Homeಅಂಕಣಗಳುಎಲ್ಲರಿಗೂ ಭೂಮಿ ಕೊಡಿ, ಸರ್ಕಾರದ ಮುಂದೆ ರೈತರನ್ನು ಭಿಕ್ಷುಕರನ್ನಾಗಿ ಮಾಡಬೇಡಿ

ಎಲ್ಲರಿಗೂ ಭೂಮಿ ಕೊಡಿ, ಸರ್ಕಾರದ ಮುಂದೆ ರೈತರನ್ನು ಭಿಕ್ಷುಕರನ್ನಾಗಿ ಮಾಡಬೇಡಿ

ಸರ್ಕಾರ ರೈತರ ಹೆಸರಿಗೆ 5000 ಹಾಕುವ ಬದಲು ವ್ಯವಸಾಯದಲ್ಲಿ ಕ್ರಾಂತಿ ತರುವ ಪಣ ತೊಡಬೇಕು.

- Advertisement -
- Advertisement -

ರೈತರ ಸಾಲಮನ್ನಾ ಪ್ರಹಸನಕ್ಕೆ ಇತಿಶ್ರೀ ಹಾಡಿ ಅವರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಗೊತ್ತು ಮಾಡಿ ಎಂದು ಸರ್ಕಾರಕ್ಕೆ ಆಗ್ರಹ ಪೂರ್ವಕವಾಗಿ ಹೇಳುತ್ತಿದ್ದೇನೆ.

ರೈತರ ಸಾಲಮನ್ನಾ ಶ್ರೀಮಂತ ರೈತರಿಗೆ ಒಂದು ವರದಾನ. ಪ್ರತಿವರ್ಷ ಈ ಶ್ರೀಮಂತ ರೈತರು ಒಂದು ಲಕ್ಷ, ಎರಡು ಲಕ್ಷ ಬ್ಯಾಂಕಿನಿಂದ ಸಾಲ ಪಡೆಯುವುದು ವರ್ಷದ ಕೊನೆಯಲ್ಲಿ ಆ ಸಾಲಮನ್ನಾ ಮಾಡಿಸುವುದು. ಹತ್ತಾರು ವರ್ಷಗಳಿಂದ ನಡೆದೇ ಇದೆ. ಶ್ರೀಮಂತ ರೈತರು ಸೈಟು ಕೊಳ್ಳುವುದು, ಕಂಪೆನಿ ಷೇರುಕೊಳ್ಳುವುದಕ್ಕೆ, ವ್ಯವಸಾಯದ ಜೊತೆಗೆ ಅಕ್ಕಿ ಗಿರಣಿ, ಕಿರಾಣಿ ವ್ಯಾಪಾರ ಮಳಿಗೆ ತೆರೆಯಲು ಈ ಸಾಲಮನ್ನಾ ಹಣ ಬಳಕೆಯಾಗುತ್ತಿದೆ.

ಎರಡು ನಾಲ್ಕು ಎಕರೆ ಜಮೀನು ಹೊಂದಿದವರು ರೈತಾಪಿಗಳಲ್ಲವೇ? ಇಂತಹವರು ಶೇ.60ರಷ್ಟು ಜನ ಇದ್ದಾರೆ. ಇವರಿಗೆ ಸಿಗುವ ಸಾಲ ಬಹಳ ಕಡಿಮೆ. ಇವರಿಗೆ ಸಾಲದ ಬದಲು ಪವರ್ ಟಿಲ್ಲರ್‍ನಲ್ಲಿ ಇವರ ಭೂಮಿಯನ್ನ ಉಚಿತವಾಗಿ ಉತ್ತಿ ಕೊಡಬೇಕು, ಕಟಾವು ಮಾಡುವ ಸಾಧನೆ ಡ್ರೈಯರ್ ಹಾರ್ವೆಸ್ಟರ್‍ಗಳನ್ನು ಸಕಾಲದಲ್ಲಿ ಉಚಿತವಾಗಿ ಒದಗಿಸಬೇಕು.

ಕಾರ್ಖಾನೆಯಲ್ಲಿ ತಯಾರಾದ ಪದಾರ್ಥಕ್ಕೆ ಬೆಲೆ ನಿರ್ಧರಿಸುವಾಗ ಅಲ್ಲಿ ಅನುಸರಿಸುವ ಎಲ್ಲ ನಿಯಮಗಳನ್ನೂ ವೈಜ್ಞಾನಿಕವಾಗಿ ರೈತನಿಗೂ ಅನುಸರಿಸಬೇಕು. ವೈಜ್ಞಾನಿಕವಾಗಿ ಬೆಳೆದ ಬೆಳೆಗೆ ಬೆಲೆ ನಿರ್ಧರಿಸಲು ಒಂದು ವ್ಯವಸ್ಥೆ ಮಾಡಲಾಗಿತ್ತು. ಆ ಸಮಿತಿ ತನ್ನ ಅಂತಿಮ ವರದಿ ನೀಡಿದೆ. ಅದನ್ನು ಸರ್ಕಾರ ಕೂಡಲೇ ಅಂಗೀಕರಿಸಿ ಚಾಲ್ತಿಗೆ ಕೊಡಬೇಕು. ಸಾಲಮನ್ನಾ ಹುನ್ನಾರವನ್ನು ಕೊನೆಗಾಣಿಸಬೇಕು.

ಸಣ್ಣ ರೈತರು ತಾವೇ ಹೊಲದಲ್ಲಿ ದುಡಿದು ವ್ಯವಸಾಯ ಮಾಡುತ್ತಾರೆ. 20 ಎಕರೆ ಮೇಲೆ ಜಮೀನುಳ್ಳವರು ಸಂಪೂರ್ಣವಾಗಿ ಕೂಲಿಕಾರ್ಮಿಕರನ್ನೇ ಅವಲಂಬಿಸಿದ್ದಾರೆ. ಈ ವ್ಯವಸಾಯ ಕೂಲಿ ದರ ದಿನಕ್ಕೆ 500ರೂ.ಗಳು. ಕೇರಳದಲ್ಲಿ 800ರೂ ಎಂದು ಕೇಳಲ್ಪಟ್ಟಿದ್ದೇನೆ. ಇಷ್ಟೊಂದು ಕೂಲಿ ಕೊಟ್ಟು ತಮ್ಮ ಎಲ್ಲ ಜಮೀನಿನಲ್ಲೂ ಆಹಾರ ಧಾನ್ಯ ಬೆಳೆಯಲು ಆಗುವುದಿಲ್ಲ. ಬೆಳೆದ ಬೆಳೆಯನ್ನೆಲ್ಲಾ ಮಾರಾಟ ಮಾಡಿದರೂ ಬೆಳೆದವನಿಗೆ ಶೇ.30ರಷ್ಟು ಲಾಭ ದೊರೆಯುವುದಿಲ್ಲ. ಆದ್ದರಿಂದ ಈ ದೊಡ್ಡ ಹಿಡುವಳಿದಾರರು ಸ್ವಲ್ಪ ಜಮೀನಿನಲ್ಲಿ ಆಹಾರ ಧಾನ್ಯ ಬೆಳೆದು ಉಳಿದ ಜಮೀನಿನಲ್ಲಿ ವ್ಯಾಪಾರಕ್ಕೆ ಅನುಕೂಲವಾಗುವ ಶುಂಠಿ, ಕೊತ್ತಂಬರಿ, ತರ್ಕಾರಿ, ಹೂವು ಬೆಳೆಯುತ್ತಾರೆ. ಇನ್ನೂ ಹೆಚ್ಚು ಜಮೀನುಳ್ಳವರು ತೇಗ ಮೊದಲಾದ ಲಾಭ ತರುವ ಮರಗಳನ್ನು ಬೆಳೆಯುತ್ತಾರೆ. ಇದರಿಂದಾಗಿ ಭಾರತದಲ್ಲಿ ಆಹಾರ ಧಾನ್ಯಗಳ ಕೊರತೆ ಕಾಣಿಸಿಕೊಂಡಿದೆ. ಸಿ.ಸುಬ್ರಮಣ್ಯಂ ಅವರು ವ್ಯವಸಾಯ ಸಚಿವರಾಗಿದ್ದಾಗ ಆಹಾರ ಕ್ರಾಂತಿ ಒಂದನ್ನು ಮಾಡಿದ್ದರು. ಎಂದು ಇದನ್ನು ಕರೆದರು. ಭಾರತದಲ್ಲಿ ಆಹಾರ ಧಾನ್ಯಕ್ಕೆ ಕೊರತೆ ಉಂಟಾಗದಂತೆ ಅವರು ನೋಡಿಕೊಂಡರು. ಭಾರತ ವ್ಯವಸಾಯ ಪ್ರಧಾನ ದೇಶ ಭಾರತೀಯರು ಭಿಕ್ಷೆ ಪಾತ್ರೆ ಹಿಡಿದು ಅನ್ಯ ದೇಶಗಳ ಬಳಿ ಹೋಗಬಾರದು ಅದು ಅಪಮಾನಕರ ಎಂದು ಸಿ.ಸುಬ್ರಮಣ್ಯಂ ಅವರ ಧ್ಯೇಯವಾಗಿತ್ತು. ಅದಕ್ಕಾಗಿ ಅವರ ಕಾಲದಲ್ಲಿ ಅನೇಕ ದೊಡ್ಡ ನದಿಗಳಿಗೆ ಅಡ್ಡಗಟ್ಟಿ ಹಾಕಿ ದೊಡ್ಡ ಅಣೆಕಟ್ಟುಗಳನ್ನು ಕಟ್ಟಿಸಿದರು. ಹೊಲಗದ್ದೆಗಳ ಬದುವಿಗೆ ಗೊಬ್ಬರದ ಗಿಡಗಳನ್ನು ಬೆಳೆಸಲಾಯಿತು. ಒಡ್ಡುಗಳನ್ನು ಹಾಕಲಾಯಿತು. ಆಗ ವ್ಯವಸಾಯದ ಕೂಲಿ ಇಷ್ಟೊಂದು ಇರಲಿಲ್ಲ. ಹೀಗಾಗಿ ಭಾರತವು ಆಹಾರದ ವಿಷಯದಲ್ಲಿ ಸ್ವಪರಿಪೂರ್ಣವಾಯಿತು. ಈಗ ನಾವು ಸಕ್ಕರೆ, ಗೋಧಿ, ಅಕ್ಕಿ ಮುಂತಾದುದನ್ನು ಆಮದು ಮಾಡಿಕೊಳ್ಳುವ ಸ್ಥಿತಿಗೆ ಬಂದಿದ್ದೇವೆ.

ಬಡವರನೇಕರ ಕೈಯಲ್ಲಿ ಭೂಮಿ ಇಲ್ಲ; ದುಡಿದು ತಿನ್ನುತ್ತೇವೆಂದರೆ ತಮ್ಮದಾಗಿ ನೆಲ ಇಲ್ಲ. ಈ ಭೂಮಿಹೀನರೂ ಭಾರತೀಯರೆ ಅಲ್ಲವೇ? ಅವರಿಗೆ ಓಟು ಕೊಟ್ಟಿದ್ದೇವೆ, ಊಟ ಕೊಟ್ಟಿಲ್ಲ, ಉದ್ಯೋಗ ಕೊಟ್ಟಿಲ್ಲ. ಸರ್ಕಾರ ಭೂಮಿಯ ಮರು ಹಂಚಿಕೆ ಮಾಡಬೇಕು. ಆದಾಗಬೇಕಾದರೆ ಸೀಲಿಂಗ್‍ಅನ್ನು ಇಳಿಸಬೇಕು. ಭೂಮಿ ಕಾಯ್ದೆಯಲ್ಲಿ ತಿದ್ದುಪಡಿ ತಂದು ದುಡಿಯಲು ತಯಾರಿರುವ ಭೂಹೀನರಿಗೆ ತಲಾ 5 ಎಕರೆ ಖುಷ್ಕಿ ಅಥವಾ 3 ಎಕರೆ ತರಿ ಅಥವಾ ಒಂದು ಎಕರೆ ತೋಟದ ಜಮೀನನ್ನು ನೀಡಬೇಕು. ಹೀಗೆ ನೀಡಿದ ಜಮೀನನ್ನು ಖಾಸಗಿಯವರಿಗೆ ಮಾರಾಟ, ಭೋಗ್ಯ ಆಧಾರ ಮಾಡುವಂತಿಲ್ಲ ಎಂಬ ಕರಾರು ಹಾಕಿ ಭೂಮಿ ಹಂಚಬೇಕು. ಎರಡು ವರ್ಷ ಕಾಲ ಹೀಗೆ ನೀಡಿದ ಜಮೀನನ್ನು ಎರಡು ವರ್ಷ ಕಾಲ ಉಳುಮೆ ಮಾಡದಿದ್ದರೆ, ಆ ಜಮೀನನ್ನು ಅವರ ವಶದಿಂದ ಹಿಂಪಡೆದು ದುಡಿಮೆ ಮಾಡುವ ಬೇರೊಬ್ಬರಿಗೆ ಕೊಡಬೇಕು.

ಸರ್ಕಾರ ರೈತರ ಹೆಸರಿಗೆ 5000 ಹಾಕುವ ಬದಲು ವ್ಯವಸಾಯದಲ್ಲಿ ಕ್ರಾಂತಿ ತರುವ ಪಣ ತೊಡಬೇಕು. ಮೋದಿ ಸರ್ಕಾರ ಭೂಮಿ ನೀಡಿ ರೈತರನ್ನ ಕಾಲ ಮೇಲೆ ನಿಲ್ಲುವ ಹಾಗೆ ಮಾಡಬೇಕೇ ಹೊರತು, ಸರ್ಕಾರದಿಂದ ಭಿಕ್ಷೆಗೆ ಕಾಯುವಂತೆ ಮಾಡುವುದು ಭಾರತೀಯರನ್ನು ಅಪಮಾನಗೊಳಿಸಿದಂತೆ ಎಂದು ತಿಳಿಯಬೇಕು.


ಇದನ್ನು ಓದಿ: ಬಡವರಿಗೆ ನೇರ ನಗದು ವರ್ಗಾವಣೆಯಲ್ಲದೇ ಬೇರೆ ದಾರಿ ಇಲ್ಲ : ’ಶ್ರಮಜೀವಿಗಳಿಗೆ ಲಾಕ್ ಡೌನ್’ ಅಧ್ಯಯನ ವರದಿ ಬಿಡುಗಡೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಕೇಜ್ರಿವಾಲ್ ಚುನಾವಣಾ ಪ್ರಚಾರ ಮಾಡಬಾರದೆಂದು ಬಿಜೆಪಿ ಬಯಸುತ್ತದೆ, ಅವರ ಪರವಾಗಿ ನಾನು ಪ್ರಚಾರ ಮಾಡುತ್ತೇನೆ’;...

0
ಎಎಪಿ ಎನ್‌ಜಿಒ ಅಲ್ಲ, ಅದು ರಾಷ್ಟ್ರೀಯ ಪಕ್ಷ, ಕೇಜ್ರಿವಾಲ್ ಅವರು ಚುನಾವಣಾ ಪ್ರಚಾರದಿಂದ ದೂರವಿರಬೇಕೆಂದು ಬಿಜೆಪಿ ಬಯಸುತ್ತದೆ, ನಾನು ಅವರ ಪರವಾಗಿ ಪ್ರಚಾರ ಮಾಡುತ್ತೇನೆ ಎಂದು ಪಂಜಾಬ್‌ ಸಿಎಂ ಭಗವಂತ್ ಸಿಂಗ್ ಮಾನ್...