ಕೊರೋನಾ ಮತ್ತು ಆ ಕಾರಣದಿಂದ ಉಂಟಾದ ಲಾಕ್‌ಡೌನ್‌ಗೆ ಇಡೀ ವಿಶ್ವದ ಆರ್ಥಿಕತೆ ತತ್ತರಿಸಿ ಹೋಗಿದೆ. ಪರಿಣಾಮ ವಿಶ್ವದ ದೊಡ್ಡಣ್ಣ ಎಂದು ಕರೆಯಲಾಗುವ ಅಮೆರಿಕದಲ್ಲೂ ನಿರುದ್ಯೋಗದ ಸಮಸ್ಯೆ ತಲೆದೋರಿದೆ ಎಂದರೆ ಆರ್ಥಿಕತೆಯ ಮೇಲೆ ಕೊರೋನಾ ಉಂಟು ಮಾಡಿರುವ ಆಘಾತವನ್ನು ಊಹಿಸಬಹುದು. ಹೀಗಾಗಿ ಅಮೆರಿಕದ ಉದ್ಯೋಗವನ್ನು ಅಮೆರಿಕದ ಯುವಕರಿಗೆ ನೀಡುವ ಸಲುವಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಚ್1ಬಿ ಫೆಡರಲ್ ಏಜೆನ್ಸಿ ವೀಸಾ ರದ್ದು ಮಾಡುವ ಆದೇಶಕ್ಕೆ ಸಹಿಹಾಕಿದ್ದಾರೆ.
ಸಾಮಾನ್ಯವಾಗಿ ಅಮೆರಿಕದಂತಹ ದೇಶಗಳಿಗೆ ಫೆಡರಲ್ ಏಜೆನ್ಸಿಗಳು ಗುತ್ತಿಗೆ ಆಧಾರದಲ್ಲಿ ಕಾರ್ಮಿಕರನ್ನು ನೇಮಿಸುತ್ತದೆ. ಬಹುತೇಕ ಸಾಫ್ಟ್‌ವೇರ್ ಕಂಪೆನಿಗಳಿಗೆ ಈ ಮಾದರಿಯಲ್ಲೇ ಉದ್ಯೋಗಿಗಳನ್ನು ನೇಮ ಮಾಡಲಾಗಿರುತ್ತದೆ. ಇದಕ್ಕೆ ಹೆಚ್1ಬಿ ವೀಸಾವನ್ನು ಬಳಸಲಾಗಿರುತ್ತದೆ. ಆದರೆ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿದೇಶಿ ಕಾರ್ಮಿಕರನ್ನು ಫೆಡರಲ್ ಏಜೆನ್ಸಿಗಳಿಗೆ ನೇಮಿಸಿಕೊಳ್ಳುವುದನ್ನು ತಡೆದಿದ್ದಾರೆ. ಈ ಆದೇಶಕ್ಕೆ ಸೋಮವಾರ ಸಹಿ ಹಾಕಿದ್ದಾರೆ.
ಟ್ರಂಪ್ ಆಡಳಿತ ಕಳೆದ ಜೂನ್ 23 ರಂದೇ ಎಚ್ -1 ಬಿ ವೀಸಾಗಳನ್ನು ರದ್ದು ಮಾಡಿ ಆದೇಶಿಸಿದ್ದರು. ಈ ಮೂಲಕ ಲಕ್ಷಾಂತರ ಭಾರತೀಯ ಟೆಕ್ಕಿಗಳು ಕೆಲಸ ಕಳೆದುಕೊಳ್ಳುವ ಬೀತಿಯನ್ನು ಈಗಲೂ ಎದುರಿಸುತ್ತಿದ್ದಾರೆ. ಕೊರೋನಾ ಕಾರಣಕ್ಕೆ ಭಾರತಕ್ಕೆ ವಾಪಾಸ್ ಆಗಿದ್ದವರು ಹೆಚ್1ಬಿ ವೀಸಾ ರದ್ದಾದ ಕಾರಣ ಅನಿವಾರ್ಯವಾಗಿ ಭಾರತದಲ್ಲೇ ಉಳಿಯುವಂತಾಗಿದೆ. ಇಂತಹ ಸಂದರ್ಭದಲ್ಲಿ ಡೊನಾಲ್ಡ್ ಟ್ರಂಪ್ ಫೆಡರಲ್ ಏಜೆನ್ಸಿಗಳ ವೀಸಾವನ್ನು ರದ್ದು ಮಾಡಿರುವುದು, ಇದೀಗ ಮತ್ತಷ್ಟು ಭಾರತೀಯ ಉದ್ಯೋಗಿಗಳು ಅತಂತ್ರಕ್ಕೆ ಸಿಲುಕುವಂತೆ ಮಾಡಿದೆ.
ಕಳೆದ ವರ್ಷ ಹೆಚ್1ಬಿ ವೀಸಾ ಪಡೆದಿದ್ದ ಶೇ70 ರಷ್ಟು ಭಾರತೀಯರ ಕೆಲಸ ಇದೀಗ ಅತಂತ್ರವಾಗಿದೆ. ಆದರೆ, ಈ ಕುರಿತು ಪ್ರಕಟಣೆ ಹೊರಡಿಸಿರುವ ಅಮೆರಿಕ ಶ್ವೇತ ಭವನ, “ಫೆಡರಲ್ ಉದ್ಯೋಗದಾತರು ಅರ್ಹ ಅಮೆರಿಕನ್ನರನ್ನು ಬಿಟ್ಟು ವಿದೇಶಿ ಉದ್ಯೋಗಿಗಳಿಗೆ ಅವಕಾಶ ಮಾಡಿಕೊಡುವ ಮೂಲಕ ದೇಶಕ್ಕೆ ಅನ್ಯಾಯ ಮಾಡುತ್ತಿವೆ. ಅಲ್ಲದೆ, ವಿದೇಶಿ ನಾಗರೀಕರು ಸಹ ಹೆಚ್1ಬಿ ವೀಸಾವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಕಂಡು ಬಂದಿದೆ.
ಆದರೆ, ಕಡಿಮೆ-ವೆಚ್ಚದ ವಿದೇಶಿ ಕಾರ್ಮಿಕರ ಬದಲಿಗೆ ಅರ್ಹ ಅಮೆರಿಕನ್ ಕಾರ್ಮಿಕರನ್ನು ಬದಲಿಸುವ ಉದ್ದೇಶವನ್ನು ಈ ಆದೇಶ ಹೊಂದಿಲ್ಲ. ಬದಲಿಗೆ ಉನ್ನತ-ನುರಿತ ಜನರನ್ನು ಅಮೆರಿಕಕ್ಕೆ ಕರೆತರುವ ಮತ್ತು ಅಮೆರಿಕನ್ನರಿಗೆ ಅವಕಾಶಗಳನ್ನು ಸೃಷ್ಟಿಸುವ ಮೆರಿಟ್ ಆಧಾರಿತ ವಲಸೆ ವ್ಯವಸ್ಥೆಯನ್ನು ಡೊನಾಲ್ಡ್ ಟ್ರಂಪ್ ಬೆಂಬಲಿಸಿದ್ದಾರೆ” ಎಂದು ತಿಳಿಸಿದೆ.
ಫೆಡರಲ್ ಒಡೆತನದ ಟೆನ್ನೆಸ್ಸೀ ವ್ಯಾಲಿ ಪ್ರಾಧಿಕಾರವು ತನ್ನ ತಂತ್ರಜ್ಞಾನದ ಶೇ.20ರಷ್ಟು ಉದ್ಯೋಗಗಳನ್ನು ವಿದೇಶಗಳಲ್ಲಿರುವ ಕಂಪನಿಗಳಿಗೆ ಹೊರಗುತ್ತಿಗೆ ನೀಡಲಿದೆ ಎಂಬ ಘೋಷಣೆಯಿಂದಾಗಿ ಅಮೆರಿಕ ಆಡಳಿತ ಇಂತಹ ಕ್ರಮಕ್ಕೆ ಮುಂದಾಗಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಟ್ರಂಪ್ ಟವರ್ ಮುಂದೆ ’ಬ್ಲ್ಯಾಕ್ ಲೈವ್ಸ್ ಮ್ಯಾಟರ್’ ಎಂದು ಬರೆದ ಚಳವಳಿಗಾರರು!


