Homeಮುಖಪುಟಉತ್ತರ ಕನ್ನಡದಲ್ಲಿ ಮೀಸಲಾತಿ ಮಸಲತ್ತು! ನೈಜ ಹಿಂದುಳಿದವರಿಗೆ ಸಾಮಾಜಿಕ ಅನ್ಯಾಯ!!

ಉತ್ತರ ಕನ್ನಡದಲ್ಲಿ ಮೀಸಲಾತಿ ಮಸಲತ್ತು! ನೈಜ ಹಿಂದುಳಿದವರಿಗೆ ಸಾಮಾಜಿಕ ಅನ್ಯಾಯ!!

- Advertisement -
- Advertisement -

ವಿಶಿಷ್ಟ ಭೌಗೋಳಿಕ ಪರಿಸರ, ವಿಭಿನ್ನ ಪಾರಂಪರಿಕ ಸಂಸ್ಕೃತಿಯ ಉತ್ತರ ಕನ್ನಡವು ರಾಜ್ಯದಲ್ಲಿ ಅತಿಹೆಚ್ಚು ಹಿಂದುಳಿದವರಿರುವ ಜಿಲ್ಲೆ. ಪ್ರಭಾವಿ ಬಹುಸಂಖ್ಯಾತ ಲಿಂಗಾಯತ ಸಮುದಾಯ ಸಣ್ಣ ಪ್ರಮಾಣದಲ್ಲಿರುವ ಜಿಲ್ಲೆಯಲ್ಲಿ ಕುರುಬರು ತೀರಾ ವಿರಳ. ಮತ್ತೊಂದು ಬಲಾಢ್ಯ ಸಮುದಾಯವಾದ ಒಕ್ಕಲಿಗರು ಇಲ್ಲಿಲ್ಲ. ಶೇ.10ರಷ್ಟಿರುವ ಬ್ರಾಹ್ಮಣರಲ್ಲಿ ಹವ್ಯಕ ಬ್ರಾಹ್ಮಣರ ಪಾಲೇ ದೊಡ್ಡದು. ಶೇ.10ರಷ್ಟು ಅಲ್ಪಸಂಖ್ಯಾತರಿದ್ದರೆ, ದಲಿತರಿರುವುದು ಬರೀ 5 ಪ್ರತಿಶತ. ಮುಕ್ಕಾಲು ಪಾಲು ಹಿಂದುಳಿದವರೇ ತುಂಬಿರುವ ಉತ್ತರ ಕನ್ನಡದಲ್ಲಿ ಶೇ.90 ಮಂದಿ ಜಾತಿ ಆಧಾರಿತ ಮೀಸಲಾತಿ ಪಡೆಯುತ್ತಿದ್ದಾರೆ.

ಹಾಲಕ್ಕಿ ಒಕ್ಕಲಿಗರು ಈ ಜಿಲ್ಲೆಯ ಮೂಲನಿವಾಸಿಗಳು. ನಿಜ ಅರ್ಥದಲ್ಲಿ ಶೋಷಿತರು ಮತ್ತು ತೀರಾ ಹಿಂದುಳಿದವರು. ವಿಶಿಷ್ಟ ಜಾನಪದ ರೀತಿ-ರಿವಾಜು, ಉಡುಗೆ-ತೊಡುಗೆಯ ಈ ಜನಜಾತಿ ಇತ್ತೀಚೆಗಷ್ಟೇ ನಾಗರಿಕತೆಗೆ ತೆರೆದುಕೊಳ್ಳುತ್ತಿದೆ. ದುರಂತ ಎಂದರೆ ಧ್ವನಿ ಇಲ್ಲದ ಈ ಮಂದಿಗೆ ಸಾಮಾಜಿಕ ನ್ಯಾಯಕ್ಕಾಗಿ ಜಾರಿಗೊಳಿಸಿರುವ ಮೀಸಲಾತಿ ನೀತಿಯಲ್ಲಿ ಘನಘೋರ ಅನ್ಯಾಯ-ವಂಚನೆ ಆಗುತ್ತಿದೆ. 1970ರ ಹಾವನೂರು ವರದಿಯಲ್ಲಿ ಹಾಲಕ್ಕಿ ಒಕ್ಕಲಿಗರನ್ನು ಅತಿ ಹಿಂದುಳಿದ ಜಾತಿಗಳ ಪಟ್ಟಿ ‘ಬಿಸಿಟಿ’ಯಲ್ಲಿ ಸೇರಿಸಲಾಗಿತ್ತು. ಆದರೆ ಇದೇ ಪಟ್ಟಿಯಲ್ಲಿ ಪ್ರಬಲ ‘ನಾಡವರು’ ಇದ್ದರು. ಹಾಗಾಗಿ ಹಾಲಕ್ಕಿ ಮತ್ತು ಮೀನುಗಾರರಂಥ ದಮನಿತ ಸಮುದಾಯಕ್ಕೆ ದೊಡ್ಡ ಮೋಸವಾಯಿತು!!

1986ರಲ್ಲಿ ವೆಂಕಟಸ್ವಾಮಿ ವರದಿ ಬಂದಾಗ ಜಿಲ್ಲೆಯ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದರು. ಹೆಗಡೆಜೀ ಒತ್ತಾಸೆಯಿಂದ ಹಾಲಕ್ಕಿ ಒಕ್ಕಲಿಗರು ಮತ್ತು ಗ್ರಾಮ ಒಕ್ಕಲಿಗರು Cat-I ಮೀಸಲಾತಿ ಪಟ್ಟಿಗೆ ಸೇರಿಸಲ್ಪಟ್ಟಿದ್ದರು. ಆದರೆ ಸಾಮಾಜಿಕ-ಶೈಕ್ಷಣಿಕ ಹಿಂಜರಿತದ ಈ ಮುಗ್ಧ ಸಮುದಾಯಕ್ಕೆ ಹೇಳಿಕೊಳ್ಳುವಂಥ ಅನುಕೂಲವೇನೂ ಆಗಲಿಲ್ಲ. ಇತ್ತೀಚಿನ ಕೆಲವು ವರ್ಷಗಳಿಂದ ಹಾಲಕ್ಕಿಗಳು ತಮ್ಮನ್ನು ಪರಿಶಿಷ್ಟ ಪಂಗಡ(ಎಸ್‍ಟಿ)ಕ್ಕೆ ಸೇರಿಸುವಂತೆ ಮನವಿ ಮಾಡುತ್ತಿದ್ದಾರೆ. ಬಿನ್ನವತ್ತಳೆ, ದಿಲ್ಲಿಯಾತ್ರೆ, ಸಮ್ಮೇಳನ, ನಿಯೋಗ ಹೊರಡುವುದೆಲ್ಲಾ ನಡೆಯುತ್ತಲೇ ಇದೆ. ಈ ಬುಡಕಟ್ಟು ಜನಜಾತಿ ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಲು ಸಕಲ ಅರ್ಹತೆ ಹೊಂದಿದ್ದರೂ ಜಿಲ್ಲೆಯ ಸುದೀರ್ಘ ಕಾಲದ ಧುರೀಣರಾದ ಸಂಸದ ಅನಂತಕುಮಾರ್ ಹೆಗಡೆ, ಮಾಜಿ ಮಂತ್ರಿ ದೇಶಪಾಂಡೆಗಳ ಇಚ್ಛಾಶಕ್ತಿಯ ಕೊರತೆಯಿಂದ ಇದು ಕೈಗೂಡುತ್ತಿಲ್ಲ. ಹಾಲಕ್ಕಿಗಳು ಎಸ್‍ಟಿ ಮೀಸಲಾತಿ ಪಡೆದರೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ಮುಂದೊಂದು ದಿನ ಪರಿಶಿಷ್ಟ ಪಂಗಡಕ್ಕೆ ಮೀಸಲಾಗುವ ದೂ(ದು)ರಾಲೋಚನೆಯಿಂದ ವೈದಿಕ ಮುಂದಾಳುಗಳು ಅಡ್ಡಗಾಲು ಹಾಕಿ ಕುಂತಿದ್ದಾರೆಂಬ ವರ್ತಮಾನವೂ ಜಿಲ್ಲೆಯಲ್ಲಿ ತೇಲಾಡುತ್ತಿದೆ.

ರಾಜ್ಯದ ಹಿಂದುಳಿದ ವರ್ಗದ ಪಟ್ಟಿಯ II(a)ಗೆ ಸೇರ್ಪಡೆಯಾದರೆ ಆ ಸಮುದಾಯದ ಭಾಗ್ಯದ ಬಾಗಿಲು ತೆರೆದಂತೆಯೇ ಎಂಬ ಭಾವನೆಯಿದೆ. ಹಾಗಾಗಿ ಸದ್ರಿ ಪಟ್ಟಿ ಸೇರಲು ರಾಜ್ಯದಲ್ಲಿ ದೊಡ್ಡ ಪೈಪೋಟಿಯೇ ನಡೆದಿದೆ. ಶೇ.15 ಮೀಸಲಾತಿಯಿರುವ ಈ II(a)ದಲ್ಲಿ ಉತ್ತರ ಕನ್ನಡದಲ್ಲಿ ಮುಂದುವರಿಕೆಯಲ್ಲಿ ಹೆಚ್ಚು-ಕಮ್ಮಿ ಬ್ರಾಹ್ಮಣರಿಗೆ ಸರಿಸಮನಾಗಿರುವ ‘ನಾಡವರು’ ಸೇರ್ಪಡೆಯಾಗಿದ್ದಾರೆ. ಈ ಹಿಂದೆ ಹಾವನೂರು ವರದಿಯಲ್ಲಿ ಈ ಸಬಲ ನಾಡವ ವರ್ಗ ಅತ್ಯಂತ ಹಿಂದುಳಿದ ಜಾತಿಗಳ ಪಟ್ಟಿ (ಬಿಸಿಟಿ)ಯಲ್ಲಿತ್ತು. ಅಂದು ಹಾವನೂರರ ಬಳಿ ಜೂನಿಯರ್ ಆಗಿದ್ದ ಹೈಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ಎಸ್.ಆರ್.ನಾಯಕ್‍ರ ಸ್ವಜಾತಿ ವ್ಯಾಮೋಹದ ಕೈಚಳಕದಿಂದ ಇದಾಯಿತೇ ಎಂಬ ಪ್ರಶ್ನೆ ಹಲವರಲ್ಲಿ ಉಳಿದುಬಿಟ್ಟಿದೆ. ಇದು ನಾಡವರಿಗೆ ವರವಾದರೆ ಜಿಲ್ಲೆಯ ಅರ್ಹ ಹಿಂದುಳಿದ ಜಾತಿಗಳಿಗೆ ದೊಡ್ಡ ಶಾಪವಾಗಿಬಿಟ್ಟಿತ್ತು!! ಸಾಮಾಜಿಕವಾಗಿ ಹಿಂದುಳಿದಿದ್ದ ದೀವರನ್ನು (ನಾಮಧಾರಿಗಳು) ಹಾವನೂರು ವರದಿಯಲ್ಲಿ ಮುಂದುವರಿದ ಹಿಂದುಳಿದವರ ಪಟ್ಟಿ(ಬಿಸಿಎಂ)ಗೆ ಸೇರಿಸಲಾಗಿತ್ತು. ಬಲಾಢ್ಯ ನಾಡವರೊಂದಿಗೆ ಸ್ಫರ್ಧಿಸಲಾಗದೆ ದೀವರು, ಹಾಲಕ್ಕಿ, ಅಂಬಿಗ, ಹರಿಕಾಂಡ… ಮುಂತಾದ ಹಿಂದುಳಿದವರು ಮತ್ತಷ್ಟು ಹಿಂದಕ್ಕೆಳೆಯಲ್ಪಟ್ಟರು!! ಮೀಸಲಾತಿ ಸಿಕ್ಕರೂ ಸಿಗದಂತಾಯಿತು. ಈಗಲೂ ಕೋಮಾರಪಂಚ, ಕ್ಷೌರಿಕ, ಬಡಿಗ, ಕುಂಬಾರ… ಮುಂತಾದವರು II (a)ದಲ್ಲಿ ನಾಡವರೊಂದಿಗೆ ಮತ್ತು ಇತ್ತೀಚೆಗೆ ಅಭಿವೃದ್ಧಿ-ಪ್ರಗತಿ ಕಂಡಿರುವ ನಾಮಧಾರಿಗಳ ಜತೆ ಸೆಣಸಾಡಬೇಕಾಗಿದೆ.

ಮೀನುಗಾರ ಪಂಗಡದ ‘ಮೊಗೇರ’ ಜಾತಿಯವರಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ಕೊಡುವ ವಿವಾದವಿನ್ನೂ ಬಗೆಹರಿದಿಲ್ಲ. ಕೊಳ್ಳೆಗಾಲ, ಸುಳ್ಯ ಕಡೆಯಲ್ಲಿ ಮೊಲ ಬೇಟೆಯಾಡಿ ಜೀವಿಸುವ ಮೊಗೇರ ಎಂಬ ಪಕ್ಕಾ ದಲಿತ ಪಂಗಡಕ್ಕೆ ನೀಡುವ ಪರಿಶಿಷ್ಟ ಜಾತಿ ಮೀಸಲಾತಿಗೆ ಉತ್ತರ ಕನ್ನಡದ ಮೊಗೇರರೂ ಅರ್ಹರಾಗುವಂತೆ ಮಾಡಿದ್ದು ದೇವರಾಜ ಅರಸು ಸರ್ಕಾರದಲ್ಲಿ ಪ್ರಭಾವಿ ಮಂತ್ರಿಯಾಗಿದ್ದ ಎಸ್.ಎಂ.ಯಾಹ್ಯಾ ಅವರು. ತನ್ನ ಭಟ್ಕಳ ಕ್ಷೇತ್ರದಲ್ಲಿ ಗಣನೀಯವಾಗಿದ್ದ ಮೊಗೇರರ ಓಟಿಗಾಗಿ ಮೀಸಲಾತಿ ತಂತ್ರಗಾರಿಕೆಯನ್ನು ಯಾಹ್ಯಾ ಮಾಡಿದ್ದರು. ಜಿಲ್ಲೆಯ ಪರಿಶಿಷ್ಟರು ಈ ವಂಚನೆಯನ್ನು ವಿರೋಧಿಸುತ್ತ ಬಂದಿದ್ದರು. ಎಸ್.ಎಂ.ಕೃಷ್ಣರ ಕಾಲದಲ್ಲಿ ಸಮಾಜ ಕಲ್ಯಾಣ ಇಲಾಖೆ ಆಯುಕ್ತರಾಗಿದ್ದ ಶಿವರಾಮ್ ಉತ್ತರ ಕನ್ನಡದ ಮೊಗೇರರಿಗೆ ಎಸ್‍ಸಿ ಪ್ರಮಾಣಪತ್ರ ಕೊಡುವುದನ್ನು ತಡೆಹಿಡಿದರು. ಈ ತಗಾದೆ ಸುಪ್ರೀಂಕೋರ್ಟ್‍ವರೆಗೂ ಹೋಯಿತು. 2007ರ ನಂತರ ಮೊಗೇರರಿಗೆ ಎಸ್‍ಸಿ ಮೀಸಲಾತಿ ಸಿಗುತ್ತಿಲ್ಲವಾದರೂ ಹಿಂದೆ ಪಡೆದವರು ಅದನ್ನ ಬಳಸಿ ಸವಲತ್ತು ಕಬಳಿಸುತ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಉತ್ತರ ಕನ್ನಡದ ಜಿ.ಪಂ ಅಧ್ಯಕ್ಷೆ ಜಯಶ್ರೀ ಮೊಗೇರ್!!

ಹಾಲಕ್ಕಿ ಒಕ್ಕಲಿಗರು

ಮೊಗೇರರು ಅಡ್ಡದಾರಿಯಲ್ಲಿ ಪಡೆಯುತ್ತಿದ್ದ ಮೀಸಲಾತಿಯು ಜಿಲ್ಲೆಯ ರಾಜಕೀಯ ಸಮೀಕರಣವನ್ನು ಬದಲಿಸಿತ್ತು. ಮೊಗೇರರ ಪರವಾಗಿದ್ದ ಮ್ಯಾಗಿಗೆ ಇಲೆಕ್ಷನ್‍ನಲ್ಲಿ ಇದು ದುಬಾರಿಯಾಗಿಬಿಟ್ಟಿತು. ಪರಿಶಿಷ್ಟರು ಆಕೆಗೆ ತಿರುಗಿಬಿದ್ದಿದ್ದರು. ವಿಧಾನಸಭೆಯಲ್ಲಿ ಮೊಗೇರರ ಪರ ಮಾತಾಡಿದ್ದ ಹಳಿಯಾಳದ ಅಂದಿನ ಶಾಸಕ ಸುನಿಲ್ ಹೆಗಡೆ ಸೋಲಬೇಕಾಗಿ ಬಂತು. ಸುನಿಲ್‍ಹೆಗಡೆಗೆ ಕುಮ್ಮಕ್ಕು ಕೊಟ್ಟಿದ್ದ ಕುಮಟೆಯ ದಿನಕರಶೆಟ್ಟಿಯೂ ಆಗ ಗೆಲ್ಲಲಾಗಿರಲಿಲ್ಲ. ಜಿಲ್ಲೆಯಮಟ್ಟಿಗೆ ಮೀಸಲಾತಿ ಬಲಾಢ್ಯರಿಗೆ ಫಾಯ್ದೆ ಮಾಡುತ್ತಿದೆ. ವರ್ಣವ್ಯವಸ್ಥೆಯಲ್ಲಿ ಕ್ಷತ್ರಿಯರೆಂದು ಹೇಳುವವರು ಮೀಸಲಾತಿ ಪ್ರಶ್ನೆ ಬಂದಾಗ ಹಿಂದುಳಿದವರಾಗಿ ಬಿಡುತ್ತಾರೆ; ತಾವು ಬ್ರಾಹ್ಮಣರೆಂದು ಬೀಗುವ ದೈವಜ್ಞ ಬ್ರಾಹ್ಮಣ ಸಮುದಾಯದವರು ಹಿಂದುಳಿದ ವರ್ಗದ II (a) ಪಟ್ಟಿಯ 11 (n)ದಲ್ಲಿ ಸೇರಿ ಮೀಸಲಾತಿ ಅನುಭವಿಸುತ್ತಿದ್ದಾರೆ. ಇದು ಬ್ರಾಹ್ಮಣರ ಮೀಸಲಾತಿಗೆ ಜೀವಂತ ನಿದರ್ಶನದಂತಿದೆ.

ಹಿಂದುಳಿದವರಿಗೆ ಮೀಸಲಾತಿ ಪಡೆಯುವಾಗ ಕೆನೆಪದರು (Creamy Layer) ವ್ಯಾಪ್ತಿಗೆ ಒಳಪಡಬಾರದೆಂಬ ನಿಯಮವಿದೆ. ಆದರೆ ಇದನ್ನು ಯೋಜನಾಬದ್ಧವಾಗಿ ಮುರಿದು ಭರ್ಜರಿ ಲಾಭ ಹೊಡೆಯಲಾಗುತ್ತಿದೆ. ಹಿಂದುಳಿದ ವರ್ಗದ ಪಟ್ಟಿಯಲ್ಲಿರುವ ಪ್ರಬಲರು ಅದಕ್ಕಾಗಿ ವಿವಾಹ ವಿಚ್ಛೇದನ, ದತ್ತಕ, ತಂದೆ-ತಾಯಿ ಇಬ್ಬರೂ ಉದ್ಯೋಗದಲ್ಲಿದ್ದರೆ ಒಬ್ಬರ ಆದಾಯ ಮರೆಮಾಚುವುದು… ಹೀಗೆ ನಾನಾ ನಮೂನೆಯ ಹಿಕಮತ್ತಿನಿಂದ II (a) ಮೀಸಲಾತಿ ದಕ್ಕಿಸಿಕೊಳ್ಳಲಾಗುತ್ತಿದೆ. ಮೂರು ವರ್ಷದ ಹಿಂದೆ ಕುಮಟಾದಲ್ಲಿ ವೈದ್ಯಕೀಯ ವೃತ್ತಿ ನಡೆಸುವವರೊಬ್ಬರು ಲೀಲಾಜಾಲವಾಗಿ II (a) ಪ್ರಮಾಣಪತ್ರ ಪಡೆದು ತಮ್ಮ ಕುಲಪುತ್ರಿಗೆ ಮೆಡಿಕಲ್ ಸೀಟು ಗಿಟ್ಟಿಸಿದ್ದರು! ಕಾರವಾರ ಮೆಡಿಕಲ್ ಕಾಲೇಜಿನ ಪ್ರಭಾರ ಡೀನ್ ಡಾ. ಗಜಾನನ ನಾಯಕ್ ಸಹ ಫೋರ್ಜರಿ II (a) ಮೀಸಲಾತಿಯ ಫಲಾನುಭವಿಯೇ!!

ಹಳಿಯಾಳದ ಮರಾಠರು II (a)ಗೆ ತಮ್ಮನ್ನು ಸೇರಿಸುವಂತೆ ಒತ್ತಾಯಿಸುತ್ತಿದ್ದಾರೆ. ಆದರೆ ಅದೇ ಸಮುದಾಯದ ಎಮ್ಮೆಲ್ಸಿ ಎಸ್.ಎಲ್.ಘೋಟನೇಕರ್ ಮತ್ತು ದೇಶಪಾಂಡೆ ಸಾಹೇಬರಿಗೆ ಇದ್ಯಾಕೋ ಇಷ್ಟವಿಲ್ಲ. ಮರಾಠರು ಪ್ರಬಲರಾದರೆ ತಮ್ಮ ಮಂಕುಬೂದಿ ರಾಜಕಾರಣ ನಡೆಯದೆಂಬ ಭೀತಿ ಈ ಘೋಟನೇಕರ್, ದೇಶಪಾಂಡೆ ಮತ್ತು ಬಿಜೆಪಿಯ ಸುನಿಲ್‍ಹೆಗಡೆಗೆ. ಹಾಗಾಗಿ ಹಿಂದುಳಿದ ವರ್ಗದ ಆಯೋಗದ ಹಿಂದಿನ ಅಧ್ಯಕ್ಷ ಶಂಕರಪ್ಪ ಮರಾಠರನ್ನು II (a)ಸೇರಿಸಲು ಶಿಫಾರಸ್ಸು ಮಾಡಿದರೂ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಕೈಗೂಡಿಲ್ಲ.

ಗ್ರಾಮೀಣ ಮೀಸಲಾತಿಯದು ಮತ್ತೊಂದು ಬಗೆಯ ಘಾತುಕ ಇತಿಹಾಸ. ಕಾಡಿನ ಜಿಲ್ಲೆಯಾದ ಉತ್ತರ ಕನ್ನಡದ ಹಲವು ಹಳ್ಳಿಗಳು ನಾಗರಿಕ ಸೌಲಭ್ಯ, ಮೂಲಸೌಕರ್ಯಗಳಿಲ್ಲದೆ ಒದ್ದಾಡುತ್ತಿವೆ. ಇಂಥ ಹಳ್ಳಿಗಳ ವಿದ್ಯಾರ್ಥಿಗಳು ಅನಿವಾರ್ಯವಾಗಿ ಪಟ್ಟಣದ ವಸತಿನಿಲಯದಲ್ಲಿದ್ದು ಕಲಿಕೆ ನಡೆಸಬೇಕಾಗಿದೆ. ನೈಜ ಅರ್ಹ ಗ್ರಾಮೀಣ ಹಿನ್ನೆಲೆಯಿದ್ದರೂ ಪಟ್ಟಣದ ಶಾಲೆಯಲ್ಲಿ ಕಲಿತಿದ್ದರಿಂದ ಅವರಿಗೆ ‘ಗ್ರಾಮೀಣ ಮೀಸಲಾತಿ’ ಸಿಗುತ್ತಿಲ್ಲ. ಹಾಗಂತ ಪಟ್ಟಣದ ವಿದ್ಯಾರ್ಥಿಗಳು ಪಟ್ಟಣದ ಅಂಚಿನಲ್ಲಿರುವ ಎಲ್ಲ ಸೌಲಭ್ಯದ ಖಾಸಗಿಶಾಲೆಯಲ್ಲಿ ಕಲಿತರೂ ಅವರಿಗೆ ಆ ಶಾಲೆ ಕಂದಾಯ ಇಲಾಖೆ ದಾಖಲೆಯಂತೆ ಹಳ್ಳಿಯಲ್ಲಿದೆ ಎಂಬ ಕಾರಣಕ್ಕೆ ಗ್ರಾಮೀಣ ಮೀಸಲಾತಿ ದೊರಕುತ್ತಿದೆ. ಅರ್ಹರಿಗೆ ಅನ್ಯಾಯ, ಅನರ್ಹರಿಗೆ ಅವಕಾಶ. ಇದು ಗ್ರಾಮೀಣ ಮೀಸಲಾತಿ ಅವಾಂತರ. ಆಳುವ ಪ್ರಭೃತಿಗಳು ಇತ್ತ ಗಮನ ಹರಿಸುವರೇ?!


ಇದನ್ನು ಓದಿ: ದಲಿತ ವ್ಯಕ್ತಿಯ ನಿಗೂಢ ಸಾವು ಪ್ರಕರಣ: ಹಾಲಿ, ಮಾಜಿ ಶಾಸಕರ ಜಾಣಮೌನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಇವಿಎಂ’ ತಿರುಚಲು ಶಿವಸೇನಾ ನಾಯಕನಿಗೆ 2.5 ಕೋಟಿ ರೂ.ಬೇಡಿಕೆ ಇಟ್ಟ ಯೋಧ!

0
ವಿದ್ಯುನ್ಮಾನ ಮತಯಂತ್ರಗಳನ್ನು(ಇವಿಎಂ) ತಿರುಚಲು ಶಿವಸೇನಾ ಉದ್ಧವ್‌ ಬಣದ ನಾಯಕ ಅಂಬಾದಾಸ್ ದನ್ವೆ ಅವರಿಂದ 2.5 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿದ್ದಕ್ಕಾಗಿ ಮಹಾರಾಷ್ಟ್ರ ಪೊಲೀಸರು ಛತ್ರಪತಿ ಸಂಭಾಜಿನಗರದಲ್ಲಿ ಸೇನಾ ಯೋಧನೋರ್ವನನ್ನು ಬಂಧಿಸಿದ್ದಾರೆ. ಮಾರುತಿ ಧಕ್ನೆ(42) ವಿರುದ್ಧ ದೂರು...