ಕೋಆಪರೇಟೀಕರಣದತ್ತ ಹೊರಳಬೇಕಿದ್ದ ಕೃಷಿ ಕಾರ್ಪೋರೇಟೀಕರಣದತ್ತ: ಈ ವಿನಾಶದ ಪರಿಣಾಮಗಳೇನು?

1

ಬ್ರಿಟಿಷರಿಂದ ಭಾರತ ಸ್ವತಂತ್ರಗೊಂಡಾಗ ದೇಶದ ಬಹುತೇಕ ಭೂಮಿ ಮೇಲ್ಜಾತಿ ಮತ್ತು ಬಲಾಢ್ಯ ಜಾತಿಗಳ ಭೂಮಾಲೀಕರ ವಶದಲ್ಲಿತ್ತು. ಹಿಂದುಳಿದ, ದಲಿತ, ಅಸ್ಪೃಶ್ಯ ಮತ್ತು ಆದಿವಾಸಿ ಸಮುದಾಯಗಳಿಗೆ ಸ್ವಂತದ ಭೂಮಿ ಇರಲಿಲ್ಲ. 70ರ ದಶಕದಲ್ಲಿ (ದೇವರಾಜ ಅರಸರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ) ಜಾರಿಗೆ ಬಂದ ಭೂ ಸುಧಾರಣಾ ಕಾಯ್ದೆ ಕರ್ನಾಟಕದ ಭೂ ಸಂಬಂಧಗಳಲ್ಲಿ ಜನಪರ ಚಲನೆಯನ್ನು ತಂದುಕೊಟ್ಟಿತು. ದೊಡ್ಡವರಿಂದ ಸಣ್ಣವರಿಗೆ, ಬಲಾಢ್ಯ ಜಾತಿಗಳಿಂದ ದಮನಿತ ಜಾತಿಗಳಿಗೆ ಒಂದಷ್ಟು ಭೂಮಿ ಹಸ್ತಾಂತರವಾಯಿತು. ಮೇಲ್ಜಾತಿ ಭೂ ಮಾಲೀಕತ್ವ ದುರ್ಬಲಗೊಳ್ಳುವಲ್ಲಿ, ದಮನಿತ – ಸಮುದಾಯಗಳಲ್ಲಿ ಸ್ವಾಯತ್ತತೆ ಬೆಳೆಯುವಲ್ಲಿ ಈ ಭೂ ಸುಧಾರಣೆ ಸಕಾರಾತ್ಮಕ ಕೊಡುಗೆ ನೀಡಿತು. ಗ್ರಾಮೀಣ ಭೂ ಸಂಬಂಧಗಳನ್ನು ಪೂರ್ತಿಯಾಗಲ್ಲದಿದ್ದರೂ ಒಂದು ಮಟ್ಟಕ್ಕೆ ಪ್ರಜಾತಂತ್ರೀಕರಣಗೊಳಿಸಿತು ಎಂದು ಹೇಳಬಹುದು. ಭೂ ಸುಧಾರಣಾ ತಿದ್ದುಪಡಿಯ ಹೆಸರಿನಲ್ಲಿ ತರಲಾಗುತ್ತಿರುವ ಭೂ ವಿನಾಶ ಕಾಯ್ದೆಯ ಮೂಲಕ ಕರ್ನಾಟಕದ ಬಿಜೆಪಿ ಸರ್ಕಾರವು ಮೇಲ್ಕಂಡ ಅರಸೋತ್ತರ ಕೃಷಿ ಸಂಬಂಧಗಳಿಗೆ ಇತಿಶ್ರೀ ಹಾಡಿದೆ.

ಭೂ ಸುಧಾರಣೆಗಳು ಕೇವಲ ದೇವರಾಜು ಅರಸುರವರ ಔದಾರ್ಯ ಗುಣದಿಂದ ಬಂದದ್ದಲ್ಲ. ಗೇಣಿದಾರ ರೈತರ ಹಾಗೂ ಭೂಹೀನ ಕೃಷಿಕೂಲಿಗಳ ದಿಟ್ಟ ಹೋರಾಟಗಳ ಹಿನ್ನೆಲೆಯಲ್ಲಿ ಬಂದದ್ದು. ಗೇಣಿಯ ವಿರುದ್ಧ ಜನರಲ್ಲಿ ಆಕ್ರೋಶವಿತ್ತು, ಭೂಮಿಯ ಬಗ್ಗೆ ಹಪಹಪಿಕೆ ಇತ್ತು. ಮೇಲ್ಜಾತಿ ಮತ್ತು ದೊಡ್ಡ ಹಿಡುವಳಿದಾರರನ್ನು ಪ್ರತಿನಿಧಿಸುತ್ತಿದ್ದ ನಿಜಲಿಂಗಪ್ಪನವರನ್ನು ಹಿಂದಿಕ್ಕಿ ರಾಜಕೀಯ ಮುನ್ನಡೆ ಸಾಧಿಸಲು ದಲಿತ, ಹಿಂದುಳಿದ ಜಾತಿಗಳನ್ನು ಒಟ್ಟುಗೂಡಿಸಿಕೊಳ್ಳುವ ಅಗತ್ಯವೂ ಅರಸು ಅವರಿಗಿತ್ತು. ಅಲ್ಲದೆ ಅವರಿಗೆ ಸಮಾಜವಾದದ ಚಿಂತನೆಗಳೂ ಇದ್ದವು. ಎಲ್ಲವೂ ಸೇರಿ ಭೂ ಸುಧಾರಣಾ ಕಾಯ್ದೆ ಜಾರಿಗೆ ಬಂದಿತು. ಅಂದಿನ ಆಕಾಂಕ್ಷೆಗಳನ್ನು ಕಾಯ್ದೆಯಾಗಿ ರೂಪಿಸಿದವರು ಕಮ್ಯುನಿಸ್ಟ್ ಚಿಂತನೆಯ ಕಕ್ಕಿಲ್ಲಾಯರವರು. ಗೇಣಿಯ ರದ್ದತಿ, ಭೂ [ಒಡೆತನ] ಮಿತಿ, ಹೆಚ್ಚುವರಿಯ ಹಂಚಿಕೆ ಇದರ ಮೂರು ಆಯಾಮಗಳಾಗಿದ್ದವು. ಗೇಣಿ ದೊಡ್ಡ ಮಟ್ಟಕ್ಕೆ ರದ್ದಾಗಿ ಗೇಣಿದಾರರು ಸ್ವತಂತ್ರ ರೈತರಾದರು. ಭೂ ಒಡೆಯರು ತಮ್ಮ ಮನೆಯ ನಾಯಿ ನರಿ ಹೆಸರಿಗೂ ದಾಖಲಾತಿಗಳನ್ನು ಮಾಡಿಸಿ ತಮ್ಮ ಒಡೆತನದ ಭೂಮಿಗಳನ್ನು ಭೂ ಮಿತಿಯೊಳಗೆ ಬರುವಂತೆ ದಾಖಲೆಗಳಲ್ಲಿ ವಿಭಜಿಸಿಕೊಂಡರು. ಆದರೂ ಒಂದಷ್ಟು ಹೆಚ್ಚುವರಿ ಭೂಮಿ ಶೇಖರಣೆಯಾಗಿ ಹಂಚಿಕೆಯಾಯಿತು.

ಗೇಣಿ ರದ್ದತಿಯಿಂದ ಭೂಮಿ ಸಿಕ್ಕಿದ್ದು ಹೆಚ್ಚಾಗಿ ಒಕ್ಕಲಿಗ, ಕುರುಬ, ನಾಯಕ ಇತ್ಯಾದಿ ಆಯಾ ಭಾಗದ ಬಲಾಢ್ಯ ಜಾತಿಗಳಿಗೆ [ಏಕೆಂದರೆ ಅವರೇ ಗೇಣಿದಾರರಾಗಿದ್ದರು ಮತ್ತು ಭೂ ಮಾಲೀಕರನ್ನು ಎದುರಿಸುವ ಸಂಖ್ಯಾ ಬಲವೂ ತಕ್ಕಮಟ್ಟಿಗೆ ಅವರಿಗಿತ್ತು]. ಗೇಣಿದಾರರೂ ಆಗಿರದೆ ಜೀತ ಅಥವ ಕೂಲಿ ಮಾಡಿ ಬದುಕಿದ್ದ ದಲಿತ ಮತ್ತು ಅಸ್ಪೃಶ್ಯ ಸಮುದಾಯಗಳಿಗೆ ಗೇಣಿ ರದ್ದತಿಯಿಂದ ಭೂಮಿ ದಕ್ಕಲಿಲ್ಲ. ಹೆಚ್ಚುವರಿಯ ಮರು ಹಂಚಿಕೆಯಿಂದಾಗಿ ಒಂದಷ್ಟು ದಮನಿತರಿಗೆ ಚೂರುಪಾರು ಭೂಮಿಯ ಒಡೆಯರಾಗುವ ಅವಕಾಶವಂತೂ ಲಭಿಸಿತು. ಈ ಸಮುದಾಯಗಳಿಗೆ ಹೆಚ್ಚಾಗಿ ಸಿಕ್ಕಿದ್ದು ಸರ್ಕಾರಿ ಕಂದಾಯ ಮತ್ತು ಅರಣ್ಯ ಭೂಮಿಗಳೆ. ಆದರೆ ಸರ್ಕಾರಗಳು ಅವಕ್ಕೂ ಹಕ್ಕುಪತ್ರಗಳನ್ನು ನೀಡದೆ ಬಗರ್ ಹುಕುಂ ರೈತರನ್ನಾಗಿ ಉಳಿಸಿಕೊಂಡಿದ್ದಾರೆ. ಇಂದಿಗೂ ಅವರು ತುಂಡು ಭೂಮಿಯ ಮೇಲಿನ ಒಡೆತನಕ್ಕಾಗಿ, ಕಾಲು ಚಾಚುವಷ್ಟು ಮನೆಯ ಜಾಗದ ಹಕ್ಕುಪತ್ರಕ್ಕಾಗಿ ಕಛೇರಿಗಳಿಗೆ ಅಲಿಯುತ್ತಲೇ ಇದ್ದಾರೆ. ಹಕ್ಕುಪತ್ರ ಕಛೇರಿಯ ಸೂರಿನಲ್ಲೇ ನೇತಾಡುತ್ತಿದೆ. ಕಳೆದ ಮೂರು ವರ್ಷಗಳಿಂದ ಸ್ವಾತಂತ್ರ್ಯ ಸೇನಾನಿ ದೊರೆಸ್ವಾಮಿಯವರ ಜೊತೆಗೂಡಿ ನಾವು ನಡೆಸಿದ ಭೂಮಿ ವಸತಿ ಹೋರಾಟದಲ್ಲಿ ಪಾಲ್ಗೊಳ್ಳುತ್ತಿದ್ದ ಶೇ.90 ರಷ್ಟು ಜನರು ದಲಿತ, ಆದಿವಾಸಿ, ಅಲೆಮಾರಿ ಮತ್ತು ಅತಿ ಹಿಂದುಳಿದ ಜಾತಿ ಹಿನ್ನೆಲೆಯವರೇ ಆಗಿದ್ದರು.

ಈ ಮಿತಿಗಳು ಇವೆಯಾದರೂ ಭೂ ಸುಧಾರಣಾ ಕಾಯ್ದೆ ಗ್ರಾಮೀಣ ಭೂ ಸಂಬಂಧಗಳಲ್ಲಿ ಗಮನಾರ್ಹ ಬದಲಾವಣೆಗಳಿಗೆ ದಾರಿ ಮಾಡಿದ್ದಂತೂ ಹೌದು. ಭೂ ಸುಧಾರಣಾ ಕಾಯ್ದೆ ಗೇಣಿ ರದ್ದು ಮಾಡಿ, ದೊಡ್ಡ ಹಿಡುವಳಿಗಳ ಮೇಲೆ ನಿಯಂತ್ರಣ ಹೇರಿ ಹೆಚ್ಚುವರಿ ಭೂಮಿಯ ಹಂಚಿಕೆಗೆ ದಾರಿ ಮಾಡಿದ್ದು ಮಾತ್ರವಲ್ಲ ದೊಡ್ಡ ಭೂಮಾಲೀಕರ ಕೈಯಲ್ಲಿ ಭೂಮಿ ಮತ್ತೆ ಮರು ಸಾಂದ್ರೀಕರಣ ಆಗದಂತೆ ತಡೆಯುವ ಕ್ರಮಗಳನ್ನೂ ಹೊಂದಿತ್ತು.

ಆದರೆ ಜಾಗತೀಕರಣದ ನಂತರ ಹಂತಹಂತವಾಗಿ ಹಳ್ಳಿಗಳಲ್ಲಿ ಗ್ರಾಮೀಣೇತರ ಹಿತಾಸಕ್ತಿಯ ಒಳತೂರುವಿಕೆಗೆ ಅವಕಾಶಗಳನ್ನು ಒದಗಿಸಿಕೊಡಲಾಗುತ್ತಾ ಬರಲಾಯಿತು. ಮೊದಲಿಗೆ ವಾರ್ಷಿಕ 2 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವವರು ಜೀವನೋಪಾಯಕ್ಕಾಗಿ ಕೃಷಿ ಭೂಮಿ ಖರೀದಿಸಬಹುದು ಎಂಬ ತಿದ್ದುಪಡಿ ತಂದರು. ನಂತರ ಅದನ್ನು ವಾರ್ಷಿಕ 10 ಲಕ್ಷ ಹೊಂದಿದವರು ಖರೀದಿಸಬಹುದು ಅಂತ ಮಾಡಿದರು. ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗಲೇ ಅದನ್ನು ವಾರ್ಷಿಕ 25 ಲಕ್ಷ ಆದಾಯ ಹೊಂದಿರುವವರು ಖರೀದಿಸಬಹುದು ಎಂದು ತಿದ್ದುಪಡಿ ಮಾಡಲಾಯಿತು. ಈಗ ಎಲ್ಲಾ ಶರತ್ತುಗಳನ್ನೂ ಕಿತ್ತೊಗೆದು ಯಾರು ಬೇಕಾದರೂ ಭೂಮಿ ಖರೀದಿಸಲು ಮುಕ್ತಗೊಳಿಸಿದ್ದಾರೆ. ಅಷ್ಟು ಮಾತ್ರವಲ್ಲ ೫೪ ಎಕರೆಗಿಂತ ಹೆಚ್ಚು ಖರೀದಿಗೆ ಅವಕಾಶ ಇರಲಿಲ್ಲ ಅದನ್ನು 108 ಎಕರೆಗೆ ಮಾಡಲಾಗಿದೆ.ಇ॒ದನ್ನೂ ಸಹ ಕಿತ್ತು ಯಾರು ಬೇಕಾದರೂ ಖರೀದಿಸಬಹುದು, ಎಷ್ಟು ಬೇಕಾದರೂ ಖರೀದಿಸಬಹುದು ಎಂಬ ಪರಿಸ್ಥಿತಿಗೆ ತಂದು ನಿಲ್ಲಿಸುತ್ತಾರೆ. ಇದರ ಪರಿಣಾಮವೇನು? ಎಂದು ಚರ್ಚಿಸುವ ಮೊದಲು ಈಗ ಹಾಲಿ ಹಳ್ಳಿಗಳಲ್ಲಿ ಇರುವ ಭೂ ಸಂಬಂಧಗಳ ಕಡೆ ಒಮ್ಮೆ ಕಣ್ಣಾಡಿಸೋಣ.

ಭೂ ಸಂಬಂಧಗಳ ಪ್ರಸ್ತುತ ಚಿತ್ರಣವೇನು?

ರಾಜ್ಯದಲ್ಲಿ ಒಟ್ಟು ಇರುವ 78 ಲಕ್ಷ ಹಿಡುವಳಿಗಳ ಪೈಕಿ 38 ಲಕ್ಷ ಹಿಡುವಳಿಗಳು ಒಂದು ಎಕರೆಗೂ ಕಡಿಮೆ ಭೂಮಿ ಹೊಂದಿರುವ ಅತಿ ಸಣ್ಣರದಾಗಿವೆ. 21 ಲಕ್ಷ ಹಿಡುವಳಿಗಳು ಸರಾಸರಿ 3 ಎಕರೆ ಹೊಂದಿರುವ ಸಣ್ಣ ರೈತರದಾಗಿವೆ. 18 ಲಕ್ಷ ಮಧ್ಯಮ ಹಿಡುವಳಿಗಳಿವೆ. 70 ಸಾವಿರ ದೊಡ್ಡ ಹಿಡುವಳಿಗಳಿವೆ. ಈ ದೊಡ್ಡ ಹಿಡುವಳಿಕಾರರು ಹೆಚ್ಚಾಗಿ ಆಯಾ ಭಾಗದ ಬಲಾಢ್ಯ ಜಾತಿಗಳದವರದಾಗಿವೆ. ದಕ್ಷಿಣದಲ್ಲಿ ಒಕ್ಕಲಿಗರು, ಕೊಡಗಿನಲ್ಲಿ ಕೊಡವರು, ಕರಾವಳಿಯಲ್ಲಿ ಭಂಟರು, ಮಲೆನಾಡಿನಲ್ಲಿ ಒಕ್ಕಲಿಗರು-ಬ್ರಾಹ್ಮಣರು, ಮಧ್ಯ ಕರ್ನಾಟಕದಲ್ಲಿ ಲಿಂಗಾಯತರು-ನಾಯಕರು, ಉತ್ತರ ಕರ್ನಾಟಕದಲ್ಲಿ ಲಿಂಗಾಯತರು ಕುರುಬರು, ಆಂಧ್ರಕ್ಕೆ ಹೊಂದಿಕೊಂಡಿರುವ ಜಿಲ್ಲೆಗಳಲ್ಲಿ ರೆಡ್ಡಿಗಳು, ಮಹಾರಾಷ್ಟ್ರಕ್ಕೆ ಹೊಂದಿಕೊಂಡ ಜಿಲ್ಲೆಗಳಲ್ಲಿ ಮರಾಠರು. ಮಲೆನಾಡನ್ನು ಹೊರತುಪಡಿಸಿ ಮಿಕ್ಕೆಲ್ಲಾ ಕಡೆ ಬ್ರಾಹ್ಮಣರು ಹಳ್ಳಿಗಳನ್ನು ತೊರೆದು ನಗರವಾಸಿಗಳಾಗಿದ್ದಾರೆ. ದಲಿತರು, ಆದಿವಾಸಿಗಳು ಬಹುತೇಕ ಭೂ ಹೀನರು, ಅತಿ ಸಣ್ಣ ಮತ್ತು ಸಣ್ಣ ರೈತರಾಗಿದ್ದಾರೆ.

ಪ್ರಸ್ತುತ ಈ ಭೂ ಸಂಬಂಧಗಳ ಕೇಂದ್ರ ಅಂಶವೆಂದರೆ 78 ಲಕ್ಷ ಹಿಡುವಳಿಗಳ ಪೈಕಿ ಸರಿಸುಮಾರು 60 ಲಕ್ಷ ಹಿಡುವಳಿಗಳು ಅತಿಸಣ್ಣ ಅಥವ ಸಣ್ಣ ಹಿಡುವಳಿಗಳಾಗಿವೆ. ಇದರಲ್ಲಿ ಹೆಚ್ಚಿನವರು ಅತಿ ಹಿಂದುಳಿದ, ದಲಿತ ಮತ್ತು ಆದಿವಾಸಿ ಸಮುದಾಯಗಳಾಗಿದ್ದಾರೆ. ದೊಡ್ಡ ಹಿಡುವಳಿಗಳು ಹೆಚ್ಚಾಗಿ ಆಯಾ ಭಾಗದ ಬಲಾಢ್ಯ ಜಾತಿಗಳಿಗೆ ಸೇರಿವೆ ಮತ್ತು ಇವರು ಮೊದಲ ರೀತಿಯ ಭೂಮಾಲೀಕರಾಗಿ ಉಳಿದುಕೊಂಡಿಲ್ಲ. ಇವರಲ್ಲಿನ ಬಹುತೇಕರು ರಾಜಕೀಯ ಪಕ್ಷಗಳ ಸ್ಥಳೀಯ ಮುಖಂಡರುಗಳಾಗಿದ್ದಾರೆ, ಗೊಬ್ಬರ, ಸರಾಯಿ, ಮೆಡಿಕಲ್, ಮಂಡಿ ಮುಂತಾದ ವ್ಯಾಪಾರಿಗಳಾಗಿದ್ದಾರೆ ಮತ್ತು ವಿವಿಧ ರೀತಿಯ ಗುತ್ತೇದಾರರಾಗಿದ್ದಾರೆ. ಅಂದರೆ ರಾಜಕೀಯ ಪಕ್ಷಗಳ, ಕಾರ್ಪೋರೇಟ್ ಕಂಪನಿಗಳ ಮತ್ತು ಸರ್ಕಾರದ ಏಜೆಂಟ್ ವರ್ಗವಾಗಿ ಕೆಲಸ ಮಾಡುತ್ತಿದೆ. ಕೃಷಿಯೇತರ ಆದಾಯವನ್ನು ಹೆಚ್ಚಾಗಿ ಹೊಂದಿದ್ದಾರೆ. ಇವರಿಗೆ ಭೂಮಿ ಉಪ ಆದಾಯವಾಗಿದೆ. ಅದು ಅವರ ಆರ್ಥಿಕ ಮೂಲವಾಗಿರುವುದಕ್ಕಿಂತ ಹೆಚ್ಚಾಗಿ ಸಾಮಾಜಿಕ ಅಂತಸ್ತಿನ ಸಾಧನವಾಗಿದೆ.

ಕೃಷಿ ಬಿಕ್ಕಟ್ಟಿನಿಂದ ಇಂದು ಹೈರಾಣಾಗಿರುವುದು ಮಧ್ಯಮ, ಸಣ್ಣ ಹಾಗೂ ಅತಿಸಣ್ಣ ರೈತರು. ಹಿಡುವಳಿಗಳು ಚಿಕ್ಕದಾದಷ್ಟೂ ಉಳುಮೆ ವೆಚ್ಚ ಹೆಚ್ಚಾಗುತ್ತದೆ, ಇಳುವರಿ ಕಡಿಮೆಯಾಗುತ್ತದೆ. ಇವರ ಬಳಿ ಸಾಗಾಣಿಕೆ ಸಾಧನಗಳೂ ಇಲ್ಲ, ಬೆಲೆ ಬರುವ ತನಕ ಬೆಳೆಯನ್ನು ಕೂಡಿಡುವ ಸಾಮರ್ಥ್ಯವೂ ಇಲ್ಲ. ಇವರಿಗೆ ಸಾಲಗಳೂ ಹುಟ್ಟುವುದಿಲ್ಲ. ಕೊನೆಗೆ ಬೆಳೆದ ಬೆಳೆಗೂ ಜೂಜುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗುವುದಿಲ್ಲ. ಸಾರಾಂಶದಲ್ಲಿ ತುಂಡು ಭೂಮಿಯಲ್ಲಿ ಬದುಕು ಕಟ್ಟಿಕೊಳ್ಳಲು ಆಗುತ್ತಿಲ್ಲ. ಇರುವ ಭೂಮಿ ಕಳೆದುಕೊಳ್ಳಲೂ ಮನಸ್ಸಿಲ್ಲ. ಮಾರೋಣ ಎಂದರೂ ದೊಡ್ಡ ಬೆಲೆ ಕೊಟ್ಟು ಭೂಮಿ ಖರೀದಿಸುವವರೂ ಇಲ್ಲ. ಈ ಸ್ಥಿತಿಯಲ್ಲಿ ಇವರು ಸಿಲುಕಿಕೊಂಡಿದ್ದರು. ಹಾಗಾಗಿ ಮನೆಯಲ್ಲಿ ಕೆಲವರು ಅಥವಾ ಮನೆಯಲ್ಲಿ ಎಲ್ಲರೂ ಒಂದು ಕಾಲಾವಧಿಯವರೆಗೆ ನಗರಕ್ಕೆ ವಲಸೆ ಹೋಗಿ ಹಳ್ಳಿ-ಪಟ್ಟಣ ಎರಡೂ ಕಡೆ ದುಡಿಯುತ್ತಾ ಬದುಕು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದರು. ಕೊರೋನಾ ಹೊಡೆತ ನಗರದಿಂದ ಅವರನ್ನು ಮತ್ತೆ ಹಳ್ಳಿಗೆ ತಳ್ಳಿದೆ ಭವಿಷ್ಯ ಅತಂತ್ರದಲ್ಲಿದೆ.

ತತ್ತರಿಸಿರುವ ರೈತಾಪಿಗೆ ವಿಶ್ವಾಸ ನೀಡಿ, ಇಡೀ ಗ್ರಾಮ ಪುನಶ್ಚೇತನಕ್ಕೆ ಯೋಜನೆ ರೂಪಿಸಿ, ತುಂಡು ಭೂಮಿಗಳನ್ನು ಕೋಆಪರೇಟಿವ್ [ಸಹಕಾರಿ] ನೀತಿಯನ್ವಯ ಜೊತೆಗೂಡಿಸಿ, ಈ ಸಹಕಾರಿಗಳಿಗೆ ಸರ್ಕಾರ ಬೆಂಬಲ ನೀಡಿ, ರೈತರ ಬೆಳೆಗೆ ಸ್ಥಿರ ಮತ್ತು ನ್ಯಾಯಸಮ್ಮತ ಬೆಲೆಯನ್ನು ನಿಗದಿ ಮಾಡಿ, ರೈತಾಪಿಯ ಜೊತೆ ನಿಲ್ಲಬೇಕಿದ್ದ ಸರ್ಕಾರ, ಅವರ ಅತಂತ್ರತೆಯನ್ನು ಬಳಸಿಕೊಂಡು ಅವರನ್ನು ಶಾಶ್ವತವಾಗಿ ಭೂ ವಂಚಿತರನ್ನಾಗಿ ಮಾಡಲು ಮತ್ತು ಗ್ರಾಮದಿಂದ ಹೊರದಬ್ಬಲು ಸಂಚು ರೂಪಿಸಿದೆ. ಆ ಸಂಚಿನ ಭಾಗವೇ ಈಗ ಕೃಷಿ ಸಂಬಂಧಿತ ನೀತಿಗಳಲ್ಲಿ ತರುತ್ತಿರುವ ಬದಲಾವಣೆಗಳು. 1. ಹೊಸ ಗೇಣಿ ನೀತಿ. 2. ಎಪಿಎಂಸಿ ನೀತಿ. 3. ವಿದ್ಯುತ್ ನೀತಿ. 4. ಭೂ ಸುಧಾರಣಾ ನೀತಿ. ಈ ನಾಲ್ಕೂ ಸಹ ಒಂದೇ ಉದ್ದೇಶ ಹೊಂದಿರುವ ಪರಸ್ಪರ ಅಂತರ್ ಸಂಬಂಧ ಹೊಂದಿರುವ ನಾಲ್ಕು ನೀತಿಗಳಾಗಿವೆ.

ಈ ವಿನಾಶೀಕರಣದ ಪರಿಣಾಮವೇನು?

1. ಒಂದೆಡೆ, ಈಗಾಗಲೇ ಕೃಷಿ ಬಿಕ್ಕಟ್ಟಿನಿಂದ ಮತ್ತು ಮೂರ್ಖ ರೀತಿಯಲ್ಲಿ ನಡೆದ ಕೊರೋನಾ ಲಾಕ್‌ಡೌನಿನಿಂದ ಹಣದ ಮುಗ್ಗಟ್ಟಿನಲ್ಲಿರುವ ಬಡ ಜನರ ಸಂಕಷ್ಟಗಳು ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗುತ್ತವೆ. ಎಪಿಎಂಸಿ ರದ್ದತಿಯಿಂದಾಗಿ ಬೆಂಬಲ ಬೆಲೆಯೂ ಇಲ್ಲವಾಗುತ್ತದೆ. ವಿದ್ಯುತ್ ನೀತಿಯಿಂದಾಗಿ ವಿದ್ಯುತ್ ರಿಯಾಯಿತಿಯೂ ಇಲ್ಲವಾಗುತ್ತದೆ. ಕೃಷಿ ಬಡವರಿಗೆ ಇನ್ನಷ್ಟು ದುಸ್ತರವಾಗಿ ಭೂಮಿಗಳನ್ನು ಮಾರಿಕೊಳ್ಳಬೇಕಾದ ಒತ್ತಡಕ್ಕೆ ಜನ ಗುರಿಯಾಗುತ್ತಾರೆ.

2. ಇನ್ನೊಂದೆಡೆ, ಕೃಷಿ ಭೂಮಿಗೆ ಖರೀದಿದಾರರು ಹೆಚ್ಚಾಗುತ್ತಾರೆ. ಇದರಿಂದ ಭೂಮಿಯ ಬೆಲೆ ಒಂದಷ್ಟು ಹೆಚ್ಚಾಗುತ್ತದೆ. ಭೂಮಿಯ ಬೆಲೆಗಳು ಹೆಚ್ಚಾದೊಡನೆ ಮಾರಾಟದ ಟ್ರೆಂಡ್ ಹಳ್ಳಿಹಳ್ಳಿಗಳಲ್ಲಿ ಹೆಚ್ಚಾಗುತ್ತದೆ. ಆಯಕಟ್ಟಿನ ಮತ್ತು ಫಲವತ್ತಾದ ಭೂಮಿಗಳನ್ನು ಕೈಗಾರಿಕೆಗಳು ಹಾಗೂ ಆಗ್ರೋ ಕಂಪನಿಗಳು ಖರೀದಿ ಮಾಡಲು ಪ್ರಾರಂಭಿಸುತ್ತವೆ. ಕಾರ್ಪೋರೇಟ್ ಕಂಪನಿಗಳು ಮಾತ್ರವಲ್ಲದೆ ಈಗಾಗಲೇ ನಾವು ನೋಡಿದಂತೆ ಹಳ್ಳಿಗಳಲ್ಲಿ ಇರುವ ಪ್ರತಿಗಾಮಿ ಏಜೆಂಟ್ ವರ್ಗ ಜನರ ಭೂಮಿಗಳನ್ನು ಕೊಳ್ಳತೊಡಗುತ್ತಾರೆ ಅಥವ ಅದರ ಮಾರಾಟದ ದಲ್ಲಾಳಿಗಳಾಗಿ ಕೆಲಸ ಮಾಡುತ್ತಾರೆ.

3. ಹಳ್ಳಿಗಳಲ್ಲಿರುವ ಈ ದಲ್ಲಾಳಿ ವರ್ಗದ ಮೂಲಕ ಆಗ್ರೋ ಕಂಪನಿಗಳು ಹೊಸ ರೀತಿಯ ಗೇಣಿ ಕೃಷಿಯನ್ನು ಪ್ರಾರಂಭಿಸುತ್ತಾರೆ. ಸಣ್ಣ, ಮಧ್ಯಮ ರೈತರ ಭೂಮಿಯನ್ನು ಹಳ್ಳಿಯ ಈ ದಲ್ಲಾಳಿ ವರ್ಗಗಳು ಖರೀದಿ ಮಾಡಿ ಆಗ್ರೋ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಳ್ಳುತ್ತವೆ. ಅಥವಾ ತಾವೇ ಮುಂದೆ ನಿಂತು ಸಣ್ಣ ರೈತರ ಭೂಮಿಗಳನ್ನು ಆಗ್ರೋ ಕಂಪನಿಗೆ ಗೇಣಿ ನೀಡುವಂತೆ ಮಾಡುತ್ತಾರೆ.

4. ಒಟ್ಟಿನಲ್ಲಿ ನೋಡನೋಡುತ್ತಿದ್ದಂತೆ ಮುಂದಿನ ಹತ್ತು ವರ್ಷಗಳಲ್ಲಿ ಕೃಷಿಯೇತರ ಉದ್ದೇಶಗಳಿಗೆ ಮಾರಾಟವಾಗುತ್ತದೆ. ಅಲ್ಲದೆ ಕೃಷಿಯಲ್ಲಿ ಆಗ್ರೋ ಕಂಪನಿಗಳ ಹಿಡಿತ ಹೆಚ್ಚಾಗುತ್ತದೆ. ಇವರು ರೈತರ ಭೂಮಿ ಖರೀದಿಸಿ ನೇರ ಕೃಷಿ ಮಾಡುತ್ತಾರೆ ಅಥವ ಗೇಣಿ ಒಪ್ಪಂದ ಮಾಡಿಕೊಂಡು ಕೃಷಿಗಿಳಿಯುತ್ತಾರೆ.

5. ಇವರ ಕೃಷಿ ಬೇಟೆಯ ಜೊತೆಜೊತೆಗೇ ನರಿಗಳಂತೆ ಸಾಗುವ ಹಳ್ಳಿಗಳ ದೊಡ್ಡ ಹಿಡುವಳಿದಾರ ದಲ್ಲಾಳಿ ವರ್ಗವೂ ಬೆಳೆಯತೊಡಗುತ್ತದೆ. ಹಳ್ಳಿಗಳು ಹೊಸ ರೀತಿಯ ಜಮಿನ್ದಾರಿಗೆ ಒಳಗಾಗುತ್ತವೆ. ಈ ವರ್ಗ ಹೆಚ್ಚಾಗಿ ಆಯಾ ಭಾಗದ ಬಲಾಢ್ಯ ಜಾತಿಗಳಿಗೆ ಸೇರಿದ್ದಾಗಿದೆ ಎಂಬುದನ್ನು ಈಗಾಗಲೇ ನೋಡಿದ್ದೇವೆ. ಈ ಮರು ಜಮಿನ್ದಾರೀಕರಣದಿಂದಾಗಿ ಬಲಾಢ್ಯ ಜಾತಿಗಳ ಪ್ರಾಬಲ್ಯ ಮತ್ತಷ್ಟು ಹೆಚ್ಚಾಗಲಿದೆ. ದಲಿತ, ಆದಿವಾಸಿ, ಅತಿ ಹಿಂದುಳಿದ ಜಾತಿಗಳು ಇದ್ದ ಜಮೀನನ್ನೂ ಕಳೆದುಕೊಂಡು ಮತ್ತಷ್ಟು ದುರ್ಬಲ ಸ್ಥಿತಿಗೆ ತಳ್ಳಲ್ಪಡುತ್ತಾರೆ.

6. ಆಗ್ರೋ ಕಂಪನಿಗಳು ಉತ್ಪಾದನೆ ಮಾತ್ರವಲ್ಲ, ಜೊತೆಜೊತೆಗೆ ರೈತರ ಬೆಳೆಯ ಖರೀದಿಗೂ ಕೈಹಾಕುತ್ತಾರೆ. ರೈತರ ಬೆಳೆ ಮತ್ತಷ್ಟು ಜೂಜಾಟಕ್ಕೆ ಗುರಿಯಾಗುತ್ತದೆ. ಬೆಂಬಲ ಬೆಲೆಯನ್ನು ಕ್ರಮೇಣ ರದ್ದು ಮಾಡಲಾಗುತ್ತದೆ.

7. ಈಗ ಆಗ್ರೋ ಕಂಪನಿಗಳು ಹಾಗೂ ಗೇಣಿ ಒಪ್ಪಂದ ಮಾಡಿಕೊಂಡ ಕಂಪನಿಗಳೂ ಸಹ ಉಳುಮೆದಾರರ ಮಾನ್ಯತೆಯನ್ನು ಪಡೆದುಕೊಳ್ಳುವುದರಿಂದ ಕೃಷಿ ಸಂಬಂಧಿತ ಸಾಲ, ಸಬ್ಸಿಡಿ ಮತ್ತು ಸರ್ಕಾರಿ ಯೋಜನೆಗಳ ಫಲಾನುಭವಿಗಳೂ ಇವರೇ ಆಗಲಿದ್ದಾರೆ. ಕೃಷಿ ಕ್ಷೇತ್ರಕ್ಕೆ ಬರುತ್ತಿದ್ದ ನೆರವಿನ ಪಾಲೂ ಕಂಪನಿಗಳ ಖಾತೆಗೇ ವರ್ಗಾವಣೆಯಾಗಲಿದೆ. ಕೃಷಿ ಎಂದಾಗ ಉಳುಮೆ ಮಾತ್ರವಲ್ಲ, ಪಶು ಸಂಗೋಪನೆ, ಹೈನುಗಾರಿಕೆ, ಕೋಳಿ ಸಾಕಾಣಿಕೆ, ಮೀನು ಕೃಷಿ ಎಲ್ಲದರಲ್ಲೂ ಕಂಪನಿಗಳು ಇಳಿದು ಎಲ್ಲದರಲ್ಲೂ ಸಣ್ಣವರಿಗೆ ಇದ್ದ ಅವಕಾಶಗಳು ಮುಚ್ಚಿಕೊಳ್ಳುತ್ತಾ ಹೋಗುತ್ತವೆ.

8. ಆಗ್ರೋ ಕೃಷಿ ಯಂತ್ರ ಆಧಾರಿತವಾಗಿ ನಡಿಯುವುದರಿಂದ ಉದ್ಯೋಗ ಸೃಷ್ಟಿ ಕುಸಿದು, ಹಳ್ಳಿಗಳಲ್ಲಿ ನಿರುದ್ಯೋಗ ವೇಗಗತಿಯಲ್ಲಿ ಹೆಚ್ಚಾಗುತ್ತದೆ. ಹಳ್ಳಿಗಳಲ್ಲಿ ಜೀವನಾಧಾರವಿಲ್ಲದೆ ನಗರಗಳ ಕಡೆಗಿನ ವಲಸೆ ಮತ್ತಷ್ಟು ಹೆಚ್ಚಾಗಲಿದೆ. ಈಗಾಗಲೇ ನಗರಗಳು ಹೆಚ್ಚಿನ ಕೈಗಳಿಗೆ ಕೆಲಸ ನೀಡುವ ಸ್ಥಿತಿಯಲ್ಲೂ ಇಲ್ಲ, ಕಾಲು ಚಾಚುವ ಜಾಗವನ್ನೂ ಒದಗಿಸಲು ಸಾಧ್ಯವಿಲ್ಲ. ಪರಿಣಾಮ ನಗರ ಶ್ರಮಜೀವಿಗಳ ಬದುಕು ಮತ್ತಷ್ಟು ಕುಸಿಯಲಿದೆ, ಶ್ರಮಿಕರ ಶ್ರಮದ ಬೆಲೆ ಮತ್ತಷ್ಟು ಅಗ್ಗವಾಗಲಿದೆ. ಈ ಬಿಕ್ಕಟ್ಟು ಸ್ಫೋಟಕ ಸ್ಥಿತಿಗೆ ದಾರಿ ಮಾಡಲಿದೆ.

9. ಯೂರೋಪಿನಲ್ಲಿ ಭೂಮಿಯ ಕಂಪನೀಕರಣವಾದಾಗ ಗ್ರಾಮವಾಸಿಗಳೆಲ್ಲಾ ನಗರದ ಕಾರ್ಮಿಕರಾಗಿ ಪರಿವರ್ತಿತರಾದರು. ಆದರೂ ಆ ಸಮಾಜ ತಾಳಿಕೊಂಡಿತು. ಏಕೆಂದರೆ ಮೊದಲನೆಯದಾಗಿ ಈ ದೇಶಗಳ ಜನಸಂಖ್ಯೆಯೇ ಕಡಿಮೆ. ಅಲ್ಲದೆ ಜಗತ್ತಿನ ಕೈಗಾರಿಕಾ ಕೇಂದ್ರವಾಗಿದ್ದ ಯೂರೋಪ್ ಜಗತ್ತಿನ ಬಹುಪಾಲು ಸರಕುಗಳನ್ನು ಉತ್ಪಾದಿಸಿ ಜಗತ್ತಿಗೆಲ್ಲಾ ಸರಬುರಾಜು ಮಾಡುತ್ತಿತ್ತು. ಹಾಗಾಗಿ ಗ್ರಾಮದಿಂದ ಹೊರದಬ್ಬಲ್ಪಟ್ಟವರನ್ನು ಕೆಟ್ಟ ಸ್ಥಿತಿಯಲ್ಲೇ ಆದರೂ ನಗರಗಳು ಹೀರಿಕೊಂಡವು. ಚೀನಾ ಭೂ ಸುಧಾರಣೆಗಳನ್ನು ತಂದು ರೈತ ಸಹಕಾರಿಗಳನ್ನು ಸ್ಥಾಪಿಸುವ ಮೂಲಕ ಅಭಿವೃದ್ಧಿ ಸಾಧಿಸಿತು. ಕ್ರಮೇಣ ಅಲ್ಲಿಯೂ ಬಂಡವಾಳ ವ್ಯವಸ್ಥೆ ಬೆಳೆದಂತೆ ಜನರು ಹಳ್ಳಿಗಳಿಂದ ಹೊರಹಾಕಲ್ಪಟ್ಟರು. ಆದರೆ ಅಲ್ಲಿನ ವ್ಯವಸ್ಥೆ ಚೀನಾವನ್ನು ಇಡೀ ಜಗತ್ತಿನ ಎಲ್ಲಾ ದೇಶಗಳ ಸರಕುಗಳನ್ನು ಉತ್ಪಾದಿಸುವ ಬೆವರ ಕಾರ್ಖಾನೆಯಾಗಿ ಪರಿವರ್ತಿಸಿ ಉದ್ಯೋಗವನ್ನು ಒದಗಿಸಿ ಅವರನ್ನು ಹೇಗೋ ತೊಡಗಿಸಿಕೊಂಡಿತು. ಭಾರತ ಎರಡೂ ಸ್ಥಿತಿಯಲ್ಲಿ ಇಲ್ಲ, ಜಗತ್ತಿಗೆ ಬೇಕಾದ ಸರಕನ್ನು ಉತ್ಪಾದಿಸುವ ಸ್ಥಿತಿಯಲ್ಲೂ ಇಲ್ಲ, ಜಗತ್ತಿನ ಉತ್ಪಾದನೆಯನ್ನು ಸೆಳೆಯುವ ಸ್ಥಿತಿಯಲ್ಲೂ ಇಲ್ಲ. ಹಳ್ಳಿಗಳಿಂದ ಹೊರಹಾಕಲ್ಪಟ್ಟ ನಿರುದ್ಯೋಗ ಇಡೀ ದೇಶವನ್ನು ಸಂಕಷ್ಟದ ಕೂಪಕ್ಕೆ ಒಯ್ಯುವುದರಲ್ಲಿ ಯಾವುದೇ ಅನುಮಾನವಿಲ್ಲ.

10. ಈ ಭೂ ಸುಧಾರಣೆಗಳು ಗ್ರಾಮಗಳನ್ನು ಕಂಪನಿಗಳ ಮತ್ತು ಬಲಾಢ್ಯ ಜಾತಿ ಹಿನ್ನೆಲೆಯ ಗ್ರಾಮೀಣ ದಲ್ಲಾಳಿ ವರ್ಗದ ಪಾಲಿಗೆ ಒಪ್ಪಿಸಿ, ನಿರ್ಗತಿಕರ ದೊಡ್ಡ ಪಡೆಯನ್ನು ಸೃಷ್ಟಿಸಲಿದೆ. ಇದು ಗ್ರಾಮೀಣ ಭಾರತವನ್ನು ಮಾತ್ರವಲ್ಲ ಇಡೀ ದೇಶವನ್ನೇ ಅರಾಜಕ ಆರ್ಥಿಕತೆಗೆ ದಾರಿ ಮಾಡುತ್ತದೆ. ಬಲವಿದ್ದವರು ಬಾಚಿಕೊಳ್ಳುವ ಜಂಗಲ್ ನೀತಿ ಈ ದೇಶದ ಸಮತೋಲನವನ್ನು ಒಡೆದು, ಗ್ರಾಮ ಭಾರತದ ಕೊಲೆ ಮಾಡಲಿದೆ ಮತ್ತು ವಿಕೃತ ನಗರಗಳ ಹುಟ್ಟಿಗೆ ದಾರಿ ಮಾಡಲಿದೆ.

ನೂರ್ ಶ್ರೀಧರ್


ಇದನ್ನೂ ಓದಿ: ಭೂಸುಧಾರಣೆ ಕಾಯ್ದೆ ತಿದ್ದುಪಡಿಗೆ ಮಹಿಳಾ ರೈತರ ಹಕ್ಕುಗಳ ವೇದಿಕೆಯ ಖಂಡನೆ 

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

1 COMMENT

  1. ಈ ಬೆಳವಣಿಗೆಗಳನ್ನು ಗ್ಲೋಬಲ್ ಕ್ಯಾಪಿಟಲ್ ಸಂದ ರ್ಭದಲ್ಲಿ ನೋಡಬೇಕು ಗ್ಲೋಬಲ್. ಡಿಜಿಟೀಕರಣ ಮತ್ತು ಲ್ಯಾಬ್ ಆಹಾರ ತಂತ್ರಜ್ಞಾನ(ಭೂಮಿಯಿಲ್ಲದೆ ಬೆಳೆ, ಪ್ರಾಣಿಗಳಿಲ್ಲದೆ ಮಾಂಸ ಪಡೆಯುವ, ಹಣ್ಣು ತರಕಾರಿಗಳಿಗೆ ಮಾತ್ರ ನಿಸರ್ಗವನ್ನು ಆಶ್ರಯಿಸುವ)ತಂತ್ರಜ್ಞಾನಕ್ಕಾಗಿ, ಕಟ್ಟಡ, ಸೋಲಾರ್ ಶಕ್ತಿಗಾಗಿ ರೈತರ ಭೂಮಿ ಬೇಕು. ಸಮಾಜವಾದೀ ವ್ಯವಸ್ಥೆಯಲ್ಲಿ ವರವಾಗಬಹುದಾದ ಈ ತಂತ್ರಜ್ಞಾನ ಗ್ಲೋಬಲ್ ಕ್ಯಾಪಿಟಲ್ ಕಯ್ಯಲ್ಲಿ ಬಡಜನರ ಜೀವನವನ್ನ ಕಿತ್ತುಕೊಳ್ಳುವ ಸಾಧನವಾಗಲಿದೆ
    ಸಮಾಜವಾದದ ಸ್ಥಾಪನೆ ಮತ್ತು ಸಹಕಾರ ಕೃಷಿ ಮಾತ್ರ ಈಗ ಉಳಿದಿರುವ ದಾರಿ.

LEAVE A REPLY

Please enter your comment!
Please enter your name here