ಡಾ. ಎಚ್ಚೆನ್ ಬಗ್ಗೆ ಬರೆಯುವುದು ಸುಲಭವಲ್ಲ. ಅವರು ಸುಲಭದ ವ್ಯಕ್ತಿಯೂ ಆಗಿರಲಿಲ್ಲ. ಸರಳ ನಡವಳಿಕೆಯ ಅಪರೂಪದ ಉದಾಹರಣೆಯಾಗಿ ಬೆಳೆದು ನಿಂತವರಾದರೂ ಹೊರಗೆ ಕಾಣುವಷ್ಟು ಸರಳ ವ್ಯಕ್ತಿತ್ವ ಅವರದಾಗಿರಲಿಲ್ಲ. ಇದು ಅವರಿಗೂ ಗೊತ್ತಿತ್ತೆಂಬುದೇ ವಿಶೇಷ.
ಡಾ. ಎಚ್ಚೆನ್ ಅವರು ಬರೆದ ‘ತೆರದ ಮನ’ ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ನಾನು ಇದೇ ಮಾತನ್ನು ಹೇಳಿದ್ದೆ. ‘ತೆರೆದ ಮನ’ – ಎಂಬುದು ಪುಸ್ತಕದ ಹೆಸರಾದರೂ ಡಾ. ಎಚ್ಚೆನ್ ಅವರು ಏನೆಂದು ಸುಲಭವಾಗಿ ಅರ್ಥವಾಗುವುದಿಲ್ಲ. ಕಮ್ಯುನಿಸ್ಟರೆಂದರೆ ಕಮ್ಯುನಿಸ್ಟರಲ್ಲ; ಹಾಗೆಂದು ಕಮ್ಯುನಿಸ್ಟ್ ವಿರೋಧಿಗಳಲ್ಲವೇ ಅಲ್ಲ. ಲೋಹಿಯಾವಾದಕ್ಕೆ ಬದ್ಧರೆ ಎಂದರೆ ಹಾಗೂ ಇಲ್ಲ; ಹಾಗೆಂದು ಲೋಹಿಯಾ ಅವರು ಇವರಿಗೆ ದೂರವಲ್ಲ. ಅಂಬೇಡ್ಕರ್ ಹತ್ತಿರವಾದರೂ ಗಾಂಧಿ ಆತ್ಮೀಯರು. ಒಬ್ಬರ ಕಾರಣಕ್ಕಾಗಿ ಇನ್ನೊಬ್ಬರನ್ನು ಎಚ್ಚೆನ್ ದೂರ ಮಾಡುವುದಿಲ್ಲ. ಅಷ್ಟೇ ಅಲ್ಲ ಕೆಲವೊಮ್ಮೆ ಎಚ್ಚನ್ ಕಾಣುವಷ್ಟು ಸರಳರಲ್ಲ” – ಇದು ನನ್ನ ಭಾಷಣದ ಒಂದು ಭಾಗ. ಮಾರನೇ ದಿನ ಸಿಕ್ಕದ ಎಚ್ಚೆನ್ “ಅಲ್ಲಪ್ಪ ಎಚ್ಚೆನ್ ಏನು ಅಂತ ಅರ್ಥವಾಗಲ್ಲ: ಕಾಣೋವಷ್ಟು ಸರಳರಲ್ಲ-ಅಂತ ಹೇಳಿದೆಯಲ್ಲ. ಅದು ಹೇಗಪ್ಪ ಗೊತ್ತಾಯ್ತು ನಿಂಗೆ?” ಎಂದು ನಗುತ್ತ ಕೇಳಿದರು. ಇದು ಎಚ್ಚೆನ್ ಅವರ ‘ತೆರದ ಮನ’.
ನನ್ನ ಮತ್ತು ಎಚ್ಚೆನ್ ಅವರ ಸಂಬಂಧ ಕಾಲು ಶತಮಾನಕ್ಕೂ ಹೆಚ್ಚಿನ ಅವಧಿಯದು. ಅವಧಿ ಹೆಚ್ಚು ಎನ್ನುವುದು ಮಾನದಂಡವಲ್ಲ. ಈ ಅವಧಿಯಲ್ಲಿ ನಿಧಾನವಾಗಿ ಮಾಡಿಕೊಳ್ಳುತ್ತ ಬಂದದ್ದರಿಂದ ಸಂಬಂಧ ಗಾಢವಾಯಿತು. ಅದು ಎಷ್ಟರಮಟ್ಟಿಗೆ ವಿಸ್ತಾರಗೊಂಡಿತೆಂದರೆ, ಯಾವುದಾದರೂ ಸಾರ್ವಜನಿಕ ವಿವಾದ ಎದ್ದಾಗಲೆಲ್ಲ ನನಗೆ ದೂರವಾಣಿ ಮಾಡಿ ಅಥವಾ ಬರಲು ಹೇಳಿ ಚರ್ಚಿಸುತ್ತಿದ್ದರು ಅಥವಾ ಅವರ ಅಭಿಪ್ರಾಯವನ್ನು ಹೇಳಿ ‘ಸರಿ’ ಎಂದು ಸಮಾಧಾನ ಮಾಡಿಕೊಳ್ಳುತ್ತಿದ್ದರು. ಸಾಯುವುದಕ್ಕೆ ಸರಿಯಾಗಿ ಮೂರು ತಿಂಗಳು ಮೂರು ದಿನಗಳಿಗೆ ಮುಂಚೆ ಪೋನ್ ಮಾಡಿದ ಎಚ್ಚೆನ್ “ಮೆತ್ತಗಾಗಿದ್ದೀನಪ್ಪ ಬಂದು ಹೋಗು” ಎಂದರು. ಅವರ ದನಿ ಕುಗ್ಗಿತ್ತು. ಸಂಬಂಧದ ಸೆಳೆತ ತೀವ್ರವಾಗಿತ್ತು. ನಾನು ಮತ್ತು ನನ್ನ ಪತ್ನಿ ರಾಜಲಕ್ಷ್ಮಿ ಇಬ್ಬರೂ ನವೆಂಬರ್ ಒಂದನೇ ತಾರೀಖು (2004) ಅವರನ್ನು ನೋಡಲು ಹೋದೆವು. ಅಂದೇ ಹಲಸೂರಿನ (ಕಂಟೋನ್ಮೆಂಟ್) ಕನ್ನಡ ಸಂಘಟನೆಯ ವತಿಯಿಂದ ಎಚ್ಚೆನ್ ಅವರನ್ನು ಅವರಿದ್ದ ಜಾಗದಲ್ಲಿಯೇ ಸನ್ಮಾನಿಸುವ ಸರಳ ಕಾರ್ಯಕ್ರಮವಿತ್ತು. ಇದ್ದವರು ಹತ್ತು ಹದಿನೈದು ಜನ. ನನ್ನಿಂದಲೇ ಸನ್ಮಾನ. ಹತ್ತು ನಿಮಿಷದಲ್ಲಿ ಈ ಕಾರ್ಯಕ್ರಮ ಮುಗಿದ ಮೇಲೆ ನ್ಯಾಷನಲ್ ಕಾಲೇಜಿನ ಒಳ ಆವರಣದಲ್ಲಿ ಮೂರು ಕುರ್ಚಿ ತರಿಸಿ ಹಾಕಿಸಿ ನನ್ನನ್ನೂ ನನ್ನ ಪತ್ನಿಯನ್ನೂ ಕೂಡಿಸಿಕೊಂಡು ಮುಕ್ಕಾಲು ಗಂಟೆಗೂ ಹೆಚ್ಚು ಕಾಲ ಮಾತಾಡಿದರು . ಅದೇ ಸಮಾಜ ಬದಲಾವಣೆಯ ಮಾತು. ತಮ್ಮ ನಿಲುವು – ನಡವಳಿಕೆಗಳನ್ನು ನಿರ್ದಿಷ್ಟ ಸನ್ನಿವೇಶದಲ್ಲಿಟ್ಟು ಪರೀಕ್ಷಿಸಿಕೊಳ್ಳುತ್ತಲೇ ಸಮರ್ಥಿಸಿಕೊಳ್ಳುವ ಮಾತು. ನನಗೆ ಕೆಲವು ಸಲಹೆ-ಸೂಚನೆಗಳಯ; ನಡುನಡುವೆ ಜೋಕುಗಳು. ಹಿಗ್ಗನ್ನು ನಿಯಂತ್ರಿಸಲೆಂದೇ ನುಗ್ಗಿ ಬರುತ್ತಿರುವಂತೆ ಕಂಡ ಕೆಮ್ಮು. ಹಮ್ಮು ಬಿಮ್ಮುಗಳಿಲ್ಲದ ‘ಸರಳ’ ಜೀವಿಗೆ ಯಾಕಪ್ಪ ಈ ಕೆಮ್ಮಿನ ಕಾಟ ಎಂದುಕೊಳ್ಳುತ್ತ ‘ಆಯಾಸ ಆಗ್ತಿದೆ ನಿಮ್ಗೆ ಬರ್ತೀವಿ ಸಾರ್’ ಎಂದು ಎದ್ದಾಗ “ನನ್ ಕ್ಲಾಸಿನ್ನೂ ಮುಗ್ದೇ ಇಲ್ಲ, ಆಗ್ಲೇ ಹೊರಟೆಲ್ಲಪ್ಪ “ ಎಂದು ಛೇಡಿಸಿ ನನ್ನ ಹೆಂಡತಿಗೆ “ನೋಡಮ್ಮ ಇವತ್ತಿನ್ನೂ ನನ್ ಪೀರಿಯಡ್ ಪೂರ್ತಿ ಮಾಡಿಲ್ಲ. ಆಮೇಲ್ ಕಳಿಸ್ಕೊಡಮ್ಮ ಉಳಿದಿದ್ ಕ್ಲಾಸ್‍ನ ಪೂರ್ತಿ ಮಾಡ್ತೀನಿ” ಎಂದು ನಗುತ್ತಾ ಹೇಳಿದರು. ಬೇಡವೆಂದರೂ ಕೇಳದೆ ಎತ್ತಿಡಲಾಗದ ಹೆಜ್ಜೆಗಳನ್ನು ಇಡುತ್ತ ಗೇಟಿನ ಬಳಿಗೆ ಬಂದು ಬೀಳ್ಕೊಟ್ಟರು.
ಕಡೆಗೆ 21-1-2005 ರಂದು ಡಾ. ಎಚ್ಚೆನ್ ಅವರನ್ನು ಪೂರ್ತಿ ಬೀಳ್ಕೊಡುವ ಸಂಕಟ ನಮ್ಮದಾಗಿತ್ತು. ನೆನೆಪಿಸಿಕೊಂಡೆ : ಕಿತ್ತು ಕಿತ್ತು ಇಡುತ್ತಿದ್ದ ಆ ಕಡೆಯ ಹೆಜ್ಜೆಗಳು! ಭೂಮಿ ಅವರನ್ನು ಒಳಗೆ ಎಳೆದುಕೊಳ್ಳಲು ಪ್ರಯತ್ನಿಸುತ್ತಿದೆ. ನಿನ್ನೊಳಗೆ ಬರುವುದಿಲ್ಲ ಮೇಲೆಯೇ ಹಾದಿಗುಂಟ ಹೋಗುತ್ತೇನೆಂದು, ಕಾಲನ್ನು ಕಿತ್ತುಕೊಳ್ಳುತ್ತಿರುವಂತೆ ಕಾಣುತ್ತಾರೆ ನಮ್ಮ ಎಚ್ಚೆನ್! ಆದರೆ ಭೂಮಿಯೊಳಗೆ ಕೂತು ಕಾಲನ್ನು ಎಳೆಯುತ್ತಿದ್ದ `ಕಾಲ’ ಕೆರಳಿ ಮೇಲೆ ಒಂದು ಜೀವನ ಕತ್ತು ಹಿಚುಕಿದ; `ಹೋರಾಟದ ಹಾದಿ’ಯನ್ನು ಚಿತಾಗಾರ ಮಾಡಿದ ನಾನು ಗಳಗಳನೆ ಅತ್ತಾಗ ಗೆಳೆಯ ಎಚ್.ಎಸ್. ರಾಘವೇಂದ್ರರಾವ್ ಭುಜ ಹಿಡಿದು ಸಾಂತ್ವನ ಮಾಡಿದರು.
ಎಚ್ಚೆನ್ ಅವರ ಹುಟ್ಟೂರಾದ ಹೊಸೂರಿನಲ್ಲಿ ಸುರಿಯುವ ಮಳೆಯಲ್ಲಿ ನಾನು, ನನ್ನ ಹೆಂಡತಿ, ಸ್ನೇಹಿತರು-ಹೀಗೆ ಅನೇಕರು ತೊಯ್ದು ನಿಂತಿದ್ದಾಗ ಚಿತೆಯ ಮೇಲೆ ಮಲಗಿದ ಈ ಮನುಷ್ಯ ಉರಿಯುತ್ತಿದ್ದಾರೆ! ಹೊರಬರದೆ ಒಳಗೇ ಕಾಡಿದ ಉರಿಗಳು ಒಟ್ಟಾಗಿ ಚಿತೆಯಲ್ಲಿ ಜೀವಂತವಾದವೆ? ಹೇಳಲಾಗದ ಮೌನಸತ್ಯಗಳು ಸ್ಫೋಟಗೊಂಡವೆ? ಬಿಳಿಯ ಬಟ್ಟೆಯೊಳಗಿನ ಕಪ್ಪ ದೇಹದೊಳಗೆ ಕಾದು ಬಿಸಿಯಾದ ಕೆಂಪು ನುಡಿಗಳು ಚಿತೆಯೊಳಗಿಂದ ಉಕ್ಕಿ ಬಂದವೆ? ವೈರುಧ್ಯಗಳೆಲ್ಲ ಸುಟ್ಟು ಒಂದೇ ರೂಪವಾದವೆ?
ಸುರಿಯುವ ಮಳೆಯಲ್ಲಿ ಉರಿಯುವ ಚಿತೆಗೆ ಬೆಂಕಿ ಹತ್ತಿಸಿದ ಮೊದಲಿಗರಲ್ಲಿ ನಾನೂ ಒಬ್ಬ. ಎಚ್ಚೆನ್ ಬದುಕಿದ್ದಾಗ ಎಷ್ಟೋ ಸಾರಿ ನಾನು ಕೆದಕಿದ್ದು ಉಂಟು; ಒಳಗನ್ನು ಹೊರತೆಗೆಯಲು ಮೆದು ಮಾತಿನಲ್ಲೇ ಕಿಡಿ ಹಚ್ಚಿದಾಗ, ಅವರು ಒಳಗಿನ ಉರಿ ಚಿಂತನೆಗಳನ್ನು ಹೊರಹಾಕುತ್ತಲೇ ಮತ್ತೆ ನಿಯಂತ್ರಿಸಿಕೊಳ್ಳುತ್ತ ನಿಟ್ಟುಸಿರು ಬಿಟ್ಟದ್ದು ಉಂಟು. ಈಗ ಸುರಿಯುವ ಮಳೆಯೆದುರು ಉರಿಯುತ್ತಿರುವ ಎಚ್ಚೆನ್! ಬದುಕಿನ ವ್ಯಂಗ್ಯವೆಂದರೆ ಇದೇ ಇರಬಹುದೆ?
ನಾನೊಮ್ಮೆ ಎಚ್ಚೆನ್ ಅವರನ್ನು ಕೆಣಕಿದ್ದೆ “ಸರ್ ನೀವು ಜೀವನದುದ್ದಕ್ಕೂ ಕನ್ಸಿಸ್ಟೆಂಟಾಗಿರೋದು ಒಂದು ವಿಷಯ ಇದೆ. ಅದೇ ಸಾಯಿಬಾಬ ವಿಷಯ” ಎಂದಿದ್ದೆ. “ಯಾಕಪ್ಪ ಹಂಗಂತೀಯ? ನಾನ್ ಹೇಳೋ ಎಲ್ಲಾ ವಿಷಯದಲ್ಲೂ ಹಾಗೇ ಇರ್ತೀನಿ” ಎಂದರು. “ಹಾಗಾದ್ರೆ ಮಠಾಧಿಪತಿಗಳನ್ನು ಯಾಕ್ ಸಾರ್ ಬಹಿರಂಗವಾಗ್ ಟೀಕೆ ಮಾಡಲ್ಲ? ಸಾಯಿಬಾಬಾಗಿಂತ ಮಠಾಧಿಪತಿಗಳು ಹೇಗೆ ಉತ್ತಮರು ಅಂತೀರ?” ಎಂದು ಪ್ರಶ್ನಿಸಿದಾಗ “ಉತ್ತಮರು ಅಂತ ನಾನ್ ಹೇಳಿದ್ದೀನ?” ಎಂದು ಮರುಪ್ರಶ್ನೆ ಹಾಕಿದ್ದಲ್ಲದೆ “ಮಠಾಧೀಶರು ತಮ್ಮನ್ನು ತಾವು ದೇವರು ಅಂತ ಕರ್ಕೊಂಡಿಲ್ಲ; ಪವಾಡ ಪುರುಷರು ಅಂತ ಮೊಸ ಮಾಡ್ತಿಲ್ಲ” ಎಂದು ಸಮಜಾಯಿಷಿ ನೀಡಿದರು. ನಾನು ಹೇಳಿದೆ “ನೀವು ಹೇಳೋದು ನಿಜ ಸರ್, ಆದರೆ ಜಾತೀನ ಆಚರಿಸ್ತಾರೆ. ಇವತ್ತು ಎಲ್ಲ ಮಠಗಳೂ ಜಾತಿ ಕೇಂದ್ರಗಳಾಗಿವೆ; ನೀವು ಯಾವ ಜಾತಿಪದ್ಧತೀನ ವಿರೋಧಿಸ್ತೀರೋ ಅದೇ ಜಾತಿ ಪದ್ಧತೀನ ಮಠಮಾನ್ಯಗಳು ಗಟ್ಟಿಯಾಗಿ ಬೆಳಸ್ತಾ ಇವೆ. ಜೊತೆಗೆ ಮಠಗಳು ರಾಜಕೀಯವನ್ನು ನಿಯಂತ್ರಿಸ್ತಾ ಇವೆ. ಸಂಪತ್ತನ್ನೂ ಹೆಚ್ಚಿಸ್ಕೊಳ್ತಾ ಇವೆ. ನಿಜ; ಮಠಾಧೀಶರು ಶಿಕ್ಷಣ ಸಂಸ್ಥೆ ನಡೆಸ್ತಾ ಇದಾರೆ; ವಿದ್ಯಾರ್ಥಿ ನಿಲಯಗಳನ್ನು ನಡೆಸ್ತಾ ಇದಾರೆ. ಅದೇ ರೀತಿ ಕೆಲವು ಬಾಬಾಗಳು ಉತ್ತಮವಾದ ಆಸ್ಪತ್ರೆ ನಡೆಸ್ತಾ ಇದಾರೆ. ಬಡವರಿಗೆ ಒಳ್ಳೆ ಚಿಕಿತ್ಸೆಗೆ ನೆರವಾಗಿದಾರೆ. ನೀರಿಲ್ಲದ ಊರುಗಳಿಗೆ ನೀರು ಸರಬರಾಜಿಗೆ ವ್ಯವಸ್ಥೆ ಮಾಡ್ತಿದಾರೆ. ಆದ್ರಿಂದ ಸೇವೆ ವಿಷಯದಲ್ಲಿ, ಮೌಢ್ಯ ಪ್ರಚಾರದ ವಿಷಯದಲ್ಲಿ ಮಠಾಧೀಶರೂ ಬಾಬಾಗಳೂ ಒಂದೇ-ಸಮಾನ. ಸಂಪತ್ತಿನ ವಿಷಯದಲ್ಲೂ ಅವ್ರಲ್ಲಿ ‘ಸಮಾನತೆ’ ಇದೆ. ಆದ್ರೆ ಮಠಾಧೀಶರು ಪವಾಡ ಪ್ರದರ್ಶನ ಪ್ರವೀಣರಲ್ಲಿ. ಬಾಬಾಗಳ ಜಾತಿಪದ್ಧತಿಯ ಪೋಷಕರಲ್ಲ. ಈಗ ಹೇಳಿ ಯಾರು ಹೆಚ್ಚು ಅಪಾಯಕಾರಿ? ಜಾತಿ ಮೂಲಕ ಸಮಾಜವನ್ನು ಒಡೆಯೋರು ಮಠಾಧೀಶರೋ? ಜಾತಿ ಪ್ರಚೋದನೆ ಮಾಡದ ಬಾಬಾಗಳೊ? ನನಗೇನೊ ಈ ವಿಷಯದಲ್ಲಿ ಮಠಾಧೀಶರೇ ಬಾಬಾಗಳಿಗಿಂತ ಹೆಚ್ಚು ಅಪಾಯಕಾರಿ” ಹೀಗೆ ದೀರ್ಘವಾಗಿ ನಾನು ವಿವರಿಸಿದಾಗ-ಅಲ್ಲ-ವಾದಿಸಿದಾಗ ಎಚ್ಚೆನ್ ಮೌನವಾದರು. ಮೌನದೊಳಗೆ ವಿಚಾರದ ಉರಿ ಎದ್ದಿತ್ತು. ತಕ್ಷಣವೇ ಉರಿಯನ್ನು ಹೊರಹಾಕಲಿಲ್ಲ. ಕೆಲವು ದಿನಗಳ ನಂತರ ಅವರು ಏನೇನೋ ಮಾತನಾಡುತ್ತ ನಡುವೆ ಹೇಳಿದರು- “ನೋಡಪ್ಪ, ಎಷ್ಟೋ ವಿಷಯಗಳಲ್ಲಿ ನಾನು ನಿಮ್ಮಷ್ಟು ಓಪನ್ ಆಗಿ ಬರೋಕಾಗೊಲ್ಲ. ನಾನು ಬೆಳೆದು ಒಂದು ರೀತಿ, ಈಗಿರೋ ಸನ್ನಿವೇಶಾನ ನೀವು ಅರ್ಥ ಮಾಡ್ಕೊಬೇಕು. ಈಗ ನಿನ್ ಹತ್ರ ಎಷ್ಟೋ ವಿಷ್ಯ ಹೇಳ್ತೀನಿ. ಮಾತಾಡ್ತೀನಿ. ಅದನ್ನೆಲ್ಲ ಹೊರ್ಗಡೆ ಹೇಳೋಕಾಗುತ್ತ? ನಾನು ಈ ಸಂಸ್ಥೆ ಕಟ್ಟೋಕೆ (ನ್ಯಾಷನಲ್ ಶಿಕ್ಷಣ ಸಂಸ್ಥೆ) ಕಂಡ್ ಕಂಡೋರ್ ಹತ್ರ ಕೈ ಒಡ್ಡಿ ಸಹಾಯ ತಗೊಂಡಿದ್ದೀನಿ. ಇಂಥ ಎಷ್ಟೋ ಕಾರಣಕ್ಕೆ ಅನ್ನಿಸಿದ್ದೆಲ್ಲ ಹೇಳೋಕಾಗೊಲ್ಲಪ್ಪ. ನನ್ನ ನಡವಳಿಕೆಯಿಂದ ಸಂಸ್ಥೆಗೆ ಕೆಟ್ಟ ಹೆಸರು ಬರಬಾರದು. ನನ್, ವಿಚಾರ ನೋಡಪ್ಪ-ಇಷ್ಟೆ; ದೇವರಿದಾನೊ ಇಲ್ವೋ ಆವಿಷ್ಯ ನಂಗ್ ಬೇಡ, ದೇವರ ಬಗ್ಗೆ ನಿಷ್ಠುರವಾಗಿ ಮತಾಡಿದದ್ರೆ ಜನಗಳ ಹತ್ರ ಹೋಗೋದಕ್ಕೆ ಆಗೊಲ್ಲಪ್ಪ. . .” ಎಂದು ಅವರು ಹೇಳುತ್ತಿರುವಾಗಲೇ ನಾನು ಮಧ್ಯ ಬಾಯಿ ಹಾಕಿದೆ. “ನೋಡಿ ಸಾರ್ ನಾನು ದೇವರ ಅಸ್ತಿತ್ವಾನ ನಂಬೊಲ್ಲ. ಹಾಗಂತ ನಾಸ್ತಿಕನಾಗುವುದರಿಂದಲೇ ಸಮಾಜ ಬದಲಾವಣೆ ಆಗುತ್ತೆ ಅಂತಲೂ ನಂಬಿಲ್ಲ. ನಾಸ್ತಿಕನಾಗಿಯೂ ಸಮಾಜ ಬದಲಾವಣೆಗೆ ಬೇಕಾದ ಸರಿಯಾದ ಸೈದ್ಧಾಂತಿಕ ತಿಳುವಳಿಕೆ ಇಲ್ದೇ ಇರೋರು, ಕೇವಲ ಹೀರೋ ಥರಾ ವಿಜೃಂಭಿಸಿರೋ ಅನೇಕರಿದ್ದಾರೆ. ಮಾವೋ, ಲೆನಿನ್ ಅವರಂತ ಕ್ರಾಂತಿಕಾರಿಗಳು ಜನಗಳ ಒಲವನ್ನ ಗಳಿಸಿ ಹೇಗೆ ಕ್ರಿಯಾಶೀಲರಾಗಬೇಕು ಅಂತ ಲೇಖನಗಳನ್ನ ಬರ್ದಿದ್ದಾರೆ. ಆಸ್ತಿಕತೆ-ನಾಸ್ತಿಕತೆಗಳನ್ನು ಮೀರಿದ ಪ್ರಶ್ನೆಗಳೂ ಅನೇಕವಿವೆ. ಆದ್ರೆ ದೇವರು-ಧರ್ಮದ ಹೆಸರಲ್ಲಿ ಈ ದೇಶಾನ ಹೊಲಸು ಮಾಡಿದಾರೆ ಅಲ್ವ ಸಾರ್” ಎಂದು ಹೇಳುತ್ತಿರುವಾಗ ಎಚ್ಚೆನ್ ನಡುವೆ ಬಾಕಿ ಹಾಕಿ “ನಾಸ್ತಿಕತೆ ಬಗ್ಗೆ ಸರ್ಯಾಗ್ ಹೇಳ್ದೆ ನೋಡಪ್ಪ, ಆಮೇಲೆ ಮಾವೋ, ಲೆನಿನ್ ಬರ್ದಿರೊ ವಿಷಯ ನಂಗೊತ್ತಿರ್ಲಿಲ್ಲ. ಅಂಥ ಮಹಾನ್ ಕ್ರಾಂತಿಕಾರಿಗಳಿಗೆ ಔಚಿತ್ಯ ಇತ್ತಪ್ಪ. ನಮ್ಮಲ್ಲಿ ಅರ್ಧಂಬರ್ಧ ಜನಗಳೇ ಜಾಸ್ತಿ. ಅದ್ಕೇ ನಾನ್ ಹೇಳೋದು ದೇವರು ವಿಷ್ಯ ಬಿಟ್ ಬಿಡೋಣ ಅಂತ.” ಎಂದು ತಮಗೆ ಪ್ರಿಯವಾದ ನನ್ನ ಮಾತುಗಳನ್ನು ಮಾತ್ರ ಎತ್ತಿಕೊಂಡು ಮತ್ತೆ ಮುಂದುವರೆಸಿದರು: “ನಾನು ದೇವರು, ಧರ್ಮಗಳನ್ನು ನಂಬಬೇಡಿ ಅನ್ನೊಲ್ಲ. ನಂಬೋರ್ ನಂಬ್ಲಿ ಆದರೆ ದೇವರು-ಧರ್ಮದ ದುರುಪಯೋಗಾನ ನಾನು ವಿರೋಧಿಸ್ತೇನೆ. ಪವಾಡ ವಿರೋಧಿಸ್ತೇನೆ. ಶೂನ್ಯದಲ್ಲಿ ಸೃಷ್ಟಿ ಮಾಡ್ತೀನಿ ಅನ್ನೋದನ್ನ ವಿರೋಧಿಸ್ತೇನೆ. ನನ್ನ ವೈಜ್ಞಾನಿಕ ಮನೋಧರ್ಮ ಅಂದ್ರೆ ಹೀಗೆ ನೋಡಪ್ಪ ಸುಮ್‍ಸುಮ್ನೆ ಹುತ್ತಕ್ಕೆ ಕೈಹಾಕಿದ್ರೆ ಎನಾಗುತ್ತಪ್ಪ? ಹುಷಾರಾಗಿರ್ಬೇಕು. ರಚನಾತ್ಮಕವಾಗಿರಬೇಕು. ಏನಾದ್ರು ಫಲ ಕೊಡ್ಬೇಕು. ಅದು ಬಿಟ್ಟು ಸುಮ್ನೆ ಮಾತಾಡ್ತಾ ಹೋದ್ರೆ ಏನ್ ಬಂತು?” ಡಾ. ಎಚ್ಚೆನ್ ಅವರ ತಾತ್ವಿಕ ತಿಳುವಳೀಕೆಯ ಸಾರ ಇದೇ ಆಗಿತ್ತು. ಇದಕ್ಕನುಗುಣವಾಗಿ ಅವರು ಮಾತನಾಡುತ್ತ ಬಂದರು ಕೆಲಸ ಮಾಡುತ್ತ ಬಂದರು; ಗೌರವಿತ್ತೆಂದು ನಾನು ಹೇಳುತ್ತಿಲ್ಲ. ಅರಸು ಅವರು ಹಿಂದುಳಿದ ವರ್ಗಗಳ ಏಳಿಗೆಗಾಗಿ ದುಡಿದದ್ದು, ಮೀಸಲಾಗಿ ತಂದದ್ದು, ಭೂ ಸುಧಾರಣೆಯ ಅನುಷ್ಠಾನಕ್ಕೆ ಮುಂದಾದದ್ದು- ಇಂತಹ ಹತ್ತಾರು ಕಾರಣಗಳಿಗಾಗಿ ದೇವರಾಜ ಅರಸರ ಬಗ್ಗೆ ಎಚ್ಚೆನ್ ಅವರು ನಿಜವಾದ ಗೌರವವನ್ನು ತೋರಿಸುತ್ತಿದ್ದರು. ಈಗ್ಗೆ ಕೆಲವೇ ತಿಂಗಳ ಹಿಂದೆ ದೇವರಾಜ ಅರಸರ ಹುಟ್ಟೂರಿಗೆ ಹೋಗಿ ಅವರ ಸಮಾಧಿಯನ್ನು ಕಣ್ಣಾರೆ ಕಂಡು ಗೌರವ ಸೂಚಿಸಿದ್ದರು. ಅರಸು ಅವರ ಸಮಾಧಿಯನ್ನು ಸಂರಕ್ಷಿಸಿಲ್ಲವೆಂದು ವ್ಯಥೆ ಪಟ್ಟಿದ್ದರು. ಅರಸು ಅವರ ಬಗ್ಗೆ ಎಚ್ಚೆನ್ ಅವರಿಗಿದ್ದ ಗೌರವದ ಹಿಂದೆ ಸಾಮಾಜಿಕ-ರಾಜಕೀಯ ಸಿದ್ದಾಂತದ ಸೆಳೆವಿತ್ತು. ಹೀಗೆ ಎಚ್ಚನ್ ಅವರ ವಿಚಾರಗಳು ಪ್ರಕಟಗೊಳ್ಳುತ್ತಿದ್ದ ರೀತಿಗಳಲ್ಲಿ ಹಲವು ವಿಧಗಳು. ಅರಸು ಅವರ ಬಗೆಗಿನ ಗೌರವವೂ ಇವುಗಳಲ್ಲಿ ಒಂದು.
ನನ್ನದೇ ಒಂದು ಉದಾಹರಣೆ ಹೇಳುವುದಾದರೆ ನಾನು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರಕ್ಕೆ ಅಧ್ಯಾಪಕನಾಗಿ ಆಯ್ಕೆಯಾಗಲು ಮೊದಲ ಒತ್ತಾಸೆಯಾದವರು, ಕಾರಣೀಕರ್ತರಾದವರು-ಎಚ್ಚೆನ್. ಹಾಗೆ ನೋಡಿದರೆ, ಆಗ, ನನ್ನ ಮತ್ತು ಅವರ ನಡುವೆ ಆತ್ಮೀಯ ಸಂಬಂಧ ಬೆಳೆದಿರಲಿಲ್ಲ. ಒಂದೆರಡು ಸಾರಿ ಮಾತ್ರ ಮಾತನಾಡುವ ಅವಕಾಶ ಲಭ್ಯವಾಗಿತ್ತು. ಅಷ್ಟೆ ಹಾಗಾದರೆ ನನ್ನ ಬಗ್ಗೆ ಅವರು ತೋರಿದ ಒಲವಿಗೆ ಏನು ಕಾರಣ? ನಾನು ಸಂದರ್ಶನದಲ್ಲಿ ಚನ್ನಾಗಿ ಮಾಡಿದ್ದೆ; ನಿಜ. ಸಂದರ್ಶನಕ್ಕೆ ಪರಿಣತರಾಗಿ ಬಂದಿದ್ದೆ ಆಗಿದ್ದರೆ ಎಚ್ಚೆನ್ ಅವರ ಮಾತಿನ ಅಗತ್ಯ ಬೀಳುತ್ತಿರಲಿಲ್ಲ. ಎಚ್ಚೆನ್ ನನ್ನ ಆಯ್ಕೆಯ ಪರವಾಗಿ ಮಾತಾಡಿದ ವಿಷಯ ಆನಂತರ ತಿಳಿಯಿತು. ಈ ಆಯ್ಕೆಯ ಹಿಂದೆ ಒಂದು ವಿಚಾರಧಾರೆಯೂ ಇತ್ತೆಂದು ನನ್ನ ತಿಳುವಳಿಕೆ.
ಡಾ. ಎಚ್ಚೆನ್ ಅವರು ಕುಲಪತಿ ಹುದ್ದೆಯನ್ನು ಬಿಟ್ಟ ಮೇಲೆ ನಾನು ಅವರಿಗೆ ಹತ್ತಿರವಾಗುತ್ತ ಬಂದೆ. ಅವರ ಅಂತರಂಗದಲ್ಲಿ ಹುದುಗಿಹೋಗುತ್ತಿದ್ದ ಅನೇಕ ವಿಚಾರಗಳನ್ನು ಹಂಚಿಕೊಳ್ಳುವ ಒಬ್ಬ ಕಿರಿಯ ಗೆಳೆಯನಾದೆ. ಕೆಲ ಮಿತ್ರರು ನನ್ನನ್ನು `ಎಚ್ಚೆನ್ ಅವರ ಮಾನಸ ಪುತ್ರ’ ಎಂದು ಕರೆಯುತ್ತಿದ್ದರು. ಎಚ್ಚೆನ್ ನನ್ನನ್ನು ತಂದೆಯಂತೆ ದಂಡಿಸಲಿಲ್ಲ; ಕೋಪಮಾಡಿಕೊಳ್ಳಲಿಲ್ಲ. ಆದರೆ ನಾನು ಮಗನಂತೆ ಮುನಿಸಕೊಂಡದ್ದು ಉಂಟು; ಶ್ರೀಮತಿ ಸೋನಿಯಾ ಗಾಂಧಿಯವರ ಜನ್ಮಸ್ಥಾನ ಕುರಿತು ಅವರು ಜಡ ಸಂಪ್ರದಾಯವಾದಿಯಂತೆ ಮಾತನಾಡುತ್ತಿದ್ದುದನ್ನೂ ಒಳಗೊಂಡಂತೆ ಅವರ ಒಂದೆರಡು ಮುಖ್ಯ ಅಭಿಪ್ರಾಯಗಳನ್ನು ಒಪ್ಪಲು ಸಾಧ್ಯವಿಲ್ಲವೆನ್ನಿಸಿದಾಗ ತಿಂಗಳುಗಟ್ಟಲೆ ಅವರ ರೂಮಿನ ಹತ್ತಿರ ಸುಳಿಯದೆ ವಿರೋಧವನ್ನು ದಾಖಲಿಸುತ್ತಲೇ ಅವರ ಅಭಿಪ್ರಾಯದ ಪರಿಮಿತಿಗಾಗಿ ನಾನು ನನ್ನಲ್ಲೇ ಸಂಕಟಪಟ್ಟದ್ದುಂಟು. ಅವರೇ ಫೋನ್ ಮಾಡಿ ಮಾತಾಡಿಸಿ, ಕರೆದಾಗ ಮತ್ತದೇ ಹಾದಿಯಲ್ಲಿ ನಡೆದದ್ದುಂಟು. ಇದಕ್ಕೆ ತಂದೆಯ ವಾತ್ಸಲ್ಯವಲ್ಲದೆ ಬೇರೇನೆಂದು ಕರೆಯಲಿ? ಹೌದು; ನಾನು ಭಾವುಕನಾಗುತ್ತಿದ್ದೇನೆ. ಸಾವು ಎಂಥ ಶಕ್ತಿಶಾಲಿ? ಜೀವನವನ್ನು ಕರಗಿಸುವುದಲ್ಲದೆ, ಬದುಕಿರುವವರ ಮನಸ್ಸನ್ನೂ ಕರಗಿಸುತ್ತದೆ. ಆದರೆ ಎಚ್ಚೆನ್ ಅವರ ಬಗ್ಗೆ ಭಾವುಕವಾಗಲು ಸಾವಿರ ರಿಯಾಯಿತಿ ಬೇಕಿಲ್ಲ… ಅಂದು ಆಸ್ಪತ್ರೆಗೆ ಹೋಗಿದ್ದೆವು ನಾನು ಮತ್ತು ಪತ್ನಿ ರಾಜಲಕ್ಷ್ಮಿ – ನನ್ನ ಪತ್ನಿ “ಬೇಗ ವಾಪಸ್ ಬನ್ನಿ ಸಾರ್ ಉಪ್ಪಿಟ್ಟು ಮಾಡಿ ತರ್ತೇನೆ” ಎಂದಾಗ ಪ್ರಫುಲ್ಲರಾದಂತೆ ಕಂಡರು. ಮಾತು ನನ್ನ ಕಡೆ ಹೊರಳಿತು- “ನೋಡಪ್ಪ, ನಾನು ವಾಪಸ್ ಬಂದ್ ಮೇಲೆ ನಿನ್ ಹತ್ರ ಎರಡು ಗಂಟೇನಾದ್ರು ಮಾತಾಡ್‍ಬೇಕು- ಸಮಾಜ ಬದಲಾವಣೆ ಬಗ್ಗೆ. ಸುಮ್‍ಸುಮ್ನೆ ಬದಲಾವಣೆ ಆಗಲ್ಲಪ್ಪ. ಅದಕ್ಕೊಂದು ಕ್ರಮ ಬೇಕು..” ಹೀಗೆ ಮಾತಾಡತೊಡಗಿದಾಗ ನರ್ಸ್ ನನ್ನ ಪತ್ನಿಯನ್ನು ಕರೆದು “ಹೆಚ್ಚು ಮಾತಾಡ್ತಾರೆ ಇವರು. ಆಯಾಸ ಆಗುತ್ತೆ” ಎಂದರು. ಆಗ ನಾನು ಎಚ್ಚೆನ್ ಅವರಿಗೆ “ನೀವು ಬೇಗ ವಾಪಸ್ ಬನ್ನಿ ಸಾರ್. ಆಮೇಲೆ ಮಾತಾಡ್ತಾನೇ ಇರೋಣ” ಎಂದೆ.
ಡಾ. ಎಚ್ಚೆನ್ ಬಂದರು- ನಿರಂತರ ಮೌನದಲ್ಲಿ. ಆಡಿದ ಮಾತುಗಳೆಲ್ಲ ನೆನಪಲ್ಲಿ ನೆಂದು ನಿಂತುಕೊಂಡಿವೆ- ಜೀವ ತುಂಬಿದ ಎಚ್ಚರದಲ್ಲಿ; ಪ್ರಶ್ನೆಯಾಕಾರದಲ್ಲಿ! ಎಚ್ಚೆನ್ ಲಾಂಛನ, ಪ್ರಶ್ನೆ ತಾನೆ?
***
ಇದನ್ನೂ ಓದಿ: ವಿಶೇಷ ಲೇಖನ: ಹೊಸ ತಲೆಮಾರಿಗೆ ಗೊತ್ತಿಲ್ಲದ ಡಾ.ಎಚ್ಚೆನ್ ಅವರ ‘ಹೋರಾಟದ ಹಾದಿ’ಯ ಕುರಿತು ಡಾ.ಸಿಎನ್ಆರ್


