ಕೊರೊನಾ ಸಾಂಕ್ರಾಮಿಕ ಸಂದರ್ಭದಲ್ಲಿ ದೇಶಾದ ಪ್ರಮುಖ ಮಾಧ್ಯಮಗಳು ತಮ್ಮ ಪತ್ರಕರ್ತರ ನ್ನು ವಜಾಗೊಳಿಸಿರುವುದು ಅಥವಾ ಸಂಬಳ ಕಡಿತಗೊಳಿಸಿರುವುದರ ಕುರಿತು ಸಲ್ಲಿಸಲಾದ ಪಿಐಎಲ್ ಗೆ ಉತ್ತರಿಸುವಂತೆ ಬಾಂಬೆ ಹೈಕೋರ್ಟ್ ನಿನ್ನೆ ಕೇಂದ್ರ ಸರ್ಕಾರ, ಮಹಾರಾಷ್ಟ್ರ ರಾಜ್ಯ ಸರ್ಕಾರ ಸೇರಿದಂತೆ ಹತ್ತು ಮಾಧ್ಯಮಗಳಿಗೆ ನೋಟಿಸ್ ನೀಡಿದೆ.
ಮಹಾರಾಷ್ಟ್ರ ಯೂನಿಯನ್ ಆಫ್ ವರ್ಕಿಂಗ್ ಜರ್ನಲಿಸ್ಟ್ಸ್ ಮತ್ತು ನಾಗ್ಪುರ ಯೂನಿಯನ್ ಆಫ್ ವರ್ಕಿಂಗ್ ಜರ್ನಲಿಸ್ಟ್ಸ್ ಪತ್ರಕರ್ತರ ಸಂಘಗಳು ಮಾಧ್ಯಮ ಸಂಸ್ಥೆಗಳು ಕೆಲಸದಿಂದ ತೆಗೆದಿರುವುದನ್ನು ವಿರೋಧಿಸಿ ಪಿಐಎಲ್ ಸಲ್ಲಿಸಿವೆ. ವೇತನ ಕಡಿತ ಮತ್ತು ಪತ್ರಕರ್ತರ ವಜಾಗಳನ್ನು “ಕಾನೂನುಬಾಹಿರ ಮತ್ತು ಅನಿಯಂತ್ರಿತ” ಪಿಐಎಲ್‌ನಲ್ಲಿ ವಾದಿಸಲಾಗಿದೆ.
ಬಾಂಬೆ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಎಸ್.ಬಿ. ಶುಕ್ರೆ ಮತ್ತು ಎ.ಎಸ್. ಕಿಲೋರ್ ನೇತೃತ್ವದ ನ್ಯಾಯಪೀಠವು ಈ ಅರ್ಜಿಯ ವಿಚಾರಣೆ ನಡೆಸುತ್ತಿದ್ದು ಈ ಕುರಿತು ನಾಲ್ಕು ವಾರಗಳಲ್ಲಿ ಉತ್ತರಿಸುವಂತೆ ಇಂಡಿಯನ್ ನ್ಯೂಸ್ ಪೇಪರ್ ಸೊಸೈಟಿ, ವಿದರ್ಭ ಡೈಲಿ ಪತ್ರಿಕೆಗಳು, ಲೋಕಮತ್ ಮೀಡಿಯಾ, ಟೈಮ್ಸ್ ಆಫ್ ಇಂಡಿಯಾ / ಮಹಾರಾಷ್ಟ್ರ ಟೈಮ್ಸ್, ದೈನಿಕ್ ಭಾಸ್ಕರ್, ಸಕಲ್ ಮೀಡಿಯಾ, ಇಂಡಿಯನ್ ಎಕ್ಸ್ ಪ್ರೆಸ್ / ಲೋಕ ಸತ್ತಾ, ತರುಣ್ ಭಾರತ್, ನವ ಭಾರತ್ ಮೀಡಿಯಾ ಗ್ರೂಪ್, ದೇಶೋನ್ನತಿ ಗ್ರೂಪ್ ಮತ್ತು ಪುಣ್ಯ ನಗರಿ ಗ್ರೂಪ್ ಸೇರಿದಂತೆ ಕೇಂದ್ರ ಮತ್ತು ಮಹಾರಾಷ್ಟ್ರ ಸರ್ಕಾರಕ್ಕೆ ನೋಟಿಸ್ ನೀಡಿದೆ.
ಇದನ್ನೂ ಓದಿ: ನಷ್ಟದ ಜೊತೆಗೆ ಲಾಕ್‌ಡೌನ್ ಎಫೆಕ್ಟ್: TV5 ನಿಂದ 100ಕ್ಕೂ ಹೆಚ್ಚು ಪತ್ರಕರ್ತರು ಹೊರಕ್ಕೆ
COVID-19 ಕಾರಣದಿಂದಾಗಿ ವಿಧಿಸಲಾದ ಲಾಕ್‌ಡೌನ್ ಸಮಯದಲ್ಲಿಯೂ ಸಹ ಮಾಧ್ಯಮ ಸಂಸ್ಥೆಗಳ ನೌಕರರು ಕೆಲಸ ಮಾಡುತ್ತಿದ್ದಾರೆ. ಆದರೆ ಅವರ ಸೇವೆಗಳನ್ನು ಕೊನೆಗೊಳಿಸುವ ಮೂಲಕ ಅಥವಾ ತಮ್ಮ ಒಪ್ಪಂದಗಳನ್ನು ನವೀಕರಿಸಲು ನಿರಾಕರಿಸುವ ಮೂಲಕ, ಮಾಧ್ಯಮ ಸಂಸ್ಥೆಗಳು ಅಮಾನವೀಯ ಮತ್ತು ಕಾನೂನುಬಾಹಿರ ಅಭ್ಯಾಸಗಳಲ್ಲಿ ತೊಡಗುತ್ತಿವೆ ಎಂದು ಪಿಐಎಲ್‌ನಲ್ಲಿ ಉಲ್ಲೇಖಿಸಲಾಗಿದೆ. ಹಲವಾರು ಪತ್ರಿಕೆ ಸಂಸ್ಥೆಗಳು ತಮ್ಮ ಉದ್ಯೋಗಿಗಳ ಸೇವೆಗಳನ್ನು ಕೊನೆಗೊಳಿಸುತ್ತಿವೆ ಅಥವಾ “ಅನಿಯಂತ್ರಿತ ರೀತಿಯಲ್ಲಿ” ರಾಜೀನಾಮೆ ನೀಡುವಂತೆ ಒತ್ತಾಯಿಸುತ್ತಿವೆ ಎಂದು ಅರ್ಜಿಯಲ್ಲಿ ದೂರಲಾಗಿದೆ.
ತಮ್ಮ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಬೇಡಿ ಅಥವಾ ವೇತನ ಕಡಿತಗೊಳಿಸಬಾರದು ಎಂದು ದೇಶದ ಎಲ್ಲಾ ಕಂಪೆನಿಗಳಿಗೆ ಪ್ರಧಾನಿ ಮೋದಿಯವರು ಮನವಿ ಮಾಡಿದ್ದಾರೆ. ಆದರೆ ಅದನ್ನು ಮಾಧ್ಯಮ ಸಂಸ್ಥೆಗಳು ಗಣನೆಗೆ ತೆಗೆದುಕೊಂಡಿಲ್ಲ. ಮಾರ್ಚ್ 20 ರಂದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಇದೇ ರೀತಿಯ ಸಲಹೆಯನ್ನು ನೀಡಿತು. ಪತ್ರಿಕೆಗಳು ಮತ್ತು ಇತರ ಮಾಧ್ಯಮ ಸಂಸ್ಥೆಗಳ ಮಾಲೀಕರ ಇಂತಹ ಕ್ರಮಗಳು “ಅಮಾನವೀಯ ಮತ್ತು ಕಾನೂನುಬಾಹಿರ”ವಾಗಿವೆ. ಭಾರತದ ಸಂವಿಧಾನದ 14, 19 ಮತ್ತು 21 ನೇ ವಿಧಿ ನಾಗರಿಕರಿಗೆ ಖಾತರಿಪಡಿಸಿದ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಪಿಐಎಲ್ ಉಲ್ಲೇಖಿಸಿದೆ.
“ಕೊರೊನಾವೈರಸ್ ಸಾಂಕ್ರಾಮಿಕ ಬಿಕ್ಕಟ್ಟನ್ನು” ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಲು ಪ್ರಯತ್ನಿಸುತ್ತಾ ಹಲವು ಮಾಧ್ಯಮ ಸಂಸ್ಥೆಗಳು ತಮ್ಮ ಒಪ್ಪಂದವನ್ನು ಮೀರಿ ವರ್ತಿಸುತ್ತಿವೆ. ಬಲವಂತವಾಗಿ ಕೆಲಸದಿಂದ ತೆಗೆಯಲಾಗುತ್ತಿದೆ. ಅನಿಯಂತ್ರಿತ ವೇತನ ಕಡಿತ ಮಾಡಲಾಗುತ್ತಿದೆ. ಇದನ್ನು ತಡೆಯಬೇಕೆಂದು ಪಿಐಎಲ್ ಕೋರಿದೆ.
ಪತ್ರಕರ್ತರಿಗೆ ಸಂಭಾವನೆ ನೀಡುವ ಬಗ್ಗೆ ಮಜಿತಿಯಾ ವೇತನ ಮಂಡಳಿಯ ಶಿಫಾರಸುಗಳನ್ನು ಕೇಂದ್ರವು 2011 ರಲ್ಲಿ ಅಂಗೀಕರಿಸಿದೆ ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ. ಆದರೆ ಪ್ರಸ್ತುತ ಮಾಧ್ಯಮ ಸಂಸ್ಥೆಗಳು ವರ್ಕಿಂಗ್ ಜರ್ನಲಿಸ್ಟ್ಸ್ ಆಕ್ಟ್ 1955 ಒದಗಿಸಿದ ಚೌಕಟ್ಟಿನ ಶಿಫಾರಸುಗಳನ್ನು ಉಲ್ಲಂಘಿಸಿವೆ ಎಂದು ಪಿಐಎಲ್‌ನಲ್ಲಿ ವಾದಿಸಲಾಗಿದೆ.
ಇದನ್ನೂ ಓದಿ: “ವಿಶ್ವಾಸಾರ್ಹ” ಪತ್ರಿಕೆಯೊಳಗೆ ನಡೆಯುತ್ತಿರೋದು ಕಾಸ್ಟ್ ಕಟಿಂಗೊ? ಕ್ಯಾಸ್ಟ್ ಕಟಿಂಗೊ?


