ಬದಲಾವಣೆ ಜಗದ ನಿಮಯ’ ಎಂಬುದು ಸಾಮಾನ್ಯವಾಗಿ ಎಲ್ಲಾ ವಿಚಾರಗಳಲ್ಲಿ ಬಳಕೆಯಾಗುತ್ತಿರುವ ಬದಲಾಗದ ಸಾಲು. ಬದಲಾವಣೆಯ ಹಾದಿಯಲ್ಲಿ ತಂತ್ರಜ್ಞಾನಗಳೂ ಬದಲಾಗುತ್ತಿವೆ. ಅಂದರೆ ಹೊಸ ಹೊಸ ಆವಿಷ್ಕಾರಗಳು ತೆರೆದುಕೊಳ್ಳುತ್ತಿವೆ. ಇದು ಮನರಂಜನಾ ಕ್ಷೇತ್ರಗಳನ್ನೂ ವ್ಯಾಪಿಸುತ್ತಿದೆ.
ಸಮಾಜದಲ್ಲಿರುವ ಎಲ್ಲಾ ವರ್ಗದ ಜನರು ರೇಡಿಯೋ ಬಳಸುವ ಹೊತ್ತಿಗೆ ಟಿವಿಗಳು ಲಗ್ಗೆ ಇಟ್ಟಿದ್ದವು. ಪಟ್ಟಣಗಳಲ್ಲಿ ಸಿನಿಮಾ ಟೆಂಟ್‍ಗಳು ತಲೆ ಎತ್ತಿದ್ದವು. ಟಿವಿ ಎಲ್ಲಾ ಮನೆಗಳನ್ನೂ ತಲುಪುವ ವೇಳೆಗೆ 21ನೇ ಶತಮಾನದ ಮೊದಲ ದಶಕ ಕಳೆದೇ ಹೋಗಿತ್ತು. ಟಿವಿಗಳಲ್ಲಿ ವಾರಕ್ಕೊಮ್ಮೆ ಪ್ರಸಾರವಾಗುವ ಸಿನಿಮಾಗಳಿಗಾಗಿ ಕಾದುಕುಳಿತಿರುತ್ತಿದ್ದ ಕಾಲವದು. ಆಗ ಚಿತ್ರಮಂದಿರಗಳಲ್ಲಿ ಹಣಕೊಟ್ಟ ಸಿನಿಮಾ ನೋಡಲಾಗದವರು ಹೊಸ ಸಿನಿಮಾಗಳಿಗಾಗಿ ವರ್ಷಗಳಟ್ಟಲೆ ಕಾಯಬೇಕಾಗಿತ್ತು. ಇದೆಲ್ಲವೂ ಕೇವಲ ನಾಲ್ಕೈದು ವರ್ಷಗಳ ಹಿಂದಿನ ಕತೆಗಳಷ್ಟೇ.
ಈ ನಡುವೆ ಟೆಕ್ನಾಲಜಿ ಬೆಳೆದಂತೆ ಪೈರಸಿಯ ಹವಾ ಶುರುವಾಯಿತು. ಸಿನಿಮಾಗಳನ್ನು ಕದ್ದು ಮಾರುವುದು, ಕ್ಯಾಮೆರಾ ಪ್ರಿಂಟ್‍ನಲ್ಲಿ ಚಿತ್ರಿಸಿ ಹಂಚುವುದು ಬೆಳೆಯಿತು. ಆದರೆ, ಇವು ಕ್ವಾಲಿಟಿಯನ್ನು ಹೊಂದಿರಲಿಲ್ಲ.
ಹೊಸ ಸಿನಿಮಾಗಳಿಗಾಗಿ ಕಾಯುವ ತಾಳ್ಮೆಯೂ ಇಲ್ಲದ, ಹೆಚ್ಚು ಹಣಕೊಟ್ಟು ಥಿಯೇಟರ್‍ಗಳಿಗೆ ಹೋಗಲಾಗದವರ ಅಥವಾ ಥಿಯೇಟರ್‍ಗಳಿಗೆ ಹೋಗುವಷ್ಟು ಸಮಯವೇ ಇಲ್ಲದವರ ಸಮಸ್ಯೆಗಳನ್ನು ನೀಗಿಸಿದ್ದೇ ಓಟಿಟಿಗಳು. ‘ಓವರ್ ದಿ ಟಾಪ್’ ಎಂಬುದೇ ಓಟಿಟಿ. ಅಂದರೆ ನಾವು ಬಳಸುತ್ತಿರುವ ನೆಟ್‍ಫ್ಲಿಕ್ಸ್, ಅಮೆಜಾನ್ ಪ್ರೈಮ್, ವೂಟ್ ಮೊದಲಾದ ಡಿಜಿಟಲ್ ಮೀಡಿಯಾಗಳನ್ನು ಓಟಿಟಿ ಎಂದು ಕರೆಯಲಾಗುತ್ತದೆ.
ಓಟಿಟಿ ಪ್ಲಾಟ್ ಫಾರ್ಮ್‍ಗಳು ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾದ ಸಿನಿಮಾಗಳನ್ನು ಒಂದು ತಿಂಗಳ ಕಾಲಮಿತಿಯೊಳಗೇ ಜನರಿಗೆ ತಲುಪಿಸುತ್ತಿವೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಸಿನಿಮಾಗಳಷ್ಟೇ ಅಲ್ಲದೆ, ವೆಬ್ ಸೀರೀಸ್‍ಗಳು, ಡಾಕ್ಯುಮೆಂಟರಿಗಳು, ಕಿರುಚಿತ್ರ, ಧಾರಾವಾಹಿಗಳು ಸೇರಿದಂತೆ ವಿಭಿನ್ನ ಮನರಂಜನೆ ಮತ್ತು ಜ್ಞಾನವನ್ನು ಪೂರೈಸುತ್ತಿವೆ.
ಒಟಿಟಿ ಅಂದರೆ ನೇರವಾಗಿ ಕಂಟೆಂಟ್ (ಮೀಡಿಯಾ)ಗಳನ್ನು ಇಂಟರ್‍ನೆಟ್ ಮೂಲಕ ಕೇಬಲ್, ಟೆಲಿಕಮ್ಯುನಿಕೇಷನ್ ಇತರ ತಡೆಗಳಿಲ್ಲದೆ ನೇರವಾಗಿ ಗ್ರಾಹಕರಿಗೆ ತಲುಪಿಸುತ್ತವೆ. ಇಂತಹ ಟಿಟಿಗಳಲ್ಲಿ ಅಮೇಜಾನ್ ಪ್ರೈಮ್ ಮತ್ತು ನೆಟ್‍ಫ್ಲಿಕ್ಸ್‍ಗಳು ಭಾರತದಲ್ಲಿ ಹೆಚ್ಚು ಪ್ರಸಿದ್ದವಾಗಿವೆ. ವಾರ್ಷಿಕ ಚಂದಾ ನೀಡಿ ಸಬ್‍ಸ್ಕ್ರಿಪ್ಶನ್ ಪಡೆದುಕೊಂಡರಷ್ಟೇ ಸಾಕು. ಒಂದು ವರ್ಷದ ಅವಧಿಗೆ ಎಲ್ಲಾ ರೀತಿಯ ಮನರಂಜನೆಯನ್ನು ಇವು ಒದಗಿಸುತ್ತವೆ. ಅಲ್ಲದೆ, ಒಂದು ಚಂದಾದಾರರಾದರೆ 5 ಟಿವಿ ಅಥವಾ ಮೊಬೈಲ್‍ಗಳಲ್ಲಿ ಸೇವೆಯನ್ನು ಪಡೆಯಬಹುದಾಗಿದೆ. ನಮ್ಮ ಚಿತ್ರಮಂದಿರಗಳಿಗೆ ಬಾರದೇ ಹೋಗುವ ಜಾಗತಿಕ ಸಿನೆಮಾಗಳನ್ನೂ ಈ ಒಟಿಟಿಗಳ ಫ್ಲಾಟ್‍ಫಾಂಗಳ ಮೂಲಕ ಮನೆಯಿಂದಲೇ ವೀಕ್ಷಿಸಬಹುದಾಗಿದೆ.
ಹೆಚ್ಚುತ್ತಿರುವ ಓಟಿಟಿ ಬೇಡಿಕೆ:
4ಜಿ/5ಜಿ ಅಂತರ್ಜಾಲದ ಡಿಜಿಟಲ್ ಸೇವೆಗಳ ಯುಗದಲ್ಲಿ ಓಟಿಟಿ ವೇದಿಕೆಯು ಜಗತ್ತಿನಾದ್ಯಂತ ಡಿಮಾಂಡ್ ಪಡೆದುಕೊಳ್ಳುತ್ತಿದೆ. ಇದಕ್ಕೆ ಭಾರತವೂ ಹೊರತಾಗಿಲ್ಲ. ಅಂತರಾಷ್ಟ್ರೀಯ ವೃತ್ತಿ ಕೌಶಲ್ಯ ಸೇವೆಗಳ ಕಂಪನಿ ಪ್ರೈಸ್ ವಾಟರ್‍ಹೌಸ್ ಕೂಪರ್ಸ್(ಪಿಡಬ್ಲೂಸಿ) ವರದಿಯ ಪ್ರಕಾರ 2018 ಮುಗಿಯುವ ವೇಳೆಗೆ ಭಾರತದಲ್ಲಿ ಓಟಿಟಿ ವಿಡಿಯೋ ಸೇವೆಗಳ ಮಾರುಕಟ್ಟೆ 63.8ಕೋಟಿ ಡಾಲರ್ (ಸುಮಾರು ರೂ 4,466 ಕೋಟಿ)ಗಳಿಗೆ ತಲುಪಿತ್ತು. 2023ರ ಹೊತ್ತಿಗೆ ವಾರ್ಷಿಕವಾಗಿ 21.8% ರಷ್ಟು ವೃದ್ದಿಯಾಗಲಿದ್ದು, 170 ಕೋಟಿ ಡಾಲರ್ (ರೂ.11,900ಕೋಟಿಗಳಿಗೆ) ತಲುಪಲಿದೆ ಎಂದು ಅಂದಾಜು ಮಾಡಲಾಗಿದೆ.
ಓಟಿಟಿಗಳ ಸಬ್‍ಸ್ಕ್ರಿಪ್ಷನ್ ಡಿಮಾಂಡ್ ವಾರ್ಷಿಕವಾಗಿ 23.3%ರಷ್ಟು ವೃದ್ದಿಯಾಗಿ 150 ಕೋಟಿ ಡಾಲರ್‍ಗಳಿಗೆ ತಲುಪಲಿದೆಯೆಂದು ಸಿಡಬ್ಲೂಸಿ ವರದಿಯಲ್ಲಿ ಹೇಳಿದೆ. ಅಂದರೆ 2023ರ ಹೊತ್ತಿಗೆ ಒಟಿಟಿ ಕಂಪನಿಗಳ ಒಟ್ಟು ಆದಾಯದಲ್ಲಿ ವಿಡಿಯೋಗಳ ಸಬ್‍ಸ್ಕ್ರಿಪ್ಷನ್‍ನಿಂದ ಬರುವ ಪಾಲು 84%ರಷ್ಟಕ್ಕೆ ತಲುಪಲಿದೆ. ಈಗ ಜಾಹೀರಾತಿನಿಂದಲೇ ಹೆಚ್ಚು ಆದಾಯ ಬರುತ್ತಿದೆ. ಅಷ್ಟೇ ಅಲ್ಲದೇ ನಾಲ್ಕು ವರ್ಷಗಳಲ್ಲಿ ಭಾರತದ ಒಟಿಟಿ ಮಾರುಕಟ್ಟೆ ಕೊರಿಯಾ ದೇಶವನ್ನು ಮೀರಿಸಲಿದೆ. ಪ್ರಪಂಚದಲ್ಲೇ 8ನೇ ಅತಿದೊಡ್ಡ ಒಟಿಟಿ ಮಾರುಕಟ್ಟೆಯಾಗಿ ಭಾರತ ಬೆಳೆಯಲಿದೆ. 2023 ಕೊನೆಗೆ ಜಗತ್ತಿನ ಓಟಿಟಿ ಮಾರುಕಟ್ಟೆಯ ಪ್ರಮಾಣ 7,280 ಕೋಟಿ ಡಾಲರ್‍ಗಳ ಮಟ್ಟಕ್ಕೆ ಬೆಳೆಯಲಿದೆ ಎಂದು ಅಂದಾಜಿಸಲಾಗಿದೆ.
ನೇರವಾಗಿ ಓಟಿಟಿಯಲ್ಲೇ ಬಿಡುಗಡೆಯಾಗುತ್ತಿವೆ ಸಿನಿಮಾಗಳು:
ಓಟಿಟಿ ಆರಂಭವಾದ ಸಂದರ್ಭದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ತಿಂಗಳು ಕಳೆದ ನಂತರ ಸಿನಿಮಾಗಳು ಓಟಿಟಿ ಫ್ಲಾಟ್‍ಫಾಂಗೆ ಬರುತ್ತಿದ್ದವು. ಆದರೆ, ಈಗ ಹಾಗಿಲ್ಲ, ಹಲವು ಸಿನಿಮಾಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗದೆ ನೇರವಾಗಿ ಓಟಿಟಿಯಲ್ಲೇ ಬಿಡುಗಡೆಯಾಗುತ್ತಿವೆ. ಸ್ಯಾಂಡಲ್‍ವುಡ್‍ನ ಪುನೀತ್ ರಾಜ್‍ಕುಮಾರ್ ನಿರ್ಮಾಣದ ‘ಲಾ’ ಮತ್ತು ‘ಫ್ರೆಂಚ್ ಬಿರಿಯಾನಿ’ ಸಿನಿಮಾಗಳನ್ನು ನೇರವಾಗಿ ಓಟಿಟಿಯಲ್ಲೇ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ. ಬಾಲಿವುಡ್‍ನ ‘ಲಕ್ಷ್ಮೀ ಬಾಂಬ್’ ಸಿನಿಮಾ ಕೂಡ ಓಟಿಟಿಯಲ್ಲೇ ನೇರವಾಗಿ ಬಿಡುಗಡೆಯಾಗಲಿದೆ.
ಚಿತ್ರಮಂದಿರಗಳಿಗೆ ಒದಗಿದಯೇ ಆಪತ್ತು:
ಕಳೆದ ಎರಡು ದಶಕಗಳಿಂದ ಸಿನಿಮಾ ನಿರ್ಮಾಣದ ಸಂಖ್ಯೆ ಎಗ್ಗಿಲ್ಲದೆ ಸಾಗುತ್ತಿದೆ. ಒಂದು ವಾರಕ್ಕೆ ಸುಮಾರು 15 ಸಿನಿಮಾಗಳು ಕನ್ನಡ ಇಂಡಸ್ಟ್ರಿಯಲ್ಲೇ ಬಂದು ನಿಲ್ಲುತ್ತಿವೆ. ಇವುಗಳಿಗೆ ಅನ್ಯ ಭಾಷೆ ಸಿನಿಮಾಗಳ ಪೈಪೋಟಿಯೂ ಒಂದುಕಡೆ. ಹೀಗಾಗಿ ಥಿಯೇಟರ್‍ಗಳು ಹಿಟ್ ಆಗುವ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುವುದು, ಸಿನಿಮಾದಿಂದ ಹೆಚ್ಚು ಲಾಭವಾಗುತ್ತಿಲ್ಲವೆಂದರೆ ಬದಲಾಯಿಸುವುದು ಸರಾಗವಾಗಿದೆ. ಆದರೆ, ಇಂತಹ ಸಿಂಗಲ್ ಸ್ಕ್ರೀನ್ ಥಿಯೇಟರ್‍ಗಳಿಗೆ ಭಯ ಹುಟ್ಟಿಸಿದ್ದು, ಮಲ್ಟಿಫ್ಲೆಕ್ಸ್‍ಗಳು. ಮಾಲ್‍ಗಳಲ್ಲಿ ಹಾಗೂ ಸಿನಿಮಾಗಳಿಗಾಗಿ ಹೆಚ್ಚು ಸ್ಕ್ರೀನ್‍ಗಳುಳ್ಳ ಮಲ್ಟಿಫ್ಲೆಕ್ಸ್‍ಗಳು ಆರಂಭವಾದ ಸಂದರ್ಭದಲ್ಲಿ ಥಿಯೇಟರ್ ಮಾಲೀಕರು ಮಲ್ಟಿಫ್ಲೆಕ್ಸ್‍ಗಳಿಗೆ ಅನುಮತಿ ಕೊಡಬಾರದು ಎಂದು ಪ್ರತಿಭಟಿಸಿದ್ದರು. ಆದರೆ, ಇಂದು ಮಲ್ಪಿಫ್ಲೆಕ್ಸ್‍ಗಳ ಜೊತೆಗೆ ಓಟಿಟಿಗಳು ಥಿಯೇಟರ್‍ಗಳಿಗೆ ಎದುರಾಗಿ ಬೆಳೆದಿವೆ. ಇದರಿಂದಾಗಿ ಥಿಯೇಟರ್‍ಗಳಿಗೆ ಹೊಡೆತ ಬೀಳುವ ಸಾಧ್ಯತೆಗಳಿವೆ. ಅಲ್ಲದೆ, ಲಾಕ್‍ಡೌನ್ ಆದ ನಂತರದಲ್ಲಿ ಓಟಿಟಿಗಳ ಪ್ರಭಾವ ಜನರ ಮೇಲೆ ಹೆಚ್ಚಾಗಿದ್ದು, ಲಾಕ್‍ಡೌನ್ ತೆರವುಗೊಳ್ಳುವ ವೇಳೆಗೆ ಕರ್ನಾಟಕದಲ್ಲಿಯೇ 150ಕ್ಕೂ ಹೆಚ್ಚು ಚಿತ್ರಮಂದಿರಗಳು ಮುಚ್ಚುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.


