Homeಅಂಕಣಗಳುನಮ್ಮೂರ ಡಾ.ಎಚ್ಚೆನ್‍ಗೆ ನೂರು: ವೈಯಕ್ತಿಕ ನೆನಪುಗಳ ಹಿನ್ನೆಲೆಯಲ್ಲೊಂದು ಸಾಮಾಜಿಕ ನೋಟ

ನಮ್ಮೂರ ಡಾ.ಎಚ್ಚೆನ್‍ಗೆ ನೂರು: ವೈಯಕ್ತಿಕ ನೆನಪುಗಳ ಹಿನ್ನೆಲೆಯಲ್ಲೊಂದು ಸಾಮಾಜಿಕ ನೋಟ

- Advertisement -
- Advertisement -

ಡಾ.ಎಚ್.ನರಸಿಂಹಯ್ಯನವರು ನಮ್ಮೂರಿನವರು ಎನ್ನುವುದು ನಮ್ಮೂರಿನವರಿಗೆ ಇನ್ನು ಮುಂದೆ ಹೆಮ್ಮೆಯ ವಿಚಾರವಾಗಬಹುದಾ ಎಂದು ಯೋಚಿಸುತ್ತೇನೆ. ಬದುಕಿರುವಾಗ ಹಲವರಿಗೆ ಹಲವರು ಜಗಳಗಳಿರುತ್ತವೆ. ಅವರು ಊರಿನಲ್ಲಿ ಇನ್ನಾರಿಗೋ ಪ್ರಾಧಾನ್ಯತೆ ಕೊಡುತ್ತಿದ್ದಾರೆ, ಇಂತಹ ಜಾತಿಗೆ ಸೇರಿದವರ ಜೊತೆಗೆ ಹೆಚ್ಚಿರುತ್ತಾರೆ, ತಾನು ಹೋಗಿ ಕೇಳಿದಾಗ ನ್ಯಾಷನಲ್ ಕಾಲೇಜಿನಲ್ಲಿ ಸೀಟು ಕೊಡಲಿಲ್ಲದಂತಹ ಹಲವು ತಕರಾರುಗಳಿರಲು ಸಾಧ್ಯ. ಅವರಿರುವತನಕ ‘ಪ್ರತಿಷ್ಠಿತ’ ಕಾಲೇಜಾಗಿಯೇ ಇದ್ದ ನ್ಯಾಷನಲ್ ಕಾಲೇಜಿನಲ್ಲಿ ಇರುವ ಸೀಟುಗಳಿಗೂ, ಅಪೇಕ್ಷಿತರಿಗೂ ನಡುವೆ ದೊಡ್ಡ ಅಂತರ ಇರುತ್ತಿತ್ತು. ಹಾಗಾಗಿ ಪವಾಡ ಪುರುಷರನ್ನು ಎದುರು ಹಾಕಿಕೊಂಡಿದ್ದರಿಂದ ಹುಟ್ಟಿಕೊಂಡ ಶತ್ರುಗಳಿಗಿಂತ ಸೀಟು ಕೊಡದ್ದಕ್ಕೆ ಮುನಿಸಿಕೊಂಡವರ ಸಂಖ್ಯೆ ಭಾರೀ ಪ್ರಮಾಣದಲ್ಲಿರಲು ಸಾಧ್ಯ.

ನನ್ನಂಥವನಿಗೆ ಅವರ ಕುರಿತು ಪ್ರೀತಿ, ಗೌರವ ಇರದಿರಲು ಸಾಧ್ಯವೇ ಇಲ್ಲ. ಅದಕ್ಕೆ ಸಾರ್ವಜನಿಕ ಕಾರಣಗಳ ಜೊತೆಗೆ ತೀರಾ ವೈಯಕ್ತಿಕ ಕಾರಣಗಳೂ ಇದ್ದವು. ಮಾತೃಭಾಷಾ ಮಾಧ್ಯಮದ ಪ್ರಬಲ ಪ್ರತಿಪಾದಕರಾಗಿದ್ದ ಅವರಿಗೆ, ಎಸ್ಸೆಸ್ಸೆಲ್ಸಿವರೆಗೆ ಹಳ್ಳಿಯ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದ ನಾನು ಮೆರಿಟ್‍ನಲ್ಲಿ ಸರ್ಕಾರೀ ಕಾಲೇಜಿನಲ್ಲಿ ಎಂಬಿಬಿಎಸ್ ಸೀಟು ಪಡೆದುಕೊಂಡಿದ್ದು ಬಹುಮುಖ್ಯವಾದ ಸಂಗತಿಯಾಗಿತ್ತು. ಹಾಗಾಗಿ ನನ್ನ ತಂದೆಗೆ ಖುದ್ದು ಫೋನ್ ಮಾಡಿ ‘ನಿನಗೆ ಖರ್ಚು ಮಾಡಿಸದೇ ಅವನು ಮೆಡಿಕಲ್ ಸೀಟು ತೆಗೆದುಕೊಂಡಿದ್ದಾನೆ. ನೀನು ಅವನಿಗೆ ಒಂದು ಗಾಡಿ ಕೊಡಿಸಬೇಕು’ ಎಂದು ಶಿಫಾರಸ್ಸು ಮಾಡಿದ್ದರು. ಹೀಗಾಗಿ ಕಾಲೇಜಿಗೆ ಸೇರಿದ ಮೊದಲ ವರ್ಷದಲ್ಲೇ ಮೊಬೈಕ್ ಸಿಕ್ಕಿ, ನನಗೆ ಯಾವಾಗಲೂ (ತೀವ್ರ Motion sickness ಕಾರಣಕ್ಕೆ) ವಾಂತಿ ಮಾಡಿಸುತ್ತಿದ್ದ ಬಸ್‍ನಿಂದ ವಿಮುಕ್ತಿ ಸಿಕ್ಕಿತ್ತು. ಇಂತಹ ಇನ್ನೂ ಎಷ್ಟೋ ವೈಯಕ್ತಿಕ ಕಾರಣಗಳಿಗಾಗಿ ಪ್ರೀತಿ ಪಾತ್ರರಾಗಿದ್ದ ಅವರು ವಿವಿಧ ಸಾಮಾಜಿಕ ಕಾರಣಗಳಿಂದಲೂ ಗೌರವಕ್ಕೆ ಪಾತ್ರರು.

ಆದರೆ ಸ್ವಾತಂತ್ರ್ಯೋತ್ತರ ಭಾರತದ ಸಾಮಾಜಿಕ, ರಾಜಕೀಯ ಸನ್ನಿವೇಶವನ್ನು ಅರ್ಥ ಮಾಡಿಕೊಳ್ಳುವ ನೆಲೆಯಿಂದ ‘ಡಾ.ಎಚ್ಚೆನ್ ಎಂಬ ವಿದ್ಯಮಾನ’ವನ್ನು ವಿಶ್ಲೇಷಿಸುವ ಅಗತ್ಯವಿದೆಯೆನಿಸುತ್ತದೆ. ಈ ವಿಶ್ಲೇಷಣೆಯಲ್ಲಿ ವೈಯಕ್ತಿಕ ಸಂಗತಿಗಳು ಬಂದರೆ ಅವು, ಅವರ ಸಾರ್ವಜನಿಕ ಜೀವನವನ್ನು ಅರ್ಥ ಮಾಡಿಕೊಳ್ಳುವ ದೃಷ್ಟಿಯಿಂದ ಮಾತ್ರ ಬಂದಿವೆಯೆಂದು ಭಾವಿಸಬೇಕೆಂದು ಕೋರುತ್ತೇನೆ.

ಎಚ್ಚೆನ್ ಅವರ ಚಿಂತನೆ ಮತ್ತು ಕೃತಿ ಹಾಗೂ ಅವರು ಕಟ್ಟಿದ ಶಿಕ್ಷಣ ಸಂಸ್ಥೆಗಳ ಸ್ವರೂಪವು ನನ್ನ ತಲೆಮಾರಿನ ಹಲವರಿಗೆ ದೇವರು, ಅಂಧಶ್ರದ್ಧೆ ಮತ್ತು ಮೂಢನಂಬಿಕೆಗಳ ಕುರಿತಾಗಿ ಪ್ರಶ್ನೆ ಹುಟ್ಟುವಂತೆ ಮಾಡಿತು. ಆದರೆ ಅದನ್ನು ದಾಟಿ ದೇಶದ ಸಾಮಾಜಿಕ, ರಾಜಕೀಯ ವಾಸ್ತವಗಳ ಕುರಿತಂತೆ ಎಚ್ಚರ ಮೂಡಿಸಿದ್ದು ಲಂಕೇಶ್ ಪತ್ರಿಕೆಯ ಮೂಲಕ ಪಿ.ಲಂಕೇಶರು. ಲಂಕೇಶರು ಎಚ್ಚೆನ್ ಅವರನ್ನೊಮ್ಮೆ ಸರ್ಕಾರಿ ಸಂತ ಎಂದು ಬರೆದಾಗ ಆರಂಭದಲ್ಲಿ ಬಹಳ ಕೋಪವೇ ಬಂದಿತ್ತು. ಆದರೆ ನಿಧಾನಕ್ಕೆ ಪ್ರಜ್ಞೆ ವಿಸ್ತರಿಸುತ್ತಾ ಹೋಯಿತು. ರಾಜಕಾರಣಿಗಳನ್ನು ಪ್ರಶ್ನಿಸುವುದು, ಮಠಾಧೀಶರನ್ನು ಪ್ರಶ್ನಿಸುವುದು, ಸಾಮಾಜಿಕ ನ್ಯಾಯದ ಕುರಿತು ಸದಾ ಪ್ರಜ್ಞಾಪೂರ್ವಕವಾಗಿರುವುದು, ವ್ಯಕ್ತಿಗತ ಒಳ್ಳೆಯತನಗಳಾಚೆ ಸಾಮಾಜಿಕ ಬದಲಾವಣೆಗೆ ಬೇಕಾದ ಚಿಂತನೆ ಹಾಗೂ ಪ್ರಕ್ರಿಯೆಯ ಭಾಗವಾಗುವುದು ಇವೆಲ್ಲದರ ಮಹತ್ವ ಅರ್ಥವಾಗುತ್ತಾ ಹೋಯಿತು. ಲಂಕೇಶರು (ವ್ಯಕ್ತಿಗತವಾಗಲ್ಲ, ಚಿಂತನೆಯಿಂದ) ಹತ್ತಿರವಾದಂತೆ ಡಾ.ಎಚ್ಚೆನ್ ದೂರವಾಗುತ್ತಾ ಹೋದರು. ಅವರ ಭೇಟಿಯೂ ಕಡಿಮೆಯಾಗುತ್ತಾ ಹೋಯಿತು.

ಸಾಮಾನ್ಯವಾಗಿ ಪರಿಚಿತ ಕುಟುಂಬಗಳ ಮದುವೆಗಳಿಗೆ ಹಾಜರಾಗುತ್ತಿದ್ದ ಡಾ.ಎಚ್ಚೆನ್ ನಮ್ಮ ಕುಟುಂಬದ ಮದುವೆಯೊಂದರಲ್ಲಿ ಸಿಕ್ಕರು. ಸ್ವತಃ ನಾನು ಆ ಮದುವೆಗೆ ಹೀಗೆ ಬಂದು ಹಾಗೆ ಹೋಗುವ ಅತಿಥಿಯಾಗಿದ್ದೆ. ಎಚ್ಚೆನ್ ಕರೆದು ಅವರು ಹೇಳಲೇಬೇಕೆಂದುಕೊಂಡಿದ್ದ ಮಾತನ್ನು ಹೇಳಿದರು ‘ನೀನು ಬೇರೆ ದಾರಿಯಲ್ಲಿ ಹೋಗುತ್ತಿದ್ದೀಯ ಅಂತ ಗೊತ್ತಾಯಿತು. ನಾನೇನೂ ಬೇಡ ಅನ್ನಲ್ಲಪ್ಪ. ಆದರೆ ಮುಂದೊಂದು ದಿನ ನಿನಗೇ ಫ್ರಸ್ಟ್ರೇಷನ್ ಅನ್ನಿಸಲ್ಲ ಅಂತ ಖಾತರಿ ಇದ್ದರೆ ಮಾತ್ರ ಆ ದಾರಿಯಲ್ಲಿ ಹೋಗು’ ಎಂದರು.

ಬಹುಶಃ ಈ ಮಾತಿನಲ್ಲಿ ಸಾಮಾಜಿಕ ಬದಲಾವಣೆಯ ಆಂದೋಲನದ ಕುರಿತಾದಂತೆ ಅವರ ದೃಷ್ಟಿಕೋನ ಅದರಲ್ಲಿ ಅಡಗಿತ್ತು. ಬೇರೆಯವರು ಮಾಡುವುದಾದರೆ ತಕರಾರಿಲ್ಲ. ಆದರೆ ಅದು ಹೆಚ್ಚೇನೂ ಬದಲಾವಣೆ ತಾರದ, ಮುಂದೊಂದು ದಿನ ಹತಾಶೆಯನ್ನು ಮೂಡಿಸಬಹುದಾದ ದಾರಿ ಎಂಬುದು ಅವರ ಅನಿಸಿಕೆಯಾಗಿತ್ತು. ಸ್ವತಃ ತಾವು ಮೇಲೆ ಬಂದಿದ್ದರಲ್ಲಿ ಸ್ವಂತ ಪ್ರಯತ್ನ, ಋಜು ಮಾರ್ಗ ಮತ್ತು ವಿವಿಧ ಸಂದರ್ಭಗಳಲ್ಲಿ ತನಗೆ ಅನುಕೂಲ ಕಲ್ಪಿಸಿಕೊಟ್ಟ ಧರ್ಮಾತ್ಮರುಗಳ ಪಾತ್ರವನ್ನು ಅವರು ಕಂಡಿದ್ದರು. ಹಾಗಾಗಿಯೇ ಅವರು ಶಿಕ್ಷಣ ಸಂಸ್ಥೆಗಳನ್ನೂ ಅದೇ ಮಾರ್ಗದಲ್ಲಿ ಕಟ್ಟಿದರು. ಅಂತಹ ಧರ್ಮಾತ್ಮರಲ್ಲಿ ಹರಿಖೋಡೆ, ಮಯ್ಯ, ಇನ್ಫೋಸಿಸ್‍ನವರು ಸೇರಿದಂತೆ ಬೇರೆ ಬೇರೆ ಬಗೆಯವರು ಇದ್ದರು. ಬ್ರಾಹ್ಮಣ ಸಮುದಾಯದ ವ್ಯಕ್ತಿಗಳು ಕೆಲವರು ಅವರು ಆರಂಭಿಕವಾದ ಬೆಳವಣಿಗೆ ಸಾಧಿಸಲು ಸಹಾಯ ಮಾಡಿದ್ದರು ಮತ್ತು ಜೀವನಪರ್ಯಂತ ಡಾ.ಎಚ್ಚೆನ್ ಬ್ರಾಹ್ಮಣ ಸಮುದಾಯದ ಜನರ ಜೊತೆಗೆ ಸ್ವಲ್ಪ ಹೆಚ್ಚೇ ಎನ್ನಬಹುದಾದ ಉತ್ತಮ ಸಂಬಂಧವನ್ನು ಹೊಂದಿದ್ದರು.

ಯಾವ ಮೂಢನಂಬಿಕೆ, ಅಂಧಶ್ರದ್ಧೆ, ವೈಜ್ಞಾನಿಕ ಮನೋಭಾವದ ವಿರುದ್ಧ ‘ಸಾಕಷ್ಟು ರಿಸ್ಕ್ ಸಹಾ ತೆಗೆದುಕೊಂಡು’ ಅವರು ಹೋರಾಡಿದ್ದರೋ, ಅವು ಮುಂದುವರೆಯಲು ಒಂದು ಸಮುದಾಯವಾಗಿ ಬ್ರಾಹ್ಮಣರು ಸಾಕಷ್ಟು ಕಾರಣ ಎಂಬುದು ಅವರಿಗೆ ಅಷ್ಟು ಮುಖ್ಯವಾದಂತೆ ತೋರಿಲ್ಲ. ಇವೆಲ್ಲಕ್ಕೆ ಸಾಮಾಜಿಕವಾದ, ಸಾಂಸ್ಥಿಕವಾದ, ಪಟ್ಟಭದ್ರತನಗಳು ಹೆಚ್ಚು ಕಾರಣ ಎಂದು ಅವರು ಚರ್ಚಿಸಿದ್ದನ್ನು ನಾನಂತೂ ಕೇಳಿಲ್ಲ. ಸ್ವತಃ ಅತಿ ಶೋಷಿತ ಜಾತಿಗಳೊಂದರಿಂದ ಬಂದ ಅವರು ಜಾತಿಯನ್ನು ಒಂದು ಅವೈಜ್ಞಾನಿಕವಾದ ರಚನೆ ಎಂದಾದರೂ ಪದೇ ಪದೇ ಹೇಳಿದ್ದರೆ ಎಂಬುದು ಇದುವರೆಗೆ ಗಮನಕ್ಕೆ ಬಂದಿಲ್ಲ.

ಎಲ್ಲರನ್ನೂ ಬಿಡಿ ವ್ಯಕ್ತಿಗಳನ್ನಾಗಿ ಮಾತ್ರ ನೋಡುವುದು ಮತ್ತು ಬದಲಾವಣೆಯನ್ನೂ ವ್ಯಕ್ತಿಗತ ನೆಲೆಯಲ್ಲಿ ಮಾತ್ರ ನಿರೀಕ್ಷಿಸುವುದು ಗಾಂಧಿವಾದದ ಒಂದು ಆಯಾಮ ಇರಬಹುದಾದರೂ, ಸ್ವತಃ ಗಾಂಧಿಯವರೂ ಅದಕ್ಕೆ ಮೀರಿದ ಸಾಮಾಜಿಕ ಆಯಾಮಗಳ ಕುರಿತೂ ಚರ್ಚಿಸಿದ್ದಾರೆ; ಪ್ರಯೋಗಗಳನ್ನು ನಡೆಸಿದ್ದಾರೆ. ಅವರ ಸಮಕಾಲೀನರೂ, ಭಾರತದಲ್ಲಿ ಕ್ರಾಂತಿಕಾರಿ ಚಿಂತನೆಗೆ ಕಾರಣರಾದ ಅಂಬೇಡ್ಕರರನ್ನು ಎಚ್ಚೆನ್ ಹೆಚ್ಚು ಚರ್ಚಿಸಿಲ್ಲ.

ಹಾಗೆಯೇ ಗಾಂಧಿವಾದಿಯಾಗಿದ್ದ ಅವರು ಗಾಂಧಿಪ್ರಣೀತ ಅಭಿವೃದ್ಧಿಯ ಮಾದರಿ – ನೆಹರೂ ಮಾದರಿಯ ದೇಶ ಕಟ್ಟುವಿಕೆ ಈ ಕುರಿತೂ ಹೆಚ್ಚಿನ ಸಂಘರ್ಷಕ್ಕೆ ಹೋದಂತೆ ಕಾಣುವುದಿಲ್ಲ. ಬಿಎಂಐಸಿ ಕಾರಿಡಾರ್ (ನೈಸ್ ರಸ್ತೆ) ವಿರುದ್ಧದ ಹೋರಾಟದ ಭಾಗವಾಗಿ ನ್ಯಾಷನಲ್ ಕಾಲೇಜಿನ ಹಾಲ್‍ನಲ್ಲಿ ನಾವೊಂದು ವಿಚಾರ ಸಂಕಿರಣ ಏರ್ಪಡಿಸಿದ್ದೆವು. ಅಲ್ಲಿ ಸಿಕ್ಕ ಎಚ್ಚೆನ್ ‘ಬೆಂಗಳೂರಿನಿಂದ ಮೈಸೂರಿಗೆ ಒಂದೇ ಗಂಟೆಯಲ್ಲಿ ಹೋಗಲು ಈ ರಸ್ತೆ ಮಾಡುತ್ತಿದ್ದಾರೆ ಅಂತ ಯಾರೋ ಹೇಳಿದರು. ನಾನು ಅವರನ್ನ ಕೇಳಿದೆ. ಯಾಕೆ ಒಂದೇ ಗಂಟೆಯಲ್ಲಿ ಹೋಗಬೇಕು? ಅದರ ಅಗತ್ಯವಿಲ್ಲ ಅಂತ. ಹಾಗಾಗಿ ನಿಮಗಿಂತ ಮುಂಚೆ ನಾನು ಆ ರಸ್ತೆಯನ್ನ ವಿರೋಧಿಸಿದ್ದೀನಿ ಕಣಪ್ಪಾ’ ಎಂದಿದ್ದರು. ನ್ಯಾಷನಲ್ ಕಾಲೇಜಿನ ಮುಂದೆ ಅನಗತ್ಯವಾಗಿ ಕಟ್ಟಲು ಹೊರಟಿದ್ದ ಫ್ಲೈಓವರ್ರನ್ನೂ ಎಚ್ಚೆನ್ ಬಹಿರಂಗವಾಗಿ ವಿರೋಧಿಸಿ ಸರ್ಕಾರವನ್ನು ಎದುರುಹಾಕಿಕೊಳ್ಳಲಿಲ್ಲ.

ಶಿಕ್ಷಣದಲ್ಲಿ ಕೆಲವು ಪ್ರಯೋಗಗಳಲ್ಲಿ ನಿರತರಾಗಿದ್ದ ಅವರು ಮಾತೃಭಾಷಾ ಮಾಧ್ಯಮದ ಕುರಿತಂತೆ ಸರ್ಕಾರಕ್ಕೆ 1994ರಲ್ಲಿ ಒಂದು ಮಹತ್ವದ ವರದಿಯನ್ನೂ ಕೊಟ್ಟರು. ಕನ್ನಡ ಮಾಧ್ಯಮದಲ್ಲಿ ಓದಿದ ಹಳ್ಳಿ ಹುಡುಗ ಮೆಡಿಕಲ್ ಸೀಟು ತೆಗೆದುಕೊಳ್ಳಲು ಸಾಧ್ಯ ಎಂದು ತೋರಲು ಅವರು ಕೆಲವು ಕಡೆ ನನ್ನ ಉದಾಹರಣೆಯನ್ನು ಕೊಡುತ್ತಿದ್ದಾಗ, ಮೊದಮೊದಲು ಹೆಮ್ಮೆಯೆನಿಸಿತ್ತಾದರೂ ನಂತರ ಪ್ರಶ್ನೆ ಹುಟ್ಟಿತು. ಮಾಧ್ಯಮದ ಏರನ್ನು ನಾನು ದಾಟಲು ನನಗೆ ಲಭ್ಯವಿದ್ದ ಸಾಮಾಜಿಕ, ಆರ್ಥಿಕ ಅನುಕೂಲಗಳನ್ನು ಅವರು ಗಣನೆಗೆ ತೆಗೆದುಕೊಳ್ಳದೇ ಅದನ್ನು ಒಂದು ಪ್ರತ್ಯೇಕ ಬಿಡಿ ಅಂಶವನ್ನಾಗಿಯಷ್ಟೇ ನೋಡುತ್ತಿದ್ದರು ಎಂಬ ಪ್ರಶ್ನೆಯನ್ನು ಅವರ ಮುಂದಿಟ್ಟೆ. ಆ ಚರ್ಚೆ ಮುಂದಕ್ಕೆ ಹೋಗಿರಲಿಲ್ಲ.

ಸಾಮಾಜಿಕ ಚಿಂತನೆಯ ವಿಚಾರದಲ್ಲಿ ಭಿನ್ನ ಮಾರ್ಗವನ್ನು ತುಳಿಯಲು ಲಂಕೇಶ್ ಪತ್ರಿಕೆ ಕಾರಣವಾಗಿದ್ದರೆ, ಆ ನಿಟ್ಟಿನಲ್ಲಿ ಆಂದೋಲನದಲ್ಲಿ ಪೂರ್ಣವಾಗಿ ತೊಡಗಿಕೊಳ್ಳಲು ಸಂಘಟನೆ ಕಾರಣವಾಗಿತ್ತು. ಅದಕ್ಕೂ ಡಾ.ಎಚ್ಚೆನ್ ನಿಮಿತ್ತ ಮಾತ್ರದ ಕಾರಣರು. ಅವರ ಆಸಕ್ತಿಯಿಂದಲೇ ಆರಂಭವಾಗಿದ್ದ ಬೆಂಗಳೂರು ಸೈನ್ಸ್ ಫೋರಂನಲ್ಲಿ ಡಾ.ಓಂಪ್ರಕಾಶ್ ಅವರದೊಂದು ಉಪನ್ಯಾಸವನ್ನು ಆಯೋಜಿಸಿದ್ದರು. ಆ ಉಪನ್ಯಾಸ ಕೇಳಲು ಮತ್ತು ಡಾ.ಎಚ್ಚೆನ್ ಅವರನ್ನು ಮಾತಾಡಿಸಲು ನಾನು ಡಾ.ಎಚ್ಚೆನ್ ಹಾಲ್‍ಗೆ ಹೋಗಿದ್ದೆ. ಅದೇ ಪ್ರಾಂಗಣದಲ್ಲಿ ನಡೆಯುತ್ತಿದ್ದ ಮಹಿಳಾ ಸಂಘಟನೆಯ ಕಾರ್ಯಕ್ರಮದಲ್ಲೂ ಭಾಗಿಯಾಗುವ ಅವಕಾಶ ಸಿಕ್ಕಿತು. ಅದು ತಂದ ತಿರುವು ಬದುಕಿನ ಮುಂದಿನ ದಿನಗಳನ್ನೇ ಬದಲಿಸಿಬಿಟ್ಟಿತು. ತಮ್ಮ ಕಾಲೇಜಿನಲ್ಲಿ ಇಂತಹ ಕಾರ್ಯಕ್ರಮಗಳಿಗೆ, ಸಭೆಗಳಿಗೆ, ನಾಟಕಗಳಿಗೆ ಸಾಕಷ್ಟು ಅವಕಾಶ ನೀಡಿದ ಎಚ್ಚೆನ್, ತಮ್ಮ ಶಿಕ್ಷಣ ಸಂಸ್ಥೆಗಳ ಮೇಷ್ಟರುಗಳು, ಮೇಡಂಗಳು ವಿವಿಧ ಸಾಮಾಜಿಕ ಹೋರಾಟಗಳಲ್ಲಿ ಭಾಗಿಯಾಗಲು ಅಡ್ಡಿಯಾಗದ ಎಚ್ಚೆನ್ ಅವರ ಪರೋಕ್ಷ ಕೊಡುಗೆಗಳನ್ನೂ ಗುರುತಿಸಬೇಕಿದೆ. ಅಂತಹ ‘ಅವಕಾಶ’ಗಳನ್ನು ಕಲ್ಪಿಸುವದರ ಹಿಂದೆಯೂ ಒಂದು ಚಿಂತನೆ ಕೆಲಸ ಮಾಡಿಲ್ಲವೆಂದು ಹೇಗೆ ಹೇಳುವುದು?

ಇಷ್ಟಲ್ಲದೇ ದಿಗಂಬರರಿಗೆ ಮಾತ್ರ ಸಾಧ್ಯವಾಗುವ ನೈತಿಕತೆ, ಸರಳ ಜೀವನದ ಸಂತ ಗುಣ ಹಾಗೂ ಅಧಿಕಾರಸ್ಥರ ಜೊತೆಗೆ ಇದ್ದ ಒಡನಾಟವು ಅವರು ಮಾಡಿದ ಒಳ್ಳೆಯ ಕೆಲಸಗಳಿಗೆ ಸಹಾಯ ಮಾಡಿದ್ದೂ ನಿಜ. ಲಾಬಿಗಳ, ಜಾತಿಯ, ಹಣದ ಬಲವಿಲ್ಲದೇ, ಮದುವೆಯೂ ಆಗದೇ ಸ್ವಂತ ಕುಟುಂಬವನ್ನೂ ಹೊಂದದ ವ್ಯಕ್ತಿಯೊಬ್ಬರು ಈ ಗುಣಗಳಿರದೇ ಹೋಗಿದ್ದಲ್ಲಿ ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯೊಂದನ್ನು ಕೆಲವು ಮೌಲ್ಯಗಳಿಗನುಗುಣವಾಗಿ ನಡೆಸಲು ಸಾಧ್ಯವಿತ್ತೇ? ಖಂಡಿತಾ ಇಲ್ಲ. ಬಹುಶಃ ನ್ಯಾಷನಲ್ ಎಜುಕೇಷನ್ ಸೊಸೈಟಿಯನ್ನು ತಮ್ಮ ಬದುಕಿನ ಪ್ರಧಾನ ಭಾಗವಾಗಿಸಿಕೊಂಡಿದ್ದ ಡಾ.ಎಚ್ಚೆನ್, ಅವರ ಆದ್ಯತೆಗೆ ತಕ್ಕಂತಹ ಮೌಲ್ಯ ಸಂಹಿತೆ ಹಾಗೂ ಸಾಮಾಜಿಕ ದೃಷ್ಟಿಕೋನವನ್ನೂ ರೂಢಿಸಿಕೊಂಡಿದ್ದಿರು. ಡಾ.ಎಚ್.ನರಸಿಂಹಯ್ಯನವರು ಮಾಡಿಕೊಂಡಿರಬಹುದಾದ ರಾಜಿಗಳ ಮಧ್ಯೆಯೂ ಒಂದೆರಡು ತಲೆಮಾರಿನಲ್ಲಿ ವೈಜ್ಞಾನಿಕ ಮನೋಭಾವವನ್ನು ಹುಟ್ಟುಹಾಕುವಲ್ಲಿ ಅವರ ಪಾತ್ರಕ್ಕಾಗಿ ಅವರನ್ನು ಈ ನಾಡು ನೆನಪಿನಲ್ಲಿಡಬೇಕು. ನಾನು ಅವರ ಊರಿನಲ್ಲಿ ಹುಟ್ಟಿದ್ದಕ್ಕಾಗಿ ಆ ಹೆಮ್ಮೆಯೂ ನನಗಿದೆ.


ಇದನ್ನು ಓದಿ: ಒಂದು ಲೋಟ ನೀರು ಕೇಳಿದ್ದಕ್ಕೆ ಹಲ್ಲೆ: ದಲಿತ ಮುಖಂಡನ ಸಾವು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಮತದಾರರ ಹೆಸರು ಕೈಬಿಟ್ಟ ಹಗರಣ; ಬಿಜೆಪಿ ಪಕ್ಷದ ಕೈವಾಡದ ಆರೋಪ

0
ಭಾರತದ ಪ್ರಜಾಪ್ರಭುತ್ವದಲ್ಲಿ ಗ್ರಾಮ ಪಂಚಾಯ್ತಿಯಿಂದ ಹಿಡಿದು ಸಂಸತ್‌ವರೆಗೆ ಹಲವು ಹಂತಗಳ ಚುನಾವಣೆಗಳಲ್ಲಿ ಮತ ಚಲಾಯಿಸುವ ಮೂಲಕ ಜನಪ್ರತಿನಿಧಿಗಳನ್ನು ಮತದಾರರು ಆರಿಸುವುದಲ್ಲದೆ, ಆಳುವ ಸರ್ಕಾರಗಳನ್ನು ನಿರ್ಧರಿಸುತ್ತಾರೆ. ಈ ಚುನಾವಣಾ ವ್ಯವಸ್ಥೆಯು ಮುಕ್ತ ಮತ್ತು ನ್ಯಾಯಸಮ್ಮತವಾಗಿರಬೇಕಾದದ್ದು...