ಜಮ್ಮು ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ 2019 ಮಾದರಿಯ ಕಾರ್‌ಬಾಂಬ್ ದಾಳಿಯ ಸಂಚನ್ನು ಭದ್ರತಾ ಪಡೆಗಳು ವಿಫಲಗೊಳಿಸಿವೆ. ಕಾರಿನಲ್ಲಿ 20 ಕೆಜಿಗಿಂತ ಅಧಿಕ ತೂಕದ ಸುಧಾರಿತ ಸ್ಫೋಟಕ ಸಾಧನವನ್ನು (ಐಇಡಿ) ಸಾಗಿಸಲಾಗುತ್ತಿದ್ದು ಅದನ್ನು ವಶಪಡಿಸಿಕೊಳ್ಳಲಾಗಿದೆ.
ಗುಪ್ತಚರ ಮಾಹಿತಿಯ ಆಧಾರದ ಮೇಲೆ ಬುಧವಾರ ರಾತ್ರಿ ನಕಲಿ ನೋಂದಣಿ ಸಂಖ್ಯೆಯನ್ನು ಹೊಂದಿರುವ ಬಿಳಿ ಹ್ಯುಂಡೈ ಸ್ಯಾಂಟ್ರೊ ಕಾರನ್ನು ಚೆಕ್ ಪಾಯಿಂಟ್‌ನಲ್ಲಿ ನಿಲ್ಲಿಸಲು ಭದ್ರತಾ ಪಡೆಗಳು ಸೂಚಿಸಿದ್ದರು. ಆದರೆ ಕಾರು ತನ್ನ ವೇಗವನ್ನು ಹೆಚ್ಚಿಸಿ ಬ್ಯಾರಿಕೇಡ್ ಅನ್ನು ತಳ್ಳಿಕೊಂಡು ಹೋಗಲು ಪ್ರಯತ್ನಿಸಿತು ಎಂದು ಪೊಲೀಸರು ತಿಳಿಸಿದ್ದಾರೆ.
“ಭದ್ರತಾ ಪಡೆಗಳು ಗುಂಡು ಹಾರಿಸಿದವು. ಆದರೆ ಚಾಲಕ ತಪ್ಪಿಸಿಕೊಂಡಿದ್ದಾನೆ, ಸಂಭವನೀಯ ದಾಳಿಯ ಬಗ್ಗೆ ನಮಗೆ ಗುಪ್ತಚರದಿಂದ ಮಾಹಿತಿ ಸಿಕ್ಕಿದೆ. ನಾವು ನಿನ್ನೆಯಿಂದ ಐಇಡಿ ಹೊಂದಿರುವ ವಾಹನವನ್ನು ಹುಡುಕುತ್ತಿದ್ದೇವೆ” ಎಂದು ಪೊಲೀಸ್ ಇನ್ಸ್ಪೆಕ್ಟರ್ ಜನರಲ್ ವಿಜಯ್ ಕುಮಾರ್ ಹೇಳಿದ್ದಾರೆ.
ಆ ನಂತರ ಬಾಂಬ್ ನಿಷ್ಕ್ರಿಯ ದಳ ಐಇಡಿ ಹಾಗೂ ಕಾರನ್ನು ಸ್ಪೋಟಿಸಿತಾದರೂ, ಭಾರಿ ಸ್ಫೋಟದಿಂದಾಗಿ ಈ ಪ್ರದೇಶದ ಹಲವಾರು ಮನೆಗಳಿಗೆ ಹಾನಿಯಾಗಿದೆ ಎನ್ನಲಾಗಿದೆ.
ಕಾರ್ಯಾಚರಣೆಯಲ್ಲಿ ಸೇನೆ, ಪೊಲೀಸ್ ಮತ್ತು ಅರೆಸೈನಿಕ ಪಡೆಗಳ ಭಾಗವಹಿಸಿದ್ದವು ಎಂದು ವಿಜಯ್ ಕುಮಾರ್ ಹೇಳಿದರು.
ಕಳೆದ ವರ್ಷ ಫೆಬ್ರವರಿ 14 ರಂದು ಪುಲ್ವಾಮ ಜಿಲ್ಲೆಯಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 40 ಕ್ಕೂ ಹೆಚ್ಚು ಸಿಎಆರ್‌ಪಿಎಫ್ ಸೈನಿಕರು ಸಾವನ್ನಪ್ಪಿದ್ದರು.
ಕಳೆದ ಎರಡು ತಿಂಗಳಲ್ಲಿ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿಯು ಹೆಚ್ಚಾಗಿದ್ದು; ಅಧಿಕಾರಿಗಳು ಸೇರಿದಂತೆ 30 ಭದ್ರತಾ ಪಡೆಗಳ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಓದಿ: ಪುಲ್ವಾಮಾ ದಾಳಿ: ಮೂರು ಪ್ರಶ್ನೆಗಳನ್ನು ಎತ್ತಿದ ರಾಹುಲ್ ಗಾಂಧಿ.


