ಮದ್ಯದ ದೊರೆ ಉದ್ಯಮಿ ವಿಜಯ ಮಲ್ಯ ಅವರನ್ನು ಇಂಗ್ಲೆಂಡ್‌ನಿಂದ ಭಾರತಕ್ಕೆ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಮತ್ತೊಂದು ಹೊಸ ಕಾನೂನು ತೊಡಕು ಎದುರಾಗಿದ್ದು, “ಮುಂದಿನ ಕಾನೂನು ಸಮಸ್ಯೆ ಬಗೆಹರಿಸದ ಹೊರತು ಮಲ್ಯ ಅವರನ್ನು ಭಾರತಕ್ಕೆ ವಾಪಸ್ ಕಳುಹಿಸಲಾಗುವುದಿಲ್ಲ” ಎಂದು ಎಂದು ಬ್ರಿಟಿಷ್ ಹೈಕಮಿಷನ್ ಇಂದು ಸ್ಪಷ್ಟಪಡಿಸಿದೆ.
ಭಾರತಕ್ಕೆ ತನ್ನನ್ನು ಹಸ್ತಾಂತರಿಸುವುದನ್ನು ವಿರೋಧಿಸಿ ವಿಜಯ ಮಲ್ಯ ಯುಕೆ ಸುಪ್ರೀಂ ಕೋರ್ಟ್‌ಗೆ ಕಳೆದ ಮೇ 14ರಂದು ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಆದರೆ ಈ ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಮಲ್ಯ ಅವರನ್ನು ಶೀಘ್ರದಲ್ಲಿ ಭಾರತಕ್ಕೆ ಕರೆತರಲಿದ್ದಾರೆ ಎನ್ನುವ ಸುದ್ದಿ ಹರಡಿತ್ತು. ಇದರ ಕುರಿತು ಇಂದು ಬ್ರಿಟೀಷ್ ಹೈಕಮಿಷನ್ ನೀಡಿರುವ ಹೇಳಿಕೆಯೂ ವಿಜಯ್ ಮಲ್ಯನನ್ನು ಭಾರತಕ್ಕೆ ಕರೆತರುವುದು ಮತ್ತಷ್ಟು ವಿಳಂಬವಾಗುವಂತಾಗಿದೆ.
ಇದರ ಕುರಿತು ಸ್ಪಷ್ಟನೆ ನೀಡಿರುವ ಬ್ರಿಟೀಷ್ ಹೈಕಮಿಷನ್ ವಕ್ತಾರರು, “ಭಾರತಕ್ಕೆ ಹಸ್ತಾಂತರ ಮಾಡುವ ವಿರುದ್ಧ ಮಲ್ಯ ಸಲ್ಲಿಸಿದ್ದ ಮೇಲ್ಮನವಿಯನ್ನು ಯುಕೆ ಸುಪ್ರೀಂ ಕೋರ್ಟ್ಗೆ ಈಗಾಗಲೇ ನಿರಾಕರಿಸಿದೆಯಾರೂ, ಅವರನ್ನು ಹಸ್ತಾಂತರಿಸುವ ವ್ಯವಸ್ಥೆ ಮಾಡುವ ಮೊದಲು ಇನ್ನೂ ಹೆಚ್ಚಿನ ಕಾನೂನು ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ” ಎಂದು ಹೇಳಿದ್ದಾರೆ.
“ಯುಕೆ ಕಾನೂನಿನ ಪ್ರಕಾರ ಹಸ್ತಾಂತರಿಸುವಿಕೆಗೆ ಸಂಬಂಧಿಸಿದ ಕಾನೂನು ತೊಡಕುಗಳು ಪರಿಹಾರವಾಗುವವರೆಗೆ ಅವರನ್ನು ಭಾರತಕ್ಕೆ ಹಸ್ತಾಂತರಿಸುವುದು ಸಾಧ್ಯವಿಲ್ಲ. ಸಮಸ್ಯೆ ಗೌಪ್ಯವಾಗಿದೆ. ಇದರ ವಿವರಗಳನ್ನು ಸದ್ಯಕ್ಕೆ ನೀಡಲು ಸಾಧ್ಯವಿಲ್ಲ. ಅಲ್ಲದೆ, ಈ ಸಮಸ್ಯೆಯನ್ನು ಪರಿಹರಿಸಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ಸಹ ನಾವು ಅಂದಾಜಿಸಲು ಸಾಧ್ಯವಿಲ್ಲ. ಆದರೆ, ಇದನ್ನು ಸಾಧ್ಯವಾದಷ್ಟು ಬೇಗ ಪರಿಹರಿಸಲು ಯತ್ನಿಸುತ್ತೇವೆ” ಎಂದು ಹೈಕಮಿಷನ್ ಅಧಿಕಾರಿಗಳು ತಿಳಿಸಿದ್ದಾರೆ.
ಕಿಂಗ್‌ಫಿಶರ್ ಏರ್‌ಲೈನ್ಸ್ ಕುಸಿತ ಕಂಡ ಪರಿಣಾಮವಾಗಿ ವಿಜಯ ಮಲ್ಯ ಭಾರತದಿಂದ ಲಂಡನ್‌ಗೆ ಪರಾರಿಯಾಗಿದ್ದರು. ವಿಜಯ್ ಮಲ್ಯ ಭಾರತದಲ್ಲಿ ಸುಮಾರು 9,000 ಕೋಟಿ ವಂಚನೆ ಆರೋಪಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಭಾರತಕ್ಕೆ ಹಸ್ತಾಂತರಿಸುವಂತೆ 2018 ರಲ್ಲೇ ಯುಕೆ ಹೈಕೋರ್ಟ್ ಆದೇಶಿಸಿತ್ತು. ಇದರ ವಿರುದ್ದ ಮಲ್ಯ ಯುಕೆ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಆದರೆ, ಈಗ ಸುಪ್ರೀಂ ಕೋರ್ಟ್ ಕೂಡಾ ಅರ್ಜಿಯನ್ನು ವಜಾ ಮಾಡಿದೆ.
ಯುಕೆ ಹಸ್ತಾಂತರ ಕಾಯ್ದೆಯ ಪ್ರಕಾರ, ಒಬ್ಬ ವ್ಯಕ್ತಿಯನ್ನು ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ 28 ದಿನಗಳ ಆದೇಶದೊಂದಿಗೆ ಹಸ್ತಾಂತರಿಸಬೇಕಾಗುತ್ತದೆ. ಒಂದು ವೇಳೆ ಹೀಗೆ ಲಂಡನ್‌ಗೆ ಆಶ್ರಯ ಹರಸಿ ಬಂದಿದ್ದ ವ್ಯಕ್ತಿಯು ಆಶ್ರಯ ಹಕ್ಕು ಪಡೆದಿದ್ದರೆ, ಇದು ಯುಕೆಯಲ್ಲಿ ನಿರಾಶ್ರಿತರಾಗಿ ಉಳಿಯಬೇಕೆಂಬ ಮನವಿಯನ್ನು ಸೂಚಿಸುತ್ತದೆ. ಈ ಹಕ್ಕು ಇತ್ಯರ್ಥವಾಗದ ಹೊರತು ಆ ವ್ಯಕ್ತಿಯನ್ನು ಹಸ್ತಾಂತರಿಸಲು ಮಾಡಲು ಸಾಧ್ಯವಿಲ್ಲ.
ಆರ್ಥಿಕ ಅಪರಾಧಿ ವಿಜಯ ಮಲ್ಯ ಯುಕೆಯ ಆಶ್ರಯ ಹಕ್ಕನ್ನು ಹೊಂದಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇದು ಸ್ಪಷ್ಟವಾಗುವವರೆಗೆ ಅವರನ್ನು ಭಾರತಕ್ಕೆ ಹಸ್ತಾಂತರ ಮಾಡುವುದು ಸಾಧ್ಯವಿಲ್ಲ ಎಂದು ಸಿಬಿಐ ಮೂಲಗಳು ತಿಳಿಸಿವೆ.
ಓದಿ: ಸಾಲ ತೀರಿಸುತ್ತೇನೆ, ನನ್ನ ವಿರುದ್ಧದ ಪ್ರಕರಣ ಕೈಬಿಡಿ: ವಿಜಯ್ ಮಲ್ಯ ಮನವಿ


