Homeಅಂಕಣಗಳುಕೋವಿಡ್ ನಿಭಾಯಿಸಲು ರಾಜ್ಯ ಸರ್ಕಾರವು ವಿಫಲವಾಗಿದ್ದೆಲ್ಲಿ?

ಕೋವಿಡ್ ನಿಭಾಯಿಸಲು ರಾಜ್ಯ ಸರ್ಕಾರವು ವಿಫಲವಾಗಿದ್ದೆಲ್ಲಿ?

- Advertisement -
- Advertisement -

ಈ ಟಿಪ್ಪಣಿ ಬರೆಯುವ ಹೊತ್ತಿಗೆ ‘ನಿಮ್ಮ ಕೋವಿಡ್ ಪಾಸಿಟಿವ್ ಟೆಸ್ಟ್ ಪಾಸಿಟಿವ್’ ಎಂಬ ಬಿಬಿಎಂಪಿಯ ಫೋನ್ ಕರೆ ಸ್ವೀಕರಿಸಿದ ‘ರೋಗಿಗಳು’ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯುತ್ತಿರುವ ಸುದ್ದಿಗಳು ಒಂದಾದ ಮೇಲೆ ಒಂದರಂತೆ ಬರುತ್ತಿವೆ. ಇಂದು ಮತ್ತು ನಿನ್ನೆ ಪಾಸಿಟಿವ್ ರೋಗಿಗಳ ಸಂಖ್ಯೆ ಸಾಪೇಕ್ಷವಾಗಿ ಇಳಿದಾಗ ಒಂದು ವಾರದ ಲಾಕ್‍ಡೌನ್‍ನ ಪರಿಣಾಮವಿರಬಹುದು ಎಂಬ ಆಶಾಭಾವನೆ ಬಂದಿತ್ತು. ಆದರೆ ಇಂದು ಮತ್ತೆ ಪಾಸಿಟಿವ್ ಕೇಸುಗಳ ಸಂಖ್ಯೆ ಹೆಚ್ಚಿದೆ. ಪಾಸಿಟಿವ್ ಕೇಸುಗಳ ಸಂಖ್ಯೆಯಲ್ಲಿ ಹೆಚ್ಚಳವೆನ್ನುವುದು ಸಮಸ್ಯೆಯಲ್ಲ. ಟೆಸ್ಟ್ ಹೆಚ್ಚಾದಂತೆ ಪಾಸಿಟಿವ್ ಆದವರ ಸಂಖ್ಯೆಯೂ ಹೆಚ್ಚಾಗುತ್ತಲೇ ಇರುತ್ತದೆ. ಆದರೆ ಗಾಬರಿಯಾಗುವುದು ಸಾವಿನ ಸಂಖ್ಯೆಯನ್ನು ನೋಡಿದಾಗ.

ಈಗಲೇ ಹೀಗಿದ್ದರೆ ಇನ್ನು ಮುಂದೆ ಎಲ್ಲಾ ಆಸ್ಪತ್ರೆಗಳ ಜನರಲ್ ಬೆಡ್‍ಗಳು, ಐಸಿಯು ಬೆಡ್‍ಗಳು ತುಂಬಿ ಹೋದಾಗ ಅದನ್ನು ಹೇಗೆ ನಿಭಾಯಿಸುತ್ತಾರೆ? ಆಗ ಐಸಿಯು, ವೆಂಟಿಲೇಟರ್ ಸಿಗದೇ ಸಾಯುವವರ ಪ್ರಮಾಣ ಹೆಚ್ಚಾಗುತ್ತಲೇ ಹೋಗಲಿದೆ. ಕೊರೊನಾದ ಅಸಲೀ ಸಮಸ್ಯೆ ಇದ್ದುದೇ ಇಲ್ಲಿ. ಇದನ್ನು ಕೊರೊನಾಗೆ ಸಂಬಂಧಿಸಿದ ಮೊದಲ ಲಾಕ್‍ಡೌನ್‍ನ ಹೊತ್ತಿನಲ್ಲೇ (ಅಂದರೆ ಮಾರ್ಚ್ 23ರ ಸುತ್ತಮುತ್ತ) ತಜ್ಞರು ಸ್ಪಷ್ಟವಾಗಿ ಹೇಳಿದ್ದರು. ಯಾವುದೇ ಲಾಕ್‍ಡೌನ್ ಸೀಮಿತ ಅವಧಿಗಿರಬೇಕು ಮತ್ತು ಆ ಅವಧಿಯಲ್ಲಿ ಬೇಕಾದ ವೈದ್ಯಕೀಯ ತಯಾರಿಯನ್ನು ಮುಗಿಸಿಕೊಳ್ಳಬೇಕು ಎಂದು ಅವರೆಲ್ಲರೂ ಹೇಳಿದ್ದರು.

ಆದರೆ ದೀರ್ಘಾವಧಿಯವರೆಗೆ ವಿಸ್ತರಣೆಯಾಗಿ ದೇಶದ ಮತ್ತು ಜನರ ಆರ್ಥಿಕತೆಯನ್ನು ಧ್ವಂಸಗೊಳಿಸಿದ ಲಾಕ್‍ಡೌನ್ ಹೇರಲ್ಪಟ್ಟಿತು; ಸಾವು ಮತ್ತು ಅಪಾರ ನೋವುಗಳಿಗೂ ಕಾರಣವಾಯಿತು. ಈ ಅವಧಿಯಲ್ಲಿ ನಡೆದ ವೈದ್ಯಕೀಯ ತಯಾರಿ ಮಾತ್ರ ಅತ್ಯಲ್ಪ ಎನ್ನುವುದಕ್ಕೆ ಬೆಂಗಳೂರಿನಲ್ಲಿ ಇಂದೇನಾಗುತ್ತಿದೆಯೋ ಅದೇ ಸಾಕ್ಷಿ.

ಬೆಂಗಳೂರು ಸರ್ಕಾರೀ ಮತ್ತು ಖಾಸಗೀ ವಲಯಗಳ ವೈದ್ಯಕೀಯ ವ್ಯವಸ್ಥೆಯನ್ನು ಸಾಪೇಕ್ಷವಾಗಿ ಉತ್ತಮವಾಗಿ ಹೊಂದಿರುವ ನಗರ. ಇದಕ್ಕೆ ಹೋಲಿಸಬಹುದಾದ ನಗರಗಳು ದೇಶದಲ್ಲಿ ನಾಲ್ಕೈದು ಇರಬಹುದು ಅಷ್ಟೇ. ಕರ್ನಾಟಕ ರಾಜ್ಯವು ಭಾರತದಲ್ಲಿ ಸಾಪೇಕ್ಷವಾಗಿ ಮುಂದುವರೆದ ರಾಜ್ಯಗಳಲ್ಲಿ ಒಂದು. ಈ ರಾಜ್ಯದ ಆದಾಯವೂ ಸಾಪೇಕ್ಷವಾಗಿ ಉತ್ತಮವಾದುದೇ. ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರು ಇದ್ದುದರಲ್ಲಿ ಒಳ್ಳೆಯ ಕ್ರಮಗಳಿಗೆ ಆದೇಶಿಸಿದ್ದರು ಎಂಬ ವಾತಾವರಣ ಆರಂಭದಲ್ಲಿ ಇತ್ತು. ಆದರೆ, ಈಗ ಹಿಂತಿರುಗಿ ನೋಡಿದಾಗ ಹಲವಾರು ಎಡವಟ್ಟುಗಳು ಸಂಭವಿಸಿರುವುದು ಎದ್ದು ಕಾಣುತ್ತಿದೆ.

ಕನಿಷ್ಠ ಇನ್ನು ಮುಂದೆಯಾದರೂ ಎಚ್ಚೆತ್ತುಕೊಳ್ಳುವ ಒತ್ತಡ ನಿರ್ಮಾಣವಾಗಲಿ ಎನ್ನುವ ದೃಷ್ಟಿಯಿಂದ ರಾಜ್ಯ ಸರ್ಕಾರದ ಕಡೆಯಿಂದ ಆಗಿರುವ ಎಡವಟ್ಟುಗಳನ್ನು ಮುಂದಿಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ.

1. ತಜ್ಞರ ಅಭಿಪ್ರಾಯಗಳಿಗೆ ಬೆಲೆ ಕೊಡದೇ, ತಜ್ಞರಲ್ಲದವರ ಅಭಿಪ್ರಾಯಗಳ ಆಧಾರದ ಮೇಲೆ ಅವೈಜ್ಞಾನಿಕ ರೀತಿಯ ಕ್ರಮಗಳನ್ನು ಕೇಂದ್ರ ಸರ್ಕಾರವು ಸೂಚಿಸಿತು. ಸ್ವತಃ ಐಸಿಎಂಆರ್‍ನ ಕೆಲವು ತಂಡಗಳು ನಡೆಸಿದ ಸಮೀಕ್ಷೆಗಳನ್ನೇ ಅಲ್ಲಗಳೆಯುವ ಹೇಳಿಕೆಗಳು ಬಂದವು. ಅದೇನೇ ಇದ್ದರೂ, ಆ ಸೂಚನೆಗಳನ್ನು ಪಾಲಿಸುವುದು ರಾಜ್ಯ ಸರ್ಕಾರಗಳಿಗೆ ಅನಿವಾರ್ಯವಾಗಿತ್ತು ಎಂದು ಹೇಳಬಹುದು. ಆದರೆ ಅದನ್ನು ದಾಟಿ ಬೇರೆ ಕ್ರಮಗಳನ್ನು ಕೈಗೊಳ್ಳಬಾರದು ಎಂಬ ನಿರ್ಬಂಧ ರಾಜ್ಯಗಳ ಮೇಲೆ ಇರಲಿಲ್ಲ (ಕೇಂದ್ರದ ಪದತಲದಲ್ಲಿ ರಾಜ್ಯದ ಹಿತಾಸಕ್ತಿಯನ್ನು ಇಟ್ಟುಬಿಟ್ಟಿದ್ದುದರ ಕುರಿತು ಕಳೆದ ಸಂಚಿಕೆಯಲ್ಲಿ ಎ.ನಾರಾಯಣ ಅವರು ಖಚಿತವಾದ ವಿಶ್ಲೇಷಣೆಯನ್ನು ಮುಂದಿಟ್ಟಿದ್ದಾರೆ). ರಾಜ್ಯ ಸರ್ಕಾರವೂ ಒಬ್ಬ ಹೃದಯ ಶಸ್ತ್ರಚಿಕಿತ್ಸಾ ತಜ್ಞ ಮತ್ತು ಹೃದಯ ಚಿಕಿತ್ಸಾ ತಜ್ಞ (ಅವರ ಇತರ ಕೆಲಸಗಳ ಕುರಿತು ಎಷ್ಟೇ ಗೌರವವಿರಬಹುದಾದರೂ)ರನ್ನು ಪ್ರಮುಖ ಸಲಹೆಗಾರರನ್ನಾಗಿ ಇಟ್ಟುಕೊಂಡಿದ್ದು ಎಷ್ಟು ಸಮರ್ಪಕ ಎಂದು ಸಕಾರಣವಾಗಿ ಪ್ರಶ್ನೆಗೊಳಗಾಯಿತು.

2. ಮಿಕ್ಕ ಕ್ರಮಗಳಲ್ಲಿದ್ದ ಎಡವಟ್ಟುಗಳು ಏನೇ ಇರಲಿ, ವೈದ್ಯಕೀಯ ವ್ಯವಸ್ಥೆಯನ್ನು ಸಮರೋಪಾದಿಯಲ್ಲಿ ಸಿದ್ಧ ಮಾಡಿಕೊಳ್ಳಲು ರಾಜ್ಯ ಸರ್ಕಾರಕ್ಕೆ ಅವಕಾಶ ಇದ್ದೇ ಇತ್ತು. ಅದನ್ನು ರಾಜ್ಯ ಸರ್ಕಾರವು ಮಾಡಲಿಲ್ಲ. ಅದಕ್ಕೆ ಈ ಕೆಳಕಂಡ ಕಾರಣಗಳಿದ್ದವು.

1) ಕೇಂದ್ರದಿಂದ ಅಗತ್ಯವಿರುವ ಅನುದಾನಕ್ಕೆ ದನಿ ಎತ್ತದೇ, ಅಷ್ಟರಮಟ್ಟಿಗೆ ಸಂಪನ್ಮೂಲದ ಕೊರತೆಯನ್ನು ರಾಜ್ಯವೂ ಅನುಭವಿಸಿತು. ದನಿ ಎತ್ತದಿದ್ದುದು ಅಪರಾಧ.

2) ಈ ಸಂದರ್ಭದಲ್ಲಿ ಜನರಿಗೆ ಹೊರೆಯಾಗದೇ ಬೇರೆ ರೀತಿಯಲ್ಲಿ ಸಂಪನ್ಮೂಲ ಕ್ರೋಢೀಕರಣಕ್ಕೆ ರಾಜ್ಯ ಸರ್ಕಾರವು ಮುಂದಾಗಬಹುದಿತ್ತು. ಆದರೆ ಕೇಂದ್ರದ ಜೊತೆ ಸವ್ವಾಸೇರು ಎಂಬಂತೆ, ಜನಸಾಮಾನ್ಯರನ್ನು ಹಿಂಡುವ, ಸಾರ್ವಜನಿಕ ಸಂಪನ್ಮೂಲಗಳನ್ನು ಮಾರುವ ಮಾರ್ಗಗಳಿಗೇ ಇದೂ ಮುಂದಾಯಿತು.

3) ಅನಗತ್ಯವಾದ ಕಾಮಗಾರಿಗಳಲ್ಲಿ ಯಾವ್ಯಾವುದನ್ನು ರಾಜ್ಯ ಸರ್ಕಾರವು ನಿಲ್ಲಿಸಿತು ಎಂಬುದು ಬಹಿರಂಗಗೊಂಡಿಲ್ಲವಾದರೂ, ಅಂತಹದ್ಯಾವುದೂ ನಿಂತಂತೆ ಕಾಣುತ್ತಿಲ್ಲ. ಅಂದರೆ, ಅಧಿಕಾರಸ್ಥರಿಗೆ ಹಣ ಮಾಡಿಕೊಡುವ ಕಾಮಗಾರಿಗಳನ್ನು ನಿಲ್ಲಿಸುವ ಇರಾದೆ ಆ ಅಧಿಕಾರಸ್ಥರಿಗೆ ಇಲ್ಲ.

4) ಬದಲಿಗೆ ಇದೇ ಹೊತ್ತಿನಲ್ಲಿ ಸ್ವಂತಕ್ಕೆ ಸಂಪಾದನೆ ಮಾಡಿಕೊಳ್ಳುವ ದಾರಿಗಳನ್ನು ಮಂತ್ರಿಗಳು ಮತ್ತು ಸೂಪರ್ ಸಿಎಂ ಆದ ಮುಖ್ಯಮಂತ್ರಿಗಳ ಪುತ್ರ ಹುಡುಕುತ್ತಲೇ ಇದ್ದಾರೆ ಎಂಬ ಆರೋಪದ ಕುರಿತು ಯಾರಿಗೂ ಅನುಮಾನಗಳಿಲ್ಲ. ಅನುಮಾನಗಳಿದ್ದರೆ ಅದು ಯಾರು ಎಷ್ಟು ಮಾಡಿಕೊಳ್ಳುತ್ತಿದ್ದಾರೆ ಎಂಬ ಬಗ್ಗೆಯೇ ಹೊರತು ಈ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆಯುತ್ತಿಲ್ಲ ಎಂಬ ಬಗ್ಗೆ ಅಲ್ಲ.

5) ಕಡೆಯದಾಗಿ, ಸರ್ಕಾರವು ಬಿಐಇಸಿಯಲ್ಲಿ 10,100 ಹಾಸಿಗೆಗಳ ಕೋವಿಡ್ ಸೆಂಟರ್ ಮಾಡುತ್ತಿರುವುದರ ಬಗ್ಗೆ ಹೇಳುತ್ತಿದೆಯಾದರೂ, ಎಷ್ಟು ಹೆಚ್ಚುವರಿ ವೆಂಟಿಲೇಟರ್‍ಗಳ ವ್ಯವಸ್ಥೆ ಮಾಡಲಾಗಿದೆ ಎಂಬ ಬಗ್ಗೆ ಖಚಿತವಾದ ಮಾಹಿತಿ ಇಲ್ಲ. ಮಾರ್ಚ್ ತಿಂಗಳ ಕಡೆಯ ಭಾಗದಲ್ಲೇ ತಾಲೂಕು ಮಟ್ಟದಲ್ಲಿ ವೆಂಟಿಲೇಟರ್‍ಗಳ ವ್ಯವಸ್ಥೆ ಮಾಡಬೇಕಾದ ಅಗತ್ಯದ ಕುರಿತು ತಜ್ಞರು ಹೇಳಿದ್ದರು. ಮಂಗಳೂರಿನ ವೈದ್ಯ ಡಾ.ಶ್ರೀನಿವಾಸ ಕಕ್ಕಿಲ್ಲಾಯರು ಹೇಳುತ್ತಾ ಬಂದ ಬಹುತೇಕ ಎಲ್ಲಾ ಸಂಗತಿಗಳು ನಿಜವಾಗುತ್ತಿರುವುದು ಎಲ್ಲರೂ ನೋಡಿದ್ದೇವೆ. ಅವರು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಸುಮ್ಮನೆ ಕುಳಿತುಕೊಳ್ಳದೇ ತಮಗೆ ಸಾಧ್ಯವಿರುವ ಮಾರ್ಗಗಳಿಂದ ಸರ್ಕಾರಕ್ಕೆ ಇವೆಲ್ಲಾ ಸಂಗತಿಗಳನ್ನು ತಿಳಿಸುತ್ತಲೇ ಬಂದಿದ್ದಾರೆ.

3. ಲಾಕ್‍ಡೌನ್‍ನ ದುಷ್ಪರಿಣಾಮಗಳ ಕುರಿತು ಸರ್ಕಾರಕ್ಕೆ ಅರಿವಿತ್ತೋ ಬಿಟ್ಟಿತೋ, ಆದರೆ ಕೇಂದ್ರವು ಹೇರಿದ ಲಾಕ್‍ಡೌನ್‍ನ್ನು ತಡೆಯುವ ಸಾಧ್ಯತೆ ಇರಲಿಲ್ಲ. ಆದರೆ ಲಾಕ್‍ಡೌನ್‍ನಿಂದ ಆರ್ಥಿಕತೆಯ ಮೇಲೆ ಆದ ಆಘಾತವನ್ನು ತಡೆಯಲು ರಾಜ್ಯ ಸರ್ಕಾರವು ಶಕ್ತಿಮೀರಿ ಪ್ರಯತ್ನಿಸಬಹುದಿತ್ತು. ಯಥಾಪ್ರಕಾರ ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯನ್ನು ಬಳಸಿ ನೀಡಲಾದ ಪರಿಹಾರಗಳನ್ನು ಬಿಟ್ಟರೆ, ಘೋಷಿಸಲಾದ ಉಳಿದ ಪರಿಹಾರವು ಬಹಳಷ್ಟು ಜನರಿಗೆ ತಲುಪಲಿಲ್ಲ; ತಲುಪಿದವರಿಗೂ ಅರೆಕಾಸಿನ ಮಜ್ಜಿಗೆ ಮಾತ್ರ ಆಗಿತ್ತು. ಜನರ ಕೊಳ್ಳುವ ಶಕ್ತಿಯನ್ನು ಹೆಚ್ಚಿಸುವುದು ಹಾಗೂ ಸಾರ್ವಜನಿಕರು ಮಾಡುವ ಖರ್ಚನ್ನು ಹೆಚ್ಚಿಸಲು ಬೇಕಾದ ನೇರ ನೆರವನ್ನು ನೀಡುವುದು ಮಾತ್ರವೇ ಆರ್ಥಿಕತೆಯನ್ನು ಉಳಿಸಲು ಸಾಧ್ಯವಿತ್ತು. ಟಿಪಿಕಲ್ ಯಡಿಯೂರಪ್ಪನವರ ಶೈಲಿಯಲ್ಲಿ ವಿವಿಧ ಸಮುದಾಯಗಳನ್ನು ಹೆಸರಿಸಿ ಒಂದು ಸಾರಿ ಮಾತ್ರ ಬಿಡಿಗಾಸನ್ನು ನೀಡಲಾಯಿತು. ಅದರಿಂದ ಆರ್ಥಿಕತೆ ಮೇಲೆತ್ತುವುದು ಸಾಧ್ಯವೇ ಇರಲಿಲ್ಲ.

4. ಕೊರೊನಾ ರೋಗಿಗಳನ್ನು ಪತ್ತೆ ಹಚ್ಚುವುದು, ಪತ್ತೆಯಾದವರಿಗೆ ನೀಡಬೇಕಾದ ಸೂಚನೆಗಳು, ಸೀಲ್‍ಡೌನ್‍ನ ಕ್ರಮಗಳು, ಯಾರಿಗೆ ಯಾವ ರೀತಿಯ ಉಪಚಾರ ನೀಡಬೇಕು ಇತ್ಯಾದಿಗಳ ಕುರಿತು ಅಸಂಬದ್ಧ ಮತ್ತು ಅಸಂಗತವಾದ ರೀತಿಯ ಪ್ರೊಟೋಕಾಲ್‍ಗಳಿದ್ದವು. ಒಂದು ಉದಾಹರಣೆ ನೀಡುವುದಾದರೆ, ಪಾಸಿಟಿವ್ ಬಂದವರನ್ನು ಯಾವುದೇ ರೋಗಲಕ್ಷಣಗಳಿಲ್ಲದಿದ್ದರೂ ಎತ್ತಾಕಿಕೊಂಡು ಹೋಗಿ ಆಸ್ಪತ್ರೆಗೆ ಸೇರಿಸುವುದನ್ನು ಸರ್ಕಾರವೇ ಮಾಡುತ್ತಿತ್ತು. ಆದರೆ, ರೋಗಲಕ್ಷಣಗಳಿದ್ದವರಿಗೆ ಟೆಸ್ಟ್ ಆದ ನಂತರ ಪಾಸಿಟಿವ್ ಹೌದೋ ಅಲ್ಲವೋ ಎಂಬ ರಿಪೋರ್ಟ್‍ಗೆ ಒಂದು ವಾರ ತೆಗೆದುಕೊಳ್ಳುತ್ತದೆ. ಇದಕ್ಕಿಂತ ಅಸಂಬದ್ಧತೆ ಇನ್ನೇನಿರಲು ಸಾಧ್ಯ? ಈಗಲೂ ಖಾಸಗಿಯಲ್ಲಿ ಪರೀಕ್ಷೆ ಮಾಡಿಸಿದರೆ 2 ದಿನದಲ್ಲಿ ಬರುವ ವರದಿಯು ಸರ್ಕಾರೀ ಕೇಂದ್ರದಲ್ಲಿ ಪರೀಕ್ಷೆ ಮಾಡಿಸಿದರೆ ಒಂದು ವಾರ ತೆಗೆದುಕೊಳ್ಳುತ್ತದೆ. ಇಂತಹ ಹಲವು ಸಂಗತಿಗಳು ಈಗಲೂ ನಡೆಯುತ್ತಿವೆ.

5. ರಾಜ್ಯ ಸರ್ಕಾರದಲ್ಲಿ ಇಂತಹ ಬಿಕ್ಕಟ್ಟನ್ನು ಸಮರ್ಥವಾಗಿ ನಿಭಾಯಿಸಬಲ್ಲ ಅಧಿಕಾರಿಗಳ ದೊಡ್ಡ ಹಿಂಡಿದೆ. ಅದೇ ರೀತಿಯಲ್ಲಿ ಸಾಂಕ್ರಾಮಿಕ ರೋಗ ತಜ್ಞರು, ವೈರಾಲಜಿಸ್ಟ್‍ಗಳು ಡಾ.ಕಕ್ಕಿಲ್ಲಾಯರ ರೀತಿಯ ತಜ್ಞರು ಸಾಕಷ್ಟು ಜನರಿದ್ದಾರೆ. ರೋಗವನ್ನು ನಿಯಂತ್ರಿಸುವ ವಿಧಾನಗಳ ಕುರಿತು ವೈದ್ಯಕೀಯ ತಜ್ಞರನ್ನೂ, ಇತರ ವ್ಯವಸ್ಥೆಯನ್ನು ನಿಭಾಯಿಸಲು ಸಮರ್ಥ ಅಧಿಕಾರಿಗಳ ತಂಡವನ್ನೂ ನಿಯೋಜಿಸಿ ಅವರಿಗೆ ಬೇಕಾದ ನಾಯಕತ್ವ, ಅನುಕೂಲ, ಅನುದಾನಗಳನ್ನು ಮಾಡಿಕೊಡುವ ರಾಜಕೀಯ ನಾಯಕತ್ವವನ್ನು ನೀಡುವ ಕೆಲಸ ಆದಂತೆ ಕಾಣುತ್ತಿಲ್ಲ. ಅಂತಹ ಅಧಿಕಾರಿಗಳಲ್ಲಿ ಕೆಲವರಿಗೆ ಈಗ ಕೆಲವು ಕೆಲಸಗಳನ್ನು (ಸಮುದಾಯವನ್ನು ಒಳಗೊಳ್ಳುವುದು ಇತ್ಯಾದ) ನೀಡಲಾಗಿದೆಯಾದರೂ, ಅವೆಲ್ಲವೂ ಬಿಡಿಬಿಡಿಯಾಗಿ ನಡೆದಂತೆ ಕಾಣುತ್ತಿದೆ. ಇದು ದಕ್ಷ ಆಡಳಿತಗಾರರ ಲಕ್ಷಣವಲ್ಲ.

6. ಇನ್ನು ರಾಜ್ಯ ಸರ್ಕಾರದ ಮಂತ್ರಿಗಳ ವಿಚಾರವನ್ನಂತೂ ದೇವರೇ ಕಾಪಾಡಬೇಕು. ಅವರುಗಳ ಮಧ್ಯೆ ಇದ್ದ ಸ್ಪರ್ಧೆಯನ್ನು ನಿಭಾಯಿಸುವುದೇ ಮುಖ್ಯಮಂತ್ರಿ ಯಡಿಯೂರಪ್ಪನವರ ಕೆಲಸವಾಗಿದ್ದಿರಬಹುದು.

ಆರಂಭಕ್ಕೆ ಇವಿಷ್ಟನ್ನು ಇಲ್ಲಿ ಕಾಣಿಸಿರುವುದಕ್ಕೆ ಕಾರಣವಿದೆ. ಇನ್ನು ಮುಂದೆ ನ್ಯಾಯಪಥ ಪತ್ರಿಕಾ ಬಳಗ ಮತ್ತು ನಾನುಗೌರಿ.ಕಾಂ ಇನ್ನು ಮುಂದೆ ನಿರಂತರವಾಗಿ ಕೊರೊನಾ ವಿಚಾರದ ನಿಭಾವಣೆಯ ಕುರಿತು ರಚನಾತ್ಮಕ ಹಾಗೂ ವಿಮರ್ಶಾತ್ಮಕ ಕೆಲಸಗಳನ್ನು ಮಾಡಲಿದೆ. ಪತ್ರಿಕೆಯ ಓದುಗರೂ ಇದರಲ್ಲಿ ಸಕ್ರಿಯವಾಗಿ ಭಾಗವಹಿಸಬೇಕೆಂದು ಕೋರುತ್ತೇವೆ.


ಇದನ್ನು ಓದಿ: ವರವರ ರಾವ್ ಅನಾರೋಗ್ಯದ ಸ್ಥಿತಿಯನ್ನು ದುರುಪಯೋಗ ಮಾಡುತ್ತಿದ್ದಾರೆ; ಅವರಿಗೆ ಜಾಮಿನು ನೀಡಕೂಡದು: NIA

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...