Homeಮುಖಪುಟವಿಶೇಷ ಲೇಖನ: ಹೊಸ ತಲೆಮಾರಿಗೆ ಗೊತ್ತಿಲ್ಲದ ಡಾ.ಎಚ್ಚೆನ್ ಅವರ ‘ಹೋರಾಟದ ಹಾದಿ’ಯ ಕುರಿತು ಡಾ.ಸಿಎನ್ಆರ್

ವಿಶೇಷ ಲೇಖನ: ಹೊಸ ತಲೆಮಾರಿಗೆ ಗೊತ್ತಿಲ್ಲದ ಡಾ.ಎಚ್ಚೆನ್ ಅವರ ‘ಹೋರಾಟದ ಹಾದಿ’ಯ ಕುರಿತು ಡಾ.ಸಿಎನ್ಆರ್

ಪ್ರಖರ ವೈಚಾರಿಕವಾದಿ ಡಾ.ಎಚ್‌ ನರಸಿಂಹಯ್ಯನವರ ಅವರ ಆತ್ಮಕತೆ ಹೋರಾಟದ ಹಾದಿಯ ಕುರಿತು ಡಾ. ಸಿ. ಎನ್. ರಾಮಚಂದ್ರನ್‌ರವರು ಬರೆದ ಚೇತೋಹಾರಿ ಬರಹ.

- Advertisement -
- Advertisement -

ಕಳೆದ ಶತಮಾನದ ಆದಿ ಭಾಗದಲ್ಲಿ ಇಂಗ್ಲೀಷ್ ಭಾಷೆ-ಸಾಹಿತ್ಯಗಳ ಪ್ರಭಾವದಿಂದ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಪ್ರವೇಶಿಸಿದ ಅನೇಕ ಸಾಹಿತ್ಯ-ಪ್ರಕಾರಗಳಲ್ಲಿ ‘ಆತ್ಮಕಥೆ’ ಎಂಬುದೂ ಒಂದು; ಮತ್ತು ಕುವೆಂಪು ಅವರಿಂದ ಹಿಡಿದು ಲಂಕೇಶರವರೆಗೆ ಸರಿ ಸುಮಾರು ಎಲ್ಲಾ ಪ್ರಮುಖ ಕನ್ನಡ ಸಾಹಿತಿಗಳೂ ತಮ್ಮ ಆತ್ಮಕಥೆಗಳನ್ನು ಬರೆದಿದ್ದಾರೆ.  ಆತ್ಮಕಥೆ ಎಂಬ ಪ್ರಕಾರಕ್ಕೆ ಎರಡು ಆಯಾಮಗಳಿವೆ: ಸಾರ್ವಜನಿಕ ಆಯಾಮ ಹಾಗೂ ವೈಯಕ್ತಿಕ/ ಖಾಸಗೀ ಆಯಾಮ.  ಇದುವರೆಗೆ ಬಂದಿರುವ ಹೆಚ್ಚಿನ ಆತ್ಮಕಥೆಗಳು ಲೇಖಕನ/ ಲೇಖಕಿಯ ಸಾರ್ವಜನಿಕ ಆಯಾಮಕ್ಕೇ ಒತ್ತು ಕೊಟ್ಟಿವೆ.  (ಈ ಹೇಳಿಕೆಗೆ ಒಂದು ಅಪವಾದವೆಂದರೆ ಲಂಕೇಶರ ಹುಳಿಮಾವಿನ ಮರ.)  ವೈಯಕ್ತಿಕ ಹಾಗೂ ಸಾರ್ವಜನಿಕ ಈ ಎರಡೂ ಆಯಾಮಗಳನ್ನು ಸಮನಾಗಿ ನಿಭಾಯಿಸಿರುವವರು ಕನ್ನಡದಲ್ಲಿ ಬೆರಳೆಣಿಕೆಯಷ್ಟು ಲೇಖಕರು – ಬಿ. ವಿ. ಕಾರಂತ (ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ) ಮತ್ತು ಸಿಜಿಕೆ (ಕತ್ತಾಲೆ ಬೆಳುದಿಂಗಳೊಳಗ), ಇತ್ಯಾದಿ.  ಎಚ್‍ಎನ್ ಅವರ ಆತ್ಮಕಥೆ ಮೊದಲ ವರ್ಗಕ್ಕೆ ಸೇರುತ್ತದೆ; ಇದರಲ್ಲಿ ವೈಯಕ್ತಿಕ ಆಯಾಮ ಇಲ್ಲವೇ ಇಲ್ಲವೆಂದರೂ ನಡೆದೀತು.  ಮೊದಲಿಗೆ, ತೆರೆದ ಮನ ಎಂಬ ಹೆಸರಿನಲ್ಲಿ ತಮ್ಮ ಬದುಕಿನ  ಕೆಲವು ಘಟನೆಗಳನ್ನು ಹಾಗೂ ಕೆಲವು ವೈಚಾರಿಕ ಲೇಖನಗಳನ್ನು ಎಚ್ ಎನ್ ಪ್ರಕಟಿಸಿದರು; ಅನಂತರ, ವಿಸ್ತಾರವಾಗಿ, 1995ರಲ್ಲಿ ಹೋರಾಟದ ಹಾದಿ ಎಂಬ ಹೆಸರಿನ ಕೃತಿಯಲ್ಲಿ ದೀರ್ಘವಾಗಿ ತಮ್ಮ ಬದುಕಿನ ಕಥೆಯನ್ನು ದಾಖಲಿಸಿದರು.  ಇದಕ್ಕೆ ಯೋಗ್ಯ ಹೆಸರನ್ನು ಸೂಚಿಸಿ, ಅರ್ಥಪೂರ್ಣ ಮುನ್ನುಡಿಯನ್ನೂ ಬರೆದವರು ಡಾ. ಜಿ. ಎಸ್. ಶಿವರುದ್ರಪ್ಪನವರು.  ಈ ಕೃತಿಯ ಮರು ಮುದ್ರಣವನ್ನು ‘ಸುವರ್ಣ ಕರ್ನಾಟಕ’ ಯೋಜನೆಯಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾಡಿತು.  (ನಾನು ಈ ಲೇಖನದಲ್ಲಿ ನಮೂದಿಸಿರುವ ಪುಟ ಸಂಖ್ಯೆಗಳು ಈ ಆವೃತ್ತಿಗೆ ಸಂಬಂಧಿಸಿವೆ.)

ನಾವೇಕೆ ಇನ್ನೊಬ್ಬರ ಆತ್ಮಕಥೆಯನ್ನು ಓದುತ್ತೇವೆ?  ಅಥವಾ, ಒಂದು ಶ್ರೇಷ್ಠ ಆತ್ಮಕಥೆಯಿಂದ ಓದುಗರು ಏನೇನನ್ನು ನಿರೀಕ್ಷಿಸುತ್ತಾರೆ?  ಸಾಧ್ಯ ಉತ್ತರಗಳು ಹೀಗಿರಬಹುದು: ಅ) ಆತ್ಮಕಥೆಯ ‘ನಾಯಕ’ನು ಯಾವುದಾದರೂ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆಗೈದಿರುವ ವ್ಯಕ್ತಿಯಾಗಿರಬೇಕು ಮತ್ತು ಆ ಸಾಧನೆಯ ಮಾರ್ಗ ಸಾತ್ವಿಕ ಅಥವಾ ಜೀವಪರ ಮೌಲ್ಯಗಳ ಪಥವಾಗಿರಬೇಕು (ಪರಿಣಾಮತಃ, ಅವನ/ಅವಳ ಬದುಕಿನಿಂದ ಓದುಗರು ಏನನ್ನಾದರೂ ಕಲಿಯಬಹುದು ಮತ್ತು, ಆಂತಹ ಸಾಹಸಮಯ ಬದುಕಿನ ಕಥೆ ರೋಚಕವಾಗಿರುತ್ತದೆ; ಆ) ಆ ಅತ್ಮಕಥೆ ಕೇವಲ ಆ ವ್ಯಕ್ತಿಯೊಬ್ಬನ/ಳ ಕಥೆಯೇ ಆಗಿರದೆ ಅವನ/ಅವಳ ಕಾಲಘಟ್ಟದ ಚರಿತ್ರೆಯೂ ಆಗಿರಬೇಕು; ಎಂದರೆ, ಎಂತಹ ಪ್ರತಿಕೂಲ /ಅನುಕೂಲ ಪರಿಸ್ಥಿತಿಯಲ್ಲಿ ಆ ವ್ಯಕ್ತಿ ತನ್ನ ಸಾಧನೆಗಳನ್ನು ಮಾಡಲು ಸಾಧ್ಯವಾಯಿತು ಎಂಬುದು ಓದುಗರ ಅರಿವಿಗೆ ಬರುತ್ತದೆ; ಇ)ವಿಶ್ವಾಸನೀಯತೆ; ಎಂದರೆ, ಆತ್ಮಕಥೆಯ ಲೇಖಕನು ತನ್ನ ಬದುಕನ್ನು ದೂರದಿಂದ, ವಸ್ತುನಿಷ್ಠವಾಗಿ ನೋಡಲು ಸಾಧ್ಯವಾಗಿರಬೇಕು; ಆಗ, ಆ ಕೃತಿ ದಾಖಲಿಸಿರುವುದೆಲ್ಲವನ್ನೂ ಓದುಗರಿಗೆ  ನಂಬಲು ಹಾಗೂ ಸ್ಫೂರ್ತಿ-ಪ್ರೇರಣೆಗಳನ್ನು ಪಡೆಯಲು ಸಾಧ್ಯವಾಗುತ್ತದೆ.

ಈ ಸಂದರ್ಭದಲ್ಲಿ ಮತ್ತೂ ಒಂದು ಮಾತು ಹೇಳಿ ಮುಂದುವರೆಯಬಹುದು: ಇತ್ತೀಚೆಗೆ, ಹೆಚ್ಚಿನ ವಿಮರ್ಶಕರ-ತತ್ವಶಾಸ್ತ್ರಜ್ಞರ ಅಭಿಪ್ರಾಯದಲ್ಲಿ, ‘ಕಲ್ಪಿತ’ ಕಾದಂಬರಿಗೂ ‘ವಾಸ್ತವ’ ಆತ್ಮಚರಿತ್ರೆಗೂ ಹೆಚ್ಚಿನ ವ್ಯತ್ಯಾಸವೇನೂ ಇಲ್ಲ; ಮೊದಲನೆಯದಾಗಿ, ‘ಕಲ್ಪಿತ’ ಕಥೆ-ಕಾದಂಬರಿಗಳಲ್ಲಿಯೂ ಲೇಖಕನ ವೈಯಕ್ತಿಕ ಬದುಕಿನ ಅನುಭವಗಳು ಹಾಗೂ ವಿಚಾರಗಳು ಮುಸುಕು ಹೊದ್ದು ಬರುತ್ತವೆ; ಹಾಗೆಯೇ, ‘ವಾಸ್ತವ’ ಆತ್ಮಕಥೆಯಲ್ಲಿಯೂ ಲೇಖಕನು ‘ವಾಸ್ತವ’ ಎಂದು ದಾಖಲಿಸುವುದು ಅವನ/ಅವಳ ಭ್ರಮೆಯಾಗಿರಬಹುದು.  ಎರಡನೆಯದಾಗಿ, ಎರಡು ಪ್ರಕಾರಗಳಲ್ಲಿಯೂ ‘ಆಯ್ಕೆ’ಯ ಸಮಸ್ಯೆ ಬಂದೇ ಬರುತ್ತದೆ; ಏಕೆಂದರೆ, ಎಲ್ಲವನ್ನೂ, ಬದುಕಿನ ಎಲ್ಲಾ ವಿವರಗಳನ್ನೂ ದಾಖಲಿಸಲು ಸಾಧ್ಯವೇ ಇಲ್ಲ; ಲೇಖಕನು ತನಗೆ ಮುಖ್ಯವೆಂದು ಕಂಡು ಬಂದ ಘಟನೆ-ವಿವರಗಳನ್ನು ಮಾತ್ರ ಕಾದಂಬರಿಯಲ್ಲಾಗಲಿ ಆತ್ಮಕಥೆಯಲ್ಲಾಗಲಿ ‘ಆಯ್ದು’ ಕೊಡುತ್ತಾನೆ/ಳೆ.  (ಈ ವಾದವನ್ನು ಬಿ. ವಿ. ಕಾರಂತರು ತಮ್ಮ ಆತ್ಮಕಥೆಯ ಪೀಠಿಕೆಯಲ್ಲಿ ದೀರ್ಘವಾಗಿ, ಆಸಕ್ತಿಪೂರ್ಣವಾಗಿ ಚರ್ಚಿಸುತ್ತಾರೆ.)  ಈ ವಾದದ ತಾತ್ವಿಕ ಹಿನ್ನೆಲೆಯಲ್ಲಿ ನಾನು ಎಚ್ ಎನ್ ಅವರ ಆತ್ಮಕಥೆಯನ್ನು ಮೇಲೆ ದಾಖಲಿಸಿದ ಮೂರು ಬಗೆಯ ನಿರೀಕ್ಷೆಗಳ ಚೌಕಟ್ಟಿನಲ್ಲಿ  ವಿಶ್ಲೇಷಿಸಿದ್ದೇನೆ.

ಅ) ಸಾಧಕರಾಗಿ ಎಚ್ ಎನ್:  ಯಾವ ಬಗೆಯ ತಿದ್ದುಪಡಿಯ ಅಗತ್ಯವೂ ಇಲ್ಲದೆ ಹೇಳಬಹುದಾದ ಒಂದು ಮಾತೆಂದರೆ, ಎಚ್ ಎನ್ ಅವರ ಬದುಕಿನ ಕಥೆಯೆಂದರೆ ಅಸಾಧಾರಣ ಸಾಹಸದ ಹಾಗೂ ಸಾಧನೆಯ ಕಥೆಯೇ.  ಡಾ. ಹೊಸೂರು ನರಸಿಂಹಯ್ಯನವರು ಬದುಕಿದ್ದಾಗಲೇ ದಂತಕಥೆಯಾಗಿದ್ದವರು: ಬೆಂಗಳೂರಿಗೆ ಸಮೀಪದ ಹೊಸೂರು ಎಂಬ ಚಿಕ್ಕ ಹಳ್ಳಿಯಲ್ಲಿಯ ಅತ್ಯಂತ ಬಡ ಕುಟುಂಬದಲ್ಲಿ ಹುಟ್ಟಿದ ಹುಡುಗ, ಹೈಸ್ಕೂಲು ಶಿಕ್ಷಣಕ್ಕಾಗಿ ಬಸ್‍ಚಾರ್ಜಿಗೆ ದುಡ್ಡಿಲ್ಲದೆ 53 ಮೈಲಿ ದೂರದ ಬೆಂಗಳೂರಿಗೆ ನಡೆದುಕೊಂಡು ಹೋದ ವಿದ್ಯಾರ್ಥಿ, ಮುಂದೊಂದು ದಿನ ಸ್ವಾತಂತ್ರ್ಯ ಹೋರಾಟಗಾರರಾಗಿ,  ಒಂದು ಪ್ರತಿಷ್ಠಿತ ಕಾಲೇಜಿನ ಪ್ರಾಂಶುಪಾಲರಾಗಿ, ಅಮೆರಿಕಾದ ಕೊಲಂಬಸ್ ನಗರದ ಒಹಾಯೋ ವಿ.ವಿ.ಯಲ್ಲಿ ಡಾಕ್ಟರೇಟ್ ಡಿಗ್ರಿ ಪಡೆಯುವ ಪ್ರತಿಭಾಶಾಲಿಯಾಗಿ, ಬೆಂಗಳೂರು ವಿಶ್ವ ವಿದ್ಯಾನಿಲಯದ ಉಪಕುಲಪತಿಯಾಗಿ, ಎಂ. ಎಲ್. ಸಿ.ಯಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ, ಪದ್ಮಭೂಷಣ ಪ್ರಶಸ್ತಿ ವಿಜೇತರಾಗಿ, ತಮ್ಮ ಬದುಕನ್ನು ಸಾರ್ಥಕಗಳಿಸಿಕೊಂಡವರು.  ಅಂತಹ ವ್ಯಕ್ತಿಯ ಬದುಕನ್ನು ದಂತಕಥೆ ಎನ್ನಬೇಕೋ ಒಂದು ‘ಪವಾಡ’ ಎನ್ನಬೇಕೋ ಗೊತ್ತಾಗುವುದಿಲ್ಲ.  “ನನ್ನ ಜೀವನ ಒಂದು ಪವಾಡ ಅಂತ ಅನ್ನಿಸುತ್ತದೆ” ಎಂದು ಎಚ್ ಎನ್ ಅವರೇ ಒಂದು ಕಡೆ ತಮ್ಮ ಆತ್ಮಕಥೆಯಲ್ಲಿ ದಾಖಲಿಸಿದ್ದಾರೆ. ಉನ್ನತ ಆದರ್ಶಗಳು, ಆ ಆದರ್ಶಗಳನ್ನು ಸಾಕಾರಗೊಳಿಸಿಕೊಳ್ಳಲು ಅಗತ್ಯವಾದ ಅಸಾಧಾರಣ ಛಲ ಹಾಗೂ ಅಪರಿಮಿತ ಶ್ರಮ, ಮತ್ತೆ ಎಂತಹ ಕಠಿಣ ಸಂದರ್ಭದಲ್ಲಿಯೂ ಕೈಬಿಡದ ಋಜುಜೀವನ –ಈ ಮೂರೂ ಒಂದೆಡೆ ಸೇರಿದಾಗ ವ್ಯಕ್ತಿಯೊಬ್ಬನು/ಳು ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಜೀವಂತ ನಿದರ್ಶನ ಎಚ್. ನರಸಿಂಹಯ್ಯನವರು.  ಈ ಸಾಹಸದ, ತಾವು ನಂಬಿದ ಮೌಲ್ಯಗಳಿಗಾಗಿ ಅವರು ನಡೆಸಿದ ದೀರ್ಘ ಹೋರಾಟದ ಗಾಥೆಯನ್ನು ಅವರೇ ಒಂದು ಸಂದರ್ಭದಲ್ಲಿ ಹೀಗೆ ಸಂಗ್ರಹಿಸುತ್ತಾರೆ:

“ನನ್ನ ಜೀವನವೆಲ್ಲಾ ಹೋರಾಟವೇ ಆಯಿತು. ವಿದ್ಯಾರ್ಥಿಯಾಗಿದ್ದಾಗ ಅತ್ಯಂತ ಹೆಚ್ಚಿನ ಅಂಕಗಳನ್ನು ಪಡೆಯಬೇಕು ಎಂಬ ಹೋರಾಟ, ಕ್ವಿಟ್ ಇಂಡಿಯಾ ಮತ್ತು ಮೈಸೂರು ಚಲೋ ಹೋರಾಟ. ಅಧ್ಯಾಪಕನಾದಮೇಲೆ ಎಲ್ಲಾ ಕಾಲೇಜುಗಳನ್ನೂ ಪರೀಕ್ಷೆಗಳಲ್ಲಿ ಸೋಲಿಸಬೇಕು ಅನ್ನುವ ಹಠ; ಹಣ ಸಂಗ್ರಹಿಸುವುದು, ಕಟ್ಟಡಗಳನ್ನು ಕಟ್ಟುವುದು, ಯೋಜನೆಗಳನ್ನು ಕಾರ್ಯಗತ ಮಾಡುವುದು — ಎಲ್ಲಾ ಹೋರಾಟವೇ. ಪವಾಡ ಪುರುಷರ ಮೇಲಿನ ಹೋರಾಟ ಅತ್ಯಂತ ಕಷ್ಟಕರವಾದ ಹೋರಾಟ. ನಾನು ಜೀವನದಲ್ಲೂ ಒಂಟಿ ಮತ್ತು ಈ ಹಲವು ಹೋರಾಟಗಳಲ್ಲಿಯೂ ಒಂಟಿ. ನನ್ನ ಮನೋಭಾವವೇ ಹೋರಾಟದ್ದು” (ಪು.517).

ಈ ಬಗೆಯ ಹೋರಾಟ ಎಚ್ ಎನ್ ಅವರಿಗೆ ಸಾಧ್ಯವಾದದ್ದು ಅವರ ನಂಬಲಸಾಧ್ಯವಾದ ಋಜುಜೀವನದಿಂದ.  ವಿದ್ಯಾರ್ಥಿಯಾಗಿದ್ದಾಗಲೇ ಗಾಂಧೀಜಿಯವರನ್ನು ಭೇಟಿ ಮಾಡಿದ ಅದೃಷ್ಟವಂತರು ಎಚ್ ಎನ್; ಅನಂತರ ಗಾಂಧೀಜಿಯವರ ಎಲ್ಲಾ ಆದರ್ಶಗಳನ್ನೂ ಮೈಗೂಡಿಸಿಕೊಂಡ ಅವರು ಬದುಕಿನುದ್ದಕ್ಕೂ ಅತ್ಯಂತ ಮೌಲ್ಯಾಧಾರಿತ ಸರಳ ಜೀವನವನ್ನು ನಡೆಸಿದರು.  ಈ ವಿಷಯಕ್ಕೆ ಸಂಬಂಧಿಸಿದಂತೆ ಅನೇಕ ಘಟನೆಗಳನ್ನು ಅವರು ಈ ಕೃತಿಯಲ್ಲಿ ದಾಖಲಿಸುತ್ತಾರೆ: ಹೊರ ರಾಜ್ಯದ ಅಧಿಕಾರಿಗಳೊಬ್ಬರು ಎಚ್ ಎನ್ ಅವರನ್ನು ನೋಡಲು ಬಂದು ಅವರೆಲ್ಲಿದ್ದಾರೆಂದು ಕೇಳಿದಾಗ, ವಿದ್ಯಾರ್ಥಿಯೊಬ್ಬನು ” ಅಲ್ಲಿ ನೋಡಿ, ಊಟ ಮಾಡಿ ತಟ್ಟೆ ತೊಳೆಯುತ್ತಿದ್ದಾರೆ” (ಪು.363) ಎಂದು ತೋರಿಸಿದುದು; ಬೆಂಗಳೂರು ಉಪ ಕುಲಪತಿಗಳಾಗಿದ್ದಾಗಲೂ ಬಸ್-ಆಟೋಗಳಲ್ಲಿ ಓಡಾಡುತ್ತಿದ್ದುದು (ಪು.375); ಯುಜಿಸಿ ಟೀಮ್ ವಿ.ವಿ.ಗೆ ಬಂದಾಗ, ಅವರ ಊಟೋಪಚಾರದಲ್ಲಿ ಪಾನೀಯಕ್ಕಾದ ಖರ್ಚನ್ನು ವಿ.ವಿ.ಯ ಲೆಕ್ಕಕ್ಕೆ ಹಾಕದೆ ” ಆದರೆ ವಿಶ್ವವಿದ್ಯಾಲಯ ಶುದ್ಧವಾಗಿರಲಿ” ಎಂದು ಹೇಳುತ್ತಾ ತಾವೇ ಆ ಖರ್ಚನ್ನು ವಹಿಸಿಕೊಂಡುದು (ಪು.363); ಸಂಶೋಧನೆಗಾಗಿ ಅಮೆರಿಕಾಕ್ಕೆ ಅವರು ಹೋದಾಗಲೂ ಅಲ್ಲಿಯೂ ಅವರ ಖಾದಿ ಪಂಚೆ-ಬಿಳಿಯ ಟೋಪಿ-ಸಸ್ಯಾಹಾರಗಳನ್ನು ಬಿಡದೆ ಜೀವನ ನಡೆಸಿದುದು; ಇತ್ಯಾದಿ.

ಅಧಿಕಾರ-ಅಂತಸ್ತುಗಳನ್ನು ಬಯಸದ, ಅತ್ಯಂತ ಸರಳ ಜೀವನವನ್ನು ಎಚ್ ಎನ್ ನಡೆಸುತ್ತಿದ್ದುದರಿಂದಲೇ ಅವರಿಗೆ ಎಂತಹ ನೈತಿಕ ಬಲ ದೊರಕಿತ್ತು ಎಂಬುದನ್ನು ಅನೇಕ ಸಂದರ್ಭಗಳಲ್ಲಿ ಈ ಕೃತಿ ದಾಖಲಿಸುತ್ತದೆ.  ಒಂದು ವರ್ಷ ಇವರು ನ್ಯಾಶನಲ್ ಕಾಲೇಜಿನ ಪ್ರಾಂಶುಪಾಲರಾಗಿದ್ದಾಗ, ಅಂದಿನ ಉನ್ನತ ಶಿಕ್ಷಣ ಸಚಿವರಾದ ಎಸ್. ಆರ್. ಕಂಠಿ ಅವರು ತಮ್ಮ ಒಬ್ಬ ಹುಡುಗನಿಗೆ ಪ್ರವೇಶಕ್ಕಾಗಿ ಎಚ್ ಎನ್ ಅವರಿಗೆ ಫೋನ್ ಮಾಡಿದಾಗ, ಎಚ್ ಎನ್ ನಿಯಮಗಳಂತೆ ಆ ಹುಡುಗನಿಗೆ ಪ್ರವೇಶ ಕೊಡಲು ಸಾಧ್ಯವಿಲ್ಲ ಎನ್ನುತ್ತಾರೆ; ಆಗ ಸಿಟ್ಟಿಗೆದ್ದ ಮಂತ್ರಿಗಳು “ನೀವೇ ಮಾಡಿಕೊಂಡಿರುವ ನಿಯಮ; ಏನು ಮಹಾ ಬದಲಾಯಿಸಿ” ಎನ್ನುತ್ತಾರೆ; ಆದರೆ ಆಗಲೂ ಎಚ್ ಎನ್ ಅವರ ಕೋರಿಕೆಯನ್ನು ಮನ್ನಿಸುವುದಿಲ್ಲ (ಪು.235).  ಎಚ್ ಎನ್ ಅವರನ್ನು ಎಮ್. ಎಲ್. ಸಿ. ಯಾಗಿ ಅಂದಿನ ಮುಖ್ಯ ಮಂತ್ರಿಗಳಾದ ಗುಂಡೂರಾಯರು ನಾಮಕರಣ ಮಾಡಿದಾಗ, ಎಚ್ ಎನ್ ತಾವು ಯಾವ ರಾಜಕೀಯ ಪಕ್ಷಕ್ಕೂ ಸೇರಿದವರಲ್ಲವೆಂದು ಪರಿಷತ್ತಿನಲ್ಲಿ ಸ್ವತಂತ್ರ ಶಾಸಕರಾಗಿ (ಮುಖ್ಯಮಂತ್ರಿಗಳ ಕೋಪ ತಾಪಗಳನ್ನೂ ಲೆಕ್ಕಿಸದೆ) ಕಾರ್ಯ ನಿರ್ವಹಿಸುತ್ತಾರೆ (ಪು. 407-408).  ಇಂತಹ ನೈತಿಕ ಸ್ಥೈರ್ಯ ಕೇವಲ ಕೆಲವೇ ಕೆಲವು ಸಾಧಕರಲ್ಲಿ ಕಂಡು ಬರುತ್ತದೆ; ಹೆಚ್ಚಿನವರು ಪ್ರತಿಕೂಲ ಪರಿಸ್ಥಿತಿಗಳೊಡನೆ ಒಂದಲ್ಲಾ ಒಂದು ಬಗೆಯ ರಾಜಿ ಮಾಡಿಕೊಳ್ಳುವುದು ಸಾಮಾನ್ಯ.

(ಆ) ಒಂದು ಕಾಲಘಟ್ಟದ ಸಾಮಾಜಿಕ-ಶೈಕ್ಷಣಿಕ ಚರಿತ್ರೆಯಾಗಿ:  ಎಚ್ ಎನ್ ಅವರ ಆತ್ಮಕಥೆ ಒಂದು ಕಾಲಘಟ್ಟದ ವಿಶಿಷ್ಟ ಚರಿತ್ರೆಯಾಗಿಯೂ ಯಶಸ್ವಿಯಾಗುತ್ತದೆ.  ಕ್ವಿಟ್ ಇಂಡಿಯಾ ಚಳುವಳಿ, ಸ್ವಾತಂತ್ರ್ಯಾನಂತರ ‘ಮೈಸೂರು ಚಲೋ’ ಚಳುವಳಿ, ಇತ್ಯಾದಿ ಮಹತ್ವದ ರಾಜಕೀಯ ಘಟನೆಗಳ ಕಿರು ನೋಟಗಳು ಇಲ್ಲಿ ದೊರಕುತ್ತವೆ.  ಹಾಗೆಯೇ, ಅವರ ಬಾಲ್ಯದಲ್ಲಿ (ಕಳೆದ ಶತಮಾನದ ಆದಿ ಭಾಗದಲ್ಲಿ) ಸಾಧಾರಣವಾಗಿದ್ದ ‘ಮೈಮೇಲೆ ದೇವರು ಬರುವುದು,’ ಪ್ಲೇಗ್ ಸಾಂಕ್ರಾಮಿಕ ರೋಗ ಬಂದಾಗ ಇಡೀ ಗ್ರಾಮಕ್ಕೆ ಗ್ರಾಮವೇ ಊರು ಬಿಟ್ಟು ಹೋಗುವುದು, ಅಳುವ ಮಕ್ಕಳಿಗೆ ಗೌರಿ ಬಳೆಯ ಚೂರಿನಿಂದ ‘ಚಿಟಿಕೆ’ ಹಾಕುವುದು, ಇತ್ಯಾದಿ ಗ್ರಾಮೀಣ ಜೀವನದ ವಿವರಗಳು ವಿಪುಲವಾಗಿ ಈ ಕೃತಿಯಲ್ಲಿ ದೊರಕುತ್ತವೆ.  ಆದರೆ, ಎಚ್ ಎನ್ ಮೊದಲಿನಿಂದ ಕೊನೆಯವರೆಗೆ ಶಿಕ್ಷಕನಾಗಿದ್ದುದರಿಂದ, ಸ್ವಾತಂತ್ರ್ಯಾನಂತರ ಕರ್ನಾಟಕ ಹಾಗೂ ಅಖಿಲ ಭಾರತ ವ್ಯಾಪ್ತಿಯಲ್ಲಿ ನಡೆದ ಶೈಕ್ಷಣಿಕ ಸುಧಾರಣೆಗಳ ಹಾಗೂ ನೀತಿಗಳ ಒಳನೋಟ ಈ ಕೃತಿಯ ಒಂದು ಮುಖ್ಯ ಆಯಾಮ.

ಶಿಕ್ಷಣದಲ್ಲಿ ವಿದ್ಯಾರ್ಥಿಗಳದ್ದು ಮತ್ತು ಶಿಕ್ಷಕರದ್ದು ಮುಖ್ಯ ಪಾತ್ರ; ಆದುದರಿಂದ, ಅವರೇ ಸ್ವತಃ ಪ್ರಾಮಾಣಿಕರಾಗಿರುವಂತೆ ನೋಡಿಕೊಳ್ಳುವುದು ಪ್ರಾಂಶುಪಾಲರ ಹಾಗೂ ಶಿಕ್ಷಣ ಸಂಸ್ಥೆಗಳ ಮುಖ್ಯ ಉದ್ದೇಶವಾಗಿರಬೇಕು.  ಈ ನೆಲೆಯಲ್ಲಿ ಎಚ್ ಎನ್ ನ್ಯಾಶನಲ್ ಕಾಲೇಜಿನ ಪ್ರಾಂಶುಪಾಲರಾಗಿದ್ದಾಗ ಎರಡು ಪ್ರಯೋಗಗಳನ್ನು ಮಾಡುತ್ತಾರೆ: ಶಿಕ್ಷಕರು ಪ್ರತಿದಿನವೂ ಹಾಜರಾತಿ ಪುಸ್ತಕದಲ್ಲಿ ರುಜುಮಾಡುವುದನ್ನು ನಿಲ್ಲಿಸಿ, ಆವರು ಕಾಲೇಜಿನಲ್ಲಿ ತಮ್ಮ ಜವಾಬ್ದಾರಿಗಳನ್ನು ನಿಭಾಯಿಸುವುದನ್ನು ಅವರ ಆತ್ಮಸಾಕ್ಷಿಗೇ ಬಿಡುತ್ತಾರೆ.  ಈ ಪ್ರಯೋಗ ಶಿಕ್ಷಕರಿಗೆ ಒಂದು ಬಗೆಯ ಘನತೆ ಹಾಗೂ ಆತ್ಮವಿಶ್ವಾಸವನ್ನು ಕೊಡುವುದರಲ್ಲಿ ಸಫಲವಾಗುತ್ತದೆ.  ಈ ಪ್ರಯೋಗದಲ್ಲಿ “ಅಧ್ಯಾಪಕರು ತಮ್ಮ ಪ್ರಾಮಾಣಿಕತೆಯನ್ನು ಮತ್ತು ಮರ್ಯಾದೆಯನ್ನು ಉಳಿಸಿಕೊಂಡದ್ದು ತುಂಬಾ ಸಂತೋಷದ ವಿಷಯ.  ನಾನು ಪ್ರಾಂಶುಪಾಲನಾಗಿದ್ದ 12 ವರ್ಷವೂ ಅಧ್ಯಾಪಕರ ಹಾಜರಾತಿಯನ್ನು ಅವರ ಆತ್ಮಸಾಕ್ಷಿಗೇ ಬಿಟ್ಟಿದ್ದೆ; … ಮತ್ತು ಯಾರಿಗೂ ಒಂದು ಮೆಮೋ ಕೂಡಾ ಕೊಡಲಿಲ್ಲ” ಎಂದು ಎಚ್ ಎನ್ ದಾಖಲಿಸುತ್ತಾರೆ (ಪು. 266).

ಇದೇ ನೆಲೆಯಲ್ಲಿ, ವಿದ್ಯಾರ್ಥಿಗಳ ಆತ್ಮಸಾಕ್ಷಿಯನ್ನೂ ಯಾಕೆ ನಂಬಬಾರದು ಎಂದು ಯೋಚಿಸಿ, ಪರೀಕ್ಷೆಗಳನ್ನು ಉಸ್ತುವಾರಿ ಇಲ್ಲದೆಯೇ ನಡೆಸಲು ನಿರ್ಧರಿಸುತ್ತಾರೆ.  ಮೊದಲು ಈ ವಿಷಯವನ್ನು ಅಧ್ಯಾಪಕರೊಡನೆ ಚರ್ಚಿಸಿ, ಅವರನ್ನು ಒಪ್ಪಿಸಿ, ಅನಂತರ ವಿದ್ಯಾರ್ಥಿಗಳೊಡನೆ ಮಾತನಾಡಿ ” ನಮ್ಮ ಒಳಗೆ ಸದಾ ನಮ್ಮನ್ನು ಕಾವಲು ಕಾಯುತ್ತಿರುವ ಆತ್ಮಸಾಕ್ಷಿಗೆ ಯಾರೂ  ಎಂದಿಗೂ ಮೋಸ ಮಾಡಲು ಸಾಧ್ಯವಿಲ್ಲ” (ಪು.267) ಎಂದು ಅವರನ್ನು ಒಪ್ಪಿಸಿ, ಅದೇ ರೀತಿ, ಉಸ್ತುವಾರಿಯಿಲ್ಲದ ಪರೀಕ್ಷೆಗಳನ್ನು ನಡೆಸುತ್ತಾರೆ.  ಇದು ಎಷ್ಟು ನೂತನ ಪ್ರಯೋಗವಾಗಿತ್ತೆಂದರೆ, ಪರೀಕ್ಷೆಗಳು ನಡೆಯುತ್ತಿರುವಾಗ ಪತ್ರಿಕೆಗಳ ವರದಿಗಾರರು ಅಲ್ಲಿ ಬಂದು ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳ ಚಿತ್ರೀಕರಣವನ್ನು ಮಾಡಿಕೊಂಡು ಮೆಚ್ಚುಗೆಯ ಲೇಖನಗಳನ್ನು ತಮ್ಮ ಪತ್ರಿಕೆಗಳಲ್ಲಿ ಬರೆಯುತ್ತಾರೆ.  ಈ ಸಫಲ ಪ್ರಯೋಗಕ್ಕಾಗಿ ಎಚ್ ಎನ್ ಅವರನ್ನು ಅಭಿನಂದಿಸಿದಾಗ, ಈ ಅಭಿನಂದನೆಗಳು ವಿದ್ಯಾರ್ಥಿಗಳಿಗೆ ಸಲ್ಲಬೇಕೆಂದು ಹೇಳುತ್ತಾ, “ಪ್ರಾಮಾಣಿಕ ವ್ಯಕ್ತಿಗಳನ್ನು ತಯಾರು ಮಾಡುವುದೇ ಶಿಕ್ಷಣದ ಮುಖ್ಯ ಉದ್ದೇಶ” ಎಂದು ಹೇಳುತ್ತಾರೆ.  ಎಚ್ ಎನ್ ಈ ಬಗೆಯ ಯೋಚನೆಗಳಲ್ಲಿಯೇ ಯಾವಾಗಲೂ ಮುಳುಗಿರುತ್ತಿದ್ದರು ಎಂದು ಕಾಣುತ್ತದೆ.

ಬೆಂಗಳೂರು ವಿ. ವಿ.ಯ ಕುಲಪತಿಗಳಾಗಿ, ಎಚ್ ಎನ್ ಮಾಡಿದ ಅತಿ ದೊಡ್ಡ ಕೆಲಸವೆಂದರೆ, ವಿ. ವಿ.ಯ ಹೆಚ್ಚಿನ ಬೋಧನ ವಿಭಾಗಗಳನ್ನು ಹಾಗೂ ಎಲ್ಲಾ ಆಡಳಿತ ವಿಭಾಗಗಳನ್ನೂ ಹೊಸ ನಾಗರಭಾವಿ ಕ್ಯಾಂಪಸ್‍ಗೆ ವರ್ಗಾಯಿಸಿದುದು.  ಅನೇಕ ಕಾರಣಗಳಿಂದ, ನಗರದ ಮಧ್ಯ ಭಾಗದಲ್ಲಿರುವ ಸೆಂಟ್ರಲ್ ಕಾಲೇಜ್ ಕ್ಯಾಂಪಸ್ಸಿನಿಂದ ನಾಗರಭಾವಿಗೆ ಹೋಗಲು ಹೆಚ್ಚಿನ ಅಧಿಕಾರಿಗಳ, ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ವಿರೋಧವಿತ್ತು.  ಒಬ್ಬೊಬ್ಬರಾಗಿ ಎಲ್ಲರ ಮನಸ್ಸನ್ನೂ ಗೆಲ್ಲುತ್ತಾ, ಎಚ್ ಎನ್ ತಮ್ಮ ಯೋಜನೆಯಲ್ಲಿ 90 ಪ್ರತಿಶತ ಯಶಸ್ವಿಯಾಗುತ್ತಾರೆ.  ಆ ಕಾರಣಕ್ಕಾಗಿ, ವಿವಿಯೇ ಸ್ವಂತ ಬಸ್‍ಗಳನ್ನು ಖರೀದಿಸುತ್ತದೆ; ಎಲ್ಲಾ ಕಟ್ಟಡಗಳನ್ನು ನಿರ್ಧರಿಸಿದ ಅವಧಿಯಲ್ಲಿ ಕಟ್ಟಿ ಮುಗಿಸುವಂತೆ ಎಚ್ ಎನ್ ನೋಡಿಕೊಳ್ಳುತ್ತಾರೆ; ಇನ್ನೂ ಮುಖ್ಯವಾಗಿ ವಾರಕ್ಕೊಮ್ಮೆ ವಿದ್ಯಾರ್ಥಿನಿಲಯಗಳಿಗೆ ಭೇಟಿ ಕೊಟ್ಟು ಅವರ ಕಷ್ಟಸುಖಗಳನ್ನು ವಿಚಾರಿಸಿಕೊಳ್ಳುತ್ತಾರೆ.  “ವಿಶ್ವವಿದ್ಯಾಲಯವನ್ನು ‘ಜ್ಞಾನಭಾರತಿ’ಗೆ ಸ್ಥಳಾಂತರಿಸಿದ್ದು ಒಂದು ಮಹತ್ಸಾಧನೆ.  …  (ಇಲ್ಲದಿದ್ದರೆ) ಆ ಅಮೂಲ್ಯವಾದ 1000 ಎಕರೆ ಜಮೀನು ವಿಶ್ವವಿದ್ಯಾಲಯದ ಕೈಬಿಟ್ಟು ಹೋಗುತ್ತಿತ್ತು” ಎಂದು ಸಾರ್ಥಕ ಭಾವದಿಂದ ಎಚ್ ಎನ್ ದಾಖಲಿಸುತ್ತಾರೆ. 1974ರ ಘಟಿಕೋತ್ಸವದಲ್ಲಿ ಮುಖ್ಯ ಭಾಷಣ ಮಾಡಲು ಸುತರಾಂ ಅದಕ್ಕೆ ಒಪ್ಪದಿದ್ದ ಕುವೆಂಪು ಅವರ ಮನ ಒಲಿಸಿ, ಅವರು ಭಾಗ ವಹಿಸುವಂತೆ ಮಾಡಿದುದು ಮತ್ತೊಂದು ಪ್ರಮುಖ ಘಟನೆ; ಆ ಘಟಿಕೋತ್ಸವದಲ್ಲಿಯೇ ಕುವೆಂಪು ತಮ್ಮ ಚರಿತ್ರಾರ್ಹ ” ವಿಚಾರ ಕ್ರಾಂತಿಗೆ ಆಹ್ವಾನ” ಎಂಬ ಭಾಷಣವನ್ನು ಮಾಡುತ್ತಾರೆ.

ಇದೇ ಬಗೆಯ ಸಂಪೂರ್ಣ ಮೆಚ್ಚುಗೆಯನ್ನು ಈ ಕಾಲಘಟ್ಟದಲ್ಲಿ ಎಚ್ ಎನ್ ಅವರು ವಿಚಾರವಾದಿಯಾಗಿ ನಡೆಸಿದ ಹೋರಾಟದ ಬಗ್ಗೆ ವ್ಯಕ್ತಪಡಿಸುವುದು ಸ್ವಲ್ಪ ಕಷ್ಟ.  ಈ ಆತ್ಮಕಥೆಯನ್ನು ಓದುತ್ತಾ ಹೋದಂತೆ, ಇದಮಿತ್ಥಂ ಎಂಬಂತಹ ಸರಳ ಉತ್ತರಗಳು ಸಾಧ್ಯವಿಲ್ಲದ ಒಂದು ಪ್ರಶ್ನೆ ಮತ್ತೆ ಮತ್ತೆ ಓದುಗರನ್ನು ಕಾಡುತ್ತದೆ: ತಾವು ಪ್ರಾಮಾಣಿಕವಾಗಿ ನಂಬಿದ ಹಾಗೂ ಅದಕ್ಕನುಸಾರವಾಗಿ ಬಾಳಿದ ವಿಚಾರವಾದವನ್ನು ಎಚ್ ಎನ್ ಒಂದು ಅತಿಗೆ ಒಯ್ದರೆ?

ಕಳೆದ ಶತಮಾನದ ಆರು-ಏಳನೆಯ ದಶಕಗಳಲ್ಲಿ ತಮ್ಮ ವಿಚಾರವಾದದಿಂದ ಎಚ್ ಎನ್ ರಾಷ್ಟ್ರೀಯ ನೆಲೆಯಲ್ಲಿ ಒಂದು ದೊಡ್ಡ ವಿವಾದವನ್ನೇ ಹುಟ್ಟು ಹಾಕಿದ್ದರು.  ಈ ಆತ್ಮಕಥೆಯಲ್ಲಿ ಅವರು ಪವಾಡಗಳು ಮತ್ತು ಸತ್ಯ ಸಾಯಿಬಾಬಾ ಅವರ ಬಗ್ಗೆ ಎರಡು ಅಧ್ಯಾಯಗಳನ್ನೇ ಮೀಸಲಾಗಿಟ್ಟಿದ್ದಾರೆ; ಮತ್ತು ಅವರು ಬೆಂಗಳೂರು ವಿ. ವಿ. ಯ ಕುಲಪತಿಯಾದಾಗ ಪವಾಡ ಹಾಗೂ ಮೂಢ ನಂಬಿಕೆಗಳ ವಿರುದ್ಧ ನಡೆಸಿದ ಹೋರಾಟವನ್ನು ವಿಸ್ತಾರವಾಗಿ ವಿವರಿಸುತ್ತಾರೆ. ಸಂಪೂರ್ಣ ವಿಚಾರವಾದಿಗಳಾಗಿದ್ದ ಎಚ್ ಎನ್ ಬಾಲ್ಯದಿಂದಲೂ ವೈಜ್ಞಾನಿಕ ಮನೋಭಾವವನ್ನು ರೂಢಿಸಿಕೊಂಡಿದ್ದರು: “ನಾನು ಮೊದಲಿನಿಂದಲೂ ಪ್ರಶ್ನೆ ಮಾಡುವ ಮನೋಭಾವಕ್ಕೆ ಹೆಚ್ಚಿನ ಪ್ರಾಶಸ್ತ್ಯ ಕೊಟ್ಟುಕೊಂಡು ಬಂದಿದ್ದೇನೆ.  … ಪ್ರಶ್ನಾರ್ಥಕ ಚಿಹ್ನೆ ವೈಜ್ಞಾನಿಕ ಮನೋಭಾವದ ಪ್ರತೀಕ” (ಪು. 260).  ಪವಾಡಗಳು, ಮೂಢ ನಂಬಿಕೆಗಳು ಮತ್ತು ಫಲಜ್ಯೋತಿಷ್ಯ –ಇವುಗಳನ್ನು ಬಹುಕಾಲ ವಿರೋಧಿಸುತ್ತಲೇ ಬಂದ ಎಚ್ ಎನ್ ತಾವು ಬೆಂಗಳೂರು ವಿ. ವಿ. ಯ ಕುಲಪತಿಗಳಾದಾಗ, ಒಂದು ಹೆಜ್ಜೆ ಮುಂದು ಹೋಗಿ ವಿ. ವಿ.ಯಲ್ಲಿಯೇ ‘ಪವಾಡ ಮತ್ತು ಪರೀಕ್ಷಿಸಿ ನೋಡಬಹುದಾದ ಮೂಢ ನಂಬಿಕೆಗಳ ಸಮಿತಿ’ಯೊಂದನ್ನು 1976ರಲ್ಲಿ ಸ್ಥಾಪಿಸಿದರು; ಅದರ ಖರ್ಚು-ವೆಚ್ಚಗಳಿಗಾಗಿ ವಿ. ವಿ. ಯ ಬಜೆಟ್‍ನಲ್ಲಿ 25000 ರೂಗಳನ್ನು ಮಂಜೂರು ಮಾಡಿದರು (ಪು. 391).   ಪವಾಡಗಳು ನಡೆಯುತ್ತವೆಂಬ ಕಡೆಗಳಿಗೆಲ್ಲಾ  ಆ ಸಮಿತಿಯ ಸದಸ್ಯರು ಹೋಗಿ, ಆ ಘಟನೆಗಳನ್ನು ಪರೀಕ್ಷಿಸಿ, ವರದಿಯನ್ನು ವಿ. ವಿ. ಗೆ ಕೊಡುವುದು ಆ ತನಿಖಾ ಸಮಿತಿಯ ಕಾರ್ಯ.  ಈ ಸಮಿತಿ ಮಾಡಿದ (ಅತಿ ಹೆಚ್ಚಿನ ಪ್ರಚಾರ ಪಡೆದ) ಎರಡು ಮುಖ್ಯ ಕಾರ್ಯಗಳೆಂದರೆ ಪಾಂಡವಪುರದಲ್ಲಿ ಸಾಯಿಕೃಷ್ಣನೆಂಬ ಬಾಲಕನ ‘ಪವಾಡ’ವನ್ನು ಬಯಲು ಮಾಡಿದುದು ಮತ್ತು ವೈಟ್‍ ಫೀಲ್ಡ್‍ ನಲ್ಲಿರುವ ಸತ್ಯ ಸಾಯಿಬಾಬಾ ಅವರನ್ನು ಮುಕ್ತ ಚರ್ಚೆಗೆ ಆಹ್ವಾನಿಸಿದುದು.  ಸಾಯಿಬಾಬಾ ಅವರಿಗೆ ಎರಡು ಪತ್ರಗಳನ್ನು ಬರೆದರೂ ಅವರಿಂದ ಉತ್ತರ ಬರದಿದ್ದಾಗ, 1992 ಆಗಸ್ಟ್ 29ರಂದು ಹೈದರಾಬಾದಿನಲ್ಲಿ ಸಾಯಿಬಾಬಾ ಅವರು ಭಾಗವಹಿಸುವ ಒಂದು ಕಾರ್ಯಕ್ರಮಕ್ಕೆ ಹೋಗಿ, ಅಲ್ಲಿ ತೆಗೆದ ಛಾಯಾಚಿತ್ರಗಳ ಮೂಲಕ ಸಾಯಿಬಾಬಾ ಅವರು ಶೂನ್ಯದಿಂದ ಸೃಷ್ಟಿಮಾಡಿ ಭಕ್ತರಿಗೆ ಕೊಡುತ್ತಿದ್ದ ಉಂಗುರ, ವಾಚು, ಚೈನು, ಇತ್ಯಾದಿ ಎಲ್ಲವೂ ಅವರ ಕೈಚಳಕದಿಂದ ಸಾಧ್ಯವಾಗುತ್ತವೆ ಎಂದು ಈ ಸಮಿತಿ ಬಯಲು ಮಾಡಿತು.  ಆದರೂ ಸಾಯಿಬಾಬಾ ಅವರ ಭಕ್ತರ ಸಂಖ್ಯೆಯೇನೂ ಕಮ್ಮಿಯಾಗಲಿಲ್ಲ; ಈಗ ಮತ್ತಷ್ಟು ಹೆಚ್ಚಾಗಿದೆ ಎಂದು ತೋರುತ್ತದೆ.

ಈ ಸಂದರ್ಭದಲ್ಲಿ ಅನೇಕ ಪ್ರಶ್ನೆಗಳು ಏಳುತ್ತವೆ.  ಮೊದಲನೆಯದಾಗಿ, ವೈಯಕ್ತಿಕ ನೆಲೆಯಲ್ಲಿ ವ್ಯಕ್ತಿಯೊಬ್ಬನು/ಳು ದೇವರನ್ನಾಗಲಿ ಸಾಧು-ಸಂತರನ್ನಾಗಲಿ ನಂಬುವುದು ಅಥವಾ ಬಿಡುವುದು ಅವನಿಗೆ / ಅವಳಿಗೆ ಸಂಬಂಧಿಸಿದ ವಿಚಾರ.  ಆದರೆ, ವಿ. ವಿ. ಯಂತಹ ಒಂದು ಉಚ್ಚ ಶಿಕ್ಷಣ ಸಂಸ್ಥೆಯನ್ನೇ ತಮ್ಮ ವಿಚಾರವಾದದ ಪ್ರಚಾರಕ್ಕಾಗಿ ಬಳಸಿಕೊಳ್ಳುವುದು ಮತ್ತು ಆ ವೇದಿಕೆಗೆ ವಿ. ವಿ. ಯ ಅನುದಾನವನ್ನು ಪಡೆಯುವುದು ಎಷ್ಟು ಸರಿ?  ಇದು ಸರಿ ಎಂದಾದರೆ, ಮುಂದೊಂದು ದಿನ ಮತ್ತೊಂದು ವಾದದ ಪ್ರಚಾರಕ್ಕಾಗಿ (ಉದಾ. ವೇದ ಪ್ರಾಮಾಣ್ಯದ ಪ್ರಚಾರಕ್ಕಾಗಿ) ವಿ. ವಿ. / ಕಾಲೇಜುಗಳಲ್ಲಿ ವೇದಿಕೆಯನ್ನು ಕಟ್ಟಿದರೆ ಅದನ್ನೂ ಒಪ್ಪಬೇಕೆ ಅಥವಾ ಅದು ತಪ್ಪು ಎನ್ನಬೇಕೆ?  (ಆ ಕಾಲಘಟ್ಟದಲ್ಲಿ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಅಂದಿನ ಮುಖ್ಯ ಮಂತ್ರಿ ದೇವರಾಜ ಅರಸು ಅವರೂ ‘ಉಪಕುಲಪತಿಯಿರುವುದು ವಿಶ್ವವಿದ್ಯಾನಿಲಯವನ್ನು ಸಮರ್ಥವಾಗಿ ನಡೆಸಲು; ಇತರರ ಚಾರಿತ್ರ್ಯ ಪರೀಕ್ಷೆಗಲ್ಲ’ ಎಂದು ಹೇಳಿದರೆಂದು ನಾನು ಇತರರಿಂದ ಕೇಳಿದ್ದೇನೆ.)

ಚಿತ್ರಕೃಪೆ: ಡೆಕ್ಕನ್‌ ಹೆರಾಲ್ಡ್

ಎರಡನೆಯದಾಗಿ, ಸಾಹಿತ್ಯ-ವಿಮರ್ಶೆಯಲ್ಲಿ ಒಂದು ಮಾತಿದೆ: ‘ಕೃತಿಯನ್ನು ನಂಬು, ಕೃತಿಕಾರನನ್ನಲ್ಲ.’  (ಇದು ಡಿ. ಎಚ್. ಲಾರೆನ್ಸ್‍ ನ ನಿಲುವು.) ಇದನ್ನೇ ಇತರ ಕ್ಷೇತ್ರಗಳಿಗೂ ವಿಸ್ತರಿಸಿದರೆ, ವ್ಯಕ್ತಿಯೊಬ್ಬನಿಂದ  ಇತರರಿಗೆ ಯಾವ ತೊಂದರೆಯೂ ಆಗದೆ, ಶ್ರೇಷ್ಠ ಸಾಮಾಜಿಕ ಕಾರ್ಯಗಳಾಗುತ್ತಿದ್ದರೆ, ಆ ವ್ಯಕ್ತಿಯನ್ನು ಗೌರವಿಸುವುದು ತಪ್ಪೆ?  ನಾನು ತಿಳಿದಂತೆ, ಸಾಯಿಬಾಬಾ ಅವರ ಭಕ್ತರು ಶ್ರೇಷ್ಠ ದರ್ಜೆಯ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದ್ದಾರೆ; ಉನ್ನತ ಮಟ್ಟದ ಆಸ್ಪತ್ರೆಗಳನ್ನು ನಡೆಸುತ್ತಿದ್ದಾರೆ; ನೀರಿಲ್ಲದೆ ತೊಳಲುತ್ತಿದ್ದ ಹಳ್ಳಿಗಳಿಗೆ ನೀರು ಬರುವಂತೆ ಮಾಡಿದ್ದಾರೆ; ಮತ್ತು ಸಾಹಿತ್ಯ-ಸಂಗೀತ ಇತ್ಯಾದಿ ಲಲಿತ ಕಲೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ; ಮತ್ತು ಇವೆಲ್ಲಾ ಕಡೆಗಳಲ್ಲೂ ಬಡವರಿಗೆ ಹಾಗೂ ದುರ್ಬಲರಿಗೆ ಮುಕ್ತ ಸೇವೆ ದೊರಕುತ್ತದೆ.  ಈ ಸಂಗತಿಗಳು ನಿಜವಿದ್ದರೆ, ಸಾಯಿಬಾಬಾ ಅವರ (ಅಥವಾ ಅವರಂತಹ ಇತರ ಸಾಧು-ಸಂತರ)  ‘ವೈಯಕ್ತಿಕ ಬದುಕನ್ನು ಪರೀಕ್ಷಿಸುವ ಅಧಿಕಾರವನ್ನು ನಮಗೆ ಕೊಟ್ಟವರಾರು?’ ಎಂಬ ಪ್ರಶ್ನೆಯೇಳುತ್ತದೆ.  ಅಷ್ಟೇ ಅಲ್ಲದೆ, ಇಡಿ ಜಗತ್ತಿನಲ್ಲಿರುವ ಸಾವಿರಾರು ಸಾಧು-ಸತ್ಪುರುಷರೆಲ್ಲರನ್ನೂ ಪರೀಕ್ಷೆ ಮಾಡುವುದು ಸಾಧ್ಯವೆ?  ಅಂದರೆ, ಇಲ್ಲಿ ಮುಖ್ಯವಾಗುವ ಪ್ರಶ್ನೆ ‘ಇತರರಿಗೆ ಹಿಂಸೆ-ಅನ್ಯಾಯಗಳಾಗದಂತಹ ನಂಬಿಕೆಗಳನ್ನು ನಾವು ಹೀಗಳೆಯಬೇಕೆ?’

ಎಚ್ ಎನ್ ಅವರೇ ತಮ್ಮ ಆತ್ಮಕಥೆಯಲ್ಲಿ ಮತ್ತೆ ಮತ್ತೆ ದಾಖಲಿಸುವಂತೆ, ತಮ್ಮ ಪವಾಡ ಪರೀಕ್ಷೆಗಳು ಎಷ್ಟೇ ಯಶಸ್ವಿಯಾದರೂ ಅವುಗಳನ್ನು ನಂಬುವವರ ಮೇಲೆ ಆ ಪರೀಕ್ಷೆಗಳು ಹೆಚ್ಚೇನೂ ಪರಿಣಾಮವನ್ನುಂಟುಮಾಡಲಿಲ್ಲ.  ಎಚ್ ಎನ್ ಅವರನ್ನು ತುಂಬಾ ಗೌರವಿಸುತ್ತಿದ್ದ ಮತ್ತು ಅವರಷ್ಟೇ ಆದರ್ಶವಾದಿ ಶಿಕ್ಷಕಿಯಾಗಿದ್ದ (ಮತ್ತು ಎನ್. ಎಮ್. ಕೆ. ಆರ್. ವಿ. ಸಂಸ್ಥೆಗಾಗಿ ಹಗಲಿರುಳೂ ದುಡಿದ) ಚಿ. ನಾ. ಮಂಗಳಾ ಅವರು ಕೊನೆಯವರೆಗೂ ಸಾಯಿಬಾಬಾ ಅವರ ಭಕ್ತರೇ ಆಗಿದ್ದರು; ಇನ್ನು ನಾ. ಕಸ್ತೂರಿ, ಗೋಕಾಕ್, ಮುಂತಾದವರ ಸಾಯಿಬಾಬಾ ಭಕ್ತಿ ಸರ್ವ ವಿದಿತ.  ಅರ್ಥಾತ್, ದೇವರುಗಳಲ್ಲಿ, ಸಾಧು-ಸಂತರಲ್ಲಿ, ವ್ರತಾಚರಣೆಗಳಲ್ಲಿ, ಜನರಿಗೆ ನಂಬಿಕೆಯಿರುವುದಕ್ಕೆ ಬೇರೇ ಏನೋ ಪ್ರಬಲವಾದ ಕಾರಣಗಳಿರಬೇಕು.  ಆ ಕಾರಣಗಳಲ್ಲಿ ಒಂದೆಂದರೆ, ನಮ್ಮ ಯಾವ ಬಗೆಯ ತರ್ಕಕ್ಕೂ ನಿಲುಕದ ನೂರಾರು ಸಂಗತಿಗಳು ಈ ಜಗತ್ತಿನಲ್ಲಿ ನಡೆಯುತ್ತಿರುತ್ತವೆ — ತಮ್ಮ ಯಾವ ತಪ್ಪೂ ಇಲ್ಲದೆ, ಜನ್ಮತಃ ಕುರುಡರಾದವರು, ಕೈಕಾಲುಗಳಿಲ್ಲದಿರುವವರು, ವಿಚಿತ್ರ ಕಾಹಿಲೆಗಳಿಂದ ನರಳುವವರು, ಬಡಬಗ್ಗರು, ಇತ್ಯಾದಿ ಜೀವನಪರ್ಯಂತ ದುಃಖ-ನೋವುಗಳನ್ನು ಅನುಭವಿಸುತ್ತಿರುತ್ತಾರೆ.  ಇಂತಹವರೆಲ್ಲರಿಗೂ ತಮ್ಮ ಕಟು ವಾಸ್ತವವನ್ನು ತಾರ್ಕಿಕ ನೆಲೆಯಲ್ಲಿ  ಒಪ್ಪಿಕೊಂಡು ಬದುಕುವುದು  ಅಸಾಧ್ಯ.  ಎಲ್ಲದಕ್ಕಿಂತ ಹೆಚ್ಚಾಗಿ, ಇದ್ದಕ್ಕಿದ್ದಂತೆ ಬರುವ ಆಕಸ್ಮಿಕಗಳು, ಅಕಾಲ ಮರಣಗಳು, ಸಾವಿನ ನಂತರದ ನಿಗೂಢತೆ, ಇವನ್ನು ಒಪ್ಪಿಕೊಂಡು ಬದುಕುವುದು ಎಂತಹವರಿಗೂ ಕಷ್ಟಸಾಧ್ಯ.  ಆದುದರಿಂದ ಅನೇಕರು ದೇವರುಗಳ, ಸಾಧು-ಸಂತರ, ವ್ರತಾಚರಣೆಗಳ ಮೊರೆ ಹೋಗುತ್ತಾರೆ. ಒಬ್ಬರ ಪವಾಡಗಳು ಬಯಲಾದರೆ ಮತ್ತೊಬ್ಬರ ಮೊರೆ ಹೋಗುತ್ತಾರೆ; ಅವರಲ್ಲದಿದ್ದರೆ, ಇನ್ನೊಬ್ಬರ ಮೊರೆ ಹೋಗುತ್ತಾರೆ.  ಈ ಅಸಹಾಯಕತೆ ಮತ್ತು ಅದರ ಕಾರಣದಿಂದ ಜನ್ಮಿಸುವ ‘ಶ್ರದ್ಧಾಕೇಂದ್ರ’ದ ಮಾನಸಿಕ ಅಗತ್ಯ ಮನುಷ್ಯ ಜನ್ಮದ ‘ಭವ ದತ್ತ’ ಸ್ವರೂಪ ಎಂದು ತೋರುತ್ತದೆ.  ಈ ‘ದತ್ತ’ ಸ್ವರೂಪದ ವಿರುದ್ಧ ನಡೆಸುವ ಹೋರಾಟ ಯಶಸ್ವಿಯಾಗುವುದು ಕಷ್ಟ; ಪ್ರಾಯಃ, ಅನವಶ್ಯಕ.

ಈ ನೆಲೆಯಲ್ಲಿ ಎಚ್ ಎನ್ ಅವರನ್ನು (ಮತ್ತು ಅಂತಹ ಇತರ ವಿಚಾರವಾದಿಗಳನ್ನು) ಹೀಗೆ ಅರ್ಥ ಮಾಡಿಕೊಳ್ಳಬಹುದೇನೋ!  ಉನ್ನತ ತತ್ವಗಳಿಗಾಗಿ ತಮ್ಮ ಬದುಕನ್ನೇ ಮುಡುಪಾಗಿಡುವ ಹಾಗೂ ಅತ್ಯಂತ ಋಜು ಜೀವನವನ್ನು ನಡೆಸುವ ವ್ಯಕ್ತಿಗಳಿಗೆ ಆ ಕಾರಣದಿಂದಲೇ ಒಂದು ಬಗೆಯ ‘ಅತಿಯಾದ ಆತ್ಮ ಪ್ರತ್ಯಯ’ (Self righteousness) ಉಂಟಾಗುತ್ತದೆ; ಮತ್ತು ಆ ಕಾರಣದಿಂದ ಅವರು ಯಾವುದಾದರೂ ಒಂದು ದಿಕ್ಕಿನಲ್ಲಿ ಹೋಗುತ್ತಾ ಇತರ ದಿಕ್ಕುಗಳನ್ನು ಹಾಗೂ ಇತರ ದಿಕ್ಕುಗಳಲ್ಲಿ ನಡೆಯುವವರನ್ನೂ ಸಂಪೂರ್ಣವಾಗಿ ತಿರಸ್ಕರಿಸುವಂತೆ ಆಗುತ್ತದೆ.  ಪ್ರತಿ ಕ್ಷಣದಲ್ಲೂ ತಮ್ಮನ್ನು ಹಾಗೂ ತಮ್ಮ ಕ್ರಿಯೆಗಳನ್ನು ಪರೀಕ್ಷೆಗೆ ಒಡ್ಡಿಕೊಳ್ಳುವ ಗಾಂಧೀಜಿಯಂತಹವರು ಯುಗಕ್ಕೊಮ್ಮೆ ಜನ್ಮಿಸುತ್ತಾರೋ ಏನೋ!.

ಈ ಮಾತುಗಳು ಎಚ್ ಎನ್ ಅವರ ಅಸದೃಶ ಸಾಧನೆಯನ್ನಾಗಲೀ ಅವರಿಂದ ಶಿಕ್ಷಣ ಕ್ಷೇತ್ರಕ್ಕೆ ಮತ್ತು ಸಮಾಜಕ್ಕೆ ಆಗಿರುವ ಅಸಾಧಾರಣ ಕೊಡುಗೆಯನ್ನಾಗಲಿ ಅಲ್ಲಗಳೆಯುವುದಿಲ್ಲ ಎಂದು ನಾನು ನಂಬಿದ್ದೇನೆ.

(ಇ) ಪ್ರಾಮಾಣಿಕತೆ:   ಮೊದಲೇ ಸೂಚಿಸಿದಂತೆ, ಒಂದು ಆತ್ಮಕಥೆ ಓದುಗರ ಹೃದಯವನ್ನು ತಟ್ಟ ಬೇಕಾದರೆ, ಅದರಲ್ಲಿ ನಮೂದಾಗಿರುವ ವಿಷಯಗಳೆಲ್ಲವೂ ವಿಶ್ವಾಸಾರ್ಹವಾಗಿರಬೇಕು.  ಈ ದಿಕ್ಕಿನಲ್ಲಿ, ಕೃತಿಯುದ್ದಕ್ಕೂ ಎಚ್ ಎನ್ ಸಾಕಷ್ಟು ವಸ್ತುನಿಷ್ಠರಾಗಿ, ತಮ್ಮ ಬದುಕಿನ ಅವಲೋಕನವನ್ನು ಮಾಡಿರುವುದು ಕಂಡುಬರುತ್ತದೆ.  ಸ್ವಲ್ಪ ಮುಜುಗರದ ಸಂಗತಿಗಳನ್ನೂ ಎಚ್ ಎನ್ ದಾಖಲಿಸುತ್ತಾರೆ.  ಉದಾಹರಣೆಗಾಗಿ, ‘ಗಾಂಧಿ ಅಧ್ಯಯನ ಕೇಂದ್ರ’ದ ಉದ್ಘಾಟನೆಯ ಸಂದರ್ಭದಲ್ಲಿ ಆದ ಘಟನೆಯನ್ನು ನೋಡಬಹುದು.  ಎಲ್ಲಾ ಕಾರ್ಯಕ್ರಮಗಳೂ “ಯಂ ಬ್ರಹ್ಮಾ ವರುಣೇಂದ್ರ …” ಎಂಬ ಶ್ಲೋಕದಿಂದ ಪ್ರಾರಂಭವಾಗುತ್ತಿದ್ದುವು; ಆದರೆ, ಅಂದು ಎಚ್ ಎನ್ ಅವರೇ (ರಾಜ್ಯಪಾಲರು ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ) “ಜನಗಣಮನ ..” ಎಂದು ಪ್ರಾರಂಭಿಸುತ್ತಾರೆ.  ಆಗ, ತಮ್ಮ ಬಗ್ಗೆ ಅವರೇ ಮಾಡಿಕೊಳ್ಳುವ ಆತ್ಮಾವಲೋಕನ ಗಮನೀಯವಾಗಿದೆ:

“ರಾತ್ರಿಯೆಲ್ಲಾ ಕೆಲಸ ಮಾಡಿ ತುಂಬಾ ಬಳಲಿದ್ದೆ. ಕೆಲಸಕ್ಕಿಂತ ಹೆಚ್ಚು ಆಯಾಸವನ್ನುಂಟುಮಾಡುವುದು ಆತಂಕ, ದುಗುಡ, ಮುಂತಾದ ಮಾನಸಿಕ ಒತ್ತಡಗಳು.  ಚಿಕ್ಕ ಕೆಲಸದಿಂದ ಮುಖ್ಯವಾದ ಕೆಲಸದವರೆಗೂ ನನಗೆ ಒತ್ತಡಗಳು ಯಥಾಶಕ್ತಿ ಇರುತ್ತವೆ. ಒಟ್ಟಿನಲ್ಲಿ ಇದೊಂದು ದೌರ್ಬಲ್ಯ ಅಂತ ಕಾಣುತ್ತದೆ” (ಪು. 276).

ಎಚ್ ಎನ್ ಪ್ರಾಂಶುಪಾಲರಾಗಿದ್ದಾಗ ನಡೆದ ಮತ್ತೊಂದು ಘಟನೆ ಅವರ ಈ ಬಗೆಯ ಪ್ರಾಮಾಣಿಕತೆಯನ್ನು ಇನ್ನೂ ಸ್ಪಷ್ಟವಾಗಿ ಚಿತ್ರಿಸುತ್ತದೆ.  ಅವರೇ ಇದನ್ನು “ಜಂಘಾಬಲ ಉಡುಗಿಸಿದ ಘಟನೆ” ಎಂದು ನೆನಪಿಸಿಕೊಳ್ಳುತ್ತಾರೆ.  ಒಂದು ಸಂದರ್ಭದಲ್ಲಿ, ಅಷ್ಟೇನೂ ಪೂರ್ವಾಪರ ವಿಚಾರಿಸದೆ ಶಿಕ್ಷಕಿಯೊಬ್ಬಳನ್ನು ಎಚ್ ಎನ್ ತಮ್ಮ ಕಾಲೇಜಿಗೆ ನೇಮಿಸಿಕೊಳ್ಳುತ್ತಾರೆ; ಆದರೆ, ಅನಂತರ ಅವಳ ಚಾರಿತ್ರ್ಯ ಅಷ್ಟೇನೂ ಒಳ್ಳೆಯದಲ್ಲ ಎಂಬುದು ಅವರಿಗೆ ಸ್ನೇಹಿತರಿಂದ ತಿಳಿಯುತ್ತದೆ.  ಆಗ ಅವಳನ್ನು ಕೆಲಸದಿಂದ ತೆಗೆಯಲು ಅವರು ನಿರ್ಧರಿಸುತ್ತಾರೆ; ಆದರೆ, ಪ್ರಬಲ ರಾಜಕೀಯ ವ್ಯಕ್ತಿಗಳ ಬೆಂಬಲವಿದ್ದ ಆ ಶಿಕ್ಷಕಿ “ಹಾಗೇನಾದರೂ ನನ್ನನ್ನು ಕೆಲಸದಿಂದ ತೆಗೆದರೆ ನಿಮ್ಮನ್ನು ಮುಗಿಸ್ತೀನಿ, ಹುಷಾರಾಗಿರಿ” ಎಂದು ಆರ್ಭಟಿಸುತ್ತಾಳೆ.  ಏನು ಮಾಡಬೇಕೆಂದು ತಿಳಿಯದ ಎಚ್ ಎನ್ ಅವಳನ್ನು ಕೆಲಸದಿಂದ ತೆಗೆಯುವ ಪತ್ರವನ್ನು ತಮ್ಮ ಆಫೀಸಿನ ಅಧಿಕಾರಿಯೊಬ್ಬರಿಗೆ ಕೊಟ್ಟು, ಆ ಶಿಕ್ಷಕಿ ಕಾಲೇಜಿಗೆ ಬಂದಾಗ ಅವಳಿಗೆ ಕಾಣಿಸಿಕೊಳ್ಳದೇ ಇರಲು ಕಾಲೇಜಿನಿಂದ ದೂರ ಇರುವ ತಮ್ಮ ಸ್ನೇಹಿತರ ಮನೆಯಲ್ಲಿ ಅಡಗಿಕೊಳ್ಳುತ್ತಾರೆ.  ” ‘ಆಕೆ ಬಂದರೆ?  ರಿಲೀವ್ ಆಯ್ತೆ’ ಎಂದು ತವಕದಿಂದ ಹತ್ತು ನಿಮಿಷಗಳಿಗೊಮ್ಮೆ ಮಾಧವ ಮೂರ್ತಿ ಅವರಿಗೆ ಫೋನ್ ಮಾಡುತ್ತಿದ್ದೆ” ಎಂದು ಆ ದಿನದ ತಮ್ಮ ಆತಂಕವನ್ನು ಎಚ್ ಎನ್ ದಾಖಲಿಸುತ್ತಾರೆ.  ಆ ಶಿಕ್ಷಕಿ ರಿಲೀವ್ ಆಗಿ, ಎಚ್ ಎನ್ ಅವರನ್ನು ‘ವಾಚಾಮಗೊಚರ ಬೈದು’ ಮರಳಿ ಹೋದದ್ದು ತಿಳಿದನಂತರವೇ ಎಚ್ ಎನ್ ಕಾಲೇಜಿಗೆ ಬರುತ್ತಾರೆ.  “ಕೆಲವು ದಿನವಂತೂ ಆಕೆಯದೇ ನನಗೆ ಸಿಂಹಸ್ವಪ್ನವಾಗಿತ್ತು” ಎಂದು ಅವರು ಪ್ರಾಮಾಣಿಕವಾಗಿ ದಾಖಲಿಸುತ್ತಾರೆ.

(ಈ) ಹಾಸ್ಯ ಪ್ರಜ್ಞೆ:   ಆತ್ಮಚರಿತ್ರೆ ವ್ಯಕ್ತಿಯ ಸಾಮಾಜಿಕ ಆಯಾಮಕ್ಕೆ ಮಾತ್ರ ಸೀಮಿತವಾಗಿದ್ದರೆ, ಹೆಚ್ಚಿನ ಸಂದರ್ಭಗಳಲ್ಲಿ ಅದು ‘ಪತ್ರಿಕಾ ವರದಿ’ಯಾಗಿಬಿಡುವ ಸಾಧ್ಯತೆಯಿರುತ್ತದೆ.  ಈ ಅಪಾಯದಿಂದ ಎಚ್ ಎನ್ ಅವರ ಆತ್ಮಕಥೆಯೂ ಸಂಪೂರ್ಣವಾಗಿ ಪಾರಾಗಿಲ್ಲ; ಅವರು ವಿದೇಶಗಳಲ್ಲಿ ಕಳೆದ ದಿನಗಳು  ಹಾಗೂ ಭೇಟಿ ನೀಡಿದ ಸ್ಥಳಗಳ ವಿವರಗಳು (‘ಅಮೆರಿಕಾದಲ್ಲಿ ವಿದ್ಯಾಭ್ಯಾಸ,’ ‘ಪ್ರಾಧ್ಯಾಪಕನಾಗಿ ಅಮೆರಿಕಾಕ್ಕೆ’ ಇತ್ಯಾದಿ) ವರದಿಯ ಸ್ವರೂಪದಿಂದ  ಮುಕ್ತವಾಗಿಲ್ಲ.  ಈ ಸಂದರ್ಭದಲ್ಲಿ ‘ಆತ್ಮಕಥೆ’ ಎಂಬ ವಾಙ್ಮಯ ಪ್ರಕಾರದ ಬಗ್ಗೆ ಒಂದು ಮಾತನ್ನು ಹೇಳಬೇಕಾದರೆ, ‘ಸಾಧನೆಗಳ ಕಥೆಗಿಂತ ಸಾಧನೆಯ ಮಾರ್ಗದ ಕಥೆ ಹೆಚ್ಚು ರೋಚಕವಾಗಿರುತ್ತದೆ ಹಾಗೂ ಓದುಗರನ್ನು ಪ್ರಭಾವಿಸುತ್ತದೆ.’  ಎಂದರೆ, ಸಾಧಕನೊಬ್ಬನ (ಈ ಸಂದರ್ಭದಲ್ಲಿ ಎಚ್ ಎನ್) ವೈಯಕ್ತಿಕ ದ್ವಂದ್ವಗಳು, ಅವನು ಮಾನವಸಹಜವಾದ ಕಾಮ-ಕ್ರೋಧಗಳನ್ನು ಜಯಿಸಿದ ಬಗೆ ಮತ್ತು ಆ ಪ್ರಕ್ರಿಯೆಯಲ್ಲಿ ಅನುಭವಿಸಿದ ನೋವು-ಕಷ್ಟಗಳು, ಇವೆಲ್ಲವನ್ನೂ ಒಂದು ಆತ್ಮಕಥೆ ದಾಖಲಿಸಿದರೆ, ಅದರ ಮಹತ್ವ ಅಗಾಧವಾಗುತ್ತದೆ.  ಈ ಆಯಾಮವನ್ನು ನಾವು ಎಚ್ ಎನ್ ಅವರ ಕಥೆಯಲ್ಲಿ ಕಾಣುವುದಿಲ್ಲ. ಅವರದು ಕೇವಲ ‘ಸಾಧನೆ’ಗಳ ಕಥನವೇ ಹೊರತು ‘ಸಾಧನಾ ಪ್ರಕ್ರಿಯೆ’ಯ ಕಥನವಲ್ಲ.

ಅದರೆ, ಹೆಚ್ಚಿನ ಸಂದರ್ಭಗಳಲ್ಲಿ, ಅವರ ಆತ್ಮಕಥೆಯನ್ನು ಮಾನವೀಯಗೊಳಿಸುವುದು ಅವರ ಅದ್ಭುತ ಹಾಸ್ಯ ಪ್ರಜ್ಞೆ.  ಕೃತಿಯುದ್ದಕ್ಕೂ ಈ ಹೇಳಿಕೆಯನ್ನು ಸಮರ್ಥಿಸುವ ಅನೇಕ ನಿದರ್ಶನಗಳು ನಮಗೆ ದೊರೆಯುತ್ತವೆ. ಪ್ರಾರಂಭದಲ್ಲಿಯೇ ‘ದೇವರುಗಳ ಶ್ರೇಣೀಕರಣ’ದ ಬಗ್ಗೆ ಅವರು ಹೀಗೆ ಹೇಳುತ್ತಾರೆ: “ಜನರಲ್ಲಿದ್ದ ಹಾಗೇ ದೇವರುಗಳಲ್ಲೂ ಆರ್ಥಿಕ ಅಸಮಾನತೆ ಇದೆ.  ಸ್ವಲ್ಪ ಹೆಚ್ಚು ಕಡಿಮೆ ಎಲ್ಲಾ ದೇವರುಗಳೂ ಬಡತನದಲ್ಲಿಯೇ ಕಾಲ ತಳ್ಳುತ್ತಿವೆ.  ಶನಿ ದೇವರು ಸ್ವಲ್ಪ ಉತ್ತಮ.  ಹೊಸ ಆಂಜನೇಯ ಸ್ವಾಮಿ ಬಂದು ಹಿಂದಿನ ಆಂಜನೇಯ ಸ್ವಾಮಿಗೆ ಅನಾದರದ ಮನೋಭಾವ” (ಪು. 2).  ನ್ಯಾಶನಲ್ ಕಾಲೇಜ್ ಹಾಸ್ಟಲ್‍ನಲ್ಲಿ ಪ್ರತಿದಿನವೂ ಬೆಳಿಗ್ಗೆ ಐದು ಘಂಟೆಗೆ ಮತ್ತು ಸಾಯಂಕಾಲ ಏಳು ಘಂಟೆಗೆ ಸಾಮೂಹಿಕ ಪ್ರಾರ್ಥನೆಯ ಪದ್ಧತಿಯಿತ್ತು.  ಎಲ್ಲರೂ ಊಹಿಸುವಂತೆ, ಬೆಳಗಿನ ಜಾವ ವಿದ್ಯಾರ್ಥಿಗಳನ್ನು ಪ್ರಾರ್ಥನೆಯ ಹೊತ್ತಿಗೆ ಏಳಿಸುವುದು ಕಷ್ಟದ ಕೆಲಸ.  ಪ್ರತಿ ದಿನವೂ ಪ್ರತಿ ರೂಮಿಗೆ ಹೋಗಿ ವಿದ್ಯಾರ್ಥಿಗಳನ್ನು ಏಳಿಸುವ ಕೆಲಸದಿಂದ ಬೇಸತ್ತ ಎಚ್ ಎನ್ ಒಮ್ಮೆ ಪ್ರಾರ್ಥನೆಗೆ ತಪ್ಪಿಸಿಕೊಂಡ ವಿದ್ಯಾರ್ಥಿಗಳಿಗೆ ನಾಲ್ಕಾಣೆ ದಂಡವೆಂದು ಘೋಷಿಸುತ್ತಾರೆ.  ಆಗ ಒಬ್ಬ ವಿದ್ಯಾರ್ಥಿ ಒಟ್ಟಿಗೆ ಒಂದು ರೂಪಾಯಿ ಅಡ್ವಾನ್ಸ್ ಕೊಟ್ಟು ಅದನ್ನು ನಾಲ್ಕು ದಿನಗಳ ಗೈರು ಹಾಜರಿಗೆ ಅಡ್ಜಸ್ಟ್ ಮಾಡಿಕೊಳ್ಳಲು ಹೇಳುತ್ತಾನೆ.  “ನನಗೆ ನಗಬೇಕೋ ಕೋಪಿಸಿಕೊಳ್ಳಬೇಕೋ ಗೊತ್ತಾಗಲಿಲ್ಲ.  ಅವನನ್ನು ಹೇಳಿ ಕಳುಹಿಸಿ ‘ಪಾಪಿ, ಇಂತಹ ಕೆಲಸವೇನೋ ನೀನು ಮಾಡುವುದು’ ಅಂತ ಕೋಪಗೊಂಡವನಂತೆ ನಟಿಸಿ ಅವನನ್ನು ಬೈದೆ.  ಅವನು ನಗುತ್ತಾ ಸುಮ್ಮನೆ ನಿಂತುಕೊಂಡಿದ್ದ” (ಪು.151).  ಮತ್ತೊಮ್ಮೆ (ಎಚ್ ಎನ್ ಪ್ರಾಂಶುಪಾಲರಾಗಿದ್ದಾಗ) ಇವರಿದ್ದ ನ್ಯಾಶನಲ್ ಕಾಲೇಜ್ ಹಾಸ್ಟಲ್‍ಗೆ ಸ್ವಾಮೀಜಿಯವರೊಬ್ಬರು ಬಂದು ‘ಗೋಹತ್ಯೆಯನ್ನು ವಿರೋಧಿಸುವ’ ಒಂದು ಕರಪತ್ರವನ್ನು ಕೊಟ್ಟು ಎಚ್ ಎನ್ ಅವರ ಸಹಾಯವನ್ನು ಅಪೇಕ್ಷಿಸುತ್ತಾರೆ.  ಆಗ, ಎಚ್ ಎನ್ “ಸ್ವಾಮೀಜಿ, ಈ ಕರಪತ್ರದ ಮೇಲೆ ‘ಗೋಮಾತೆಗೆ ಜಯವಾಗಲಿ’ ಅಂತ ಮಾತ್ರ ಮುದ್ರಿಸಿದ್ದೀರಿ.  ಎಮ್ಮೆ ಮಾತೆಗೆ ಜಯವಾಗಲಿ ಅಂತ ಏಕೆ ಬರೆದಿಲ್ಲ?  ಹಸುವಿಗಿಂತ ಎಮ್ಮೇನೇ ಹೆಚ್ಚು  ಹಾಲು ಕೊಡುವುದು” ಎಂದು ಉತ್ತರಿಸುತ್ತಾರೆ.  ಇಂತಹ ಅನೇಕ ಘಟನೆಗಳು ಈ ಕೃತಿಯಲ್ಲಿ ದಾಖಲಾಗಿವೆ; ಮತ್ತು “ಕೆಲವು ಪ್ರಸಂಗಗಳು” ಎಂಬ ಇಡೀ ಒಂದು ಅಧ್ಯಾಯ ಎಚ್ ಎನ್ ಅವರ ಅನುಭವಕ್ಕೆ ಬಂದ ಹಾಸ್ಯ ಪ್ರಸಂಗಗಳನ್ನು ನವಿರಾದ ಶೈಲಿಯಲ್ಲಿ ದಾಖಲಿಸುತ್ತದೆ.

ಯಾವ ಕೃತಿಯೂ ಪರಿಪೂರ್ಣವಲ್ಲ; ಒಂದಲ್ಲಾ ಒಂದು ಬಗೆಯ ಮಿತಿಗಳು ಎಲ್ಲಾ ಕೃತಿಗಳಲ್ಲೂ ಕಂಡುಬರುತ್ತವೆ.  ಆದರೆ, ಕೆಲವು ಮಿತಿಗಳಿದ್ದೂ ಕೃತಿಯೊಂದು ಓದುಗರಿಗೆ ಮಹತ್ವದ್ದಾಗಬಹುದು.  ಈ ಮಾತುಗಳು ಎಚ್ ಎನ್ ಅವರ ಆತ್ಮಕಥೆಗೂ ಅನ್ವಯಿಸುತ್ತವೆ.  ಈ ಕೃತಿಯ ಮೊದಲನೆಯ ಆವೃತ್ತಿಗೆ ತುಂಬಾ ಗಂಭೀರವಾದ ಮುನ್ನುಡಿಯನ್ನು ಬರೆದಿರುವ ಡಾ. ಜಿ. ಎಸ್. ಶಿವರುದ್ರಪ್ಪನವರ ಮಾತುಗಳಿಂದಲೇ ಈ ಲೇಖನವನ್ನು ಮುಗಿಸಬಹುದು: “ಈ ಆತ್ಮಕಥನ ನಿರಂತರ ಕ್ರಿಯಾಶೀಲವಾದ, ಅದಮ್ಯವಾದ ಜೀವನಪ್ರೀತಿಯ, ವಿಧಿ-ಕರ್ಮ-ದೈವಗಳ ಹಂಗಿಲ್ಲದ ಪುರುಷಕಾರದಲ್ಲಿ ನಂಬಿಕೆಯುಳ್ಳ ಮತ್ತು ತೆರೆದ ಮನವುಳ್ಳ ವ್ಯಕ್ತಿತ್ವವೊಂದರ ಸಾಧನೆಗಳ ಚರಿತ್ರೆಯಾಗಿದೆ” (‘ಮುನ್ನುಡಿ,’ ಪು. xii).

***

ಡಾ. ಸಿ. ಎನ್. ರಾಮಚಂದ್ರನ್, ಕನ್ನಡದ ಖ್ಯಾತ ವಿಮರ್ಶಕರು. ಇವರ ಆಖ್ಯಾನ ವ್ಯಾಖ್ಯಾನ (ವಿಮರ್ಶಾ ಲೇಖನಗಳ ಸಂಗ್ರಹ) ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.


ಇದನ್ನೂ ಓದಿ: ನಮ್ಮೂರ ಡಾ.ಎಚ್ಚೆನ್‍ಗೆ ನೂರು: ವೈಯಕ್ತಿಕ ನೆನಪುಗಳ ಹಿನ್ನೆಲೆಯಲ್ಲೊಂದು ಸಾಮಾಜಿಕ ನೋಟ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...