ಕೊರೊನಾ ರೋಗಿಗಳಿಗಾಗಿ ಮೀಸಲಾದ ಬಿಹಾರದ ರಾಜಧಾನಿಯ ಪ್ರಮುಖ ಆಸ್ಪತ್ರೆಯಾದ ಪಾಟ್ನಾದ ನಳಂದ ವೈದ್ಯಕೀಯ ಕಾಲೇಜು, ಆಸ್ಪತ್ರೆಯಲ್ಲಿ ರೋಗಿಗಳು ಮತ್ತು ಮೃತ ದೇಹಗಳು ಒಂದೇ ವಾರ್ಡ್‌ನಲ್ಲಿರುವ ವಿಡಿಯೋ ವೈರಲ್ ಆಗಿದ್ದು, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹುಟ್ಟುಹಾಕಿದೆ.
ವೈರಲ್ ಆದ ವೀಡಿಯೊ ಸಾಂಕ್ರಾಮಿಕ ರೋಗಕ್ಕೆ ಬಲಿಯಾದ ದೇಹಗಳ ನಿರ್ವಹಣೆಯ ಕುರಿತು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಈ ಕುರಿತು ಪ್ರತಿಕ್ರಿಯಿಸಿದ ಬಿಹಾರ ಆರೋಗ್ಯ ಸಚಿವ ಮಂಗಲ್ ಪಾಂಡೆ ‘ಇದು ಕಳವಳಕ್ಕೆ ಕಾರಣವಾಗಿದೆ’ ಎಂದು ಹೇಳಿದ್ದಾರೆ. ಆದರೆ “ಕೊರೊನಾ ಸೋಂಕಿಗೆ ಬಲಿಯಾದವರ ದೇಹಗಳನ್ನು ಹೇಗೆ ವಿಲೇವಾರಿ ಮಾಡುವುದು ಎಂಬ ಪ್ರೋಟೋಕಾಲ್ಗಳನ್ನು ನಾವು ಅನುಸರಿಸಬೇಕಾಗಿದೆ” ಎಂದಿದ್ದಾರೆ.
ಎರಡು ದಿನಗಳಲ್ಲಿ ಎರಡನೇ ಗೊಂದಲದ ವೀಡಿಯೊ ಇದಾಗಿದೆ. ಆಸ್ಪತ್ರೆಯ ವಾರ್ಡ್‌ಗಳಲ್ಲಿ ರೋಗಿಗಳು ಹಾಸಿಗೆಗಳ ಮೇಲೆ ಮಲಗಿದ್ದಾರೆ. ಅದರ ಪಕ್ಕದಲ್ಲೇ ಮೃತ ದೇಹಗಳೂ ಇವೆ. ಕುಟುಂಬದ ಸದಸ್ಯರೂ ಅಲ್ಲಿಯೇ ಇರುವುದು ವೀಡಿಯೋದಲ್ಲಿ ಕಂಡುಬಂದಿದೆ.
ಇತ್ತೀಚಿನ ವೀಡಿಯೊದಲ್ಲಿ, ಅದನ್ನು ಚಿತ್ರೀಕರಿಸುತ್ತಿರುವ ವ್ಯಕ್ತಿಯು ಆಸ್ಪತ್ರೆಯ ಕಾರಿಡಾರ್‌ನಲ್ಲಿ ಬಿದ್ದರುವ ದೇಹವನ್ನು ತೋರಿಸುತ್ತಾ, “ಇದು ಮೊದಲ ದೇಹ” ಎಂದು ಕ್ಯಾಮೆರಾವನ್ನು ರೋಗಿಗಳಿಂದ ತುಂಬಿದ ಕೋಣೆಗೆ ಕರೆದೊಯ್ಯುತ್ತಾರೆ.
ಅವನು ನೆಲದ ಮೇಲೆ ಮಲಗಿರುವ ಮಹಿಳೆಯನ್ನು ‘ಆಂಟಿ ನೀವು ಯಾವಾಗಿನಿಂದ ಇಲ್ಲಿದ್ದೀರಿ?, ಆ ಮೃತ ದೇಹ ಎಷ್ಟು ಹೊತ್ತಿನಿಂದ ಅಲ್ಲಿದೆ’ ಎಂದು ಪ್ರಶ್ನಿಸಿದ್ದಾರೆ.
“ಯಾರಾದರೂ ಬಂದಿದ್ದಾರೆಯೇ? ಅದನ್ನು ಯಾವಾಗ ತೆಗೆದುಕೊಳ್ಳಲಾಗುವುದು ಎಂದು ಯಾರಾದರೂ ಹೇಳಿದ್ದಾರಾ?” ವೀಡಿಯೋ ಮಾಡಿದವನು ಕೇಳುತ್ತಾನೆ. “ಇಲ್ಲ” ಎಂದು ಮಹಿಳೆ ದುಗುಡದ ಧ್ವನಿಯಲ್ಲಿ ಹೇಳುತ್ತಾಳೆ.
ಕಳೆದ ಎರಡು ದಿನಗಳಲ್ಲಿ, ಶವಗಳನ್ನು ತೆಗೆದುಕೊಂಡು ಹೋಗಲು ಕುಟುಂಬದ ಸದಸ್ಯರು NMCH ಆಡಳಿತದಿಂದ 12 ಗಂಟೆಗಳ ಕಾಲ ಕಾಯಬೇಕಾಗಿದೆ.
ಈ ಕುರಿತು ಪ್ರಶ್ನಿಸಿದಾಗ, “ಶವಗಳನ್ನು ಸಂಬಂಧಿಸಿದವರಿಗೆ ಹಸ್ತಾಂತರಿಸುವ ಜವಾಬ್ದಾರಿ ಜಿಲ್ಲಾಡಳಿತದ್ದು. ಅದು ಸಂಜೆ ವೇಳೆ ಶವ ನೀಡುವುದಾಗಿ ತಿಳಿಸಿದೆ. ಏಕೆಂದರೆ ಹಗಲಿನ ವೇಳೆ ಅಂತ್ಯ ಕ್ರಿಯೆ ನಡೆಸಲು ಹಲವಾರು ಕಡೆ ಸ್ಥಳೀಯರು ವಿರೋಧಿಸುತ್ತಿದ್ದಾರೆ. ಹಾಗಾಗಿ ತಡವಾಗುತ್ತಿದೆ” ಎಂಬ ಸಮರ್ಥನೆ ಬಂದಿದೆ.
ಬಿಹಾರದಲ್ಲಿ ಕೊರೊನಾ ಸಂಬಂಧಿತ ಸಾವುಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದುವರೆಗೆ 27,000 ಕೊರೊನಾ ಪ್ರಕರಣಗಳನ್ನು ದಾಖಲಿಸಿದೆ.
ಆಸ್ಪತ್ರೆ ನಿರ್ವಹಣೆಯನ್ನು ಸುವ್ಯವಸ್ಥಿತಗೊಳಿಸಲು ರಾಜ್ಯದಾದ್ಯಂತ ಹಲವಾರು ಅಧಿಕಾರಿಗಳನ್ನು ರಾಜ್ಯ ಸರ್ಕಾರವು ನಿಯೋಜಿಸಲಾಗಿದೆ, ಆದರೆ ಪರಿಸ್ಥಿತಿ ಬದಲಾಗದೆ ಉಳಿದಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಕೋವಿಡ್ ಬಿಕ್ಕಟ್ಟನ್ನು ಸರಿಯಾಗಿ ನಿರ್ವಹಿಸಿಲ್ಲ ಎಂಬ ಆರೋಪವನ್ನು ತನಿಖೆ ಮಾಡಲು ಕೇಂದ್ರದ ಮೂರು ಸದಸ್ಯರ ತಂಡವನ್ನು ಭಾನುವಾರ ಕಳುಹಿಸಲಾಗಿದೆ.
ಇದನ್ನೂ ಓದಿ: ಬಿಹಾರ: ರಾಜ್ಯದ 8 ಜಿಲ್ಲೆಗಳ 3 ಲಕ್ಷ ಜನರು ಪ್ರವಾಹ ಪೀಡಿತರು..


