Homeಚಳವಳಿಇದು ಅತ್ಯಾಚಾರದ ಕಥೆಯಲ್ಲ, ವಸಾಹತುವಾಗಿಯೇ ಉಳಿದಿರುವ ‘ಈ ಭಾರತ’ದ ಕಥನ

ಇದು ಅತ್ಯಾಚಾರದ ಕಥೆಯಲ್ಲ, ವಸಾಹತುವಾಗಿಯೇ ಉಳಿದಿರುವ ‘ಈ ಭಾರತ’ದ ಕಥನ

ಒಂದು ಕಾಲದಲ್ಲಿ, ಭಾರತದ ಭಾರೀ ಭಾರೀ ರಾಜರುಗಳು ಸೋತು ಶರಣಾಗಿದ್ದಾಗ, ಬ್ರಿಟಿಷ್ ಸಾಮ್ರಾಜ್ಯಾಧಿಪತಿಗಳನ್ನು ವರ್ಷಗಳ ಕಾಲ ತಮ್ಮ ನೆಲದ ಮೇಲೆ ಕಾಲಿಡಲು ಬಿಡದೆ ನಿರಂತರವಾಗಿ ಕಾದಿದ ಸಂತಾಲ್ ಬುಡಕಟ್ಟು ಇನ್ನೂ ಎಷ್ಟು ಕಾಲ ಈ ದೇಶದೊಳಗಿನ ತನ್ನದೇ ಜನಗಳಿಂದ ಆಗುತ್ತಿರುವ ದಮನವನ್ನು ಸಹಿಸಿಕೊಂಡಿರಬಲ್ಲದು? ಗೊತ್ತಿಲ್ಲ!

- Advertisement -

(ಲಾಕ್‌ಡೌನ್ ಸಂದರ್ಭದಲ್ಲಿ ವಲಸೆ ಕಾರ್ಮಿಕರಿಗೆ ನೆರವಾಗಲು ಜೊತೆಯಾದ ಕರ್ನಾಟಕ ಜನಶಕ್ತಿ ಮತ್ತು ಸ್ವ್ಯಾನ್‌ – Stranded Workers Action Network  – ಕಾರ್ಯಕರ್ತರಿಗೆ ಜಾರ್ಖಂಡ್‌ನಿಂದ ಬಂದ ಕರೆಯೊಂದರ ಬೆನ್ನುಹತ್ತಿ ಹೋದಾಗ ಕೆಂಗೇರಿಯಲ್ಲಿ ಸಿಕ್ಕ ಇಬ್ಬರು ಯುವತಿಯರು ಮತ್ತು ಅವರ ಎಳೆಕೂಸುಗಳ ಹಿಂದೆ ಒಂದು ಭೀಕರ ಕಥೆಯಿತ್ತು. ಅವರನ್ನು ದೆಹಲಿಯಿಂದ ಕರ್ನಾಟಕಕ್ಕೆ ಜೀತ ರೀತಿಯಲ್ಲಿ ಮಾರಲಾಗಿತ್ತು. ಇಲ್ಲಿ ಅವರನ್ನು ಜೀತಗಾರರಾಗಿ ದುಡಿಸಿದ್ದರಲ್ಲದೇ ಅವರ ಮೇಲೆ ಅತ್ಯಾಚಾರ ನಡೆದಿತ್ತು. ಈ ವಿಚಾರದಲ್ಲಿ ಅವರಿಗೆ ನ್ಯಾಯ ದೊರಕಿಸಲು ಮುಂದಾದ ತಂಡದಲ್ಲಿ ಇನ್ನೂ ಸಕ್ರಿಯವಾಗಿರುವ ಮಲ್ಲಿಗೆ ಸಿರಿಮನೆಯವರು ತಮ್ಮ ಅನಿಸಿಕೆಗಳನ್ನು ಇಲ್ಲಿ ಬಿಚ್ಚಿಟ್ಟಿದ್ದಾರೆ.)

- Advertisement -

***

ಇಂದು ಬೆಳಿಗ್ಗೆ ಹಿರಿಯ ಗೆಳತಿಯೊಬ್ಬರು ಜಾರ್ಖಂಡ್‌ನ ದೌರ್ಜನ್ಯಕ್ಕೊಳಗಾದ ಹೆಣ್ಣುಮಕ್ಕಳ ವಿಚಾರವಾಗಿ ಫೋನ್ ಮಾಡಿದ್ದರು. ಘಟನೆಯ ವಿವರ ಹೇಳುತ್ತಿದ್ದೆ……. ಆ ನರಕದಂತಹ ಕಾರ್ಖಾನೆಯಿಂದ ಈ ಇಬ್ಬರು ವಲಸಿಗ ಹೆಣ್ಣುಮಕ್ಕಳು ತಪ್ಪಿಸಿಕೊಂಡು ಸುಮಾರು ನಾಲ್ಕು ವಾರ ಕಾಲ, ತಾವೆಲ್ಲೋ ಮುಚ್ಚಿಟ್ಟುಕೊಂಡು ತಂದಿದ್ದ 400-500 ರೂಗಳಲ್ಲಿ ಇಬ್ಬರು ಪುಟ್ಟಮಕ್ಕಳನ್ನೂ ಸೇರಿದಂತೆ ನಾಲ್ಕು ಮಂದಿ ಅರೆಹೊಟ್ಟೆ ತಿಂದುಕೊಂಡು ದಿನದೂಡಿದ್ದಾರೆ; ಕುರುಚಲು ಗಿಡಮರ ಬೆಳೆದಿದ್ದ ನಿರ್ಜನ ಪ್ರದೇಶದಲ್ಲಿ ವಾಸ ಮಾಡಿದ್ದಾರೆ; ಇಬ್ಬರಲ್ಲಿ ಒಬ್ಬ ಮಹಿಳೆಗೆ ಬರುವ ಹಿಂದಿ ಭಾಷೆಯ 8-10 ಪದಗಳನ್ನು ನಂಬಿಕೊಂಡು ಜಾರ್ಖಂಡಕ್ಕೆ ವಾಪಾಸು ಹೋಗುವ ಪ್ರಯತ್ನ ನಡೆಸಲಿಕ್ಕಾಗಿ ಪೊಲೀಸ್ ಠಾಣೆಗಳಿಗೆ ಅಲೆದಿದ್ದಾರೆ. ಆಕಸ್ಮಿಕವಾಗಿ ಸಿಕ್ಕಿದ ತಮ್ಮಂತಹ ಮತ್ತೊಬ್ಬ ಕಾರ್ಮಿಕ ನಿಕೊಲಸ್ ಮುರ್ಮುವನ್ನು ತಮ್ಮ ರಕ್ಷಣೆಗೆ ಬರುವಂತೆ ಮಾಡಿದ್ದಾರೆ; ಆ ಕಾರ್ಮಿಕನ ನೆರವಿನಿಂದ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾದ ನಂತರ ಪೊಲೀಸರು ಕಾರ್ಖಾನೆ ಮಾಲೀಕರನ್ನು ಠಾಣೆಗೆ ಕರೆದುತಂದದ್ದನ್ನು ನೋಡಿ, ಅಲ್ಲೇ ಸಿಕ್ಕಿದ ಆವರೆಗೂ ತಾವು ನೋಡದಿದ್ದ ನಾಲ್ಕು ಮಂದಿಯನ್ನು ನಂಬಿಕೊಂಡು ತಮ್ಮ ಮೇಲೆ ನಡೆದಿದ್ದ ಘನಘೋರವಾದ ದೌರ್ಜನ್ಯದ ವೃತ್ತಾಂತವನ್ನು ಹೇಳಿಕೊಂಡಿದ್ದಾರೆ!

ಎರಡನೇ ಪ್ರಕರಣ ದಾಖಲಾದ ನಂತರದ ಸುದೀರ್ಘ ವಿಚಾರಣೆಯೆಂಬ ಅಗ್ನಿಪರೀಕ್ಷೆಯನ್ನೆದುರಿಸಿದ್ದಾರೆ…… ಎಲ್ಲಿಯವರೆಗೆಂದರೆ, ನ್ಯಾಯಾಧೀಶರ ಎದುರು ಹೇಳಿಕೆ ಕೊಡಲು ಕೋವಿಡ್ ಪರೀಕ್ಷೆ ಕಡ್ಡಾಯವೆಂಬ ಕಾರಣಕ್ಕೆ ದಿನವಿಡೀ ಬಸವಳಿದು ಮೂಗು ಬಾಯಿಗೆಲ್ಲ ಕಡ್ಡಿ ಚುಚ್ಚಿಸಿಕೊಂಡು ಹಿಂಸೆಪಟ್ಟಿದ್ದಾರೆ. ತಾವು ಮಾತ್ರವಲ್ಲ ಪ್ರತಿದಿನದ ಈ ಅಲೆದಾಟದಲ್ಲಿ ತಮ್ಮ ಮಕ್ಕಳೂ ಸೋತು ಸುಣ್ಣವಾಗುತ್ತಿರುವುದನ್ನು ನೋಡುತ್ತಲೇ ಇದ್ದಾರೆ……. ಇಷ್ಟೆಲ್ಲ ಆದಮೇಲೆ ನಿನ್ನೆ ಅವರಿಗೆ ಜಾರ್ಖಂಡಿಗೆ ಹೋಗುವ ಕೊನೆಯ ರೈಲಿದೆ ಎಂದು ತಿಳಿಯಿತು.

ಇಷ್ಟೆಲ್ಲ ಒಳಗಿನಿಂದ ಮುರಿದು ಹಾಕುವ ಅನುಭವಗಳ ನಂತರ ಊರಿಗೆ ಹೋಗಿ ತಮ್ಮವರೊಡನೆ ಸೇರಿಕೊಳ್ಳಬೇಕೆಂಬ ಅಪೇಕ್ಷೆ ಅದೆಷ್ಟು ಗಾಢವಾಗಿರಬಹುದೆಂಬುದು ನಮಗೆ ತಿಳಿಯದ್ದೇನಲ್ಲ. ಹೋಗಿ ಒಂದಷ್ಟು ಸಾಂತ್ವನ ಪಡೆಯಲಿ ಎಂಬ ಆಸೆಯ ಹೊರತಾಗಿಯೂ ಹಾಗೇನಾದರೂ ಈ ಕೂಡಲೇ ಇದೇ ದಿನ ಹೊರಟುಬಿಟ್ಟರೆ ಅವರ ಪ್ರಕರಣದ ಮೂಲಭೂತ ತಳಹದಿಯೇ ದುರ್ಬಲವಾಗುತ್ತದಲ್ಲಪ್ಪ ಎಂಬ ಚಿಂತೆಯೂ ಇತ್ತು. “ಇದಾದ ನಂತರ ಯಾವಾಗ ಸರ್ಕಾರ ರೈಲು ಕಳಿಸುತ್ತದೋ ಜಾರ್ಖಂಡಿಗೆ ಹೇಳಲು ಬರುವುದಿಲ್ಲ, ಹೋಗುವುದಿದ್ದರೆ ಇವತ್ತೇ ಹೋಗಬೇಕಿರಬಹುದು, ನಿಮ್ಮ ಕೇಸಿನ ಇನ್ನಷ್ಟು ಕೆಲಸಗಳು ಬಾಕಿಯಿವೆ, ಆದರೆ ಅದಕ್ಕೆಂದು ನಿಮ್ಮನ್ನು ನಿಲ್ಲಿಸಿಕೊಳ್ಳಲು ನಮಗೂ ಮನಸ್ಸಿಲ್ಲ….. ಹೊರಡುವುದಾದರೆ ಕಳಿಸುವ ವ್ಯವಸ್ಥೆ ಮಾಡುತ್ತೇವೆ” ಎಂದು ಹೇಳಿದೆವು. ಆಕೆಗೆ ನಾವು ಹೇಳಿದ್ದು ಏನೇನೂ ತಿಳಿಯದು. ನಿಕೋಲಸ್‌ನ ನೆರವಿಲ್ಲದೆ ನಮ್ಮ ಎಲ್ಲ ಕಲೆಗಾರಿಕೆ ವ್ಯರ್ಥ. ನಿಕೊಲಸ್‌ನಿಂದ ನಮ್ಮ ಮಾತನ್ನು ಕೇಳಿ ತಿಳಿದುಕೊಂಡ ಆಕೆ, “ಹೀಗೆ ನಡುವೆಯೇ ಎಲ್ಲ ಬಿಟ್ಟು ಹೋಗುವುದಾದರೆ ಇಷ್ಟೆಲ್ಲ ಹೊಡೆದಾಡಿದ್ದಾದರೂ ಯಾಕಾಗಿ? ಏನು ಪ್ರಯೋಜನವಾಗುತ್ತದೆ….. ತಡವಾದರೆ ಚಿಂತೆಯಿಲ್ಲ, ಸಾಧ್ಯವಿರುವುದೆಲ್ಲವನ್ನೂ ಮುಗಿಸಿಯೇ ಹೊರಡುತ್ತೇವೆ” – ಸರಳವಾದ ಮುಗುಳ್ನಗೆಯೊಂದಿಗೆ ಸಹಜವಾಗಿ ಹೇಳಿದರು.

ನನಗೆ ಈ ಲೇಖನವನ್ನು ಆ ಮುಗ್ಧ ಹುಡುಗಿಯ ವಿಷಾದ ತುಂಬಿದ್ದ ಮುಖದ ಮೇಲೂ ಕೂಡಾ ಆ ದಿನ ಕಂಡ ಮುದ್ದು ನಗೆಯೊಂದಿಗೆ ಆರಂಭಿಸಬೇಕೆಂಬಾಸೆ……………. ಅತ್ಯಾಚಾರಕ್ಕೊಳಗಾದ ಹೆಣ್ಣೆಂದಾಕ್ಷಣ ಮಂಡಿಯ ನಡುವೆ ಮುಖ ಹುದುಗಿಸಿ ಕಣ್ಣೀರ್ಗರೆವ ಮಹಿಳಾ ಪ್ರತಿಮೆಯ ಸಿದ್ಧಮಾದರಿಯನ್ನು ನೋಡಿ ನೋಡಿ ಸಾಕಾಗಿದೆ!!

ನನ್ನ ಹಿರಿಯ ಗೆಳತಿ ಕೇಳಿದರು…… “ಇದು ಹೇಗೆ ಸಾಧ್ಯ ಮಲ್ಲಿಗೆ? ಇಷ್ಟು ನೋವಿನ ನಂತರ……….!”

ಹೌದು…. ಇದು ಹೇಗಾದರೂ ಸಾಧ್ಯ? ಬದುಕು ತನ್ನ ಅತ್ಯಂತ ಕ್ರೂರವಾದ ಎಲ್ಲ ರೂಪಗಳನ್ನೂ ಒಂದಾದ ಮೇಲೊಂದರಂತೆ ಪ್ರದರ್ಶಿಸಿದ ನಂತರವೂ ತನ್ನ ಆತ್ಮಗೌರವ ಮತ್ತು ಘನತೆಯ ಮೇಲಾದ ದಾಳಿಯನ್ನು ಪ್ರತಿರೋಧಿಸಬೇಕೆಂಬ ಬಯಕೆ……… ನ್ಯಾಯ ಪಡೆಯಲೇಬೇಕೆಂಬ ಹಂಬಲ!!

ಅದಮ್ಯವಾದ ಜೀವನಪ್ರೀತಿಗೆ ಹೊರತಾಗಿ ಮತ್ತಿನ್ಯಾವುದಕ್ಕೆ ಇಂತಹ ಶಕ್ತಿಯಿದೆ??

ಎಲ್ಲ ಪ್ರತಿಕೂಲ ಪರಿಸ್ಥಿತಿಗಳನ್ನೂ ಮೀರಿ ಬದುಕನ್ನು ಸಂಪೂರ್ಣವಾಗಿ ಬದುಕುವ ಹಂಬಲಕ್ಕೆ, ಅದರಲ್ಲಿ ತುಂಬಿರುವ ಕಲ್ಲುಮುಳ್ಳುಗಳನ್ನೂ ದಾಟಿ ಹೂವಿನ ಸುಗಂಧ ಪಡೆದೇ ತೀರುತ್ತೇನೆಂಬ ಛಲಕ್ಕೆ, ಮುರಿದು ನಾಶವಾಯಿತೆಂದುಕೊಳ್ಳುವಾಗಲೇ ಅಲ್ಲೇ ಪಕ್ಕದಲ್ಲಿ ಚಿಕ್ಕ ಹಸಿರು ಚಿಗುರಾಗಿ ಲೋಕಕ್ಕೆ ತೆರೆದುಕೊಳ್ಳುವ ಸಂಭ್ರಮಕ್ಕೆ – ಆ ಹೆಣ್ಣುಮಕ್ಕಳ ಮೊಗೆದಷ್ಟೂ ಮುಗಿಯದ ಅಕ್ಷಯ ಜೀವನಪ್ರೀತಿಗೆ ತಲೆಬಾಗಿ ಶರಣು!!

ಇಷ್ಟು ಮಾತುಗಳೊಂದಿಗೆ ಈ ವಿಚಾರಕ್ಕೆ ಸಂಬಂಧಿಸಿ ನಾನು ಚರ್ಚಿಸಬೇಕಾದ ಮತ್ತೊಂದು ಆಯಾಮಕ್ಕೆ ಬರುತ್ತೇನೆ. ಈ ಘಟನೆಯಲ್ಲಿ ಈ ಇಬ್ಬರು ಹೆಣ್ಣುಮಕ್ಕಳ ಹೆಸರುಗಳನ್ನು ಬದಲಿಸಿದರೆ, ಬಹುಶಃ ದೇಶದ ಎಲ್ಲ ಪ್ರದೇಶಗಳಲ್ಲಿ ಹಿಂದುಳಿದ ರಾಜ್ಯಗಳಿಂದ ಮಾರಾಟವಾಗಿ ಅಥವಾ ಕೆಲಸ ಹುಡುಕಿಕೊಂಡು ಬಂದು ಶೋಷಣೆಯ ಕೂಪಕ್ಕೆ ಸಿಲುಕಿದ ಅದೆಷ್ಟೋ ಲಕ್ಷ ಹೆಣ್ಣುಮಕ್ಕಳ ಕಥೆಯೇ ಆಗುತ್ತದೆ. ಹೂವಿನ ಮತ್ತು ರಾಣಿಯ ಹೆಸರಿನ ಈ ಇಬ್ಬರು ಹೆಣ್ಣುಮಕ್ಕಳು ಈ ದೇಶದ ಅಪರೂಪದ ಹೋರಾಟದ ಇತಿಹಾಸ ಹೊಂದಿರುವ ‘ಸಂತಾಲ್’ ಬುಡಕಟ್ಟಿಗೆ ಸೇರಿದವರು. ಜಾರ್ಖಂಡ್‌ನಿಂದ ಮಾರಾಟವಾಗಿ, ಹಲವು ಬ್ರೋಕರ್‌ಗಳು ಮತ್ತು ಕೂಲಿ ಕಂಟ್ರಾಕ್ಟರ್‌ಗಳ ಕೈಬದಲಾವಣೆಗೊಂಡು ಬೆಂಗಳೂರಿನ ಒಂದು ಅಗರಬತ್ತಿ ಕಾರ್ಖಾನೆಯೆಂಬ ನರಕಕ್ಕೆ ಬಂದು ಸೇರಿದರು. ಈ ಕಾರ್ಖಾನೆಯ ಹೆಸರು ‘ಭಾರತ್ ಕೆಮಿಕಲ್ ಪ್ರಾಡಕ್ಟ್ಸ್‌’! ತಿಂಗಳಿಗೆ 9,000 ರೂ.ಗಳ ಸಂಬಳದ ಭರವಸೆಯೊಂದಿಗೆ ಕರೆತಂದ ಇವರಿಬ್ಬರನ್ನು ಕಳೆದ ವರ್ಷದ ಅಕ್ಟೋಬರ್‌ನಿಂದ ಈ ಮಾರ್ಚ್‌ವರೆಗೆ ವಾರಕ್ಕೆ ಸಣ್ಣಪುಟ್ಟ ಖರ್ಚಿಗೆ ಕೊಡುವ 200 ರೂಗಳನ್ನು ಬಿಟ್ಟರೆ ಒಂದು ರೂಪಾಯಿ ಸಂಬಳವನ್ನೂ ಕೊಡದೆ ದುಡಿಸಲಾಯಿತು. ಇವರ ದುಡಿಮೆ ಎಂಟು ತಿಂಗಳಷ್ಟೇ ಆದರೆ, ಅಲ್ಲಿ ಇವರಂತೆಯೇ ದುಡಿಯುತ್ತಿದ್ದ, ಇವರಿಗಿಂತ ಬಹಳ ಹಿಂದಿನಿಂದ ದುಡಿಯುತ್ತಿದ್ದ ಅದೆಷ್ಟೋ ಮಂದಿ ಹೆಣ್ಣುಮಕ್ಕಳು ಅದಾಗಲೇ ಇದ್ದರು. ಕೇವಲ ಮಹಿಳೆಯರಷ್ಟೇ ಅಲ್ಲದೆ, ಹೀಗೆ ವಲಸೆ ಬರುವ ಇಡೀ ದೊಡ್ಡ ಶ್ರಮಜೀವಿ ಸಮುದಾಯದ ಶ್ರಮವು ಅತ್ಯಂತ ಕಡಿಮೆ ದರಕ್ಕೆ ಮಾರಾಟವಾಗುತ್ತಿದೆ. ಈ ಎಲ್ಲ ಶೋಷಣೆಯಿಂದ ಬಂದುಸೇರುವ ಹೆಚ್ಚುವರಿ ಹಣ ಸಂಗ್ರಹವಾಗುತ್ತಿರುವುದು ಯಾರ ತಿಜೋರಿಗಳಲ್ಲಿ?

ಅತ್ಯಾಚಾರ
ಮಹಿಳೆಯರನ್ನು ಜೀತಕ್ಕಿಟ್ಟು ದುಡಿಸುತ್ತಿದ್ದ ಫ್ಯಾಕ್ಟರಿ

ವಸಾಹತುಶಾಹಿ ಕಾಲದಲ್ಲಿ ಪಾಶ್ಚಾತ್ಯ ಪ್ರಪಂಚದಲ್ಲಿ ಶೇಖರವಾದ ಎಲ್ಲ ಸಂಪತ್ತೂ ವಸಾಹತು ದೇಶಗಳ ಜನರ ಮೇಲಿನ ಅಮಾನುಷ ಶೋಷಣೆ ಮತ್ತು ಅಲ್ಲಿನ ನೈಸರ್ಗಿಕ ಸಂಪತ್ತಿನ ಲೂಟಿಯಿಂದಲೇ ಬಂದದ್ದು. ಇಂದು ಆ ದೇಶಗಳು ನಮ್ಮಂತಹ ದೇಶಗಳಿಗೆ ಹೋಲಿಸಿದರೆ ಸಾಧಿಸಿರುವ ಮುನ್ನಡೆಯೂ ಕೂಡಾ ನಮ್ಮಂತಹ ಅಧೀನ ದೇಶಗಳ ಶ್ರಮಜೀವಿಗಳ ನಿರಂತರ ದುಡಿಮೆಯಿಂದಲೇ ಸಾಧ್ಯವಾಗಿರುವುದು. ಆ ಸಂಪನ್ಮೂಲವಿಲ್ಲದೆ ಹೋಗಿದ್ದರೆ ವಿಜ್ಞಾನ ತಂತ್ರಜ್ಞಾನದಿಂದ ಹಿಡಿದು ಕಲೆ ಸಿನೆಮಾದವರೆಗೆ ಇಂದು ನಾವು ಕಾಣುತ್ತಿರುವ ಅಭಿವೃದ್ಧಿಯ ವ್ಯತ್ಯಾಸಗಳು ಹೇಗೆ ಸಾಧ್ಯವಾಗಬಹುದಿತ್ತು?

ಈ ನಿರ್ದಿಷ್ಟ ಪ್ರಕರಣದಲ್ಲಿ ಈ ಮಹಿಳೆಯರು ದುಡಿಯುತ್ತಿದ್ದ ಫ್ಯಾಕ್ಟರಿ ಮಾಲೀಕ ಈ ದೇಶದ ಭಾರೀ ಬಂಡವಾಳಶಾಹಿ ಕುಳವಲ್ಲದಿರಬಹುದು. ಆದರೆ ಇಂತಹ ಹತ್ತು ಹಲವು ಸಣ್ಣ ಮೀನುಗಳು ನುಂಗುವುದನ್ನು ಒಂದು ದೊಡ್ಡ ಮೀನೂ, ಅಂತಹ ಹತ್ತು ಹಲವು ದೊಡ್ಡ ಮೀನುಗಳು ನುಂಗುವುದನ್ನು ಒಂದು ತಿಮಿಂಗಿಲವೂ ನುಂಗುವ ಮೂಲಕವೇ ಈ ಕಾರ್ಪೋರೇಟ್ ವ್ಯವಸ್ಥೆಯು ರೂಪುಗೊಂಡಿದೆ. ಒಂದು ವೇಳೆ ಹಾಗೆ ತಿಮಿಂಗಿಲಕ್ಕೆ ನುಂಗುವುದಕ್ಕೆ ಏನಾದರೂ ಅಡ್ಡಿಯುಂಟಾಗಿದೆ ಎಂಬ ಪಕ್ಷದಲ್ಲಿ, ಅಂತಹ ಅಡ್ಡಿಗಳನ್ನು ನಿವಾರಿಸುವುದಕ್ಕಾಗಿ ಮಾತ್ರವೇ ಸರ್ಕಾರಗಳಿವೆಯೇ ಹೊರತು ಹೊಟ್ಟೆಸೇರಿ ಸಾಯಲಿರುವ ಸಣ್ಣಮೀನುಗಳ ರಕ್ಷಣೆಗಲ್ಲ!

ಅಂದ ಮೇಲೆ, ಇಲ್ಲಿ ಜೀತಕ್ಕೆ ದೂಡಲ್ಪಟ್ಟ ಈ ಇಬ್ಬರು ಹೆಣ್ಣುಮಕ್ಕಳ ದುಡಿಮೆಯ ಪಾಲೂ ಸೇರಿ ಇಂದು ಈ ದೇಶದ ಕೊಟ್ಯಾಧಿಪತಿಗಳು ಜಗತ್ತಿನಲ್ಲೇ ಅತಿವೇಗದ ಬೆಳವಣಿಗೆ ಕಾಣುತ್ತಿರುವುದು. ಹಿಂದುಳಿಸಲ್ಪಟ್ಟ ಭಾರತದ ಅನಕ್ಷರಸ್ಥ, ಭಾಷೆ ತಿಳಿಯದ ಬಡ ಭಾರತೀಯರ ಬೆವರಿನ ಫಲವೇ ಇಂದು ಭಾರತದ ಸೋ ಕಾಲ್ಡ್ ‘ಅಭಿವೃದ್ಧಿ’ಯಾಗಿ ‘ಹೊಳೆಯುತ್ತಿರುವುದು’. ಭಾರತದೊಳಗೇ ಸೃಷ್ಟಿಯಾಗಿರುವ ಈ ವಸಾಹತುಶಾಹಿ ಶೋಷಣೆಯ ಸ್ಪಷ್ಟ ಪರಿಚಯ ನಮಗೆ ಈ ಲಾಕ್‌ಡೌನ್ ಸಂದರ್ಭದಲ್ಲಿ ಉಂಟಾಗಿದೆಯಲ್ಲವೇ?

ಬಡಭಾರತದ ಪ್ರತಿನಿಧಿಗಳಾಗಿ ಬಿಹಾರ, ಬಂಗಾಳ, ಜಾರ್ಖಂಡ್, ಅಸ್ಸಾಂ, ಮಣಿಪುರ, ದೆಹಲಿ, ರಾಜಸ್ಥಾನಗಳಿಂದ ಹೊರಟು; ಭಾಷೆ, ಜೀವನಕ್ರಮ ತಿಳಿಯದ ಅಪರಿಚಿತ ನಾಡುಗಳಲ್ಲೆಲ್ಲ ಹರಡಿ ನೆಲೆನಿಂತು; ಇಂದು ಇಲ್ಲಿ, ನಾಳೆ ಇನ್ನೆಲ್ಲೋ ಎಂಬಂತೆ ಕಾಲಿಟ್ಟಲ್ಲೆಲ್ಲ ತಮ್ಮ ಕಡಿಮೆ ‘ಬೆಲೆ’ಯ ಶ್ರಮಶಕ್ತಿಯನ್ನು ಮಾರುತ್ತಾ; ‘ಹೊಳೆಯುತ್ತಿರುವ’ ಭಾರತದ 150 ಕಾರ್ಪೋರೇಟ್ ಕುಟುಂಬಗಳ ಕೋಟಿಗಳನ್ನು ಇನ್ನಷ್ಟು ಮತ್ತಷ್ಟು ಹೆಚ್ಚಿಸುತ್ತಿರುವ ವಲಸೆ ಕಾರ್ಮಿಕರಿಲ್ಲದಿದ್ದಿದ್ದರೆ ಇದೆಲ್ಲ ಸಾಧ್ಯವಿತ್ತೇ? ಆಕ್ಸ್ಫಾಮ್ ವರದಿ ತೋರುವಂತೆ, ದೇಶದ ಕೇವಲ 63 ಅತಿ ಶ್ರೀಮಂತ ಕುಟುಂಬಗಳ ಬಳಿ ದೇಶದ ಬಜೆಟ್‌ಗಿಂತ ಹೆಚ್ಚು ಸಂಪತ್ತು (24 ಲಕ್ಷ ಕೋಟಿಗಿಂತ ಹೆಚ್ಚು) ಶೇಖರಗೊಂಡಿದೆ. 2019ರ ಒಂದು ಅಧ್ಯಯನದ ಪ್ರಕಾರ ಭಾರತದಲ್ಲಿ 137 ಮಂದಿ ಡಾಲರ್ ಬಿಲಿಯನೇರ್‌ಗಳಿದ್ದಾರೆ. ಒಂದು ಬಿಲಿಯನ್ ಎಂದರೆ 100 ಕೋಟಿ ಮತ್ತು ಈ ಲೆಕ್ಕ ಭಾರತದ ರೂಪಾಯಿಗಳ ಲೆಕ್ಕದ ಕೋಟಿಗಳದ್ದಲ್ಲ ಬದಲಿಗೆ ಡಾಲರ್ ಕೋಟಿಗಳದ್ದು! ಭಾರತವು ಅತಿವೇಗದಲ್ಲಿ ಬೆಳೆಯುತ್ತಿರುವ ಡಾಲರ್ ಬಿಲಿಯನೇರ್‌ಗಳನ್ನು ಮತ್ತು ಡಾಲರ್ ಮಿಲಿಯನೇರ್‌ಗಳನ್ನು ಹೊಂದಿರುವ ಜಗತ್ತಿನ ಮೂರನೇ ರಾಷ್ಟ್ರವಾಗಿದೆ!!

ಈ ಎಲ್ಲ ಮಿಲಿಯನ್‌ಗಳು, ಬಿಲಿಯನ್‌ಗಳ ಹಿಂದೆ ಅಡಗಿರುವುದು ಪ್ರಧಾನವಾಗಿ ಇದೇ ವಲಸೆ ಕಾರ್ಮಿಕರ ಶ್ರಮ, ಅವರೊಂದಿಗೆ ಭಾರತದ ಇನ್ನಿತರ ಎಲ್ಲ ಗ್ರಾಮೀಣ ಮತ್ತು ನಗರದ ಶ್ರಮಜೀವಿಗಳ ಶ್ರಮ. ಅದರೊಂದಿಗೆ, ಭಾರತದ ಎಲ್ಲ ಸಾಮಾನ್ಯ ಜನರ ಜೇಬುಗಳಿಂದ ಕದ್ದ ಹಣ (ಬ್ಯಾಂಕುಗಳಿಂದ ಪಡೆದ ಸಾಲ ಕಟ್ಟದೆ ಕದ್ದು ಓಡುವುದೆಂದರೆ ನಮ್ಮ ಜೇಬಿನಿಂದಲೇ ಹಣ ಕದಿಯುವುದೆಂದೇ ಅರ್ಥ ಎಂಬುದು ನಮಗಿನ್ನೂ ಅರಿವಿಗೆ ಬಂದಿಲ್ಲ).

ಇದನ್ನೂ ಓದಿ: Horrific Tale of Human Trafficking, Sexual assault and bonded labour of Migrant Adivasi woman

‘ಸೂರ್ಯ ಮುಳುಗದ ಸಾಮ್ರಾಜ್ಯ’ ಎಂಬ ಹೆಸರು ಪಡೆದಿದ್ದ ಬ್ರಿಟಿಷ್ ಸಾಮ್ರಾಜ್ಯವನ್ನು, ಹಾಗೆಯೇ ಯುರೋಪಿನ ಇನ್ನೆಲ್ಲ ದೇಶಗಳನ್ನೂ, ನಂತರದ ಅಮೇರಿಕಾವನ್ನೂ ಕಟ್ಟಿದ್ದು ಏಷ್ಯಾ ಮತ್ತು ಆಫ್ರಿಕಾದ ವಸಾಹತುಶಾಹಿ ದಮನಕ್ಕೊಳಗಾದ ಮೂಲನಿವಾಸಿಗಳ ಮತ್ತು ಬಡವರ ದುಡಿಮೆ. ಇಂದು ‘ಅತಿವೇಗದ ಅಭಿವೃದ್ದಿ’ ಸಾಧಿಸುತ್ತಿರುವ ‘ಆ ಭಾರತ’ವನ್ನು ಕಟ್ಟುತ್ತಿರುವುದು ಇದೇ ದೇಶದ ಮೂಲನಿವಾಸಿಗಳು ಮತ್ತು ಬಡವರಲ್ಲೇ ಕಡುಬಡವರಾದ ಈ ವಲಸೆ ಕಾರ್ಮಿಕರ ದುಡಿಮೆ!

ಅತ್ಯಾಚಾರ
ಬ್ರಿಟಿಷರ ವಿರು‍ದ್ಧದ ಹೋರಾಟದ ಸಂತಾಲಿ ನಾಯಕರು ಸಿದ್ದು ಮುರ್ಮು

ಬ್ರಿಟಿಷ್ ಆಳ್ವಿಕೆಗಾರರ ಪಾಪದಲ್ಲಿ ಅಲ್ಲಿನ ಪ್ರಜೆಗಳ ತಪ್ಪೇನು ಎಂದು ವಾದಿಸಬಹುದು…… ಅದನ್ನು ನಾವು ಒಪ್ಪಲು ಸಾಧ್ಯವಿಲ್ಲ. ಅಂತೆಯೇ, ಇಂದು ರೈಲಿನಲ್ಲಿ ನೀರಿಲ್ಲದೆ ಪ್ರಾಣಕಳೆದುಕೊಳ್ಳುತ್ತಿರುವ, ಪ್ಲಾಟ್‌ಫಾರ್ಮಿನಲ್ಲಿ ಇಬ್ಬರು ಮಕ್ಕಳನ್ನು ಅನಾಥರನ್ನಾಗಿಸಿ ತಾನೂ ಅನಾಥ ಹೆಣವಾಗುವ, ನಡುರಸ್ತೆಯಲ್ಲಿ ಅಪಘಾತದ ಬಲಿಪಶುಗಳಾಗುವ, ಯಾವುದೋ ದೂರದೂರಿನ ಅಗರಬತ್ತಿ ಕಾರ್ಖಾನೆಯಲ್ಲಿ ಜೀತದಾಳಾಗುವ, ಅಲ್ಲಿನ ಅಸಹನೀಯ ವಾತಾವರಣ ಮತ್ತು ದುಡಿಮೆ ಸಹಿಸಲಾರದೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಕ್ಕೆ ಘೋರ ಅತ್ಯಾಚಾರಕ್ಕೆ ಗುರಿಯಾಗುವ ಎಲ್ಲ ವಲಸೆ ಕಾರ್ಮಿಕರಲ್ಲಿ ನನಗೆ ಇದೆ ಜಾರ್ಖಂಡಿನ ಸಂತಾಲ್ ಬುಡಕಟ್ಟಿನ ಮುಗ್ಧ ಹೆಣ್ಣುಮಕ್ಕಳ ಮುಖವೇ ಕಾಣುತ್ತದೆ!!

ಅತ್ಯಾಚಾರ
ಬ್ರಿಟಿಷರ ವಿರುದ್ಧದ ಹೋರಾಟದ ಸಂತಾಲಿ ನಾಯಕಿ ಫುಲು ಮುರ್ಮು

ಒಂದು ಕಾಲದಲ್ಲಿ, ಭಾರತದ ಭಾರೀ ಭಾರೀ ರಾಜರುಗಳು ಸೋತು ಶರಣಾಗಿದ್ದಾಗ, ಬ್ರಿಟಿಷ್ ಸಾಮ್ರಾಜ್ಯಾಧಿಪತಿಗಳನ್ನು ವರ್ಷಗಳ ಕಾಲ ತಮ್ಮ ನೆಲದ ಮೇಲೆ ಕಾಲಿಡಲು ಬಿಡದೆ ನಿರಂತರವಾಗಿ ಕಾದಿದ ಸಂತಾಲ್ ಬುಡಕಟ್ಟು ಇನ್ನೂ ಎಷ್ಟು ಕಾಲ ಈ ದೇಶದೊಳಗಿನ ತನ್ನದೇ ಜನಗಳಿಂದ ಆಗುತ್ತಿರುವ ದಮನವನ್ನು ಸಹಿಸಿಕೊಂಡಿರಬಲ್ಲದು? ಗೊತ್ತಿಲ್ಲ!

ಈ ಪ್ರಶ್ನೆಗೆ ಕಾಲ ಮಾತ್ರ ಉತ್ತರ ಹೇಳಬಲ್ಲದು.

(ಲೇಖಕರು ಕರ್ನಾಟಕ ಜನಶಕ್ತಿ ರಾಜ್ಯ ಸಂಚಾಲಕರು, ಮಹಿಳಾ ಹೋರಾಟಗಾರರು)


Also Read: Bangalore: Shocking Tale of Human Trafficking, Sexual assault and bonded labour of Migrant Adivasi woman

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...