Homeಚಳವಳಿಅಕ್ಕಿಬೇಳೆಯಿಂದ ಪಿಪಿಇ ಕಿಟ್‌ವರೆಗೂ ಭ್ರಷ್ಟಾಚಾರ ನಡೆಯುತ್ತಿದೆ: ರವಿಕೃಷ್ಣಾರೆಡ್ಡಿ ಸಂದರ್ಶನ

ಅಕ್ಕಿಬೇಳೆಯಿಂದ ಪಿಪಿಇ ಕಿಟ್‌ವರೆಗೂ ಭ್ರಷ್ಟಾಚಾರ ನಡೆಯುತ್ತಿದೆ: ರವಿಕೃಷ್ಣಾರೆಡ್ಡಿ ಸಂದರ್ಶನ

ನಮ್ಮ ದಕ್ಷಿಣ ಭಾರತದಲ್ಲಿ ಅವರ ರಾಷ್ಟ್ರೀಯತೆಯ ಭಜನೆ ಹೆಚ್ಚು ಕಾಲ ನಡೆಯುವುದಿಲ್ಲ. ಆದರೆ ಇದನ್ನು ತಿಳಿಸಿ ಹೇಳುವುದಕ್ಕೆ ರಾಜಕೀಯದಲ್ಲಿ ವಿದ್ಯಾವಂತರು, ವಿಚಾರವಂತರು ಇರಬೇಕಾಗುತ್ತದೆ. ಅಂಥವರಿಗಾಗಿಯೇ ನಮ್ಮ ಪಕ್ಷ ಸ್ಥಾಪನೆಗೊಂಡಿದೆ.

- Advertisement -
- Advertisement -

ಮೂಲತಃ ಬೆಂಗಳೂರಿನ ಆನೇಕಲ್ ತಾಲೂಕಿನ ಬೊಮ್ಮಸಂದ್ರದವರಾದ ರವಿಕೃಷ್ಣಾರೆಡ್ಡಿ ಕಲಿತದ್ದು ಸರ್ಕಾರಿ ಶಾಲೆಯಲ್ಲಿ. ಮುಂದೆ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಇ ಮತ್ತು ಎಂಇ ಮುಗಿಸಿ ಅಮೆರಿಕದಲ್ಲಿ ಹತ್ತು ವರ್ಷ ಕೆಲಸ ಮಾಡಿ ಮತ್ತೆ ತವರಿಗೆ ಮರಳಿದರು. ಅಮೆರಿಕದಲ್ಲಿದ್ದಾಗಲೇ ಸಾಮಾಜಿಕ ಮಾಧ್ಯಮಗಳಲ್ಲಿ ಬರವಣಿಗೆ ಮತ್ತು ವೀಡಿಯೋಗಳು ಮೂಲಕ ಇಲ್ಲಿನ ಸಮಸ್ಯೆಗಳಿಗೆ ದನಿಯಾಗುತ್ತಿದ್ದರು. ಭ್ರಷ್ಟಾಚಾರದ ವಿರುದ್ಧ ನಾನಾರೀತಿಯಲ್ಲಿ ಹೋರಾಟ ಮಾಡಿದ್ದರು. ಪ್ರಸ್ತುತ ರಾಜ್ಯ ಸರ್ಕಾರದ ಕೊರೊನಾ ಹಗರಣಕ್ಕೆ ಸಂಬಂಧಿಸಿದಂತೆ ಆರೋಪಗಳ ಬಗ್ಗೆ ದನಿಯೆತ್ತಿದ ಮೊದಲಿಗರಲ್ಲಿ ಇವರೂ ಒಬ್ಬರು.

‘ಸಾಮಾಜಿಕ ಕಳಕಳಿಯಿರುವವರು, ಸಾರ್ವಜನಿಕ ಜೀವನದಲ್ಲಿ ಆಸಕ್ತಿ ಇರುವವರು ರಾಜಕೀಯದಿಂದ ಹೊರತಾಗಿರಬಾರದು, ಹೊರಗೆ ನಿಂತು ಮಾತಾಡೋದು ಸುಲಭ ಆದರೆ ನಮ್ಮಂಥವರು ರಾಜಕೀಯದಲ್ಲಿದ್ದರೆ ಸಮಾಜವನ್ನ ಉನ್ನತ ಪಥದತ್ತ ಕೊಂಡೊಯ್ಯಬಹುದು ಎನ್ನುವ ಆಶಯದಿಂದ ರಾಜಕೀಯಕ್ಕೆ ಕಾಲಿಟ್ಟಿದ್ದೇನೆ’ ಎನ್ನುತ್ತಾರೆ ರವಿಕೃಷ್ಣಾರೆಡ್ಡಿ. ಕೆಲವು ಕಾಲ ಆಮ್ ಆದ್ಮಿ ಪಕ್ಷದಲ್ಲಿ ದುಡಿದು, ನಂತರ ತಮ್ಮದೇ ಆದ ‘ಕರ್ನಾಟಕ ರಾಷ್ಟ್ರ ಸಮಿತಿ’ ಎನ್ನುವ ಪ್ರಾದೇಶಿಕ ಪಕ್ಷವೊಂದನ್ನು ವೈಚಾರಿಕ ನೆಲೆಗಟ್ಟಿನಲ್ಲಿ ಸ್ಥಾಪಿಸಿದ್ದಾರೆ. 2018ರ ವಿಧಾನಸಭಾ ಉಪಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆ ಎದುರಿಸಿ ಜಯನಗರ ಕ್ಷೇತ್ರದಿಂದ ಸೋತಿದ್ದರು.

ಮಹಾತ್ಮ ಗಾಂಧಿಯವರ ಜೀವನ ಮತ್ತು ತತ್ವಗಳಿಂದ ಪ್ರೇರೇಪಿತರಾಗಿ, ನಮ್ಮ ಭವ್ಯ ಪರಂಪರೆಯ ಮಹಾನ್ ನಾಯಕರುಗಳ ಆದರ್ಶಗಳಿಂದ ಪ್ರಭಾವಿತರಾಗಿ, ಅದನ್ನೇ ತಮ್ಮ ಸಿದ್ಧಾಂತವನ್ನಾಗಿಸಿಕೊಂಡು ಪ್ರಸ್ತುತ ರಾಜಕಾರಣದೊಟ್ಟಿಗೆ ಹಲವಾರು ಸಮಾಜಪರ ಹೋರಾಟಗಳನ್ನು ಮಾಡುತ್ತಾ ಬಂದಿರುವ ರವಿಕೃಷ್ಣಾರೆಡ್ಡಿಯವರನ್ನು ನಾನುಗೌರಿ.ಕಾಂನ ಪ್ರತಾಪ್ ಹುಣಸೂರುರವರು ಸಂದರ್ಶಿಸಿದ್ದಾರೆ.

ನಾನು ಗೌರಿ: ಹೋರಾಟಗಳಿಂದ ರಾಜಕೀಯ ಪಕ್ಷದ ಸ್ಥಾಪನೆಗೆ ಮುಂದಾಗಿದ್ದು ಏಕೆ? ಹೋರಾಟದ ಮುಂದುವರಿದ ಭಾಗ ರಾಜಕೀಯ ಪಕ್ಷ ಸ್ಥಾಪನೆಯೇ? ಅಥವಾ ಇದು ಪರ್ಯಾಯ ರಾಜಕಾರಣಕ್ಕೆ ಮುನ್ನುಡಿಯೇ?

ರವಿಕೃಷ್ಣಾ ರೆಡ್ಡಿ: ನಮ್ಮ ಸಮಾಜದಲ್ಲಿ ರಾಜಕೀಯವಾಗಿ ಮಾತ್ರವೇ ಬದಲಾವಣೆಗಳಾಗಲು ಸಾಧ್ಯ. ವಿಶೇಷವಾಗಿ ಪ್ರಜಾಪ್ರಭುತ್ವದಲ್ಲಿ ಉತ್ತಮ ಜನಪ್ರತಿನಿಧಿಗಳು, ಸಮಸ್ಯೆಗಳಿಗೆ ಸ್ಪಂದಿಸುವ ರಾಜಕಾರಣಿಗಳು ಇದ್ದಾಗ ಹೋರಾಟಗಳ ಅಗತ್ಯವಿಲ್ಲ. ಜನರು ಬೀದಿಗಿಳಿಯಬೇಕಾದ ಅನಿವಾರ್ಯತೆಯೂ ಇರುವುದಿಲ್ಲ ಎನ್ನುವುದು ನನ್ನ ಖಚಿತ ಅಭಿಪ್ರಾಯ. ೨೦೦೮ರಿಂದಲೂ ಹೋರಾಟದಲ್ಲಿ ತೊಡಗಿಸಿಕೊಂಡಿದ್ದೇನೆ. 2010-2 ರಲ್ಲಿ ಅಮೆರಿಕದಿಂದ ಮರಳಿದ ನಂತರ ಲೋಕ್ ಸತ್ತಾ ಅನ್ನುವ ಪಕ್ಷದಲ್ಲಿದ್ದು, ಕೆಲವು ಕಾಲ ಆಮ್ ಆದ್ಮಿ ಪಕ್ಷದಲ್ಲಿಯೂ ಇದ್ದೆ. 2018 ರ ನಂತರ ಯಾವುದೇ ಪಕ್ಷದಿಂದ ಗುರುತಿಸಿಕೊಂಡಿರಲಿಲ್ಲ. ಆದರೆ ಚುನಾವಣಾ ರಾಜಕಾರಣದಲ್ಲಿದ್ದೆ. 2018ರ ಜಯನಗರ ಉಪಚುನಾವಣೆಯಲ್ಲಿ ಪಕ್ಷೇತರವಾಗಿ ಭಾಗವಹಿಸಿ ಶೇ೨ಕ್ಕಿಂತಲೂ ಕಡಿಮೆ ಮತ ಗಳಿಸಿದ್ದೆ.

ಆದರೂ ಇವತ್ತಿಗೂ ನಾನು ಹೋರಾಟಗಾರ ಎನ್ನುವುದಕ್ಕಿಂತ ನಾನೊಬ್ಬ ಚುನಾವಣಾ
ರಾಜಕಾರಣಿಯಾಗೇ ಇದ್ದೇನೆ. ಆದರೆ ಎಲ್ಲಾ ರಾಜಕಾರಣಿಗಳಂತೆ ಅಲ್ಲ ನಾನು. ಪ್ರಾಮಾಣಿಕವಾಗಿ ಸ್ಪರ್ಧಿಸಿ, ಹೆಂಡ ಹಣ ಹಂಚದೇ ಗೆಲ್ಲಬೇಕೆಂದಿದ್ದೆ. ಆದರೆ ಜನ ಒಪ್ಪಲಿಲ್ಲ. ನಂತರ ೨೦೧೯ ರಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಎನ್ನುವ ಪಕ್ಷವನ್ನು ಸ್ಥಾಪಿಸಿದೆ. ವೈಚಾರಿಕವಾಗಿದ್ದಾಗ ಹೋರಾಟ ಮತ್ತು ರಾಜಕೀಯ ಬೇರೆಬೇರೆಯಲ್ಲ ಎನ್ನುವುದು ನನ್ನ ಅಭಿಪ್ರಾಯ.

ನಾನು ಗೌರಿ: ಬಂಗಾರಪ್ಪನವರಿಂದ ಹಿಡಿದು ಇಂದಿನ ಯಡಿಯೂರಪ್ಪನವರತನಕ ಎಷ್ಟೋ ಜನ ಪ್ರಾದೇಶಿಕ ಪಕ್ಷ ಸ್ಥಾಪಿಸಿದರೂ ಅದು ನೆಲೆ ನಿಲ್ಲಲಿಲ್ಲ?

ರವಿಕೃಷ್ಣಾ ರೆಡ್ಡಿ: ಕರ್ನಾಟಕದಲ್ಲಿ ಬಹಳಷ್ಟು ಜನ ಪ್ರಾದೇಶಿಕ ಪಕ್ಷವನ್ನು ಕಟ್ಟಿದ್ದಾರೆ.
ಆದರೆ ಅವರೆಲ್ಲರೂ ಕೂಡ ವೈಚಾರಿಕ ನೆಲೆಯಲ್ಲಿ ಪಕ್ಷ ಸ್ಥಾಪನೆಗೆ ಮುಂದಾಗಲಿಲ್ಲ. ಬದಲಿಗೆ ಅಧಿಕಾರ ವಂಚಿತರಾಗಿಯೋ, ತಮ್ಮ ಶಕ್ತಿ ಪ್ರದರ್ಶನ ಮಾಡುವ ಸಲುವಾಗಿಯೋ, ಅವಕಾಶಕ್ಕಾಗಿಯೋ ಮುಂತಾದ ಕಾರಣಗಳಿಗಾಗಿ ಕಟ್ಟಿದಂತವು. ಹಾಗಾಗಿ ಅವು ದೀರ್ಘ ಕಾಲ ಉಳಿಯಲು ಸಾಧ್ಯವಾಗಿಲ್ಲ. ನಮ್ಮ ಪಕ್ಷ ಇದರಿಂದ ಹೊರತಾಗಿರುವುದರಿಂದ ನನಗೆ ಆ ಭಯವಿಲ್ಲ.

ಅವರಿಗೆಲ್ಲಾ ಅಧಿಕಾರದ ಆಸೆ ಇತ್ತು. ನೇರ ವಿಧಾನಸೌಧದ ಗುರಿ ಇತ್ತು. ತಮ್ಮ ಪಕ್ಷ, ತಾವು ಗೆಲ್ಲಬೇಕೆಂಬ ಆಸೆಯಿತ್ತೇ ವಿನಃ, ಯಾರಲ್ಲಿಯೂ ತಮ್ಮ ಸಿದ್ಧಾಂತ ಗೆಲ್ಲಬೇಕು ಎನ್ನುವ ಆಸೆಯಿರಲಿಲ್ಲ.

ಜೊತೆಗೆ ಇರುವಂತಹ ಪ್ರಾದೇಶಿಕ ಪಕ್ಷಗಳೆಲ್ಲವೂ ಜೆಸಿಬಿ (ಜೆಡಿಎಸ್, ಕಾಂಗ್ರೆಸ್, ಬಿಜೆಪಿ) ಪ್ರಣೀತ ಪಕ್ಷಗಳು. ಹಾಗಾಗಿ ಈ ಪಕ್ಷಗಳಿಗೂ ನಮ್ಮ ಪಕ್ಷಕ್ಕೂ ತಾಳೆ ಹಾಕುವುದು ಸರಿಯಲ್ಲ.

ಬದಲಾವಣೆ ಮಾಡಲು ಖಂಡಿತಾ ಅಧಿಕಾರ ಬೇಕು. ಆದರೆ ಅದೇ ಧ್ಯೇಯವಲ್ಲ. ಆಶಯ, ಸಿದ್ಧಾಂತ ನಮ್ಮ ಧ್ಯೇಯ. ಜೊತೆಗೆ ಇದು ಎಲ್ಲರ ಪಕ್ಷ. ಕೇವಲ ರವಿಕೃಷ್ಣಾ ರೆಡ್ಡಿಯ ಪಕ್ಷವಲ್ಲ. ಇಲ್ಲಿ ಎಲ್ಲರೂ ಮಾಲೀಕರೆ. ಜನರಿಂದ ದೇಣಿಗೆ ಸಂಗ್ರಹಿಸಿ ಪಕ್ಷ ಕಟ್ಟಬೇಕು. ಹಾಗಾಗಿ ಅವರೇ ಮಾಲೀಕರು.

ನಾನು ಗೌರಿ: ಸಂಪೂರ್ಣ ಜನಪರ ಮತ್ತು ಭ್ರಷ್ಟಾಚಾರ ಮುಕ್ತ ರಾಜಕಾರಣ ಸಾಧ್ಯವೇ?

ರವಿಕೃಷ್ಣಾ ರೆಡ್ಡಿ: ಖಂಡಿತಾ ಸಾಧ್ಯ. ಇಂದು ರಾಜಕೀಯ, ಚುನಾವಣೆ ಎನ್ನುವುದು ಬಂಡವಾಳ ಹೂಡಿಕೆ ಮಾಡುವ ಕ್ಷೇತ್ರವಾಗಿದೆ. ಬಂಡವಾಳ ಎನ್ನುವುದೇ ಲಾಭದ ಉದ್ದೇಶವನ್ನಿಟ್ಟುಕೊಂಡಿರುವ ಕೆಟ್ಟ ಪರಿಕಲ್ಪನೆ. ಹಾಗಾಗಿ ಚುನಾವಣೆ ಗೆಲ್ಲಲು ಬಂಡವಾಳ ಹೂಡಿದವರು, ಗೆದ್ದ ನಂತರ ಲಾಭದ ಸಮೇತ ವಾಪಾಸು ಪಡೆದುಕೊಳ್ಳುತ್ತಾರೆ. ಆದರೆ ನಮ್ಮ ಪಕ್ಷದಲ್ಲಿ ಇದು ಆಗಬಾರದೆಂದೇ ಸಾಕಷ್ಟು ಎಚ್ಚರ ವಹಿಸಿದ್ದೇನೆ.

ನಮ್ಮ ಪಕ್ಷಕ್ಕೆ ಬರುವವರು ಮೊದಲು ಹೇಗಿರುತ್ತಾರೋ ಗೊತ್ತಿಲ್ಲ. ಇಲ್ಲಿಂದ ಹೋದಮೇಲೆ ಹೇಗಿರುತ್ತಾರೋ ಗೊತ್ತಿಲ್ಲ. ಆದರೆ ಇಲ್ಲಿರುವತನಕ ಇಲ್ಲಿನ ನಿಯಮಗಳಿಗೆ, ಸಿದ್ಧಾಂತಗಳಿಗೆ ಬದ್ಧವಾಗಿರಬೇಕು. ಚುನಾವಣೆ ಗೆಲ್ಲಲು ಹಣ ಹೆಂಡ ಹಂಚಬಾರದು, ಭ್ರಷ್ಟಾಚಾರದಲ್ಲಿ ಭಾಗಿಯಾಗಬಾರದು. ಹೀಗಿದ್ದಾಗ ರಾಜಕೀಯ ಸೇವೆಯಾಗುತ್ತದೆಯೇ ಹೊರತು ವ್ಯಾಪಾರವಾಗುವುದಿಲ್ಲ. ಇಂದಿನ ಪಕ್ಷಗಳು, ರಾಜಕಾರಣಿಗಳು ಭ್ರಷ್ಟಾಚಾರದಲ್ಲಿ ತೊಡಗಲು ಇದೇ ಪ್ರಮುಖ ಕಾರಣ.

ನಾನು ಗೌರಿ: ನಮ್ಮ ರಾಜ್ಯ ಸರ್ಕಾರದ ಶಕ್ತಿ/ಮಿತಿಗಳೇನು? ಯಡಿಯೂರಪ್ಪನವರ ಸರ್ಕಾರದ ಒಂದು ವರ್ಷದ ಆಡಳಿತದ ಬಗ್ಗೆ ನಿಮ್ಮ ಅಭಿಪ್ರಾಯ?

ರವಿಕೃಷ್ಣಾ ರೆಡ್ಡಿ: ಇವತ್ತಿನ ರಾಜ್ಯ ಸರ್ಕಾರದ ಶಕ್ತಿ ಯಡಿಯೂರಪ್ಪನವರೆ. ಅವರ ಅಧಿಕಾರ ದಾಹ ಮತ್ತು ಅದನ್ನು ಉಳಿಸಿಕೊಳ್ಳಲು ಅವರು ಮಾಡುತ್ತಿರುವ ಸಾಹಸಗಳೇ ಅವರ ಶಕ್ತಿ. ಜೊತೆಗೆ ಅವುಗಳೇ ಅವರ ಮಿತಿಯೂ ಹೌದು. ಆದಾಗ್ಯೂ ಈ ವಯಸ್ಸಿನಲ್ಲಿಯೂ ಯಡಿಯೂರಪ್ಪನವರನ್ನು ಬಿಟ್ಟರೆ ಉಳಿದರ‍್ಯಾರೂ ಸಹ ಸಕ್ರಿಯವಾಗಿ ಕೆಲಸ ಮಾಡುತ್ತಿಲ್ಲ. ಆ ಆರೋಗ್ಯ ಸಚಿವರಂತೂ ಒಬ್ಬ ಶಾಸಕನಾಗಲೂ ಅರ್ಹತೆಯಿಲ್ಲದವರು. ಅವರನ್ನು ತಂದು ಸಚಿವರನ್ನಾಗಿ ಮಾಡಿದ್ದಾರೆ. ಈ ಸರ್ಕಾರದ ತುಂಬಾ ಇಂಥಾ ಅನೀತಿಗಳೇ ತುಂಬಿವೆ. ತಮ್ಮ ಒಂದು ವರ್ಷದ ಅವಧಿಯಲ್ಲಿ ಅಧಿಕಾರ ಉಳಿಸಿಕೊಳ್ಳಲು ಪರಿತಪಿಸಿದಷ್ಟು ಮತ್ಯಾವುದಕ್ಕೂ ಪರಿತಪಿಸಲಿಲ್ಲ.

ಜೊತೆಗೆ ಇವತ್ತಿನ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿರುವುದು ಪ್ರಜಾಪ್ರಭುತ್ವ ವಿರೋಧಿ ಕೆಲಸ ಮಾಡಿ. ಅವರ ಆಪರೇಷನ್ ಕಮಲದ ಮೂಲಕ. ಇದಕ್ಕೆ ಒಳಗಾದವರು ಕಾಂಗ್ರೆಸ್ ಮತ್ತು ಜೆಡಿಎಸ್‌ನವರು. ಆದರೆ ಅವರೂ ಸಹ ಇಂಥದ್ದೇ ಪರಮ ನೀಚಕೆಲಸಗಳನ್ನ ಮಾಡಿದ್ದವರೇ. ಹಾಗಾಗಿಯೇ ಇಂದು ಅವರಿಗೂ ಶಿಕ್ಷೆ ಆಗಿದೆ. ಈ ಹಿಂದಿನ ಮೈತ್ರಿ ಸರ್ಕಾರವೂ ಸೇರಿದಂತೆ ಮೂರೂ ಪಕ್ಷಗಳ ಆಡಳಿತವು ರಾಜ್ಯದ ಜನರಿಗೆ ತೃಪ್ತಿ ತಂದಿಲ್ಲ.

ನಾನು ಗೌರಿ: ಕೊರೊನಾ ನಿಭಾಯಿಸುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಕ್ರಮಗಳ ಬಗ್ಗೆ ತಮ್ಮ ಅನಿಸಿಕೆ ಏನು? ಜೊತೆಗೆ ಇದರಲ್ಲಿ ಕೇಳಿಬಂದಿರುವ ಭ್ರಷ್ಟಾಚಾರದ ಆರೋಪವನ್ನು ಜನಾಂದೋಲನವಾಗಿ ರೂಪಿಸಲು ವಿರೋಧ ಪಕ್ಷಗಳನ್ನೂ ಸೇರಿದಂತೆ ನಿಮ್ಮಿಂದಲೂ ಸಾಧ್ಯವಾಗಲಿಲ್ಲ?

ರವಿಕೃಷ್ಣಾ ರೆಡ್ಡಿ: ಕರ್ನಾಟಕದಲ್ಲಿ ಮೊದಲ ಪ್ರಕರಣ ಕಂಡುಬಂದಿದ್ದು ಮಾರ್ಚ್ 8. ಅಂದಿಗೆ ರಾಜ್ಯ ಸರ್ಕಾರ ಲಾಕ್‌ಡೌನ್ ಮಾಡಿದ್ದು ಸರಿಯಾಗಿತ್ತು. ಇದುವರೆಗೂ ಸುಮಾರು ನಾಲ್ಕು ಸಾವಿರಕೋಟಿಯನ್ನು ಪರಿಸ್ಥಿತಿ ನಿಭಾಯಿಸಲು ಖರ್ಚು ಮಾಡಿದೆ.

ಆದರೆ ನಾನು ಫೆಬ್ರವರಿ ಮೊದಲ ವಾರದಲ್ಲಿಯೇ ಫೇಸ್ಬುಕ್ ಲೈವ್‌ನಲ್ಲಿ ಬಂದು, ಏನೇನಾಗಬಹುದು ಎಂದು ಊಹಿಸಿ ಹೇಳಿದ್ದೆಲ್ಲವೂ ಇಂದು ನಿಜವಾಗಿದೆ. ಕೊರೊನಾ ನಿಭಾಯಿಸಲು ಸರಿಯಾದ ಸಿದ್ಧತೆಗಳಾಗಿಲ್ಲ. ಆಸ್ಪತ್ರೆಯಲ್ಲಿ ಹಾಸಿಗೆಗಳಿಲ್ಲ ಎನ್ನುವ ಮುಂತಾದ ಸಮಸ್ಯೆಗಳು ಇನ್ನೂ ಹಾಗೆಯೇ ಉಳಿದಿದೆ.

ಏನೇ ಮಾಡಿದರೂ ಕೊರೊನಾ ಈ ಹಂತಕ್ಕೆ ತಲುಪುವುದಂತೂ ನಿಶ್ಚಿತ. ಪರಿಸ್ಥಿತಿ ಇನ್ನೂ ಕೆಟ್ಟದಾಗಬಹುದು. ಆದರೆ ಅವುಗಳನ್ನು ನಿಭಾಯಿಸಲು ಈ ಮೂರು ಪಕ್ಷಗಳ ಕೆಸರೆರೆಚಾಟದಿಂದ ಸಾಧ್ಯವಾಗಿಲ್ಲ.

ಇನ್ನು ಈ ಸಂದಿಗ್ಧ ಪರಿಸ್ಥಿತಿಯನ್ನು ಮೂರೂ ಪಕ್ಷಗಳು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಉಪಯೋಗಿಸಿಕೊಳ್ಳುತ್ತಿವೆ. ನೂರಾರು ಕೋಟಿ ಹಣದ ಹಗರಣ ಮಾಡಿ ರಾಜ್ಯ ಸರ್ಕಾರ ಪರಮನೀಚ ಕೆಲಸ ಮಾಡಿದೆ. ಉಳಿದೆರಡು ಪಕ್ಷಗಳು ಇದರಿಂದ ತಮ್ಮ ರಾಜಕೀಯ ನೆಲೆಯನ್ನು ಭದ್ರಪಡಿಸಿಕೊಳ್ಳಲು ಹೆಣಗುತ್ತಿವೆ. ಇವು ಸರ್ಕಾರದ ಮತ್ತು ವಿರೋಧ ಪಕ್ಷಗಳ ನಡುವಿನ ಒಳ ಒಪ್ಪಂದದಂತೆ ಆಗಿದೆ. ಅವರು ಖರ್ಚು ಮಾಡಿದ್ದಾರೆ. ಇವರು ಲೆಕ್ಕ ಕೇಳುತ್ತಿದ್ದಾರೆ. ಅವರು ಲೆಕ್ಕ ಕೊಡುತ್ತಿದ್ದಾರೆ. ಕೊರೊನಾಕ್ಕಿಂತ ಮೊದಲು ಮತ್ತು ಕೊರೊನಾ ನಂತರ ಇವರ ಉದ್ದೇಶ ಅಧಿಕಾರ ಹಣ ಆಗಿತ್ತು. ನಂತರ ಇವರು ಅಧಿಕಾರದಲ್ಲಿರುತ್ತಾರೋ ಇಲ್ಲವೋ ಗೊತ್ತಿಲ್ಲ. ಹಾಗಾಗಿ ಇವರೆಲ್ಲರಿಗೂ ಭಯ ಶುರುವಾಗಿದೆ. ಅದಕ್ಕಾಗಿಯೇ ಇಂತಹ ಅನೈತಿಕ ಕೆಲಸಗಳನ್ನ ಮಾಡುತ್ತಿದ್ಧಾರೆ.

ಅಕ್ಕಿಬೇಳೆಯಿಂದ ಹಿಡಿದು ಪಿಪಿಇ ಕಿಟ್‌ವರೆಗಿನ ಪ್ರತಿಯೊಂದರಲ್ಲೂ ಭ್ರಷ್ಟಾಚಾರ ಆಗಿದೆ. ಈ ಭ್ರಷ್ಟಾಚಾರದ ಕುರಿತು ಮೇ ತಿಂಗಳಿನಲ್ಲಿಯೇ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ವಿವರಿಸಿದ್ದೆ. ಆದಾಗ್ಯೂ ಎರಡು ಮೂರು ಪತ್ರಗಳನ್ನು ಬರೆದು ಕ್ರಮ ತೆಗೆದುಕೊಳ್ಳುವುದಕ್ಕೆ ಒತ್ತಾಯಿಸಿದ್ದೆ.

ನಂತರ ಆರ್‌ಟಿಐ ಮುಖಾಂತರ ದಾಖಲೆ ತೆಗೆಸಿ ಈ ಕರ್ಮಕಾಂಡವನ್ನು ಬಯಲಿಗೆಳೆದೆ. ಇದು ಕರ್ನಾಟಕದಲ್ಲಿ ಯಾವುದೇ ಮಾಧ್ಯಮ ಅಥವಾ ಪಕ್ಷಗಳು ಮಾಡಿದ್ದಲ್ಲ. ಅವರೆಲ್ಲ ಇಂದು ಮಾಧ್ಯಮಗಳ ಮುಂದೆ ಕುಳಿತು ಏರುದನಿಯಲ್ಲಿ ಮಾತನಾಡುತ್ತಿದ್ದಾರೆಯೇ ಹೊರತು ಯಾವ ದಿಟ್ಟ ಕ್ರಮವನ್ನೂ ತೆಗೆದುಕೊಂಡಿಲ್ಲ. ಮೊಟ್ಟಮೊದಲು ಮಾಡಿದ್ದು ನಮ್ಮ ಪಕ್ಷ. ನಾವು ಈಗಾಗಲೇ ಎಸಿಬಿಗೆ ದೂರು ನೀಡಿದ್ದೇವೆ. ಪಿಐಎಲ್ ಹಾಕಲು ಸಿದ್ಧತೆಯನ್ನು ನಡೆಸಿದ್ದೇವೆ. ಯಾರು ಹೇಳಿದರೂ ಬಿಟ್ಟರೂ, ಅಧಿಕಾರದಲ್ಲಿದ್ದರೂ ಇಲ್ಲದಿದ್ದರೂ ಈ ಕೆಲಸವನ್ನು ನಾವು ಮಾಡುತ್ತಿದ್ದೆವು. ಮಾಡುತ್ತಲೂ ಇದ್ದೇವೆ. ನಮ್ಮ ಕೆಲಸವನ್ನು ಮಾಡಿದ್ದೇವೆ.

ನಾನು ಗೌರಿ: ರಾಷ್ಟ್ರದಾದ್ಯಂತ ಕೋಮು ಧ್ರುವೀಕರಣ ಹೆಚ್ಚಾಗುತ್ತಿದೆ. ನೀವು ಹೋರಾಟಗಾರರಾಗಿ ಭ್ರಷ್ಟಾಚಾರದ ಕಡೆ ಗಮನ ಹರಿಸಿದಂತೆ ಇದರ ಬಗ್ಗೆ ಮಾತನಾಡುತ್ತಿಲ್ಲ ಏಕೆ. ಇದು ಕೂಡ ಬಹಳ ಮುಖ್ಯ ಅಲ್ಲವೇ? ರಾಷ್ಟ್ರೀಯವಾದಿ ತೆಕ್ಕೆಯಲ್ಲಿ ಪ್ರಾದೇಶಿಕತೆ ಪಕ್ಕಕ್ಕೆ ಸರಿದರೆ ತಮ್ಮ ಪಕ್ಷಕ್ಕೆ ಉಳಿಗಾಲವಿದೆಯೇ?

ರವಿಕೃಷ್ಣಾ ರೆಡ್ಡಿ: ಒಂದು ಸೆಟೈರಿಕಲ್ ಜೋಕ್ ಇದೆ. ‘ಒಬ್ಬ ಮೆಕ್ಯಾನಿಕ್ ಡಾಕ್ಟರ್ ಒಬ್ಬನ ಕೆಟ್ಟುಹೋಗಿರುವ ಕಾರನ್ನು ರಿಪೇರಿ ಮಾಡಿಕೊಟ್ಟು, ನೋಡ್ರೀ ಡಾಕ್ಟ್ರೇ… ನಾನು ಇಂಜಿನ್ ಎಲ್ಲಾ ಬಿಚ್ಚಿ ಹೇಗೆ ಕೆಲಸ ಮಾಡಿದ್ದೇನೆ. ನೀವು ಹೀಗೆ ಮಾಡೋದಕ್ಕೆ ಸಾಧ್ಯವಾ ಅಂದನಂತೆ. ಅದಕ್ಕೆ ಡಾಕ್ಟರ್, ‘ಸರಿ, ಇಂಜಿನ್ ಆಫ್ ಮಾಡಿದ ಕೆಲಸವನ್ನ ಇಂಜಿನ್ ಆನ್ ಮಾಡಿಕೊಂಡು ಮಾಡೋದಕ್ಕೆ ಸಾಧ್ಯವೇ?’ ಸಾಧ್ಯವಿಲ್ಲ. ಆದರೆ ನಾವು ವ್ಯಕ್ತಿಯನ್ನ ಬದುಕಿಸಿಕೊಂಡು, ರೋಗವನ್ನು ಕಡಿಮೆ ಮಾಡುತ್ತಾ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತಾ ಕೆಲಸ ಮಾಡಬೇಕಾಗುತ್ತದೆ’ ಅಂದರಂತೆ.

ಹೀಗೆ ರಾಜಕಾರಣಿಗಳು ಒಂದು ಸಿದ್ಧಾಂತಕ್ಕೆ ಸಂಬಂಧಿಸಿದಂತೆ ಕೆಲಸ ಮಾಡುತ್ತಿರುವಾಗ ಮತ್ತೊಂದು ಸಿದ್ಧಾಂತ ಅಥವಾ ಕೆಲಸ ಬಿಟ್ಟುಹೋಗುತ್ತದೆ. ನಂತರದ ದಿನಗಳಲ್ಲಿ ಮತ್ತೆ ಅದರ ಕುರಿತೂ ಗಮನ ಹರಿಸಿ ಕೆಲಸ ಮಾಡಬಹುದು.

ಒಂದು ಪ್ರಜಾಪ್ರಭುತ್ವ ಸಮಾಜ ಎಂದಮೇಲೆ ಅಲ್ಲಿ, ಜಾತಿ, ಧರ್ಮ, ಸಮಾಜವಾದಿ, ಜಾತ್ಯತೀತತೆ, ಧ್ರುವೀಕರಣ ಮುಂತಾದವುಗಳೆಲ್ಲವೂ ಇರುತ್ತದೆ. ಒಮ್ಮೊಮ್ಮೆ ಒಂದೊಂದು ಮೇಲುಗೈ ಸಾಧಿಸುತ್ತವೆ. ಆದರೆ ಅದೇ ನಿರಂತರವಾಗಿರುವುದಿಲ್ಲ.

ಈಗತಾನೆ ಆರಂಭವಾಗಿ ಸೀಮಿತ ವ್ಯಾಪ್ತಿಯನ್ನು ಇಟ್ಟುಕೊಂಡಿರುವ ನಾವು ಎಲ್ಲಾ ಸಮಸ್ಯೆಗಳಿಗೂ ದನಿಯಾಗುತ್ತೇವೆ ಎಂದರೆ ಕಷ್ಟ.

ಆದಾಗ್ಯೂ ನಮ್ಮಲ್ಲಿರುವ ಪ್ರತಿಯೊಂದು ಸಮಸ್ಯೆಯೂ ಆಂತರಿಕ ಸಂಬಂಧ ಹೊಂದಿವೆ. ಹಾಗಾಗಿ ಒಂದರ ನಿರ್ಮೂಲನೆ ಮತ್ತೊಂದಕ್ಕೂ ಕಾರಣವಾಗಬಹುದು. ಭ್ರಷ್ಟಾಚಾರ ನಿರ್ಮೂಲನೆಯಾದರೆ, ನೀವು ಹೇಳುತ್ತಿರುವ ಕೋಮು ಧ್ರುವೀಕರಣದಿಂದ ನಲುಗುತ್ತಿರುವ ಸಮೂಹಕ್ಕೇ ಉಪಯೋಗವಲ್ಲವೇ. ಅದೂಅಲ್ಲದೆ ಇವುಗಳನ್ನ ಮಾಡುವುದಕ್ಕೂ ಹಲವರಿದ್ದಾರೆ. ಅವರು ಅದನ್ನು ಮಾಡುತ್ತಾರೆ. ನಾವು ಇದನ್ನು ಮಾಡುತ್ತಿದ್ದೇವೆ. ಮುಂದೆ ಅದನ್ನೂ ಮಾಡುತ್ತೇವೆ.

ಜೊತೆಗೆ ನಮ್ಮ ಪ್ರಾದೇಶಿಕತೆಯನ್ನು ಬಲಪಡಿಸಿಕೊಳ್ಳುವುದಕ್ಕಾಗಿಯೇ ನಮ್ಮ ಪಕ್ಷದ ಸ್ಥಾಪನೆಯಾಗಿದೆ. ನಮ್ಮ ತತ್ವ ಸಿದ್ಧಾಂತಗಳಲ್ಲಿ ಯಾವುದೇ ರಾಜಿಯಿಲ್ಲ. ಹಾಗಂತ ಯಾವಾಗಲೂ ಅದನ್ನೇ ಜಪ ಮಾಡುತ್ತಾ ಕೂರುವುದಕ್ಕೆ ಸಾಧ್ಯವಿಲ್ಲ. ನಮ್ಮದು ಸಮಗ್ರತೆಯ ಕಾರ್ಯವೈಖರಿ. ಹಾಗಾಗಿಯೇ ರಾಜ್ಯದ, ದೇಶದ ಪ್ರತಿಯೊಂದು ಸಮಸ್ಯೆಯೂ ಪ್ರಮುಖವಾದದ್ದೇ. ಮುಂದಿನ ದಿನಗಳಲ್ಲಿ ಅವಕ್ಕೂ ಪ್ರಾಮುಖ್ಯತೆ ನೀಡಲಾಗುವುದು.

ಈ ಕೋಮು ಧ್ರುವೀಕರಣ ಮಾಡುತ್ತಿರುವ ಬಿಜೆಪಿಯನ್ನು ವಿರೋಧಿಸುವ ಸಲುವಾಗಿ ಉಳಿದ ಕೆಟ್ಟ ಪಕ್ಷ, ರಾಜಕಾರಣಿಗಳನ್ನ ಬೆಂಬಲಿಸುವುದು ಎಷ್ಟು ಸರಿ? ನಾವು ಇದ್ದರಲ್ಲಿಯೇ ಸರಿ ಹುಡುಕುವುದಕ್ಕಿಂತ, ಪರ್ಯಾಯಗಳನ್ನು ಹುಡುಕಿದರೆ ಒಳ್ಳೆಯದು ಎಂದು ನನ್ನ ಭಾವನೆ.

ಮತ್ತೆ ನಮ್ಮ ದಕ್ಷಿಣ ಭಾರತದಲ್ಲಿ ಅವರ ರಾಷ್ಟ್ರೀಯತೆಯ ಭಜನೆ ಹೆಚ್ಚುಕಾಲ ನಡೆಯುವುದಿಲ್ಲ. ಆದರೆ ಇದನ್ನು ತಿಳಿಸಿ ಹೇಳುವುದಕ್ಕೆ ರಾಜಕೀಯದಲ್ಲಿ ವಿದ್ಯಾವಂತರು, ವಿಚಾರವಂತರು ಇರಬೇಕಾಗುತ್ತದೆ. ಅಂಥವರಿಗಾಗಿಯೇ ನಮ್ಮ ಪಕ್ಷ ಸ್ಥಾಪನೆಗೊಂಡಿದೆ.

ನಾನು ಗೌರಿ: ವೆಲ್ತ್ ಟ್ಯಾಕ್ಸ್ ಬಗ್ಗೆ ನಿಮ್ಮ ಅಭಿಪ್ರಾಯ?

ರವಿಕೃಷ್ಣಾ ರೆಡ್ಡಿ: ವೆಲ್ತ್ ಟ್ಯಾಕ್ಸ್ ಅನ್ನು ನಾವು ಕೇಳಿದರೂ ಕೇಳದಿದ್ದರೂ ಸರ್ಕಾರಕ್ಕೆ ಬೇಕಾದಾಗ ಹಾಕುತ್ತಾರೆ. ಆ ನಿಟ್ಟಿನಲ್ಲಿ ನಮ್ಮ ಹೇಳಿಕೆ, ಹೋರಾಟ, ಬರಹಗಳು ಮುಂತಾದವುಗಳಿಗೆ ಸರ್ಕಾರ ಬೆಲೆ ಕೊಡುತ್ತಿಲ್ಲ. ಅಂತಹವುಗಳನ್ನ ಹತ್ತಿಕ್ಕುತ್ತವೆ ಇಲ್ಲವಾದರೆ ನಿರ್ಲಕ್ಷಿಸುತ್ತವೆ. ಹಾಗಾಗಿ ನಮ್ಮ ಹೋರಾಟ ಬರಹಗಳಿಗೆ ಇಂದು ಬೆಲೆಯಿಲ್ಲ.

ನಾನು ಗೌರಿ: ಇಂದಿನ ಮಾಧ್ಯಮಗಳ ಬಗ್ಗೆ ನಿಮ್ಮ ಅಭಿಪ್ರಾಯ?

ರವಿಕೃಷ್ಣಾ ರೆಡ್ಡಿ: ಮಾಧ್ಯಮಗಳ ಬಗ್ಗೆ ಒಪ್ಪಿಗೆಯೂ ಇಲ್ಲ, ತೃಪ್ತಿಯೂ ಇಲ್ಲ. ನಾನು ಅದರ ಬಗ್ಗೆ ಮಾತನಾಡಲು ಇಚ್ಛಿಸುವುದಿಲ್ಲ.

ನಾನು ಗೌರಿ: ವ್ಯವಸ್ಥೆ ವಿರೋಧಿ ಹೋರಾಟವಾಗಿ ಹುಟ್ಟಿ, ಸಂಘಟನೆಯಾಗಿ ಬೆಳೆದು, ಪಕ್ಷವಾಗಿ ನೆಲೆನಿಂತು ಕೊನೆಗೆ ಅನಿಷ್ಟ ವ್ಯವಸ್ಥೆಯ ಭಾಗವಾಗಿ ಬಿಡುತ್ತಾರೆ. ಇದರಿಂದ ನೀವು ಹೇಗೆ ಹೊರಬರುತ್ತೀರಿ?

ರವಿಕೃಷ್ಣಾ ರೆಡ್ಡಿ: ನಾವು ವ್ಯವಸ್ಥೆಯ ವಿರೋಧಿಯಲ್ಲ. ವ್ಯವಸ್ಥೆಯ ಭಾಗವಾಗಿಯೇ ಇದ್ದೇವೆ. ಆದರೆ ಅಲ್ಲಿರುವ ಲೋಪದೋಷಗಳನ್ನು ಸರಿಪಡಿಸಿ ವ್ಯವಸ್ಥೆಯ ಒಟ್ಟಿಗೇ ಮುಂದುವರೆಯುತ್ತೇವೆ.

ಸಂದರ್ಶನ: ಪ್ರತಾಪ್ ಹುಣುಸೂರು


ಇದನ್ನೂ ಓದಿ: ಕರ್ನಾಟಕದ ಕೊರೊನಾ ಡಾಕ್ಟರ್ ಏನು ಹೇಳುತ್ತಾರೆ? ಡಾ.ಆಸಿಮ ಬಾನು ಸಂದರ್ಶನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...