Homeಮುಖಪುಟಗತದ ನೆನಪು ಹಾಗು ಶ್ರೀಅನಂತಪದ್ಮನಾಭ ಸ್ವಾಮಿ ದೇವಾಲಯ ವ್ಯಾಜ್ಯವು

ಗತದ ನೆನಪು ಹಾಗು ಶ್ರೀಅನಂತಪದ್ಮನಾಭ ಸ್ವಾಮಿ ದೇವಾಲಯ ವ್ಯಾಜ್ಯವು

‘ನೆನಪು ಎಂಬುದು ಗತಕಾಲವನ್ನು ಕೆದಕುವ ಸಾಧನವಲ್ಲ, ಅದು ಗತಕಾಲವನ್ನು ಹುದುಗಿಸಿ ಇಟ್ಟುಕೊಂಡಿರುವ ಮಾಧ್ಯಮ’ - ವಾಲ್ಟರ್ ಬೆಂಜಮಿನ್, ಜರ್ಮನಿಯ ತತ್ವ ಚಿಂತಕ

- Advertisement -
- Advertisement -

ಭಾರತದಲ್ಲಿ ದೇವಸ್ಥಾನಗಳು ವಾಸ್ತುಶಿಲ್ಪ ಕಲೆಯ ಮೇರುತಾಣಗಳೂ ಹೌದು; ದೈವ ಶ್ರದ್ಧೆಯ ಕೇಂದ್ರಗಳೂ ಹೌದು; ಇಷ್ಟೇ ಆಗಿದ್ದರೆ ಅವು ಕಲಾಮೀಮಾಂಸೆ ಹಾಗು ಆಧ್ಯಾತ್ಮ ತತ್ವ ಅಧ್ಯಯನದ ವಿಷಯಗಳಾಗಿರುತ್ತಿದ್ದವು. ಆದರೆ, ಲಗಾಯ್ತಿನಿಂದಲೂ ಅವು ಆಸ್ತಿ, ಸಾಮಾಜಿಕ-ರಾಜಕೀಯ ಅಧಿಕಾರ ಪ್ರತಿಷ್ಠೆಯ ನೆಲೆಗಳೂ ಆಗಿದ್ದು, ಹಿಂಸೆ, ಧ್ವಂಸ, ಲೂಟಿ, ವ್ಯಾಜ್ಯಗಳ ಲೌಕಿಕ ಚರಿತ್ರೆಯ ಅರ್ಥಕೋಶಗಳಾಗಿಯೂ ಇವೆ.

ಜಾತಿ-ಆಸ್ತಿ-ಲಿಂಗ ಅಧಿಕಾರ ಮೇಲ್ಮೆ-ತಾರತಮ್ಯಗಳ ಸಾಮಾಜಿಕ ಸಂಘರ್ಷದಲ್ಲಿ ದೇವಸ್ಥಾನಗಳು ನಿರ್ಣಾಯಕ ಸಂಸ್ಥೆಗಳಾಗಿ ಇರುವುದರಿಂದ, ಎಂಥಾ ಕಲಾಭಿಮಾನಿಗಳೂ, ಭಕ್ತರೂ, ನ್ಯಾಯ ತರ್ಕವೆತ್ತರೂ ಸಹ ಅಧಿಕಾರ ಪರ-ವಿರುದ್ಧ ನಿಲುವುಗಳಲ್ಲಿ ಸಿಕ್ಕಿ ಹಾಕಿಕೊಳ್ಳದೆ ವಿಧಿಯಿಲ್ಲ. ಜುಲೈ 13,2020 ರಂದು, ತಿರುವನಂತಪುರದ ಪ್ರತಿಷ್ಠಿತ ಶ್ರೀಪದ್ಮನಾಭ ಸ್ವಾಮಿ ದೇವಾಲಯದ ಆಡಳಿತ ವ್ಯಾಜ್ಯದ ಕುರಿತು ಸರ್ವೋಚ್ಛ ನ್ಯಾಯಾಲಯವು ನೀಡಿರುವ ತೀರ್ಪು ಇದಕ್ಕೊಂದು ಸಮಕಾಲೀನ ಉದಾಹರಣೆಯಾಗಿದೆ.

ಶ್ರೀ ಅನಂತಪದ್ಮನಾಭ ದೇವಸ್ಥಾನದ ಪ್ರಾಚೀನತೆಯ ಕುರಿತು ಹಲವು ವಾದಗಳು ಇವೆ. ತಮಿಳು ಸಂಗಂ ಕಾವ್ಯದ ಕೊನೆಯ ಕೃತಿ ’ಸಿಲಪ್ಪಾದಿಗಾರಂ’ನಲ್ಲಿ ಈ ದೇವಸ್ಥಾನದ ಸಿರಿಯ ಉಲ್ಲೇಖವಿದೆ ಎಂದು ಹೇಳುವವರಿದ್ದಾರೆ; ಚೇರ, ಪಾಂಡ್ಯ, ಪಲ್ಲವ ವಂಶಸ್ಥರ ಆಳ್ವಿಕೆಯ ಕಾಲದಲ್ಲೂ ಇದು ಅಧಿಕಾರ ಪ್ರತಿಷ್ಠೆ ಹಾಗು ಸಂಪತ್ತಿನ ಕೇಂದ್ರವಾಗಿರುವ ಉಲ್ಲೇಖಗಳನ್ನು ತೋರಿಸುವವರಿದ್ದಾರೆ; ಕ್ರಿಸ್ತಶಕ 6ನೇ ಶತಮಾನದಲ್ಲಿ ಈಗಿರುವ ಸ್ಥಳದಲ್ಲಿ ದೇವಸ್ಥಾನವು ಕಟ್ಟಲ್ಪಟ್ಟಿರುವ ಕುರಿತು ದಾಖಲೆಗಳು ಇವೆಯಂತೆ.

ಖಾತ್ರಿಯಾಗಿ ಗೊತ್ತಿರುವುದೆಂದರೆ, ಹದಿನೆಂಟನೇ ಶತಮಾನದ ಮೊದಲಾರ್ಧದವರೆಗೂ ದೇವಾಲಯದ ಆಡಳಿತ ಉಸ್ತುವಾರಿಯನ್ನು ಏಳು ಮಂದಿ ಬ್ರಾಹ್ಮಣ ವಂಶದವರು ಹಾಗು ಒಂದು ಪಾಳೇಗಾರಿ ವಂಶಸ್ಥರನ್ನು ಒಳಗೊಂಡ ’ಎಂಟುವರೆ ಮಂಡಳಿ’ಯು ನಿರ್ವಹಿಸುತ್ತಿದ್ದು, 1754ರ ಹೊತ್ತಿಗೆ ತಿರುವಂಕೂರು ರಾಜ ಮಾರ್ತಾಂಡ ವರ್ಮನು, ದೇವಸ್ಥಾನವನ್ನು ತನ್ನ ಸುಪರ್ದಿಗೆ ತೆಗೆದುಕೊಂಡು, ಈಗಿರುವ ಸ್ವರೂಪದ ವೈಭವ ವಾಸ್ತುಶಿಲ್ಪದ ದೇವಾಸ್ಥಾನ ನಿರ್ಮಿಸಿದನು ಎಂಬುದು.

ಇದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ, ಮಾರ್ತಾಂಡ ವರ್ಮನು ತನ್ನ ಸಮಸ್ತ ಸಂಪತ್ತು ಹಾಗು ಆಳ್ವಿಕೆಯ ಅಧಿಕಾರವನ್ನು ಶ್ರೀಪದ್ಮನಾಭ ಸ್ವಾಮಿಗೆ ಒಪ್ಪಿಸಿ, ಸ್ವಾಮಿಯ ದಾಸನಾಗಿ ರಾಜ್ಯಭಾರ ನಡೆಸುವ ಕ್ರಮ ಕೈಗೊಂಡನು.

ಆ ಕಾರಣವಾಗಿ ತಿರವಂಕೂರು ರಾಜವಂಶದವರ ಹೆಸರಿನ ಮುಂದೆ ’ಶ್ರೀಪದ್ಮನಾಭದಾಸ’ ಎಂಬ ಅಂಕಿತವು ಲಗ್ಗತ್ತಿಸುವುದನ್ನು ರೂಢಿಗೆ ತಂದನು. ಈ ಚಾರಿತ್ರಿಕ ನಡೆಯಿಂದಾಗಿ, ಸದರಿ ರಾಜವಂಶ ಹಾಗು ದೇವಾಸ್ಥಾನಗಳ ನಡುವೆ ಭಕ್ತಿ ಹಾಗು ಅಧಿಕಾರಗಳು ಕಲಸಿದಂತಹ ಒಂದು ಘನವಾದ ಭಾವರೂಪವು ಆಕಾರ ಪಡೆದು ಜನರ ಮನಸ್ಸಿನಲ್ಲಿ ಅಚ್ಚೊತ್ತಿಬಿಟ್ಟಿದೆ.

ರಾಜ ಹಾಗು ಪ್ರಜೆಗಳ ನಡುವೆ ’ಶ್ರೀಪದ್ಮನಾಭದಾಸ’ತನವು ಜೀವಂತ ಕೊಂಡಿಯಾಗಿಬಿಟ್ಟು, ರಾಜನ ಆಳ್ವಿಕೆಯ ಅಧಿಕಾರಕ್ಕೆ ಮಮಕಾರಭರಿತ ಸಮ್ಮತಿಯು ಲಭ್ಯವಾಗಿಬಿಡುವ ಸಾಮಾಜಿಕ ಮನೋಭಾವವು, ನಂತರದ ಎರಡು ಶತಮಾನಗಳ ಕಾಲದ ಸಾಮಾಜಿಕ-ರಾಜಕೀಯ ಪರಿವರ್ತನೆ-ಸ್ಥಿತ್ಯಂತರಗಳ ನಂತರವೂ ಅಚಲವಾಗಿ ಉಳಿದಿರಬಹುದಾದ ವಿದ್ಯಮಾನವನ್ನು ಕಡೆಗಣಿಸುವ ಹಾಗಿಲ್ಲ.

1947ರ ವರೆಗಿನ ಬ್ರಿಟಿಷ್ ವಸಾಹತು ಆಳ್ವಿಕೆ, 1947ರ ನಂತರದ ಸ್ವತಂತ್ರ ಭಾರತದ ಪ್ರಜಾಪ್ರಭುತ್ವ ಆಳ್ವಿಕೆಯಲ್ಲಿ ನಿರೂಪಿತವಾದ ನಿಯಮಾವಳಿ, 2008-2020ರವರೆಗೆ ಕೆಳಹಂತದ ನ್ಯಾಯಾಲಯಗಳಿಂದ ಹಿಡಿದು ಸರ್ವೋಚ್ಛ ನ್ಯಾಯಾಲಯದ ಕಟ್ಟೆ ಹತ್ತಿದ ಪ್ರಸ್ತುತ ದೇವಸ್ಥಾನದ ಆಡಳಿತಾಧಿಕಾರದ ವ್ಯಾಜ್ಯದ ವಾದ-ವಿವಾದಗಳ ಉದ್ದಕ್ಕೂ, ’ಶ್ರೀಪದ್ಮನಾಭದಾಸ’ತನದ ಪ್ರಭಾವವು ಕುತೂಹಲಕರವಾಗಿದೆ.

ಬ್ರಿಟಿಷ್‌ ವಸಾಹತುಶಾಹಿಯ ಕಾಲದಲ್ಲಿ, ಕೊಚ್ಚಿ-ತಿರುವಂಕೂರು ರಾಜ್ಯಗಳ ದೇವಾಸ್ಥಾನಗಳಲ್ಲಿನ ಸಂಪ್ರದಾಯಿಕ ರೂಢಿಗಳಿಗೆ ಅಧಿಕೃತತೆ ನೀಡಿ, ಆಡಳಿತದ ಉಸ್ತುವಾರಿಯನ್ನು ತಿರುವಂಕೂರು-ಕೊಚ್ಚಿ ದೇವಸ್ವಂ ಬೋರ್ಡ್ ಎಂಬ ಪ್ರಭುತ್ವ ನಿಯಂತ್ರಣದ ಸಂಸ್ಥೆಗೆ ವಹಿಸಲಾಗಿತ್ತು; ತಿರವಂಕೂರಲ್ಲಿ ರಾಜವಂಶಾಡಳಿತವೇ ಪ್ರಭುತ್ವವಾಗಿದ್ದರಿಂದ, ದೇವಸ್ಥಾನವು, ರಾಜವಂಶದ ವ್ಯವಸ್ಥಾಪಕ ನಿಯಂತ್ರಣದಲ್ಲಿ ಗೊಂದಲವಿಲ್ಲದೆ ಮುಂದುವರೆದಿತ್ತು.

1947ರಲ್ಲಿ ವಸಾಹತುಶಾಹಿಯಿಂದ ಸ್ವಾತಂತ್ರ್ಯ ಪಡೆದ ನಂತರ, ಭಾರತದ ನೂರಾರು ರಾಜವಂಶ ಅಡಳಿತದಲ್ಲಿದ್ದ ಪ್ರಾಂತ್ಯಗಳನ್ನು ಭಾರತದ ಗಣ ರಾಜ್ಯದಲ್ಲಿ ವಿಲೀನಗೊಳಿಸಲು Instrument of Accession ಎಂಬ ನಿಯಮಾವಳಿಗಳ ಅನುಸಾರ, ರಾಜರ ಜೊತೆ ಸಂಧಾನ ನಡೆಸುವ ಕಾರ್ಯ ಶುರುವಾಯಿತು.

ಆಗ, ಶ್ರೀ ಅನಂತಪದ್ಮನಾಭ ಸ್ವಾಮಿ ದೇವಾಸ್ಥಾನ ಒಂದನ್ನು ಹೊರತುಪಡಿಸಿ, ತಿರವಂಕೂರ್-ಕೊಚ್ಚಿ ಪ್ರಾತ್ಯಂದ ದೇವಸ್ಥಾನಗಳ ಆಡಳಿತ ಉಸ್ತುವಾರಿಯನ್ನು, ಇದೀಗ ಪ್ರಜಾಪ್ರಭುತ್ವ ಆಡಳಿತ ಪದ್ಧತಿಗೆ ಪರಿವರ್ತಿತವಾದ ಸರಕಾರದ ನಿಯಂತ್ರಣದ ದೇವಸ್ವಂ ಬೋರ್ಡ್‍ಗೆ ನೀಡಲಾಯಿತು; ಒಂದು ವಿಶೇಷವಾದ ನಿಯಮದ ಮೂಲಕ ಈ ದೇವಸ್ಥಾನದ ಉಸ್ತುವಾರಿಯ ಹಕ್ಕನ್ನು ತಿರವಂಕೂರ್ ರಾಜನ ನಿಯಂತ್ರಣದ ಟ್ರಸ್ಟಿಗೆ ನೀಡಲಾಯಿತು. ಆಗ, ರಾಜರಾಗಿದ್ದ ಬಲರಾಮ ವರ್ಮರ ಸುಪರ್ದಿನ ಟ್ರಸ್ಟ್ ಹಿಂದಿನಂತೇ ತನ್ನ ಆಡಳಿತ ನಿಯಂತ್ರಣ ಹಕ್ಕು ಉಳಿಸಿಕೊಂಡಿತು.

1971ರಲ್ಲಿ ಇಂದಿರಾ ಗಾಂಧಿಯವರು, ಸಂವಿಧಾನಿಕ ತಿದ್ದುಪಡಿಯ ಮೂಲಕ, ಮಾಜಿ ರಾಜರ ಪದವಿ, ಗೌರವ ಧನ ಪಡೆಯುವ ಹಕ್ಕುಗಳನ್ನು ರದ್ದುಪಡಿಸಿದರೂ, ದೇವಸ್ಥಾನಗಳು ಮತ್ತು ಇತರ ಸಂಬಂಧಿತ ಸಾಮಾಜಿಕ ಸಂಸ್ಥೆಗಳಲ್ಲಿ ರಾಜರಿಗೆ ಇರುವ ಪಾರಂಪರಿಕ ಸ್ಥಾನಮಾನಗಳನ್ನು ಮನ್ನಿಸುವ ಸಂವಿಧಾನದ 290ನೇ ವಿಧಿಯ ಕಾನೂನುಬದ್ಧತೆಗೆ ದಕ್ಕೆಯಾಗಲಿಲ್ಲವಾಗಿ, Instrument of Accession ನ ವಿಶೇಷ ವಿಧಿಯ ಅನುಸಾರದ ಶ್ರೀಪದ್ಮನಾಭ ಸ್ವಾಮಿ ದೇವಸ್ಥಾನದ ಆಡಳಿತ ಉಸ್ತುವಾರಿಗೆ ರಾಜ ಬಲರಾಮ ವರ್ಮ ಪಡೆದ ಹಕ್ಕಿಗೆ ಚ್ಯತಿ ಬರಲಿಲ್ಲ.

ಸದರಿ ಸಂವಿಧಾನ ತಿದ್ದುಪಡಿಯ ವಿರುದ್ಧ ಮಾಜಿ ರಾಜರು ನ್ಯಾಯದ ಕಟ್ಟೆ ಹತ್ತಿ, 1993ರಲ್ಲಿ ಸರ್ವೋಚ್ಛ ನ್ಯಾಯಾಲಯದ ಸಾಂವಿಧಾನಿಕ ಪೀಠವು ತಿದ್ದುಪಡಿಯನ್ನು ಮಾನ್ಯಗೊಳಿಸಿತು; ಆ ಕಾರಣವಾಗಿ ಮಾಜಿ ರಾಜರ ಪದವಿ ಮತ್ತು ಪದವಿಯ ಮೂಲಕ ಹಕ್ಕಾಗಿ ಪಡೆದುಕೊಂಡಿದ್ದ ಸವಲತ್ತುಗಳು ಅನೂರ್ಜಿತವಾದವು. ಆದರೆ, ಈ ತೀರ್ಪು ಹೊರಬರುವುದಕ್ಕಿಂತ ಮುಂಚೆ 1991ರಲ್ಲಿ ತಿರವಂಕೂರು ರಾಜ ಬಲರಾಮ ವರ್ಮ ತೀರಿಕೊಂಡರು; ಅವರ ತಮ್ಮ ಉರ್ದಾಮ್ ತಿರು ಮಾರ್ತಾಂಡ ವರ್ಮ ರಾಜವಂಶದ ಅಧಿಕೃತ ವಾರಸುದಾರರಾಗಿ ದೇವಸ್ಥಾನದ ಟ್ರಸ್ಟಿನ ರಾಜವಂಶದ ನಿಯಂತ್ರಣವನ್ನು ವಹಿಸಿಕೊಂಡರು-ಅದಕ್ಕೆ ಅಂದಿನ ಕೇರಳ ರಾಜ್ಯ ಸರ್ಕಾರ ಮಾನ್ಯತೆಯನ್ನೂ ನೀಡಿತು.

ಆ ನಂತರದಲ್ಲಿ, ಆಡಳಿತ ಮಂಡಳಿಯ ಕಾರ್ಯ ವೈಖರಿಯ ಬಗ್ಗೆ ಅಸಮಾಧಾನ, ಭ್ರಷ್ಟತೆಯ ಗುಮಾನಿಗಳು ’ಭಕ್ತ ವೃಂದ’ದಲ್ಲಿ (ಅಂದರೆ, ದೇವಸ್ಥಾನದ ಲೌಕಿಕ ವ್ಯವಹಾರಗಳಲ್ಲಿ ಭಾಗಿಯಾಗಿರುವವರು ಹಾಗು ಅನುಮಾನಿಸುವ ಇತರ ಜನರೂ) ಬೆಳೆಯುತ್ತ ಹೋಯಿತು. 2008 ರಲ್ಲಿ ಮಾರ್ಥಾಂಡ ವರ್ಮನು, ದೇವಸ್ಥಾನದ ಸಕಲಸಂಪತ್ತೂ ರಾಜವಂಶದ ಆಸ್ತಿ ಎಂಬ ಮಾತುಗಳನ್ನು ಆಡತೊಡಗಿದಾಗ, ಪಿ.ಸುಂದರ್‍ರಾಜನ್ ಎಂಬ ಮಾಜಿ ಐಪಿಎಸ್ ಅಧಿಕಾರಿ ಹಾಗು ಸ್ವಾಮಿಗೆ ಶ್ರದ್ಧೆಯಿಂದ ನಡೆದುಕೊಳ್ಳುವ ಭಕ್ತರು, ಕೆಳ ಹಂತದ ನ್ಯಾಯಾಲಯದಲ್ಲಿ, ದೇವಸ್ಥಾನದ ಆಡಳಿತ ಹಾಗು ಆಸ್ತಿ ನಿರ್ವಹಣೆಯಲ್ಲಿ ರಾಜವಂಶದ ಹಕ್ಕನ್ನು ಪ್ರಶ್ನಿಸಿ ದಾವೆ ಹೂಡಿದರು.

ಸುಂದರ್‌ ರಾಜನ್ ಐಪಿಎಸ್

ಇದರ, ಫಲವಾಗಿ ಇಂತಹ ಅನೇಕ ದಾವೆಗಳು ದಾಖಲಾದವು. ಈ ದಾವೆಗಳ ವಿರುದ್ಧ ಮಾರ್ತಾಂಡ ವರ್ಮ, ಕೇರಳದ ಉಚ್ಛ ನ್ಯಾಯಾಲಯಕ್ಕೆ ವ್ಯಾಜ್ಯ ಕೊಂಡೊಯ್ದರು. 2011 ರಲ್ಲಿ ಉಚ್ಛನ್ಯಾಯಾಲಯವು, ’ರಾಜ ಎಂಬ ಪದವಿಯೇ ಅನೂರ್ಜಿತವಾಗಿರುವುದರಿಂದ, ಮಾರ್ತಾಂಡ ವರ್ಮನ ರಾಜವಂಶಾವಳಿಯ ವಾರಸುದಾರಿಕೆಯೂ ಅಮಾನ್ಯವಾಗಿದ್ದು, ಕೇರಳ ಸರಕಾರವು ದೇವಸ್ಥಾನದ ಆಡಳಿತದ ಉಸ್ತುವಾರಿಯನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಬೇಕು’ ಎಂಬ ತೀರ್ಪು ನೀಡಿತು.

ಈ ತೀರ್ಪಿನ ವಿರುದ್ಧ ಮಾರ್ತಾಂಡ ವರ್ಮ ಸರ್ವೋಚ್ಛ ನ್ಯಾಯಾಲಯಕ್ಕೆ ದೂರು ಕೊಂಡೊಯ್ದರು. 2011 ರಿಂದ ಹಿಡಿದು, 2020 ರ ಜುಲೈ 13 ರಂದು ಸರ್ವೋಚ್ಛ ನ್ಯಾಯಾಲಯವು, ಕೇರಳ ಉಚ್ಛ ನ್ಯಾಯಾಲಯದ ತೀರ್ಪನ್ನು ಅನೂರ್ಜಿತಗೊಳಿಸಿ, ದೇವಸ್ಥಾನದ ಆಡಳಿತ ಹಾಗು ಆಸ್ತಿ ನಿರ್ವಹಣೆಯ ಹಕ್ಕನ್ನು ತಿರವಂಕೂರು ರಾಜವಂಶಕ್ಕೆ ಮರಳಿ ಕೊಡುವ ತೀರ್ಪು ನೀಡಿದವರೆಗಿನ ವಿದ್ಯಮಾನಗಳು, ಹತ್ತು ರೋಚಕ ಅಪರಾಧ ಸಿನೆಮಾ ಚಿತ್ರಕತೆಗಳಿಗೆ ವಸ್ತುವಾಗುವಷ್ಟಿವೆ! ಅದು ಬೇರೆಯ ಸಂಗತಿ.

ಆದರೆ, ದೇವಳಗಳಿಗೆ ಸಂಬಂಧಿಸಿದ ನೂರಾರು ಕೋರ್ಟು ವ್ಯಾಜ್ಯಗಳು, ಭಾರತದ ಜಾತಿ-ಮತ-ಲಿಂಗ ಅಧಿಕಾರ-ತಾರತಮ್ಯಗಳ ಎದಿರು ಸಮಾಜದ ಸ್ಥಿತಿಗತಿಯ ಸೂಚಕಗಳೂ ಆಗಿರುವುದರಿಂದ, ಅವನ್ನು ಗಮನಿಸಿಸೋಣ. ಸದರಿ ಸರ್ವೋಚ್ಛ ನ್ಯಾಯಾಲಯದ ತೀರ್ಪಿನ ಬಗ್ಗೆ ಭಾರತದ ಬಲ ಮತ್ತು ಎಡಗಳ ಸಂಭ್ರಮ-ಶಂಕೆಗಳ ನಡುವೆ ಯೋಚಿಸಬಹುದಾಗಿರುವ ಸಾಮಾಜಿಕ ಅಂಶಗಳು ಏನು? ಅವು ಏನನ್ನು ಸೂಚಿಸುತ್ತವೆ? ಎನ್ನುವುದನ್ನು ವಿವೇಚಿಸೋಣ.

2011ರಲ್ಲಿ ವ್ಯಾಜ್ಯವು ಸರ್ವೋಚ್ಛ ನ್ಯಾಯಾಲಯದ ಕಟ್ಟೆ ಹತ್ತುವವರೆಗೂ, ಸದರಿ ದೇವಸ್ಥಾನದ ಆಸ್ತಿಯ ವಿವರಗಳು ಜನಜನಿತವಾಗಿದ್ದರೂ, ಅದರ ನಿಚ್ಚಳ ವಿವರಗಳು ಸಾರ್ವಜಿನಿಕವಾಗಿ ದೊರಕಿರಲಿಲ್ಲ. ಆಸ್ತಿ ವಿವರಗಳ ಲೆಕ್ಕಾಚಾರ ಮಾಡಿ ವರದಿ ಸಲ್ಲಿಸುವಂತೆ ಸರ್ವೋಚ್ಛ ನ್ಯಾಯಾಲವು ಅಪ್ಪಣೆ ನೀಡಿದ ನಂತರ, ಗರ್ಭಗುಡಿಯ ಅಡಿಮಾಳಿಗೆಯಲ್ಲಿರುವ, ಆರು ಖಜಾನೆಗಳಲ್ಲಿ ಐದನ್ನು ತೆರದು ನೋಡಿ, ತುರ್ತು ಲೆಕ್ಕಾಚಾರ ಮಾಡಿದಾಗ, ಅಲ್ಲಿರುವ ಆಸ್ತಿಯು ಹತ್ತಿರ ಹತ್ತಿರ ಒಂದು ಕಾಲು ಲಕ್ಷ ಕೋಟಿ ಎಂಬುದು ಪತ್ತೆಯಾಯಿತು. B (ಬಿ) ಎಂದು ನಾಮಾಂಕಿತ ಮಾಡಿರುವ ಖಜಾನೆಯು ಸರ್ಪಗಾವಲಿನಲ್ಲಿ ಇದ್ದು, ಅದನ್ನು ತೆರೆದರೆ ಮಹಾ ಅನಾಹುತವಾಗುತ್ತದೆ ಎಂದು ಸದರಿ ಆಡಳಿತ ಮಂಡಳಿಯು ಅಸಹಕಾರ ಸೂಚಿಸಿತು.

ಆದರೆ, 1980-2002ರವರೆಗಿನ ಅವಧಿಯಲ್ಲಿ, ಅದೇ ಖಜಾನೆಯನ್ನು ಏಳು ಸಾರಿ ತೆರದ ಮಹಾಜರ್ ವರದಿ ಇರುವುದರ ಬಗ್ಗೆ ಕೇಂದ್ರ ಲೆಕ್ಕಪತ್ರ ತನಿಖಾ ವರಿಷ್ಠರಾಗಿದ್ದು, ನ್ಯಾಯಾಲಯದಿಂದ ತನಿಖೆಗೆ ನೇಮಿತವಾಗಿದ್ದ ವಿನೋದ್ ರಾಯ್ ಬರೆದುಕೊಂಡಿದ್ದಾರೆ. ಇದರೊಟ್ಟಿಗೇ ದೇವಳವು ತನ್ನ ಆಸ್ತಿಪಾಸ್ತಿ ವಿವರ ದಾಖಲಿಸುವಲ್ಲಿ ತೀರಾ ಬೇಜವಾಬ್ದಾರಿಯುತವಾಗಿದ್ದು, ಒಳ ಹಾಗು ಹೊರ ಹರಿಯುವ ಆಸ್ತಿಯ ವಿವರಗಳಿಗೆ ದಾಖಲೆಗಳನ್ನೇ ಇಟ್ಟಿಲ್ಲದಿರುವುದು ಮಾತ್ರವಲ್ಲ, ಆಡಳಿತ ಮಂಡಳಿಯ ಅನೇಕರು ಹಲವು ಟ್ರಸ್ಟ್‌ಗಳು, ಬ್ಯಾಂಕ್ ಖಾತೆಗಳನ್ನು ತೆರೆದು ವ್ಯವಹಾರ ಮಾಡಿದ್ದಾರೆ. ಕೋಟ್ಯಂತರ ರೂಪಾಯಿಗಳ ವ್ಯವಹಾರ ನಡೆದಿದ್ದು, ಅದರ ಕುರಿತು ಇರುವ ಊಹಾಪೋಹಗಳನ್ನು ಅಧಿಕೃತವೆಂದು ಹೇಳುವ ಸ್ಥಿತಿ ಇರದಷ್ಟು ಆಸ್ತಿ ನಿರ್ವಹಣೆ ಅವ್ಯವಸ್ಥೆಯಾಗಿದೆ ಎಂದಿದ್ದಾರೆ.

ಸರ್ವೋಚ್ಛ ನ್ಯಾಯಾಲಯದಿಂದ ನಿಯುಕ್ತವಾದ, ನ್ಯಾಯಾಲಯದ ನಂಬಿಕಸ್ಥ ನ್ಯಾಯಾಧಿಕಾರಿ (ಅಮಿಕಸ್ ಕ್ಯುರಿ) ಗೋಪಾಲ ಸುಬ್ರಹ್ಮಣ್ಯಂ ಅವರು ನೀಡಿರುವ ದೀರ್ಘ ವರದಿಯೂ ಇದೇ ಅಭಿಪ್ರಾಯವನ್ನು ಹೇಳಿದೆ. ಒಂದು ಸಾರ್ವಜನಿಕ ಟ್ರಸ್ಟಿನ ಈ ಬಗೆಯ ಆಸ್ತಿ ವ್ಯವಹಾರವು ನಿಚ್ಚಳವಾಗಿ ಭ್ರಷ್ಟಾಚಾರದ ಸೂಚನೆಯಾಗಿದ್ದು, ಆಡಳಿತ ಮಂಡಳಿಯು ಇದಕ್ಕೆ ಉತ್ತರದಾಯಿಯಾಗಬೇಕು; ರಾಜವಂಶದ ವಾರಸುದಾರನಾಗಿ ಅಡಳಿತ ಮಂಡಳಿಯ ಸೂತ್ರ ಹಿಡಿದ ದಾವೇದಾರನನ್ನು ನ್ಯಾಯಾಲವು ಪ್ರಶ್ನಿಸಿ ಪರಿಶೀಲಿಸಬೇಕಿತ್ತು ಎನ್ನುವುದು ಸರಿ; ಆದರೆ ದಾವೆಯ ವಿಷಯವು ಆಡಳಿತ ಮಂಡಳಿಯನ್ನು ನಿಯಂತ್ರಿಸುವ ಹಕ್ಕು ರಾಜವಂಶದ ವಾರಸುದಾರರಿಗೆ ಇದೆಯೋ ಇಲ್ಲವೋ ಎನ್ನುವುದಕ್ಕೆ ಸೀಮಿತವಾಗಿದ್ದು, ತೀರ್ಪು ಗತಕಾಲದ ವಿವರಗಳನ್ನೆಲ್ಲಾ ಪ್ರಸ್ತಾಪಿಸಿ, ಶೆಬೈಟ್-ದೇವರ ಪರವಾಗಿ ದೇವಸ್ಥಾನದ ರೀತಿ ರಿವಾಜುಗಳ ಪ್ರಕಾರ ಆಡಳಿತ ಹಾಗು ಆಸ್ತಿ ವ್ಯವಹಾರ ನಿರ್ವಹಿಸುವ ವ್ಯವಸ್ಥಾಪಕ- ಹಕ್ಕು ತಿರವಂಕೂರು ರಾಜಮನೆತನದವರಿಗೆ ಇದೆ ಎಂದಿದೆ.

ದೇವಸ್ಥಾನದ ಅಪಾರ ಆಸ್ತಿಯು ರಾಜಮನೆತನ ಸ್ವತ್ತಲ್ಲ ಮತ್ತು ಅದನ್ನು ಪಾರದರ್ಶಕವಾಗಿ ನಿರ್ವಹಿಸಲು ತಿರುವನಂತಪುರ ಜಿಲ್ಲಾ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಸರಕಾರವು ಒಂದು ಸಮಿತಿ ರಚಿಸಿ ವರದಿ ಸಲ್ಲಿಸುವಂತೆ ಸೂಚಿಸಿದೆ. ದೇವಸ್ಥಾನದ ಆಡಳಿತ ಮಂಡಳಿಯ ಸಂಯೋಜನೆ ಹಾಗು ನಿಯಂತ್ರಣ ರಾಜವಂಶದವರ ಕೈಯಲ್ಲಿ, ಮಂಡಳಿಯ ಆಸ್ತಿ ನಿರ್ವಹಣೆಯನ್ನು ನಿಗಾ ವಹಿಸುವ ಜವಾಬ್ದಾರಿಯು ಸರಕಾರಿ ಪ್ರತಿನಿಧಿಗಳು ಹಾಗು ಆಡಳಿತ ಮಂಡಳಿಯು ನೇಮಿಸುವ ಸದಸ್ಯರು ಇರುವ ಸಮಿತಿಯದು-ಎಂಬುದು ತೀರ್ಪಿನ ತಾತ್ಪರ್ಯ. ನ್ಯಾಯಾಲಯದ ತೀರ್ಪು ಆಡಳಿತ ಉಸ್ತುವಾರಿಯ ಪಾರಂಪರಿಕ ಹಕ್ಕು ಹಾಗು ಆಸ್ತಿ ನಿರ್ವಹಣೆಯ ಸಾರ್ವಜನಿಕ ಪಾರದರ್ಶಕತೆಯನ್ನು ಸಮದೂಗಿಸುವ ವಿಧಾನಗಳನ್ನು ಸೂಚಿಸುವ ಸಮತೂಕದ್ದು ಎನ್ನುವುದು ಕೆಲವು ನ್ಯಾಯತಜ್ಞರ ಅಭಿಪ್ರಾಯ.

ಭಾರತದಲ್ಲಿ ಬಲಪಂಥೀಯತೆ ಎಂದರೆ ಹಿಂದು ಬ್ರಾಹ್ಮಣಶಾಹಿ ಅಧಿಕಾರ, ಖಾಸಗಿ ಆಸ್ತಿ ಒಡೆತನವನ್ನು ಪೋಷಿಸಿ ಬೆಳೆಸುವ, ಇದಕ್ಕೆ ತಕ್ಕುನಾದ ಸಾಮಾಜಿಕ ಸಹಮತವನ್ನು ಉತ್ಪಾದಿಸುವ ಸಂಸ್ಥೆಗಳನ್ನು ಕಟ್ಟಿ ಬೆಳೆಸುವ ವ್ಯವಸ್ಥೆ-ಇದು ಲಗಾಯ್ತಿನಿಂದಲೂ ಭಾರತದಲ್ಲಿ ರೂಢಿಯಲ್ಲಿದೆ; ಭಕ್ತಿಪಂಥದಂತಹ ಕ್ರಾಂತಿಕಾರಕ ಸಮಾಜ ಸುಧಾರಣಾ ಚಳುವಳಿಗಳನ್ನು ಪಳಗಿಸಿಕೊಂಡು ತನಗೆ ಅನುಕೂಲವಾಗುವಂತೆ ಮಣಿಸಿಕೊಳ್ಳುವ ಸಾಮಾಜಿಕ ಸಹಮತದ ಉತ್ಪಾದನೆಯ ಚಾಣಕ್ಷ ಕಾರ್ಯಾಚರಣೆಗಳು ಭಾರತದ ಬಲಪಂಥದ ವೈಶಿಷ್ಟ್ಯವೆಂದೇ ಹೇಳಬೇಕು.

ದೇವಸ್ಥಾನಗಳು ಈ ಬಗೆಯ ಕ್ರಾಂತಿಕಾರಕ ಸುಧಾರಣೆಗಳನ್ನು ಪಳಗಿಸಿ, ಬ್ರಾಹ್ಮಣಶಾಹಿಗೆ ಒಗ್ಗಿಸಿಕೊಳ್ಳುವ ಸಂಸ್ಥೆಗಳಾಗಿ ಯಾವತ್ತೂ ಕಾರ್ಯ ನಿರ್ವಹಿಸುತ್ತಿವೆ. ರಾಜಮನೆತನಗಳ ಅಧಿಕಾರ ಪೋಷಣೆಯ ಸಂಸ್ಥೆಗಳಾಗಿಯೂ, ಜನರ ಆಧ್ಯಾತ್ಮಿಕ ಹಂಬಲಗಳ ಮಧ್ಯವರ್ತಿಳಾಗಿಯೂ ಇರುವ ದೇವಸ್ಥಾನಗಳು, ಅಧಿಕಾರಕ್ಕೆ ಸಹಮತ ರೂಢಿಸುವ ಕಾರ್ಯಸ್ಥಾನಗಳಾಗಿರುವುದನ್ನು ಮುರಿಯುವಲ್ಲಿ ನಿರ್ಣಾಯಕವಾದ ಯಾವ ಸಾಮಾಜಿಕ ಕ್ರಾಂತಿಯು ಭಾರತದಲ್ಲಿ ಆಗಿಲ್ಲ.

ವಸಾಹತುಶಾಹಿ ವಿರೋಧಿ ಹೋರಾಟ ಕಾಲದಲ್ಲಿ ಶೂದ್ರ, ದಲಿತ ಜಾತಿಗಳ ದೇವಸ್ಥಾನ ಪ್ರವೇಶ ಚಳುವಳಿಯು ಬ್ರಾಹ್ಮಣ ಅಧಿಕಾರವನ್ನು ಒಡೆಯುವ ಒಂದು ಸಂಚಲನವಾಗಿತ್ತಾದರೂ, ಅದು ದೇವಸ್ಥಾನಗಳ ಸಾಂಸ್ಥಿಕ ಸ್ವರೂಪದಲ್ಲಿ ಹೆಚ್ಚಿನ ಬದಲಾವಣೆಗಳೇನನ್ನೂ ತಂದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರೂಪಪಡೆದ, ಸರಕಾರದ ನಿಯಂತ್ರಣಕ್ಕೆ ಪ್ರವೇಶ ಒದಗಿಸಿದ ಹಿಂದು ಧಾರ್ಮಿಕ ದತ್ತಿ ಇಲಾಖೆಗಳು (ದೇವಸ್ವಂ ಬೋರ್ಡ್) ದೇವಸ್ಥಾನದ ಆಸ್ತಿ ನಿರ್ವಹಣೆಯನ್ನು ವಿಕೇಂದ್ರಿಕರಣಗೊಳಿಸಿದವೇ ಹೊರತು, ಆಧ್ಯಾತ್ಮಿಕ ಆಚರಣೆಗಳಲ್ಲಿ ಬ್ರಾಹ್ಮಣಶಾಹಿಯ ಹಿಡಿತವನ್ನು ತಗ್ಗಿಸುವಲ್ಲಿ ಕೂಡ ಸಫಲವಾಗಿಲ್ಲ.

ಇಷ್ಟಾದರೂ ಬಲಪಂಥೀಯರು, ದೇವಸ್ಥಾನದ ಆಸ್ತಿ ನಿರ್ವಹಣೆಯು ಪ್ರಜಾಪ್ರಭುತ್ವ ಸರಕಾರದ ನಿಯಂತ್ರಣದಲ್ಲಿ ಇರುವುದು, ತಮ್ಮ ಧಾರ್ಮಿಕ ಸ್ವಾತಂತ್ರ್ಯದ ಹಕ್ಕಿಗೆ ಧಕ್ಕೆ ಎಂಬ ವಾದವನ್ನು ಜನಮಾನಸದಲ್ಲಿ ರೂಢಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹಾಗಾಗಿ, ದೇವಸ್ಥಾನಗಳ ಆಡಳಿತ ಉಸ್ತುವಾರಿಯ ನಿಯಂತ್ರಣದಲ್ಲಿ ಸರಕಾರದ ಕಣ್ಗಾವಲನ್ನೂ ಅವರು ವಿರೋಧಿಸುತ್ತಿರುವುದು, ದೇವಸ್ಥಾನಗಳ ಸಂಪನ್ಮೂಲಗಳ ಖಾಸಗಿಕರಣಕ್ಕಾಗಿ; ಅಂತಹ ಖಾಸಗಿಕರಣದಿಂದ ಬ್ರಾಹ್ಮಣಶಾಹಿ ವ್ಯವಸ್ಥೆಗೆ ಆಸ್ತಿ ಬಲ ದಕ್ಕುವ ಕಾರಣಕ್ಕಾಗಿ. ಶ್ರೀ ಅನಂತಪದ್ಮನಾಭ ಸ್ವಾಮಿ ದೇವಲಾಯವನ್ನು ರಾಜಮನೆತನದ ಹಿಡಿತದಿಂದ ಬಿಡಿಸಿ ಸರಕಾರಕಕ್ಕೆ ವಹಿಸುವ ಕೇರಳದ ಉಚ್ಛ ನ್ಯಾಯಾಲಯದ ನಿರ್ಣಯವು, ದೇವಾಲಯದ ರೂಢಿಗತ ಬ್ರಾಹ್ಮಾಣಶಾಹಿ ಸಂಪ್ರದಾಯವನ್ನು ಅಲುಗಿಸದೇ, ಅದರ ಆಸ್ತಿಯ ನಿಯಂತ್ರಣ ಹಾಗು ಇತರ ದೇವಸ್ಥಾನಗಳ ಅನುಕೂಲಕ್ಕೆ ಆರ್ಥಿಕ ವಿಕೇಂದ್ರಿಕರಣದ ಮಾರ್ಗವನ್ನು ತೆರೆಯುತಿತ್ತು.

ಸರ್ವೋಚ್ಛ ನ್ಯಾಯಾಲಯದ ನಿರ್ಣಯವು ಹಿಂದು ದೇವಾಲಯಗಳ ನಡುವೆ ಆಗಬಹುದಾಗಿದ್ದ ಆ ಬಗೆಯ ಆಸ್ತಿ ವಿಕೇಂದ್ರಿಕರಣ ಸುಧಾರಣೆಗೆ ತಡೆಯೊಡ್ಡಿದೆ. ಒಂದು ವೇಳೆ, ತೀರ್ಪು ರಾಜವಂಶದ ಆಡಳಿತ ನಿಯಂತ್ರಣದ ಹಕ್ಕನ್ನು ಅನೂರ್ಜಿತಗೊಳಿಸಿದ್ದರೂ, ಒಂದು ಕಾಲು ಲಕ್ಷ ಕೋಟಿ ಆಸ್ತಿಯನ್ನು ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸುವ ಯಾವ ಕಾನೂನು ಸಂವಿಧಾನತ್ಮಕವಾಗಿ ಭಾರತದಲ್ಲಿ ಇಲ್ಲ ಎಂಬುದನ್ನೂ ನಾವು ನೆನಪಿಡಬೇಕು. ಹಾಗಾಗಿ ಸದರಿ ತೀರ್ಪು ಬ್ರಾಹ್ಮಣಶಾಹಿ ಶಕ್ತಿ ಕೇಂದ್ರದಲ್ಲಿ ಉಂಟಾಗಿದ್ದ ಒಂದು ಬಿರುಕನ್ನು ತೇಪೆ ಹಾಕಿ ಮುಚ್ಚಿದೆ. ಅಷ್ಟರ ಮಟ್ಟಿಗೆ ಬಲಪಂಥೀಯರು ಸಂತೋಷ ವ್ಯಕ್ತಪಡಿಸುತ್ತಿದ್ದಾರೆ.

ಆದರೆ, ಮುಖ್ಯ ಪಾಠವಿರುವುದು ಎಡಪಂಥೀಯರಿಗೆ. ಇವರು, ಆಸ್ತಿಕ ಹಿಂದು ಜನಸಮುದಾಯದ ಲೌಕಿಕ ಬವಣೆಗಳನ್ನು ಮುಂದಿಟ್ಟು ಹೋರಾಟ ಮಾಡುವವರಾಗಿರುವವರು; ಬಡ ಹಿಂದು ಜನಸಮೂಹವು ಬ್ರಾಹ್ಮಣಶಾಹಿಯ ಸಾಮಾಜಿಕ ಹಿಡಿತಕ್ಕೆ ತಮ್ಮ ಸಹಮತಿಯನ್ನು ಕೊಟ್ಟುಕೊಂಡೇ, ಲೌಕಿಕ ನ್ಯಾಯಕ್ಕಾಗಿ ಎಡಪಂಥದ ನಾಯಕತ್ವದಡಿ ಬರುತ್ತಾರೆ; ನ್ಯಾಯ ಈಡೇರಿದರೂ, ಎಡಪಂಥದ ಜೊತೆ ಈ ಜನ ಸಮೂಹವು ಸಾಮಾಜಿಕ ಜೀವಂತ ಸಂಬಂಧ ಉಳಿಸಿಕೊಳ್ಳುವುದಿಲ್ಲ. ಗೇಣಿ ಹಕ್ಕಿನ ಹೋರಾಟದಲ್ಲಿ ಎಡಪಂಥೀಯರು ಬಡ ಗೇಣಿದಾರರ ಪರವಾಗಿ ದೇವಸ್ಥಾನದಂತಹ ಸ್ಥಿರ್ತ ಶಕ್ತಿ ಕೇಂದ್ರಗಳನ್ನು ಎದುರಿಸಿ ಧಿರೋದ್ಧಾತ್ತ ಹೋರಾಟಗಳನ್ನು ಮಾಡಿದ್ದಾರೆ. ಆದರೆ, ಆ ಶಕ್ತಿ ಕೇಂದ್ರಗಳಿಗೂ ಹಾಗು ಬಡ ಗೇಣಿದಾರರಿಗೂ ಇರುವ ಸಾಮಾಜಿಕ ಸಂಬಂಧವನ್ನು ಕಡಿಯುವಲ್ಲಿ ವಿಫಲವಾಗಿದ್ದಾರೆ.

 

ಗೇಣಿ ಹಕ್ಕು ಪಡೆದವರು ದೇವಸ್ಥಾನದಂತಹ ಶಕ್ತಿ ಕೇಂದ್ರಗಳನ್ನು ಬಲ ಪಡಿಸಿರುವರೇ ವಿನಹ ಕನಿಷ್ಠ ದುರ್ಬಲಗೊಳಿಸಿಯೂ ಇಲ್ಲ, ಸಮಾನತೆಯ ಆಧ್ಯಾತ್ಮಿಕ ಕೇಂದ್ರಗಳನ್ನು ಕಟ್ಟಿಕೊಂಡದ್ದೂ ಇಲ್ಲ.

ದೇವಸ್ಥಾನಗಳು ಅಧಿಕಾರದ ಶಕ್ತಿಕೇಂದ್ರಗಳಾಗಿರುವ ಬಗೆಯನ್ನು ಅರಿಯುವ ಹಾಗು ಅವುಗಳನ್ನು ಸಮಾನತೆಯ ಆಧ್ಯಾತ್ಮ ಕೇಂದ್ರಗಳಾಗಿ ಸುಧಾರಿಸುವ, ಕ್ರಾಂತಿ ಮಾರ್ಗಗಳು ಎಡಪಂಥೀಯರ ಎಳವೆಗೆ ಇಂದಿಗೂ ಸಿಗುತ್ತಿಲ್ಲ. ಇಲ್ಲಿಯೇ, ಸದರಿ ದೇವಾಲಯದ ವ್ಯಾಜ್ಯದಲ್ಲಿ, ’ಶ್ರೀಅನಂತಪದ್ಮನಾಭದಾಸ’ತ್ವವು ಅಧಿಕಾರದ ಸಹಮತ ಉತ್ಪಾದನೆಯ ಪ್ರತಿಮೆಯಾಗಿರುವ ಬಗೆಯನ್ನು ಅರಿಯದ ಸನ್ನಿವೇಶವನ್ನು ಪರಿಶೀಲಿಸಬಹುದು. ಸರ್ವೋಚ್ಛ ನ್ಯಾಯಾಲಯವು ತನ್ನ ತೀರ್ಪಿನಲ್ಲಿ, ತಿರುವಂಕೂರು ರಾಜಮನೆತನದವರು ’ಶ್ರೀಅನಂತಪದ್ಮನಾಭದಾಸ’ರಾದ ಬಗೆಯನ್ನು ವಿವರಿಸುತ್ತದೆ ಮತ್ತು ಅಂತಹ ಮನೆತನವು ದೇವಳದ ಆಸ್ತಿಗಾಗಿ ಆಡಳಿತ ನಿಯಂತ್ರಣ ಹಕ್ಕನ್ನು ಬೇಡುತ್ತಿದ್ದಾರೆ ಎಂಬ ಊಹೆಯನ್ನು ತಳ್ಳಿ ಹಾಕುತ್ತದೆ. ಇದಕ್ಕಿಂತ ಕುತೂಹಲಕರವಾಗಿರುವುದು ಸರ್ವೋಚ್ಛ ನ್ಯಾಯಾಲಯದ ನಂಬಿಕಸ್ತ ನ್ಯಾಯ ಶೋಧಕರಾದ ಸುಬ್ರಹ್ಮಣ್ಯಂ ಅವರು ತಮ್ಮ ವರದಿಯಲ್ಲಿ ಆಡಿರುವ ಮಾತುಗಳು. ಅವರ ಪ್ರಕಾರ:

ತಿರುವನಂತಪುರಂ ಸ್ವತಂತ್ರ ಭಾರತದ, ಸ್ವತಂತ್ರ ಪ್ರಜಾಪ್ರಭುತ್ವ ರಾಜ್ಯದಲ್ಲಿದ್ದರೂ, ದೇವಸ್ಥಾನದ ವಿಷಯದಲ್ಲಿನ ನಡಾವಳಿಗಳನ್ನು ಗಮನಿಸಿದರೆ, ನಗರವಿನ್ನೂ ರಾಜರ ಆಳ್ವಿಕೆಯಲ್ಲಿರುವಂತೆ ಕಾಣುತ್ತದೆ; ದೇವಾಸ್ಥಾನದ ಆಸ್ತಿಯ ಅವ್ಯವಸ್ಥೆಯನ್ನು ಕಂಡರೆ ಸರಕಾರಿ ಅಧಿಕಾರಿಗಳು ಶಾಮೀಲಾಗದೇ ಇರಲು ಸಾಧ್ಯವಿಲ್ಲವೆನಿಸುತ್ತದೆ; ಇಡಿ ಆಸ್ತಿ ವ್ಯವಹಾರವು ಗೋಜಲಿನ ಅಗರವಾಗಿದೆ.

ಪ್ರತಿಷ್ಠಿತ ದೇವಸ್ಥಾನ, ಶತಮಾನಗಳಿಂದ ಸಂಗ್ರಹವಾಗಿರುವ ಸಂಪತ್ತು, ನಿತ್ಯವು ಭಕ್ತರ ಕಾಣಿಕೆಗಳಿಂದ ತುಂಬಿ ಬಿರಿಯುವ ಖಜಾನೆಗಳು; ಆಡಳಿತ ಮಂಡಳಿಯ ಮೂಗಿನಡಿಯೇ ಸಂಪತ್ತಿನ ಲೌಕಿಕ ನಿರ್ವಹಣೆಯ ಅವ್ಯವಸ್ಥೆ; ಇಷ್ಟೆಲ್ಲ ಭಕ್ತರಿಗೆ ಗೊತ್ತಿಲ್ಲವೆಂದೇನೂ ಇಲ್ಲ- ಆದರೆ ’ಶ್ರೀಅನಂತಪದ್ಮನಾಭದಾಸ’ರ ಅಧಿಕಾರದಲ್ಲಿ ಅವರ ನಂಬಿಕೆ ಕಡಿಮೆಯಾದಂತಿಲ್ಲ. ಅಂತಹ ನಂಬಿಕೆಗಳು ಅಚಲವಾಗಿರುವಷ್ಟು ಕಾಲ, ದೇವಾಲಯವು ಅಧಿಕಾರದ ಶಕ್ತಿ ಕೇಂದ್ರಗಳಾಗಿರುವುದನ್ನು ನ್ಯಾಯಾಲಯಗಳು ಒಪ್ಪಿಕೊಳ್ಳುತ್ತವೆ. ಸದರಿ ಪ್ರಕರಣದಲ್ಲಿ ಎಡ-ಬಲಗಳ ಶಕ್ತಿ ಅಸಮತೋಲ ಕಾಣುವುದು ಯಾರಿಗೇ ಪಾಠ?

-ಪ್ರೊ.ಕೆ ಫಣಿರಾಜ್


ಇದನ್ನು ಓದಿ: ಮಸ್ಜಿದ್ ಯಹೀ ಬನೇಗ!


ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...