ಬೆಂಗಳೂರು ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಮೈದಾನದಲ್ಲಿ ಸ್ಥಾಪಿಸಿರುವ ಬೃಹತ್ ಆರೈಕೆ ಕೇಂದ್ರಕ್ಕೆ ಬೇಕಾದ ಅಗತ್ಯ ವಸ್ತುಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ. ಈ ಹಗರಣದ ಹಿಂದೆ ಡಿಸಿಎಂ ಅಶ್ವಥ್ ನಾರಾಯಣ್ ಇದ್ದಾರೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ.
ಈ ಕುರಿತು ಹೈಕೋರ್ಟ್ ಮುಖ್ಯ ನ್ಯಾಯಧೀಶರ ನೇತೃತ್ವದಲ್ಲಿ ಸ್ವತಂತ್ರ ನ್ಯಾಯಾಂಗ ತನಿಖೆ ಆಗಲಿ ಎಂದು ಆಪ್ ಆಗ್ರಹಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಆಮ್ ಆದ್ಮಿ ಪಕ್ಷ ರಾಜ್ಯ ಮಾಧ್ಯಮ ಸಂಚಾಲಕರಾದ ಜಗದೀಶ್ ವಿ ಸದಂ, “ಸ್ವತಃ ವೈದ್ಯರಾಗಿರುವ, ಅಲ್ಲದೇ ಅನೇಕ ವೈದ್ಯಕೀಯ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವ ಉಪಮುಖ್ಯಮಂತ್ರಿ ಸಿ.ಅಶ್ವಥ್ ನಾರಾಯಣ್ ವೈದ್ಯಕೀಯ ಪರಿಕರಗಳ ಖರೀದಿಯಲ್ಲಿ 2000 ಕೋಟಿ ಭ್ರಷ್ಟಾಚಾರ ನಡೆಯಲು ಹೇಗೆ ಅನುವು ಮಾಡಿಕೊಟ್ಟರು” ಎಂದು ಪ್ರಶ್ನಿಸಿದ್ದಾರೆ.
ಸ್ವತಃ ವೈದ್ಯರಾಗಿರುವ ಅಶ್ವತ್ಥ ನಾರಾಯಣ ಅವರಿಗೆ ಯಾವ ಯಾವ ಉಪಕರಣ ಎಷ್ಟೆಷ್ಟು ಮೌಲ್ಯಕ್ಕೆ ದೊರೆಯುತ್ತದೆ ಎನ್ನುವ ಪ್ರಾಥಮಿಕ ಜ್ಞಾನ ಇದ್ದೇ ಇರುತ್ತದೆ. ಇವರು ಈ ಹಗರಣವನ್ನು ತಡೆಯಬಹುದಿತ್ತು, ಆದರೆ ಆ ಕೆಲಸ ಮಾಡದೇ ಕರ್ನಾಟಕದ ಮಾನ ರಾಷ್ಟ್ರ ಮಟ್ಟದಲ್ಲಿ ಹರಾಜಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಲೋಕಾಯುಕ್ತ ಸಂಸ್ಥೆಯನ್ನು ಹಾಳುಗೆಡವಿತು. ಅಧಿಕಾರಕ್ಕೆ ಬಂದರೆ 24 ಗಂಟೆಗಳಲ್ಲಿ ಮರುಸ್ಥಾಪಿಸುತ್ತೇನೆ ಎಂದು ವೀರಾವೇಷದಿಂದ ಗರ್ಜಿಸಿದ್ದ ಯಡಿಯೂರಪ್ಪ ಈಗ ಮೆತ್ತಗಾಗಿದ್ದಾರೆ. ಭ್ರಷ್ಟಾಚಾರದ ವಿಷಯದಲ್ಲಿ ಈ ಪಕ್ಷಗಳ ನಿಯತ್ತು ಇಷ್ಟೇ ಎಂದು ಕಿಡಿಕಾರಿದ್ದಾರೆ.
ಸುವಿಧಾ ಕ್ಯಾಬಿನ್ ಹಗರಣ
ಪೌರ ಕಾರ್ಮಿಕರಿಗೆ ಸುವಿಧಾ ಕ್ಯಾಬಿನ್ ಸ್ಥಾಪಿಸುವ ಹೆಸರಿನಲ್ಲಿ ಬೇನಾಮಿ ಕಂಪೆನಿಗೆ 16 ಕೋಟಿ ಮೌಲ್ಯದ ಗುತ್ತಿಗೆ ನೀಡಲು ಹೊರಟಿರುವುದರ ಹಿಂದೆ ಡಿಸಿಎಂ ಅಶ್ವಥ್ ನಾರಾಯಣ ಅವರೂ ಇದ್ದಾರೆ ಎಂದು ಆಪ್ ಮುಖಂಡ ಶರತ್ ಖಾದ್ರಿ ಆರೋಪಿಸಿದ್ದಾರೆ.
ಆಗ್ರ್ಯಾ ಇನ್‌ಫ್ರಾಟೆಕ್ ಎನ್ನುವ ಅಸ್ತಿತ್ವವೇ ಇಲ್ಲದ ಸಂಸ್ಥೆಗೆ ಗುತ್ತಿಗೆ ನೀಡಲಾಗುತ್ತಿದ್ದು, 20 ಅಡಿ ಉದ್ದ, 8.5 ಅಡಿ ಅಗಲ, 8 ಅಡಿ ಎತ್ತರದ ಈ ಕ್ಯಾಬೀನ್‌ನಲ್ಲಿ ಪೌರ ಕಾರ್ಮಿಕರಿಗೆ ಪ್ರತ್ಯೇಕ ಶೌಚಾಲಯ, ಊಟ ಮಾಡಲು ಹಾಗೂ ಬಟ್ಟೆ ಬದಲಾಯಿಸಲು ಸ್ಥಳಾವಕಾಶ ನೀಡುವುದು ಇದರ ಉದ್ದೇಶ. ಆದರೆ, ಮಾರುಕಟ್ಟೆ ದರದಲ್ಲಿ ಈ ಕ್ಯಾಬಿನ್‌ಗಳನ್ನು ತಯಾರಿಸಲು ಸುಮಾರು 80 ಸಾವಿರ ಖರ್ಚಾಗುತ್ತದೆ. ಆದರೆ ಯಾವುದೇ ಅನುಭವವೇ ಇಲ್ಲದ ಹಾಗೂ ಅಸ್ತಿತ್ವವೇ ಇಲ್ಲದ ಸಂಸ್ಥೆಯಾದ ಆಗ್ರ್ಯಾ ಇನ್‌ಫ್ರಾಟೆಕ್ ಸಂಸ್ಥೆ ಒಂದು ಕ್ಯಾಬಿನ್‌ಗೆ 8 ಲಕ್ಷ ಎಂದು ದರ ನಿಗದಿ ಮಾಡಿ ಪೂರೈಸಲು ಮುಂದಾಗಿದೆ. ಇದು ಹಗಲು ದರೋಡೆಯಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಕೇವಲ ಬಾಯಿ ಮಾತಿನಲ್ಲಿ ಪೌರ ಕಾರ್ಮಿಕರ ಬಗ್ಗೆ ಕನಿಕರ ತೋರಿಸಿ ಅವರ ಬೆನ್ನಿಗೆ ಚೂರಿ ಇರಿಯುವ ಕೆಲಸ ನಡೆಯುತ್ತಿದೆ. ಈ ಭ್ರಷ್ಟಾಚಾರದಲ್ಲಿ ತೊಡಗಿರುವ ಡಿಸಿಎಂ ಅಶ್ವಥ್ ನಾರಾಯಣ್ ಅವರು ರಾಜೀನಾಮೆ ನೀಡಬೇಕೆಂದು ಆಪ್ ಆಗ್ರಹಿಸಿದೆ.
ಇದನ್ನೂ ಓದಿ: ವೈದ್ಯಕೀಯ ಸಾಮಗ್ರಿ ಖರೀದಿ ಹಗರಣ: ಈಶ್ವರ ಖಂಡ್ರೆ, ಸುಧಾಕರ್ ನಡುವೆ ಜಟಾಪಟಿ


