ಕೊರೊನಾ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೊಳಗಾದ ವಲಸೆ ಕಾರ್ಮಿಕನೊಬ್ಬ ಆಹಾರ ಮತ್ತು ಔಷಧಕ್ಕಾಗಿ ತನ್ನ ತಾಯಿ ಹಾಗೂ ಹೆಂಡತಿಯ ಮಾಂಗಲ್ಯ ಮಾರಿದ ಘಟನೆ ಉತ್ತರ ಪ್ರದೇಶದ ಖನೌಜ್‌ನಲ್ಲಿ ನಡೆದಿದೆ.
ಲಖನೌದಿಂದ 150 ಕಿ.ಮೀ ದೂರದಲ್ಲಿರುವ ಖನೌಜ್‌ನ ಫತೇಪುರ್ ಜಶೋಧ ಎಂಬ ಗ್ರಾಮದ ಶ್ರೀ ರಾಮ್ ತಮಿಳುನಾಡಿಗೆ ವಲಸೆ ಹೋಗಿ ಕಡಲೂರು ಎಂಬ ಜಿಲ್ಲೆಯಲ್ಲಿ ಕೃಷಿಯ ಜೊತೆಗೆ ಕುಲ್ಪೀ ಐಸ್ ಮಾರಾಟ ಮಾಡಿ ಬದುಕುತ್ತಿದ್ದರು.
ಕುಟುಂಬದ ಸದಸ್ಯರು ತಮಿಳುನಾಡಿನ ಓರ್ವ ಜಮೀನುದಾರನ ಬಳಿ ಕೃಷಿ ಕೂಲಿಗಾರರಾಗಿ ಕೆಲಸ ಮಾಡುತ್ತಿದ್ದರು. ಆದರೆ, ಕೊರೋನಾ ಲಾಕ್‌ಡೌನ್ ಕಾರಣದಿಂದಾಗಿ ಕುಟುಂಬ ಸಮೇತರಾಗಿ ಉತ್ತರಪ್ರದೇಶಕ್ಕೆ ಮರಳಿದ್ದ ಈ ಕುಟುಂಬ ತುತ್ತು ಅನ್ನಕ್ಕೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದ್ದು, ಶ್ರೀ ರಾಮ್ ಕನೌಜಿನ ಸ್ಥಳೀಯ ಮಾರುಕಟ್ಟೆಯಲ್ಲಿ ತನ್ನ ಹೆಂಡತಿ ಮತ್ತು ತಾಯಿಯ ಮಾಂಗಲ್ಯವನ್ನು ಕೇವಲ 1,500 ರೂ ಗೆ ಮಾರಾಟ ಮಾಡಿ ಮನೆಗೆ ಆಹಾರ ಧಾನ್ಯ ಮತ್ತು ಔಷಧಿಯನ್ನು ಖರೀದಿಸಿದ್ದಾರೆ.
ತಮಿಳುನಾಡಿನಿಂದ ಊರಿಗೆ ಮರಳಿರುವ ಅವರ ಕುಟುಂಬದ ಬಳಿ ಪಡಿತರ ಚೀಟಿ, ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಕೆಲಸ ಮಾಡಲು ಜಾಬ್ ಕಾರ್ಡ್ ಸಹ ಇರಲಿಲ್ಲ ಎನ್ನಲಾಗಿದ್ದು, ಹೀಗಾಗಿ ಶ್ರೀರಾಮ್ ಆಹಾರಕ್ಕಾಗಿ ತನ್ನ ತಾಯಿ ಮತ್ತು ಹೆಂಡತಿಯ ಮಾಂಗಲ್ಯ ಮಾರಾಟ ಮಾಡಲು ಮುಂದಾಗಿದ್ದಾರೆ.
ತನ್ನ ಅಸಹಾಯಕತೆಯ ಕುರಿತು ಸ್ಥಳೀಯ ಮಾಧ್ಯಮಗಳಲ್ಲಿ ಅಳಲು ತೋಡಿಕೊಂಡ ಶ್ರೀ ರಾಮ್, “ನಾವು ತಮಿಳುನಾಡಿನಿಂದ ಹಿಂದಿರುಗಿದಾಗ ಸರ್ಕಾರದಿಂದ ತಲಾ 10 ಕೆಜಿ ಅಕ್ಕಿ ಮತ್ತು ಧಾನ್ಯವನ್ನು ಪಡೆದುಕೊಂಡಿದ್ದೇವೆ. ಆದರೆ ನಾವು ಒಂದು ದೊಡ್ಡ ಕುಟುಂಬವಾದ್ದರಿಂದ ಈ ಧಾನ್ಯ ನಮಗೆ ಸಾಕಾಗಿರಲಿಲ್ಲ. ಅಲ್ಲದೆ, ಪಡಿತರ ಚೀಟಿಯೂ ಇಲ್ಲದ ಕಾರಣ ನಾವು ಪಡಿತರ ವ್ಯವಸ್ಥೆಯಿಂದಲೇ ಹೊರಗುಳಿದಿದ್ದೇವೆ” ಎಂದು ಹೇಳುತ್ತಾರೆ.
ಈ ನಡುವೆ ನನ್ನ ತಾಯಿ ಮತ್ತು ಇಬ್ಬರು ಒಡಹುಟ್ಟಿದವರು ಅನಾರೋಗ್ಯಕ್ಕೆ ಒಳಗಾದರು. ನನ್ನ ತಂದೆ ಕೆಲಸ ಪಡೆಯಲು ಪ್ರಯತ್ನಿಸಿದರು ಆದರೆ ಎಲ್ಲೂ ಉದ್ಯೋಗವಿಲ್ಲ. ಅಂತಿಮವಾಗಿ, ನನ್ನ ತಾಯಿ ಮತ್ತು ಹೆಂಡತಿ ಧರಿಸುತ್ತಿದ್ದ ಆಭರಣಗಳನ್ನು ಮಾರಾಟ ಮಾಡುವುದನ್ನು ಬಿಟ್ಟು ನನಗೆ ಬೇರೆ ದಾರಿಯಿಲ್ಲ. ಈ ಹಣ ಸಹ ಕೆಲವು ದಿನಗಳ ಆಹಾರ ಮತ್ತು ಔಷಧಕ್ಕೆ ಮಾತ್ರ ಸಾಲುತ್ತದೆ. ಹೊಸ ಪಡಿತರ ಚೀಟಿಗೆ ನಾವು ಮನವಿ ಸಲ್ಲಿಸಿದರೆ, ಈಗ ಪಡಿತರ ಚೀಟಿ ನೀಡಲಾಗುವುದಿಲ್ಲ ಎನ್ನುತ್ತಾರೆ” ಎಂದು ಅವರು ಹೇಳಿಕೊಂಡಿದ್ದಾರೆ.
ಈ ಸುದ್ದಿ ಸ್ಥಳೀಯ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಂತೆ ಎಚ್ಚೆತ್ತಿರುವ ಜಿಲ್ಲಾಡಳಿತ ಈ ಕುಟುಂಬಕ್ಕೆ ಪಡಿತರ ಚೀಟಿ ಮತ್ತು ಉದ್ಯೋಗ ಖಾತ್ರಿ ಜಾಬ್ ಕಾರ್ಡ್ ಅನ್ನು ನೀಡಿದೆ.
ಆದರೆ ಜಾಲತಾಣಿಗರು, ಇದು ಕೇವಲ ಶ್ರೀರಾಮ್ ಎಂಬ ಓರ್ವ ವಲಸೆ ಕಾರ್ಮಿಕನ ಕಥೆಯಲ್ಲ. ಬದಲಾಗಿ ಭಾರತದಾದ್ಯಂತ ಇರುವ ಇಂತಹ ಲಕ್ಷಾಂತರ ಶ್ರೀರಾಮ್‌ಗಳು ಲಾಕ್‌ಡೌನ್ ಕಾರಣದಿಂದಾಗಿ ತುತ್ತು ಅನ್ನಕ್ಕಾಗಿ ಪರದಾಡಬೇಕಾದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳುತ್ತಿದ್ದಾರೆ.
ಓದಿ: ಯಾವೊಬ್ಬ ವಲಸೆ ಕಾರ್ಮಿಕರೂ ಆಹಾರವಿಲ್ಲದೆ ಸಾವನ್ನಪ್ಪಿಲ್ಲ: ನಳಿನ್ ಕುಮಾರ್ ಕಟೀಲ್


