ಸಿವಿಲ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅವರಿಗೆ ಧಮನ್ -1 ವೆಂಟಿಲೇಟರ್ ಬಳಸಲಾಗಿತ್ತೆ ಎಂದು ಪ್ರಶ್ನಿಸಿದ್ದಾರೆ.
My jijai died in #Ahmedabad #Civilhospital. I have 3 questions for @CMOGuj 1- Deapite his death in the morning of 16-5, why were we not informed till evening. 2-Was he in Dhaman-1, 3)Who stole phone & watch 4m his body. @PMO @Nitinbhai_Patel @pkumarias @vijayrupanibjp
— Roxy Gagdekar (@RoxyChhara) May 21, 2020
ಏಪ್ರಿಲ್ 5 ರಂದು ರೂಪಾನಿ ಅದನ್ನು ಪ್ರಾರಂಭಿಸುವ ಮೊದಲು ಈ ವೆಂಟಿಲೇಟರ್‌ಗಳಿಗೆ ಭಾರತದ ಡ್ರಗ್ ಕಂಟ್ರೋಲರ್ ಜನರಲ್‌ನಿಂದ ಪರವಾನಗಿ ಇಲ್ಲ ಮತ್ತು ಅದನ್ನು ಒಬ್ಬ ವ್ಯಕ್ತಿಯನ್ನು ಮಾತ್ರ ಪರೀಕ್ಷಿಸಿದ ನಂತರ ಸ್ಥಾಪಿಸಲಾಗಿದೆ ಎಂದು ಅಹಮದಾಬಾದ್ ಮಿರರ್ ವರದಿ ಮಾಡಿದೆ.
ವಿವಾದ ಭುಗಿಲೆದ್ದ ನಂತರ ಮೇ 20 ರಂದು ಪುದುಚೇರಿ ಮುಖ್ಯಮಂತ್ರಿ ವಿ.ನಾರಾಯಣಸಾಮಿ ತಮ್ಮ ಕೇಂದ್ರಾಡಳಿತ ಪ್ರದೇಶವು ಧಮನ್ -1 ಯಂತ್ರಗಳ ಖರೀದಿ ಆದೇಶಗಳನ್ನು ರದ್ದುಗೊಳಿಸುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.
Lot of controversy has arisen about the functioning of #Dhaman1 . By-pat mechine from #Gujarat Rajkot.
I discussed with Hon’ble Health Minister, Govt of #Puducherry . We will cancel the order Letter has been sent to them to that effect.— V.Narayanasamy (@VNarayanasami) May 20, 2020
ರಾಜಕೀಯ ಸಂಬಂಧಗಳ ಬಗ್ಗೆ ಪ್ರಶ್ನೆಗಳು
ತನ್ನದೇ ವೈದ್ಯರು ಋಣಾತ್ಮಕ ಪ್ರತಿಕ್ರಿಯೆ ನೀಡಿದರೂ ಸಹ, ಗುಜರಾತ್ ಸರ್ಕಾರವು ಜ್ಯೋತಿ ಸಿಎನ್‌ಸಿಯ ವಿವಾದಾತ್ಮಕ ಯಂತ್ರಗಳನ್ನು ಬಲವಾಗಿ ಬೆಂಬಲಿಸಿದ್ದು ಏಕೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ. ಇದಕ್ಕೆ ಉತ್ತರವು ಸಂಸ್ಥೆಯ ಮೂಲ ಮತ್ತು ಪ್ರಸ್ತುತ ಪ್ರವರ್ತಕರು ಮುಖ್ಯಮಂತ್ರಿ ವಿಜಯ್ ರೂಪಾನಿ ಮತ್ತು ಪ್ರಧಾನಿ ನರೇಂದ್ರ ಮೋದಿಯಂತಹ ಉನ್ನತ ರಾಜಕಾರಣಿಗಳ ನಡುವಿನ ರಾಜಕೀಯ ಸಂಪರ್ಕಗಳಲ್ಲಿ ಅಡಗಿರಬಹುದು ಎಂದು ಕೆಲವರು ಟೀಕಿಸಿದ್ದಾರೆ.
“ರಾಜ್‌ಕೋಟ್‌ನ ಕೈಗಾರಿಕೋದ್ಯಮಿ ಕೇವಲ 10 ದಿನಗಳಲ್ಲಿ ವೆಂಟಿಲೇಟರ್‌ಗಳನ್ನು ತಯಾರಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಘೋಷಿಸಲು ನನಗೆ ಸಂತೋಷವಾಗಿದೆ. ಇದನ್ನು ಶನಿವಾರದಿಂದ ರೋಗಿಗಳ ಮೇಲೆ ಬಳಸಲಾಗುತ್ತಿದೆ ” ಎಂದು ರೂಪಾನಿಯವರು ಹೇಳಿದ್ದನ್ನು ಫೈನಾನ್ಷಿಯಲ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಜ್ಯೋತಿ ಸಿಎನ್‌ಸಿಯೊಂದಿಗೆ ಸಂಬಂಧಿಸಿರುವ ವ್ಯಾಪಾರ ಕುಟುಂಬಗಳಲ್ಲಿ ಒಂದಾದ ವಿರಾನಿಸ್ ಒಂದು ನಿರ್ದಿಷ್ಟ ಮಟ್ಟದ ಖ್ಯಾತಿಯನ್ನು ಅಥವಾ ಕುಖ್ಯಾತಿಯನ್ನು ಸಾಧಿಸಿದೆ – ಅದರ ಪ್ರಮುಖ ಸದಸ್ಯನು ವಿವಾದಾತ್ಮಕವಾಗ ನರೇಂದ್ರ ಮೋದಿ ಎಂದು ಬರೆದಿದ್ದ ದುಬಾರಿ ಸೂಟ್ ಅನ್ನು ನಮ್ಮ ಪ್ರಧಾನಿಗಳಿಗೆ ಉಡುಗೊರೆಯಾಗಿ ನೀಡಿದ್ದರು. ಅದನ್ನು ಮೋದಿಯವರು 2015ರಲ್ಲಿ ಬರಾಕ್ ಜೊತೆಗಿನ ಕಾರ್ಯಕ್ರಮದಲ್ಲಿ ಧರಿಸಿದ್ದರು. ಈ ಮೊಕದ್ದಮೆಯನ್ನು ಅದನ್ನು ಉದ್ಯಮಿ-ಅಭಿಮಾನಿಗಳ ಉಡುಗೊರೆ ಎಂದು ವಿವರಿಸಲಾಯಿತು. ಈ ವಿಚಾರ ತೀವ್ರ ಚರ್ಚೆಗೆ ಬಂದ ನಂತರ ಮೋದಿಯವರು ಕಾರ್ಪೊರೇಟ್ ಸ್ನೇಹಿತರ ಸಹಾಯದಿಂದ ದುಬಾರಿ ಜೀವನಶೈಲಿ ಬೆಳೆಸಿಕೊಂಡಿದ್ದಾರೆ ಎಂಬ ಆರೋಪವನ್ನು ತಿರಸ್ಕರಿಸಲು ಆ ಸೂಟ್ ಅನ್ನು ಹರಾಜು ಹಾಕಲಾಯಿತು. ಪ್ರತಿಪಕ್ಷಗಳು ಆ ಸೂಟ್‌ನ ಬೆಲೆ 10 ಲಕ್ಷ ರೂಗಳು ಎಂದು ಆರೋಪಿಸಿದ್ದವು.
ಉದ್ಯಮಿ, ರಮೇಶ್‌ಕುಮಾರ್ ಭಿಖಾಭಾಯ್ ವಿರಾಣಿ, ಸೂರತ್ ಮೂಲದ ವಿರಾಣಿ ಕುಟುಂಬದ ಭಾಗವಾಗಿದ್ದು, ಜ್ಯೋತಿ ಸಿಎನ್‌ಸಿಯಲ್ಲಿ ಹಲವು ವರ್ಷಗಳಿಂದ ಗಮನಾರ್ಹ ಹಣಕಾಸಿನ ಪಾಲನ್ನು ಹೊಂದಿದ್ದರು. ಉದಾಹರಣೆಗೆ, 2003-2004ರ ಅವಧಿಯಲ್ಲಿ ಕಂಪನಿಯ ಫೈಲಿಂಗ್‌ಗಳು, ಭಿಖಾಭಾಯ್ ವಿರಾನಿಯವರ ಪುತ್ರರಾದ ಅನಿಲ್ ವಿರಾನಿ ಮತ್ತು ಕಿಶೋರ್ ವಿರಾನಿಯನ್ನು ಅದರ ಎರಡು ದೊಡ್ಡ ಷೇರುದಾರರಾಗಿ ತೋರಿಸುತ್ತವೆ.
ಒಟ್ಟಿನಲ್ಲಿ ದೇಶ ಕೊರೊನಾದಂತಹ ಸಂಕಷ್ಟದ ಕಾಲದಲ್ಲಿ ಹೋರಾಡುತ್ತಿರಬೇಕಾದರೆ ರೋಗಿಗಳ ಸಾವು-ಬದುಕು ನಿರ್ಧರಿಸುವ ವೆಂಟಿಲೇಟರ್‌ಗಳ ವಿಷಯದಲ್ಲಿ ಅವ್ಯವಹಾರ ನಡೆದಿರುವ ಆರೋಪ ಕೇಳಿಬಂದಿದೆ. ಆ ಕಂಪನಿಯು ಗುಜರಾತಿನ ಸಿಎಂ ಮತ್ತು ಭಾರತದ ಪಿಎಂ ಜೊತೆಗೆ ಉತ್ತಮ ಬಾಂಧವ್ಯ ಹೊಂದಿರುವುದು ಸ್ಪಷ್ಟವಾಗಿದೆ. ಈ ಕುರಿತು ಸಮಗ್ರ ತನಿಖೆಯಾಗಬೇಕಿದೆ. ಆರೋಗ್ಯದ ವಿಚಾರದಲ್ಲಿನ ನಿರ್ಲಕ್ಷ್ಯೆ ಯಾವುದೇ ಕಾರಣಕ್ಕೂ ಸಲ್ಲದು.
ಕೃಪೆ: ದಿ ವೈರ್
ಇದನ್ನೂ ಓದಿ: ‘ಡಬ್ಬಲ್ ಸ್ಟಾಂಡರ್ಡ್’ ಪ್ರಧಾನಿ: ಪಶ್ಚಿಮ ಬಂಗಾಳದ ಭೇಟಿಯ ಬಗ್ಗೆ ಕರ್ನಾಟಕ ಕಾಂಗ್ರೆಸ್ ಟೀಕೆ


