ತಮಿಳುನಾಡು ಪೊಲೀಸ್ ದೌರ್ಜನ್ಯಕ್ಕೆ ಮೃತಪಟ್ಟ ಜಯರಾಜ್ ಮತ್ತು ಬೆನಿಕ್ಸ್ ಪ್ರಕರಣದಲ್ಲಿ ಆರೋಪಿಗಳಾದ ನಾಲ್ವರು ಪೊಲೀಸರನ್ನು ಬಂಧಿಸಿದ್ದು, ಇತರ ಮೂವರು ಪೊಲೀಸರ ಮೇಲೆ ಕೊಲೆ ಆರೋಪ ಹೊರಿಸಲಾಗಿದೆ.
ಕೊರೊನಾ ಲಾಕ್‌ಡೌನ್ ಸಮಯದಲ್ಲಿ ನಿಗಧಿಗಿಂತ ಹದಿನೈದು ನಿಮಿಷ ಹೆಚ್ಚು ಕಾಲ ಅಂಗಡಿ ತೆಗೆದಿದ್ದ ಕ್ಷುಲಕ ಕಾರಣಕ್ಕಾಗಿ ಪೊಲೀಸರು ಅವರ ಮೇಲೆ ಕ್ರೂರ ದೌರ್ಜನ್ಯ ಎಸಗಿದ್ದರು ಎಂದು ದಾಖಲೆಗಳು ದೃಢಪಟ್ಟ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಘಟನೆಯನ್ನು ದೇಶಾದ್ಯಂತದ ಜನರು ಖಂಡಿಸಿದ್ದು, ಪೊಲೀಸ್ ನಡವಳಿಕೆಗಳಲ್ಲಿ ತೀವ್ರ ಬದಲಾವಣೆಗೆ ಆಗ್ರಹಿಸಿದ್ದರು. ಈ ಪ್ರಕರಣವನ್ನು ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿಯವರು ಸಿಬಿಐಗೆ ಹಸ್ತಾಂತರಿಸಿದ್ದಾರೆ.
ಸಬ್ ಇನ್ಸ್‌ಪೆಕ್ಟರ್‌ಗಳಾದ ರಘು ಗಣೇಶ್ ಮತ್ತು ಬಾಲಕೃಷ್ಣನ್ ಮತ್ತು ಕಾನ್‌ಸ್ಟೆಬಲ್‌ಗಳಾದ ಮುರುಗನ್ ಮತ್ತು ಮುತ್ತುರಾಜ್ ಅವರನ್ನು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸಂಬಂಧಿತ ವಿಭಾಗಗಳ ಅಡಿಯಲ್ಲಿ ತಮಿಳುನಾಡಿನ ಸಿಐಡಿ (ಅಪರಾಧ ತನಿಖಾ ಇಲಾಖೆ) ಯ ಅಪರಾಧ ಶಾಖೆ ಬಂಧಿಸಿದೆ.
“ಎಫ್‌ಐಆರ್‌ಗಳನ್ನು ಐಪಿಸಿ 302 ಕಲಂಗೆ ಬದಲಾಯಿಸಲಾಗಿದೆ. ಐಜಿ ಮತ್ತು ಎಸ್‌ಪಿ (ಸಿಬಿ-ಸಿಐಡಿ) ಅಡಿಯಲ್ಲಿ 12 ವಿಶೇಷ ತಂಡಗಳು ಸೇರಿ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸುತ್ತಿವೆ” ಎಂದು ಇನ್ಸ್‌ಪೆಕ್ಟರ್ ಜನರಲ್ ಶಂಕರ್ ತಿಳಿಸಿದ್ದಾರೆ.
ಪೊಲೀಸರು ಈ ಹಿಂದೆ ಅನುಮಾನಾಸ್ಪದ ಸಾವಿನ ಪ್ರಕರಣಗಳನ್ನು ಮಾತ್ರ ದಾಖಲಿಸಿದ್ದರು. ಮದ್ರಾಸ್ ನ್ಯಾಯಾಲಯವು ಕೊಲೆ ಪ್ರಕರಣ ದಾಖಲಿಸುವಂತೆ ಆದೇಶಿಸಿ, ಸಿಬಿಐ-ಸಿಐಡಿಗೆ ಈ ಪ್ರಕರಣ ವರ್ಗಾಹಿಸುವಂತೆ ತಾಕೀತು ಮಾಡಿತ್ತು.
ಜೂನ್ 19 ರಂದು ಸಾಥಾನ್ಕುಳಂ ಪೊಲೀಸ್ ಠಾಣೆಯಲ್ಲಿ ಇಬ್ಬರನ್ನು ಬಂಧಿಸಿ ಹಿಂಸಿಸಲಾಯಿತು ಎಂದು ಹೇಳಲಾದ ಘಟನೆಗಳ ಬಗ್ಗೆ ಮುಖ್ಯ ಮಾಹಿತಿ ಒದಗಿಸಬಲ್ಲ ಸಿಸಿಟಿವಿ ದೃಶ್ಯಾವಳಿಗಳನ್ನು ಅಳಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿತ್ತು. ಇದರಿಂದ ನ್ಯಾಯಾಲಯವು ಮ್ಯಾಜಿಸ್ಟ್ರೇಟ್ ಅವರ ವಿಚಾರಣೆಗೆ ಅಡ್ಡಿಯುಂಟುಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಮೂವರು ಪೊಲೀಸರ ವಿರುದ್ಧ ತಿರಸ್ಕಾರ ಕ್ರಮ ಕೈಗೊಂಡಿತ್ತು.
ಮತ್ತಷ್ಟು ಸುದ್ದಿಗಳು
ತಮಿಳುನಾಡು ಲಾಕಪ್ ಡೆತ್: ಪೊಲೀಸ್ ದೌರ್ಜನ್ಯಕ್ಕೆ ಕೊನೆಯೆಂದು? ಮಾತು ಸೋತ ಭಾರತ
ತಮಿಳುನಾಡು ಲಾಕಪ್ ಡೆತ್ ಪ್ರಕರಣ: ಪೊಲೀಸರ ವಿರುದ್ಧ ಕೊಲೆ ಪ್ರಕರಣಕ್ಕೆ ಹೈಕೋರ್ಟ್ ಶಿಫಾರಸ್ಸು
ಮಗು ಸಾಯುತ್ತಿದ್ದರೂ ವೈದ್ಯರು ಮುಟ್ಟಿಲ್ಲವೆಂದು ಆರೋಪ; ಹೃದಯ ವಿದ್ರಾವಕಾರಿ ಘಟನೆ.


