Homeಚಳವಳಿವಲಸೆ ಕಾರ್ಮಿಕರ ಮತದಾನದ ಹಕ್ಕನ್ನು ಖಾತರಿಗೊಳಿಸಿ: ಚುನಾವಣಾ ಆಯೋಗಕ್ಕೆ ಬಹಿರಂಗ ಪತ್ರ

ವಲಸೆ ಕಾರ್ಮಿಕರ ಮತದಾನದ ಹಕ್ಕನ್ನು ಖಾತರಿಗೊಳಿಸಿ: ಚುನಾವಣಾ ಆಯೋಗಕ್ಕೆ ಬಹಿರಂಗ ಪತ್ರ

- Advertisement -
- Advertisement -

ಸಾಮಾನ್ಯ ಮನುಷ್ಯನ ಮೇಲೆ ಮತ್ತು ಪ್ರಜಾಪ್ರಭುತ್ವವಾದಿ ಆಡಳಿತದ ಅಂತಿಮವಾದ ಯಶಸ್ಸಿನ ಮೇಲೆ ಅಗಾಧವಾದ ವಿಶ್ವಾಸವನ್ನಿಟ್ಟು, ಪ್ರಜಾಪ್ರಭುತ್ವವಾದಿ ಸರಕಾರವನ್ನು ಯಾವುದೇ ವರ್ಗ, ಜಾತಿ, ಧರ್ಮ ಅಥವಾ ಲಿಂಗಬೇಧ ಮಾಡದ ವಯಸ್ಕ ಸಮಾನ ಮತದಾನದ ಮೂಲಕ ಸ್ಥಾಪಿಸುವುದರಿಂದ ಜಾಗೃತಿ ಮೂಡುತ್ತದೆ ಮತ್ತು ಜನಸಾಮಾನ್ಯರ ಕಲ್ಯಾಣ, ಜೀವನದ ಮಟ್ಟ, ನೆಮ್ಮದಿ, ಯೋಗ್ಯವಾದ ಬದುಕು ಸುಧಾರಿಸುತ್ತದೆ ಎಂಬ ಸಂಪೂರ್ಣ ನಂಬಿಕೆಯೊಂದಿಗೆ ಈ ಸಂವಿಧಾನ ಸಭೆಯು ವಯಸ್ಕ ಸಮಾನ ಮತದಾನದ ತತ್ವವನ್ನು ಅಂಗೀಕರಿಸಿದೆ

-ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್ (ಸಂವಿಧಾನ ನಡಾವಳಿ ಸಭೆಯ ಸದಸ್ಯರು)

ಅಮೆರಿಕದ ಸಂಯುಕ್ತ ಸಂಸ್ಥಾನವು ಹಂತಹಂತವಾಗಿ ಸಾರ್ವತ್ರಿಕ ವಯಸ್ಕ ಸಮಾನ ಮತದಾನವನ್ನು ಜಾರಿಗೆ ತಂದರೆ, ಕೇವಲ 15 ಶೇಕಡಾ ಭಾತೀಯರು ಸೀಮಿತವಾದ ನಿರ್ಬಂಧಿತ  ಮತದಾನದ ಹಕ್ಕು ಹೊಂದಿರುವ ಸ್ಥಿತಿಯಿಂದ ಒಮ್ಮೆಲೇ ಸಾರ್ವತ್ರಿಕ ವಯಸ್ಕ ಸಮಾನ ಮತದಾನದತ್ತ ಭಾರತ ಸಾಗಿದ್ದು, ರಾಷ್ಟ್ರೀಯ ಚಳುವಳಿಯ ಪರಿವರ್ತಕ ಚಾಲನಾಶಕ್ತಿ ಮತ್ತು ಅದು ಹುಟ್ಟುಹಾಕಿದ ಸಮಾನತೆ ಮತ್ತು ತಾರತಮ್ಯರಹಿತತೆಯ ಆದರ್ಶದಿಂದ ಪ್ರೇರಿತವಾಯಿತು.

ಮತದಾನದ ಹಕ್ಕಿನ ವಿಷಯಕ್ಕೆ ಬಂದಾಗ, ಡಾ. ಬಿ.ಆರ್. ಅಂಬೇಡ್ಕರ್ ಅವರ ಸ್ಪಷ್ಟವಾದ ದೂರದೃಷ್ಟಿಯು ಸಂವಿಧಾನದ ವಿಧಿ 326ಕ್ಕೆ ಕಾರಣವಾಗಿದ್ದು, ಅದು ಸಾರ್ವತ್ರಿಕ ವಯಸ್ಕ ಸಮಾನ ಮತದಾನದ ಮೂಲಕ ಚುನಾವಣೆಗಳು ನಡೆಯಬೇಕೆಂದು ಮಾನ್ಯ ಮಾಡಿದ್ದು ಮಾತ್ರವಲ್ಲ; ಆಸ್ತಿ ಅರ್ಹತೆಯಂತಹ ಮಾನದಂಡಗಳ ಆಧಾರದಲ್ಲಿ ವ್ಯಕ್ತಿಗಳಿಗೆ ಮತದಾನ ಮತ್ತು ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರಾಕರಿಸುವ- ಪ್ರತಿಷ್ಟಿತರ ಅರ್ಹತೆ ಕುರಿತ ಕಲ್ಪನೆಗಳನ್ನು ತಿರಸ್ಕರಿಸಿತು.

1919ರಲ್ಲಿ ಸೌತ್‌ಬೊರೋ ಸಮಿತಿಯ ಮುಂದೆ ಸಾಕ್ಷ್ಯಗಳನ್ನು ನೀಡುತ್ತಾ, ಅಂಬೇಡ್ಕರ್ ಅವರು, ದಶಕಗಳಿಂದ ಸಾರ್ವಜನಿಕ ಅಭಿಪ್ರಾಯಗಳನ್ನು ಪ್ರಭಾವಿಸುತ್ತಾ ಬಂದಿದ್ದರು. (ಈ ಸಮಿತಿಯು ಆ ಕಾಲದಲ್ಲಿ ಭಾರತೀಯ ಅಧಿಪತ್ಯ ಅಥವಾ ಇಂಡಿಯನ್ ಡೊಮಿನಿಯನ್‌ಗೆ ಪ್ರಾತಿನಿಧಿಕ ಸಂಸ್ಥೆಗಳನ್ನು ರೂಪಿಸುವ ಸಲುವಾಗಿ ಸಾಕ್ಷ್ಯಗಳನ್ನು ದಾಖಲಿಸುತ್ತಿತ್ತು). ಅಂತಿಮವಾಗಿ ಮತದಾನದ ಹಕ್ಕನ್ನು ಪ್ರಜಾಸತ್ತಾತ್ಮಕ ಸರಕಾರದಿಂದ ಪ್ರತ್ಯೇಕಿಸಲು ಸಾಧ್ಯವಿಲ್ಲ ಎಂಬುದನ್ನು ಅಂಬೇಡ್ಕರ್ ಅವರು ಒತ್ತಿಹೇಳಿ, ಮತದಾನವೇ ರಾಜಕೀಯ ಶಿಕ್ಷಣದ ಮುಂದಾಳತ್ವ ವಹಿಸುವ ಸಂಗತಿಗಳಲ್ಲಿ ಒಂದಾಗುತ್ತದೆ ಎಂದು ಹೇಳಿದ್ದರು.

21ನೇ ಶತಮಾನದ ಭಾರತವು, ಅದರಲ್ಲೂ ಕೋವಿಡ್-19 ಪಿಡುಗಿನ ಲಾಕ್‌ಡೌನ್ ನಂತರದ ಭಾರತವು, ಈ ಸಮೃದ್ಧ ಇತಿಹಾಸವನ್ನು ಅತ್ಯಂತ ಅಗತ್ಯವಾಗಿ ನೆನಪಿಸಿಕೊಳ್ಳಬೇಕಿದೆ. ಮತದಾನದ ಮೂಲಕ, ಆಡಳಿತ ನಡೆಸುವ ವಿವಿಧ ಪಕ್ಷಗಳ ಆಯ್ಕೆಗಳು ಮತ್ತು ಅವರು ರೂಪಿಸುವ ನೀತಿಗಳಲ್ಲಿ ಎಲ್ಲಾ ಭಾರತೀಯ ಜನರ ಇಚ್ಛೆ ಪ್ರತಿಫಲಿಸುವುದು ಪ್ರಾತಿನಿಧಿಕ ಪ್ರಜಾಪ್ರಭುತ್ವದ ಮೂಲ ಅಡಿಪಾಯವನ್ನೇ ಬಿಂಬಿಸುತ್ತದೆ.

ರಾಜಕೀಯದಲ್ಲಿ ಅನಿಯಂತ್ರಿತ ಹಣಬಲದ, ವರ್ಗ, ಜಾತಿ ಮತ್ತು ಆಧುನಿಕ ಮತ್ತು ನಿಜವಾದ ಪಾರದರ್ಶಕವಾದ ಚುನಾವಣಾ ಪ್ರಕ್ರಿಯೆಯ ಮೇಲೆ ಕರಿನೆರಳು ಚಾಚಿರುವ ಸಾಮುದಾಯಿಕ ಹಿತಾಸಕ್ತಿಗಳಿಗೆ ಸಂಬಂಧಿಸಿದ ಅನಿಷ್ಟಗಳಿಂದ,  ಒಂದು ದೊಡ್ಡ ಜನಸಮುದಾಯ- ಕೇವಲ ಅವರ ಉದ್ಯೋಗದ ವ್ಯಾಖ್ಯಾನದ, ಅಂದರೆ ಮನೆಯಿಂದ ದೂರವಿರುವುದರ ಆಧಾರದ ಮೇಲೆ- ಅವರ ಮೂಲಭೂತ ಸಾಂವಿಧಾನಿಕ ಹಕ್ಕುಗಳಿಂದ ವಂಚಿತಗೊಳ್ಳಲು ಸಾಧ್ಯ ಎಂಬುದಕ್ಕೆ ವಿವರಣೆ ನೀಡಲು ಭಾರತಕ್ಕೆ ಅಸಾಧ್ಯವಾಗಿದೆ.

ಭಾರತ ಮೊತ್ತಮೊದಲ ಬಾರಿಗೆ “ವಲಸೆ ಕಾರ್ಮಿಕ”ರ ಕಡೆಗೆ ಎವೆಯಿಕ್ಕದೇ ನೋಡುವಂತಾಗಿದೆ. ಏಕಾಏಕಿಯಾಗಿ ಹೇರಲಾದ ಲಾಕ್‌ಡೌನ್‌- ಒಂದು ದೊಡ್ಡ ಜನಸಮೂಹಕ್ಕೆ ಉಂಟುಮಾಡಿದ ಸಂಕಷ್ಟ, ಅವರ ದಯನೀಯ ಪರಿಸ್ಥಿತಿಯನ್ನು ಸವಲತ್ತುಗಳನ್ನುಉಳ್ಳವರು,  ಸ್ಥಿರವಾದವರು, ರಾಜಕಾರಣಿಗಳು ಸೇರಿದಂತೆ ಸ್ಥಿತಿವಂತ ವರ್ಗಗಳ ಕಣ್ಣಮುಂದೆ ಇಡಲಾಗಿದ್ದು, ಇದರಿಂದ  ಭಾರತೀಯ ಪ್ರಜಾಪ್ರಭುತ್ವವು ಸರಿಯಾದ ಪಾಠಗಳನ್ನು ಕಲಿಯಬೇಕಿದೆ. ಒಂದು ನಿರ್ಣಾಯಕ ಅಂಶವಾದ, ಅವರ ಮತದಾನ ಹಕ್ಕು ಮತ್ತು ಸೌಲಭ್ಯಗಳನ್ನು ಖಾತರಿಪಡಿಸಬೇಕಿದೆ. ಅದೆಂದರೆ, ಯಾರು ತಮ್ಮ ಹಿತಾಸಕ್ತಿಗಳ ಪರವಾಗಿದ್ದಾರೆ, ಯಾರು ಸಾಮಾಜಿಕ ಬದಲಾವಣೆಯನ್ನು ತರಬಲ್ಲರು ಎಂದು ಅವರು ನಂಬಿದ್ದಾರೆಯೋ ಅಂತಹಾ ಪಕ್ಷಗಳನ್ನು ರಾಜ್ಯ ವಿಧಾನಸಭೆಗಳಿಗೆ, ಲೋಕಸಭೆಗೆ ಚುನಾಯಿಸುವ ಹಕ್ಕನ್ನು ವಲಸೆ ಕಾರ್ಮಿಕರಿಗೆ ಖಾತ್ರಿಪಡಿಸುವುದು.

ನಾವಿದನ್ನು ಇನ್ನೂ ಸ್ವಲ್ಪ ಮುಂದಕೊಯ್ಯೋಣ. ಭಾರತೀಯ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಚಲನೆಯ ಸ್ವಾತಂತ್ರ್ಯ ಮತ್ತು ದೇಶದ ಯಾವುದೇ ಭಾಗದಲ್ಲಿ ನೆಲೆಸುವ ಸ್ವಾತಂತ್ರ್ಯವನ್ನು ನೀಡಿದ್ದು, ಅರ್ಥಾತ್ ಉತ್ತಮ ಉದ್ಯೋಗ ಮತ್ತು ಅವಕಾಶವನ್ನು ಅರಸಿಕೊಂಡು ರಾಜ್ಯಗಳ ಒಳಗೆ ಮತ್ತು ನಡುವೆ ವಲಸೆಯ ಅವಕಾಶವನ್ನು ಒದಗಿಸಿದೆ. ತೀರಾ ಇತ್ತೀಚಿನ ಅಂದರೆ,  2011ರ ಜನಗಣತಿ ಪ್ರಕಾರ ಆಂತರಿಕ ವಲಸಿಗರ ಸಂಖ್ಯೆಯು 45 ಕೋಟಿ ಇದ್ದು, ಇದು 2001ರ ಜನಗಣತಿಗಿಂತ 45 ಶೇಕಡಾ ಹೆಚ್ಚಿದೆ. ಇದರಲ್ಲಿ 26 ಶೇಕಡಾ ಅಂದರೆ, 11.7 ಕೋಟಿ ಒಂದು ರಾಜ್ಯದ ಒಳಗೆಯೇ ಜಿಲ್ಲೆಯಿಂದ ಜಿಲ್ಲೆಗೆ ವಲಸೆಹೋದವರಾದರೆ, 12 ಶೇಕಡಾ ಅಂದರೆ, 5.4 ಕೋಟಿ ಅಂತರರಾಜ್ಯ ವಲಸಿಗರು. ಈ ಪ್ರಮಾಣ ಇನ್ನೂ ಹೆಚ್ಚಿದೆ ಎಂದು ಈ ವಿಭಾಗದಲ್ಲಿ ಕೆಲಸ ಮಾಡಿರುವ ಅಧಿಕೃತ ಮತ್ತು ಸ್ವತಂತ್ರ ಪರಿಣಿತರು ಒಪ್ಪಿಕೊಂಡಿದ್ದಾರೆ.

ವೃತ್ತ ವಲಸೆ ಇದಕ್ಕೆ ಕಾರಣ. ಅಂದರೆ, ಈ ವಲಸಿಗರು ಹೊಸ ನಗರಗಳಲ್ಲಿ ಶಾಶ್ವತವಾಗಿ ನೆಲೆನಿಂತಿಲ್ಲ. ಬದಲಾಗಿ, ತಾವು ಉದ್ಯೋಗ ಅರಸಿ ಹೋದ ಹೊಸ ಮತ್ತು ತಮ್ಮ ತವರು ವಾಸಸ್ಥಾನಗಳ ನಡುವೆ ಓಡಾಡುತ್ತಿರುತ್ತಾರೆ. ಉದಾರಣೆಗೆ, ಅಲ್ಪಾವಧಿಯ ಮತ್ತು ವೃತ್ತ ವಲಸಿಗರ ಸಂಖ್ಯೆಯೇ ಸುಮಾರು 60-65 ದಶಲಕ್ಷ ಆಗಬಹುದು (6.5 ಕೋಟಿ). ಕುಟುಂಬದ ಸದಸ್ಯರ ಸಂಖ್ಯೆಯನ್ನು ಸೇರಿಸಿದರೆ ಈ ಸಂಖ್ಯೆಯೇ 10 ಕೋಟಿ ತಲುಪಬಹುದು. ಇವರಲ್ಲಿ ಅರ್ಧದಷ್ಟು ಮಂದಿ ಅಂತರರಾಜ್ಯ ವಲಸಿಗರು.

ವಲಸೆ ಕಾರ್ಮಿಕರು ಇಡೀ ಭಾರತದಲ್ಲಿಯೇ ಅತ್ಯಂತ ಹೆಚ್ಚು ದುರ್ಬಲ ವರ್ಗಕ್ಕೆ ಸೇರಿದ ಜನಸಮುದಾಯವಾಗಿದ್ದಾರೆಂದು ಅಧ್ಯಯನಗಳು ಬಹಿರಂಗಪಡಿಸಿವೆ. ಇವರು ಅತ್ಯಂತ ಬಡತನಪೀಡಿತ ಗ್ರಾಮೀಣ ಪ್ರದೇಶಗಳಿಗೆ ಸೇರಿದವರಾಗಿದ್ದು, ಹೆಚ್ಚು ಕಡೆಗಣಿಸಲ್ಪಟ್ಟ ಪರಿಶಿಷ್ಟ ಜಾತಿ, ಬುಡಕಟ್ಟು, ಇತರ ಹಿಂದುಳಿದ ಜಾತಿಗಳು ಹಾಗೂ ಮುಸ್ಲಿಮರೂ ಸೇರಿದಂತೆ ಅಲ್ಪಸಂಖ್ಯಾತ ವರ್ಗಗಳಿಗೆ ಸೇರಿದವರೂ ಆಗಿದ್ದಾರೆ. ಅವರು ಹೆಚ್ಚಾಗಿ ಶಿಕ್ಷಣ ಪಡೆಯದವರು, ಆಸ್ತಿ ಅಥವಾ ಜಮೀನಿನ ಒಡೆತನ ಹೊಂದಿರದವರೂ ಆಗಿರುತ್ತಾರೆ. 2011ರ ಜನಗಣತಿಯಂತೆ ಉತ್ತರ ಪ್ರದೇಶ ಮತ್ತು ಬಿಹಾರ ಅಂತರರಾಜ್ಯ ಅತ್ಯಂತ ದೊಡ್ಡ ವಲಸೆಯ ಮೂಲವಾಗಿದ್ದು, ಅಲ್ಲಿಂದ ಕ್ರಮವಾಗಿ 83 ಲಕ್ಷ ಮತ್ತು 63 ಲಕ್ಷ ಜನರು ವಲಸೆ ಹೋಗುತ್ತಾರೆ. ಈಗ ಈ ಪಟ್ಟಿಗೆ ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತು ಒರಿಸ್ಸಾ ಸೇರಿಕೊಂಡಿವೆ. ಅತ್ಯಂತ ಹೆಚ್ಚು ವಲಸಿಗರು ಬಂದು ಸೇರುವ ರಾಜ್ಯಗಳಲ್ಲಿ ಮಹಾರಾಷ್ಟ್ರ ಮತ್ತು ದಿಲ್ಲಿ ಇವೆ. ತಮ್ಮ ಆತಿಥೇಯ ನಗರಗಳಲ್ಲಿ ಈ ವಲಸೆ ಕಾರ್ಮಿಕರು ಮೂಲತಃ ಅನೌಪಚಾರಿಕ ಮತ್ತು ಅಸಂಘಟಿತ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಾರೆ.

ಹೆಚ್ಚಿನ ವಲಸೆ ಕಾರ್ಮಿಕರು ತಮ್ಮ ತವರು ಚುನಾವಣಾ ಕ್ಷೇತ್ರಗಳಲ್ಲಿ ಮತದಾರರ ಗುರುತಿನ ಚೀಟಿ ಹೊಂದಿದ್ದಾರೆ. 2012ರಲ್ಲಿ ನಡೆದ ಸಮೀಕ್ಷೆಯೊಂದು ಸಮೀಕ್ಷೆಗೆ ಒಳಪಟ್ಟ 78 ಶೇಕಡಾ ವಲಸೆ ಕಾರ್ಮಿಕರು ತಮ್ಮ ತವರು ಚುನಾವಣಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರು ಮತ್ತು ಮತದಾರರ ಗುರುತಿನ ಚೀಟಿ ಹೊಂದಿದ್ದಾರೆ. ಹಣಕಾಸಿನ ತೊಂದರೆಗಳು, ಕೆಲಸದ ಒತ್ತಡಗಳು ಮುಂತಾದ ಕಾರಣಗಳಿಂದ ದಿಢೀರಾಗಿ ಘೋಷಿತವಾದ ಚುನಾವಣೆಗಳಲ್ಲಿ ಮತಚಲಾಯಿಸಲು ಅವರಿಗೆ ಸ್ವಂತ ರಾಜ್ಯಗಳಿಗೆ ಹೋಗಿಬರಲು ಸಾಧ್ಯವಾಗುವುದಿಲ್ಲವಾದುದರಿಂದ ಅವರು ಸಂವಿಧಾನದತ್ತವಾಗಿ ಸಿಕ್ಕಿರುವ ಮತದಾನದ ಹಕ್ಕಿನಿಂದ ವಂಚಿತರಾಗಿದ್ದಾರೆ. ಒಂದು ಸಮೀಕ್ಷೆಯ ಪ್ರಕಾರ ಇಂತವರಲ್ಲಿ 48 ಶೇಕಡಾ ಮಂದಿ ಮಾತ್ರ 2009ರ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದ್ದರು. ಅದೇ ಹೊತ್ತಿಗೆ ರಾಷ್ಟ್ರೀಯ ಸರಾಸರಿ 59.7 ಶೇಕಡಾ ಇತ್ತು. ನಂತರದ 2014ರ ಚುನಾವಣೆಯಲ್ಲಿ ಕೇವಲ 31 ಶೇಕಡಾ ಮಂದಿ ಮತಚಲಾಯಿಸಿದ್ದರು. ಈ ಮಾದರಿ ಮುಂದುವರಿದಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಅತ್ಯಂತ ಹೆಚ್ಚು ಸಂಸದರನ್ನು ಕಳುಹಿಸುವ ರಾಜ್ಯಗಳಾದ ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಮತದಾನದ ಪ್ರಮಾಣ ಕ್ರಮವಾಗಿ 57.33 ಶೇಕಡಾ ಮತ್ತು 59.21 ಶೇಕಡಾ ಮಾತ್ರವಿತ್ತು. ಅದೇ ಹೊತ್ತಿಗೆ ರಾಷ್ಟ್ರೀಯ ಸರಾಸರಿ 67.4 ಶೇಕಡಾ ಇತ್ತು.

ಇವಿಷ್ಟೇ ಅಲ್ಲದೆ, ಹಿಂದೆ ವಿವರಿಸಿದಂತೆ ವಲಸೆಯ ಸ್ವರೂಪ ವೃತ್ತಾಕಾರವಾಗಿದ್ದು, ಋತುಮಾನಕ್ಕೆ ಹೊಂದಿಕೊಂಡಿರುವುದರಿಂದ, ಈ ವಲಸಿಗರು  ತಮ್ಮ ಆತಿಥೇಯ ನಗರಗಳಲ್ಲಿ ಶಾಶ್ವತ/ ದೀರ್ಘಕಾಲೀನ ನಿವಾಸಿಗಳು ಆಗಿರದೇ ಇರುವುದರಿಂದ ಅಲ್ಲಿ ಮತದಾರರ ಗುರುತಿನ ಚೀಟಿ ಪಡೆಯಲು ಜನಪ್ರಾತಿನಿಧ್ಯ ಕಾಯಿದೆ (ಆರ್‌ಪಿಎ)ಯ ವಿಧಿ 20ರ ಅನ್ವಯ “ಸಾಮಾನ್ಯ ನಿವಾಸಿ” ಎನಿಸಿಕೊಳ್ಳುವ ಅಗತ್ಯಗಳನ್ನು  ಪೂರೈಸಲು ಸಾಧ್ಯವಾಗುವುದಿಲ್ಲ. ಆದುದರಿಂದ ಅವರು ತಮ್ಮ ಮತ ಕ್ಷೇತ್ರವನ್ನು ಬದಲಿಸಲು ಅಸಾಧ್ಯವಾಗುತ್ತದೆ. ಸಮೀಕ್ಷೆಗೆ ಒಳಪಟ್ಟ ವಲಸಿಗರಲ್ಲಿ ಕೇವಲ 10 ಶೇಕಡಾ ಮಂದಿ ಮಾತ್ರ ತಮ್ಮ ಆತಿಥೇಯ ನಗರಗಳಲ್ಲಿ ಮತದಾರರ ಗುರುತಿನ ಚೀಟಿಗಳನ್ನು ಹೊಂದಿದ್ದರು.

ಅಂತರರಾಜ್ಯ ವಲಸೆ ಕಾರ್ಮಿಕರ ಕಾಯಿದೆ 1973 (ಐಎಸ್‌ಎಂಡಬ್ಲ್ಯೂ)ನ್ನು ವಲಸೆ ಕಾರ್ಮಿಕರ ಶೋಷಣೆ ನಡೆಯದಂತೆ ಖಾತರಿಪಡಿಸುವ ಸಲುವಾಗಿ ತರಲಾಗಿತ್ತು. ಈ ಕಾನೂನಿನ ಪ್ರಕಾರ ಕೇಂದ್ರವು (ಮತ್ತು ರಾಜ್ಯಗಳು) ಇಂತಹ ಉದ್ಯೋಗಗಳ ನಿಖರ ಮಾಹಿತಿಗಳ ದಾಖಲೆಯನ್ನು ಇರಿಸಿಕೊಳ್ಳಬೇಕೆಂದು ವಿಧಿಸಿದೆ. ಅದರಂತೆ ಭಾರತೀಯ ಚುನಾವಣಾ ಆಯೋಗವು ಈ ಮಾಹಿತಿಗಳನ್ನು ಪಡೆದು ನಿಖರವಾದ  ಮತ್ತು ನಿರಂತರವಾಗಿ ತಿದ್ದುಪಡಿಗೊಂಡ ದತ್ತಾಂಶವನ್ನು ಇರಿಸಿಕೊಳ್ಳಬೇಕೆಂದೂ ವಿಧಿಸಿದೆ.

ಸಂವಿಧಾನದ ವಿಧಿ 324ರಂತೆ ಭಾರತೀಯ ಚುನಾವಣಾ ಆಯೋಗವು ಒಂದು ಸಾಂವಿಧಾನಿಕ ಪ್ರಾಧಿಕಾರವಾಗಿದ್ದು, ಜನಪ್ರಾತಿನಿಧ್ಯ ಕಾಯಿದೆಯ ವಿಧಿ 60 (ಸಿ) ಪ್ರಕಾರ ನಿರ್ದಿಷ್ಟ ವರ್ಗದ ಜನರಿಗೆ ಅಂಚೆ ಮತ ಹಾಕುವ ಅವಕಾಶ ಒದಗಿಸುವ ಅಧಿಸೂಚನೆಯನ್ನು ಹೊರಡಿಸಲು ಅಧಿಕಾರ ನೀಡುತ್ತದೆ. ಆಯೋಗ ಘೋಷಿಸಿಕೊಂಡಿರುವ “ಯಾವುದೇ ಮತದಾರನನ್ನು ಹಿಂದೆ ಬಿಡುವುದಿಲ್ಲ” ಎಂಬ ಧ್ಯೇಯ ಒಂದು ಸುರಕ್ಷಿತ ಅಂಚೆ ಮತ ವ್ಯವಸ್ಥೆಯನ್ನು ಖಾತರಿಪಡಿಸುವ ಪ್ರಯತ್ನಗಳಿಗೆ ಕಾರಣವಾಗಿದೆ. 2019ರ ಲೋಕಸಭಾ ಚುನಾವಣೆಯಲ್ಲಿ 28 ಲಕ್ಷಕ್ಕೂ ಹೆಚ್ಚು ಮತಗಳನ್ನು ಅಂಚೆ ಮೂಲಕ ಸ್ವೀಕರಿಸಲಾಯಿತು. ಇಂತದ್ದೇ ಸುರಕ್ಷಿತ ವ್ಯವಸ್ಥೆಯ ಮೂಲಕ ಮತ ಚಲಾಯಿಸುವ ಅವಕಾಶಕ್ಕೆ ವಲಸೆ ಕಾರ್ಮಿಕರು ಅರ್ಹರಾಗಿದ್ದಾರೆ.

ಸುಪ್ರೀಂಕೋರ್ಟ್ ಕೂಡಾ ಮತದಾನದ ಹಕ್ಕನ್ನು ಸಂವಿಧಾನದ ವಿಧಿ 19(1)(ಎ)ಯಲ್ಲಿ ಖಾತರಿಪಡಿಸಿದ ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕಿನ ವಿಸ್ತರಣೆ ಎಂದೇ ವ್ಯಾಖ್ಯಾನಿಸಿದೆ. ಇದು ಮತದಾನದ ಸ್ವಾತಂತ್ರ್ಯವನ್ನು ಚಲಾಯಿಸಲು ಗರಿಷ್ಟ ಅನುಕೂಲ ಪರಿಸ್ಥಿತಿ ಸೃಷ್ಟಿಸುವ ಜವಾಬ್ದಾರಿಯನ್ನೂ ಚುನಾವಣಾ ಆಯೋಗದ ಮೇಲೆ ಹೊರಿಸುತ್ತದೆ. ಆದುದರಿಂದ ಯಾವುದೇ ಜಾತಿ, ಲಿಂಗ, ಮತ, ಜನಾಂಗ ಮತ್ತು ನಂಬಿಕೆಯ ಭೇದವಿಲ್ಲದೆ ಭಾರತೀಯ ವಲಸೆ ಕಾರ್ಮಿಕರ ಈ ಮೂಲಭೂತ ಹಕ್ಕನ್ನು ಖಾತರಿಪಡಿಸುವುದು ಚುನಾವಣಾ ಆಯೋಗದ ಸಾಂವಿಧಾನಿಕ ಕರ್ತವ್ಯವೂ ಆಗಿದೆ.

ವಾಸ್ತವವಾಗಿ ಈ ವರ್ಗದ ಭಾರತೀಯರು ಕಾನೂನುಬದ್ಧವಾಗಿ ಮತಚಲಾಯಿಸಲು ಅವಕಾಶ ನೀಡುವಲ್ಲಿನ ಈ ವೈಫಲ್ಯದ ಅರ್ಥವೆಂದರೆ, ಅವರ ಭದ್ರತೆ, ಗೌರವ ಮತ್ತು ಒಟ್ಟು ಕ್ಷೇಮಾಭಿವೃದ್ಧಿಯನ್ನು – ಅದು ಆಳುವ ಪಕ್ಷವಾಗಿರಲಿ, ಅಥವಾ ವಿರೋಧ ಪಕ್ಷಗಳಾಗಿರಲಿ- ಇಡೀ ದೇಶದ ರಾಜಕೀಯ ವ್ಯವಸ್ಥೆಯ ಕಣ್ಣಿಗೆ ಬೀಳದಂತೆ ಮಾಡಲಾಗಿದೆ ಎಂದು ವಾದಿಸಬಹುದು.

“ಅಸ್ಪೃಶ್ಯರಿಗೆ” ಮತದಾನದ ಹಕ್ಕಿನ ಕುರಿತು ಡಾ. ಅಂಬೇಡ್ಕರ್ ಅವರ ಭವಿಷ್ಯವಾಣಿಯನ್ನು ನೆನಪಿಸಿಕೊಳ್ಳಬಹುದು. “ಪ್ರಾತಿನಿಧ್ಯದ ಹಕ್ಕು ಮತ್ತು ಪ್ರಭುತ್ವದಲ್ಲಿ ಪದಾಧಿಕಾರ ಹೊಂದುವ ಹಕ್ಕುಗಳು ಪೌರತ್ವವನ್ನು ರೂಪಿಸುವ ಎರಡು ಅತ್ಯಂತ ಪ್ರಮುಖ ಹಕ್ಕುಗಳು” ಎಂದವರು ಹೇಳಿದ್ದರು. ಬಹಳ ಕಾಲದಿಂದಲೇ ಅದೃಶ್ಯರನ್ನಾಗಿಸಿರುವ ಈ ಭಾರತೀಯ ಜನಸಮೂಹಕ್ಕೆ ಅಂಬೇಡ್ಕರ್ ಅವರ ಈ ದಾರ್ಶನಿಕ ಚಿಂತನೆಯನ್ನು ವಿಸ್ತರಿಸಿ, ಅವರನ್ನು ಕೂಡಾ ರಾಜಕೀಯ ಜೀವನದ ಶಿಕ್ಷಣ ಪಡೆಯುವುದಕ್ಕೆ ಖಾತರಿಪಡಿಸುವುದು ಭಾರತದ ದೃಷ್ಟಿಯಿಂದ ಒಳ್ಳೆಯದು.

ವಲಸೆ ಕಾರ್ಮಿಕರ ಜೀವನವು ನಿಜಕ್ಕೂ ಮುಖ್ಯವಾಗಲಿ.

(ಇದು ‘ಸಿಟಿಜನ್ಸ್ ಫಾರ್ ಜಸ್ಟಿಸ್ ಎಂಡ್ ಪೀಸ್’ ಜುಲೈ 10, 2020ರಂದು ಭಾರತೀಯ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಮನವಿಯ ವಿಷಯ. ಇದಕ್ಕೆ ಒರಿಸ್ಸಾದ  ಲೋಕಶಕ್ತಿ ಅಭಿಯಾನ, ಆಲ್ ಇಂಡಿಯಾ ಯೂನಿಯನ್ ಆಫ್ ಫಾರೆಸ್ಟ್ ವರ್ಕಿಂಗ್ ಪೀಪಲ್ಸ್ (AIUFWP), ಬಾಂಗ್ಲಾ ಸಂಸ್ಕೃತಿ ಮಂಚ ಮತ್ತು ಭಾರತೀಯ ನಾಗರಿಕ್ ಅಧಿಕಾರ್ ಸುರಕ್ಷಾ ಮಂಚ್, ಅಸ್ಸಾಂ ಜೊತೆಯಾಗಿ ಸಹಿಹಾಕಿವೆ.)

(ವಕೀಲರುಗಳಾಗಿರುವ ಸಂಚಿತಾ ಕದಂ, ರಾಧಿಕಾ ಗೋಯಲ್ ಮತ್ತು ಶರ್ವರೀ ಕೋಥವಾಡೆ ಅವರ ಸಂಶೋಧನಾ ನೆರವಿನೊಂದಿಗೆ ಇದನ್ನು ಬರೆಯಲಾಗಿದೆ.)

ತೀಸ್ತಾ ಸೆತಲ್ವಾಡ್, ಸಾಮಾಜಿಕ ಕಾರ್ಯಕರ್ತೆ 

ಅನುವಾದ: ನಿಖಿಲ್ ಕೋಲ್ಪೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...