- Advertisement -
- Advertisement -
ನೆತ್ತರ ಪಾದದ ಚರಿತ್ರೆ
ಮುಗಿಯಲೇ ಇಲ್ಲ
ನೋವ ಮುಕ್ಕಳಿಸುವ ರಾತ್ರಿಗಳಲ್ಲೂ
ಧಣಿಗಳ ಮನೆಯಲ್ಲಿ ಹಬ್ಬದೂಟ…!
ಸತ್ತ ನಾಯಿ ಎಳೆವ ನ್ಯಾಯಕ್ಕಾಗಿ
ಗುಡಿಸಲಿಗೆ ಬಿದ್ದ ಬೆಂಕಿ
ಈಗಲೂ ನನ್ನ ಎದೆಸುಡುತ್ತದೆ..
ನ್ಯಾಯ ಎಂಬುದು
ನಿಷಿದ್ಧವಾಗಿ ಬಹಳ ಕಾಲವಾಗಿದೆ
ಬಂಧೂಕಿನ ನಳಿಕೆಯಲಿ
ಮುಗ್ಧರ ಎದೆಸೀಳುವ
ಸೀಳುನಾಯಿಗಳೆಲ್ಲಾ
ಈಗ ದೇಶಭಕ್ತರ ಪಟ್ಟಕ್ಕೇರಿವೆ
ಕೊಂದದ್ದಷ್ಟೇ ಚರಿತ್ರೆಯಾಗಿಸಿ
ಮೆರೆದಾಡಿಸುವ ಇಲ್ಲಿ
ಅಮಾಯಕರ
ನೋವು-ಸಾವು
ಯಾರ ಎದೆಯನ್ನೂ ಕಲಕುವುದಿಲ್ಲ..
ಈ ನೆಲ
ನೀರು ಕುಡಿದಿದ್ದಕ್ಕಿಂತಲೂ
ನೆತ್ತರ ಹೀರಿದ್ದೇ ಹೆಚ್ಚು
ನಿರಂತರ ಸಾವುಗಳೀಗ
ತೀರಾ ಸಲೀಸು..
ಧಣಿಗಳ ದಿಬ್ಬಣದಲ್ಲೀಗ
ಹೆಣಗಳದ್ದೇ ಸಿಂಗಾರವಲ್ಲವೇ…?
– ಹುಲಿಕುಂಟೆ ಮಂಜುಳಾ



