Homeಮುಖಪುಟಶಾಸ್ತ್ರೀಯ 1: ಪರಂಪರೆಯ ವಸಾಹತೀಕರಣ ಮತ್ತು ಚರಿತ್ರೆಯ ಮರುಕಟ್ಟುವಿಕೆಯ ಅಗತ್ಯ

ಶಾಸ್ತ್ರೀಯ 1: ಪರಂಪರೆಯ ವಸಾಹತೀಕರಣ ಮತ್ತು ಚರಿತ್ರೆಯ ಮರುಕಟ್ಟುವಿಕೆಯ ಅಗತ್ಯ

ಲಿಖಿತ ಆಕರಗಳ ಒಡಲಲ್ಲಿ ಸುಪ್ತವಾಗಿರುವ ಇಂಜನಿಯರಿಂಗ್, ಕುಂಬಾರಿಕೆ, ಕಂಬಾರಿಕೆ, ಚಮ್ಮಾರಿಕೆ, ಬಡಿಗತನ, ಅಕ್ಕಸಾಲಿ ಇತ್ಯಾದಿ ಉದ್ಯಮಗಳನ್ನು ಮತ್ತು ಅವರ ಭೌದ್ದಿಕತೆಯನ್ನು ಯಾವ ಪೇಟೆಂಟ್ ಇಲ್ಲದೇ ಹೈಜಾಕ್ ಮಾಡಿದ ಕಾಲಘಟ್ಟದ ಸತ್ಯವನ್ನು ಈಗ ಪುನರುಜ್ಜೀವನಗೊಳಿಸಬೇಕಿದೆ.

- Advertisement -
- Advertisement -

ಭಾರತದಲ್ಲಿ ಆಧುನಿಕ ಕಾಲಘಟ್ಟದಲ್ಲಿ ಚರಿತ್ರೆ ರಚನೆಯಾಗಲು ಬಹುಮುಖ್ಯವಾದ ಆಕರಗಳೆಂದರೆ ಶಾಸನಗಳು. ಕರ್ನಾಟಕ ಚರಿತ್ರೆ ಮತ್ತು ಸಾಂಸ್ಕೃತಿಕ ಇತಿಹಾಸದ ನುಡಿ ನಿರೂಪಣೆಯೂ ವಸಾಹತೀಕರಣದ ಫಲ. ಬಿ.ಎಲ್.ರೈಸ್, ಇ.ಪಿ.ರೈಸ್, ಕರ್ನಲ್ ಮೆಕೆಂಝಿ ಮುಂತಾದ ಬ್ರಿಟಿಷ್ ಮಿಷನರಿಗಳಿಗೆ ಸೇರಿದ ಈ ವ್ಯಕ್ತಿಗಳಂತೆ ಹಲವರು ಸಂಗ್ರಹ ಮಾಡಿದ ಬಹುಸಂಖ್ಯೆಯ ಶಾಸನಗಳು ಮತ್ತು ಹಸ್ತಪ್ರತಿಗಳು ಕನ್ನಡ ನಾಡಿನ ಗತಕಾಲದ ಚಾರಿತ್ರಿಕ ಚಹರೆಯ ಮುಖ್ಯವಾದ ಸಾಮಗ್ರಿಗಳು.

ಬ್ರಿಟಿಷ್ ವಸಾಹತುಶಾಹಿ ರಚನೆಗಳು ಪರಂಪರೆಯೊಂದಿಗೆ ಶಾಸನ ಮತ್ತು ಹಸ್ತಪ್ರತಿಗಳನ್ನು ಮುಖಾಮುಖಿ ಮಾಡಿದವು. ಆದರ ಮೊದಲ ಅಧ್ಯಯನದ ಈ ಘಟ್ಟದಲ್ಲಿ ಸಂಗ್ರಹ, ಸಂಪಾದನೆ, ವಿವರಣೆ ನೆಲೆಯಲ್ಲಿ ತನ್ನ ಚಹರೆಯನ್ನು ಗುರುತಿಸಿಕೊಂಡಿತು. ಈ ಚರಿತ್ರೆಕಾರರ ಮಾದರಿಯಲ್ಲಿ ನಮ್ಮ ದೇಸಿ ವಿದ್ವಾಂಸರು ಎರಡನೇ ಕಾಲಘಟ್ಟದಲ್ಲಿ ಆಕರಮುಖಿ ಅಧ್ಯಯನಕ್ಕೆ ತೆರೆದುಕೊಂಡರು. ಆದರೆ ಬ್ರಿಟಿಷ್ ಸಾಮ್ರಾಜ್ಯಶಾಹಿ ಭೌದ್ದಿಕ ಅಹಂಕಾರಿಗಳು ನಮ್ಮ ನೆಲದ ನಿಜ ಚರಿತ್ರೆಯನ್ನು ರಾಜಕೀಯ ಕಾರಣಗಳಿಗಾಗಿ ಬಳಸಿಕೊಂಡವು.

ಇದರ ಮುಂದುವರಿಕೆಯಾಗಿ ಕನ್ನಡದ ಅಕ್ಷರ ಕಲಿತುಕೊಂಡ ಇಂಗ್ಲೀಷ್ ಶಿಕ್ಷಣ ಪಡೆದ ದೇಸಿ ವಿದ್ವಾಂಸರ ಪಡೆಯು ಸಾಮ್ರಾಜ್ಯಶಾಹಿ ಬೌದ್ಧಿಕ ರಾಜಕಾರಣದ ಜೊತೆ ಒಳರಾಜಿ ಮಾಡಿಕೊಂಡಂತೆ ಮೇಲ್‌ಚಹರೆಯ ಚರಿತ್ರೆಯ ಬರೆಹಕ್ಕೆ, ಇಲ್ಲವೇ ಧರ್ಮಾಧಾರಿತ ಚರಿತ್ರೆಯ ರಚನೆಗೆ ಮುಂದಾದರು. ಇದೊಂದು ಬಗೆಯಲ್ಲಿ ಒಂದು ಕೋಮಿನ ಚರಿತ್ರೆ, ಒಂದು ವರ್ಗದ ಚರಿತ್ರೆ ಆಗಿದ್ದುಕೊಂಡು ಸಂಸ್ಕೃತಿಯ ರೂಪದಂತೆ ನಮ್ಮೆದುರಿಗೆ ಕಾಣುತ್ತಿದೆ ಅಷ್ಟೇ.

ಕರ್ನಾಟಕದ ಶಾಸನ, ಹಸ್ತಪ್ರತಿ, ನಾಣ್ಯ ಮತ್ತು ಸ್ಮಾರಕಗಳ ಸಂಶೋಧನೆ ಅಧ್ಯಯನಗಳು ವಿಭಿನ್ನ ಆಯಾಮಗಳಲ್ಲಿ ನಡೆದಿಲ್ಲ. ಬಹುತೇಕ ಕೆಳ ಚಲನೆಯ ಸತ್ಯಗಳು ಗೈರುಹಾಜರಿಯಲ್ಲಿವೆ. ಶಾಸನದಂತಹ ರಾಜಶಾಹಿ ಕಾನೂನು ಬರಹದ ಒಳಗಡೆ ಸಂಸ್ಕೃತಿ ರೂಪಿಸುವ ಜನ ಸಮುದಾಯದ ಇತಿಹಾಸ ಇದೆಯೆಂಬುದು ಮುಖ್ಯ. ಸಬಾಲ್ಟ್ರನ್ ನೆಲೆಯಲ್ಲಿ ಅದು ಕೇವಲ ಸಾಹಿತ್ಯದ ಅಧ್ಯಯನವಾಗಿದೆಯೇ ಹೊರತು ಚರಿತ್ರೆಯ ಅಧ್ಯಯನವು ಈಗತಾನೆ ಆರಂಭವಾಗಿದೆ ಅಷ್ಟೇ. ಆದರೆ ಇದು ತೋರುಂಬ ಲಾಭ. ತಳಸಮುದಾಯ ಮತ್ತು ಹಿಂದುಳಿದ ವರ್ಗಗಳ ಲೋಕದಿಂದ ಬಂದ ಬೌದ್ಧಿಕ ಜಗತ್ತು ಶಾಸನ, ನಾಣ್ಯ, ಹಸ್ತಪ್ರತಿಗಳ ಸಬಾಲ್ಟ್ರನ್ ಮಾದರಿಯ ಫಲಿತಗಳನ್ನು ನಿರೂಪಿಸಬೇಕಾದ ತುರ್ತು ಇದೆ. ಶಾಸನದಂತಹ ಶಾಸ್ತ್ರೀಯ ಭೌತಿಕ ಆಕರಗಳಿಗೆ ಅಂತರ್‌ಶಿಸ್ತೀಯ ನೆಲೆಯಿಂದ, ಅವುಗಳ ಆಂತರಿಕ ಸಾಂಸ್ಕೃತಿಕ ರಾಜಕಾರಣದ ಸ್ವರೂಪವನ್ನು ಕಟ್ಟಿಕೊಡಬೇಕು.

ವೀರಗಲ್ಲು, ಮಾಸ್ತಿಗಲ್ಲು, ನಿಸಧಿಗಲ್ಲುಗಳನ್ನು ನಮ್ಮ ಪರಂಪರೆಯ ಚರಿತ್ರೆಯ ಹೆಮ್ಮೆ ಎಂದು ಕಳೆದ ಶತಮಾನದುದ್ದಕ್ಕೂ ಚರಿತ್ರೆ ಬರೆದವರು ಆಖ್ಯಾನ ಮಾಡಿದ್ದಾರೆ. ವೀರ ಮರಣವಾದವರು ಯಾವ ಸಾಮುದಾಯಿಕ ಹಿನ್ನಲೆಯಿಂದ ಬಂದವರು? ಅವರ ನೆಲೆ- ಹಿನ್ನಲೆಗಳೇನು? ಪ್ರಭುತ್ವದ ರಚನೆಗೆ ಅವರ ಕೊಡುಗೆ ಏನು? ಹಾಗೂ ಪ್ರಭುತ್ವದಲ್ಲಿ ಅವರಿಗಿದ್ದ ಸ್ಥಾನಮಾನಗಳೇನು? ಎಂಬ ಸತ್ಯಗಳು ಪರದೆಯ ಹಿಂದೆ ಉಳಿದಿವೆ. ಒಂದು ಪ್ರಭುತ್ವದ ರಚನೆಗೆ ಕಾರಣರಾದ ಈ ವೀರರ ಹೊಸ ಚರಿತ್ರೆಯನ್ನು ಕಟ್ಟಬೇಕಿದೆ. ನಾಡಿನ ತುಂಬ ಕಾಣುವ ಮಾಸ್ತಿಗಲ್ಲುಗಳು ಒಂದು ದೇಶದ ಹೆಮ್ಮೆ ಆಗಬಲ್ಲುವೇ?

ಅದೆಷ್ಟೋ ಮಹಿಳೆಯರ ಪ್ರಾಣಗಳು ಆಹುತಿಯಾದ ನೆಲೆಗಳನ್ನು ಮತ್ತೆ ಮತ್ತೆ ವರ್ತಮಾನದ ಸಂದರ್ಭದಲ್ಲಿಟ್ಟು “ರಿಚೆಕ್” ಮಾಡಬೇಕಿದೆ. ಧರ್ಮದ ಚೌಕಟ್ಟಿನೊಳಗಡೆ ನಿಸಧಿ ಮರಣ ಹೊಂದಿದ ಅಮಾಯಕ ಧರ್ಮ ಅನುಸರಣೆಕಾರರ ಹಿಂದಿರುವ ಪ್ರಲೋಭನೆಗಳನ್ನು ಈ ಕಾಲದಲ್ಲಿ ಅಧ್ಯಯನ ಮಾಡಬೇಕಿದೆ. ವಾಸ್ತವವಾಗಿ ಇಂತಹ ಸ್ಮಾರಕಗಳ ಆಂತರಿಕ ಕವಾಟದಲ್ಲಡಗಿದ ಶೋಷಣೆಯ ಸ್ವರೂಪವನ್ನು ಪ್ರತಿಪಾದಿಸಬೇಕಾಗಿದೆ. ಈ ನೆಲದಲ್ಲಿ ಶಾಸ್ತ್ರೀಯ (ಕ್ಲಾಸಿಕಲ್) ಆಗಿರಲು ಯಾವ ಆಕರಕ್ಕೆ ಸಾಧ್ಯವಿದೆ? ನಿಜವಾಗಿಯೂ ಅದು ಮೊದಲು ದೇಸಿ, ಜನಪದ, ಜನರೂಪಿತ. ಇಂತಹ ಸೈದ್ಧಾಂತಿಕ ಸಂಶ್ಲೇಷಣೆಯನ್ನು ನಮ್ಮ ಪಂಡಿತಮಾನ್ಯ ಚರಿತ್ರೆಕಾರರು ಗಮನಿಸಲೇ ಇಲ್ಲ. ಅಥವಾ ಮುಸುಕು ಹಾಕಿಟ್ಟಿರುವುದು ನಿಚ್ಚಳವಾಗಿದೆ.

ಶಾಸನ ಇತ್ಯಾದಿ ಚರಿತ್ರೆಯ ಆಕರಗಳು ಎಡೆಪಡೆಯುವ ಹಿಂದಣ ಹುನ್ನಾರಗಳನ್ನು ವಸಾಹತು ಮತ್ತು ವಸಾಹತೋತ್ತರ ಸಾಮಾಜಿಕ ಸಂದರ್ಭಗಳ ಜೊತೆ ಹಾಜರುಪಡಿಸಬೇಕಾಗುತ್ತದೆ. ಆಕರ ಸಾಮಗ್ರಿಗಳ ಆಂತರಿಕ ಆರ್ತನಾದದ ಕ್ಷೀಣ ಸ್ವರವನ್ನು ಎಲ್ಲರಿಗೂ ಕೇಳಿಸುವಂತೆ ಮಾಡಬೇಕಿದೆ. ಪ್ರಭುತ್ವಶಾಹಿ, ಪುರೋಹಿತಶಾಹಿಗಳ ಒಡಲಾಗಿವೆಯೆಂಬಂತೆ ತೋರುವ ಆಕರಗಳ ಒಳಗೆ ಈ ನೆಲದ ಮಕ್ಕಳ, ಶ್ರಮಜೀವಿಗಳ ಬಹುಧ್ವನಿಗಳು ಅಡಗಿವೆ. ಇಲ್ಲಿಯವರೆಗೂ ಚರಿತ್ರೆಯ ಅಧ್ಯಯನಗಳನ್ನು “ಯಜಮಾನ ಮಾದರಿ”ಯಲ್ಲಿ ತಂದಿಟ್ಟ ಪಳಯುಳಿಕೆಯನ್ನೆ ವಿಶ್ವವಿದ್ಯಾಲಯಗಳು ಸಂಶೊಧನೆಯ ವೈಧಾನಿಕತೆಯನ್ನಾಗಿ ಮಾಡಿಕೊಂಡ ದುರಂತವು ನಮ್ಮೆದುರಿಗಿದೆ. ವರ್ತಮಾನದ ಸಂದರ್ಭದಲ್ಲಿ ಪರ್ಯಾಯವಾಗಿ ಧರ್ಮ, ವರ್ಗ, ವರ್ಣ, ಲಿಂಗ ನಿಯಂತ್ರಣದಲ್ಲಿರುವ ಮೀಡಿಯಾ ಕಂಟ್ರೋಲ್‌ನ್ನು ಕಳಚಿಕೊಂಡು ಹೊಸರೂಪ ಧರಿಸಬೇಕಿದೆ.

ವಿಕಾಸ ನಾಗರಿಕತೆ ಸಂಸ್ಕೃತಿಯನ್ನು ಈ ನೆಲದಲ್ಲಿ ಕಟ್ಟಿದ ಸಮುದಾಯಗಳ ಪ್ರಾತಿನಿಧಿಕ ಆಕರ ಸಾಮಗ್ರಿಗಳು ಕರ್ನಾಟಕದ ಬೆಟ್ಟ-ಗುಡ್ಡಗಳಲ್ಲಿ ಹೇರಳವಾಗಿವೆ. ಇವು ಅಡವಿ ಮಕ್ಕಳ ಚರಿತ್ರೆಗಳಲ್ಲವೇ? ಜೊತೆಗೆ ಈ ಸಮುದಾಯಗಳು ರೂಪಿಸಿಕೊಂಡ ಭಾಷಿಕ ಸಂಕಥನವು ರೋಚಕವಾಗಿದೆ. ಭಾಷೆಯು ಕ್ಲಾಸಿಕಲ್ ಎಂದು ಶಾಸನಗಳ ಮುಖೇನ ಹೇಳುವಾಗಲೂ ಜನ ಭಾಷೆಯ ಸ್ವರೂಪವನ್ನು ಮುಖ್ಯವಾಗಿ ಗಮನಿಸಬೇಕು. ಶಾಸನೋಕ್ತ ವೃತ್ತಿಗಳ ಸಮಗ್ರ ಅಧ್ಯಯನ ಮಾಡುವುದಿರಲೀ ಪ್ರಾಸ್ತಾವಿಕ ಬರಹಗಳೂ ಧರ್ಮ ನಿಯಂತ್ರಣವಾದಿ ಚೌಕಟ್ಟಿನಲ್ಲಿ ಬಂಧಿಸಲ್ಪಟ್ಟಿವೆ. ಭಾಷೆಯನ್ನು ಕಾಪಿಟ್ಟುಕೊಂಡು ಬಂದ ಅಕ್ಷರೋದ್ಯಮದ ಸಂವಹನಗಳಾದ ಹಸ್ತಪ್ರತಿ, ನಾಣ್ಯ, ಶಾಸನಗಳ ಹಿಂದಿನ ಜನರ ಶ್ರಮದ ನೆಲೆಯನ್ನು ಬಿಡಿಸಬೇಕು.

ಹಾಗೆಯೇ ದೇವಾಲಯ ಮತ್ತು ರಥಗಳ ಮಹತ್ತರ ನಿರ್ಮಾಣ, ಕರಕುಶಲಗಾರಿಕೆ ಅಜ್ಞಾತ ಇಂಜಿನಿಯರಿಂಗ್ ಕುರಿತ ಯಾವ ಪಾಠಗಳನ್ನು ನಾವು ಕಲಿತಿದ್ದೇವೆ? ಹಾಗೆಯೇ ಕನ್ನಡ ರಾಜಮನೆತನಗಳ ಚರಿತ್ರೆಯಲ್ಲಿಯೂ ಕುಲದ ಕಾರಣಕ್ಕಾಗಿ ಪ್ರಸಿದ್ಧ ದೊರೆಗಳು ಅವರ ಲೋಕೋಪಯೋಗಿ ಕೆಲಸಗಳು ಪಠ್ಯಗಳಲ್ಲಿ ಗೈರುಹಾಜರಾದ ಕೆಲ ಪ್ರಸಂಗಗಳಿವೆ. ಇವೆಲ್ಲಾ ದೊಡ್ಡ ಪ್ರಶ್ನೆಗಳು.

ಭೂತ ಮತ್ತು ವರ್ತಮಾನದ ಸಂಬಂಧಗಳನ್ನು ಬೆಸೆಯುವ ತಳಸಮುದಾಯಗಳ ವೃತ್ತಿಪರತೆಯನ್ನು ಕಟ್ಟಿಕೊಡುವ ಕೆಲಸ ಸಾಕಷ್ಟಿದೆ. ನಮ್ಮ ಗತಕಾಲದ ಕೇಳು ಮತ್ತು ಹೇಳು ಪರಂಪರೆಯು ಶಾಸ್ತ್ರೀಯವಾದದ್ದು ಯಾವ ಸಂದರ್ಭದಲ್ಲಿ? ಎಂಬುದನ್ನು ಹುಡುಕಬೇಕು. ಲಿಖಿತ ಆಕರಗಳ ಒಡಲಲ್ಲಿ ಸುಪ್ತವಾಗಿರುವ ಇಂಜನಿಯರಿಂಗ್, ಕುಂಬಾರಿಕೆ, ಕಂಬಾರಿಕೆ, ಚಮ್ಮಾರಿಕೆ, ಬಡಿಗತನ, ಅಕ್ಕಸಾಲಿ ಇತ್ಯಾದಿ ಉದ್ಯಮಗಳನ್ನು ಮತ್ತು ಅವರ ಭೌದ್ದಿಕತೆಯನ್ನು ಯಾವ ಪೇಟೆಂಟ್ ಇಲ್ಲದೇ ಹೈಜಾಕ್ ಮಾಡಿದ ಕಾಲಘಟ್ಟದ ಸತ್ಯವನ್ನು ಈಗ ಪುನರುಜ್ಜೀವನಗೊಳಿಸಬೇಕಿದೆ. ಇಂತಹ ಕೆಲವು ಸಂಗತಿಗಳ ಕೆಲವು ಟಿಪ್ಪಣಿಗಳನ್ನು ಈ ಅಂಕಣದಲ್ಲಿ ಮಂಡಿಸುವ ಪ್ರಯತ್ನ ಮುಂದಿನ ಕಂತುಗಳಲ್ಲಿ ಮಾಡಲಾಗುತ್ತದೆ.

ಡಾ. ಜಾಜಿ ದೇವೇಂದ್ರಪ್ಪ, ಸಂಯೋಜಕರು, ಕನ್ನಡ ಸ್ನಾತಕೋತ್ತರ ಅಧ್ಯಯನ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಗಂಗಾವತಿ


ಇದನ್ನೂ ಓದಿ: 35,000 ಕ್ಕೂ ಹೆಚ್ಚು ಖಾಸಗಿ ಶಾಲಾ ಶಿಕ್ಷಕರು ವಜಾ: 8 ಅತಿಥಿ ಉಪನ್ಯಾಸಕರ ಆತ್ಮಹತ್ಯೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಚರಿತ್ರೆಯ ಮರು ಅವಲೋಕನ ಮಾಡುವ ವಿಧಾನ ಮತ್ತು ಸಬಾಲ್ಟ್ರನ್ ಅಧ್ಯಯನ ಇಂದಿನ ಅಗತ್ಯ… ಗತಕಾಲದ ಹೇಳು ಮತ್ತು ಕೇಳು ಸಂಪ್ರದಾಯ ಗಳು ಶಾಸ್ತ್ರೀಯ ಆದದ್ದು ಎಂದು ಎಂಬುದರ ಅವಲೋಕನ ಮತ್ತು ರೀಚೆಕ್… ಹೀಗೆ ಅನೇಕ ವಿಚಾರಗಳನ್ನು ಶಾಸನ ಚರಿತ್ರೆಯ ಕುರಿತ ಡಾ. ಜಾಜಿ ದೇವೇಂದ್ರಪ್ಪ ಅವರ ಬರಹ ಅರ್ಥಪೂರ್ಣ….

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...