ಕೊರೊನಾ ಸಾಂಕ್ರಾಮಿಕದ ವಿರುದ್ಧ ಇಡೀ ದೇಶವೇ ಹೋರಾಡುತ್ತಿದೆ. ಆದರೆ ಈ ಎರಡು ಕಾಲೇಜುಗಳು ಮಾತ್ರ ಹಣ ದೋಚುವ ತಮ್ಮ ನಿತ್ಯಕಾಯಕದಲ್ಲಿ ನಿರತವಾಗಿವೆ. ಆ ಮೂಲಕ ಯಾರೇ ಹೋರಾಡಲಿ, ಯಾರೇ ಕೂಗಾಡಲಿ, ನಮ್ಮ ಹಣ ದೋಚುವುದರಲ್ಲಿ ಸಾಟಿ ಇಲ್ಲ ಎನ್ನುತ್ತಿದ್ದಾರೆ ಬಳ್ಳಾರಿಯ ಈ ಎರಡು ಖಾಸಗಿ ಕಾಲೇಜುಗಳು.
ಕೊರೊನಾ ಕಾರಣದಿಂದ ಮುಂದೂಡಲ್ಪಟ್ಟಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಇನ್ನೂ ಆರಂಭವೇ ಆಗಿಲ್ಲ. ಪರೀಕ್ಷೆ ನಡೆಸುವುದು ಸರಿಯಲ್ಲ ಎಂದು ಶಿಕ್ಷಣ ತಜ್ಞರು ಎಚ್ವರಿಕೆ ನೀಡುತ್ತಿದ್ದಾರೆ. ಆದರೆ ಬಳ್ಳಾರಿಯಲ್ಲಿರುವ ಶ್ರೀ ಚೈತನ್ಯ ಎಜುಕೇಷನ್ ಇನ್ಸ್ಟಿಟ್ಯೂಟ್ ಮತ್ತು ನಾರಾಯಣ ಶಿಕ್ಷಣ ಸಂಸ್ಥೆಗಳು ಈಗಾಗಲೇ ಭರ್ಜರಿಯಾಗಿ ಪ್ರಥಮ ಪಿಯುಸಿ ತರಗತಿಗಳಿಗೆ ದಾಖಲಾತಿ ಮಾಡಿಕೊಳ್ಳುತ್ತಿವೆ.
ಅಷ್ಟು ಮಾತ್ರವಲ್ಲದೇ ವಿದ್ಯಾರ್ಥಿಗಳಿಂದ ತಲಾ 70,000 ಹಣ ಪಡೆದು ರಶೀದಿ ನೀಡಲಾಗಿದೆ. ಈ ಕುರಿತ ಎಲ್ಲಾ ದಾಖಲೆಗಳೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಈ ಬಗ್ಗೆ ಮೊದಲಿಗೆ ಎನ್‌ಎಸ್‌ಯುಐ ಬಳ್ಳಾರಿ ಜಿಲ್ಲಾಧ್ಯಕ್ಷ ಸಿದ್ದು ಹಳ್ಳೇಗೌಡರವರು ಬಳ್ಳಾರಿ ಜಿಲ್ಲಾಧಿಕಾರಿಗಳು ಮತ್ತು ಡಿಡಿಪಿಐರವರಿಗೆ ದೂರು ನೀಡಿದ್ದು, ಕ್ರಮಕ್ಕೆ ಒತ್ತಾಯಿಸಿದ್ದಾರೆ.

ರಾಜ್ಯ ಕಾಂಗ್ರೆಸ್ ಪಕ್ಷವು ಟ್ವೀಟ್ ಮಾಡಿದ್ದು, ರಾಜ್ಯ ಸರ್ಕಾರ ಮತ್ತು ಶಿಕ್ಷಣ ಸಚಿವರನ್ನು ತರಾಟೆಗೆ ತೆಗೆದುಕೊಂಡಿದೆ. “ಸುರೇಶ್ ಕುಮಾರ್ ಅವರೇ, ಎಲ್ಲಾ ವಿಷಯಗಳಲ್ಲೂ ಬಹಳ ನಾಟಕೀಯವಾಗಿ ವರ್ತಿಸುವ ತಾವು ಅನುಮತಿ ಇಲ್ಲದೇ ಪದವಿ ಪೂರ್ವ ಕಾಲೇಜು ನಡೆಯುತ್ತಿರುವ ಬಗ್ಗೆ, ಎಸ್ಎಸ್ಎಲ್‌ಸಿ ಪರೀಕ್ಷೆಗಳೇ ನಡೆಯದೆ ಪ್ರಥಮ ಪಿಯುಸಿಗೆ ದಾಖಲಾತಿ ನಡೆಸುತ್ತಿರುವ ಬಗ್ಗೆ ಯಾವ ಕ್ರಮ ಜರುಗಿಸುವಿರಿ?
ಅಕ್ರಮ ನಡೆಸುತ್ತಿರುವ ಕಾಲೇಜುಗಳ ಪರವಾನಗಿ ರದ್ದುಪಡಿಸಿ ನಿಮ್ಮ ಬದ್ಧತೆ ತೋರಿಸಿ” ಎಂದು ಸವಾಲೆಸೆದಿದೆ.
.@nimmasuresh ಅವರೇ,
ಎಲ್ಲಾ ವಿಷಯಗಳಲ್ಲೂ ಬಹಳ ನಾಟಕೀಯವಾಗಿ ವರ್ತಿಸುವ ತಾವು ಅನುಮತಿ ಇಲ್ಲದೇ ಪದವಿ ಪೂರ್ವ ಕಾಲೇಜು ನಡೆಯುತ್ತಿರುವ ಬಗ್ಗೆ ಎಸ್ಎಸ್ಎಲ್‌ಸಿ ಪರೀಕ್ಷೆಗಳೇ ನಡೆಯದೆ ಪ್ರಥಮ ಪಿಯುಸಿಗೆ ದಾಖಲಾತಿ ನಡೆಸುತ್ತಿರುವ ಬಗ್ಗೆ ಯಾವ ಕ್ರಮ ಜರುಗಿಸುವಿರಿ?
ಅಕ್ರಮ ನಡೆಸುತ್ತಿರುವ ಕಾಲೇಜುಗಳ ಪರವಾನಗಿ ರದ್ದುಪಡಿಸಿ ನಿಮ್ಮ ಬದ್ಧತೆ ತೋರಿಸಿ. pic.twitter.com/otZ4hZie09— Karnataka Congress (@INCKarnataka) May 25, 2020
1983ರ ಕರ್ನಾಟಕ ಶಿಕ್ಷಣ ಕಾಯ್ದೆಯ ಪ್ರಕಾರ ಅವಧಿಗೆ ಮುನ್ನವೇ ದಾಖಲಾತಿ ಮಾಡಿಕೊಳ್ಳುವುದು ನಿಯಮಗಳ ಉಲ್ಲಂಘನೆಯಾಗುತ್ತದೆ. ಅದರಲ್ಲಿಯೂ ಕೊರೊನಾದಂತಹ ಸಂಕಷ್ಟದ ಕಾಲದಲ್ಲಿಯೂ ಸಹ ಈ ಕಾಲೇಜುಗಳು ಹಣ ವಸೂಲಿಗಿಳಿದಿವೆ.
ಒಟ್ಟಾರೆಯಾಗಿ ಶಿಕ್ಷಣ ಎನ್ನುವುದು ಮನುಷ್ಯನ ಸಮಗ್ರ ವಿಕಾಸಕ್ಕೆ ದಾರಿಯಾಗಬೇಕು. ಆದರೆ ಶಿಕ್ಷಣವನ್ನು ವ್ಯಾಪಾರೀಕರಣ ಮಾಡಲು ಆರಂಭಿಸಿದರೋ ಅಂದಿನಿಂದ ಎಲ್ಲಾ ಮೌಲ್ಯಗಳಿಗೂ ಬೆಲೆ ಇಲ್ಲದಂತಾಗಿದೆ.


