ಕೊರೊನಾ ಕಾರಣಕ್ಕೆ ಬಾಕಿಯಾಗಿದ್ದ ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ ಜೂನ್ 18 ರಂದು ನಡೆಯಲಿದ್ದು, ಈ ಸಂಬಂಧ ವಿದ್ಯಾರ್ಥಿಗಳು ಮತ್ತು ಅವರ ಪರೀಕ್ಷಾ ಕೇಂದ್ರದ ವಿವರವುಳ್ಳ ತಾತ್ಕಾಲಿಕ ಪಟ್ಟಿ ಬಿಡುಗಡೆಯಾಗಿದೆ.
ವಿದ್ಯಾರ್ಥಿಗಳು ತಾವಿರುವ ಜಿಲ್ಲೆಯಲ್ಲೆ ಪರೀಕ್ಷೆ ಬರೆಯಲು ಅವಕಾಶ ನೀಡಿರುವ ಪದವಿ ಪೂರ್ವ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳ ತಾತ್ಕಾಲಿಕ ಪಟ್ಟಿ ಬಿಡುಗಡೆ ಮಾಡಿದ್ದು, ತಿದ್ದುಪಡಿಗೆ ಜೂನ್ 5 ರ ವರೆಗೆ ಕಾಲೇಜುಗಳ ಪ್ರಿನ್ಸಿಪಾಲರ ಮೂಲಕ ಅವಕಾಶ ಕಲ್ಪಿಸಿದೆ.
ಅಂತಿಮ ಪಟ್ಟಿಯನ್ನು ಜೂನ್ 7 ರಂದು ಪ್ರಕಟಿಸಲಾಗುತ್ತದೆ. ಪದವಿ ಪೂರ್ವ ಶಿಕ್ಷಣ ಇಲಾಖೆಯ www.pue.kar.nic.in ವೆಬ್‌ಸೈಟ್‌ನಲ್ಲಿ ಪ್ರವೇಶ ಪತ್ರ ಡೌನ್ ಲೋಡ್ ಮಾಡಿಕೊಂಡು ನೇರವಾಗಿ ಪರೀಕ್ಷಾ ಕೇಂದ್ರಕ್ಕೆ ಹೋಗಬಹುದಾಗಿದೆ ಎಂದು ಪಿಯು ಪರೀಕ್ಷಾ ಮಂಡಳಿ ತನ್ನ ಪ್ರಕಟಣೆ ತಿಳಿಸಿದೆ.
ಜುಲೈ 1ರಿಂದ ಶಾಲೆಗಳ ಆರಂಭ ಎಂಬುವುದು ನಿರ್ಧರಿತವಾಗಿಲ್ಲ: ಸುರೇಶ್ ಕುಮಾರ್
ಶಿಕ್ಷಣ ಸಚಿವ ಸುರೇಶ್ ಕುಮಾರ್ ಶಾಲೆಗಳ ಆರಂಭಕ್ಕೆ ಮುನ್ನ ಪಾಲಕರ ಅಭಿಪ್ರಾಯ ಕ್ರೋಢೀಕರಣಕ್ಕೆ ನಿರ್ಧರಿಸಲಾಗಿದ್ದು, ಅದಕ್ಕಾಗಿ ಜೂನ್ 11ರಿಂದ 13ರವರೆಗೆ ಪಾಲಕರು ಮತ್ತು ಶಾಲಾಭಿವೃದ್ಧಿ ಸಮಿತಿಯ ಸಭೆ ಕರೆದು ಅಭಿಪ್ರಾಯ ಸಂಗ್ರಹಿಸಲಾಗುವುದು. ನಂತರ ಅದನ್ನು ಕ್ರೋಢೀಕರಿಸಿ ಜೂನ್ 15ಕ್ಕೆ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದಿದ್ದಾರೆ.
ಕೇಂದ್ರ ಸರ್ಕಾರ ಅದನ್ನು ಆಧರಿಸಿ ನೀಡುವ ನಿರ್ದೇಶನದ ಅನ್ವಯ ಶಾಲೆಗಳನ್ನು ಆರಂಭಿಸುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಎಸ್ಎಸ್‌ಎಲ್‌ಸಿ ಪರೀಕ್ಷೆಯ ವೇಳೆ ಮಕ್ಕಳ ಸುರಕ್ಷತೆಗೆ ಕೈಗೊಂಡಿರುವ ಕ್ರಮಗಳನ್ನೆ ಶಾಲೆ ಪುನರಾರಂಭವಾದಾಗಲೂ ಮುಂದುವರೆಸಲಾಗುವುದು ಎಂದರು.
ಈ ಬಾರಿ ಶಾಲೆಗಳು ವಿಳಂಬವಾಗಿ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಸಿಗುವ ಶೈಕ್ಷಣಿಕ ದಿನಗಳಿಗೆ ಅನುಗುಣವಾಗಿ ಪಠ್ಯಕ್ರಮ ಕಡಿತಗೊಳಿಸಲು ಚಿಂತಿಸಲಾಗಿದೆ. ಆ ಬಗ್ಗೆ ರಾಜ್ಯ ಶಿಕ್ಷಣ ಸಂಶೋಧನೆ ಹಾಗೂ ತರಬೇತಿ ನಿರ್ದೇಶನಾಲಯದೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಓದಿ: ಕುಡಿಯುವ ನೀರನ್ನು ಮಕ್ಕಳೇ ತಂದರೆ ಒಳ್ಳೆಯದು: ಹೀಗೆಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದೇಕೆ?


