ಅಂತರ್ಜಾಲದ ಪುಟದ ಮೇಲೆ ಪುಟಕ್ಕಿಟ್ಟು ಮನಪಟಲದಲ್ಲಿ ಹೊಳೆಯುತ್ತಿರುವ ಬರಹವಿದು.
ದಕ್ಷಿಣ ಬ್ರೆಜಿಲಿನ ಫ್ಲೋರಿಯಾನೋಪಾಲಿಸ್‍ನಲ್ಲಿ ನಡೆದಿತ್ತೊಂದು ಶಾಂತಿಯ ಉತ್ಸವ. ಪತ್ರಕರ್ತೆಯೂ ಮತ್ತು ತತ್ವಜ್ಞಾನಿಯೂ ಆದ ಲಿಯಾ ಡಿಸ್ಕಿನ್ ನಿರೂಪಿಸಿದ ಸಂಗತಿ ಅಂತರ್ಜಾಲದಲ್ಲಿ ಅಲೆದಾಡುತ್ತಿದ್ದ ಸೌಹಾರ್ದ ಪ್ರಿಯರ, ಮಾನವತಾ ಪ್ರೇಮಿಗಳ ಹೃದಯವನ್ನು ಮುಟ್ಟಿತು.
ಮಾನವಶಾಸ್ತ್ರಜ್ಞನೊಬ್ಬ ಈ ಬುಡಕಟ್ಟನ್ನು ಅಧ್ಯಯನ ಮಾಡುತ್ತಿದ್ದ. ಅವನ ಕೆಲಸಗಳನ್ನೆಲ್ಲಾ ಮುಗಿಸಿಕೊಂಡು ಹೊರಡುವ ಮುನ್ನ ತನ್ನ ಸುತ್ತುವರಿದಿದ್ದ ಬುಡಕಟ್ಟಿನ ಮಕ್ಕಳಿಗೆ ಆಟವಾಡಿಸಲು ಮತ್ತು ತನ್ನ ಪ್ರೀತಿಯ ಸಂಕೇತವಾಗಿ ಸಿಹಿ ಹಂಚಲು ಹೋಗಿ, ಒಂದು ಸಂಗತಿ ಜಗತ್ತಿಗೆ ತಿಳಿಯಲು ಕಾರಣನಾದ.
ಪಟ್ಟಣದಿಂದ ತಂದಿದ್ದ ಚಾಕೊಲೆಟ್ ಮತ್ತಿತರ ಸಿಹಿತಿನಿಸುಗಳನ್ನು ಬುಟ್ಟಿಯೊಂದರಲ್ಲಿಟ್ಟು ಅದನ್ನು ಒಂದಷ್ಟು ದೂರದಲ್ಲಿರುವ ಮರದ ಕೆಳಗೆ ಇಟ್ಟ. ಮಕ್ಕಳನ್ನೆಲ್ಲಾ ಒಟ್ಟಾಗಿಸಿ ಸಾಲಾಗಿ ನಿಲ್ಲಿಸಿದ. ನಾನು ಸೀಟಿ ಊದಿದಾಗ ಓಡಲು ಪ್ರಾರಂಭಿಸಬೇಕು, ಯಾರು ಮೊದಲು ಓಡುತ್ತಾರೋ ಅವರಿಗೆ ಆ ಎಲ್ಲಾ ತಿನಿಸುಗಳು ಎಂದು ಪೈಪೋಟಿಯನ್ನು ಒಡ್ಡಿದ. ಮಕ್ಕಳೆಲ್ಲಾ ನಿಂತರು. ಈತ “ಹೋಗಿ” ಎಂದು ಸೀಟಿ ಊದುತ್ತಿದ್ದಂತೆ ಆ ಮಕ್ಕಳೆಲ್ಲಾ ಜೋರಾಗಿ ಓಡುವುದು ಬಿಟ್ಟು ಒಬ್ಬರೊಬ್ಬರ ಕೈಗಳನ್ನು ಹಿಡಿದು ಒಟ್ಟಾಗಿ, ಎಲ್ಲರೂ ಓಡುವಂತಾಗುವಂತೆ ಲಘು ವೇಗದಲ್ಲಿ ಓಡಿ, ಒಟ್ಟಿಗೆ ಮುಟ್ಟಿ ಆ ತಿನಿಸುಗಳನ್ನು ಎಲ್ಲರೂ ಹಂಚಿಕೊಂಡು ಸಂತೋಷದಿಂದ ತಿಂದರು.
ಯಾರು ಮೊದಲು ಓಡುತ್ತಾರೋ, ಮಾಡುತ್ತಾರೋ ಅವರಿಗೇ ಬಹುಮಾನ ಎನ್ನುವಂತ ಸ್ಪರ್ಧೆಯ ಆಟವನ್ನು ಬಾಲ್ಯದಿಂದಲೇ ರೂಢಿಗೊಳಿಸಿಕೊಂಡಿರುವಂತಹ ಸಮಾಜದ ಈ ಮಾನವ ಶಾಸ್ತ್ರಜ್ಞನಿಗೆ ಇವರ ರೇಸ್ ಇಲ್ಲದ, ಸ್ಪರ್ಧೆ ಹೂಡದ, ಸಹಕಾರದ ಓಟ ಆಶ್ಚರ್ಯ ತಂದಿತು. “ಯಾಕೆ ಯಾರಾದರೊಬ್ಬರು, ಸಾಮರ್ಥ್ಯವಿರುವವರು ಓಡಿ ಬಹುಮಾನವನ್ನು ಗೆಲ್ಲಲಿಲ್ಲ? ಅದೊಂದು ಖುಷಿ (ಫನ್) ಅಲ್ಲವೇ” ಎಂದು ಕೇಳಿದ.
ಹಾಗೆ ತನ್ನೊಂದಿಗಿರುವವರನ್ನು ಬಿಟ್ಟು ತಾನೊಬ್ಬನೇ ಓಡಿ ಹೋಗಿ ಅದೇನನ್ನೋ ಪಡೆಯುವುದು ಬಹುಮಾನವಲ್ಲ, ಅದು ಅವಮಾನ ಎಂಬ ಸಂಸ್ಕೃತಿಯನ್ನು ರೂಢಿಸಿಕೊಂಡಿರುವ ಆ ಬುಡಕಟ್ಟಿನ ಹೆಣ್ಣುಮಗುವೊಂದು ಮರುಪ್ರಶ್ನಿಸಿತು, “ಬೇರೆಯವರು ನಿರಾಸೆಯ ಬೇಸರದಲ್ಲಿರುವಾಗ ಒಬ್ಬನೇ ಒಬ್ಬ ಖುಷಿಯಾಗಿರಲು ಹೇಗೆ ಸಾಧ್ಯ?”
ಉಬೂಂಟು ಅಲ್ಲಿನ ಬುಡಕಟ್ಟು ರೂಢಿಸಿಕೊಂಡಿರುವ ಪ್ರಜ್ಞೆ. ಅದಿರುವುದು ದಕ್ಷಿಣ ಆಫ್ರಿಕಾದಲ್ಲಿ. ನೀನು ವೇಗವಾಗಿ ಕ್ರಮಿಸಬೇಕಾದರೆ ಒಬ್ಬನೇ ಓಡು. ಆದರೆ ನೀನು ಬಹುದೂರ ಕ್ರಮಿಸಬೇಕಾದರೆ ಒಟ್ಟಾಗಿ ಹೋಗು ಎನ್ನುವ ಆಫ್ರಿಕಾದ ಗಾದೆಯ ಮಾತಿನಂತೆ ಉಬೂಂಟು ಒಂದು ಜೀವನಾದರ್ಶದ ರೂಢಿ.
‘ಊ-ಬೂನ್-ಟೂ’ ಎಂದರೆ ನಮ್ಮಿಂದ ‘ನಾನು’ ಎಂದು ಅರ್ಥ ಜಲು ಅಥವಾ ಖ್ಸೋಸ ಭಾಷೆಯಲ್ಲಿ.
ಆರ್ಚ್ ಬಿಷಪ್ ಮತ್ತು ಸಾಮಾಜಿಕ ಕಾರ್ಯಕರ್ತ ಡೆಸ್ಮಂಡ್ ಟುಟು ಹೇಳುವಂತೆ “ಉಬೂಂಟು ಎನ್ನುವುದು ಮಾನವನಾಗಿರುವುದರ ಸಾರತತ್ವ. ಇದು ಈ ಜಗತ್ತಿಗೆ ಆಫ್ರಿಕನ್ನರ ಕೊಡುಗೆ. ಇದರಲ್ಲಿ ಅತಿಥಿಗಳನ್ನು ಆದರಿಸುವುದು, ಒಬ್ಬರು ಮತ್ತೊಬ್ಬರಿಗೆ ಕಾಳಜಿ ವಹಿಸುವುದು, ಇತರರಿಗಾಗಿ ಪ್ರತಿಫಲಾಪೇಕ್ಷೆ ಇಲ್ಲದೇ ತಮ್ಮ ಕಾಯಕವನ್ನು ವಿಸ್ತರಿಸುವುದು, ಒಬ್ಬನ ಒಳಿತಿನಲ್ಲಿ ತನ್ನಯ ಒಳಿತು ಎಂಬ ಸಿದ್ಧಾಂತವನ್ನು ಪಾಲಿಸುವುದು; ಎಲ್ಲಾ ಇವೆ. ಒಬ್ಬ ವ್ಯಕ್ತಿಯು ಮತ್ತೊಬ್ಬ ವ್ಯಕ್ತಿಯ ಮೂಲಕ ಅನುಬಂಧಕ್ಕೆ ಒಳಗಾಗಿರುವುದೇ ಮಾನವತೆ. ಒಬ್ಬ ಮತ್ತೊಬ್ಬ ವ್ಯಕ್ತಿಯನ್ನು ಅಮಾನವೀಯವಾಗಿ ನಡೆಸಿಕೊಂಡಲ್ಲಿ ತನ್ನನ್ನೇ ಅಮಾನವೀಯಗೊಳಿಸಿಕೊಂಡಂತೆ. ಒಬ್ಬರ ಮೇಲೆ ದಬ್ಬಾಳಿಕೆ ಮಾಡುವುದು ಯಾವುದೇ ಮನುಷ್ಯನಿಗೆ ಅವಮಾನದ ಸಂಗತಿ. ಮನುಷ್ಯರ ಐಕ್ಯತೆ ನಿರ್ಬಂಧಗಳಿಗೆ ಒಳಗಾಗಿದೆ. ಸಮುದಾಯದ ಸಾಮಾನ್ಯ ಒಳಿತಿಗೆ ಸಾಮಾನ್ಯತೆಯಲ್ಲಿ ಅದರ ಭಾಗವಾಗಿರುವ ಪ್ರಜ್ಞೆಯೇ ಒಬ್ಬನ ಮಾನವತೆಯಾಗಿರುತ್ತದೆ.”
ದಕ್ಷಿಣ ಆಫ್ರಿಕಾದ ಅನೇಕ ಭಾಗಗಳಲ್ಲಿ ಉಬೂಂಟು ಪಾಲಿಸುವ ಬುಡಕಟ್ಟಿನ ಜನರಿದ್ದು ಅವರದೊಂದು ಸಕಾರಾತ್ಮಕ ಪದ್ಧತಿಯೊಂದು ಚಾಲ್ತಿಯಲ್ಲಿದೆ. ಅದೇನೆಂದರೆ ಯಾವುದೇ ವ್ಯಕ್ತಿಯು ಏನೇ ತಪ್ಪು ಅಥವಾ ಅಪರಾಧ ಮಾಡಿದರೂ ಅವನನ್ನು ಹಳ್ಳಿಯ ಮಧ್ಯಭಾಗಕ್ಕೆ ಕರೆದುಕೊಂಡು ಬರುತ್ತಾರೆ. ನಂತರ ಊರಿನ ಜನರೆಲ್ಲಾ ಸುತ್ತುವರೆದು, ಎರಡು ದಿನಗಳ ಕಾಲ ಅವನು ಮಾಡಿರುವ ಒಳ್ಳೆಯ ಕೆಲಸಗಳನ್ನೆಲ್ಲಾ ಹೇಳುತ್ತಿರುತ್ತಾರೆ. ಅವರ ಪ್ರಕಾರ ಯಾವುದೇ ವ್ಯಕ್ತಿಯು ಮೂಲದಲ್ಲಿ ಒಳ್ಳೆಯವನೇ ಆಗಿರುತ್ತಾನೆ. ಆದರೆ ಯಾವುದೋ ಒಂದು ಗಳಿಗೆಯಲ್ಲಿ ತಪ್ಪು ಮಾಡಿಬಿಡುತ್ತಾನೆ. ಹೊರಗಿನ ದುಷ್ಟ ಶಕ್ತಿಯ ಪ್ರಭಾವದಿಂದ ತಪ್ಪು ಸಂಭವಿಸಿರುತ್ತದೆ. ಆ ತಪ್ಪು ಮಾಡುವುದೆಂದರೆ ತನ್ನ ಒಳ್ಳೆಯತನವನ್ನು ಮರುಕಳಿಸೆಂದು ಅವನ ಕೂಗು ಅಥವಾ ಅಳಲಾಗಿರುತ್ತದೆ. ಆದ್ದರಿಂದ ಹಳ್ಳಿಯವರೆಲ್ಲಾ ಒಗ್ಗಟ್ಟಾಗಿ ತನ್ನ ಒಳ್ಳೆಯತನಕ್ಕಾಗಿ ಹಾತೊರೆಯುತ್ತಾ ಸಹಾಯ ಬೇಡುತ್ತಿರುವವನಿಗೆ ಸಹಕರಿಸಲೆಂದು ಅವನ ಒಳ್ಳೆಯ ಕೆಲಸಗಳನ್ನು, ಗುಣಗಳನ್ನು ಹೇಳುವಂತಹ ಕೆಲಸವನ್ನು ಮಾಡುತ್ತಾರೆ. ಈ ಆಚರಣೆಯ ಮೂಲಕ ತಪ್ಪು ಮಾಡಿರುವವನು ನಿಸರ್ಗದಿಂದ ಪಡೆದಿರುವ ಒಳ್ಳೆಯತನವನ್ನು ಮರಳಿಪಡೆಯುತ್ತಾನೆಂದು ಅವರ ನಂಬಿಕೆ. ಶಿಕ್ಷೆ ಮತ್ತು ಅವಮಾನಗಳನ್ನು ಮಾಡುವುದರಿಂದ ವ್ಯಕ್ತಿಯು ತಮ್ಮಿಂದ ನಿಸರ್ಗದತ್ತವಾದ ಗುಣರಹಿತನಾಗಿ ಸಂಪೂರ್ಣ ಹೊರಟೇ ಹೋಗುತ್ತಾನೆಂದು ಅವರು ಹೆದರುತ್ತಾರೆ. ಆದ್ದರಿಂದ ಆತನನ್ನು ಅಪಮಾನಿಸುವುದೂ ಇಲ್ಲ, ಶಿಕ್ಷಿಸುವುದೂ ಇಲ್ಲ. ಬದಲಿಗೆ ಅವನ ಒಳ್ಳೆಯತನವನ್ನು ಸ್ಮರಣೆಗೆ ತರುವುದರ ಮೂಲಕ, ಅವನು ಮತ್ತು ನಿಸರ್ಗದ ಕೊಡುಗೆಗೆ ಬೆರೆತುಕೊಳ್ಳಲು ಪ್ರೋತ್ಸಾಹಿಸುತ್ತಾರೆ.
ಯಾರಾದರೊಬ್ಬರು ಏನಾದರೊಂದು ತಪ್ಪು ಮಾಡಿದರೆ ಸಾಕು, ಆತ ಮಾಡಿರುವ ಒಳ್ಳೆಯ ಕೆಲಸ ಮತ್ತು ಸಹಾಯಗಳನ್ನೆಲ್ಲಾ ಮರೆತು ಚಾರಿತ್ರ್ಯವಧೆ ಮಾಡುವ ಜನರ ನಡುವೆ ಉಬೂಂಟು ಜನ ವಿಶೇಷವಾಗಿ ಮತ್ತು ಸಕಾರಾತ್ಮಕವಾಗಿ ಕಾಣುತ್ತಾರೆ. ಚಿತ್ತಾರವನ್ನು ಮಸಿ ನುಂಗಿತು ಎಂದಿಲ್ಲ ಇವರಲ್ಲಿ. ಅಡಿಕೆ ಕದ್ದ ಮಾನ ಆನೆ ಕೊಟ್ಟರೂ ಬಾರದು ಎನ್ನುವ ಜನರಲ್ಲ ಇವರು.
ಇದು ಆಫ್ರಿಕಾದ ಪ್ರಾಚೀನ ಸಾಂಪ್ರದಾಯಿಕ ಧಾರ್ಮಿಕತೆಯ ತತ್ವವೇ ಆಗಿತ್ತು ಎಂದು ತಮ್ಮ ಮಹಾಪ್ರಬಂಧಗಳಲ್ಲಿ ಮಾನವಶಾಸ್ತ್ರಜ್ಞರು ಹೇಳಿದ್ದಾರೆ. ಅವರು ಹಾಗೆ ಇರಲೇ ಬೇಕಾದದ್ದು ಧಾರ್ಮಿಕ ಶ್ರದ್ಧೆ ಮತ್ತು ಸಂಪ್ರದಾಯವೇ ಆಗಿದ್ದು ಉಟೂಂಬುವನ್ನು ಹೆಚ್ಚು ಉತ್ಪ್ರೇಕ್ಷೆಗೊಳಿಸುವ ಅಗತ್ಯವಿಲ್ಲ. ಇತರ ಅಂಧಶ್ರದ್ಧೆಗಳಂತೆ ಇದನ್ನೂ ಪಾಲಿಸುತ್ತಾರೆ ಎಂದೂ ಉಟೂಂಬುವನ್ನು ವೈಭವೀಕರಿಸದಿರಲು ಪಾಶ್ಚಾತ್ಯ ವಿದ್ವಾಂಸರು ವಿಮರ್ಶಿಸುತ್ತಾರೆ.
ಮಾನವನ ಹಿತವನ್ನು ಸಮುದಾಯದ ಸುಖವನ್ನು ಹೊಂದಲು ವಿಶೇಷವಾದ ಪಾಂಡಿತ್ಯದ ಅರ್ಥವಂತಿಕೆ ಏಕೆ ಬೇಕು? ಮಾನವತೆಯ ದುರ್ಭಿಕ್ಷದ ಕಾಲದಲ್ಲಿ, ಒಡಕುಗಳನ್ನೇ ಬಲಗೊಳಿಸುವ ತತ್ವಗಳು ಮೆರೆಯುವಲ್ಲಿ ಅಂಧಾನುಕರುಣೆಯೋ ಅಥವಾ ಉತ್ಪ್ರೇಕ್ಷೆಯೋ ಒಟ್ಟಾರೆ ಯಾವುದೇ ನಡವಳಿಕೆ ಮತ್ತು ರೂಢಿಯು ಮಾನವನಿಗೆ ಸಾಮೂಹಿಕವಾಗಿ ಹಿತವನ್ನು ತಂದರೆ, ಐಕ್ಯತೆಯನ್ನು ಬಲಪಡಿಸುವಂತಾದರೆ ಅದರಲ್ಲಿ ಕೂದಲು ಸೀಳುವುದೇಕೆ ಎನ್ನುತ್ತಾರೆ ಸೌಹಾರ್ದದ ಪ್ರೇಮಿಗಳು.