Homeರಾಜಕೀಯಬಿಜೆಪಿ, ಕೆಜೆಪಿ ಮತ್ತು ಬಿಎಸ್‍ಆರ್ ವಿಲೀನ ಹೈಕದಲ್ಲಿ ಬಿಜೆಪಿಗೆ ನೆರವಾಗಲಿದೆಯೆ?

ಬಿಜೆಪಿ, ಕೆಜೆಪಿ ಮತ್ತು ಬಿಎಸ್‍ಆರ್ ವಿಲೀನ ಹೈಕದಲ್ಲಿ ಬಿಜೆಪಿಗೆ ನೆರವಾಗಲಿದೆಯೆ?

- Advertisement -
- Advertisement -

2013ರ ವಿಧಾನಸಭಾ ಚುನಾವಣೆಯಲ್ಲಿ ಮೂರು ಭಾಗವಾಗಿ ಹೋಳಾಗಿದ್ದರಿಂದಲೇ ಬಿಜೆಪಿ ಅಷ್ಟೊಂದು ಹೀನಾಯವಾಗಿ ಸೋತಿತು ಎಂದು ಬಲವಾಗಿ ವಾದಿಸಲಾಗುತ್ತಿದೆ. ಅದೊಂದೇ ಕಾರಣವಲ್ಲವಾದರೂ ಅದೂ ಒಂದು ಬಲವಾದ ಕಾರಣ. ಹಾವೇರಿಯಲ್ಲಿ ರೈತರ ಮೇಲೆ ಗೋಲಿಬಾರ್ ಮಾಡಿ ಅನ್ನದಾತರ ರಕ್ತತರ್ಪಣದೊಂದಿಗೆ ಅಧಿಕಾರಕ್ಕೇರಿದ ಬಿಜೆಪಿ ಐದು ವರ್ಷಗಳ ಕಾಲ ನಡೆಸಿದ ದುರಾಡಳಿತವೇ ಅದರ ಪತನಕ್ಕೆ ಕಾರಣವಾಗಿತ್ತು. ಜನಪ್ರತಿನಿಧಿಗಳನ್ನು ರೊಕ್ಕ ಕೊಟ್ಟು ಮಾರ್ಕೆಟಿನಲ್ಲಿ ತರಕಾರಿಯಂತೆ ಖರೀದಿಸಿ ಸರ್ಕಾರ ರಚಿಸಿದ್ದು, ನಾಡಿನ ಖನಿಜ ಸಂಪತ್ತನ್ನು ಲೂಟಿ ಹೊಡೆದಿದ್ದು, 2009ರಲ್ಲಿ ಉತ್ತರ ಕರ್ನಾಟಕ ಭೀಕರ ಪ್ರವಾಹಕ್ಕೆ ಸಿಲುಕಿ ಲಕ್ಷಾಂತರ ಜನ ಮನೆಮಠ ಕಳೆದುಕೊಂಡು ಅಕ್ಷರಶಃ ಬೀದಿ ಬಿದ್ದಾಗ ಜನಪ್ರತಿನಿಧಿಗಳು ಅವರ ನೆರವಿಗೆ ಬಾರದೇ ಮಂತ್ರಿ ಪದವಿಗಾಗಿ ಬಂಡಾಯವೆದ್ದು ರೆಸಾರ್ಟುಗಳಲ್ಲಿ ಮೋಜು ಮಸ್ತಿ ಮಾಡುತ್ತಿದ್ದುದು, ಮುಂದೆ ಅಧಿಕಾರ ಸಿಕ್ಕೀತೋ ಇಲ್ಲವೋ ಎಂಬಂತೆ ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿ ಜನಾರ್ಧನ ರೆಡ್ಡಿ, ಕೃಷ್ಣಯ್ಯ ಶೆಟ್ಟಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಸಂಪಂಗಿ, ಆನಂದ್ ಸಿಂಗ್, ಅಷ್ಟೇ ಏಕೆ ಕೊನೆಗೆ ಮುಖ್ಯಮಂತ್ರಿ ಬಿ.ಎಸ್ ಯಡ್ಯೂರಪ್ಪನೂ ಸೇರಿದಂತೆ ಡಜನ್‍ಗಟ್ಟಲೆ ಮಂತ್ರಿಗಳು, ಶಾಸಕರು ಜೈಲು ಪಾಲಾಗಿದ್ದು, ಶಾಸನಸಭೆಯಲ್ಲಿ ಕುಳಿತು ಅಶ್ಲೀಲ ವೀಡಿಯೋ ನೋಡಿದ್ದು, ರೇಣುಕಾಚಾರಿ, ಹರತಾಳು ಹಾಲಪ್ಪ, ರಘುಪತಿಭಟ್ಟರ ಅನೈತಿಕ ಸಂಬಂಧಗಳು, ಬಿಜೆಪಿಯ ಹಾದಿಬೀದಿ ಜಗಳದಿಂದಾಗಿ ರಾಜ್ಯ ಮೂವರು ಮುಖ್ಯಮಂತ್ರಿಗಳನ್ನು ಕಂಡಿದ್ದು… ಒಂದೇ ಎರಡೇ? ಈ ದುರಾಡಳಿತವೇ ಅಧಿಕಾರದಲ್ಲಿದ್ದ ಬಿಜೆಪಿಯನ್ನು ನಲ್ವತ್ತು ಸ್ಥಾನಗಳಿಗೆ ತಂದು ನಿಲ್ಲಿಸಿದ್ದು.

ಆದರೆ, ಬಿಜೆಪಿಯಿಂದ ಹೊರನಡೆದ ಯಡ್ಯೂರಪ್ಪ ಕರ್ನಾಟಕ ಜನತಾ ಪಕ್ಷವನ್ನು (ಕೆಜೆಪಿ), ಬಿ. ಶ್ರೀರಾಮುಲು ಬಡವರ, ಶ್ರಮಿಕರ, ರೈತರ ಕಾಂಗ್ರೆಸ್ ಪಕ್ಷವನ್ನು (ಬಿಎಸ್‍ಆರ್‍ಸಿಪಿ) ಕಟ್ಟಿದ್ದೂ ಕೂಡ ಬಿಜೆಪಿಯ ಸೋಲಿಗೆ ಸಹಕರಿಸಿತ್ತು. ಈ ಪಕ್ಷಗಳು ಕೆಲವು ಕ್ಷೇತ್ರಗಳಲ್ಲಿ ಗೆದ್ದು ಸಂಭ್ರಮಿಸಿದ್ದಕ್ಕಿಂತ ಬಿಜೆಪಿಯನ್ನು ಸೋಲಿಸಿ ಆನಂದಪಟ್ಟಿದ್ದೇ ಹೆಚ್ಚು. ಕೆಜೆಪಿ 6 ಸ್ಥಾನಗಳಲ್ಲಿ ಮತ್ತು ಬಿಎಸ್‍ಆರ್‍ಸಿಪಿ 4 ಸ್ಥಾನಗಳಲ್ಲಿ ಗೆದ್ದವಾದರೂ ಈ ಎರಡೂ ಪಕ್ಷಗಳು ಸೇರಿ ಬಿಜೆಪಿಯನ್ನು ಸೊಲಿಸಿದ್ದು ಸುಮಾರು 40 ಕ್ಷೇತ್ರಗಳಲ್ಲಿ.

2013ರ ಚುನಾವಣೆಯಲ್ಲಿ ಹೈದರಾಬಾದ್ ಕರ್ನಾಟಕ ಪ್ರದೇಶದ ಆರು ಜಿಲ್ಲೆಗಗಳಲ್ಲಿರುವ 40 ಕ್ಷೇತ್ರಗಳ ಪೈಕಿ 23 ಕ್ಷೇತ್ರಗಳನ್ನು ಕಾಂಗ್ರೆಸ್, ತಲಾ 5 ಕ್ಷೇತ್ರಗಳನ್ನು ಬಿಜೆಪಿ ಮತ್ತು ಜೇಡಿಎಸ್, 3 ಕ್ಷೇತ್ರಗಳನ್ನು ಕೆಜೆಪಿ, 2 ಕ್ಷೇತ್ರಗಳನ್ನು ಬಿಎಸ್‍ಆರ್‍ಸಿಪಿ ಹಾಗೂ ಉಳಿದೆರಡು ಕ್ಷೇತ್ರಗಳನ್ನು ಇತರರು ಗೆದ್ದಿದ್ದರು. ಮತಗಳನ್ನು ಒಡೆದ ಪರಿಣಾಮವಾಗಿ 11 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು 3 ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲ್ಲುವುದಕ್ಕೆ ಸುಲಭವಾಯಿತು.

ಈ ಬಾರಿ ಕೆಜೆಪಿ ಮತ್ತು ಬಿಎಸ್‍ಆರ್‍ಸಿಪಿಗಳು ಬಿಜೆಪಿಯಲ್ಲಿ ವಿಲೀನವಾಗಿರುವುದರಿಂದ ಕಳೆದ ಬಾರಿ ಹರಿದು ಹಂಚಿಹೋದ ಮತಗಳೆಲ್ಲಾ ಬಿಜೆಪಿಗೆ ಬರುತ್ತವೆ. ಇದರಿಂದ ಏಕೀಕೃತ ಬಿಜೆಪಿ ಹೈದರಾಬಾದ್ ಕರ್ನಾಟಕದ 40 ಸ್ಥಾನಗಳಲ್ಲಿ 24 ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತದೆ ಎನ್ನುವುದು ಅವರ ತರ್ಕ.

ಆದರೆ ಇದು ವಾಸ್ತವಕ್ಕೆ ದೂರವಾದ ತರ್ಕ. ಏಕೆಂದರೆ, ಚುನಾವಣೆ ಎಂಬುದು ಎರಡಕ್ಕೆ ಎರಡನ್ನು ಸೇರಿಸಿದರೆ ನಾಲ್ಕು ಆಗುತ್ತದೆ ಎನ್ನುವಷ್ಟು ಸರಳ ಅಂಕಗಣಿತವಲ್ಲ. ಅದರಲ್ಲೂ 2018 ಈ ಚುನಾವಣೆ ಹಲವು ಕಾರಣಗಳಿಗಾಗಿ ಬಹುಮುಖ್ಯ ಚುನಾವಣೆಯಾಗಿದ್ದರಿಂದ ಹಾಗೂ ಕಾಂಗ್ರೆಸ್ ಪಕ್ಷವು 371(ಜೆ) ಕಲಂ ಅನ್ನು ಸಂವಿಧಾನಕ್ಕೆ ಸೇರಿಸಿ ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಕೊಟ್ಟಿರುವುದು, ಕಾಂಗ್ರೆಸ್ ಸರ್ಕಾರ ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿನ ಬೇಡಿಕೆಯನ್ನು ಮನ್ನಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡಿರುವುದು ಹಾಗೂ ಪಕ್ಷಾಂತರದಿಂದಾಗಿ ರಾಜಕೀಯ ದ್ರುವೀಕರಣ ಬಿರುಸಿನಿಂದ ಸಾಗಿದ್ದು – ಹೀಗೆ ಹೊಸ ರಾಜಕೀಯ ಸನ್ನಿವೇಶ ಸೃಷ್ಟಿಯಾಗಿದೆ. ಹಾಗಾಗಿ, ಕಳೆದ ಬಾರಿ ಹಂಚಿಹೋದ ಮತಗಳೆಲ್ಲಾ ಈ ಬಾರಿ ಬಿಜೆಪಿಗೆ ಬಂದುಬಿಡುತ್ತವೆ ಎಂಬ ತೀರ್ಮಾನಕ್ಕೆ ಬರಲು ಆಗುವುದಿಲ್ಲ.

ಹೈದರಾಬಾದ್ ಕರ್ನಾಟಕದಲ್ಲಿ ಕೆಜೆಪಿ ಮತ್ತು ಬಿಎಸ್‍ಆರ್ ಪಕ್ಷಗಳು ಗೆದ್ದಿರುವ 5 ಕ್ಷೇತ್ರಗಳ ವಿಶ್ಲೇಷಣೆ:

ಆಳಂದ: ಕಲಬುರಗಿ ಜಿಲ್ಲೆಯ ಆಳಂದ ಕ್ಷೇತ್ರದಲ್ಲಿ ಕೆಜೆಪಿ ಪಕ್ಷದಿಂದ ಬಿ.ಆರ್. ಪಾಟೀಲ ಅವರ ಸ್ವಂತ ವರ್ಚಸ್ಸಿನಿಂದ ಗೆದ್ದಿದ್ದರೆ ಹೊರತು ಅವು ಯಡ್ಯೂರಪ್ಪನವರ ಅಥವಾ ಕೆಜೆಪಿಯ ಮತಗಳಾಗಿರಲಿಲ್ಲ. ಹೀಗಾಗಿ, ಪಾಟೀಲರು ಕಾಂಗ್ರೆಸ್ಸಿಗೆ ಹೋಗಿರುವುದು ಆ ಪಕ್ಷಕ್ಕೆ ವರದಾನವಾಗಿದೆ. ಸುಭಾಷ್ ಗುತ್ತೇದಾರ್ ಅವರು ಜೆಡಿಎಸ್ ತೊರೆದು ಬಿಜೆಪಿಗೆ ಬಂದಿದ್ದರಿಂದ ಇಲ್ಲಿ ಇವರಿಬ್ಬರ ನಡುವೆ ನೇರ ಹಣಾಹಣಿ. ಆದರೆ, ಪರಿಸ್ಥಿತಿ ಈಗ ಬಿ.ಆರ್. ಪಾಟೀಲರ ಪರವಾಗಿದೆ.

ಶಹಾಪುರ: ಯಾದಗಿರಿ ಜಿಲ್ಲೆಯ ಶಹಾಪುರ ಕ್ಷೇತ್ರದಲ್ಲಿ ಕೆಜೆಪಿಯಿಂದ ಸ್ಪರ್ಧಿಸಿದ್ದ ಗುರುಪಾಟೀಲ್ ಶಿರವಾಳ ಗೆದ್ದಿದ್ದರು. ಇಲ್ಲಿ ಗುರುಪಾಟೀಲ್ ಗೆಲುವಿಗೆ ಯಡ್ಡಿ ಮತ್ತು ಕೆಜೆಪಿಗಿಂತ ಬೇರೆಯದ್ದೇ ಕಾರಣಗಳು ಪ್ರಮುಖವಾಗಿದ್ದವು. ಶಿರವಾಳ್ ಅವರ ತಂದೆ ಶಿವಶಂಕರಪ್ಪ ಅವರ ನಿಧನದಿಂದ ಅನುಕಂಪದಲೆ ಇತ್ತು. ಶಿರವಾಳ್ ಅವರ ತಾಯಿಯ ಪ್ರಚಾರ ದೊಡ್ಡ ಮಟ್ಟದ ಪ್ರಭಾವ ಬೀರಿತ್ತು. ಒಮ್ಮೆ ದರ್ಶನಾಪುರ ಕುಟುಂಬದ ಅಭ್ಯರ್ಥಿಯನ್ನು ಗೆಲ್ಲಿಸಿದರೆ ಮುಂದಿನ ಚುನಾವಣೆಯಲ್ಲಿ ಶಿರವಾಳ್ ಕುಟುಂಬದ ಅಭ್ಯರ್ಥಿಯನ್ನು ಗೆಲ್ಲಿಸಿದ್ದಾರೆ. ಈ ನಡವಳಿಕೆ ಕಳೆದ ನಲ್ವತ್ತು ವರ್ಷಗಳಿಂದ ಬದಲಾಗಿಲ್ಲ ಎಂದರೆ ಈ ಚುನಾವಣೆಯಲ್ಲಿ ಮಾತ್ರ ಬದಲಾಗುತ್ತದೆ ಎಂದು ನಂಬುವುದಕ್ಕೆ ವಿಶೇಷ ಕಾರಣಗಳಿಲ್ಲ.

ಬೀದರ್: ಈ ಕ್ಷೇತ್ರದಲ್ಲಿ ಗೆದ್ದದ್ದು ಗುರುಪಾದಪ್ಪ ನಾಗಮಾರಪಳ್ಳಿಯೇ ಹೊರತು ಕೆಜೆಪಿ ಅಲ್ಲ. ಅವರು ಎಲ್ಲಾ ಎಲೆಕ್ಷನ್ನುಗಳು ಗೆದ್ದದ್ದು ತಮ್ಮ ಸ್ವಂತ ಬಲದಿಂದಲೇ ಹೊರತು ಯಾವುದೇ ಪಕ್ಷದ ಬಲದಿಂದಲ್ಲ. ಈಗ ಗುರುಪಾದಪ್ಪ ನಾಗಮಾರಪಳ್ಳಿ ತೀರಿಕೊಂಡಿದ್ದಾರೆ. ಉಪಚುನಾವಣೆಯಲ್ಲಿ ಕಾಂಗ್ರೆಸ್ಸಿನ ರಹೀಂ ಖಾನ್ ಗೆಲುವನ್ನು ತಮ್ಮದಾಗಿಸಿಕೊಂಡರು. ರಾಜ್ಯದಲ್ಲಿ ಅತಿಹೆಚ್ಚು ಮುಸ್ಲಿಂ ಮತಗಳನ್ನು ಹೊಂದಿರುವ ಎರಡು ಕ್ಷೇತ್ರಗಳಲ್ಲಿ ಒಂದಾದ ಬೀದರ್‍ನಲ್ಲಿ. ತಮ್ಮದೇ ಸಮುದಾಯದ ರಹೀಂ ಖಾನರನ್ನು ಬಿಟ್ಟು ಬಿಜೆಪಿ ಅಭ್ಯರ್ಥಿಗಳಿಗೆ ಮುಸ್ಲಿಮರು ಮತಹಾಕುತ್ತಾರೆ ಎಂದು ನಿರೀಕ್ಷಿಸುವುದೂ ಅಸಾಧ್ಯ. ಗುರುಪಾದಪ್ಪ ಮಕ್ಕಳಾದ ಉಮಾಕಾಂತ ಮತ್ತು ಸೂರ್ಯಕಾಂತರ ನಡುವೆ ರಾಜಕೀಯ ಸಂಘರ್ಷ ಸಹ ಕಾಂಗ್ರೆಸ್ಸಿಗೆ ನೆರವಾಗಲಿದೆ.

ಬಳ್ಳಾರಿ ಮತ್ತು ಕಂಪ್ಲಿ: ಕಳೆದ ಚುನಾವಣೆಯಲ್ಲಿ ಬಿಎಸ್‍ಆರ್‍ಸಿಪಿಯಿಂದ ಬಳ್ಳಾರಿಯಲ್ಲಿ ಶ್ರೀರಾಮುಲು ಹಾಗೂ ಕಂಪ್ಲಿಯಲ್ಲಿ ಸುರೇಶ್ ಬಾಬು ಗೆಲುವು ದಾಖಲಿಸಿದ್ದರು. ಇಬ್ಬರೂ ನಾಯಕರಿಗೆ ಕ್ಷೇತ್ರದ ಮೇಲೆ ಬಿಗಿ ಹಿಡಿತವಿರುವುದಿರಿಂದ ಈ ಬಾರಿಯೂ ಏಕೀಕರಣಗೊಂಡ ಬಿಜೆಪಿ ಗೆಲ್ಲುವ ನಿರೀಕ್ಷೆಯಿದೆ.

ಮತವಿಭಜನೆಯ ಕಾರಣಕ್ಕೆ ಬಿಜೆಪಿ ಸೋತಿದ್ದ 14 ಕ್ಷೇತ್ರಗಳ ಬಗ್ಗೆಯೂ ಒಂದಿಷ್ಟು ಕಣ್ಣು ಹಾಯಿಸೋಣ.

ಬೀದರ್ ಜಿಲ್ಲೆಯಲ್ಲಿ ಬಸವಕಲ್ಯಾಣ ಮತ್ತು ಭಾಲ್ಕಿ ಮತಕ್ಷೇತ್ರಗಳಲ್ಲಿ ಮತವಿಭಜನೆಯಿಂದಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಗೆದ್ದಿದ್ದವು. ಈಗ 2 ಕ್ಷೇತ್ರಗಳಲಿ ಬಿಜೆಪಿ ನಾಯಕರು ಮತ್ತು ಕೆಜೆಪಿಯಿಂದ ಮರಳಿದವರ ನಡುವೆ ತೀವ್ರ ಸಂಘರ್ಷವಿದ್ದು ಟಿಕೆಟ್ ಯಾವ ಗುಂಪಿಗೆ ಹೋದರೂ ಇನ್ನೊಂದು ಗುಂಪು ಬಂಡಾಯವೇಳುವ ಮಟ್ಟಕ್ಕಿದೆ. ಇಲ್ಲಿ ವಿಲೀನ ಅನುಕೂಲಕ್ಕಿಂತಲೂ ಅನಾನುಕೂಲವನ್ನೇ ತಂದಿಟ್ಟಿದೆ. ಒಬ್ಬರಿಗೆ ಟಿಕೆಟ್ ಸಿಕ್ಕರೆ ಇನ್ನೊಬ್ಬರು ಬಂಡಾಯದ ಬಾವುಟ ಹಾರಿಸುವ ಸಾಧ್ಯತೆಯಿದೆ. ಒಂದು ವೇಳೆ ಹಾಗೆ ಆದರೆ ಅದು ಮತ್ತೆ ಕಾಂಗ್ರೆಸ್ಸಿಗೆ ಅನುಕೂಲವಾಗಲಿದೆ.

ಕಲಬುರಗಿ ಜಿಲ್ಲೆಯ ಅಫಜಲಪುರ, ಗುಲ್ಬರ್ಗಾ ಉತ್ತರ ಮತ್ತು ಗುಲ್ಬರ್ಗಾ ಗ್ರಾಮೀಣ ಕ್ಷೇತ್ರಗಳನ್ನು ಕಾಂಗ್ರೆಸ್ ಗೆದ್ದುಕೊಂಡಿತ್ತು. ಗುಲ್ಬರ್ಗಾ ಉತ್ತರದಲ್ಲಿ ಮುಸ್ಲೀಮರ ಪ್ರಬಲ ನಾಯಕ ಖಮರುಲ್ ಇಸ್ಲಾಂ ಅವರು ಗೆದ್ದಿದ್ದರೆ ಅವರ ಸಮೀಪದ ಪ್ರತಿಸ್ಪರ್ಧಿ ಕೆಜೆಪಿಯ ನಾಸಿರ್ ಹುಸೇನ್ ಈಗ ಜೇಡಿಎಸ್‍ನಿಂದ ಸ್ಪರ್ಧಿಸುತ್ತಿದ್ದಾರೆ. ಹಾಗಾಗಿ, ಅವರು ಗೆದ್ದರೆ ಲಾಭವಾಗುವುದು ಜೆಡಿಎಸ್‍ಗೆ ಹೊರತು ಬಿಜೆಪಿಗಲ್ಲ.

ಅಫಜಲ್‍ಪುರದಲ್ಲಿ ಕಾಂಗ್ರೆಸ್‍ನ ಮಾಲಿಕಯ್ಯ ಗುತ್ತೇದಾರ್ ಗೆದ್ದಿದ್ದರು. ಕೆಜೆಪಿಯಿಂದ ಎಂ.ವೈ. ಪಾಟೀಲ್ ಸ್ಪರ್ಧಿಸಿ 32855 ಮತಗಳಿಸುವ ಮೂಲಕ ಗುತ್ತೇದಾರ್ ಅವರಿಗೆ ಭಾರಿ ಪೈಪೋಟಿ ಒಡ್ಡಿದ್ದರು. ಗುತ್ತೇದಾರ್ ಕಾಂಗ್ರೆಸ್ ನಾಯಕರ ವಿರುದ್ಧ ಬಹಿರಂಗ ಸಮರವನ್ನೇ ಸಾರಿ ಈಗ ಬಿಜೆಪಿ ಸೇರಿಕೊಂಡಿದ್ದಾರೆ. ಎಂ.ವೈ. ಪಾಟೀಲ್ ಈಗ ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಡಲಿದ್ದು ಇಬ್ಬರಿಗೂ ಫಿಫ್ಟಿ-ಫಿಫ್ಟಿ ಚಾನ್ಸ್ ಇದೆ.

ಗುಲ್ಬರ್ಗಾ ಗ್ರಾಮೀಣ ಕ್ಷೇತ್ರದಲ್ಲಿ ಕೆಜೆಪಿಯ ಬಾಬುರಾವ್ ಚೌಹಾಣ್ ಮತ್ತು ಬಿಜೆಪಿಯ ರೇವುನಾಯ್ಕ ಬೆಳಮಗಿ ನಡುವಿನ ಮತಗಳ ವಿಭಜನೆಯಿಂದಾಗಿ ಕಾಂಗ್ರೆಸ್ಸಿನ ಜಿ. ರಾಮಕೃಷ್ಣ ಅವರು ಗೆದ್ದಿದ್ದರು. ಈಗ ಬಿಜೆಪಿ, ಕೆಜೆಪಿ ಒಂದಾದ ಮೇಲೆ ಟಿಕೆಟ್‍ಗಾಗಿ ಮೂವರು ಕಣದಲ್ಲಿದ್ದಾರೆ. ಆದರೆ, ಮಲ್ಲಿಕಾರ್ಜುನ ಖರ್ಗೆ ಮಗ ಪ್ರಿಯಾಂಕ್ ಖರ್ಗೆಯವರು ಈ ಬಾರಿ ಚಿತ್ತಾಪುರ ಕ್ಷೇತ್ರದಲ್ಲಿ ಗೆಲ್ಲುವುದು ಕಷ್ಟ ಎಂಬ ಅಭಿಪ್ರಾಯಗಳು ಕೇಳಿಬರುತ್ತಿದ್ದು ಆ ಕ್ಷೇತ್ರಕ್ಕೆ ಖುದ್ದು ಮಲ್ಲಿಕಾರ್ಜುನ ಖರ್ಗೆಯವರನ್ನೇ ಕಣಕ್ಕಿಳಿಸಿ ಮಗನನ್ನು ಗುಲ್ಬರ್ಗ ಗ್ರಾಮೀಣ ಪ್ರದೇಶಕ್ಕೆ ತರುವ ಯೋಚನೆಯೂ ಪಕ್ಷದಲ್ಲಿದೆ. ಹಾಗೇನಾದರೂ ಆದರೆ ಗುಲ್ಬರ್ಗಾ ಗ್ರಾಮೀಣ ಪ್ರದೇಶದಲ್ಲಿ ಕಾಂಗ್ರೆಸ್ ಗೆಲ್ಲುವ ಸಾಧ್ಯತೆ ಹೆಚ್ಚಿದೆ.

ಯಾದಗಿರಿ ಜಿಲ್ಲೆ ಗುರುಮಿಠಕಲ್ ಮತ್ತು ಯಾದಗಿರಿ ಕ್ಷೇತ್ರಗಳಲ್ಲಿ ಮತವಿಭಜನೆ ಕಾಂಗ್ರೆಸ್ ಗೆಲುವಿಗೆ ಕಾರಣವಾಗಿತ್ತು. ಈ ಎರಡು ಕ್ಷೇತ್ರಗಳಲ್ಲಿ ಇನ್ನೂ ಸ್ಪಷ್ಟ ಚಿತ್ರಣ ಇಲ್ಲ. ಯಾದಗಿರಿಯಲ್ಲಿ ಕಾಂಗ್ರೆಸ್‍ನಿಂದ ಮಾಲಕರೆಡ್ಡಿಯೇ ನಿಂತರೆ ಅವರೇ ಗೆಲ್ಲುವ ಸಾಧ್ಯತೆಯಿದೆ. ಗುರುಮಿಠಕಲ್‍ನಲ್ಲಿ ಬಿಜೆಪಿಗೆ ಪ್ರಬಲ ಅಭ್ಯರ್ಥಿ ಇಲ್ಲದ ಕಾರಣ ಸದ್ಯಕ್ಕೆ ಕಾಂಗ್ರೆಸ್ಸಿನ ಬಾಬುರಾವ್ ಚಿಂಚನಸೂರ್ ಪರವಾಗಿ ವಾತಾವರಣವಿದೆ.

ರಾಯಚೂರು ಜಿಲ್ಲೆಯಲ್ಲಿ ದೇವದುರ್ಗ, ಲಿಂಗಸೂಗೂರು, ಮಸ್ಕಿ ಮತ್ತು ಸಿಂಧನೂರು: ದೇವದುರ್ಗದಲ್ಲಿ ಕಾಂಗ್ರೆಸ್‍ನ ಹಿರಿಯ ಮುಖಂಡ ವೆಂಕಟೇಶ್ ನಾಯಕ್ ಅವರು ತಮ್ಮ ಮೊಮ್ಮಗ ಬಿಜೆಪಿಯ ಶಿವನಗೌಡ ನಾಯಕ್ ವಿರುದ್ಧ ಗೆದ್ದಿದ್ದರು. ವೆಂಕಟೇಶ್ ನಾಯಕ್ ಅವರು ಅಪಘಾತದಲ್ಲಿ ನಿಧನರಾದ ಮೇಲೆ ಉಪಚುನಾವಣೆಯಲ್ಲಿ ಶಿವನಗೌಡ ನಾಯಕ್ ಗೆದ್ದಿದ್ದಾರೆ. ಶಿವನಗೌಡಗೆ ಅವರೇ ಬೆಳೆಸಿದ ವೆಂಕಟೇಶ್ ಪೂಜಾರಿ ಈಗ ದೊಡ್ಡ ಅಡ್ಡಗಾಲಾಗಿದ್ದು ಪೂಜಾರಿಯವರು ಜೆಡಿಎಸ್‍ನಿಂದ ಸ್ಪರ್ಧಿಸುತ್ತಿದ್ದಾರೆ. ಇವರಿಬ್ಬರ ನಡುವಿನ ಸಂಘರ್ಷದ ಲಾಭ ಪಡೆಯುವುದಕ್ಕೆ ಕಾಂಗ್ರೆಸ್‍ಗೆ ಉತ್ತಮ ಅವಕಾಶವಿದೆ.

ಲಿಂಗಸೂಗೂರಿನಲ್ಲಿ ಮತವಿಭಜನೆಯ ಲಾಭ ಪಡೆದಿದ್ದು ಜೆಡಿಎಸ್‍ನ ಮಾನಪ್ಪ ವಜ್ಜಲ್. ಈಗ ಅವರು ಬಿಜೆಪಿ ಸೇರಿಕೊಂಡಿರುವುದು ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ. ಆದರೆ, ಕೆಜೆಪಿಯಿಂದ ಸ್ಪರ್ಧಿಸಿದ್ದ ಎಚ್.ಬಿ. ಮುರಾರಿ ಈಗ ಕಾಂಗ್ರೆಸ್ ಸೇರಿದ್ದಾರೆ. ಬಿಎಸ್‍ಆರ್‍ಸಿಪಿ ಪಕ್ಷದಿಂದ ಸ್ಪರ್ಧಿಸಿದ್ದ ಸಿದ್ದು ಬಂಡಿ ಈಗ ಜೆಡಿಎಸ್ ಸೇರಿಕೊಂಡಿದ್ದಾರೆ. ಹೀಗಾಗಿ, ಪಕ್ಷಗಳ ವಿಲೀನದಿಂದ ಎಲ್ಲಾ ಓಟುಗಳು ಬಿಜೆಪಿಗೆ ಬಂದುಬಿಡುತ್ತವೆ ಎಂಬ ಪರಿಸ್ಥಿತಿ ಇಲ್ಲ.

ಸಿಂಧನೂರಿನಲ್ಲಿ ವಿಭಜನೆಯ ಲಾಭ ಕಾಂಗ್ರೆಸ್ಸಿನ ಹಂಪನಗೌಡ ಬಾದರ್ಲಿ ಪಡೆದಿದ್ದರು. ಆದರೆ, ಬಿಎಸ್‍ಆರ್‍ಸಿಪಿಯಿಂದ ಸ್ಪರ್ಧಿಸಿ ಭಾರಿ ಮತಗಳನ್ನು ಪಡೆಯುವ ಮೂಲಕ ಬಿಜೆಪಿ ಸೋಲುವುದಕ್ಕೆ ನೇರ ಕಾರಣವಾಗಿದ್ದ ಕೆ.ಕರಿಯಪ್ಪ ಈಗ ಕಾಂಗ್ರೆಸ್ಸಿನಲ್ಲಿದ್ದಾರೆ. ಆದ್ದರಿಂದ ಅಲ್ಲಿ ಕೆಜೆಪಿ ಮತಗಳೆಲ್ಲಾ ಬಿಜೆಪಿಗೆ ಬರುತ್ತವೆ ಎಂಬ ತರ್ಕ ಕೆಲಸ ಮಾಡುವುದಿಲ್ಲ. ಮಸ್ಕಿಯಲ್ಲಿ ಬಿಜೆಪಿಯ ವಿಲೀನದ ನಂತರವೂ ಕಾಂಗ್ರೆಸ್ ಎಮ್ಮೆಲ್ಲೆ ಪ್ರತಾಪಗೌಡ ಪಾಟೀಲ್‍ಗೆ ಉತ್ತಮ ಹಿಡಿತವಿದೆ. ಏಕೆಂದರೆ ಬಿಜೆಪಿಯಲ್ಲಿರುವವರೂ ಪ್ರತಾಪಗೌಡರ ಸಂಬಂಧಿಕರೆ.

ಕೊಪ್ಪಳ ಜಿಲ್ಲೆಯ ಕನಕಗಿರಿ ಮತ್ತು ಯಲಬುರ್ಗಾ ಕ್ಷೇತ್ರಗಳಲ್ಲಿ ಲಾಭ ಪಡೆದವರು ಕಾಂಗ್ರೆಸ್ಸಿನ ಶಿವರಾಜ್ ತಂಗಡಗಿ ಮತ್ತು ಬಸವರಾಜ್ ರಾಯರೆಡ್ಡಿ. ಕನಕಗಿರಿಯಲ್ಲಿ ಹಣ ಮತ್ತು ತೋಳ್ಬಲವನ್ನು ಹೊಂದಿರುವ ತಂಗಡಗಿ ಮತ್ತೆ ಗೆಲ್ಲುವುದಕ್ಕೆ ಏನೂ ಅಡ್ಡಿಯಿಲ್ಲ. ಆದರೆ, ಬಸವರಾಜ್ ರಾಯರೆಡ್ಡಿಗೆ ಜಯ ಅಷ್ಟು ಸುಲಭವಿಲ್ಲ. ಕಳೆದ ಬಾರಿ ಅವರ ವಿರುದ್ಧ ಕೆಜೆಪಿಯಿಂದ ಸ್ಪರ್ಧಿಸಿದ್ದ ಹಾಲಪ್ಪ ಆಚಾರ್‍ಗೆ ಈ ಬಾರಿ ಬಿಜೆಪಿ ಟಿಕೆಟ್ ಕೊಟ್ಟರೆ ರಾಯರೆಡ್ಡಿ ಬಹಳ ಕಷ್ಟ ಪಡಬೇಕಾಗುತ್ತದೆ.

ಮತವಿಭಜನೆಯ ಕಾರಣದಿಂದ ಬಳ್ಳಾರಿ ಜಿಲ್ಲೆಯಲ್ಲಿ ಬಿಜೆಪಿ ಹಗರಿಬೊಮ್ಮನಹಳ್ಳಿಯನ್ನು ಕಳೆದುಕೊಂಡಿತ್ತು. ಮತವಿಭಜನೆಯ ಲಾಭ ಪಡೆದು ಗೆದ್ದಿದ್ದ ಜೆಡಿಎಸ್‍ನ ಭೀಮಾ ನಾಯ್ಕ್ ಈಗ ಕಾಂಗ್ರೆಸ್ಸಿನಲ್ಲಿದ್ದಾರೆ. ಹಗರಿಬೊಮ್ಮನಹಳ್ಳಿ ಆರೆಸ್ಸೆಸ್‍ನ ಭದ್ರ ನೆಲೆಯಾಗಿದ್ದರಿಂದ ಅದು ಬಿಜೆಪಿಗೆ ಹೆಚ್ಚುವರಿ ಪ್ರಯೋಜನ ನೀಡಲಿದೆ.

ಸಾರಾಂಶದಲ್ಲಿ ಹೇಳುವುದಾದರೆ, ಕಳೆದ ಬಾರಿ ಹೈದರಾಬಾದ್ ಕರ್ನಾಟಕದಲ್ಲಿ ಬಿಜೆಪಿ, ಕೆಜೆಪಿ, ಮತ್ತು ಬಿಎಸ್‍ಆರ್‍ಸಿಪಿ ಒಟ್ಟಾಗಿ ಗೆದ್ದದ್ದು 10 ಕ್ಷೇತ್ರಗಳು ಅವುಗಳ ಮತವಿಭಜನೆಯಿಂದ ಸೋತದ್ದು 14 ಕ್ಷೇತ್ರಗಳು. ಈಗ ಈ ಮೂರು ಪಕ್ಷಗಳು ಒಂದಾಗಿದ್ದು ತರ್ಕದ ಪ್ರಕಾರ 24 ಕ್ಷೇತ್ರಗಳನ್ನು ಗೆಲ್ಲಬೇಕು. ಆದರೆ ಅದು ಅಸಾಧ್ಯ. ಹೆಚ್ಚೆಂದರೆ 40 ಕ್ಷೇತ್ರಗಳಲ್ಲಿ 12 ಕ್ಷೇತ್ರಗಳನ್ನು ಅದು ಗೆಲ್ಲಬಹುದಷ್ಟೆ.

– ಕೆ.ಬಿ. ಕಟ್ಟೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಉತ್ತರಪತ್ರಿಕೆಯಲ್ಲಿ ‘ಜೈ ಶ್ರೀರಾಮ್‌’ ಬರೆದಿದ್ದ ವಿದ್ಯಾರ್ಥಿಗಳಿಗೆ 50% ಅಂಕ: ಮರುಮೌಲ್ಯಮಾಪನ ಮಾಡಿದಾಗ ಶೂನ್ಯಕ್ಕಿಳಿದ ಅಂಕ

0
ಪರೀಕ್ಷೆಗಳಿಗೆ ಬರೆದಿರುವ ಉತ್ತರಗಳ ಗುಣಮಟ್ಟದ ಆಧಾರದಲ್ಲಿ ಅಂಕಗಳನ್ನು ನೀಡಲಾಗುತ್ತದೆ. ಆದರೆ ಉತ್ತರಪ್ರದೇಶದ  ಜೌನ್‌ಪುರದಲ್ಲಿರುವ ವೀರ್‌ ಬಹದ್ದೂರ್‌ ಸಿಂಗ್‌ ಪೂರ್ವಾಂಚಲ ವಿಶ್ವವಿದ್ಯಾಲಯದಲ್ಲಿನ ಪರೀಕ್ಷೆಯಲ್ಲಿನ ಉತ್ತರ ಪತ್ರಿಕೆಯಲ್ಲಿ ‘ಜೈ ಶ್ರೀರಾಮ್‌’ ಮತ್ತು ಕ್ರಿಕೆಟ್‌ ಆಟಗಾರರ ಹೆಸರುಗಳನ್ನು...