ನೀವು ಫೇಸ್‍ಬುಕ್ ಬಳಕೆದಾರರಾಗಿದ್ದರೆ ರಾಜಾನುಕುಂಟೆ ಗ್ರಾಮ ಪಂಚಾಯ್ತಿ ಎನ್ನುವ ಅಕೌಂಟ್ ಇದೆ. ಈ ಗ್ರಾಮ ಪಂಚಾಯ್ತಿಯಾಗಿ ಕೊರೊನಾ ಸಂದರ್ಭವನ್ನು ನಿಭಾಯಿಸಿದ್ದಂತೂ ಉಳಿದ ಗ್ರಾಮ ಪಂಚಾಯ್ತಿಗಳಿಗೆ ಅತ್ಯುತ್ತಮ ಮಾದರಿ. ಹಾಗಾದರೆ ಇದರ ಹಿಂದಿರುವ ಶಕ್ತಿ ಯಾರೆಂದು ನಿಮಗೆ ಆಸಕ್ತಿ ಕೆರಳಿರಬಹುದು. ಯಲಹಂಕ ತಾಲೂಕಿನ, ಹೆಸರಘಟ್ಟ ಹೋಬಳಿಯ ರಾಜಾನುಕುಂಟೆ ಗ್ರಾಮ ಪಂಚಾಯ್ತಿಯ ಈ ಎಲೆಮರೆಯ ಅಭಿವೃದ್ಧಿ ಅಧಿಕಾರಿ ಹೆಚ್.ಆರ್. ರಾಜೇಶ್ ಅವರೇ ಆ ವ್ಯಕ್ತಿ.

‘ನಾನು ನಿಮ್ಮ ಬಗ್ಗೆ ಬರೆಯಬೇಕು, ಹಾಗಾಗಿ ನಿಮ್ಮ ಬಳಿ ಮಾತನಾಡಬೇಕು ಸಮಯವಿದೆಯೇ’ ಎಂದು ರಾಜೇಶ್ ಅವರನ್ನು ಕೇಳಿದೆ. ಅವರು ‘ನಾವು ಪ್ರಚಾರ ಬಯಸಲ್ಲ ಸರ್, ನಿಮಗೆ ಜಾಹೀರಾತೇನಾದ್ರೂ ಬೇಕಾ? ಅದಕ್ಕೋಸ್ಕರ ನಮ್ಮ ಬಗ್ಗೆ ಬರೀತಿನಿ ಅಂತಿದಿರೇನೋ’ ಎಂದು ಖಾರವಾಗಿಯೇ ನುಡಿದರು. ನಾನು ಸಾವರಿಸಿಕೊಂಡು ನನ್ನ ಮತ್ತು ಗೌರಿಲಂಕೇಶ್ ಹೆಸರಲ್ಲಿ ತರುತ್ತಿರುವ ನ್ಯಾಯಪಥ
ಪತ್ರಿಕೆಯ ಪರಿಚಯಿಸಿ, ಯಾವ ಫಲಾಪೇಕ್ಷೆ ಇಲ್ಲದೆ ದುಡಿಯುವವರನ್ನೂ, ಪ್ರಚಾರವಿಲ್ಲದೆ ತಣ್ಣಗೆ ಸಾಧನೆ ಮಾಡಿದವರನ್ನೂ ಹುಡುಕಿ ಬರೆಯುವುದಾಗಿಯೂ, ಎರಡು ವರ್ಷದಿಂದ ನಿಮ್ಮ ಕೆಲಸಗಳನ್ನು ಗಮನಿಸುತ್ತಿರುವ ಕಾರಣ ನಿಮ್ಮ ಬಗ್ಗೆ ಬರೆಯಬೇಕೆಂದು ಮಾತನಾಡಿಸಿದೆ’ ಎಂದು ತಿಳಿಸಿದೆ. ಆಗ ರಾಜೇಶ್ ಜೊತೆಗೆ ಆಪ್ತವಾಗಿ ಒಂದಷ್ಟು ಮಾತುಕತೆ ನಡೆಯಿತು. ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಸೋಲೂರು ಹೋಬಳಿಯ ಹೇಮಾಪುರದ ರಾಜೇಶ್ ಪದವೀಧರರಾಗಿದ್ದು, 2010 ರಲ್ಲಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯಾಗಿ ಕೆಲಸಕ್ಕೆ ಸೇರಿದರು. ಕೆಲಸ ಮಾಡಿದಲ್ಲೆಲ್ಲಾ ಅತ್ಯುತ್ತಮ ಹೆಸರು ಸಂಪಾದಿಸಿದ್ದಾರೆ.

‘ಕೊರೊನಾ ಲಾಕ್‍ಡೌನ್ ಕಾರಣಕ್ಕೆ ಗುಜರಾತ್, ಬಿಹಾರ, ಉತ್ತರ ಕರ್ನಾಟಕ ಭಾಗದಿಂದ ವಲಸೆ ಬಂದ ಪಂಚಾಯ್ತಿ ವ್ಯಾಪ್ತಿಯ ಕಟ್ಟಡ ಕಾರ್ಮಿಕರು ಕೆಲಸವೂ ಇಲ್ಲದೆ, ಊಟಕ್ಕೂ ತೊಂದರೆಯಾಗಿ ಕಷ್ಟಪಡುತ್ತಿದ್ದರು. ಇಂತವರಿಗಾಗಿ ಎರಡು ತಿಂಗಳು ನಮ್ಮ ಗ್ರಾಮಪಂಚಾಯ್ತಿ ಸತತವಾಗಿ ಊಟ ತಿಂಡಿ ನೀಡಿತು. ಈತನಕ ಇದಕ್ಕೆ ಕನಿಷ್ಠ 50 ಲಕ್ಷ ಖರ್ಚಾಗಿರಬಹುದು. ಆದರೆ ಪಂಚಾಯ್ತಿಯ ಒಂದು ಪೈಸೆಯೂ ಖರ್ಚಾಗಿಲ್ಲ. ನಮ್ಮ ಕೆಲಸದ ಬದ್ಧತೆ ಮತ್ತು ಪ್ರಾಮಾಣಿಕತೆ ನೋಡಿ, ನಮ್ಮ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ದಾನಿಗಳು ಸಂಘಸಂಸ್ಥೆಗಳು, ವೈಯಕ್ತಿಕವಾಗಿ ಒಬ್ಬೊಬ್ಬರು ಒಂದೊಂದಕ್ಕೆ ದಿನಂಪ್ರತಿ ಸಹಾಯ ಮಾಡಿದ್ದಾರೆ. ಒಂದು ದಿನದ ಖರ್ಚನ್ನು ಭರಿಸಿ ಕೆಲವರು ಹುಟ್ಟಿದ ಹಬ್ಬ ಆಚರಿಸಿಕೊಂಡಿದ್ದಾರೆ. ಇದೀಗ ನಮ್ಮ ಪಂಚಾಯ್ತಿಯ ಸದಸ್ಯರೊಬ್ಬರು ನಿರ್ಗತಿಕರಿಗೆ ಊಟ ತಿಂಡಿ ನಿರಂತರವಾಗಿರಲಿ ಎಂದು ಗ್ರಾಮಪಂಚಾಯ್ತಿ ಕ್ಯಾಂಟೀನ್ ತೆರೆಯುವ ಯೋಚನೆ ಮಾಡಿದ್ದಾರೆ. ಸದ್ಯಕ್ಕೆ ಸಣ್ಣದಾಗಿ ನಡೆಯುತ್ತಿದೆ’ ಎನ್ನುತ್ತಾರೆ ರಾಜೇಶ್.

ಕೊರೊನಾ ನಿಂತ್ರಣಕ್ಕೆಂದು ಗ್ರಾಮ ಪಂಚಾಯ್ತಿಗಳಿಗೆ ಸರಕಾರ ಪ್ರತ್ಯೇಕ ಹಣ ನೀಡಿಲ್ಲ. ಆದರೆ ಗ್ರಾಮಪಂಚಾಯ್ತಿಯ ಸದಸ್ಯರು, ಅಧ್ಯಕ್ಷರು, ಪಿಡಿಓಗಳು ಆಸಕ್ತರಾಗಿದ್ದರೆ, ಪಂಚಾಯ್ತಿಯ ಆದಾಯದ ಒಂದಷ್ಟು ಮೊತ್ತವನ್ನು ಬಳಸುತ್ತಲೇ ಸಮುದಾಯದ ಸಹಭಾಗಿತ್ವದಲ್ಲಿ ಕೆಲಸ ಮಾಡಬೇಕಾಗುತ್ತದೆ. ರಾಜೇಶ್ ಅವರು ಇದನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ‘ಸೋಂಕು ಹರಡದಂತೆ ಔಷಧಿ ಸಿಂಪಡನೆ, ಮಾಸ್ಕ್ ವಿತರಣೆ, ವಯಕ್ತಿಕ ಅಂತರದ ಬಗೆಗೆ ಜನರಿಗೆ ತಿಳಿಸುವುದು, ಕೊರೊನಾ ಜಾಗೃತಿಯ ಬಗ್ಗೆ ವ್ಯಾಪಕ ಪ್ರಚಾರ ಮಾಡುವುದು ಈ ಎಲ್ಲವನ್ನೂ, ನಮ್ಮ ಗ್ರಾಮ ಪಂಚಾಯ್ತಿ ಗರಿಷ್ಠ ಮಟ್ಟದಲ್ಲಿ ಮಾಡಿದೆ. ನಮ್ಮ ಜೊತೆ ಆಶಾ ಕಾರ್ಯಕರ್ತೆಯರು, ಪೌರಕಾರ್ಮಿಕರು ಹಗಲು ರಾತ್ರಿ ದುಡಿದಿದ್ದಾರೆ. ನಮ್ಮ ಸಿಬ್ಬಂದಿಗಳಿಗೆ, ಆಶಾ ಕಾರ್ಯಕರ್ತರಿಗೆ ನಾನು ಎಷ್ಟು ಸಲಾಮ್ ಹೊಡೆದ್ರೂ ಕಡಿಮೆಯೇ’ ಎನ್ನುತ್ತಾರೆ ರಾಜೇಶ್.

ಹೊರರಾಜ್ಯದ ತಮ್ಮ ಊರುಗಳಿಗೆ ಹೋಗುವ ವಲಸೆ ಕಾರ್ಮಿಕರ ವಿವರಗಳನ್ನು ಸೇವಾ ಸಿಂಧು ತಂತ್ರಾಂಶದಲ್ಲಿ ನಮೂದಿಸಿ ವಲಸೆ ಕಾರ್ಮಿಕರಿಗೆ ಬಸ್ ವ್ಯವಸ್ಥೆ ಮಾಡಿ, ಅವರವರ ಊರುಗಳಿಗೆ ತೆರಳಲು ಯಾವುದೇ ತೊಡಕಾಗದಂತೆ ಗ್ರಾಮ ಪಂಚಾಯ್ತಿ ನಿಭಾಯಿಸಿ. ಪ್ರತಿ ಊರುಗಳಿಗೂ ಗ್ರಾಮಕಾರ್ಯ ಪಡೆಗಳನ್ನು ರಚಿಸಿ, ಪಂಚಾಯ್ತಿ ಕೋವಿಡ್ 19 ಕಾರ್ಯ ಪಡೆಯನ್ನು ರಚನೆ ಮಾಡಿ ಕಾಲಕಾಲಕ್ಕೆ ತರಬೇತಿ ನೀಡಿ, ಸುರಕ್ಷತೆಯ ಬಗ್ಗೆ ನಿರಂತರವಾಗಿ ಸಭೆಗಳನ್ನು ಮಾಡಿ ತಿಳಿವಳಿಕೆ ಮತ್ತು ಜವಾಬ್ದಾರಿಗಳನ್ನು ಪರಸ್ಪರ ಹಂಚಿಕೊಳ್ಳಲಾಗುತ್ತಿತ್ತು. ಡಿ.ವೈ.ಎಸ್.ಪಿ, ಗ್ರಾ.ಪಂ ಅಧ್ಯಕ್ಷರು, ಸದಸ್ಯರು, ಕಂದಾಯ ಇಲಾಖೆ, ಆರೋಗ್ಯ ಇಲಾಖೆ, ಸ್ವಯಂಸೇವಾಸಂಸ್ಥೆಗಳ ಜೊತೆಗೆ ನಿರಂತರ ಸಭೆಗಳನ್ನು ಏರ್ಪಡಿಸಲಾಯಿತು. ಇದೇ ಸಂದರ್ಭಕ್ಕೆ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ, ವೈಯಕ್ತಿಕ ತಮ್ಮ ಆಸ್ತಿ/ಜಮೀನಿನಲ್ಲಿ ಕೆಲಸ ನಿರ್ವಹಿಸಿ ತಮ್ಮ ಖಾತೆಗೆ ನೇರವಾಗಿ ಹಣ ಪಡೆಯುವಂತೆಯೂ, ಸಮುದಾಯ ನೆಲೆಯ ಕೆಲಸ ಮಾಡಿ ಆಸ್ತಿ ಸೃಜನೆ ಮಾಡಿಕೊಳ್ಳುವಂತೆಯೂ ಜಾಗೃತಿ ಮೂಡಿಸಿ ಯಶಸ್ವಿಯಾಗಿ ಖಾತ್ರಿ ಕೆಲಸವನ್ನು ಹಂಚಲಾಯಿತು. ಹೀಗೆ ಖಾತ್ರಿ ಯೋಜನೆಯಲ್ಲಿ ಕೈಗೊಳ್ಳಬಹುದಾದ 96 ಕೆಲಸಗಳ ಪಟ್ಟಿಯನ್ನು ಪಂಚಾಯ್ತಿಯು ಸಾರ್ವಜನಿಕರಿಗೆ ತಿಳಿಯಪಡಿಸಿತು.

ಪಂಚಾಯ್ತಿಯ ವಾರ್ಷಿಕ ಆದಾಯ ಸರಿಸುಮಾರು ಎರಡೂವರೆ ಕೋಟಿಯಷ್ಟಿದೆ. ಪಂಚಾಯ್ತಿಯಲ್ಲಿ 38 ಜನ ಸ್ಟಾಫ್ ಇದ್ದು, ಇವರಿಗೆ ವಾರ್ಷಿಕ ತಿಂಗಳ ಸಂಬಳವೇ 55 ಲಕ್ಷದಷ್ಟಾಗುತ್ತದೆ. ಪಂಚಾಯ್ತಿಯ ಆದಾಯ ಹೆಚ್ಚಿದ್ದರೂ, ಈ ಪ್ರದೇಶ ನಗರೀಕರಣವಾದಂತೆ ಗರಿಷ್ಠಮಟ್ಟದ ಸೌಲಭ್ಯಗಳನ್ನು ಉತ್ತಮ ಗುಣಮಟ್ಟದಲ್ಲಿ ಕೊಡಬೇಕಾಗುತ್ತದೆ. ಹಾಗಾಗಿ ಆದಾಯದಂತೆ ಪಂಚಾಯ್ತಿಯ ಖರ್ಚನ್ನೂ ಯೋಜನಾಬದ್ಧವಾಗಿ ನಿರ್ವಹಿಸಲಾಗಿದೆ.

‘ನಾನು ರಾಜಾನುಕುಂಟೆ ಪಂಚಾಯ್ತಿಗೆ ಉಡುಪಿಯಿಂದ ವರ್ಗವಾಗಿ ಬಂದಾಗ ಈ ಭಾಗದ ಜನರಿಗೆ ಗ್ರಾಮ ಪಂಚಾಯ್ತಿ ಅಂದ್ರೆ ಅದು ಕೇವಲ ರಸ್ತೆ, ನೀರು, ಬೀದಿ ದೀಪಕ್ಕೆ ಸೀಮಿತ ಎಂದಷ್ಟೆ ತಿಳಿದಿದ್ದರು. ಒಂದು ಸರಕಾರ ಎಲ್ಲಾ ಇಲಾಖೆಯ ಕೆಲಸಗಳನ್ನು ಹೇಗೆ ಮಾಡುತ್ತೋ, ಹಾಗೆ ಎಲ್ಲಾ ಇಲಾಖೆಗಳ ಕೆಲಸಗಳನ್ನೂ ಗ್ರಾಮ ಪಂಚಾಯ್ತಿ ಮಾಡುತ್ತದೆ. ಆರೋಗ್ಯಕ್ಕೆ ಬೇಕಾದ ಸ್ವಚ್ಛ ವಾತಾವರಣ, ಉತ್ತಮ ಹವಾಮಾನಕ್ಕೆ ಬೇಕಾಗುವ ಅರಣ್ಯೀಕರಣ, ಆರ್ಥಿಕವಾಗಿ ಹಿಂದುಳಿದವರ, ಪರಿಶಿಷ್ಟ ಜಾತಿ ಮತ್ತು ವರ್ಗಗಳ, ಅಂಗವಿಕಲರ, ಬಡತನದಲ್ಲಿರುವ ಗರ್ಭಿಣಿ, ಬಾಣಂತಿ, ಚಿಕ್ಕ ಮಕ್ಕಳಿಗೂ ಗ್ರಾಮ ಪಂಚಾಯ್ತಿ ನೆರವಾಗಲು ಸಾಧ್ಯವಿದೆ ಎಂದು ನಾವು ತೋರಿಸಿಕೊಟ್ಟೆವು’ ಎಂದು ರಾಜೇಶ್ ತಮ್ಮ ಕೆಲಸದ ವೈಖರಿಯನ್ನು ಯಾವುದೇ ಹೆಗ್ಗಳಿಕೆ ಇಲ್ಲದೆ ಹೇಳುತ್ತಾರೆ.

ಗ್ರಾಮ ಪಂಚಾಯ್ತಿಯದೇ ನರ್ಸರಿ ಇದೆ. ಈ ನರ್ಸರಿಯಲ್ಲಿ ಬೆಳೆಸಿದ ಗಿಡಗಳನ್ನು ಅರಣ್ಯೀಕರಣಕ್ಕೆ ಬಳಸಲಾಗುತ್ತದೆ. 2017-18 ನೇ ಸಾಲಿನಲ್ಲಿ 15 ಸಾವಿರ ಗಿಡಗಳನ್ನು ಬೆಳೆಸಲಾಗಿತ್ತು. ಗ್ರಾಮ ಪಂಚಾಯ್ತಿಯ ಅಂಗನವಾಡಿಗಳ ಮೇಲೆ ಸೋಲಾರ್ ಅಳವಡಿಸಿ, ಸೋಲಾರ್ ವಿದ್ಯುತ್ ಉತ್ಪಾದನೆಯಲ್ಲಿ ಪ್ರಯೋಗ ಮಾಡಿದೆ. 2017-18 ರಲ್ಲಿ `ನಮ್ಮ ಗ್ರಾಮ ನಮ್ಮ ಯೋಜನೆ’ ಪ್ರಶಸ್ತಿ ಈ ಪಂಚಾಯ್ತಿಗೆ ಲಭಿಸಿದೆ. 2018-19 ನೇ ಸಾಲಿನ ಗಾಂಧಿಗ್ರಾಮ ಪ್ರಶಸ್ತಿಯನ್ನು ಈ ಪಂಚಾಯ್ತಿ ಪಡೆದಿದೆ. 2019 ರ ಮಕ್ಕಳ ಸ್ನೇಹಿ ಗ್ರಾಮ ಪಂಚಾಯ್ತಿಯೆಂದೂ, ಬಯಲು ಬಹಿರ್ದೆಸೆ ಮುಕ್ತ ಗ್ರಾಮ ಪಂಚಾಯ್ತಿ ಎಂದೂ ಹೆಗ್ಗಳಿಕೆಗೆ ಈ ಪಂಚಾಯ್ತಿ ಪಾತ್ರವಾಗಿದೆ. 2019 ರ ದೀನ್ ದಯಾಳ್ ಉಪಧ್ಯಾಯ್ ಪಂಚಾಯ್ತಿ ಸಶಕ್ತೀಕರಣ ಪುರಸ್ಕಾರವೂ ಸಿಕ್ಕಿದೆ. ಹೀಗಾಗಿಯೇ ಬೇರೆ ಬೇರೆ ಭಾಗದ ಶಾಸಕರು, ಗ್ರಾಮಪಂಚಾಯ್ತಿ ಅಧಿಕಾರಿಗಳು ಈ ಗ್ರಾಮ ಪಂಚಾಯ್ತಿಯ ಮಾದರಿಗಳನ್ನು ನೋಡಲೆಂದೇ ಬರುತ್ತಾರೆ.

`ನಮ್ಮ ಗ್ರಾಮ ಪಂಚಾಯ್ತಿಯ ಅಧ್ಯಕ್ಷರು, ಸದಸ್ಯರು, ಸಿಬ್ಬಂದಿ ವರ್ಗ, ಪಂಚಾಯ್ತಿಯ ನಾಗರಿಕರು ಹೀಗೆ ಎಲ್ಲರ ಸಹಕಾರದಿಂದ ಇಷ್ಟೆಲ್ಲಾ ಸಾಧ್ಯವಾಗಿದೆ’ ಎಂದು ವಿನಯದಿಂದಲೇ ಮಾತನಾಡುವ ರಾಜೇಶ್ ಅವರಂಥ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಎಲ್ಲಾ ಕಡೆಗೂ ಅಗತ್ಯವಿದೆ


ಇದನ್ನು ಓದಿ: ಜಗಳೂರೆಂಬ ಬರಡು ನೆಲದ ಭಗೀರಥ ಪ್ರತಿಭೆ: ಪ್ರವೀಣ್ ಕುಮಾರ್

Donate

ಈ ಲೇಖನ, ಈ ವೆಬ್‌ಸೈಟ್ ನಿಮಗೆ ಇಷ್ಟವಾಯಿತೇ? ನಿಮ್ಮ ಬೆಂಬಲ ಇದಕ್ಕೆ ಅಗತ್ಯ.

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

+ posts