ಕಳೆದ ಮೂರು ತಿಂಗಳಿನಿಂದ ರಾಜ್ಯದಲ್ಲಿ ಕೊರೊನಾ ಸೋಂಕು ಸುದ್ದಿ ಮಾಡಿದ್ದಕ್ಕಿಂತ ಹೆಚ್ಚು ಸುದ್ದಿ ಮಾಡಿದ ವಿಚಾರ ಏನೆಂದರೆ ಬೆಂಗಳೂರಿನ ಕೊರೊನಾ ಉಸ್ತುವಾರಿ ಸಚಿವರು ಯಾರು ಎಂಬುದು? ಆರಂಭದಿಂದಲೂ ಶ್ರೀರಾಮುಲು ಹಾಗೂ ಕೆ. ಸುಧಾಕರ್ ಈ ವಿಚಾರದಲ್ಲಿ ಪೈಪೋಟಿಗೆ ಬಿದ್ದಿದ್ದರು. ಕೊನೆಗೆ ಇಬ್ಬರನ್ನೂ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿತ್ತು. ಈ ನಡುವೆ ಇದೀಗ ಆರ್. ಅಶೋಕ್ ಅವರನ್ನೂ ಬೆಂಗಳೂರಿನಲ್ಲಿ ಕೊರೊನಾ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ.
ಈ ನಡುವೆ ಬೆಂಗಳೂರನ್ನು 7 ವಿಭಾಗಗಳಾಗಿ ವಿಂಗಡಿಸಿ ಕೊರೊನಾ ನಿಯಂತ್ರಣಕ್ಕಾಗಿ 8 ಸಚಿವರನ್ನು ನೇಮಕ ಮಾಡಲಾಗಿದೆ. ಅಲ್ಲದೆ, ಪ್ರತಿ ವಿಭಾಗದ ಉಸ್ತುವಾರಿ ನೋಡಿಕೊಳ್ಳುವ ಸಲುವಾಗಿ ಓರ್ವ ಐಎಎಸ್ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಿಸುವ ಸಲುವಾಗಿ ರಾಜ್ಯ ಸರ್ಕಾರ ಈ ಮಟ್ಟದ ಮುತುವರ್ಜಿ ವಹಿಸುತ್ತಿರುವುದು ನಿಜಕ್ಕೂ ಸ್ವಾಗತಾರ್ಹ ಬೆಳವಣಿಗೆ.
ಆದರೆ, ಇದೇ ಮುತುವರ್ಜಿ ಇತರೆ ಜಿಲ್ಲೆಗಳ ಮೇಲೆ ಏಕಿಲ್ಲ? ಬೆಂಗಳೂರಿನ ಕೊರೊನಾ ಉಸ್ತುವಾರಿಗೆ ಇರುವ ಪೈಪೋಟಿ ಇತರೆ ಜಿಲ್ಲೆಗಳಿಗೆ ಏಕಿಲ್ಲ? ಅಸಲಿಗೆ ಉಸ್ತುವಾರಿ ಸಚಿವರು ತಮ್ಮ ಜಿಲ್ಲೆಗಳಲ್ಲಿ ಮಾಡುತ್ತಿರುವ ಕೆಲಸವಾದರೂ ಏನು? ಉಸ್ತುವಾರಿ ಸಚಿವರುಗಳಿಗೆ ಅನ್ಯ ಜಿಲ್ಲೆಗಳ ಮೇಲೆ ಏಕಿಷ್ಟು ಅಸಡ್ಡೆ? ಯಾವ ಯಾವ ಜಿಲ್ಲೆಗಳಲ್ಲಿ ಪರಿಸ್ಥಿತಿ ಕೈಮೀರುತ್ತಿದೆ ಗೊತ್ತೇ?
ಜಿಲ್ಲಾ ಉಸ್ತುವಾರಿಗಳೇ ಎಲ್ಲಿದ್ದೀರಿ?
ಕರ್ನಾಟಕದಲ್ಲಿ ಈವರೆಗೆ 51,422 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಮಾರಕ ಸೋಂಕಿಗೆ 1032 ಜನ ಮೃತಪಟ್ಟಿದ್ದಾರೆ. ಕಳೆದ ಎರಡು ವಾರದಿಂದ ಪ್ರತಿದಿನ ಸರಾಸರಿಯಾಗಿ 2,500 ಜನ ರಾಜ್ಯದಲ್ಲಿ ಈ ಮಾರಣಾಂತಿಕ ಸೋಂಕಿಗೆ ತುತ್ತಾಗುತ್ತಿದ್ದಾರೆ. ಬೆಂಗಳೂರಿನಲ್ಲಿ ಅತಿಹೆಚ್ಚಿನ ಪ್ರಕರಣಗಳು ದಾಖಲಾಗುತ್ತಿವೆ ನಿಜ. ಆದರೆ, ಬೆಂಗಳೂರನ್ನು ಹೊರತುಪಡಿಸಿಯೂ ಧಾರವಾಡ, ದಕ್ಷಿಣ ಕನ್ನಡ, ಗದಗ, ರಾಯಚೂರು, ಬೀದರ್, ಕಲ್ಬುರ್ಗಿ, ಮೈಸೂರು, ಚಿತ್ರದುರ್ಗ, ಮೈಸೂರು, ರಾಮನಗರ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಪರಿಸ್ಥಿತಿ ಕೈಮೀರುತ್ತಿದೆ. ಈ ಜಿಲ್ಲೆಗಳಲ್ಲಿ ಒಂದು ದಿನಕ್ಕೆ ಸರಾಸರಿಯಾಗಿ ಕನಿಷ್ಟ 100 ಕೊರೋನಾ ಪ್ರಕರಣಗಳು ದಾಖಲಾಗುತ್ತಿವೆ. ಆಗಸ್ಟ್-ಸೆಪ್ಟೆಂಬರ್ ವೇಳೆಗೆ ಈ ಸಂಖ್ಯೆ ಎರಡು ಪಟ್ಟು ಹೆಚ್ಚಾಗಲಿದೆ ಎನ್ನಲಾಗುತ್ತಿದೆ.
ಆದರೆ, ಈ ಯಾವ ಜಿಲ್ಲೆಗಳಲ್ಲೂ ಕೊರೊನಾ ರೋಗಿಗಳನ್ನು ಆರೈಕೆ ಮಾಡಲು ಸೂಕ್ತ ಆಸ್ಪತ್ರೆಗಳಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಐಸಿಯು, ವೆಂಟಿಲೇಟರ್, ಆಕ್ಸಿಜನ್ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳ ಕೊರತೆ ಇದೆ. ಆಂಬ್ಯುಲೆನ್ಸ್ ಹಾಗೂ ನುರಿತ ವೈದ್ಯರ ಸಂಖ್ಯೆ ಕೂಡ ಜನರ ಅನುಪಾತಕ್ಕೆ ಪೂರಕವಾಗಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ರೋಗಿಗಳಿಗೆ ಶೇ.50ರಷ್ಟು ಹಾಸಿಗೆಯನ್ನು ಮೀಸಲಿಡಬೇಕು ಎಂದು ಸರ್ಕಾರ ಆದೇಶಿಸಿದೆಯಾದರೂ ಈ ಕುರಿತು ಸ್ಪಷ್ಟ ಮಾರ್ಗಸೂಚಿ ಇಲ್ಲ. ಇನ್ನೂ ಖಾಸಗಿ ಆಸ್ಪತ್ರೆಗಳಲ್ಲಂತೂ ಮಾನವೀಯತೆಯೇ ಇಲ್ಲವೇನೋ ಎಂಬಂತಾಗಿದೆ ಪರಿಸ್ಥಿತಿ.
ರಾಜ್ಯದಲ್ಲಿ ಬಹುತೇಕ ಎಲ್ಲಾ ಜಿಲ್ಲಾಡಳಿತವೂ ಪ್ರತಿದಿನ ಹೀಗೆ ಇಲ್ಲಗಳ ನಡುವೆಯೇ ದಿನ ಕಳೆಯುತ್ತಿವೆ. ಒಂದೆಡೆ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ, ಮತ್ತೊಂದೆಡೆ ಅವರ ಚಿಕಿತ್ಸೆಗೆ ಸೂಕ್ತ ಸೌಲಭ್ಯ ಒದಗಿಸುವಲ್ಲಿ ಜಿಲ್ಲಾಡಳಿತ ವಿಫಲವಾಗುತ್ತಿದೆ. ಆಸ್ಪತ್ರೆ ಕಡೆ ಬರಲು ಜನ ಹಿಂದೇಟು ಹಾಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ಕಾರಣಕ್ಕೆ ಈಗ ಸೋಂಕು ಸಾಮುದಾಯಿಕವಾಗಿ ಹರಡುತ್ತಿದೆ ಎಂದು ಕೂಡ ಹೇಳಲಾಗುತ್ತಿದೆ.
ಹಾಗಾದರೆ, ಜಿಲ್ಲಾ ಭಾಗಗಳಲ್ಲಿ ಜನರಲ್ಲಿ ಆವರಿಸಿರುವ ಈ ಭಯವನ್ನು ಹೋಗಲಾಡಿಸಿ ಎಲ್ಲರಿಗೂ ಸೂಕ್ತ ಚಿಕಿತ್ಸೆ ಮತ್ತು ಸೌಲಭ್ಯಗಳನ್ನು ಒದಗಿಸುವ ಕರ್ತವ್ಯ ಯಾರದ್ದು? ಎಂಬ ಪ್ರಶ್ನೆ ಸಾಮಾನ್ಯವಾಗಿ ಮೂಡುತ್ತದೆ. ಜಿಲ್ಲಾ ಉಸ್ತುವಾರಿ ಸಚಿವರುಗಳುಗಳಿಗೆ ಈ ಕೂಗು ಕೇಳುತ್ತಿದೆಯೇ?
ಅಸಲಿಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಕಳೆದ ಏಪ್ರಿಲ್ 09 ರಂದು ಎಲ್ಲಾ ಜಿಲ್ಲೆಗಳಿಗೂ ಉಸ್ತುವಾರಿ ಸಚಿವರನ್ನು ನೇಮಕ ಮಾಡಿದ್ದರು. ಯಾವುದೇ ಜಿಲ್ಲೆಯ ಮೂಲಭೂತ ಸಮಸ್ಯೆಯನ್ನು ಆಲಿಸುವುದು ಮತ್ತು ಆ ಸಮಸ್ಯೆಯ ಪರಿಹಾರಕ್ಕಾಗಿ ಶ್ರಮಿಸುವುದು ಜಿಲ್ಲಾ ಉಸ್ತುವಾರಿ ಸಚಿವರ ಜವಾಬ್ದಾರಿ. ಆದರೆ, ಕೊರೊನಾ ರಾಜ್ಯಾದ್ಯಂತ ವ್ಯಾಪಿಸುತ್ತಿರುವ ಸಮಯದಲ್ಲಿ ಜಿಲ್ಲಾ ಉಸ್ತುವಾರಿಗಳು ಸಚಿವರ ಕೆಲಸ ಹೆಚ್ಚಾಗಿತ್ತು. ಇವರ ತಮ್ಮ ಕರ್ತವ್ಯ ನಿಭಾಯಿಸಿದರೇ?
ಶೂನ್ಯ ದಾಖಲೆ ಬರೆದ ಉಸ್ತುವಾರಿ ಸಚಿವರುಗಳು
ಕೊರೊನಾ ಸೋಂಕು ವ್ಯಾಪಿಸುತ್ತಿರುವ ಭೀಕರ ದಿನಗಳಲ್ಲಿ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆಗೆ ಕೈಜೋಡಿಸಿ ಸೋಂಕು ನಿವಾರಣೆಗಾಗಿ ಉಸ್ತುವಾರಿ ಸಚಿವರು ಹೋರಾಡಬೇಕಿತ್ತು. ತಮ್ಮ ಜಿಲ್ಲೆಗಳಿಗೆ ಅಗತ್ಯವಾದ ವೆಂಟಿಲೇಟರ್, ವೈದ್ಯರಿಗೆ ಪಿಪಿಇ ಕಿಟ್, ಶೀಘ್ರದಲ್ಲಿ ವರದಿ ನೀಡುವ ಸಲುವಾಗಿ ಕೋವಿಡ್ ಲ್ಯಾಬ್, ರ್ಯಾಪಿಡ್ ಆಂಟಿಜೆನ್ ಟೆಸ್ಟ್ ಕಿಟ್‍ಗಳನ್ನು ಒದಗಿಸುವುದು, ಇದಕ್ಕಾಗಿ ಸರ್ಕಾರದ ಜೊತೆಗೆ ಸಮನ್ವಯ ಸಾಧಿಸುವುದು ಅವರ ಬದ್ಧತೆಯಾಗಬೇಕಿತ್ತು.
ಆದರೆ, ಯಾವ ಜಿಲ್ಲಾ ಉಸ್ತುವಾರಿ ಸಚಿವರೂ ಕನಿಷ್ಟ ತಮ್ಮ ಕ್ಷೇತ್ರಕ್ಕೆ ಹೋಗಿ ಜನರ ಸಮಸ್ಯೆ ಆಲಿಸಿದ, ಕೊರೋನಾ ಪರಿಸ್ಥಿತಿಯ ಮೇಲುಸ್ತುವಾರಿ ಮಾಡಿದ ಉದಾಹರಣೆ ನಮ್ಮ ಮುಂದೆ ಇಲ್ಲ ಎಂಬುದೇ ನಿಜ.
ಅಸಲಿಗೆ ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ. ಆದರೆ, ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಅವರು ತಮ್ಮ ಉಸ್ತುವಾರಿ ಜಿಲ್ಲೆಗೆ ತೆರಳಿ ಕೊರೊನಾ ಮೇಲುಸ್ತುವಾರಿ ನೋಡಿದ್ದು ಕೇವಲ ಒಂದು ಬಾರಿ ಮಾತ್ರ. ಈ ವೇಳೆಯೂ ಚನ್ನಪಟ್ಟಣ ಗ್ರಾಮ ಪಂಚಾಯಿತಿ ಸದಸ್ಯರು ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದರು.

ಇನ್ನೂ ಚಿತ್ರದುರ್ಗದ ಉಸ್ತುವಾರಿಯನ್ನಾಗಿ ಶ್ರೀರಾಮುಲು ಹಾಗೂ ಚಿಕ್ಕಬಳ್ಳಾಪುರದ ಉಸ್ತುವಾರಿಯಾಗಿ ಕೆ. ಸುಧಾಕರ್ ಅವರನ್ನು ನೇಮಿಸಲಾಗಿದೆ. ಆದರೆ, ಬೆಂಗಳೂರು ಉಸ್ತುವಾರಿಗಾಗಿ ಪೈಪೋಟಿಗೆ ಬಿದ್ದು ಹೋರಾಡಿದ ಇವರು ತಮ್ಮ ಜಿಲ್ಲೆಯ ಬಗ್ಗೆ ಎಷ್ಟರ ಮಟ್ಟಿಗೆ ಆಸಕ್ತಿ ತೋರಿದರು ಎಂಬುದು ದೇವರಿಗೆ ಪ್ರೀತಿ.

ಅಶ್ವತ್ಥ್ ನಾರಾಯಣ್, ಶ್ರೀರಾಮುಲು, ಸುಧಾಕರ್, ಆರ್. ಅಶೋಕ್ ಹೊರತಾಗಿಯೂ ಸಹ ಯಾವ ಸಚಿವರೂಗಳು ತಮ್ಮ ಜಿಲ್ಲೆಗಳಿಗೆ ತೆರಳಿ ಕೆಲಸ ಮಾಡಿಲ್ಲ. ಇದೇ ಕಾರಣಕ್ಕೆ ಬೆಂಗಳೂರು ಹೊರತು ಬೇರೆ ಯಾವ ಜಿಲ್ಲೆಯೂ ಗಮನ ಸೆಳೆದಿಲ್ಲ ಎಂಬುದೇ ಸತ್ಯ. ಆದರೆ, ಈ ಪೈಕಿ ವಿಜಯಪುರದ ಉಸ್ತುವಾರಿ ಶಶಿಕಲಾ ಜೊಲ್ಲೆ ಮಾತ್ರ ತಮ್ಮ ಜಿಲ್ಲೆಯಲ್ಲಿ ಓಡಾಡಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.
ಸಚಿವರುಗಳಿಗೆ ಬೆಂಗಳೂರಿನ ಮೇಲೆ ಏಕಿಷ್ಟು ಮೋಹ?
ಬೆಂಗಳೂರಿನ ಮೇಲೆ ಮಾತ್ರ ಸಚಿವರಿಗೆ ಏಕಿಷ್ಟು ಮೋಹ? ನಗರದ ಉಸ್ತುವಾರಿಗೆ ಮಾತ್ರ ಏಕೆ ಇಷ್ಟು ಹೋರಾಟ, ಮೇಲಾಟ? ಎಂಬುದು ಪ್ರಶ್ನೆ.
ಅಸಲಿಗೆ ಕೊರೋನಾ ಹೆಸರಿನಲ್ಲಿ ಬೆಂಗಳೂರಿನಲ್ಲಿ ಸಾವಿರಾರು ಕೋಟಿ ಹಣ ಓಡಾಡುತ್ತಿದೆ. ವೆಂಟಿಲೇಟರ್‍ನಿಂದ ಹಿಡಿದು ಪಿಪಿಇ ಕಿಟ್ ಖರೀದಿವರೆಗೆ ಎಲ್ಲ ವ್ಯವಹಾರಗಳೂ ಬೆಂಗಳೂರಿನಿಂದಲೇ, ಸಚಿವರ ಕಣ್ಣಳತೆಯಲ್ಲೇ ನಡೆಯುತ್ತಿದೆ. 250ರೂ ಬೆಲೆಯ ಸ್ಯಾನಿಟೈಸರ್‍ಗೆ 600ರೂ, 2500 ರೂ ಬೆಲೆಯ ಧರ್ಮಲ್ ಸ್ಕ್ರೀನಿಂಗ್ ಮೆಷಿನ್‍ಗೆ 12,000 ರೂ, 200 ರೂ ಗ್ಲೌಸ್‍ಗೆ 500 ರೂ ಸೇರಿದಂತೆ ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದ ಎಲ್ಲಾ ವಸ್ತುಗಳ ಖರೀದಿಯಲ್ಲೂ ದುಪ್ಪಟ್ಟು ಹಣ ಕೊಳ್ಳೆ ಹೊಡೆಯಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಈ ಖರೀದಿಯ ಹೆಸರಿನಲ್ಲಿ ಸುಮಾರು 25,000 ಕೋಟಿ ಭ್ರಷ್ಟಾಚಾರ ಮಾಡಲಾಗಿದೆ ಎಂದು ವಿರೋಧ ಪಕ್ಷಗಳು ಟೀಕಿಸುತ್ತಿವೆ.
ಇದೇ ಕಾರಣಕ್ಕೆ ಬೆಂಗಳೂರಿನ ಉಸ್ತುವಾರಿಗಾಗಿ ಆರ್. ಅಶೋಕ್, ಶ್ರೀರಾಮುಲು ಹಾಗೂ ಕೆ. ಸುಧಾಕರ್ ನಡುವೆ ಸಾಕಷ್ಟು ಪೈಪೋಟಿ ನಡೆಯುತ್ತಿದೆಯೇ ಎಂಬ ಪ್ರಶ್ನೆ ಕೂಡ ಎತ್ತಲಾಗಿದೆ. ಆದರೆ, ವಿಪರ್ಯಾಸ ನೋಡಿ ಬೆಂಗಳೂರಿನ ಮೇಲೆ ನಮ್ಮ ಸಚಿವರುಗಳು ಇಷ್ಟು ಕಾಳಜಿ ವಹಿಸಿಯೂ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ತಮಗೆ ಕಳಪೆ ಚಿಕಿತ್ಸೆ ಸಿಗುತ್ತಿದೆ ಎಂದು ವಿಡಿಯೋ ಮಾಡಿ ಸಾಮಾನ್ಯ ಜನ ಗೋಳಾಡುವಂತಾಗಿದೆ. ತುರ್ತು ಚಿಕಿತ್ಸೆ ಇಲ್ಲದೆ ಬೀದಿಯಲ್ಲೇ ಹೆಣವಾಗುತ್ತಿರುವ ವರದಿಗಳು ಬಂದಿವೆ. ಭಯಭೀತರಾಗಿ ಜನ ತಮ್ಮ ಊರುಗಳಿಗೆ ಹಿಂತಿರುಗುತ್ತಿದ್ದಾರೆ.
ಆದರೆ, ಜಿಲ್ಲಾ ಉಸ್ತುವಾರಿ ಸಚಿವರುಗಳ ಅಸಡ್ಡೆಯಿಂದಾಗಿ ಬೆಂಗಳೂರಿನ ಕೊರೊನಾ ಪರಿಸ್ಥಿತಿ ನಾಳೆ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಆವರಿಸಬಾರದು. ಅದಕ್ಕೂ ಮುನ್ನ ಸರ್ಕಾರ ಮತ್ತು ಸಚಿವರುಗಳು ಎಚ್ಚೆತ್ತುಕೊಳ್ಳಲಿ ಎಂಬುದೇ ಜನಸಾಮಾನ್ಯರ ಆಶಯ.


