ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದ್ದರೂ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಏರಿಕೆ ಮಾಡುತ್ತಲೇ ಇದೆ. ಆರು ವರ್ಷಗಳಲ್ಲಿ 18 ಲಕ್ಷ ಕೋಟಿ ರೂಪಾಯಿ ಅಬಕಾರಿ ಸುಂಕವನ್ನು ಸಂಗ್ರಹ ಮಾಡಿದ್ದಾರೆ. ಇದನ್ನು ನೋಡಿದರೆ ಎಷ್ಟು ಲೂಟಿ ಮಾಡಿದ್ದಾರೆ ಎಂದು ತಿಳಿಯುತ್ತದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ತೈಲ ಬೆಲೆ ಏರಿಕೆಯ ವಿರುದ್ಧ ಪ್ರದೇಶ ಕಾಂಗ್ರೆಸ್ ಸಮಿತಿ ಹಮ್ಮಿಕೊಂಡಿದ್ದ ಸೈಕಲ್ ಜಾಥಾ ಮತ್ತು ಸಾಂಕೇತಿಕ ಧರಣಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಯುಪಿಎ ಸರ್ಕಾರದ ಅವಧಿಯಲ್ಲಿ ಕಚ್ಚಾತೈಲ ಬೆಲೆ ಗಗನಕ್ಕೆ ಏರಿತ್ತು. ಒಂದು ಬ್ಯಾರಲ್ ಬೆಲೆ 120-130 ಅಮೆರಿಕನ್ ಡಾಲರ್ ಇತ್ತು. ಆದರೂ ದೇಶದಲ್ಲಿ ಪೆಟ್ರೋಲ್ ಮತ್ತು ಡಿಸೆಲ್ ಬೆಲೆ ಸ್ವಲ್ಪಮಟ್ಟಿಗೆ ಮಾತ್ರ ಹೆಚ್ಚಳ ಮಾಡಿತ್ತು ಎಂದು ತಿಳಿದ್ದಾರೆ.
ಡಾ.ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಅಂದು ಸ್ವಲ್ಪಮಟ್ಟಿನ ಬೆಲೆ ಏರಿಕೆ ಮಾಡಿದ್ದನ್ನೇ ನೆಪ ಮಾಡಿಕೊಂಡು ಬಿಜೆಪಿ ಮುಖಂಡರು ದೇಶದಲ್ಲಿ ಹಾಹಾಕಾರ ಎಬ್ಬಿಸಿದರು. ಪ್ರತಿಭಟನೆ ನಡೆಸಿದರು. ಜನವಿರೋಧಿ ಸರ್ಕಾರ ಎಂದು ಜರೆದರು. ಇಂದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಎಲ್ಲರೂ ಮೌನಕ್ಕೆ ಜಾರಿದ್ದಾರೆ ಎಂದು ಟೀಕಾಪ್ರಹಾರ ನಡೆಸಿದರು.
ಇಂದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ 30-40 ಡಾಲರ್ ಗೆ ಇಳಿದಿದೆ. ಆದರೂ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಗೆ ಸಬ್ಸೀಡಿ ಕೊಡುತ್ತಿಲ್ಲ. ಅಂತಾರಾಷ್ಟ್ರೀಯ ಬೆಲೆಯ ಪ್ರಕಾರ ಇಂದು ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಗೆ 25 ರೂಪಾಯಿ ಇರಬೇಕಿತ್ತು. ಆದರೆ 80-82 ರೂಪಾಯಿ ಏರಿಕೆಯಾಗಿದ್ದು ಇದರಿಂದ ರೈತರು, ಬಡವರು ಜನಸಾಮಾನ್ಯರು ಮತ್ತು ಕೆಳವರ್ಗದವರಿಗೆ ಹೊರೆಯಾಗಿದೆ ಎಂದು ದೂರಿದರು.
ಕಳೆದ ಆರು ವರ್ಷಗಳಲ್ಲಿ ಪೆಟ್ರೋಲ್ ಬೆಲೆ 29 ರೂಪಾಯಿ, ಡೀಸೆಲ್ ಬೆಲೆ 25 ರೂಪಾಯಿ ಹೆಚ್ಚಳವಾಗಿದೆ. ಕೊರೊನಾದಂಥ ಕೆಟ್ಟಪರಿಸ್ಥಿತಿಯಲ್ಲೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಗನಕ್ಕೆ ಏರಿಕೆಯಾಗಿದೆ. ನಿರುದ್ಯೋಗ ಪ್ರಮಾಣ ಹೆಚ್ಚಿದೆ. ಜನರು ಸಂಕಷ್ಟದಲ್ಲಿರುವ ಸಮಯದಲ್ಲಿ ಮನಬಂದಂತೆ ಹೆಚ್ಚಳ ಸಾಮಾನ್ಯರ ಮೇಲೆ ಬರೆಎಳೆದಂತೆ ಮಾಡಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿಯವರಿಗೆ ಮನುಷ್ಯತ್ವ, ಮಾನವೀಯತೆಯೇ ಇಲ್ಲ. ಬೆಲೆ ಏರಿಕೆಯಿಂದ ಬಡವರು ಬದುಕಲು ಸಾಧ್ಯವೇ? ಇಂತಹ ಸಮಯದಲ್ಲಿ ನಾವು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿಲ್ಲ. ಜನಸಾಮಾನ್ಯರ ಧ್ವನಿಯಾಗಿ ಪ್ರತಿಭಟನೆ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ರೈತರು, ಬಡವರಿಗೆ ಸಹಾಯ ಮಾಡದೇ ಹೋದರೆ ಕಾಂಗ್ರೆಸ್ ಪಕ್ಷ ಬೀದಿಗೆ ಇಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.
ರಾಜ್ಯಸಭಾ ಸದಸ್ಯ ಎಂ.ಮಲ್ಲಿಕಾರ್ಜುನ ಖರ್ಗೆ ಮಾತನಾಡಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಬೆಲೆ ಏರಿಕೆಯನ್ನು ಇಳಿಸಬೇಕೆಂದು ಒತ್ತಾಯಿಸಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ: PM CARES ಗೆ ಚೀನಾ ಕಂಪನಿಗಳಿಂದ ದೇಣಿಗೆ ಏಕೆ?: ಕಾಂಗ್ರೆಸ್ ಪ್ರಶ್ನೆ
Also Read: How the RSS leadership bowed to Indira Gandhi: 45th anniv of the Emergency


