Homeಕರ್ನಾಟಕಅಂಬೇಡ್ಕರ್-ವಾಲ್ಮೀಕಿ ಭಾವಚಿತ್ರದ ಮುಂದೆ ಮದುವೆಯಾದ ಪ್ರೇಮಿಗಳು.

ಅಂಬೇಡ್ಕರ್-ವಾಲ್ಮೀಕಿ ಭಾವಚಿತ್ರದ ಮುಂದೆ ಮದುವೆಯಾದ ಪ್ರೇಮಿಗಳು.

ಸಂವಿಧಾನ ಪೀಠಿಕೆ ಓಧಿಸಿದ ಪಿಎಸ್ಐ.

- Advertisement -
- Advertisement -

ವಿವಾಹಗಳು ಅದ್ದೂರಿಯಾಗಿರಬಹುದು, ಸರಳವಾಗಿರಬಹುದು. ಅವರವರ ಶಕ್ತಿ ಸಾಮರ್ಥ್ಯಕ್ಕೆ ಅನುಗುಣವಾಗಿ ವಿವಾಹಗಳು ಜರುಗುತ್ತವೆ. ಆದರೆ ಕೊರೊನ ಕಾಲಘಟ್ಟದಲ್ಲಿ ಅದ್ದೂರಿ ವಿವಾಹಗಳು ಸರಳಗೊಂಡಿವೆ. ಕೆಲವೇ ಮಂದಿ ಸೇರಿ ಸದ್ದಗದ್ದಲವಿಲ್ಲದೆ ನೂರಾರು ವಿವಾಹಳಳು ನಡೆದು ಹೋಗಿವೆ. ವಿವಾಹಗಳು ಸರಳಗೊಳ್ಳಬೇಕು. ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕು. ಮಂತ್ರಮಾಂಗಲ್ಯ ವಿವಾಹಗಳು ನಡೆಯಬೇಕು ಎಂಬ ಆಶಯ ಎಲ್ಲೆಡೆ ವ್ಯಕ್ತವಾಗುತ್ತಿರುವ ಸಂದರ್ಭದಲ್ಲಿ ತುಮಕೂರಿನ ಮಧುಗಿರಿಯಲ್ಲಿ ಪ್ರೇಮಿಗಳ ಜೋಡಿ ಸರಳಾತಿಸರಳವಾಗಿ ಭೀಮನ ಅಮಾವಾಸ್ಯೆಯ ದಿನ ನವ ದಾಂಪತ್ಯಗೀತೆ ಹಾಡಿದೆ.

ಹೌದು, ಇದು ಹಲವು ವಿಶಿಷ್ಠದಮದುವೆ. ಆರು ತಿಂಗಳಿಂದ ಪ್ರೀತಿಸುತ್ತಿದ್ದ ಯುವಜೋಡಿ ಸ್ಪಶ್ಯ-ಅಸ್ಪೃತೆ ಬೇಲಿಗಳ ದಾಟಿ ನವದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಶ್ರೀಧರ್ ಮತ್ತು ಚಂದನ ಅವರದ್ದು ಅಂತರಜಾತಿ ವಿವಾಹ. ಮನೆಯೊಂದರಲ್ಲಿ ಪ್ರೇಮಿಗಳಿಬ್ಬರು ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ ಮತ್ತು ವಾಲ್ಮೀಕಿ ಭಾವ ಚಿತ್ರಗಳನ್ನು ಮುಂದಿಟ್ಟುಕೊಂಡು ವಿವಾಹವಾಗಿದ್ದಾರೆ. ಸಂವಿಧಾನದ ಪೀಠಿಕೆ ಓದಿ ಹೊಸ ಸಂಪ್ರದಾಯಕ್ಕೆ ನಾಂದಿಯಾಡಿದ್ದಾರೆ. ಇದರ ನೇತೃತ್ವ ವಹಿಸಿದವರು ಮಾತ್ರ ಮಧುಗಿರಿಯ ಪಿಎಸ್ಐ ಕಾಂತರಾಜು.

ಡಾ. ಬಿ. ಆರ್. ಅಂಬೇಢ್ಕರ್ ಮತ್ತು ವಾಲ್ಕೀಕಿ ತಮಗೆ ದಾರಿದೀಪ ಎಂಬುದನ್ನು ಈ ಜೋಡಿ ಸಾರಿ ಹೇಳಿದೆ. ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯುತ್ತೇವೆ ಎಂದು ಪ್ರತಿಜ್ಞೆ ಮಾಡಿದೆ. ವಾಲ್ಮೀಕಿ ಸಮುದಾಯದ ಶ್ರೀಧರ್ (ಆಟೋಚಾಲಕ) ಮತ್ತು ಮಾದಿಗ ಸಮುದಾಯದ ಚಂದನ ಪರಸ್ಪರ ಆರು ತಿಂಗಳಿಂದ ಪ್ರೀತಿಸುತ್ತಿದ್ದರು. ಇಬ್ಬರು ಮದುವೆಯಾಗಲು ಶ್ರೀಧರ್ ಪೋಷಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆದರೂ ಜಾತಿಯನ್ನು ಮೀರಿ ವಿವಾಹವಾಗಿಯೇ ತೀರುತ್ತೇವೆಂಬ ಪಣ ತೊಟ್ಟರು.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿ ಬಿಟ್ಟರು. ಪ್ರೇಮ ವಿವಾಹಕ್ಕೆ ಅಡ್ಡಿ ಮಾಡುತ್ತಿದ್ದಾರೆ. ನಮಗೆ ರಕ್ಷಣೆ ಬೇಕು ಎಂದು ವಿಡಿಯೋದಲ್ಲಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿದರು. ಹುಡುಗಿ ಮಾದಿಗ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೆ ಹುಡುಗನ ಕಡೆಯವರು ಸುತಾರಾಂ ಒಪ್ಪಿಕೊಳ್ಳಲಿಲ್ಲ. ಹೀಗಾಗಿ ಹುಡುಗಿಯನ್ನು ಮಧುಗಿರಿ ತಾಲೂಕು ಸೋಂಪುರದಲ್ಲಿಟ್ಟರು. ಪ್ರೇಮಿಗಳು ರಕ್ಷಣೆ ಕೋರಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ವಿಡಿಯೋ ಪಿಎಸ್ಐ ಕಾಂತರಾಜು ಅವರ ಗಮನಕ್ಕೆ ಬಂದಿತ್ತು.

ಕೂಡಲೇ ಪಿಎಸ್ಐ ಕಾಂತರಾಜು ಕಾರ್ಯಾಚರಣೆಗೆ ಇಳಿದು, ಪ್ರೇಮಿಗಳನ್ನು ಒಂದುಗೂಡಿಸುವ ಯತ್ನಕ್ಕೆ ಚಾಲನೆ ನೀಡಿದ್ದಾರೆ. ಶ್ರೀಧರ್ ಮತ್ತು ಚಂದನಾ ಅವರನ್ನು ಕರೆಸಿ ಮಾಹಿತಿ ಕಲೆಹಾಕಿದ ಅವರು, ಹುಡುಗಿಯ ವಯಸ್ಸು ಮೊದಲಾದ ದಾಖಲೆಗಳನ್ನು ಪರಿಶೀಲಿಸಿ, ಪ್ರೇಮಿಗಳಿಬ್ಬರು ಮದುವೆಯಾಗುವ ಕನಸ್ಸನ್ನು ಸಾಕಾರ ಮಾಡಿದ್ದಾರೆ.

ಹುಡುಗನ ಕಡೆಯವರು ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ಶ್ರೀಧರ್ ತಂದೆ-ತಾಯಿಗಳಿಂದ ಮುಚ್ಚಳಿಕೆ ಬರೆಸಿ ಕೊಂಡಿರುವ ಪಿಎಸ್ಐ ನವ ದಂಪತಿಗೆ ಯಾವುದೇ ರೀತಿಯ ತೊಂದರೆ ಕೊಡದಂತೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. ವಿವಾಹಕ್ಕೆ ಪೊಲೀಸರ ರಕ್ಷಣೆ ಸಿಕ್ಕರೂ ಜಾತಿಯ ಗೋಡೆಗಳು ಮೇಲಕ್ಕೆದ್ದು ಕುಣಿಯುತ್ತಿವೆ. ಹಾಗಾಗಿ ಉಭಯ ಸಮುದಾಯದವರು ಕೂತ ಸಮಸ್ಯೆ ಬಗೆಹರಿಸಿಕೊಳ್ಳಬೇಕೆಂಬುದು ದಲಿತ ಮುಖಂಡರ ಆಶಯ.

ಕೊರಟಗೆರೆ ತಾಲೂಕು ಚಿಂಪುಗಾನಹಳ್ಳಿಯ ಶ್ರೀಧರ್ ಆಟೋ ಓಡಿಸುತ್ತಿದ್ದರು. ಚಂದನ ಪಿಯುಸಿ ಓದುತ್ತಿದ್ದರು. ಇಬ್ಬರಲ್ಲೂ ಪ್ರೇಮಾಂಕುರ ಮೂಡಿ ವಿವಾಹ ಮಾಡಿಕೊಳ್ಳಲು ಮುಂದಾದಾಗ ಜಾತಿ ಅಡ್ಡ ಬಂದಿದ್ದು, ಐದಾರು ತಿಂಗಳಿಂದ ಪ್ರೀತಿಸುತ್ತಿದ್ದ ಯುವ ಪ್ರೇಮಿಗಳು ಇದೀಗ ಮದುವೆಯಾಗಿದ್ದು ಹುಡುಗನ ಕಡೆಯವರ ಬೆದರಿಕೆಯಿಂದಾಗಿ ತಲೆಮರೆಸಿಕೊಳ್ಳಬೇಕಾಗಿ ಬಂದಿದೆ.

ದಲಿತ ಮುಖಂಡ ನಾಗರಾಜ ನಾನುಗೌರಿ.ಕಾಂ ಜೊತೆ ಮಾತನಾಡಿ, ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ಅನ್ಯಾಯವಾದರೆ ಹೋರಾಟ ಮಾಡುತ್ತೇವೆ. ಇಲ್ಲಿ ಮೇಲ್ಜಾತಿ-ಕೆಳಜಾತಿ ಬರಲ್ಲ. ಇಬ್ಬರು ಪರಸ್ಪರ ಪ್ರೀತಿಸಿದ್ದಾರೆ. ಅನ್ಯಾಯವಾದವರಿಗೆ ರಕ್ಷಣೆ ಸಿಗಬೇಕು. ಇಲ್ಲಿ ಯಾರೂ ಕೂಡ ಅನಗತ್ಯ ಗೊಂದಲಕ್ಕೆ ಒಳಗಾಗಬಾರದು. ಉಭಯ ಕಡೆಯವರು ಮಾತುಕತೆ ನಡೆಸಿದರೆ ಎಲ್ಲವು ಸುಗಮವಾಗುತ್ತದೆ. ಒಂದಾಗಿ ಬಾಳೋಣ, ಯುವ ದಂಪತಿಗೆ ಶುಭ ಹಾರೈಸೋಣ ಎಂದರು.

ಇಂತಹ ವಿವಾಹಗಳು ಮತ್ತಷ್ಟು ಹೆಚ್ಚಬೇಕು. ಸಂವಿಧಾನ ಪೀಠಿಕೆ ಓದಿ ನವ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಈ ಜೋಡಿ ಇತರರಿಗೂ ಮಾದರಿಯಾಗಿದೆ. .ಪಿಎಸ್ಐ ಕಾಂತರಾಜ ಅವರಂಥ ಮನಸ್ಸುಗಳು ಮತ್ತಷ್ಟು ಹೆಚ್ಚಲಿ ಎಂದು ಪ್ರಜ್ಞಾವಂತರು ಹೇಳಿದ್ದಾರೆ.


ಓದಿ: ಕೊರೊನಾ ರೋಗಿಯನ್ನೇ ಪ್ರೇಮಿಸಿ, ನಿಶ್ಚಿತಾರ್ಥವಾದ ಡಾಕ್ಟರ್?


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...