ದೆಹಲಿ ಗಲಭೆ: ಬಿಜೆಪಿ ನಾಯಕರ ವಿರುದ್ದದ ದೂರುಗಳ ನಿರ್ಲಕ್ಷ್ಯ; ತನಿಖಾ ವರದಿ
ಪೋಟೋ ಕೃಪೆ: ದಿ ಕ್ವಿಂಟ್

ಈಶಾನ್ಯ ದೆಹಲಿಯಲ್ಲಿ ಫೆಬ್ರವರಿಯಲ್ಲಿ ಸಂಭವಿಸಿದ ಗಲಭೆಗೆ ಸಂಬಂಧಿಸಿದ ದೂರುಗಳಲ್ಲಿ ದೆಹಲಿ ಪೊಲೀಸರು ಬಿಜೆಪಿ ನಾಯಕರ ವಿರುದ್ದ ಆರೋಪಗಳಿರುವ ದೂರುಗಳನ್ನು ನಿರ್ಲಕ್ಷಿಸಿದ್ದಾರೆ ಎಂದು ಎನ್‌ಡಿಟಿವಿ ತನಿಖಾ ವರದಿ ಮಾಡಿದೆ.

ಬಿಜೆಪಿ ನಾಯಕರು ಜನರನ್ನು ಉದ್ರೇಕಗೊಳಿಸಿದ್ದಾರೆ ಹಾಗೂ ಗಲಭೆ ಮಾಡಿದ್ದಾರೆ ಎಂದು ಆರೋಪಿಸಿದ್ದ ಕನಿಷ್ಠ ಎಂಟು ದೂರುಗಳಲ್ಲಿ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಎನ್‌ಡಿಟಿವಿ ಹೇಳಿದೆ. ಅದರಲ್ಲಿ ನಾಲ್ಕು ದೂರುಗಳಲ್ಲಿ ಯಾವುದೇ ಎಫ್‌ಐಆರ್‌ ಕೂಡಾ ದಾಖಲಿಸಲಾಗಿಲ್ಲ. ಉಳಿದವುಗಳನ್ನು ದೂರುಗಳೊಂದಿಗೆ ಯಾವುದೇ ಸಂಬಂಧವಿಲ್ಲದ ಪ್ರಕರಣಗಳಿಗೆ ಲಿಂಕ್ ಮಾಡಲಾಗಿದೆ ಎಂದು ಅದು ಹೇಳಿದೆ.

ಈ ದೂರಿನಲ್ಲಿ ಆರೋಪಿಗಳಾಗಿ ಬಿಜೆಪಿಯ ನಾಯಕರು, ಶಾಸಕರು, ಕೌನ್ಸಿಲರ್ ಮತ್ತು ಬಿಜೆಪಿಯ ಸಂಸದರು ಇದ್ದಾರೆ. ಬಿಜೆಪಿ ಮುಖಂಡ ಕಪಿಲ್ ಮಿಶ್ರಾ, ಕರಾವಾಲ್ ನಗರ ಶಾಸಕ ಮೋಹನ್ ಸಿಂಗ್ ಬಿಶ್ತ್, ಮುಸ್ತಾಬಾದ್ ಮಾಜಿ ಶಾಸಕ ಜಗದೀಶ್ ಪ್ರಧಾನ್, ಬಾಗಪತ್ ಸಂಸದ ಸತ್ಯ ಪಾಲ್ ಸಿಂಗ್ ಮತ್ತು ಜೋಹ್ರಿಪುರ್ ಕನ್ಹಯ್ಯ ಲಾಲ್ ಮುಂತಾದವರ ಹೆಸರುಗಳನ್ನು ದೂರುಗಳಲ್ಲಿ ಉಲ್ಲೇಖಿಸಲಾಗಿದೆ.

ಈ ವರ್ಷದ ಫೆಬ್ರವರಿ ಅಂತ್ಯದಲ್ಲಿ ನಡೆದ ಈ ಗಲಭೆಯಿಂದ ಸುಮಾರು 50 ಜನರು ಸಾವನ್ನಪ್ಪಿದರು. ಹತ್ಯೆಯಾದವರಲ್ಲಿ ಹೆಚ್ಚಿನವರು ಮುಸ್ಲಿಮರಾಗಿದ್ದು ಅನೇಕರು ಗಾಯಗೊಂಡಿದ್ದರು. ನೂರಾರು ಮನೆಗಳು ಮತ್ತು ಅಂಗಡಿಗಳು ನಾಶವಾದವು.

ಗಲಭೆ ನಡೆದು 100 ದಿನ ಕಳೆದರೂ ಕನಿಷ್ಠ ನಾಲ್ಕು ದೂರುಗಳಲ್ಲಿ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ. ಅವುಗಳಲ್ಲಿ ಒಂದು ದೂರನ್ನು ಕಪಿಲ್ ಮಿಶ್ರಾ ವಿರುದ್ದ ಫೆಬ್ರವರಿ 24 ರಂದು ಮೊಹಮ್ಮದ್ ಜಾಮಿ ರಿಜ್ವಿ ಸಲ್ಲಿಸಿದ್ದರು.

ಫೆಬ್ರವರಿ 23 ರಂದು ಕಪಿಲ್ ಮಿಶ್ರಾ ಈಶಾನ್ಯ ದೆಹಲಿಯ ಕಾರ್ಡಂಪೂರಿಯ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಪ್ರತಿಭಟನೆ ನಡೆಯುತ್ತಿರುವ ಪ್ರದೇಶಕ್ಕೆ ಬಂದಿದ್ದರು. ಬಂದೂಕುಗಳು, ಕತ್ತಿಗಳು, ತ್ರಿಶೂಲಗಳು, ಕೋಲುಗಳು, ಕಲ್ಲುಗಳು, ಬಾಟಲಿಗಳು ಇತ್ಯಾದಿಗಳನ್ನು ಹೊತ್ತ ಜನರು ಅವರೊಂದಿಗೆ ಇದ್ದರು ಎಂದು ಈ ದೂರು ಹೇಳಿದೆ.

“ಪ್ರತಿಭಟನಾಕಾರರಿಗೆ ಈಗ ಪಾಠ ಕಲಿಸಬೇಕಾಗುತ್ತದೆ” ಎಂದು ಕಪಿಲ್ ಮಿಶ್ರಾ ಹೇಳಿದ್ದಾರೆಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಅವರ ಬೆಂಬಲಿಗರು ಕಾರುಗಳನ್ನು ನಿಲ್ಲಿಸಿ, ಮುಸ್ಲಿಮರನ್ನು ಮತ್ತು ಪರಿಶಿಷ್ಟ ಜಾತಿಯ ಜನರನ್ನು ಗುರುತಿಸಿ ಅವರ ಮೇಲೆ ಹಲ್ಲೆ ಹಾಗೂ ಕಾರುಗಳಿಗೆ ಪೊಲೀಸರ ಸಮ್ಮುಖದಲ್ಲೇ ಹಾನಿ ಮಾಡಲು ಪ್ರಾರಂಭಿಸಿದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮಾರ್ಚ್ 17 ರಂದು ಮೊಹಮ್ಮದ್ ಇಲ್ಯಾಸ್ ಎಂಬವರು ಸಲ್ಲಿಸಿದ ಮತ್ತೊಂದು ದೂರಿನಲ್ಲಿ ಕಪಿಲ್ ಮಿಶ್ರಾ ಮತ್ತು ಅವರ ಸಹಚರರು ಫೆಬ್ರವರಿ 23 ರಂದು ಹಲ್ಲೆ ನಡೆಸಿರುವುದನ್ನು ಉಲ್ಲೇಖಿಸಿದ್ದಾರೆ. ಅಲ್ಲದೆ ಈ ದೂರಿನಲ್ಲಿ ಬಜೆಪಿ ಸಂಸದ ಹಾಗೂ ಪೊಲೀಸರನ್ನು ಕೂಡಾ ಉಲ್ಲೇಖಿಸಿದ್ದಾರೆ.

ಮೂರನೇ ದೂರು ಮಾರ್ಚ್ 19 ರಂದು ರೂಬಿನಾ ಬಾನೊ ನೀಡಿದರಲ್ಲಿ ಕೂಡಾ ಯಾವುದೇ ಎಫ್ಐಆರ್ ದಾಖಲಿಸಲಿಲ್ಲ. ಚುನಾವಣೆಯ ಸಮಯದಲ್ಲಿ ಕರವಾಲ್ ನಗರ ಶಾಸಕ ಮೋಹನ್ ಸಿಂಗ್ ಬಿಶ್ತ್ ಚಾಂದ್ ಬಾಗ್‌ನ ಸಿಎಎ ವಿರೋಧಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದರು, ಅವರೊಂದಿಗೆ ಭಾರಿ ಶಸ್ತ್ರಸಜ್ಜಿತ ಜನರು ಇದ್ದರು ಎಂದು ಅವರು ಆರೋಪಿಸಿದ್ದಾರೆ.

ಇತರ ನಾಲ್ಕು ಪ್ರಕರಣಗಳಲ್ಲಿ ಅವರ ದೂರನ್ನು ಮತ್ತೊಂದು ಎಫ್‌ಐಆರ್‌ಗೆ ಲಗತ್ತಿಸಲಾಗಿದೆ ಎಂದು ದೂರುದಾರರಿಗೆ ತಿಳಿಸಲಾಯಿತು. ಈ ದೂರುಗಳು ಕಪಿಲ್ ಮಿಶ್ರಾ, ಮಾಜಿ ಮುಸ್ತಾಬಾದ್ ಶಾಸಕ ಜಗದೀಶ್ ಪ್ರಧಾನ್ ಮತ್ತು ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕರಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಸಂಬಂಧಿಸಿದೆ.

ಕಪಿಲ್ ಮಿಶ್ರಾ ಅವರ ಗೂಂಡಾಗಳು ತಮ್ಮ ಅಂಗಡಿಯನ್ನು ಲೂಟಿ ಮಾಡಿದ್ದಾರೆ ಎಂದು ಆರೋಪಿಸಿ ಜಕೀರ್ ಮಲಿಕ್ ಫೆಬ್ರವರಿ 25 ರಂದು ದೂರು ನೀಡಿದ್ದರು. “ಕಪಿಲ್ ಮಿಶ್ರಾ ಲೂಟಿ ಮಾಡುವಲ್ಲಿ ಭಾಗಿಯಾಗಿದ್ದಾನೆ” ಎಂದು ದೂರಿನಲ್ಲಿ ನಿರ್ದಿಷ್ಟವಾಗಿ ಹೇಳಲಾಗಿದೆ. ಆದಾಗ್ಯೂ, ಈ ದೂರನ್ನು ಇನ್ನೊಂದು ಅಂಗಡಿ ಲೂಟಿಗೆ ಸಂಬಂಧಿಸಿ ಕಪಿಲ್ ಮಿಶ್ರಾ ಹೆಸರಿರದ ಮತ್ತೊಂದು ಎಫ್‌ಐಆರ್‌ಗೆ ಲಗತ್ತಿಸಲಾಗಿದೆ.

ಸ್ಥಳೀಯ ಬಿಜೆಪಿ ಕೌನ್ಸಿಲರ್ ಕನ್ಹಯ್ಯ ಲಾಲ್ ಫೆಬ್ರವರಿ 24 ರಂದು ಮುಖೇಶ್ ಎಂಬ ವ್ಯಕ್ತಿಯೊಂದಿಗೆ ಪ್ರಚೋದನಕಾರಿ ಭಾಷಣಗಳು ಮಾಡಿದ್ದನ್ನು ನೋಡಿದ್ದಾಗಿ ಆರೋಪಿಸಿ ನಿಸಾರ್ ಅಹ್ಮದ್ ಮಾರ್ಚ್ 19 ರಂದು ದೂರು ದಾಖಲಿಸಿದ್ದರು.

ನಿಸಾರ್ ಅಹ್ಮದ್ ಅವರ ದೂರನ್ನು ಸಹ ಮತ್ತೊಂದು ಎಫ್ಐಆರ್‌ಗೆ ಲಗತ್ತಿಸಲಾಗಿದೆ, ಅದಲ್ಲಿ ಯಾರ ಹೆಸರನ್ನು ಕೂಡಾ ಉಲ್ಲೇಖಿಸಲಾಗಿಲ್ಲ.

ಈ ಕುರಿತು ಕಪಿಲ್ ಮಿಶ್ರಾ ಸೇರಿದಂತೆ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿದರೂ ಅವರು ಪ್ರತಿಕ್ರಿಯಿಸಲಿಲ್ಲ ಎಂದು ಎನ್‌ಡಿಟಿವಿ ಹೇಳಿದೆ.

ಜಗದೀಶ್ ಪ್ರಧಾನ್, ಮೋಹನ್ ಸಿಂಗ್ ಬಿಶ್ತ್, ಕನ್ಹಯ್ಯ ಲಾಲ್ ಮತ್ತು ಸತ್ಯಪಾಲ್ ಸಿಂಗ್ ಮುಂತಾದವರು ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆಂದು ಅದು ಹೇಳಿದೆ.


ಓದಿ: ದೆಹಲಿ ಗಲಭೆ ಚಾರ್ಜ್‌ಶೀಟ್‌ನಲ್ಲಿ ಬಿಜೆಪಿ ನಾಯಕರ ದ್ವೇಷ ಭಾಷಣಗಳು ನಾಪತ್ತೆ!


 

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here