Homeಕರ್ನಾಟಕಖರ್ಗೆ ಸಿಎಂ ಆಗುವುದನ್ನು ಕಾಂಗ್ರೆಸ್ ಒಳಗಿನ ನಾಯಕರೇ ತಡೆದರು: ಕುಮಾರಸ್ವಾಮಿ

ಖರ್ಗೆ ಸಿಎಂ ಆಗುವುದನ್ನು ಕಾಂಗ್ರೆಸ್ ಒಳಗಿನ ನಾಯಕರೇ ತಡೆದರು: ಕುಮಾರಸ್ವಾಮಿ

ಬೇಡವೆಂದರೂ ನಮ್ಮ ಮನೆ ಬಾಗಿಲಿಗೆ ಬಂದವರು ನೀವು. ನಾನು ಅಮಾಯಕನಾಗಿರಲಿಲ್ಲ. ಕಾಂಗ್ರೆಸ್‌ನವರು ತಮ್ಮ ಬೇಳೆ ಬೇಯಿಸಿಕೊಳ್ಳಲು ನನ್ನನ್ನು ಪೆದ್ದು ಮಾಡಲು ಮುಂದಾದಿರಿ.

- Advertisement -
- Advertisement -

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದಾಗ ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗುವುದನ್ನು ಕಾಂಗ್ರೆಸ್ ಒಳಗಿನ ನಾಯಕರೇ ತಡೆದರು ಎಂದು ಮಾಜಿ ಮುಖ್ಯಮಂತ್ರಿ ಹೆಚ್‌‌. ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದಾಗ ಕಾಂಗ್ರೆಸ್‌ನ ರಾಷ್ಟ್ರ, ರಾಜ್ಯ ನಾಯಕರು ಇದ್ದ ಸಭೆಯಲ್ಲಿ ದೇವೇಗೌಡರು ಕಾಂಗ್ರೆಸ್‌ಗೆ ಸಲಹೆ ನೀಡಿ ಖರ್ಗೆ ಸಿಎಂ ಆಗಲಿ ಎಂದರು. ಖರ್ಗೆ ಸಿಎಂ ಆಗುವುದನ್ನು ಕಾಂಗ್ರೆಸ್ ಒಳಗಿನ ನಾಯಕರೇ ತಡೆದರು‌. ಆ ನಾಯಕರುಗಳು ಯಾರು ಯಾರೇಂದು ಕಾಂಗ್ರೆಸ್ ಹುಡುಕಿಕೊಳ್ಳಲಿ. ಆಗ ಅವರ ನೈತಿಕತೆ ಪ್ರಶ್ನೆಗೆ ಅವರದೇ ನಾಯಕರಿಂದ ಉತ್ತರ ಸಿಗಬಹುದು ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಮುಖ್ಯಮಂತ್ರಿ ಆದಾಗ ಕಾಂಗ್ರೆಸ್ ನೈತಿಕತೆ ಚೆನ್ನಾಗಿತ್ತೆ? ಎಂದು ಟ್ವೀಟ್ ಮೂಲಕ ಪ್ರಶ್ನಿಸಿದ್ದ ಕಾಂಗ್ರೆಸ್‌ ವಿರುದ್ದ ಕುಮಾರಸ್ವಾಮಿ ಸರಣಿ ಟ್ವೀಟ್ ಮೂಲಕ ತೀವ್ರ ದಾಳಿ ನಡೆಸಿದ್ದಾರೆ.

“ನನ್ನನ್ನು ನೇರವಾಗಿ ಪ್ರಶ್ನಿಸಲಾಗದ ಕಾಂಗ್ರೆಸ್‌ನ ಅತಿರಥ ಮಹಾರಥರು ಪಕ್ಷದ ಟ್ವಿಟರ್ ಖಾತೆ ಮೂಲಕ ದಾಳಿ ಮಾಡಿ ಓಡಿ ಹೋಗಿದ್ದಾರೆ. ಆಯ್ತು, ಚರ್ಚೆ ಆರಂಭವಾಗಿದೆ. ಅದನ್ನು ನಾನು ಪೂರ್ತಿಗೊಳಿಸುತ್ತೇನೆ” ಎಂದು ಕುಮಾರಸ್ವಾಮಿ ಹೇಳಿದ್ದಾರೆ.


ಓದಿ: ನೆರೆಯ ಕೇರಳ ಮಾದರಿ ಅನುಸರಿಸಲು ಸರ್ಕಾರ ಸಿದ್ದವಿಲ್ಲವೇಕೆ? : ಕುಮಾರಸ್ವಾಮಿ ಪ್ರಶ್ನೆ


ಕಾಂಗ್ರೆಸ್ ಹೈಕಮಾಂಡ್ ಮತ್ತು ರಾಜ್ಯದ ನಾಯಕರು ಜೆಡಿಎಸ್ ಎದುರು ನಡು ಬಗ್ಗಿಸಿ ನಾವು ಬೇಡವೆಂದರೂ ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂರಿಸಿದಿರಿ. ಆನಂತರ ಒತ್ತಡಗಳನ್ನು ಹೇರಿ ಬ್ಯಾಕ್ ಸೀಟ್ ಡ್ರೈವಿಂಗ್ ಮಾಡಿದಾಗ ಕಾಂಗ್ರೆಸ್‌ನ ನೈತಿಕತೆ ಎಲ್ಲಿತ್ತು? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ರೈತರ ಸಾಲ ಮನ್ನಾ ಮಾಡಿ ರಾಜಧರ್ಮ ಪಾಲಿಸಬೇಕಿತ್ತು. ನಿಮ್ಮೆಲ್ಲಾ ಆಟಗಳು ಗೊತ್ತಿದ್ದು ಕೂಡ ರಾಜ್ಯದ ಜನತೆಯ ಹಿತಕ್ಕಾಗಿ ನಾನು ಕೂಡ ಚಾಣಕ್ಯ ನೀತಿಯನ್ನು ಪ್ರದರ್ಶಿಸಿ ರೈತರ ಹಿತ ರಕ್ಷಿಸಿದೆ. ಇದರಲ್ಲಿ ನನ್ನ ವೈಯಕ್ತಿಕ ಲಾಭವೇನಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ.

ಬೇಡವೆಂದರೂ ನಮ್ಮ ಮನೆ ಬಾಗಿಲಿಗೆ ಬಂದವರು ನೀವು. ನಾನು ಅಮಾಯಕನಾಗಿರಲಿಲ್ಲ. ಕಾಂಗ್ರೆಸ್‌ನವರು ತಮ್ಮ ಬೇಳೆ ಬೇಯಿಸಿಕೊಳ್ಳಲು ನನ್ನನ್ನು ಪೆದ್ದು ಮಾಡಲು ಮುಂದಾದಿರಿ. ಆದರೆ ನಾಡಿನ ರೈತರ ಹಿತ ಕಾಯಲು ನಾನು ಜಾಣತನ ಪ್ರದರ್ಶಿಸಿದೆ ಎಂಬುದು ನೆನಪಿರಲಿ ಅವರು ಹೇಳಿದ್ದಾರೆ.

ಕುಮಾರಸ್ವಾಮಿ ಅಜ್ಞಾತ, ಅಪ್ರಸ್ತುತರಾಗಿದ್ದಾರೆ ಎಂದೂ ಕಾಂಗ್ರೆಸ್‌ನ ನಾಯಕರು ಪಕ್ಷದ ಟ್ವಿಟರ್ ಮೂಲಕ ದಾಳಿ ಮಾಡಿದ್ದಾರೆ. ದೇಶದ ಎಷ್ಟು ರಾಜ್ಯಗಳಲ್ಲಿ ಕಾಂಗ್ರೆಸ್ ಪ್ರಸ್ತುತವಾಗಿದೆ? ಪ್ರತ್ಯಕ್ಷವಾಗಿ ರಾಜಕಾರಣ ಮಾಡುತ್ತಿದೆ? ಅನಾಥವಾಗಿದೆ? ಇದಕ್ಕೆ ಉತ್ತರಿಸಲು ನಾಯಕರು ಯಾರಾದರೂ ಇದ್ದಾರೋ? ಇಲ್ಲ ಕಾಂಗ್ರೆಸ್ನ ಟ್ವಿಟರ್ ಖಾತೆಗೆ ಸೀಮಿತವೋ ಎಂದು ಪ್ರಶ್ನಿಸಿದ್ದಾರೆ.

ಬೇರೆ ಪಕ್ಷದ ಶಾಸಕರಿಗೆ ಸ್ವಯಂ ಸೇರ್ಪಡೆಯ ‘ಮಾರುವೇಷ’ ಹಾಕಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವುದಕ್ಕೂ ಬಿಜೆಪಿ ಅವರು ಆಪರೇಷನ್ ಅಸ್ತ್ರ ಬಳಸಿ ಸರ್ಕಾರವೊಂದನ್ನು ಬುಡಮೇಲು ಮಾಡುವುದಕ್ಕೂ ಅಂತಹ ವ್ಯತ್ಯಾಸವೇನಿಲ್ಲ. ಒಂದು ತೆಳುಗೆರೆಯಷ್ಟೇ ಅಂತರ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಇದರ ಅರ್ಥ ತಿಳಿಯದಷ್ಟು ಕುಬ್ಜ ಸ್ಥಿತಿ ತಲುಪಿರುವುದು ಚೋದ್ಯವೆನಿಸಿದೆ. ಟೀಕೆಗಾಗಿ ಟೀಕೆ ಮಾಡುವ ಇಂತಹ ಮನಸ್ಥಿತಿಯಿಂದಾಗಿಯೇ ಕಾಂಗ್ರೆಸ್ ಇಂದು ಇಂತಹ ದುಃಸ್ಥಿತಿಗೆ ತಲುಪಿದೆ. ಕಪಟ ರಾಜಕಾರಣವನ್ನು ಯಾವ ಬಾಗಿಲಿನಿಂದ ಮಾಡಿದರೂ ಅದು ಅನೀತಿಯೇ ಆಗಿದೆ ಎಂದು ಅವರು ಹೇಳಿದ್ದಾರೆ.

“ತನ್ನರಿದೆ ಅರಿವೆಂತುಂಟೊ?/ತನ್ನ ಮರೆದ ಮರೆಹೆಂತಂಟೊ?/ಅರೆದು ಮರೆದವರು/ನಿಮ್ಮ ಪ್ರತಿಬಿಂಬದಂತಿಪ್ಪರು ಕಾಣಾ, ಗುಹೇಶ್ವರಾ” ಎಂದು ಅಲ್ಲಮಪ್ರಭು ಅವರ ವಚನದೊಂದಿಗೆ ಕಾಂಗ್ರೆಸ್‌ ಅನ್ನು ಕುಮಾರಸ್ವಾಮಿ ಟೀಕಿಸಿದ್ದಾರೆ.


ಓ‌ದಿ: ಕಾಂಗ್ರೆಸ್ ಆಪರೇಷನ್ ಹಸ್ತ ಮಾಡಿದ್ದು ಸರಿಯೇ?: ಎಚ್.ಡಿ ಕುಮಾರಸ್ವಾಮಿ ಪ್ರಶ್ನೆ


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...