ಕೊರೊನಾ ಬಿಕ್ಕಟ್ಟಿನಿಂದಾಗಿ ಕಳೆದ ಮೂರ್ನಾಲ್ಕು ತಿಂಗಳಿನಿಂದ ಸಂಬಳವಿಲ್ಲದೆ ಸಂಕಷ್ಟಕ್ಕೀಡಾಗಿರುವ ಅತಿಥಿ ಉಪನ್ಯಾಸಕರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಇಂದು ಆನ್ಲೈನ್‌ನಲ್ಲಿ ಬಿತ್ತಿಪತ್ರ ಪ್ರತಿಭಟನೆ ನಡೆಸಿದರು.
ಅತಿಥಿ ಉಪನ್ಯಾಸಕರ ಸಂಘ ಹಾಗೂ AIDYO ಸಹಯೋಗದಲ್ಲಿ ಈ ಪ್ರತಿಭಟನೆ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದ್ದು, ಕೊರೊನಾದಿಂದಾಗಿ ಅತಿಥಿ ಉಪನ್ಯಾಸಕರ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಸರಕಾರ ಕೂಡಲೇ ಬಾಕಿ ವೇತನ ಪಾವತಿಸಿ ಆತ್ಮಹತ್ಯೆ ಹಾದಿಯಲ್ಲಿರುವ ಉಪನ್ಯಾಸಕರನ್ನು ರಕ್ಷಿಸಬೇಕಿದೆ ಎಂದು ಹೋರಾಟ ಸಮಿತಿಯ ಪದಾಧಿಕಾರಿಗಳು ಸರಕಾರವನ್ನು ಆಗ್ರಹಿಸಿದ್ದಾರೆ.

“ಆರ್ಥಿಕ ಸಂಕಷ್ಟದಿಂದ ಜೀವನ ನಡೆಸಲು ಆಗದೆ ಕೆಲವು ಅತಿಥಿ ಉಪನ್ಯಾಸಕರು ಈಗಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲಸ ಮಾಡಿಸಿಕೊಂಡಿರುವ ಸರಕಾರ ನಮ್ಮನ್ನು ಮರೆತಿದೆ. ಸಂಬಳವಿಲ್ಲದೆ ಇನ್ನೂ ಕೆಲವು ಉಪನ್ಯಾಸಕರು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಯಲ್ಲಿದ್ದಾರೆ ಕೂಡಲೇ ಸರಕಾರ ಸೇವಾಭದ್ರತೆ ಒದಗಿಸುವುದರೊಂದಿಗೆ ಬಾಕಿ ವೇತನ ಪಾವತಿಸಬೇಕಾಗಿದೆ” ಎಂದು ಅತಿಥಿ ಉಪನ್ಯಾಸಕರಾದ ಮಂಜುನಾಥ್ ಆಗ್ರಹಿಸಿದ್ದಾರೆ.
ಖಾಯಂ ಉಪನ್ಯಾಸಕರಂತೆ ಪ್ರತಿದಿನ ಕಾಲೇಜಿನಲ್ಲಿ ಎಲ್ಲಾ ರೀತಿಯ ಶೈಕ್ಷಣಿಕ ಚಟುವಟಿಕೆಗಳನ್ನು ಸಮರ್ಪಕವಾಗಿ ನಡೆಸಿಕೊಟ್ಟಿದ್ದೇವೆ. ಆದರೆ ಸರಕಾರ ನಮ್ಮನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರುವುದು ಖಂಡನೀಯ ಎಂದು ಹೋರಾಟ ಸಮಿತಿಯ ಮತ್ತೊಬ್ಬರು ತಿಳಿಸಿದ್ದಾರೆ.

ಅತಿಥಿ ಉಪನ್ಯಾಸಕರಿಗೆ ಸೇವಾಭದ್ರತೆ ಒದಗಿಸುವುದು, ಲಾಕ್ ಡೌನ್ ಅವಧಿಯ ವೇತನ ಬಿಡುಗಡೆ ಮಾಡುವುದು, ಅತಿಥಿ ಉಪನ್ಯಾಸಕರಿಗೆ ಕೊರೊನಾ ಪ್ಯಾಕೇಜ್ ಘೋಷಣೆ ಮಾಡುವುದು ಹಾಗೂ ಆತ್ಮಹತ್ಯೆಗೆ ಒಳಗಾದ ಕುಟುಂಬಗಳಿಗೆ ಪರಿಹಾರ ನೀಡಬೇಕು ಎಂದು ಪ್ರತಿಭಟನಾ ನಿರತ ಉಪನ್ಯಾಸಕರು ಸರ್ಕಾರವನ್ನು ಆಗ್ರಹಹಿಸಿದ್ದಾರೆ.
ಓದಿ: 35,000 ಕ್ಕೂ ಹೆಚ್ಚು ಖಾಸಗಿ ಶಾಲಾ ಶಿಕ್ಷಕರು ವಜಾ: 8 ಅತಿಥಿ ಉಪನ್ಯಾಸಕರ ಆತ್ಮಹತ್ಯೆ!


