Homeಮುಖಪುಟತಾನೊಂದು ಹೆಣ್ಣಾಗಿದ್ದು ಶಾಪ, ಕಪ್ಪು ಹೆಣ್ಣಾಗಿದ್ದು ಮಹಾಶಾಪ : ಮೇರಿ ಪ್ರಿನ್ಸ್

ತಾನೊಂದು ಹೆಣ್ಣಾಗಿದ್ದು ಶಾಪ, ಕಪ್ಪು ಹೆಣ್ಣಾಗಿದ್ದು ಮಹಾಶಾಪ : ಮೇರಿ ಪ್ರಿನ್ಸ್

ದ ಹಿಸ್ಟರಿ ಆಫ್ ಮೇರಿ ಪ್ರಿನ್ಸ್ : ಮೇರಿ ಪ್ರಿನ್ಸ್‌ಳ ಕಪ್ಪು ಇತಿಹಾಸ

- Advertisement -
- Advertisement -

ತಾನೊಂದು ಹೆಣ್ಣಾಗಿದ್ದು ಶಾಪವಾದರೆ, ಕಪ್ಪುಹೆಣ್ಣಾಗಿದ್ದು ಮಹಾಶಾಪ ವೆಂದು ಅಲ್ಲೊಂದು ದನಿ ನೋವಿನಲ್ಲಿ ಬಿಕ್ಕಳಿಸುತ್ತದೆ. ಹುಟ್ಟಿನಿಂದ ಎಲ್ಲರೂ ಸಮಾನರು ಎಂದು ಎಂದಿಗೂ ಅರ್ಥವೇ ಅಗುವುದಿರಲಿ, ಕೇಳುವುದಕ್ಕೂ ಅವಕಾಶವಿರಲಿಲ್ಲ ಅಸಂಖ್ಯಾತ ಕಪ್ಪು ಮತ್ತು ಬಿಳಿಯ ಕಿವಿಗಳಿಗೆ. ತುಳಿಯುವ ಹಕ್ಕು ಮತ್ತು ತುಳಿಸಿಕೊಳ್ಳುವ ಕರ್ತವ್ಯದಲ್ಲಿ ಒಂದು ಕಪ್ಪು ಹೆಣ್ಣು ಕತ್ತಲಲ್ಲೇ ಬಯಲಾಗಿ ಹೋದಳು.

ಮೇರಿ ಎಂಬ ಒಂದು ಕಪ್ಪು ಹೆಣ್ಣು ಮಗುವಿಗೆ ರಾಜಕುಮಾರ ಎಂಬ ಹೆಸರಷ್ಟೇ ನಂಟು. ಹುಟ್ಟಿದ್ದು (೧೭೮೮) ಗುಲಾಮರ ಕುಟುಂಬದಲ್ಲಿ. ತಲೆಮಾರಿನ ಹಿನ್ನೆಲೆ ಆಫ್ರಿಕಾಗೆ ಅಂಟು. ಆಕೆಯ ಆತ್ಮಕಥನವು ಹುಟ್ಟಿದ್ದು ಆಕೆಯು ಲಂಡನ್‌ನಲ್ಲಿದ್ದಾಗ. ಹಾಗೆ ಹುಟ್ಟಿದ ತನ್ನ ಚರಿತ್ರೆಯನ್ನು ಆಕೆ ಬೆಳಕಿಗೆ ತಂದದ್ದು ೧೮೩೧ರಲ್ಲಿ.

ಬರ್ಮುಡಾ ಮತ್ತು ಕೆರಿಬಿಯನ್ ಕಾಲೋನಿಗಳಲ್ಲಿ ಕಾನೂನು ಮನ್ನಣೆಯನ್ನು ಗಳಿಸಿರುವ ಗುಲಾಮ ಪದ್ಧತಿಯ ಭಾಗವಾಗಿಯೇ ತನ್ನ ಎಲ್ಲಾ ನೋವು ತುಂಬಿರುವ, ಹಾಗೂ ಸರಪಳಿ ಬಂಧಿತ ಸ್ವಾನುಭವಗಳನ್ನು ಚಿತ್ರಿಸುತ್ತಾ ಹೋಗುವ ಆ ಸಾಹಿತ್ಯ ಮೂಲಕದ ಆಕೆಯ ಅಭಿವ್ಯಕ್ತಿಯೇ ದಾಸ್ಯ ವಿಮೋಚನಾ ಚಳುವಳಿಯ ಧ್ವನಿಯಾಗುತ್ತದೆ. ಮೊದಲ ವರ್ಷದಲ್ಲಿಯೇ ಅದು ಮೂರು ಮುದ್ರಣಗಳನ್ನು ಕಂಡಿತು. ಅದರ ಎಲ್ಲಾ ಹಣವನ್ನು ಥಾಮಸ್ ಪ್ರಿಂಗ್ಲ್ ನೇತೃತ್ವದ ದಾಸ್ಯ ವಿಮೋಚನಾ ಸಮಿತಿಗೆ ವರ್ಗಾಯಿಸಿದಳು.

ಮೇರಿ ಪ್ರಿನ್ಸ್‌ಳ ಪುಸ್ತಕ

ಅವಳ ತಂದೆ ಹೆಸರು ಪ್ರಿನ್ಸ್ ಆಗಿದ್ದರೂ ಡೇವಿಡ್ ಟ್ರಿಮ್ಮಿಂಗ್‌ಹ್ಯಾಂ ಎಂಬಾತನ ದಾಸನಾಗಿದ್ದು, ಆಕೆಯ ತಾಯಿ ಚಾರ್ಲ್ಸ್ ಮೈನರ್ ಎಂಬುವಳಿಗೆ ಗುಲಾಮಳಾಗಿದ್ದಳು. ಆಕೆಗೆ ಮೂವರು ಸೋದರರೂ ಮತ್ತು ಇಬ್ಬರರು ಸೋದರಿಯರು. ಮೈನರ್ ತಾನು ಸಾಯುವಾಗ ಮಾಡಿದ ಘನಕಾರ್ಯವೆಂದರೆ, ಮೇರಿಯನ್ನೂ ಸೇರಿದಂತೆ ಅವಳ ತಾಯಿ ಮತ್ತು ಎಲ್ಲಾ ಸೋದರ, ಸೋದರಿಯರನ್ನು ಕ್ಯಾಪ್ಟನ್ ಡೇರಿಲ್ ಎಂಬುವನಿಗೆ ಮಾರಿಬಿಟ್ಟ. ಅವನು ಬೆಟ್ಸೇ ವಿಲಿಯಮ್ಸ್ ಎಂಬ ಅವನ ಮೊಮ್ಮಗಳಿಗೆ ಮೇರಿಯನ್ನು ಸೇವಕಿಯನ್ನಾಗಿ ಮಾಡಿದ. ಮೇರಿ ೧೨ನೇ ವಯಸ್ಸಲ್ಲಿರುವಾಗ ೩೮ ಪೌಂಡ್‌ಗಳಿಗೆ ಸ್ಪ್ಯಾನಿಷ್‌ನ ಕ್ಯಾಪ್ಟನ್ ಜಾನ್ ಎಂಬುವನಿಗೆ ಮಾರಲಾಯಿತು. ಅಂದೇ ಅವಳ ಇಬ್ಬರು ಸೋದರಿಯರನ್ನು ಬೇರೆ ಬೇರೆ ಯಜಮಾನರುಗಳಿಗೆ ಮಾರಲಾಯಿತು. ಮೇರಿಯ ಹೊಸ ಯಜಮಾನ ಮತ್ತು ಅವನ ಹೆಂಡತಿ ಇಬ್ಬರೂ ಕಟು ಸ್ವಭಾವದವರು, ಕ್ರೂರಿಗಳು. ಸಣ್ಣ ಪುಟ್ಟ ತಪ್ಪುಗಳಿಗೂ ಮೇರಿ ಮತ್ತು ಇತರ ಕೆಲಸದವರಿಗೆ ಚಾವುಟಿಯಿಂದ ಬಾರಿಸುತ್ತಿದ್ದ ಜಾನ್.

ಮುಂದೆ ಜಾನ್ ಮೇರಿಯನ್ನು ೧೮೦೬ರಲ್ಲಿ ಗ್ರಾಂಡ್ ಟರ್ಕ್‌ನ ಉಪ್ಪು ತಯಾರಿಕನೊಬ್ಬನಿಗೆ ಮಾರಿದ. ಉಪ್ಪು ಮಾಡುತ್ತಿದ್ದ ಅವರಲ್ಲಿ ಗಂಡಸರೇ ಸಾಮಾನ್ಯವಾಗಿ ಕೆಲಸ ಮಾಡುತ್ತಿದ್ದದ್ದು. ಉಪ್ಪು ತಯಾರಿಕೆ ಅಷ್ಟು ಸುಲಭವಾಗಿರಲಿಲ್ಲ. ಸುಡು ಬಿಸಿಲಿಗೆ, ತಯಾರಿಕೆಗೆ ಬೇಕಾದ ಬಿಸಿಗೆ ತಳ್ಳಲ್ಪಟ್ಟಿದ್ದ ಅವರ ಬರಿಗಾಲುಗಳು ಉಪ್ಪಿನಿಂದಲೇ ತಿಂದು ಹೋಗಿರುತ್ತಿದ್ದವು. ಹೆಂಗಸರು ಉಪ್ಪನ್ನು ಪ್ಯಾಕ್ ಮಾಡುತ್ತಿದ್ದರು. ಅಂತೆಯೇ ಮೇರಿಯೂ ಸಹ. ೧೮೧೦ರಲ್ಲಿ ಅವಳ ಯಜಮಾನ ಬರ್ಮುಡಾಗೆ ಹೋದಾಗ ಇವಳೂ ಹಿಂಬಾಲಿಸಬೇಕಾಯ್ತು. ನಂತರ ಅವಳ ಮಗಳನ್ನು ನೋಡಿಕೊಳ್ಳುವ ಕೆಲಸಕ್ಕೆ ಅವಳನ್ನು ಹಚ್ಚಿದ.

ನಂತರ ೧೮೧೫ನಲ್ಲಿ ಮೇರಿ ನಾಲ್ಕನೇ ಬಾರಿ ಮಾರಾಟಕ್ಕೆ ಒಳಗಾದಳು. ಈ ಬಾರಿ ಕೊಂಡಿದ್ದು ಜಾನ್ ಆಡಮ್ಸ್ ವುಡ್ ಎಂಬಾತ. ೩೦೦ ಡಾಲರ್ ಅವಳ ಬೆಲೆ. ಅಲ್ಲಿ ಮನೆಗೆಲಸದವಳಾಗಿ ದುಡಿಯುತ್ತಿದ್ದಳು, ಅವನ ಜೊತೆ ಹಾಸಿಗೆಯನ್ನೂ ಹಂಚಿಕೊಳ್ಳಬೇಕಿತ್ತು. ಅವನ ಮಕ್ಕಳನ್ನು ನೋಡಿಕೊಳ್ಳುತ್ತಿದ್ದಳು. ಬಟ್ಟೆ ತೊಳೆಯುತ್ತಿದ್ದಳು. ಹಾಗೆಲ್ಲಾ ದುಡಿಯುತ್ತಿದ್ದುದರ ಫಲ ರುಮ್ಯಾಟಿಸಂ. ಕೆಲಸ ಮಾಡಲು ಆಗುತ್ತಿರಲಿಲ್ಲ. ಅವಳ ಯಜಮಾನ ಊರಲ್ಲಿ ಇಲ್ಲದ ಸಮಯದಲ್ಲಿ ಮೇರಿಯು ಹೊರಗೆ ಬಟ್ಟೆ ತೊಳೆಯುವ, ಕಾಫಿ ಮಾರುವ ಇತ್ಯಾದಿ ಕೆಲಸಗಳನ್ನು ಮಾಡುತ್ತಾ ಅವಳದೊಂದು ಸಣ್ಣ ಇಡುಗಂಟನ್ನು ಮಾಡಿಕೊಂಡಳು.

ಅದೇ ಸಮಯದಲ್ಲಿ ಅವಳು ಮೊರವಿಯನ್ ಚರ್ಚ್‌ಗೆ ಸೇರಿದಳು. ಅಲ್ಲಿ ತರಗತಿಗಳಲ್ಲಿ ಭಾಗವಹಿಸಿ ಓದಲು ಕಲಿತಳು. ೧೮೧೭ನಲ್ಲಿ ಇಂಗ್ಲೀಷ್ ಚರ್ಚೊಂದರಲ್ಲಿ ಬಾಪ್ಟಿಸಂ ಪಡೆದು, ಕಮ್ಯೂನಿಯನ್‌ನಲ್ಲಿ ಸ್ವೀಕೃತವಾದರೂ ಅವಳು ತನ್ನ ಯಜಮಾನನಿಂದ ಅನುಮತಿ ಪಡೆದು ತೆರಳಲು ಬಹಳಷ್ಟು ಭಯಪಟ್ಟಳು. ೧೮೨೬ರಲ್ಲಿ ಮೇರಿ ಡೇನಿಯಲ್ ಜೇಮ್ಸ್ ಎಂಬುವನನ್ನು ಮದುವೆಯಾದಳು. ಅವನೂ ಕೂಡ ಗುಲಾಮನಾಗಿದ್ದ ಮತ್ತು ಬಡಗಿಯಾಗಿ ಕೆಲಸ ಮಾಡುತ್ತಿದ್ದ. ಇವಳನ್ನು ಯಜಮಾನರಿಂದ ಬಂಧಮುಕ್ತಳನ್ನಾಗಿ ಮಾಡಲು ಆತ ದುಡಿದು ಸಂಪಾದಿಸಿದ. ಆದರೆ ಆಕೆಯ ಯಜಮಾನ ಮತ್ತು ಯಜಮಾನ್ತಿಗೆ ಇವರನ್ನು ಬಿಡಗಡೆ ಮಾಡಲು ಎಷ್ಟೂ ಇಷ್ಟವಿರಲಿಲ್ಲ.

೧೮೨೮ರಲ್ಲಿ ಯಜಮಾನ ವುಡ್ ಮತ್ತು ಅವನ ಕುಟುಂಬ ಲಂಡನ್ನಿಗೆ ತೆರಳಿತು. ಅಷ್ಟು ಹೊತ್ತಿಗಾಗಲೇ ಬ್ರಿಟನ್‌ನಲ್ಲಿ ಗುಲಾಮಗಿರಿಯು ಕಾನೂನುಬದ್ಧವಾಗಿ ಉಳಿದಿರಲಿಲ್ಲ. ಕಾನೂನು ರೀತ್ಯಾ ವ್ಯವಸ್ಥೆಯಲ್ಲಿ ಅವಳು ಮುಕ್ತವಾಗಬಹುದಾಗಿದ್ದರೂ, ಅವಳು ಆಂಟಿಗ್ವಾದಲ್ಲಿರುವ ಅವಳ ಗಂಡನನ್ನು ಸೇರುವಂತಿರಲಿಲ್ಲ. ಏಕೆಂದರೆ, ಆಂಟಿಗ್ವಾದಲ್ಲಿ ಗುಲಾಮಗಿರಿಯು ಕಾನೂನು ಸಮ್ಮತವಾಗಿಯೇ ಇತ್ತು ಹಾಗೂ ಅವನು ತನ್ನ ಹೆಂಡತಿಯನ್ನು ಕರೆಯಿಸಿಕೊಳ್ಳಲು ಗುಲಾಮ ಪದ್ಧತಿಯ ಕಟ್ಟಳೆಯ ತೊಡಕಿತ್ತು. ಮೇರಿಗೆ ಇಂಗ್ಲೆಂಡಲ್ಲಿ ತನ್ನ ಹೊಟ್ಟೆಯನ್ನು ತಾನೇ ಹೊರೆದುಕೊಳ್ಳಲು ಸಾಧ್ಯವಿರಲಿಲ್ಲ. ಅವಳು ವುಡ್‌ನಿಂದ ಬಿಡುಗಡೆಯ ಪತ್ರವನ್ನು ಪಡೆಯದೇ ಎಲ್ಲಿಗೂ ಹೋಗುವಂತಿರಲಿಲ್ಲ. ಆಗಾಗ ಅವಳ ಮೇಲೆ ಕೋಪಗೊಂಡಾಗ ಹೇಳಿದ ಮಾತು ಕೇಳಿಕೊಂಡಿರು ಅಥವಾ ಬಿಟ್ಟು ಹೋಗು ಎಂದು ಹೇಳುತ್ತಿದ್ದಂತೆ ಒಂದು ಬಾರಿ ಅವಳನ್ನು ಕಳಿಸಿಯೇ ಬಿಟ್ಟ, ಆದರೆ ಅವಳನ್ನು ಯಾರೂ ಇಟ್ಟುಕೊಳ್ಳಲಾಗದೆಂಬ ಹಕ್ಕಿನ್ನು ನಮೂದಿಸುವ ಬಿಡುಗಡೆಯ ಪತ್ರದೊಂದಿಗೆ.

ಮೇರಿ ಪ್ರಿನ್ಸ್‌ಳ 230ನೇ ಜನ್ಮದಿನದಂದು ಗೂಗಲ್‌ ಡೂಡಲ್‌ ಗೌರವ

ಮೇರಿ ಅವನ ಮನೆಯಿಂದ ಹೊರಗೆ ಬಂದು ಹ್ಯಾಟ್ಟನ್ ಗಾರ್ಡನ್‌ನ ಮೊರಾವಿಯನ್ ಚರ್ಚ್‌ನಲ್ಲಿ ಆಶ್ರಯ ಪಡೆದಳು. ಕೆಲವೇ ವಾರಗಳಲ್ಲಿ ದಾಸ್ಯವಿರೋಧ ಸಂಸ್ಥೆಯ ಥಾಮಸ್ ಪ್ರಿಂಗ್ಲ್‌ನ ಬಳಿ ಸಹಾಯಕ ಬರಹಗಾರಳಾಗಿ ಕೆಲಸ ಮಾಡತೊಡಗಿದಳು.

ಹೌದು, ನಾನು ಸರಿಯಾಗಿಯೇ ಈ ಹೊಸ ಮನೆಗೆ ಬಂದಿದ್ದೇನೆ. ಮನೆಯು ದೊಡ್ಡದಾಗಿದೆ. ಬೆಟ್ಟದೆತ್ತರದಲ್ಲಿ ನಿಂತಿದೆ. ಆದರೆ ರಾತ್ರಿಯ ಹೊತ್ತು ಸರಿಯಾಗಿ ಕಾಣದು. ಬಂಡೆಗಲ್ಲುಗಳು, ಗಟ್ಟಿಮುಟ್ಟಾದ ಮರಮಟ್ಟುಗಳಿವೆ ಇಲ್ಲಿ. ಆದರೆ ಅವು ಗುಲಾಮರನ್ನಿಟ್ಟುಕೊಂಡಿರುವ ಯಜಮಾನರ ಹೃದಯಷ್ಟು ಕಠಿಣವಾಗಿಲ್ಲ.

ಥಾಮಸ್ ಪ್ರಿಂಗ್ಲ್ ಅವರ ಸಂಸ್ಥೆಯಲ್ಲಿ ಕಪ್ಪು ಜನರಿಗೆ ಬೇಕಾದ ಸಹಾಯವನ್ನು ಕೊಡುವ ಯೋಜನೆ ಇತ್ತು. ಮುಂದೆ ಮೇರಿ ಮತ್ತೊಂದು ಕಡೆ ಮನೆಯನ್ನು ನೋಡಿಕೊಳ್ಳುವವಳಾಗಿ ಕೆಲಸ ಪಡೆದಳು. ಆದರೆ ಅವಳಿಗೆ ಕೆಲಸ ಕೊಟ್ಟಿದ್ದವರು ಇಂಗ್ಲೆಂಡ್‌ಗೆ ಹೋಗಬೇಕಾಗಿ ಬಂತು. ಅಷ್ಟರಲ್ಲಿ ಅವಳ ಹಳೆಯ ಯಜಮಾನ ವುಡ್ಸ್ ಕೂಡ ಇಂಗ್ಲೆಂಡ್ ಬಿಟ್ಟು ಅವನ ಮಗಳೊಂದಿಗೆ ಅಂಟಿಗ್ವಾಗೆ ಮರಳಿದ್ದ. ಪ್ರಿಂಗಲ್ ವುಡ್‌ನಿಂದ ಕಾನೂನು ರೀತ್ಯ ಬಿಡುಗಡೆ ಪಡೆಯಲು ಸಾಕಷ್ಟು ಯತ್ನಿಸಿದ.

ಆದರೆ ವುಡ್ ಅವಳಿಗೆ ಅಂತಹ ಬಿಡುಗಡೆಯ ಪತ್ರವನ್ನು ಕೊಡಲೂ ಅಥವಾ ತನ್ನಿಂದ ಕೊಂಡುಕೊಳ್ಳಲೂ ಒಪ್ಪಲಿಲ್ಲ. ಅಂಟಿಗ್ವಾದಲ್ಲಿ ಗುಲಾಮಗಿರಿಯು ಕಾನೂನಿನ ಸಮ್ಮತಿಯಿಂದ ಮುಕ್ತವಾಗುವರೆಗೂ ತಾನು ಅವಳನ್ನು ಬಿಡುಗಡೆಗೊಳಿಸಲಾರೆ ಎಂದು ಸ್ಪಷ್ಟೀಕರಿಸಿದ. ಮೇರಿ ತನ್ನ ಗಂಡನನ್ನಾಗಲಿ, ಸ್ನೇಹಿತರನ್ನಾಗಲಿ ಸೇರಲು ಸಾಧ್ಯವಾಗದೇ ಹೋಯಿತು. ಏಕೆಂದರೆ ಅವರೆಲ್ಲರೂ ಅವನ ಗುಲಾಮಗಿರಿಯ ಅಧೀನದಲ್ಲೇ ಇದ್ದರು. ದಾಸ್ಯವಿರೋಧಿ ಸಂಸ್ಥೆಯು ಅಲ್ಲಿನ ಪಾರ್ಲಿಮೆಂಟಿಗೆ ಮೇರಿಯ ಬಿಡುಗಡೆಯನ್ನು ಕೋರಿ ಪತ್ರವನ್ನು ಸಲ್ಲಿಸಿದರೂ ಅದು ತಿರಸ್ಕೃತವಾಯಿತು. ವೆಸ್ಟ್ ಇಂಡೀಸ್‌ನಿಂದ ತಂದಿರುವ ಎಲ್ಲಾ ಗುಲಾಮರನ್ನು ಬಿಡುಗಡೆ ಮಾಡಬೇಕೆಂಬ ಪ್ರಸ್ತಾಪವನ್ನು ಮುಂದಿಡುತ್ತಿದ್ದರಾದರೂ ಶಾಸನವೇನೂ ಜಾರಿಗೆಯಾಗಿರಲಿಲ್ಲ. ಆದರೆ ಗುಲಾಮ ಪದ್ಧತಿಯ ವಿರುದ್ಧವಾಗಿ ಏಳುತ್ತಿದ್ದ ಕೂಗು ಗಾಢವಾಗುತ್ತಿತ್ತು ಮತ್ತು ಗುಲಾಮರ ಬಗ್ಗೆಯ ಅನುಕಂಪವು ದಟ್ಟವಾಗುತ್ತಿತ್ತು.

೧೮೨೯ರಲ್ಲಿ ಪ್ರಿಂಗ್ಲ್ ಮೇರಿಯನ್ನು ತನ್ನ ಮನೆಯ ಕೆಲಸಕ್ಕೆ ಎಂದೇ ಇಟ್ಟುಕೊಂಡ. ಆತನ ಪ್ರೇರೇಪಣೆಯಿಂದ ಅವಳ ಜೀವನ ಚಿತ್ರಣವನ್ನು ಆಕೆಯು ನಿರೂಪಣೆ ಮಾಡಿದ್ದೇ ಅಲ್ಲದೇ, ಸುಸಾನ ಸ್ಕ್ರಿಕ್ಲಾಂಡ್ ಎಂಬಾಕೆ ಬರವಣಿಗೆಯಲ್ಲಿ ದಾಖಲಿಸಿದಳು. ಪ್ರಿಂಗ್ಲ್ ಅದರ ಸಂಪಾದಕನಾಗಿ ಕಾರ್ಯ ನಿರ್ವಹಿಸಿದ. ಆ ಪುಸ್ತಕ ೧೮೩೧ರಲ್ಲಿ ಬಿಡುಗಡೆಯಾಯಿತು. ಅದರ ಹೆಸರು ದ ಹಿಸ್ಟರಿ ಆಫ್ ಮೇರಿ ಪ್ರಿನ್ಸ್.

ನಾನೇ ಗುಲಾಮಳಾಗಿದ್ದೆನು. ನನಗೆ ತಿಳಿದಿದೆ ಗುಲಾಮರ ಭಾವನೆಗಳು. ನನ್ನ ಮೂಲಕ ನಾನು ಉಳಿದ ಗುಲಾಮರ ದನಿಗಳನ್ನು ಉಸುರಬಲ್ಲೆ. ಅವರ ದನಿಗಳು ನನ್ನ ಕಂಠದಲ್ಲೂ ಇವೆ, ನನ್ನ ಕಿವಿಗಳಲ್ಲೂ ಇವೆ. ಗುಲಾಮಗಿರಿಯಲ್ಲಿದ್ದವನು ನಾನು ಸಂತೋಷವಾಗಿದ್ದೇನೆ ಎಂದ ಪಕ್ಷದಲ್ಲಿ ಅವನಿಗೆ ಬಿಡುಗಡೆ ಬೇಡವೆಂದೇ ಅರ್ಥ. ಅವನು ಒಂದೋ ಅಜ್ಞಾನಿಯಾಗಿರುತ್ತಾನೆ ಅಥವಾ ಸುಳ್ಳುಗಾರನಾಗಿರುತ್ತಾನೆ. ಆದರೆ ನಾನೆಂದಿಗೂ ಕೇಳೇ ಇಲ್ಲ, ಯಾವನೊಬ್ಬ ಗುಲಾಮ ತಾನು ಸಂತೋಷವಾಗಿದ್ದೇನೆಂದು ಹೇಳಿರುವುದನ್ನು. ನೀನು ಸಂತೋಷವಾಗಿದ್ದೀಯಾ ಎಂದು ಯಾವನೊಬ್ಬ ಬುಖ್ರ (ಬಿಳಿಯ ಮನುಷ್ಯ) ಹೇಳಿರುವುದನ್ನು.

ಸಂಚಲನವನ್ನು ಉಂಟುಮಾಡಿದ ಆ ಪುಸ್ತಕವು ಒಬ್ಬ ಕಪ್ಪು ಮಹಿಳೆಯ ಪ್ರಕಟವಾದ ಪ್ರಥಮ ಪುಸ್ತಕವು ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು. ನಾನು ಎಂದು ಪ್ರಥಮ ವ್ಯಕ್ತಿಯಾಗಿ ಕಥೆಯನ್ನು ಹೇಳಿಕೊಂಡ ಆ ರೀತಿಯೇ ಎಲ್ಲರನ್ನೂ ಮುಟ್ಟಿತ್ತು. ಮೊದಲ ವರ್ಷದಲ್ಲಿಯೇ ಮೂರು ಮುದ್ರಣಗಳನ್ನು ಕಂಡಿತು. ಅದೇ ಸಮಯದಲ್ಲಿ ಗುಲಾಮಗಿರಿ ಪದ್ಧತಿಯ ವಿರುದ್ಧವಾದ ದನಿಯ ಅಲೆಗಳು ಹೆಚ್ಚುತ್ತಲೇ ಇದ್ದವು.

ಮೇರಿ ಪ್ರಿನ್ಸ್‌ಳ ಇತಿಹಾಸದ ಪುಸ್ತಕಕ್ಕೆ ಜನಪ್ರಿಯತೆ ದಕ್ಕಿತು. ಅದರ ಜೊತೆಗೆ ಮೇರಿಯ ವಿರುದ್ಧವಾಗಿ ಮಾತ್ಸರ್ಯದಿಂದ ಮಾನ ಹಾನಿ ಮಾಡುವಂತಹ ಎರಡು ಕೇಸುಗಳೂ ಬಿದ್ದವು. ಅದನ್ನು ಎದುರಿಸಲು ಮೇರಿ ಕೋರ್ಟಿನ ಮೆಟ್ಟಿಲನ್ನು ಏರಬೇಕಾಯ್ತು.

ಮ್ಯಾಕ್ವೀನ್ ವೆಸ್ಟ್ ಇಂಡಿಯಾದಲ್ಲಿ ಬಿಳಿಯರ ಪರವಾಗಿ ದಾವೆಗಳನ್ನು ಸಂಭಾಳಿಸುತ್ತಿದ್ದ ನ್ಯಾಯವಾದಿ. ಅವನು ಗುಲಾಮಗಿರಿಯ ವಿರುದ್ಧದ ಆಂದೋಲನಕ್ಕೆ ಕಟ್ಟಾ ವಿರೋಧಿಯಾಗಿದ್ದ. ಅವನು ಮೇರಿಯನ್ನು ಚಾರಿತ್ರ್ಯಹೀನಳೆಂದೂ, ಅವಳು ಕೆಟ್ಟ ಕೆಲಸಗಳನ್ನು ಮಾಡುವ ನೀಚ ಮಹಿಳೆಯೆಂದೂ ಸಾಕಷ್ಟು ಪ್ರಚಾರ ಮಾಡಿದ. ಅಷ್ಟೇ ಅಲ್ಲದೇ ಉದಾರವಾದ ಮತ್ತು ಒಳ್ಳೆಯ ಮನಸ್ಸುಳ್ಳ ಯಜಮಾನರನ್ನು ದುರುಪಯೋಗ ಪಡಿಸಿಕೊಂಡವಳೆಂದೂ ತನ್ನ ದೂರಿನಲ್ಲಿ ಬಲವಾಗಿ ಪ್ರತಿಪಾದಿಸಲು ಯತ್ನಿಸಿದ್ದ. ಅಷ್ಟೇ ಅಲ್ಲದೇ ಪ್ರಿಂಗ್ಲ್‌ನ ಕುಟುಂಬವೂ ಕೂಡ ಅಂತಹುದೇ ಚಾರಿತ್ರ್ಯಹೀನವಾಗಿದ್ದು, ಒಬ್ಬಳು ಗುಲಾಮಳನ್ನು ತಮ್ಮ ಮನೆಯಲ್ಲಿರಿಸಿಕೊಂಡಿರುವುದೇ ದೊಡ್ಡ ಅಪರಾಧವೆಂದು ವಾದಿಸಿದ್ದ. ಅಷ್ಟೇ ಅಲ್ಲದೇ ಅವನ ಮೇಲೂ ಕೇಸುಗಳನ್ನು ಹಾಕಲಾಯಿತು. ಜಾನ್ ವುಡ್ ತನ್ನ ವ್ಯಕ್ತಿತ್ವವನ್ನು ಕೆಟ್ಟದಾಗಿ ಬಿಂಬಿಸಿದೆಯೆಂದು ಮಾನಹಾನಿ ದಾವೆ ಹೂಡಿದನು. ನ್ಯಾಯಾಲಯದಲ್ಲಿ ತೀರ್ಪು ಜಾನ್ ವುಡ್‌ನ ಪರವಾಗಿಯೇ ಇತ್ತು. ಅಪಾರ ಮೊತ್ತದ ಹಣವನ್ನು ದಂಡವನ್ನಾಗಿ ಪ್ರಿಂಗ್ಲ್ ತೆರಬೇಕಾಯ್ತು. ಮೇರಿಯ ಕೇಸು ಮುಗಿಯದೇ ಅವಳು ಮಾತ್ರ ಕೋರ್ಟಿಗೆ ಅಲೆಯುತ್ತಲೇ ಇರಬೇಕಾಗಿತ್ತು.

ಪುಸ್ತಕ ಪ್ರಕಟಣೆಯ ನಂತರದ ಆಕೆಯ ಜೀವನದ ಬಗ್ಗೆ ಹೆಚ್ಚು ಮಾಹಿತಿ ಈಗ ತಿಳಿದಿಲ್ಲ. ಅವಳು ತಾನು ಹಂಬಲಿಸಿದಂತೆ ತನ್ನ ಗಂಡನನ್ನು ಕೂಡಿದಳೋ ಇಲ್ಲವೋ ತಿಳಿದುಬಂದಿಲ್ಲ.

೧೮೩೩ರವರೆಗೆ ಅವಳು ಇಂಗ್ಲೆಂಡಲ್ಲಿ ಇದ್ದು ಅವಳ ಕೇಸುಗಳಿಗೆ ಎಡತಾಕುತ್ತಿದ್ದ ಸಾಕ್ಷಿಗಳಿವೆ. ಆಮೇಲೆ ೧೮೩೪ರಲ್ಲಿ ಗುಲಾಮ ವಿರೋಧಿ ಶಾಸನವು ಜಾರಿಯಾಯಿತು. ಆದರೆ ಮೇರಿ ಕಾಣಲೇ ಇಲ್ಲ. ಅವಳು ಎಲ್ಲಿಗೆ ಹೋದಳು ಏನಾದಳು ಎಂದೂ ತಿಳಿಯಲಿಲ್ಲ. ಅವಳು ಆರೋಗ್ಯವಾಗಿ ಮತ್ತು ಜೀವಂತವಾಗಿ ಇದ್ದದ್ದೇ ಆದ ಪಕ್ಷದಲ್ಲಿ ಆಕೆ ಖಂಡಿತವಾಗಿ ತನ್ನ ಪ್ರೀತಿಯ ಗಂಡನನ್ನು ಸೇರಲು, ತನ್ನ ಜೀವದ ಮಿತ್ರರನ್ನು ಸಂಧಿಸಲು ಬಂದೇ ಬರುತ್ತಿದ್ದಳು ಎಂದು ಎಲ್ಲರೂ ಮಾತಾಡುತ್ತಿದ್ದರು. ಆದರೆ ಮೇರಿ ಪ್ರಿನ್ಸ್ ಶೋಷಿತ ಅಸಂಖ್ಯರಲ್ಲಿ ಎಲ್ಲೋ ಏಕೋ ಕಳೆದೇ ಹೋದಳು. ವೆಸ್ಟ್ ಇಂಡೀಸ್‌ನ ಓರ್ವ ಕಪ್ಪು ಮಹಿಳೆ, ಇಂಗ್ಲೀಷಿನ ಜನಾಂಗೀಯ ಅಧಿಪತ್ಯದಲ್ಲಿ ತನ್ನ ಇರುವನ್ನೇ ಕರಗಿಸಿಕೊಂಡುಬಿಟ್ಟಳು.


ಇದನ್ನು ಓದಿ: ಪ್ರೀತಿಸುವ ಕಲೆ – ಎರಿಕ್ ಫ್ರಾಂ : ಯೋಗೇಶ್ ಮಾಸ್ಟರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...