COVID-19 ಸಾಂಕ್ರಾಮಿಕ ರೋಗವು ಭಾರತದ ಆರೋಗ್ಯ ವ್ಯವಸ್ಥೆಯ ಪರಿಸ್ಥಿತಿಯನ್ನು ಬಹಿರಂಗಪಡಿಸಿದೆ. ಇಷ್ಟು ದೊಡ್ಡ ದೇಶ, ಅತಿ ಹೆಚ್ಚಿನ ಮಾನ ಸಂಪನ್ಮೂಲ ಹೊಂದಿರುವ ನಮ್ಮ ದೇಶದಲ್ಲಿ ಆರೋಗ್ಯ ವ್ಯವಸ್ಥೆ ಕಳಪೆ ಸ್ಥಿತಿಯಲ್ಲಿದೆ. ಕೊರೊನಾ ವೈರಸ್ ಉಲ್ಭಣಗೊಂಡಾಗ ಆಳುವ ಸರ್ಕಾರ ಲಾಕ್‌ಡೌನ್ ಹೇರಿತು. ಈ ಸಂದರ್ಭದಲ್ಲಿ ಅದು ಮಾಡಬೇಕಿದ್ದ ಅತಿ ಮುಖ್ಯ ಕೆಲಸವೇನೆಂದರೆ ತನ್ನ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸಿಕೊಳ್ಳುವುದಾಗಿತ್ತು. ಆದರೆ ತಟ್ಟೆ ಜಾಗಟೆ ಬಡಿಯುವ, ದೀಪ ಹಚ್ಚುವ ಟಾಸ್ಕ್‌ಗಳಲ್ಲಿ ಕಾಲ ನೂಕಿದ ಆಳುವ ವರ್ಗ ಈಗ ದಿನೇ ದಿನೇ ಶರವೇಗದಲ್ಲಿ ಹೆಚ್ಚುತ್ತಿರುವ ಪ್ರಕರಣಗಳನ್ನು ನೋಡಿ ಕಂಗೆಟ್ಟಿದೆ.
ಇನ್ನು ದೇಶಾದ್ಯಂತ ರಾಜ್ಯ ಸರ್ಕಾರಗಳು ಕೋವಿಡ್ ವಿರುದ್ಧನ ಹೋರಾಡಲು ಹಾಸಿಗೆಗಳನ್ನು ಹೆಚ್ಚಿಸಲು, ಸಾಂಕ್ರಾಮಿಕ ರೋಗಶಾಸ್ತ್ರಜ್ಞರನ್ನು ಮತ್ತು ಇತರ ತಜ್ಞರನ್ನು ನೇಮಿಸಿಕೊಳ್ಳಲು ಮತ್ತು ವೆಂಟಿಲೇಟರ್‌ಗಳಂತಹ ಜೀವ ಉಳಿಸುವ ಸಾಧನಗಳನ್ನು ಖರೀದಿಸಲು ಪರದಾಡುತ್ತಿವೆ. ಕರ್ನಾಟಕದಲ್ಲಿ ಈ ಸ್ಥಿತಿ ಭಿನ್ನವಾಗಿದ್ದು ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದ ನಡುವೆ ಸ್ಪಷ್ಟ ವಿಭಜನೆ ಕಂಡುಬಂದಿದೆ.
COVID-19 ರೋಗಿಗಳಿಗೆ ಚಿಕಿತ್ಸೆ ನೀಡಲು ಕರ್ನಾಟಕವು ಒಟ್ಟು 22,872 ಹಾಸಿಗೆಗಳನ್ನು ಹೊಂದಿದೆ. ಆದರೆ ಇವುಗಳಲ್ಲಿ ಹೆಚ್ಚಿನವು ದಕ್ಷಿಣ ಕರ್ನಾಟಕದಲ್ಲಿವೆ. ಇದು ದಶಕಗಳ ಅಸಮಾನ ರಾಜಕೀಯ ಪ್ರೋತ್ಸಾಹಕ್ಕೆ ಸಾಕ್ಷಿಯಾಗಿದೆ. “ಉತ್ತರ ಕರ್ನಾಟಕದ ದೊಡ್ಡ ಸಮಸ್ಯೆ ಏನೆಂದರೆ, ದಕ್ಷಿಣದಲ್ಲಿ ಇರುವಂತೆ ತಾಲ್ಲೂಕು ಮಟ್ಟದ ಸರ್ಕಾರಿ ಆಸ್ಪತ್ರೆಗಳು ಸಜ್ಜುಗೊಂಡಿಲ್ಲ. ದಕ್ಷಿಣದ ಜಿಲ್ಲೆಗಳಿಗೆ ಹೋಲಿಸಿದರೆ ಉತ್ತರ ಜಿಲ್ಲೆಗಳಲ್ಲಿ ಕಡಿಮೆ ಆಮ್ಲಜನಕವುಳ್ಳ ಹಾಸಿಗೆಗಳು ಮತ್ತು ಐಸಿಯು ಹಾಸಿಗೆಗಳಿವೆ” ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕ ಓಂಪ್ರಕಾಶ್ ಪಾಟೀಲ್ ಹೇಳಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಪಡೆದ ಮಾಹಿತಿಯ ಪ್ರಕಾರ, ಕರ್ನಾಟಕವು ಪ್ರಸ್ತುತ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ 84,712 ಹಾಸಿಗೆಗಳನ್ನು ಹೊಂದಿದೆ. ಇವುಗಳಲ್ಲಿ, COVID-19 ಪರಿಸ್ಥಿತಿಯನ್ನು ನಿಭಾಯಿಸಲು ಕೇವಲ 27% ಅಂದರೆ 22,872 ಹಾಸಿಗೆಗಳನ್ನು ಮಾತ್ರ ಹಂಚಿಕೆ ಮಾಡಲಾಗಿದೆ. ರಾಜ್ಯದಲ್ಲಿ 18,874 ಪ್ರತ್ಯೇಕ ಹಾಸಿಗೆಗಳು, 2,075 ಐಸಿಯು ಹಾಸಿಗೆಗಳು, 6,702 ಆಮ್ಲಜನಕ ಹಾಸಿಗೆಗಳು ಮತ್ತು 999 ವೆಂಟಿಲೇಟರ್ ಹಾಸಿಗೆಗಳಿವೆ.

ತೀವ್ರ ಅಸಮಾನತೆ
ರಾಜ್ಯದಲ್ಲಿ COVID-19 ಗಾಗಿ ನಿಗದಿಪಡಿಸಿದ ಒಟ್ಟು ಹಾಸಿಗೆಗಳಲ್ಲಿ 62.62% ಹಾಸಿಗೆಗಳು ದಕ್ಷಿಣ ಮತ್ತು ದಕ್ಷಿಣ ಮಧ್ಯ ಕರ್ನಾಟಕದ ಜಿಲ್ಲೆಗಳಲ್ಲಿ ಕೇಂದ್ರೀಕೃತವಾಗಿವೆ. ಆಶ್ಚರ್ಯಕರವಾಗಿ ಬೆಂಗಳೂರು ಒಂದರಲ್ಲೇ COVID-19 ಗಾಗಿ 14.6% ರಷ್ಟು ಹೆಚ್ಚಿನ ಸಂಖ್ಯೆಯ ಹಾಸಿಗೆಗಳಿವೆ.
ಇದಕ್ಕೆ ವ್ಯತಿರಿಕ್ತವಾಗಿ, ಉತ್ತರ ಕರ್ನಾಟಕದ ಎಂಟು ದೂರದ ಜಿಲ್ಲೆಗಳು ರಾಜ್ಯದಲ್ಲಿ ಲಭ್ಯವಿರುವ ಒಟ್ಟು ಹಾಸಿಗೆಗಳಲ್ಲಿ ಕೇವಲ 21.97% ನಷ್ಟು ಪಾಲು ಪಡೆದಿವೆ. ಇದರಲ್ಲಿ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಗದಗ, ವಿಜಯಪುರ ಮತ್ತು ಉತ್ತರ ಕನ್ನಡ ಜಿಲ್ಲೆಗಳು ಸೇರಿವೆ. ಇದಲ್ಲದೆ, ಈ ಹಾಸಿಗೆಗಳಲ್ಲಿ ಹೆಚ್ಚಿನವುಗಳನ್ನು COVID ಆರೈಕೆ ಕೇಂದ್ರಗಳಲ್ಲಿ ಸ್ಥಾಪಿಸಲಾಗಿದೆ. ಜಿಲ್ಲಾಡಳಿತವು ಹಾಸ್ಟೆಲ್‌ಗಳು, ಶಾಲೆಗಳು ಮತ್ತು ಕಾಲೇಜುಗಳನ್ನು ಪ್ರತ್ಯೇಕ ಸೌಲಭ್ಯಗಳಾಗಿ ಪರಿವರ್ತಿಸಿದೆ.
ಆತಂಕಕ್ಕೆ ಕಾರಣಗಳು
ಲಾಕ್‌ಡೌನ್ ಸರಾಗಗೊಳಿಸಿದ ನಂತರ ಉತ್ತರ ಕರ್ನಾಟಕದಲ್ಲಿ ಪ್ರಕರಣಗಳ ಸಂಖ್ಯೆ ದಕ್ಷಿಣಕ್ಕಿಂತ ವೇಗವಾಗಿ ಹೆಚ್ಚುತ್ತಿದೆ. ಏಕೆಂದರ ಇತರ ರಾಜ್ಯಗಳಿಗೆ ಉದ್ಯೋಗಕ್ಕಾಗಿ ವಲಸೆ ಹೋಗಿದ್ದ ಕಾರ್ಮಿಕರು ಈಗ ಹಿಂತಿರುಗುತ್ತಿರುವುದರಿಂದ ಪ್ರಕರಣಗಳು ಹೆಚ್ಚಾಗುತ್ತಿವೆ. ಮುಖ್ಯವಾಗಿ ಮಹಾರಾಷ್ಟ್ರಕ್ಕೆ ವಲಸೆ ಹೋಗಿದ್ದವರು ಹಿಂತಿರುಗುತ್ತಿರುವುದರಿಂದ ಪ್ರಕರಣಗಳು ಹೆಚ್ಚಾಗುತ್ತಿವೆ. ಅಲ್ಲದೇ ಜುಲೈನಿಂದ ಸೆಪ್ಟಂಬರ್‌ವರೆಗೆ ಭಾರತದಲ್ಲಿ ಕೊರೊನಾ ಪ್ರಕರಣಗಳು ತೀವ್ರ ಮಟ್ಟದಲ್ಲಿ ಹೆಚ್ಚಾಗುವ ಸಾಧ್ಯತೆಯಿದೆಯೆಂದು ಹಲವು ವೈದ್ಯಕೀಯ ತಜ್ಞರು ಅಭಿಪ್ರಾಯಪಡುತ್ತಿದ್ದಾರೆ. ಅಂತಹ ಸಮಯದಲ್ಲಿ ಇದೇ ರೀತಿಯ ವೈದ್ಯಕೀಯ ಪರಿಸ್ಥಿತಿ ಇದ್ದಲ್ಲಿ ಮತ್ತಷ್ಟು ಅನಾಹುತಕ್ಕೆ ಎಡೆ ಮಾಡಿಕೊಡುವುದರಲ್ಲಿ ಅನುಮಾನವಿಲ್ಲ.

ಉತ್ತರ ಕನ್ನಡ ಜಿಲ್ಲೆಯು ಗೊತ್ತುಪಡಿಸಿದ ಸಿಒವಿಐಡಿ -19 ಆಸ್ಪತ್ರೆಯಲ್ಲಿ ಕೇವಲ 180 ಹಾಸಿಗೆಗಳನ್ನು ಹೊಂದಿದೆ. ಇನ್ನು ತೀವ್ರ ರೋಗಲಕ್ಷಣಗಳನ್ನು ಹೊಂದಿರುವ ರೋಗಿಗಳಿಗೆ ಜಿಲ್ಲೆಯಾದ್ಯಂತ ಕೇವಲ 15 ವೆಂಟಿಲೇಟರ್‌ಗಳನ್ನು ಹೊಂದಿದೆ. ರೋಗಲಕ್ಷಣಗಳಿಲ್ಲದವರಿಗೆ ನಾವು ಹಾಸ್ಟೆಲ್‌ಗಳಲ್ಲಿ ಚಿಕಿತ್ಸೆ ನೀಡುತ್ತಿದ್ದೇವೆ ಎಂದು ಅಲ್ಲಿನ ಜಿಲ್ಲಾಧಿಕಾರಿಗಳು ಹೇಳಿದ್ದಾರೆ.
ಆದರೆ, ಮೂಲಸೌಕರ್ಯಗಳು ಉತ್ತಮವಾಗಿ ಅಭಿವೃದ್ಧಿ ಹೊಂದಿದ ದಕ್ಷಿಣ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಬೆಂಗಳೂರಿನಲ್ಲಿ ಜಿಲ್ಲಾಡಳಿತಗಳು ಹಾಸ್ಟೆಲ್‌ಗಳನ್ನು ಮತ್ತು ಕಾಲೇಜುಗಳನ್ನು ಪ್ರತ್ಯೇಕ ಸೌಲಭ್ಯಗಳಾಗಿ ಪರಿವರ್ತಿಸಬೇಕಾಗಿಲ್ಲ. ಉದಾಹರಣೆಗೆ, ದಕ್ಷಿಣ ಕನ್ನಡದಲ್ಲಿ ಎಂಟು ವೈದ್ಯಕೀಯ ಕಾಲೇಜುಗಳಿವೆ. ಪ್ರಸಿದ್ದ ವೆನ್ಲಾಕ್ ಆಸ್ಪತ್ರೆ ಇದೆ. ಇಲ್ಲಿ 67 ಖಾಸಗಿ ಆಸ್ಪತ್ರೆಗಳಿದ್ದು, ಅಗತ್ಯವಿದ್ದಲ್ಲಿ ಸರ್ಕಾರವು ಇವನ್ನು ಗೊತ್ತುಪಡಿಸಿದ ಕೋವಿಡ್ ಆಸ್ಪತ್ರೆಗಳು ಅಥವಾ ಆರೋಗ್ಯ ಕೇಂದ್ರಗಳಾಗಿ ಪರಿವರ್ತಿಸಬಹುದು.
ಇನ್ನು ಬೆಂಗಳೂರಿನಲ್ಲಿ ಎಲ್ಲಾ ಆಸ್ಪತ್ರೆಗಳಲ್ಲಿ ಒಟ್ಟು 19,359 ಹಾಸಿಗೆಗಳಿದ್ದು, ಅದರಲ್ಲಿ 3,324 ಹಾಸಿಗೆಗಳನ್ನು COVID-19 ಉದ್ದೇಶಕ್ಕಾಗಿ ಮೀಸಲಿಡಲಾಗಿದೆ. ಸಾಂಕ್ರಾಮಿಕ ಪ್ರಕರಣಗಳು ಹೆಚ್ಚಾದಲ್ಲಿ ಚಿಕಿತ್ಸೆಗಾಗಿ ಬೆಂಗಳೂರಿನಲ್ಲಿ ಹಲವಾರು ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಿವೆ.
ಅಸಮಾನತೆಗೆ ಕಾರಣವೇನು?
ನೇರ ಮತ್ತು ಸ್ಪಷ್ಟ ಉತ್ತರ ಆರೋಗ್ಯ ರಕ್ಷಣೆಗಾಗಿ ಸಾರ್ವಜನಿಕ ಹೂಡಿಕೆಯ ಕೊರತೆಯಾಗಿದೆ. ಇದುವರೆಗೂ ಸರ್ಕಾರಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಅಲ್ಪ ಮೊತ್ತವನ್ನು ಮಾತ್ರ ವಿನಿಯೋಗಿಸಿವೆ. ಇದಲ್ಲದೆ ಈ ಹಣವನ್ನು ಸಹ ಬೆಂಗಳೂರು ನಗರ ಮತ್ತು ದಕ್ಷಿಣ ಜಿಲ್ಲೆಗಳಾದ ಮೈಸೂರು, ತುಮಕುರು, ರಾಮನಗರ, ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿನ ಆರೋಗ್ಯ ಸೌಲಭ್ಯಗಳ ಅಭಿವೃದ್ಧಿಗೆ ಬಳಸಲಾಯಿತು. ಇಲ್ಲಿ ಜನಸಂಖ್ಯೆ ಅಧಿಕವಾಗಿರುವುದು ಒಂದು ಕಾರಣವಾದರೂ ಸಹ ಇದರಲ್ಲಿ ರಾಜಕೀಯ ಇಚ್ಛಾಶಕ್ತಿಗಳು ಕೆಲಸ ಮಾಡಿವೆ.
2020-21ರ ಆರ್ಥಿಕ ವರ್ಷದಲ್ಲಿ ಕರ್ನಾಟಕ ಸರ್ಕಾರವು ಆರೋಗ್ಯಕ್ಕಾಗಿ ಒಟ್ಟು ಬಜೆಟ್‌ನಲ್ಲಿ ಕೇವಲ 4.6%ರಷ್ಟನ್ನು ಮಾತ್ರ ಮೀಸಲಿಟ್ಟಿದೆ. ಈ ಹಂಚಿಕೆ ರಾಷ್ಟ್ರೀಯ ಸರಾಸರಿ 5.3% ಗಿಂತ ಕಡಿಮೆಯಾಗಿದೆ. ಕರ್ನಾಟಕ ಸರ್ಕಾವು ಆರೋಗ್ಯಕ್ಕಾಗಿ 10,296 ಕೋಟಿ ರೂ. ಮತ್ತು ಗ್ರಾಮೀಣ ಪ್ರದೇಶದ ಆರೋಗ್ಯ ಸೇವೆಗಳ ಅಭಿವೃದ್ಧಿಗೆ ಕೇವಲ 1,413 ಕೋಟಿ ರೂ ಹೂಡಿಕೆ ಮಾಡಿದೆ. ಎಲ್ಲಿಯವರೆಗೆ ಸಾರ್ವಜನಿಕ ಆರೋಗ್ಯ ಕ್ಷೇತ್ರದ ಮೇಲೆ ಸರ್ಕಾರ ಹೆಚ್ಚಿನ ಹಣವನ್ನು ಹೂಡಿಕೆ ಮಾಡುವುದಿಲ್ಲವೋ ಅಲ್ಲಿಯವರೆಗೂ ಪರಿಸ್ಥಿತಿ ಸುಧಾರಿಸಲು ಸಾಧ್ಯವಿಲ್ಲ.
ಹೋಗಲಿ ಸಾಕಷ್ಟು ವೈದ್ಯರು ಇದ್ದಾರೆಯೇ?
ಆರೋಗ್ಯ ಇಲಾಖೆಯ ಪ್ರಕಾರ, ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ ವೈದ್ಯರು, ತಜ್ಞರು, ಅರೆವೈದ್ಯಕೀಯ ಸಿಬ್ಬಂದಿ ಮತ್ತು ಲ್ಯಾಬ್ ತಂತ್ರಜ್ಞರು ಸೇರಿದಂತೆ ರಾಜ್ಯಾದ್ಯಂತ 23,000 ಆರೋಗ್ಯ ನೌಕರರಿದ್ದಾರೆ. ಕರ್ನಾಟಕದಲ್ಲಿ ಪ್ರಸ್ತುತ 30% ಆರೋಗ್ಯ ಸಿಬ್ಬಂದಿಗಳ ಕೊರತೆ ಇದೆ.
“ನಾವು ಈಗ ಸುಮಾರು 1,000 ತಜ್ಞ ವೈದ್ಯರು, 400 ಜನರಲ್ ಡ್ಯೂಟಿ ವೈದ್ಯಕೀಯ ಅಧಿಕಾರಿಗಳು ಮತ್ತು ಹೆಚ್ಚಿನ ಅರೆವೈದ್ಯಕೀಯ ಮತ್ತು ಲ್ಯಾಬ್ ತಂತ್ರಜ್ಞರನ್ನು ನೇಮಿಸಿಕೊಳ್ಳಲಿದ್ದೇವೆ.” ಎಂದು ಓಂಪ್ರಕಾಶ್ ಪಾಟೀಲ್ ಹೇಳಿದ್ದಾರೆ.
ಕಲಬುರಗಿ ಮತ್ತು ರಾಯಚೂರಿನಂತಹ ಜಿಲ್ಲೆಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ನಿರ್ಮಿಸಿದರೂ, ಸಾಕಷ್ಟು ಸೌಲಭ್ಯಗಳಿಲ್ಲ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಇದಲ್ಲದೆ ಉತ್ತರ ಜಿಲ್ಲೆಗಳಲ್ಲಿ ನೇಮಕಗೊಂಡ ಆರೋಗ್ಯ ಸಿಬ್ಬಂದಿಗಳ ಸಂಖ್ಯೆ ತೀರಾ ಕಡಿಮೆಯಿದೆ.
“ತಜ್ಞ ವೈದ್ಯರು ಇಲ್ಲಿ ಲಭ್ಯವಿಲ್ಲ. ಈ ಜಿಲ್ಲೆಗಳಲ್ಲಿ ವೈದ್ಯರು, ಶ್ವಾಸಕೋಶಶಾಸ್ತ್ರಜ್ಞರು, ಕಾರ್ಡಿಯೋ-ಥೊರಾಸಿಕ್ ಶಸ್ತ್ರಚಿಕಿತ್ಸಕರು ಮತ್ತು ದಕ್ಷಿಣ ಜಿಲ್ಲೆಗಳನ್ನು ಹೊಂದಿರುವ ಇತರ ತಜ್ಞರು ಇಲ್ಲ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಒಟ್ಟಿನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಸರ್ಕಾರದ ವತಿಯಿಂದ ಕಡಿಮೆ ಅನುದಾನವಿದೆ. ಇರುವ ಅನುದಾನದಲ್ಲಿಯೇ ದಕ್ಷಿಣದ ಜಿಲ್ಲೆಗಳಿಗೆ ಹೆಚ್ಚು ಹಂಚಿಕೆಯಾಗಿದೆ. ಉತ್ತರ ಕರ್ನಾಟಕದ ಜಿಲ್ಲೆಗಳು ವೈದ್ಯರು ಮತ್ತು ಹಾಸಿಗೆಗಳಿಲ್ಲದೇ ಪರದಾಡುತ್ತಿದ್ದಾರೆ. ಈ ಕುರಿತು ಸರ್ಕಾರ ಇಂತಹ ಸಾಂಕ್ರಾಮಿಕ ಪರಿಸ್ಥಿತಿಯಲ್ಲಾದರೂ ಎಚ್ಚೆತ್ತುಕೊಂಡು ಇತ್ತ ಗಮನಹರಿಸಬೇಕಿದೆ.
Courtesy : The News Minute
ಇದನ್ನೂ ಓದಿ: ಕೋಆಪರೇಟೀಕರಣದತ್ತ ಹೊರಳಬೇಕಿದ್ದ ಕೃಷಿ ಕಾರ್ಪೋರೇಟೀಕರಣದತ್ತ: ಈ ವಿನಾಶದ ಪರಿಣಾಮಗಳೇನು?



ಈ ಅಸಮಾನತೆ ಮೊದಲು ತೊಲಗಬೇಕು.