Homeಮುಖಪುಟಮಸ್ಜಿದ್ ಯಹೀ ಬನೇಗ!

ಮಸ್ಜಿದ್ ಯಹೀ ಬನೇಗ!

- Advertisement -
- Advertisement -

‘Constantinople’ – co-nst-anti-nople ಈ ಹಾಡನ್ನು ಕೆಲವರಾದರೂ ಕೇಳಿಯೇ ಇರುತ್ತೀರಿ. ಇದೇ ಧಾಟಿಯಲ್ಲಿಯೇ ಕೈಲಾಸಂ ಅವರ ’ನಮ್ಮ ತಿಪ್ಪಾರಳ್ಳಿ ಬಲು ದೂರ..’ ಹಾಡೂ ಸಹ ಇದೆ. ಅಂದಿನ ಆ ಕಾನ್ ಸ್ಟಾಂಟೀನೋಪಲ್ ಇಂದಿನ ಇಸ್ತಾಂಬುಲ್. ಟರ್ಕಿಯ ಅತಿ ದೊಡ್ಡ ಪಟ್ಟಣ ಇಸ್ತಾಂಬುಲ್, ಪೂರ್ವ ಪಶ್ಚಿಮ ಎರಡೂ ಜಗತ್ತಿನ ನಡುವೆ ತೂಗಾಡುವ ಸೇತುವೆ.

ಒಂದು ಮಗ್ಗಲಿನಲ್ಲಿ ಏಷ್ಯಾ ಮತ್ತೊಂದು ಮಗ್ಗುಲಿನಲ್ಲಿ ಯೂರೋಪ್ ಇಟ್ಟುಕೊಂಡ ಟರ್ಕಿ ಒಂದು ಕಾಲಕ್ಕೆ ಇಸ್ಲಾಂ ಧರ್ಮದ ಖಲೀಫೇಟ್ ಎಂದು ಹೆಸರಾಗಿತ್ತು. ಮೊಗಲ್ ದೊರೆ ಅಕ್ಬರ್ ಸಹ ಇಲ್ಲಿಗೆ ಕಾಣಿಕೆ ಕಳಿಸಿದ್ದ ಎಂದು ಹೇಳುತ್ತಾರೆ. ಈ ದೇಶವೇ ಒಂದು ಸೋಜಿಗ. ಗ್ರೀಕ್ ನಾಗರಿಕತೆಯ ಪಳಿಯುಳಿಕೆಗಳ ನಡುವೆ ಅರಬ್ಬೀ ಲೋಬಾನ ಹಚ್ಚಿಟ್ಟ ಹಾಗೆ ಇದರ ಸೊಗಡು.

2008ರಲ್ಲಿ ಪ್ರವಾಸಕ್ಕೆಂದು ನಾವು ಟರ್ಕಿಯನ್ನು ಆರಿಸಿಕೊಂಡಾಗ ಸುಮಾರು ಜನ ನಮ್ಮನ್ನು ಕೇಳಿದ್ದ ಪ್ರಶ್ನೆ, ’ಟರ್ಕಿನಾ?!’. ಅದೊಂದು ಇಸ್ಲಾಂ ದೇಶ ಮತ್ತು ನಾವು ಮೂವರು ಹೆಂಗಸರು ಮಾತ್ರ ಹೊರಟಿರುವುದು ಮತ್ತು ನಾವು ಯಾವುದೇ ಗುಂಪಿನೊಡನೆ ಹೋಗದೆ, ನಮ್ಮದೇ ಪಟ್ಟಿ ಹಿಡಿದುಕೊಂಡು ಹೊರಟಿದ್ದು ಅವರ ಕಾಳಜಿಯ ದನಿಗೆ ಕಾರಣವಾಗಿತ್ತು ಅನ್ನಿಸುತ್ತದೆ.

ಆಗ ನನ್ನ ಮನಸ್ಸಿನಲ್ಲಿದ್ದದ್ದು ಕೇವಲ ಇಸ್ತಾಂಬುಲ್ ಮಾತ್ರ. ಅಲ್ಲಿನ ಮಸಾಲೆ ಮಾರುಕಟ್ಟೆಗಳು, ನೀಲಿ ಮಸೀದಿ, ಊರ ತುಂಬಾ ಇರುವ ಮೀನಾರುಗಳು, ಮರಮರ ಸಮುದ್ರ, ಹಮಾಮ್‍ಗಳು ಮತ್ತು ಎಲ್ಲಕ್ಕೂ ಮುಖ್ಯವಾಗಿ ’ಆಯಾ ಸೋಫಿಯಾ’!

ನಾವು ಇಸ್ತಾಂಬುಲ್ ತಲುಪಿ, ಹೋಟೆಲಿನಲ್ಲಿ ಲಗೇಜ್ ಇಳಿಸಿ, ಫ್ರೆಶ್ ಆಗಿ ರಾತ್ರಿಯ ಊಟಕ್ಕೆಂದು ಹೊರಗೆ ಬಂದಾಗ ನಾವಿದ್ದ ಹೋಟೆಲಿನನಗುಮುಖದ ಬೇರರ್ ಕರೆದುಕೊಂಡು ಹೋಗಿ ಪಕ್ಕದಲ್ಲೇ ಇದ್ದ ಅಂಗಡಿಯಲ್ಲಿ ಅಲ್ಲಿನ ಸಿಮ್ ಕೊಡಿಸಿದ್ದರು, ನಮ್ಮಲ್ಲಿದ್ದ ಸ್ವಲ್ಪ ಹಣವನ್ನು ಅಲ್ಲಿನ ಕರೆನ್ಸಿಯಾದ ಲಿರಾಗೆ ಬದಲಾಯಿಸಿಕೊಂಡಾಯ್ತು. ಹೋಟೆಲ್ ಟಾಕ್ಸಿಂ ಸ್ಕ್ವೇರ್‍ನಲ್ಲಿತ್ತು. ಆ ರಾತ್ರಿ ನಾವು ಊಟಕ್ಕೆಂದು ಹೊರಟಾಗ ಅಲ್ಲಿನ ವಾತಾವರಣ ನಮಗೆ ಎಷ್ಟು ನಿರಾಳವಾದ ಮನಸ್ಥಿತಿಯನ್ನು ಕೊಟ್ಟಿತ್ತು ಎನ್ನುವುದರ ಬಗ್ಗೆ ಇಲ್ಲಿ ಮತ್ತೆಮತ್ತೆ ಹೇಳಬೇಕು.

ಮರುದಿನ ಬೆಳಗಿನಿಂದಲೇ ನಮ್ಮ ಓಡಾಟ ಶುರುವಾಗಿತ್ತು. ನಾವು ಸಿಟಿಟೂರ್ ಹೊರಟ ದಿನ ಆಯಾ ಸೋಫಿಯಾ ರಜೆ ಎಂದು ತಿಳಿದಾಗ ನಮಗಾದ ನಿರಾಸೆ ಅಷ್ಟಿಷ್ಟಲ್ಲ. ಆದರೆ ಹಾಗೆಂದು ಸೋಲೊಪ್ಪಿಕೊಂಡು ಬರುವವರೆ ನಾವು?! ಹೇಗೂ ಒಂದೆರಡು ದಿವಸಗಳನ್ನು ಹೆಚ್ಚುವರಿಯಾಗಿ ಇಟ್ಟುಕೊಂಡಿದ್ದೆವಾದ್ದರಿಂದ ಇನ್ನೊಂದು ದಿನ ಅಲ್ಲಿಗೆಂದೇ ಹೋದೆವು.

ಇಂಗ್ಲಿಷಿನಲ್ಲಿ ಬರೆಯುವಾಗ Hagia Sophia, ಓದುವಾಗ ಆಯಾ ಸೋಫಿಯಾ ಎಂದು ಕರೆಯಲ್ಪಡುವ ಈ ಕಟ್ಟಡ ಪ್ರಪಂಚದಾದ್ಯಂತ ಪ್ರಖ್ಯಾತಿಗೊಳ್ಳಲು ಡ್ಯಾನ್ ಬ್ರೌನ್ ಎನ್ನುವ ಕಾದಂಬರಿಕಾರ ಸಹ ಕಾರಣ. ತನ್ನ ಕಾದಂಬರಿಯೊಂದರಲ್ಲಿ ಈ ಕಟ್ಟಡದ ಬಗ್ಗೆ ರೋಚಕವಾಗಿ ಬರೆದಿದ್ದಾನೆ. ಈ ಕಟ್ಟಡ ಒಂದು ವಿಸ್ಮಯವೇ ಸರಿ, ಇದರಲ್ಲಿ ಮೂರು ಧರ್ಮದ ಪ್ರಾರ್ಥನೆಗಳಿವೆ, ಇದನ್ನು ಒಟ್ಟು ಮೂರು ಬಾರಿ ನಿರ್ಮಿಸಲಾಗಿದೆ ಮತ್ತು ಇದು ಮೂರು ಸಲ ಹೊಸ ರೂಪದಲ್ಲಿ ಅವತಾರ ಎತ್ತಿದೆ!

ಬೈಜಂಟೈನ್ ಮತ್ತು ಆಟ್ಟೋಮನ್ ಸಾಮ್ರಾಜ್ಯದ ಈ ಕಟ್ಟಡದಲ್ಲಿ ಮೊದಲು ಪೇಗನ್ ಧರ್ಮಾಚರಣೆ ನಡೆಯುತ್ತಿದ್ದು, ನಂತರ ಕ್ರೈಸ್ತ ಧರ್ಮ, ಆನಂತರ ಮಸೀದಿಯಾಗಿ ಇಸ್ಲಾಂ ಧರ್ಮ ಇಲ್ಲಿ ಹೆಜ್ಜೆಗುರುತುಗಳನ್ನು ಉಳಿಸಿದೆ. ಮೊದಲ ಬಾರಿ ಇಲ್ಲಿ ಚರ್ಚ್ ನಿರ್ಮಿಸಿದವನು ಕಾನ್ಸ್ಟೆಟಿಯಸ್, 360 ರಲ್ಲಿ. ಅದು ಗಲಭೆಕೋರರ ದಾಳಿಗೆ ಸಿಕ್ಕಿ ನಾಶವಾಯಿತು.

ಎರಡನೆಯ ಚರ್ಚ್ ನಿರ್ಮಾಣ ಆಗಿದ್ದು ಎರಡನೆಯ ಥಿಯೋಡೋಸಿಯಸ್ ಕಾಲದಲ್ಲಿ 415 ರಲ್ಲಿ. ಅದೂ ನಾಶವಾಯಿತು. ಮತ್ತೆ ಈಗಿರುವ ಕಟ್ಟಡ ಸಾಮ್ರಾಟ ಜಸ್ಟಿನಿಯನ್ ಕಾಲದಲ್ಲಿ ಅಂದರೆ 527 ರ ಸುಮಾರಿಗೆ ನಿರ್ಮಾಣವಾಯಿತು. ಆನಂತರ ಸುಮಾರು 900 ವರ್ಷಗಳಷ್ಟು ಕಾಲ ಇದು ಚರ್ಚ್ ಆಗಿತ್ತು. ಅಮೃತಶಿಲೆಯ ಗೋಡೆಗಳು, ನುಣುಪಾದ ಕಲ್ಲುಹಾಸಿನ ಏರು ಮತ್ತು ಇಳಿಕೆಯ ದಾರಿಗಳು, ಚಿನ್ನ, ಬೆಳ್ಳಿ, ಬಣ್ಣದ ಗಾಜು ಇತ್ಯಾದಿಗಳು ಸೇರಿಸಿ ರಚಿಸಿರುವ ಮೊಸಾಯಿಕ್ ಎಂದು ಕರೆಯಲ್ಪಡುವ ಕಲಾಕೃತಿಗಳು ಇದನ್ನು ಅಲಂಕರಿಸಿದ್ದವು.

1453 ರಲ್ಲಿ ಕಾನ್ಸ್ಟಾಂಟಿನೋಪಲ್ ನಗರವನ್ನು ಅಟ್ಟೋಮನ್ ಟರ್ಕರು ಆಕ್ರಮಿಸಿಕೊಳ್ಳುವುದರೊಂದಿಗೆ ಇದನ್ನು ಮಸೀದಿಯಾಗಿ ಪರಿವರ್ತಿಸಲಾಯಿತು. ಚರ್ಚ್ ಲಕ್ಷಣಗಳನ್ನು ತೆಗೆದು ಅಲ್ಲಿ ಇಸ್ಲಾಂ ಧರ್ಮಸೂಚಕವಾದ ಬೃಹತ್ ಫಲಕಗಳನ್ನು ಸೇರಿಸಲಾಯಿತು, ಮೀನಾರುಗಳನ್ನು ನಿರ್ಮಿಸಲಾಯಿತು. ಆದರೆ ಇಂದಿಗೂ ಮೊಸಾಯಿಕ್ ಕಲೆಯ ಮೇರಿ ಮತ್ತವಳ ಮಗನ ಚಿತ್ರ ಹಾಗೆಯೇ ಉಳಿದಿದೆ. ಕಿಟಕಿಗಳಿಂದ ಹಾದುಬರುವ ಮಸುಕು ಬೆಳಕಿನಲ್ಲಿ ಈ ಕಟ್ಟಡಕ್ಕೆ ಅಪರೂಪದ ಮಾಂತ್ರಿಕತೆ ದಕ್ಕಿದೆ.

ಇಲ್ಲಿ ಸಾಮ್ರಾಟರಿಗೆ ಪಟ್ಟಾಭಿಷೇಕವಾಗುತ್ತಿತ್ತಂತೆ ಮತ್ತು ಸಾಮ್ರಾಟರು ತಮ್ಮ ಪ್ರಾರ್ಥನೆ ಸಲ್ಲಿಸಲು ಇಲ್ಲಿಗೆ ಬರುತ್ತಿದ್ದರಂತೆ. ಹಾಗೆ ಸುಮಾರು 500 ವರ್ಷಗಳಷ್ಟು ಕಾಲ ಇದು ಮಸೀದಿಯಾಗಿತ್ತು. ಆದರೆ 1935ರ ಸುಮಾರಿಗೆ ಮತ್ತೊಬ್ಬ ಸರ್ವಾಧಿಕಾರಿ ಹೊಸಕನಸುಗಳೊಂದಿಗೆ ಟರ್ಕಿಯ ಆಡಳಿತ ಸೂತ್ರವನ್ನು ಹಿಡಿದಿದ್ದ, ಆತನೇ ಮುಸ್ತಾಫ ಕೆಮಾಲ್ ಆಟೋಟರ್ಕ್.

ಆಟೋಟರ್ಕ್ ಹಲವಾರು ಕ್ರಾಂತಿಕಾರಿ ಆಡಳಿತಾತ್ಮಕ ನಿರ್ಧಾರಗಳನ್ನು ಕೈಗೊಂಡು ಟರ್ಕಿಯನ್ನು ಒಂದು ಜಾತ್ಯಾತೀತ ರಾಷ್ಟ್ರವಾಗಿ ಕಟ್ಟುತ್ತಾನೆ. ಆತನ ಕಾಲದಲ್ಲಿ ಶರಿಯತ್ ಖಾತೆಯನ್ನು ತೆಗೆದುಹಾಕಲಾಗುತ್ತದೆ, ಮದರಸಗಳಿಗೆ ಕೊಡುತ್ತಿದ್ದ ವಿಶೇಷ ಸವಲತ್ತನ್ನು ನಿಲ್ಲಿಸುವುದಷ್ಟೇ ಅಲ್ಲ, ಅವನ್ನು ನಿಷೇಧಿಸಿ ಅಲ್ಲಿ ಗಂಡುಮಕ್ಕಳು ಮತ್ತು ಹೆಣ್ಣುಮಕ್ಕಳು ಜೊತೆಯಾಗಿ ಕಲಿಯುವ ಶಾಲೆಗಳನ್ನು ನಿರ್ಮಿಸಲಾಗುತ್ತದೆ, ಹೆಣ್ಣುಮಕ್ಕಳು ಬುರ್ಖಾ ಧರಿಸಬೇಕೆನ್ನುವ ಕಾನೂನು ತೆಗೆಯಲಾಗುತ್ತದೆ, ಅವರಿಗೆ ಮತದಾನದ ಹಕ್ಕು ಸಿಗುತ್ತದೆ.

ದೇಶಕ್ಕೆ ಹೊಸ ಸಂವಿಧಾನವನ್ನು ಕೊಟ್ಟ ಆತ, ಸಂವಿಧಾನ ರಕ್ಷಣೆಯ ಹೊಣೆಯನ್ನು ಸೇನೆಗೆ ವಹಿಸುತ್ತಾನೆ. ಆಡಳಿತದಿಂದ ಧರ್ಮವನ್ನು ಬೇರ್ಪಡಿಸಿದ ಆಟಾಟರ್ಕ್ ಆಯಾ ಸೋಫಿಯಾವನ್ನು ಒಂದು ಮ್ಯೂಸಿಯಂ ಆಗಿ ಪರಿವರ್ತಿಸಿ, ಟರ್ಕಿಯನ್ನು ಆಧುನಿಕತೆಯತ್ತ ತಿರುಗಿಸುತ್ತಾನೆ. ಹಾಗೆ ಸುಮಾರು 85 ವರ್ಷಗಳ ಕಾಲ ಮ್ಯೂಸಿಯಂ ಆಗಿದ್ದ ಆಯಾ ಸೋಫಿಯಾವನ್ನು ಮತ್ತೆ ಮಸೀದಿಯನ್ನಾಗಿ ಮಾಡುವ ಮೂಲಕ ಟರ್ಕಿಯ ಅಧ್ಯಕ್ಷ ಎರ್ಡೋಗನ್ ಗಡಿಯಾರವನ್ನು ಹಿಂದಕ್ಕೆ ತಿರುಗಿಸಿ ದೇಶವನ್ನು ಮತ್ತೆ ಪುರಾತನ ಅಂಧಕಾರದೆಡೆಗೆ ಕೊಂಡೊಯ್ಯುತ್ತಿದ್ದಾನೆ.

ಎರ್ಡೋಗನ್

ಇಸ್ತಾಂಬುಲ್ ಮೇಯರ್ ಆಗಿ ತನ್ನ ರಾಜಕೀಯ ಜೀವನ ಆರಂಭಿಸಿದ ಎರ್ಡೋಗನ್ ಶುರುವಿನಲ್ಲಿ ಆಟೋಟರ್ಕ್‍ನಂತೆಯೇ ಪುರೋಗಾಮಿ ಆಲೋಚನೆಗಳನ್ನು ಹೊಂದಿದ್ದ. ಅವನ ಯೋಜನೆಗಳು, ಮುನ್ನೋಟ, ಕೆಲಸ ಮಾಡುವ ಮತ್ತು ಮಾಡಿಸುವ ಬದ್ಧತೆಯ ಕಾರಣಕ್ಕೆ ಆತನನ್ನು ’ಮಾದರಿ ಮುಸ್ಲಿಂ ನಾಯಕ’ ಎಂದು ಸಹ ಕರೆಯಲಾಗುತ್ತಿತ್ತು.

ಹಾಗಾದರೆ ಎರ್ಡೋಗನ್ ಹೆಜ್ಜೆ ತಪ್ಪಿದ್ದೆಲ್ಲಿ? ಒಬ್ಬ ಮಾದರಿ ಜನನಾಯಕ ಕ್ರಮೇಣ ಅಧಿಕಾರ ದಾಹದ ಸರ್ವಾಧಿಕಾರಿಯಾಗುವುದರಲ್ಲಿ ನಾವು ಈ ದುರಂತದ ಹೆಜ್ಜೆಗಳನ್ನು ಗುರುತಿಸಬಹುದಾಗಿದೆ. Eventually ‘absolute power corrupts absolutely’. ಇಲ್ಲಿ ನಾವು ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ಎಲ್ಲಾ ಸರ್ವಾಧಿಕಾರಿಗಳ ಕ್ರಿಯೆಗಳಿಗೂ ಒಂದು ಸಾಮಾನ್ಯ ವಿನ್ಯಾಸವಿರುತ್ತದೆ ಎನ್ನುವುದನ್ನು.

2001ರಲ್ಲಿ ’ಜಸ್ಟೀಸ್ ಅಂಡ್ ಡೆವೆಲಪ್ಮೆಂಟ್ ಪಾರ್ಟಿ’ ಎನ್ನುವ ರಾಜಕೀಯ ಪಕ್ಷವನ್ನು ಸ್ಥಾಪಿಸಿದ ಎರ್ಡೋಗನ್ ಅದು ಒಂದು ಧಾರ್ಮಿಕ ಪಕ್ಷವಲ್ಲ ಎಂದು ಘೋಷಿಸುತ್ತಾನೆ. ಇಸ್ತಾಂಬುಲ್ ಮೇಯರ್ ಆಗಿ ಆತನ ಸಾಧನೆಯನ್ನು ಮೆಚ್ಚಿದ ಜನ ಈತ ಪ್ರಧಾನಮಂತ್ರಿಯಾದರೆ ದೇಶವನ್ನು ಅಭಿವೃದ್ಧಿಯ ಹಾದಿಯಲ್ಲಿ ಕರೆದೊಯ್ಯುತ್ತಾನೆ ಎಂದು ಆತನ ಬೆನ್ನಿಗೆ ನಿಲ್ಲುತ್ತಾರೆ. 2002ರಲ್ಲಿ ಸಂಪೂರ್ಣ ಬಹುಮತದೊಂದಿಗೆ ಚುನಾವಣೆ ಗೆದ್ದ ಆತ ಪ್ರಧಾನಮಂತ್ರಿಯೂ ಆಗಿಬಿಡುತ್ತಾನೆ.

ಅನೇಕ ಯೋಜನೆಗಳನ್ನು ಪ್ರಾರಂಭಿಸುತ್ತಾನೆ, ನಿಜಕ್ಕೂ ದೇಶಕ್ಕಾಗಿ ಕೆಲಸ ಮಾಡುತ್ತಾನೆ. ಜನ ಇವನನ್ನು ಮತ್ತೆ ಮತ್ತೆ ಆರಿಸುತ್ತಾರೆ. ಹೀಗೆ ಮೂರು ಅವಧಿಗಳಿಗೆ ಆತ ಪ್ರಧಾನಮಂತ್ರಿ ಆಗುತ್ತಾನೆ. ದೇಶದಲ್ಲಿ ನಿರುದ್ಯೋಗ ಕಡಿಮೆಯಾಗುತ್ತದೆ, ಜಿಡಿಪಿ ಏರುತ್ತದೆ, ಬಡತನ 50% ಕಡಿಮೆಯಾಗುತ್ತದೆ. ಆದರೆ ಅಷ್ಟರಲ್ಲಿ ಅಧಿಕಾರದ ಅಮಲು ಆತನನ್ನು ಪೂರ್ತಿಯಾಗಿ ಆವರಿಸಿರುತ್ತದೆ. ಅಲ್ಲಿನ ಸಂವಿಧಾನದ ಪ್ರಕಾರ ಯಾರೇ ಆಗಲಿ ಮೂರು ಅವಧಿಗಳಿಗೆ ಮಾತ್ರ ಪ್ರಧಾನಮಂತ್ರಿ ಆಗಬಹುದು, ಆದರೆ ಎರ್ಡೋಗನ್ ಅಧಿಕಾರ ದಾಹ ತೀರಿರುವುದಿಲ್ಲ.

2014 ರಲ್ಲಿ ಟರ್ಕಿಯ ಅಧ್ಯಕ್ಷನಾಗುತ್ತಾನೆ. ಸಂವಿಧಾನಕ್ಕೆ ತಿದ್ದುಪಡಿ ತಂದು ಅಧ್ಯಕ್ಷ ಸ್ಥಾನದ ಅಧಿಕಾರ ವ್ಯಾಪ್ತಿಯನ್ನು ಹೆಚ್ಚಿಸಿ ಕಡೆಗೆ ಪ್ರಧಾನಮಂತ್ರಿ ಹುದ್ದೆಯನ್ನೇ ನಿರುಪಯುಕ್ತಗೊಳಿಸುತ್ತಾನೆ. ಸಂವಿಧಾನವನ್ನು ಹೀಗೆ ಕೈಗೊಂಬೆ ಮಾಡಿಕೊಳ್ಳುವುದನ್ನು ತಪ್ಪಿಸಲು ಸೇನೆ ಕ್ಷಿಪ್ರಕ್ರಾಂತಿ ನಡೆಸಿದರೂ ಅದು ವಿಫಲವಾಗುತ್ತದೆ. ದುರಂತವೆಂದರೆ ಇಷ್ಟರಲ್ಲಿ ದೇಶದ ಸಮಸ್ಯೆಗಳು ಭೂತಾಕಾರವಾಗಿ ಬೆಳೆದಿರುತ್ತದೆ. ಅಭಿವೃದ್ಧಿ ಅಧಿಕಾರಕ್ಕಾಗಿ ನಡೆದ ಸಮರದಲ್ಲಿ ಕಾಲಕಸವಾಗಿರುತ್ತದೆ. ನಿರುದ್ಯೋಗ, ದೇಶದ ಮೇಲೆ ಸಾಲದ ಹೊರೆ ಮಿತಿಮೀರಿರುತ್ತದೆ. ಅಲ್ಲಿನ ಕರೆನ್ಸಿ ಲಿರಾದ ಮೌಲ್ಯ ಡಾಲರ್ ಎದುರಿನಲ್ಲಿ 30% ಬಿದ್ದಿರುತ್ತದೆ. ಹಣದುಬ್ಬರ 10%ಗೆ ಏರಿರುತ್ತದೆ.

ಜಸ್ಟೀಸ್ ಅಂಡ್ ಡೆವೆಲಪ್ಮೆಂಟ್ ಪಾರ್ಟಿ ಲಾಂಛನ

ಜಿಡಿಪಿ ಹಳ್ಳ ಹಿಡಿದಿರುತ್ತದೆ. ಈ ಸಂದರ್ಭದಲ್ಲಿ ಯಾವುದೇ ಸರ್ವಾಧಿಕಾರಿ ಏನು ಮಾಡಬಹುದೋ ಎರ್ಡೋಗನ್ ಸಹ ಅದನ್ನೇ ಮಾಡುತ್ತಾನೆ. ಪ್ರಶ್ನೆ ಕೇಳುವ ಪತ್ರಕರ್ತರು, ಪ್ರೊಫೆಸರ್‍ಗಳು, ವಿದ್ಯಾರ್ಥಿಗಳು, ಲೇಖಕರನ್ನು ಸೆರೆಮನೆಗೆ ತಳ್ಳಲಾಗುತ್ತದೆ. ಇದೆಲ್ಲದರಿಂದ ಜನರ ಗಮನ ಬೇರೆ ಕಡೆ ಸರಿಸಬೇಕು ಎಂದಾಗ ಎರ್ಡೋಗನ್ ನೆರವಿಗೆ ಬರುವುದು ’ಧರ್ಮ’. ಧರ್ಮದ ಹೆಸರಿನಲ್ಲಿ ಜನರನ್ನು ಸಮ್ಮೋಹನಗೊಳಿಸುವುದು ಮತ್ತು ನಿಯಂತ್ರಿಸುವುದು ಸುಲಭ ಎಂದು ಅರಿತಿದ್ದ ಆತ ಇಸ್ಲಾಂಅನ್ನು ಗುರಾಣಿಯಾಗಿ ಬಳಸಿಕೊಳ್ಳುತ್ತಾನೆ.

ಮದ್ರಸಗಳನ್ನು ಪ್ರೋತ್ಸಾಹಿಸಲಾಗುತ್ತದೆ, ದೇಶದಲ್ಲೇ ಅತ್ಯಂತ ದೊಡ್ಡ ಮಸೀದಿಯನ್ನು ಕಟ್ಟಲಾಗುತ್ತದೆ, ದೇಶದ ಅಲ್ಪಸಂಖ್ಯಾತರಾದ ಕ್ರೈಸ್ತರು, ಖುರ್ದಿಶ್ ಮತ್ತು ಯಹೂದಿಗಳ ವಿರುದ್ಧ ದ್ವೇಷದ ಭಾಷಣಗಳು ಶುರುವಾಗುತ್ತವೆ, ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ ಪ್ರಾರಂಭವಾಗುತ್ತದೆ. ಅಲ್ಪಸಂಖ್ಯಾತರ ವಿರುದ್ಧ ಹಲ್ಲೆಗಳು ಪ್ರಾರಂಭವಾಗುತ್ತದೆ.

ಈ ಹಾದಿಯಲ್ಲಿ ಎರ್ಡೋಗನ್ ಇಟ್ಟ ಮಹತ್ವದ ಹೆಜ್ಜೆಯೇ ಯುನೆಸ್ಕೋ ಪಾರಂಪರಿಕ ತಾಣಗಳಲ್ಲಿ ಒಂದಾದ ಆಯಾ ಸೋಫಿಯಾದ ಮಸೀದೀಕರಣ. ಅಲ್ಲಿನ ಕೋರ್ಟ್ ಇದಕ್ಕೆ ಅನುಮೋದನೆ ನೀಡಿದೆ. ಜಾತ್ಯಾತೀತ ಮ್ಯೂಸಿಯಂ ಆಗಿದ್ದ ಆಯಾ ಸೋಫಿಯಾ ಈಗ ಒಂದು ಧರ್ಮಕ್ಕೆ ಮಾತ್ರ ಸೀಮಿತಗೊಳ್ಳುತ್ತಿದೆ. ಪ್ರಪಂಚದ ಹಲವಾರು ದೇಶಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿವೆ, ಟರ್ಕಿಯ ನೊಬೆಲ್ ಸಾಹಿತ್ಯ ಪ್ರಶಸ್ತಿ ವಿಜೇತ ಓರ್ಹಾನ್ ಪಾಮುಖ್ ಇದನ್ನು ವಿರೋಧಿಸಿದ್ದಾರೆ. ಆದರೆ ಎರ್ಡೋಗನ್ ಕಿವಿಗಳು ಮುಚ್ಚಿಹೋಗಿವೆ.

ಪ್ರವಾಸ ನನ್ನ ಹುಚ್ಚು. ಪ್ರಪಂಚದ ಕೆಲವು ದೇಶಗಳನ್ನಾದರೂ ನೋಡಿರುವ ನನಗೆ ಇಂದಿಗೂ ಮತ್ತೊಮ್ಮೆ ಹೋಗಬೇಕು, ಹೋಗಲೇಬೇಕು ಎನ್ನಿಸುವ ಪಟ್ಟಣ ಇಸ್ತಾಂಬುಲ್. ಅಲ್ಲಿನ ಗಲ್ಲಿಗಳು, ನುಣುಪಾದ ಕಲ್ಲುಹಾಸಿನ ರಸ್ತೆಗಳು, ನಗುವ ಕಣ್ಣು ಮುಖಗಳ ಜನ, ಮೀನಾರುಗಳ ಕಿಟಕಿಗಳಿಗೆ ಹಚ್ಚಿಟ್ಟ ದೀಪಗಳು, ಗಲ್ಲಿಗಲ್ಲಿಗಳಲ್ಲಿ ಎದುರಾಗುವ ಬೆಕ್ಕುಗಳು ಮತ್ತು ಅಲ್ಲಿನ ಹವೆಯಲ್ಲಿರುವ ಒಂದು ನಿರಾತಂಕವಾದ ಬೇಫಿಕರ್ ಮಾಹೋಲ್ ನನಗೆ ಮತ್ತೆಮತ್ತೆ ನೆನಪಾಗುತ್ತದೆ. ನಡುರಾತ್ರಿ ಹನ್ನೆರಡು ಗಂಟೆಗೆ ಅಲ್ಲಿನ ರಸ್ತೆಗಳಲ್ಲಿ ನಾವು ಮೂವರೇ ಹೆಂಗಸರು ನಿರಾತಂಕವಾಗಿ ಓಡಾಡಿದ್ದು ನೆನಪಾಗುತ್ತದೆ, ಅಲ್ಲಿನ ರೆಸ್ತೆಗಳಲ್ಲಿ ಕೂತು ಹುಕ್ಕಾ ಎಳೆಯುತ್ತಿದ್ದ ಅಪರಿಮಿತ ಸೌಂದರ್ಯದ ಅಜ್ಜಿಯರು ನೆನಪಾಗುತ್ತಾರೆ.

ಇನ್ನು ಇವೆಲ್ಲಾ ಒಂದೊಂದಾಗಿ ಕಳೆದುಹೋಗುತ್ತದೆಯೇನೋ ಎನ್ನುವ ಆತಂಕವಾಗುತ್ತದೆ, ಆಫ್ಘಾನಿಸ್ತಾನ ನೆನಪಾಗುತ್ತದೆ, ಅಲ್ಲಿಯೂ ಧರ್ಮಕಾರಣ ಹೀಗೆಯೇ ಶುರುವಾಗಿತ್ತು. ಹೆಣ್ಣಾಗಿ ನನಗೆ ಇದು ಹೆಚ್ಚಿನ ಆತಂಕ ತರುತ್ತದೆ. ಏಕೆಂದರೆ ಯಾವುದೇ ಸ್ಥಳದಲ್ಲಿ, ಯಾವುದೇ ಧರ್ಮ ಸಿಂಹಾಸನವೇರಿ ಕುಳಿತಾಗಲೂ ಮೊದಲ ಸಂಕೋಲೆ ಬೀಳುವುದು ಹೆಣ್ಣಿನ ಕಾಲಿಗೆ. ಪ್ರಶ್ನೆ ಕೇಳುವವರನ್ನೆಲ್ಲಾ ಸೆರೆಮನೆಗೆ ತಳ್ಳುತ್ತಿರುವ ಟರ್ಕಿ ಈಗ ಪ್ರಪಂಚದಲ್ಲೇ ಅತಿ ಹೆಚ್ಚು ಪತ್ರಕರ್ತರು ಸೆರೆಮನೆಯಲ್ಲಿರುವ ದೇಶ.

-ಸಂಧ್ಯಾರಾಣಿ


ಇದನ್ನು ಓದಿ: ಕೊರೊನಾ ಸುತ್ತ ಸುಳ್ಳು ಹರಡುವವರ ವಿರುದ್ದ AIDWA-AIPSN ಅಭಿಯಾನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಭಾರತದಲ್ಲಿ ಬಿಕ್ಕಟ್ಟಿನಲ್ಲಿ ಪತ್ರಿಕಾ ಸ್ವಾತಂತ್ರ್ಯ: ವರದಿ

0
ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯದ ಸ್ಥಿತಿ ಅತ್ಯಂತ ಕಟ್ಟದಾಗಿದ್ದು, ನೆರೆಯ ಪಾಕಿಸ್ತಾನ, ಶ್ರೀಲಂಕಾ, ನೇಪಾಳಕ್ಕಿಂತಲೂ ಕಳಪೆಯಾಗಿದೆ. ಇದು ಪ್ರಜಾಪ್ರಭುತ್ವ ದೇಶಕ್ಕೆ ಯೋಗ್ಯವಾದ ಬೆಳವಣಿಗೆಯಲ್ಲ ಎಂದು ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್ (ಆರ್‌ಎಸ್‌ಎಫ್) ಬಿಡುಗಡೆ ಮಾಡಿದ 2024ರ...